ಇಷ್ಟೆಲ್ಲ ಸವಾಲುಗಳ ನಡುವೆ ಕಾಜಪದ ಪ್ರತಿಭಟನೆ ಮುಂದುವರೆಯುತ್ತಿದೆ. ಮತಬೇಧವಿಲ್ಲದೆ ಕೆಲವು ಸಿಖ್ ಮತ್ತು ಮುಸಲ್ಮಾನ ಬಾಂಧವರು ಪ್ರತಿಭಟನಾಕಾರರಿಗೆ ಆಹಾರದ ಉಚಿತ ವ್ಯವಸ್ಥೆಯನ್ನು ಮಾಡಿದ್ದಾರೆ. ಕೆಲವರು ನೀರಿನ ಬಾಟಲಿ ವಿತರಿಸುತ್ತಿದ್ದಾರೆ. ಇಂತಹವರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಕಾಜಪದ ಜೊತೆ ಯಾವ ತೆರನಾದ ಸಂಬಂಧವಿದೆಯೆಂದು ವಿಚಾರಿಸುತ್ತಿದ್ದಾರೆ! ಬಿಸಿಲು, ಗಾಳಿ, ಮಳೆಯನ್ನು ಲೆಕ್ಕಿಸದೇ ಪ್ರತಿಭಟನಾಕಾರರು
ಮುಂದುವರೆಯುತ್ತಿದ್ದಾರೆ.
ಇದೇ ವರ್ಷದ ಮೇ ತಿಂಗಳ ಮಧ್ಯಭಾಗದಲ್ಲಿ ವಿಡಂಬನೆಯ ಮೂಲಕ ಜನಿಸಿದ ಕಾಕ್ರೋಚ್ ಜನತಾ ಪಕ್ಷ(ಕಾಜಪ) ಈ ಬರಹದ ಸಮಯದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಹೂಡಿ 15 ದಿನಗಳಾಗಿವೆ. ಜೂನ್ 28ರಿಂದ 25-26 ಮಂದಿ ಅಲ್ಲಿ ಅನಿರ್ದಿಷ್ಟಕಾಲದ ಉಪವಾಸ ಸತ್ಯಾಗ್ರಹವನ್ನು ಹೂಡಿದ್ದಾರೆ. ಇವರ ಪೈಕಿ ಲಡಾಖಿ ಖ್ಯಾತ ಶಿಕ್ಷಣ ತಜ್ಞ, ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಕೂಡ ಇದ್ದಾರೆ. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೊಸಿಯೇಷನ್‌ನ ಆರು ಯುವ ಸಂಗಾತಿಗಳು ನಿರಶನದಲ್ಲಿ ಭಾಗಿಯಾಗಿದ್ದಾರೆ. ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಸ್ತುತ ಕಾಜಪದ ಮುಖ್ಯ ಬೇಡಿಕೆ
ಇತ್ತೀಚಿನ ವರ್ಷಗಳಲ್ಲಿ ಸತತವಾಗಿ NEET ಮತ್ತು ಇತರ ಪರೀಕ್ಷೆಗಳ ಪ್ರಶ್ನೆಗಳ ಸೋರುವಿಕೆ ಕುರಿತಂತೆ ಜವಾಬ್ದಾರಿಯನ್ನು ಹೊತ್ತು ಯೂನಿಯನ್ ಸರ್ಕಾರದ ಶಿಕ್ಷಣ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ನೀಡಬೇಕು ಎಂಬುದಾಗಿದೆ. NEET ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸೋರುವಿಕೆಯಿಂದ ಸುಮಾರು 20 ವಿದ್ಯಾರ್ಥಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 22 ಲಕ್ಷ ವಿದ್ಯಾರ್ಥಿಗಳು ಪುನಃ NEET ಪರೀಕ್ಷೆಯನ್ನು ಎದುರಿಸಬೇಕಾಯಿತು.
