ಕಳೆದ ಹನ್ನೆರಡು ವರ್ಷಗಳಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಯಾವ ಮಂತ್ರಿ ಕೂಡ ಕಾರ್ಯವೈಫಲ್ಯದ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆಯನ್ನು ನೀಡಿರಲಿಲ್ಲ. ಪ್ರಸ್ತುತ ಒಕ್ಕೂಟ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಮೀಡಿಯಾ ಜೊತೆ ಮಾತನಾಡುತ್ತ, “ನಮ್ಮದು ಎನ್‌ಡಿಎ ಸರ್ಕಾರ. ಯುಪಿಎ ಸರ್ಕಾರದಂತೆ ಇಲ್ಲಿ ಯಾವ ಮಂತ್ರಿಯೂ ರಾಜೀನಾಮೆಯನ್ನು ನೀಡುವುದಿಲ್ಲ…” ಎಂದು ಠೇಂಕಾರದಿಂದ ಹೇಳಿದ್ದರು!
ವಿಡಂಬನಾತ್ಮಕವಾಗಿ ಶುರುವಾದ ಕಾಕ್ರೋಚ್ ಜನತಾ ಪಕ್ಷ(ಕಾಜಪ) ಸುಮಾರು ಎರಡು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಗಮನಾರ್ಹ, ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಜೂನ್ 20, 2026ರಂದು ಜಂತರ್ ಮಂತರ್‌ನಲ್ಲಿ ಕಾಜಪ ಮೂಲಕ ಶುರುವಾದ ಅನಿರ್ದಿಷ್ಟ ಅವಧಿಯ ಪ್ರತಿಭಟನೆಯ ಪ್ರಾರಂಭದ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಜೆನ್ ಝಿ ಮತ್ತು ಯುವಜನರು ಭಾಗವಹಿಸಿರಲಿಲ್ಲ.
ಆದರೆ, ಆ ದಿನದಿಂದ ಪ್ರತಿಭಟನೆಯನ್ನು ಹಿಂದೆಗೆದುಕೊಂಡ ದಿನದವರೆಗೂ ( ಜುಲೈ 25) ಎಡಪಕ್ಷಗಳ ವಿದ್ಯಾರ್ಥಿ ಸಂಘಟನೆಗಳಾದ ಆಲ್ ಇಂಡಿಯಾ ಸ್ಟುಡೆಂಟ್ಸ್ ಫೆಡರೇಶನ್ (ಎಐಎಸ್‌ಎಫ್-ಸಿಪಿಐ), ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಶನ್ (ಎಐಎಸ್‌ಎ –ಸಿಪಿಐ-ಎಂಎಲ್), ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‌ಎಫ್‌ಐ- ಸಿಪಿಎಂ) ಮತ್ತು ಕ್ರಾಂತಿಕಾರಿ ಯುವ ಸಂಘಟನ್, ದಿಶಾ ಮುಂತಾದ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಿದವು. ಇವಲ್ಲದೆ, ಅನೇಕ ಯುವಕರು-ಯುವತಿಯರು ಕೂಡ ಪಾಲ್ಗೊಂಡರು. ಕೆಲವರು ನಿರಶನದಲ್ಲಿ ಕೂಡ ತೊಡಗಿದರು.
ಇದಕ್ಕೆ ಮುನ್ನ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ನ್ಯಾಶನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಕಾರ್ಯಕರ್ತರು ದೇಶಾದ್ಯಂತ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನೆಗಳನ್ನು neet ಪ್ರಶ್ನೆಪತ್ರಿಕೆಯ ಸೋರಿಕೆಯ ವಿಷಯದಲ್ಲಿ ನಡೆಸಿದ್ದರು. ಅವರ ಮೇಲೆ ಲಾಠಿ ಮತ್ತು ವಾಟರ್-ಕ್ಯಾನನ್ನುಗಳನ್ನು ಪ್ರಯೋಗಿಸಲಾಯಿತು. ಆದರೆ ಇವು ಹೆಚ್ಚಿನ ಸುದ್ದಿಯನ್ನು ಮಾಡಲಿಲ್ಲ! ಹೀಗಾಗದಂತೆ ಮಾಡುವುದರಲ್ಲಿ ಮುಖ್ಯವಾಹಿನಿಯ ಮೀಡಿಯಾ ಕೂಡ ಕಾರಣವಾಗಿತ್ತು.
