ಮಲೆನಾಡು ಹಾಗೂ ಕರಾವಳಿಯ ಭಾಗವಾದ ಉತ್ತರ ಕನ್ನಡ ಜಿಲ್ಲೆಯಿಂದ ಹೈಕೋರ್ಟ್ನ ಉನ್ನತ ಸ್ಥಾನಕ್ಕೇರಿದ ಕೆಲವೇ ಕೆಲವು ಮಹಿಳಾ ನ್ಯಾಯಾಧೀಶರಲ್ಲಿ ರಾಜೇಶ್ವರಿ ಹೆಗಡೆ ಪ್ರಮುಖರಾಗಿದ್ದಾರೆ. ಇವರ ಈ ಸಾಧನೆ ಗ್ರಾಮೀಣ ಭಾಗದ ಮತ್ತು ಕರಾವಳಿ ಜಿಲ್ಲೆಗಳ ಕಾನೂನು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ದೊಡ್ಡ ಪ್ರೇರಣೆಯಾಗಿದೆ.
ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿ(ಅಡಿಷನಲ್ ಜಡ್ಜ್)ಗಳಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ರಾಜೇಶ್ವರಿ ಹೆಗಡೆ ಅವರು ನೇಮಕಗೊಂಡಿದ್ದು, ಹೈಕೋರ್ಟ್ನ ಪ್ರಧಾನ ಪೀಠದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಇಂದು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಇವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ರಾಜೇಶ್ವರಿ ಹೆಗಡೆ: ಪರಿಚಯ ಮತ್ತು ಹಿನ್ನೆಲೆ
ರಾಜೇಶ್ವರಿ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಡ್ಕಣಿ ಗ್ರಾಮದವರು. ಗ್ರಾಮೀಣ ಹಿನ್ನೆಲೆಯಿರುವ ಇವರು ಸಾಮಾನ್ಯ ಕೃಷಿ ಮತ್ತು ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದವರಾಗಿದ್ದಾರೆ. ಇವರು ತಮ್ಮ ಕಠಿಣ ಪರಿಶ್ರಮ ಮತ್ತು ಕಾನೂನು ಕ್ಷೇತ್ರದ ಮೇಲಿನ ನಿಷ್ಠೆಯಿಂದ ಇಂದು ಉನ್ನತ ನ್ಯಾಯಾಂಗದ ಶ್ರೇಷ್ಠ ಹುದ್ದೆಯನ್ನು ಅಲಂಕರಿಸಿದ್ದಾರೆ.
ರಾಜೇಶ್ವರಿ ಹೆಗಡೆ ಅವರು ಬಾಲ್ಯದಲ್ಲಿದ್ದಾಗ ಚಿಮಣಿ ದೀಪದಲ್ಲಿ ಓದುತ್ತಿದ್ದರು. ಸಿದ್ದಾಪುರ ಮತ್ತು ಶಿರಸಿ ಭಾಗದಲ್ಲಿ ಆರಂಭಿಕ ಹಾಗೂ ಕಾನೂನು ಶಿಕ್ಷಣವನ್ನು ಪೂರೈಸಿದರು. ವಕೀಲರಾಗಿ ವೃತ್ತಿ ಜೀವನ ಆರಂಭಿಸಿ, ನಂತರ ನ್ಯಾಯಾಂಗ ಸೇವೆಗೆ ಪ್ರವೇಶ ಪಡೆದರು.
ವೃತ್ತಿಜೀವನದ ಪಯಣ ಮತ್ತು ಸಾಧನೆ
ರಾಜೇಶ್ವರಿ ಹೆಗಡೆ ಅವರ ನ್ಯಾಯಾಂಗ ಪಯಣ ಅತ್ಯಂತ ಸ್ಪೂರ್ತಿದಾಯಕವಾದದ್ದು. ಜಿಲ್ಲಾ ನ್ಯಾಯಾಧೀಶರಾಗಿ ರಾಜ್ಯದ ವಿವಿಧೆಡೆ ಅವರು ಸಲ್ಲಿಸಿರುವ ಸೇವೆ ಗಮನಾರ್ಹವಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಹಲವು ಜಿಲ್ಲೆಗಳಲ್ಲಿ ದಕ್ಷ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಕೀರ್ಣ ಪ್ರಕರಣಗಳನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಮತ್ತು ಕಾನೂನು ಚೌಕಟ್ಟಿನಲ್ಲಿ ನಿಭಾಯಿಸಿದ ಖ್ಯಾತಿ ಇವರದ್ದಾಗಿದೆ.
ನ್ಯಾ. ರಾಜೇಶ್ವರಿ ಹೆಗಡೆ ಅವರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇವರ ಸುದೀರ್ಘ ನ್ಯಾಯಾಂಗ ಸೇವೆಯಲ್ಲಿನ ಪ್ರಾಮಾಣಿಕತೆ, ಕಾನೂನು ಜ್ಞಾನ ಮತ್ತು ದಕ್ಷತೆಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಇವರ ಹೆಸರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು .
ದಾವಣಗೆರೆ ಜಿಲ್ಲಾ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ದಂಪತಿಗಳು ಚಿಕ್ಕಪುಟ್ಟ ವಿಚಾರಕ್ಕೆ ಜಗಳವಾಡಿ 2024ರಂದು ವಿಚ್ಛೇದನಕ್ಕಾಗಿ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಂತಹ ಏಳು ಜೋಡಿಗಳಿಗೆ ವಿಚ್ಛೇದನ ಕೊಡಿಸದೇ ಮತ್ತೆ ಒಂದಾಗುವಂತೆ ಮಾಡಿದ್ದರು. ಕಾನೂನು ಸೇವಾ ಪ್ರಾಧಿಕಾರದಡಿ ರಾಜಿ ಮಾಡಿಸಿ ಹೊಸ ಜೀವನಕ್ಕೆ ದಾರಿ ಮಾಡಿಕೊಡಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪವಾಗಿ ಹಲವು ವರ್ಷಗಳಿಂದ ದೂರವಿದ್ದ ಸತಿ – ಪತಿಗಳು ವಿಚ್ಛೇದನ ಪಡೆಯದೇ ಮತ್ತೆ ಒಂದಾಗಿ ಜೀವನ ನಡೆಸಲು ಮಾರ್ಗದರ್ಶನ ನೀಡಿದ್ದರು.
2025ರಲ್ಲಿ ದಾವಣಗೆರೆ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದಾಗ ರಾಜೇಶ್ವರಿ ಎನ್ ಹೆಗಡೆ ಅವರು, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳುವ ಮೂಲಕ 11,366 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದರು.
ಕೇಂದ್ರ ಸರ್ಕಾರದ ಕಾನೂನು ಸಚಿವಾಲಯ ಮತ್ತು ರಾಷ್ಟ್ರಪತಿಗಳ ಅಂಕಿತದೊಂದಿಗೆ ರಾಜೇಶ್ವರಿ ಹೆಗಡೆ ಅವರು ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ನ್ಯಾ. ರಾಜೇಶ್ವರಿ ನಾರಾಯಣ ಹೆಗಡೆ ಅವರು ತಾವು ಪ್ರಮಾಣ ಸ್ವೀಕರಿಸಿದಾಗಿನಿಂದ 2028ರ ಮಾರ್ಚ್ 17ರರಂದು ನಿವೃತ್ತರಾಗುವವರೆಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿರಲಿದ್ದಾರೆ.
ಇದನ್ನೂ ಓದಿದ್ದೀರಾ? ಕೈ-ಕಾಲು ಕತ್ತರಿಸುವ ಭಯವಿದ್ದರೆ ಮಾತ್ರ ಜನ ಕಾನೂನು ಪಾಲಿಸುತ್ತಾರೆ: ಕರ್ನಾಟಕ ಹೈಕೋರ್ಟ್
ವಿಶೇಷತೆ: ಮಲೆನಾಡು ಹಾಗೂ ಕರಾವಳಿಯ ಭಾಗವಾದ ಉತ್ತರ ಕನ್ನಡ ಜಿಲ್ಲೆಯಿಂದ ಹೈಕೋರ್ಟ್ನ ಉನ್ನತ ಸ್ಥಾನಕ್ಕೇರಿದ ಕೆಲವೇ ಕೆಲವು ಮಹಿಳಾ ನ್ಯಾಯಾಧೀಶರಲ್ಲಿ ರಾಜೇಶ್ವರಿ ಹೆಗಡೆ ಪ್ರಮುಖರಾಗಿದ್ದಾರೆ. ಇವರ ಈ ಸಾಧನೆ ಗ್ರಾಮೀಣ ಭಾಗದ ಮತ್ತು ಕರಾವಳಿ ಜಿಲ್ಲೆಗಳ ಕಾನೂನು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ದೊಡ್ಡ ಪ್ರೇರಣೆಯಾಗಿದೆ.
ರಾಜೇಶ್ವರಿ ಹೆಗಡೆ ಅವರ ಸುದೀರ್ಘ ಅನುಭವ ಮತ್ತು ಕಾನೂನು ಪಾಂಡಿತ್ಯವು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯದಾನ ಪ್ರಕ್ರಿಯೆಗೆ ಮತ್ತಷ್ಟು ಶಕ್ತಿ ತುಂಬಿದೆ.