ಪ್ರಸ್ತುತ ಕಾಲಘಟ್ಟದಲ್ಲಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಸರ್ಕಾರವನ್ನು ಟೀಕಿಸಿದರೆ, ಅದರ ನೀತಿಗಳ ವಿರುದ್ಧ ಪ್ರತಿಭಟನೆಯನ್ನು ಮಾಡಿದರೆ ಅಂತಹ ಕಾರ್ಯಾಚರಣೆಗಳನ್ನು ಆಳುವ ಪಕ್ಷದ ನಾಯಕರು ಹಾಗೂ ಅದರ
ಸಮರ್ಥಕರು ʼದೇಶ ವಿರೋಧಿ ಚಟುವಟಿಕೆʼ ಎಂದು ಸಾರಾಸಗಟಾಗಿ ಲೇಬಲನ್ನು ಅಂಟಿಸಿಬಿಡುತ್ತಾರೆ. ಕಾಜಪ ಇನ್ಸ್ಟಾಗ್ರಾಂನಲ್ಲಿ ಬಿಜೆಪಿ ಪಕ್ಷದ ಅನುಯಾಯಿಗಳ ಸಂಖ್ಯೆಯನ್ನು ಹಿಂದಿಕ್ಕಿ ಸುಮಾರು 2.2 ಕೋಟಿ ಅನುಯಾಯಿಗಳನ್ನು ಪಡೆದ ತರುವಾಯ ಅದರ ವಿರುದ್ಧ ಶುರುವಾಯಿತು ಟ್ರೋಲ್ಲಿಂಗ್. ಅದರ ಅನುಯಾಯಿಗಳ ಪೈಕಿ ಹೆಚ್ಚಿನವರು ಪಾಕಿಸ್ತಾನಿಗಳು ಎಂಬ ಸುಳ್ಳು ವದಂತಿಯನ್ನು ಹರಿಯಬಿಡಲಾಯಿತು. ನಮ್ಮ ರಾಜ್ಯದ ಮಾಜಿ ಶಿಕ್ಷಣ ಮಂತ್ರಿ ಮತ್ತು ಬಿಜೆಪಿ ನಾಯಕ ಎಸ್ ಸುರೇಶ್ ಕುಮಾರ್ ಇಂತಹ ವದಂತಿಯನ್ನು ಹಂಚಿಕೊಂಡರು! ಕಾಜಪದ X ಹ್ಯಾಂಡಲನ್ನು ಬ್ಲಾಕ್ ಮಾಡಲಾಯಿತು.
ಅಮೆರಿಕಾದಲ್ಲಿದ್ದ ಕಾಜಪದ ಸಂಸ್ಥಾಪಕ ಅಭಿಜಿತ್ ದೀಪ್ಕೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ಹೂಡಲಾಗುವುದು ಎಂದು ಘೋಷಿಸಿದಾಗ, ಅವರನ್ನು ಆ ದೇಶದಿಂದ ಉಚ್ಛಾಟಿಸಲಾಗಿದೆ ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅವರೇ ಹಿಂದೆ ತಾವು AAP ಪಕ್ದದ ಸೋಷಿಯಲ್ ಮೀಡಿಯಾ ವಿಂಗ್‌ನಲ್ಲಿ ಕೆಲಸ ಮಾಡಿದ್ದಾಗಿ ತಿಳಿಸಿದ್ದರು. ಈ ವಿಷಯವನ್ನು ಜಗ್ಗಾಡಿ ಕಾಜಪವನ್ನು AAPಯ ʼಬಿʼ ಟೀಂ ಎಂದು ಜರಿಯಲಾಯಿತು. ಮುಂದೆ ಕಾಜಪ ಮೂರು ವಕ್ತಾರರನ್ನು ನೇಮಕ ಮಾಡಿತು. ಲೀಗಲ್ ಪತ್ರಕರ್ತರಾಗಿರುವ ಸೌರವ್ ದಾಸ್ ಮುಖ್ಯ ವಕ್ತಾರರಾದರು. ಆಗ ಶುರುವಾಯಿತು ಮತ್ತೊಂದು ರೀತಿಯ ದಾಳಿ. ಸುಮಾರು ಒಂಬತ್ತು ವರ್ಷಗಳ ಹಿಂದೆ ಅವರು ನರೇಂದ್ರ ಮೋದಿಯನ್ನು ಮೆಚ್ಚಿಕೊಂಡ ಟ್ವಿಟರ್ ಮುನ್ನೆಲೆಗೆ ಬಂದಿತು. ನಂತರ ಅವರು ಉಮರ್ ಖಾಲೀದ್ ಜೊತೆ ಇರುವ ಫೋಟೊ ಸಹ. ಇನ್ನೊಬ್ಬ ವಕ್ತಾರರಾಗಿರುವ ಅಶುತೋಷ್ ರಂಕಾ AAPನ ರಾಷ್ಟ್ರೀಯ ವಕ್ತಾರರಾಗಿದ್ದರು. ಈ ವಿಚಾರವನ್ನೂ ಪಸರಿಸಲಾಯಿತು.