ಜೂನ್ 28ರಂದು ಸೋನಂ ವಾಂಗ್ಚುಕ್, AISA ನ ನಾಲ್ಕು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರು ಮತ್ತು ಇತರ ಕೆಲವು ಯುವಕ-ಯುವತಿಯರು ಉಪವಾಸ ಸತ್ಯಾಗ್ರಹವನ್ನು ಶುರುಮಾಡಿದರು. ಜುಲೈ 18ರಂದು ಸೋನಂ ವಾಂಗ್ಚುಕ್ ಅವರನ್ನು ಮುಫ್ತಿಯಲ್ಲಿದ್ದ ದೆಹಲಿ ಪೊಲೀಸರು ಬಲವಂತದಿಂದ ಆಸ್ಪತ್ರೆಗೆ ಹೊತ್ತೊಯ್ದರು. ಈ ಘಟನೆ ಸಂಚಲನವನ್ನು ಉಂಟು ಮಾಡಿತು. ಜುಲೈ 20ರಂದು ದೆಹಲಿಯಲ್ಲಿ ಅನೇಕ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜೆನ್ ಝಿಗಳು ಮತ್ತು ಯುವಜನರು ʼಸಂಸತ್ ಚಲೋʼಗಾಗಿ ಜಮಾಯಿಸಿದರು. ಅವರ ಮೇಲೆ ಲಾಠಿ ಪ್ರಹಾರವನ್ನು ಮಾಡಲಾಯಿತು. ಪೆಲ್ಲೆಟ್ ಗನ್ನನ್ನು ಕೂಡ ಪ್ರಯೋಗಿಸಲಾಯಿತು. ಕೆಲವು ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ಪೊಲೀಸರು ನಡೆದುಕೊಂಡರು. ಅಂದೇ ರಾತ್ರಿ ಪೊಲೀಸರು ಜಂತರ್ ಮಂತರ್‌ನಲ್ಲಿದ್ದ ಟೆಂಟುಗಳನ್ನು ಧ್ವಂಸ ಮಾಡಿದರು. ಆದರೆ ಆ ರಾತ್ರಿಯೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆನ್ ಝಿಗಳು ಸೇರಿದರು. ನಂತರದ ಮೂರ್ನಾಲ್ಕು ದಿನಗಳಲ್ಲಿ ಅವರ ಸಂಖ್ಯೆಯಲ್ಲಿ ತುಂಬ ಹೆಚ್ಚಳ ಕಂಡು ಬಂದಿತು. ನಮ್ಮ ದೇಶದ ಅನೇಕ ಪ್ರಮುಖ ನಗರಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜೆನ್ ಝಿಗಳು ಮತ್ತು ಯುವಜನರು ಬೀದಿಗಿಳಿದು ಪ್ರತಿಭಟಿಸಿದರು. ಜುಲೈ 25ರಂದು ಯೂನಿಯನ್ ಸರ್ಕಾರದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ನೀಡಿದರು. ಅಂದೇ ಸಂಜೆ ಕಾಜಪ ತನ್ನ ಪ್ರತಿಭಟನೆಯನ್ನು ಕೊನೆಗೊಳಿಸಿತು.

ಈ ಪ್ರತಿಭಟನೆಯ ಯಶಸ್ಸಿನ ಹಿಂದೆ ಬರೀ ಕಾಜಪದ ಪಾತ್ರ ಮಾತ್ರ ಇರಲಿಲ್ಲ. ಜೆನ್ ಝಿಗಳು, ಯುವಜನರು, ವಿದ್ಯಾರ್ಥಿ ಸಂಘಟನೆಗಳು, ಎಡ ಪಕ್ಷಗಳು, ಸಮಾಜವಾದಿ ಪಕ್ಷ, ಶಿವಸೇನೆ-ಉದ್ದವ್ ಠಾಕ್ರೆ ಬಣ, ಟಿಎಂಸಿ, ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷ(ತಡವಾಗಿ), ಅನೇಕ ಸಾಮಾಜಿಕ ಕಾರ್ಯಕರ್ತರು ಮುಂತಾದವರ ಬೆಂಬಲವೂ ಇತ್ತು. ನೀಟ್ ಪ್ರಶ್ನೆಪತ್ರಿಕೆಯ ಸೋರಿಕೆಯ ವಿಷಯ ಪ್ರಧಾನವಾಗಿದ್ದರೂ, ಜೆನ್ ಝಿ ಮತ್ತು ಯುವಜನರಲ್ಲಿ ಮಡುಗಟ್ಟಿರುವ ಶಿಕ್ಷಣ ಕ್ಷೇತ್ರದ ಅಪಸವ್ಯಗಳು, ನಿರುದ್ಯೋಗ ಸಮಸ್ಯೆ ಮುಂತಾದ ಜ್ವಲಂತ ವಿಚಾರಗಳ ಕಾರಣದಿಂದ ಉಂಟಾದ ಕೋಪ, ಆತಂಕ, ಹತಾಶೆ ಮತ್ತು ನೋವು ಕೂಡ ಈ ಪ್ರತಿಭಟನೆಯಲ್ಲಿ ಮೇಳೈಸಿದ್ದವು. ಅವರು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಈ ಪ್ರತಿಭಟನೆ ಅವರ ಭಾವನೆಗಳನ್ನು ಹೊರಹಾಕಲು ಒಂದು ವೇದಿಕೆಯನ್ನು ಒದಗಿಸಿತು.
ಕಳೆದ ಹನ್ನೆರಡು ವರ್ಷಗಳಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಯಾವ ಮಂತ್ರಿ ಕೂಡ ಕಾರ್ಯವೈಫಲ್ಯದ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆಯನ್ನು ನೀಡಿರಲಿಲ್ಲ. ಪ್ರಸ್ತುತ ಯೂನಿಯನ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಮೀಡಿಯಾ ಜೊತೆ ಮಾತನಾಡುತ್ತ, “ನಮ್ಮದು ಎನ್‌ಡಿಎ ಸರ್ಕಾರ. ಯುಪಿಎ ಸರ್ಕಾರದಂತೆ ಇಲ್ಲಿ ಯಾವ ಮಂತ್ರಿಯೂ ರಾಜೀನಾಮೆಯನ್ನು ನೀಡುವುದಿಲ್ಲ …” ಎಂದು ಠೇಂಕಾರದಿಂದ ಹೇಳಿದ್ದರು! CAA-NRC ವಿರುದ್ಧದ ಹೋರಾಟದಲ್ಲಿ ಯುವಜನರು ಭಾಗವಹಿಸಿದ್ದರು. ಆದರೆ ಕೋವಿಡ್ ಕಾರಣದಿಂದ ಅದು ಸಮಾಪ್ತಿಗೊಂಡಿತು. ನಂತರ ಸುಮಾರು ಒಂದು ವರ್ಷದ ಕಾಲ ಜರುಗಿದ ರೈತರ ಹೋರಾಟದ ಕಾರಣದಿಂದ ಮೋದಿ ನೇತೃತ್ವದ ಯೂನಿಯನ್ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಿತು. ಆ ಹೋರಾಟದ ಕಾಲದಲ್ಲಿ 700ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನು ಕಳದುಕೊಂಡಿದ್ದರು. ಇದಾದ ಸುಮಾರು ನಾಲ್ಕೂವರೆ ವರ್ಷಗಳ ತರುವಾಯ ಯೂನಿಯನ್ ಸರ್ಕಾರ ತನ್ನ ಶಿಕ್ಷಣ ಮಂತ್ರಿಯ ರಾಜೀನಾಮೆಯ ಮೂಲಕ ಹಿನ್ನಡೆಯನ್ನು ಅನುಭವಿಸಿದೆ.
ಜೆನ್ ಝಿ ಪ್ರತಿಭಟನೆಯಿಂದ ಸ್ಪೂರ್ತಿಗೊಂಡು ಉತ್ತರ ಪ್ರದೇಶ, ಬಿಹಾರ, ರಾಜಾಸ್ಥಾನ ಮತ್ತು ನಮ್ಮ ರಾಜ್ಯದ ಕೆಲವಡೆ ಜೆನ್ ಆಲ್ಫದ ಶಾಲಾ ಮಕ್ಕಳು ಮೂಲಭೂತ ಸೌಕರ್ಯಗಳಾದ ಶುದ್ಧ ನೀರು, ಶೌಚಾಲಯಗಳು, ಒಳ್ಳೆಯ ಬೋಧನಾ ಕೊಠಡಿಗಳು, ರಸ್ತೆಗಳು ಮುಂತಾದುವುಗಳನ್ನು ಆಗ್ರಹಿಸಿ ಪ್ರತಿಭಟನೆಗಳನ್ನು ಹೂಡಿರುವುದು ವರದಿಯಾಗಿದೆ. ರಾಹುಲ್ ಗಾಂಧಿ ʼಛಾತ್ರೋಂ ಕೆ ಪೂಂಜ್ʼ ಎಂಬ ಕಾರ್ಯಕ್ರಮದಡಿ ಇದುವರೆಗೆ ರಾಜಸ್ಥಾನದ ಕೋಟಾ, ಡೆಹರಾಡೂನ್ ಮತ್ತು ಪ್ರಯಾಗರಾಜ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬೃಹತ್ ಸಭೆಗಳನ್ನು ನಡೆಸಿದ್ದಾರೆ. ಅವುಗಳಿಗೆ ಸ್ಪಂದನವೂ ದೊರಕಿದೆ.

ಪ್ರಧಾನಿ ಮೋದಿ ಜೆನ್ ಝಿಯನ್ನು ಉದ್ದೇಶಿಸಿ 2-3 ರೀಲುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಜಂತರ್ ಮಂತರ್ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಕೆಲವು ಜೆನ್ ಝಿ ಹುಡುಗಿಯರು ತಮ್ಮ ಹಾಗೂ ತಮ್ಮ ತಾಯಿಯವರ ಬಗೆಗೆ ಕೆಟ್ಟದಾಗಿ ಪ್ರತಿಕ್ರಿಯಿಸಿದರೆಂದು, ತಾವು ಅವರನ್ನು ಕ್ಷಮಿಸಿರುವುದಾಗಿ ಆ ರೀಲುಗಳಲ್ಲಿ ಸಂದೇಶವನ್ನು ರವಾನಿಸಿದ್ದಾರೆ. ಆದರೆ ಇದು ಒಂದು ತೆರನಾದ ʼವಿಕ್ಟಿಮ್ ಕಾರ್ಡ್ ʼ ಪ್ರಯೋಗವಾಗಿದೆ. ಪ್ರತಿಭಟನೆಯಲ್ಲಿ ಹುಡುಗರೂ ಇದ್ದರು. ಅವರಲ್ಲಿ ಕೆಲವರು ಪ್ರಧಾನಿಯವರ ನಿಂದನೆಯನ್ನು ಮಾಡಿದ್ದರು. ಆದರೆ ಮೋದಿ ಹೆಣ್ಣು ಮಕ್ಕಳನ್ನು ಮಾತ್ರ ಪ್ರಸ್ತಾಪಿಸಿರುವುದು Gendered ಹಾಗೂ Paternalistic Approach ಎಂದು ವಿಶ್ಲೇಷಕರು ಗುರುತಿಸಿದ್ದಾರೆ. ಅಲ್ಲದೆ ಕೆಲವು ಜೆನ್ ಝಿಗಳು ಮತ್ತು ಯುವಜನರಿಗೆ ಮೋದಿ ತಮ್ಮನ್ನು “ ಮಕ್ಕಳು” ಎಂದು ಉದ್ದೇಶಿಸಿದ್ದು ಸರಿ ಕಾಣಲಿಲ್ಲ. ಬೆಳೆದ ಯುವಜನರನ್ನು ಈ ರೀತಿಯಲ್ಲಿ ಕಾಣುವುದನ್ನು ʼInfantalisation ಎಂದು ಕರೆಯಲಾಗುತ್ತದೆ. ಯುವತಿಯರ ಮೇಲೆ ಜರುಗಿದ ಲಾಠಿ ಚಾರ್ಜ್, ಕೆಲವು ಪೊಲೀಸರ ಕೆಟ್ಟ ವರ್ತನೆ ಮತ್ತು Witch Huntingಕುರಿತು ಪ್ರಧಾನಿಯವರು ದಿವ್ಯ ಮೌನವನ್ನು ವಹಿಸಿದ್ದಾರೆ.
ರಾಜಕೀಯ ಕಾರ್ಯತಂತ್ರಜ್ಞ (ಸ್ಟ್ರಾಟೆಜಿಸ್ಟ್)ರಾಗಿರುವ ನರೇಶ್ ಅರೋರಾ ʼ ದಿ ಹಿಂದೂ ʼ ಏರ್ಪಡಿಸಿದ್ದ ವೆಬಿನಾರ್ ಒಂದರಲ್ಲಿ ಮಾತನಾಡುತ್ತ, “ಜಂತರ್ ಮಂತರ್‌ನ ಪ್ರತಿಭಟನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ಜೆನ್ ಝಿ ಮತ್ತು ಯುವಜನರು ಜಾತಿ, ಮತ ಅಥವಾ ವಿಚಾರಧಾರೆ ಮುಂತಾದ ಅಸ್ಮಿತೆಗಿಂತಲೂ ಒಂದು ಸಮಾನ ಮನಸ್ಕತೆಯನ್ನು ಹೊಂದಿರುವ ಭಾರತದ ಪ್ರಥಮ ಪೊಲಿಟಿಕಲ್ ಕಾನ್ಸ್ಟಿಟುಯೆನ್ಸಿ“ ಎಂದು ಬಣ್ಣಿಸಿದರು. ಅಲ್ಲದೆ ಅವರು, “ಈ ಯುವ ಮತದಾರರು ಮಾಹಿತಿಯನ್ನು ಬೇರೆಯೇ ಕೋನದಿಂದ ಪರಿಗಣಿಸುತ್ತಾರೆ. ಅವರು ವಿಷಯ(ಇಶ್ಯು)ಗಳಿಗೆ ನಿಷ್ಟವಂತರಾಗಿರುವಷ್ಟು ರಾಜಕೀಯ ಪಕ್ಷಗಳಿಗೆ ಆಗಿರುವುದಿಲ್ಲ. ಜೆನ್ ಝಿಯವರನ್ನು ಬರೀ ಪ್ರಥಮ ಬಾರಿಯ ಮತದಾರರು ಎಂದು ರಾಜಕೀಯ ಪಕ್ಷಗಳು ಗುರುತಿಸಿದರೆ, ಅದು ತಪ್ಪಾಗುತ್ತದೆ. ಇವರು ರಾಜಕೀಯ ಎನ್ನುವುದು ಒಂದು ಡಿಜಿಟಲ್ ಪ್ಲಾಟ್‌ಫಾರಂನಂತೆ ಸ್ಪಂದಿಸಬೇಕು ಎಂದು ನಿರೀಕ್ಷಿಸುವ ಪ್ರಥಮ ಪೀಳಿಗೆಯವರು. ನಮ್ಮ ಇಡೀ ರಾಜಕೀಯ ವರ್ಗವನ್ನು ಈ ಪೀಳಿಗೆ ಪರೀಕ್ಷಿಸುತ್ತಿದೆ” ಎಂದು ಹೇಳಿದರು!
ಈ ಮಧ್ಯೆ ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮದ ವಿರುದ್ಧ ಬಹಳ ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ವಿಧಾನಸೌಧ ಚಲೋ ನಡೆಸಿದ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಲಾಗಿದೆ. ಅಲ್ಲಿ ಕಾಂಗ್ರೆಸ್ ಸರ್ಕಾರದ ಪಾಲುದಾರ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಾರ್ಖಂಡ್ ಜೆನ್ ಝಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. ಅಲ್ಲಿ ಬಿಜೆಪಿಯೇತರ ಸರ್ಕಾರವಿರುವ ಕಾರಣ ಎಬಿವಿಪಿ ಪ್ರತಿಭಟನೆಯಲ್ಲಿ ತೊಡಗಿದೆ. ಕೆಜಿಪಿ ಸದಸ್ಯರು ಪ್ರತಿಭಟನೆಗೆ ಬರದಂತೆ ಬಹಿರಂಗ ಹೇಳಿಕೆ ನೀಡಿದ್ದು ನೋಡಿದರೆ ನೀಟ್ ಪ್ರತಿಭಟನೆಗೆ ಪ್ರತೀಕಾರವಾಗಿ ಜಾರ್ಖಂಡ್ ಪ್ರತಿಭಟನೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟ.
ಏನೇ ಆದರೂ, ಜೆನ್ ಝಿ ಮತ್ತು ಯುವಜನರ ಈ ಪ್ರತಿಭಟನೆ ಒಂದು ಸ್ಪೇಸನ್ನು ಉಂಟು ಮಾಡಿದೆ. ಮುಂಬರುವ ಚುನಾವಣೆಗಳಲ್ಲಿ ಜೆನ್ ಝಿಯವರು ಯಾವ ಬಗೆಯಲ್ಲಿ ತಮ್ಮ ಮತಗಳನ್ನು ಚಲಾಯಿಸುತ್ತಾರೆ ಎಂಬುದು ಕುತೂಹಲಕಾರಿ ವಿಷಯ.

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ



