ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಮರೆತು, ಇಂದಿನ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಕನ್ನಡದ ಶ್ರೀಮಂತಿಕೆಗೆ ಧಕ್ಕೆ ಉಂಟುಮಾಡುತ್ತಿರುವ ಬಹುದೊಡ್ಡ ದುರಂತವಾಗಿದೆ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ಔರಾದ್ ತಾಲ್ಲೂಕಿನ ಕಂದಗೂಳ ಗ್ರಾಮದ ಬಾಬು ಜಗಜೀವನರಾಮ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ‘ಕನ್ನಡ ಕಂಪು’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕನ್ನಡ ಭಾಷೆಯ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನು ವಿವರಿಸಿದರು.
ಈ ನಾಡಿನಲ್ಲಿ ಹಲವು ರಾಜಮನೆತನಗಳು ಆಳ್ವಿಕೆ ನಡೆಸಿ ಕನ್ನಡ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ರಾಜರ ಆಶ್ರಯದಲ್ಲಿ ಅನೇಕ ಕವಿಗಳು, ಸಂತರು ನಾಡಿನ ವೈಭವದ ಪರಂಪರೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ. ಕವಿಗಳು ನಾಡಿನ ಸೌಂದರ್ಯ, ಸಂಸ್ಕೃತಿ, ಸಂಪತ್ತು, ಜನಜೀವನ ಹಾಗೂ ಭಾಷೆಯ ಶ್ರೀಮಂತಿಕೆಯನ್ನು ತಮ್ಮ ಸಾಹಿತ್ಯದ ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ. ಕನ್ನಡದ ವಚನಕಾರರು ಮತ್ತು ದಾಸ ಸಾಹಿತ್ಯದ ಹರಿಕಾರರು ಭಾಷೆಗೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬ ಕನ್ನಡಿಗರೂ ಸ್ಮರಿಸಬೇಕು ಎಂದರು.
ಶ್ರೀ ಬಸವಸಿರಿ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶೈಲಜಾ ಜಿ. ಹುಡಗೆ ಮಾತನಾಡಿ, “ಕನ್ನಡ ನಾಡು ಎಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ; ಅದು ಕನ್ನಡಿಗರ ಜೀವಂತಿಕೆಯ ದರ್ಶನವಾಗಿದೆ. ಕನ್ನಡ ಭಾಷೆ ಕೇವಲ ಓದುವುದರಿಂದ ಮಾತ್ರ ಉಳಿಸಲು ಸಾಧ್ಯವಿಲ್ಲ. ನಿತ್ಯದ ಬದುಕಿನಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು” ಎಂದು ಹೇಳಿದರು.
ಮುಖ್ಯಗುರು ಮೋಯಿಜುದ್ದಿನ್ ಮಾತನಾಡಿ, “ಒಂದೆಡೆ ಕನ್ನಡ ಉಳಿವಿಗಾಗಿ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಕನ್ನಡದ ಕಂಪು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸುತ್ತಿದೆ. ವಿಶ್ವ ಕನ್ನಡ ಸಮ್ಮೇಳನಗಳು ಕನ್ನಡ ಭಾಷೆಯ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿವೆ” ಎಂದರು.

ಕಾರ್ಯಕ್ರಮದಲ್ಲಿ ಡಾ.ಗಂಗಶೆಟ್ಟಿ ಪಾಟೀಲ, ಮುಖ್ಯಗುರು ಮೋಯಿಜುದ್ದಿನ್, ಹುಡಗೆ ಗುಂಡಪ್ಪ, ಶೈಲಜಾ ಹುಡಗೆ, ವೀರಕುಮಾರ ಹಾಗೂ ರಾಜೆಪ್ಪ ಉಪಸ್ಥಿತರಿದ್ದರು. ಸಂಗೀತಾ ಸ್ವಾಗತಿಸಿದರು. ಅನೀತಾ ವಂದಿಸಿದರು. ಗಣಪತರಾವ ನಿರೂಪಿಸಿದರು.
ಇದನ್ನೂ ಓದಿ : ಭಾಲ್ಕಿ | ಬಸವಣ್ಣನವರ ಅವಹೇಳನ : ರವಿ ಹಂಜ್, ವಿಶ್ವೇಶ್ವರ ಭಟ್ ಪ್ರತಿಕೃತಿ ದಹಿಸಿ ಆಕ್ರೋಶ