ಕಾಜಪದ ಮೊದಲ ಪ್ರತಿಭಟನೆ ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 6ರಂದು ಜರುಗಿತು. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು/ಯುವಜನರು ಜಮಾಯಿಸಿದ್ದರು. “ನೋಡಿ…..ಸಾಮಾಜಿಕ ಜಾಲತಾಣಗಳಲ್ಲಿ 2.2 ಕೋಟಿ
ಅನುಯಾಯಿಗಳಿರುವ ಕಾಜಪ ಕೇವಲ ಒಂದು ಸಾವಿರದಷ್ಟು ಜನರನ್ನು ಜಮಾಯಿಸಲು ಸಾಧ್ಯವಾಗಿದೆ…” ಎಂಬುದಾಗಿ ಕುಚೋದ್ಯ ಮಾಡಲಾಯಿತು. ಮುಂದೆ ಪುಣೆ, ಹೈದರಾಬಾದ್, ಬೆಂಗಳೂರು, ಲಕ್ನೋ, ಅಮೃತ್‌ಸರ್ ಮತ್ತು ಜೈಪುರಗಳಲ್ಲಿ ಕಾಜಪದ ಪ್ರತಿಭಟನಾ ಸಭೆಗಳು ಜರುಗಿದವು. ಆಗ ಯೂನಿಯನ್ ಸರ್ಕಾರ ಮತ್ತು ಬಿಜೆಪಿಯ ಕೆಲವು ನಾಯಕರು ಮತ್ತು ಬೆಂಬಲಿಗರು ಕಾಜಪಗೆ ಜಾರ್ಜ್ ಸೋರೋಸ್‌ನಿಂದ ಹಣವನ್ನು ಒದಗಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದರು. ಜೈಪುರದ ಪ್ರತಿಭಟನೆಯಲ್ಲಿ ಸಂಘ ಪರಿವಾರದ ಒಬ್ಬ ಪುಂಡ ಅಭಿಜಿತ್ ದೀಪ್ಕೆ ಕಪಾಳಕ್ಕೆ ಹೊಡೆದ. ಆತನನ್ನು ಮತ್ತು ಇತರ ನಾಲ್ವರನ್ನು ಬಂಧಿಸಲಾಯಿತು. ಆದರೆ ಮಾರನೆಯ ದಿನವೇ ಅವರನ್ನು ಬೈಲ್ ಮೇಲೆ ಬಿಡುಗಡೆ ಮಾಡಲಾಯಿತು! ಈ ದೈಹಿಕ ದಾಳಿಯನ್ನು ಮಾಡಿದ್ದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು ಕೂಡ!

ಜಂತರ್ ಮಂತರ್‌ನಲ್ಲಿ ಜೂನ್ 20ರಿಂದ ಅನಿರ್ದಿಷ್ಟಕಾಲದ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಕಾಜಪ ಘೋಷಿಸಿತು. ಆ ದಿನದಂದು ಮಾತ್ರ ಸಭೆಯನ್ನು ನಡೆಸಲು ಪರವಾನಗಿಯನ್ನು ನೀಡಲಾಯಿತು. ಮಾರನೆಯ ದಿನ ನೀರಿನ ಸರಬರಾಜು ಮತ್ತು ವಿದ್ಯುಚ್ಛಕ್ತಿಯನ್ನು ತಡೆಹಿಡಿಯಲಾಯಿತು. ಇದರ ಬಗೆಗೆ ಕಾಜಪ ಪ್ರತಿಭಟಿಸಿದ ನಂತರ ಈ ಸೇವೆಗಳು ಪುನರಾರಂಭಗೊಂಡವು. ಒಂದೆರಡು ಬಾರಿ Rapid Action Forceನ ಅನೇಕ ಮಂದಿಯನ್ನು ಜಂತರ್ ಮಂತರ್ ಒಳಗೆ ಜಮಾಯಿಸಲಾಯಿತು. ಶಕ್ತಿ ಪ್ರದರ್ಶನವನ್ನು ಮಾಡಲಾಯಿತು. ಇದರ ಹಿಂದೆ ಪ್ರತಿಭಟನಾ ಪ್ರದರ್ಶನಾಕಾರರನ್ನು ಬೆದರಿಸುವ ಉದ್ದೇಶವೂ ಇರಬಹುದು!
ಪ್ರತಿಭಟನೆಯ 13ನೇ ದಿನದಂದು ಆಲ್ ಇಂಡಿಯಾ ವಿದ್ಯಾರ್ಥಿಗಳ ಮತ್ತು ಯುವಜನರ ಸಂಘಟನೆಗಳು( AISF- AIYF) ನಡೆಸುತ್ತಿದ್ದ ಪುಸ್ತಕಗಳ ಸಣ್ಣ ಸಂಗ್ರಹದ ಮೇಲೆ ದೆಹಲಿ ಪೊಲೀಸರು ದಾಂಧಲೆ ಮಾಡಿದರು. ಎರಡು ಟೇಬಲ್‌ಗಳನ್ನು ಬಳಸಿ, ಕೆಲವು ಸಣ್ಣ ಪುಸ್ತಕಗಳ ಪ್ರದರ್ಶನವನ್ನು ಮಾಡಲಾಗಿತ್ತು. ಯುವಜನರು/ ಇತರರು ಯಾವ ಹಣವನ್ನು ನೀಡದೆ, ಪುಸ್ತಕವನ್ನು ಓದಿ, ಹಿಂದಿರುಗಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಪುಸ್ತಕ ವ್ಯವಸ್ಥೆ ಅಡಚಣೆ ಒಡ್ಡುತ್ತಿದೆಯೆಂಬ ನೆಪವನ್ನು ನೀಡಿ, ಪೋಲೀಸರು ಅದನ್ನು ಮುಚ್ಚಬೇಕೆಂದು ತಮ್ಮ ದರ್ಪವನ್ನು ತೋರಿಸಿದರು. ಪುಸ್ತಕಗಳನ್ನು ಬಿಸಾಡಿದರು. ಆದರೆ ಯಾರೂ ಇದರ ಬಗೆಗೆ ದೂರನ್ನು ನೀಡಿರಲಿಲ್ಲ. ಇದರಿಂದ ತೊಂದರೆಯೂ ಉಂಟಾಗಿರಲಿಲ್ಲ! ಒಬ್ಬ ACP ಈ ಪುಸ್ತಕಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಹುಡುಗನ ಮೇಲೆ ಕೈ ಮಾಡಿದ. ಅಭಿಜಿತ್ ದೀಪ್ಕೆ ಈ ACPಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು..
NEETನ ಮರುಪರೀಕ್ಷೆ ಜರುಗಿದ ತರುವಾಯ ಕಾಜಪದ ಪ್ರತಿಭಟನೆಯ ಬಗೆಗೆ ಪ್ರಶ್ನಿಸಿದಾಗ ಧರ್ಮೇಂದ್ರ ಪ್ರಧಾನ್ ಅವರೆಲ್ಲ ಭಯೋತ್ಪಾದಕರ ʼಬಿ ʼ ಟೀಂ ಎಂದು ಹಣೆಪಟ್ಟಿ ಕಟ್ಟಿದರು! ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ತೆಲಂಗಾಣದಲ್ಲಿ ಮಾತನಾಡುತ್ತ, “ಕಾಜಪದವರು ವೈರಸ್ಸುಗಳು ಮತ್ತು ಕಾಕ್ರೋಚುಗಳ ಗ್ಯಾಂಗ್‌ಗಳು. ಅವರಿಗೆ ದೇಶವನ್ನು ತುಂಡು ತುಂಡಾಗಿ ಛಿದ್ರ ಮಾಡುವ ಉದ್ದೇಶವಿದೆ. ಅದು ದೇಶದ ಯುವಜನತೆಯನ್ನು ಋಣಾತ್ಮಕ ರಾಜಕೀಯದತ್ತ ತಿರುಗಿಸುವ ದುಷ್ಟ ಹುನ್ನಾರವನ್ನು ಹೊಂದಿದೆ. ಅವರಿಗೆ ತಕ್ಕ ಪಾಠವನ್ನು ಬಿಜೆಪಿಯ ಕಾರ್ಯಕರ್ತರು ಮಾತ್ರ ಕಲಿಸಬಲ್ಲರು” ಎಂದು ಹೂಂಕರಿಸಿದರು.
ಇಷ್ಟೆಲ್ಲ ಸವಾಲುಗಳ ನಡುವೆ ಕಾಜಪದ ಪ್ರತಿಭಟನೆ ಮುಂದುವರೆಯುತ್ತಿದೆ. ಮತಬೇಧವಿಲ್ಲದೆ ಕೆಲವು ಸಿಖ್ ಮತ್ತು ಮುಸಲ್ಮಾನ ಬಾಂಧವರು ಪ್ರತಿಭಟನಾಕಾರರಿಗೆ ಆಹಾರದ ಉಚಿತ ವ್ಯವಸ್ಥೆಯನ್ನು ಮಾಡಿದ್ದಾರೆ. ಕೆಲವರು ನೀರಿನ
ಬಾಟಲುಗಳನ್ನು ವಿತರಿಸುತ್ತಿದ್ದಾರೆ. ಇಂತಹವರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಕಾಜಪದ ಜೊತೆ ಯಾವ ತೆರನಾದ ಸಂಬಂಧವಿದೆಯೆಂದು ವಿಚಾರಿಸುತ್ತಿದ್ದಾರೆ! ಬಿಸಿಲು, ಗಾಳಿ, ಮಳೆಯನ್ನು ಲೆಕ್ಕಿಸದೇ ಪ್ರತಿಭಟನಾಕಾರರು
ಮುಂದುವರೆಯುತ್ತಿದ್ದಾರೆ. ಇವರಲ್ಲಿ ಕೆಲವರು ಮಧ್ಯವಯಸ್ಕರು ಮತ್ತು ವೃದ್ಧರೂ ಇದ್ದಾರೆ! ದೂರದ ಒಡಿಶಾದಿಂದ ಕ್ಯಾನ್ಸರ್ ಮತ್ತು ಕಿಡ್ನಿ ತೊಂದರೆಯನ್ನು ಅನುಭವಿಸುತ್ತಿರುವ ಒಬ್ಬ ಮಹಿಳೆ ಯೂರಿನ್ ಡ್ರೈನೇಜ್ ಬ್ಯಾಗನ್ನು ಹಾಕಿಕೊಂಡು ತನ್ನ ಹನ್ನೆರಡು ವರ್ಷದ ಮಗನ ಜೊತೆ ಜಂತರ್ ಮಂತರ್‌ನಲ್ಲಿ ಬೀಡುಬಿಟ್ಟಿದ್ದಾರೆ!
ಪ್ರತಿದಿನ ಜಂತರ್ ಮಂತರ್‌ನ ಸ್ವಚ್ಛತೆಯ ಬಗೆಗೆ ಸ್ವತಃ ಪ್ರತಿಭಟನಾಕಾರರೇ ನಿಗಾ ವಹಿಸುತ್ತಿದ್ದಾರೆ. ನಾವಿನ್ಯ ಬಗೆಯಲ್ಲಿ ಪ್ರತಿಭಟನೆಗಳು ಜರಗುತ್ತಿವೆ. ಯುವಜನರ ಹೊಸ ಆಲೋಚನೆಗಳು ಹಾಗೂ ಸೃಜನಶೀಲತೆ ಕಂಡು ಬರುತ್ತಿವೆ. “ಗೋದಿ ಮೀಡಿಯಾ ಗೋ ಬ್ಯಾಕ್ ” ಎಂಬ ಘೋಷಣೆಗಳು ಪ್ರಧಾನ ವಾಹಿನಿಯ ಮೀಡಿಯಾದವರು ಬಂದಾಗ ಕೇಳಿಸುತ್ತವೆ. ಪರ್ಯಾಯ ಡಿಜಿಟಲ್ ಮೀಡಿಯಾದ ಮೂಲಕವೇ ಹೆಚ್ಚಿನ ಪ್ರಚಾರ ಕಾರ್ಯ ಜರುಗುತ್ತಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಅಪ್ಪ- ಮಕ್ಕಳು ಹೀಗೆ ಕೋಮುವಾದಿಗಳಾಗಬೇಕಿತ್ತೇ? ದಳವನ್ನು ಬಿಜೆಪಿಯ ಪದತಲಕ್ಕೆ ಇಡಬೇಕಿತ್ತೇ?
ಇದುವರೆಗೆ ಯೂನಿಯನ್ ಸರ್ಕಾರ ಈ ಪ್ರತಿಭಟನೆಗೆ ಸ್ಪಂದಿಸಿಲ್ಲ. ಕೆಲವು ವರ್ಷಗಳ ಹಿಂದೆ ಸುಮಾರು ಒಂದು ವರ್ಷ ಜರುಗಿದ ರೈತರ ಹೋರಾಟದ ಬಗೆಗೆ ಈ ಸರ್ಕಾರ ಹೇಗೆ ನಡೆದುಕೊಂಡಿತೆಂಬುದು ತಿಳಿದ ವಿಷಯವೇ ಆಗಿದೆ. ಈ ಸರ್ಕಾರದ ಧೋರಣೆ ʼMy way is right way ʼ ಎಂಬುದಾಗಿದೆ. ಹಾಗಾಗಿ ಕಾಜಪದ ಪಯಣ ಅನೇಕ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಜಪದ ಪ್ರತಿಭಟನೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾಥ್ ನೀಡುತ್ತಿರುವ ಎಲ್ಲರಿಗೂ ಸಲಾಮು.

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ



