ಉಪವಾಸ ಸತ್ಯಾಗ್ರಹ ಬಲಪ್ರಯೋಗದ ಬದಲು ಸ್ವಯಂಪ್ರೇರಿತ ವೇದನೆ/ಯಾತನೆಯನ್ನು ಅವಲಂಬಿಸುತ್ತದೆ. ಅದು ಮಣಿಸುವುದಕ್ಕಿಂತಲೂ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವಂತೆ ಮಾಡಬೇಕೆಂಬ ಆಶಯವನ್ನು ಹೊಂದಿರುತ್ತದೆ. ಅದರ ಯಶಸ್ಸು ನಿರಶನದ ಅವಧಿಯ ಮೇಲೆ ನಿಶ್ಚಯವಾಗುವುದಿಲ್ಲ. ಅದು ಉಪವಾಸ ಸತ್ಯಾಗ್ರಹ ಮಾಡುವವರ ನೈತಿಕ ವಿಶ್ವಾಸಾರ್ಹತೆ, ಕಾರಣದ ನ್ಯಾಯಸಮ್ಮತತೆ, ಸಾರ್ವಜನಿಕರ ಸ್ಪಂದನ ಮತ್ತು ಅಧಿಕಾರದ ಭಿನ್ನ ಸಂಸ್ಥೆಗಳ ಇಚ್ಛಾಶಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯ ಮೇಲೆ ಆಧಾರವಾಗಿರುತ್ತದೆ.
ಇತಿಹಾಸದಲ್ಲಿ ಹಲವು ಸ್ವರೂಪಗಳ ಪ್ರತಿಭಟನೆಗಳು ಆಗಿಹೋಗಿವೆ. ಆಗುತ್ತಲೂ ಇವೆ. ಸಮಾಜದ ವಿಕಸನದ ಜೊತೆಜೊತೆಗೆ, ಅದರ ರಚನೆಗಳು ಪಲ್ಲಟಗೊಂಡಂತೆ, ವ್ಯವಸ್ಥೆಗಳು ಬದಲಾದಂತೆ, ಪ್ರತಿಭಟನೆಗಳ ಮಾದರಿಗಳು ವ್ಯತ್ಯಾಸಗೊಳ್ಳುತ್ತ ಬಂದದ್ದು ಒಂದು ಗಮನಾರ್ಹ ಸಂಗತಿಯೇ ಸರಿ. ಪ್ರತಿಭಟನೆಗಳ ಬಲದ ಪ್ರಯೋಗ ಹಿಂಸೆಯ ಆಯಾಮವನ್ನು ಪಡೆದು, ಅದು ಭಿನ್ನ ಪರಿಣಾಮಗಳನ್ನು ಬೀರಿದ್ದನ್ನು ಇತಿಹಾಸದ ಪುಟಗಳು ತಿಳಿಸುತ್ತವೆ.
ಪ್ರತಿಭಟನಾ ಪ್ರದರ್ಶನಗಳು, ಧರಣಿಗಳು, ಮುಷ್ಕರಗಳು ಮುಂತಾದವು ಆಳುವವರ ನೀತಿಗಳು, ಕ್ರಮಗಳು ಇತ್ಯಾದಿಗಳ ವಿರುದ್ಧ ಜರಗುತ್ತವೆ. ಸತ್ಯಾಗ್ರಹದಂತಹ ಅಹಿಂಸಾತ್ಮಕ ಹೋರಾಟದ ವಿಧಾನವನ್ನು ಮಹಾತ್ಮ ಗಾಂಧೀಜಿ ಪ್ರಥಮ ಬಾರಿಗೆ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್ ಎಂಪೈರ್ ಥಿಯೇಟರ್ ಬಳಿ ಪ್ರಯೋಗಿಸಿದರು. ಆಗಿನ ದಕ್ಷಿಣ ಆಫ್ರಿಕಾದ ಒಂದು ಆಡಳಿತ ಪ್ರಾಂತ್ಯವಾಗಿದ್ದ ಟ್ರ್ಯಾನ್ಸ್ವಾಲ್ ತನ್ನ ಸಂಸತ್ತಿನ ಮೂಲಕ ʼ ಟ್ರ್ಯಾನ್ಸ್ವಾಲ್ ಏಷ್ಟ್ಯಾಟಿಕ್ ರಿಜಿಸ್ಟ್ರೇಷನ್ ʼ ಕಾನೂನನ್ನು ಅಲ್ಲಿನ ಅಧಿಕಾರಸ್ಥರು ಜಾರಿ ಮಾಡಿದರು. ಅದರಂತೆ ಭಾರತೀಯರು ಮತ್ತು ಚೀನಿಯರು ಒಳಗೊಂಡಂತೆ ಎಲ್ಲ ಏಷ್ಯಾ ಮೂಲದವರು ತಮ್ಮ ಬೆರಳಚ್ಚ(ಫಿಂಗರ್‌ಪ್ರಿಂಟ್)ನ್ನು ಖಡ್ಡಾಯವಾಗಿ ನೀಡಬೇಕಿತ್ತು. ಅಲ್ಲದೆ ಅವರು ಸದಾಕಾಲ ತಮ್ಮ ರಿಜಿಸ್ಟ್ರೇಷನ್ ಸರ್ಟಿಫಿಕೇಟನನ್ನು ಕೊಂಡೊಯ್ಯಬೇಕಿತ್ತು. ಇಂತಹ ಕಾನೂನಿನ ವಿರುದ್ಧ ಗಾಂಧೀಜಿ ಹೋರಾಟವನ್ನು ಶುರು ಮಾಡಿದರು.
ಭಾರತದಲ್ಲಿ ಗಾಂಧೀಜಿ ಮೊದಲನೆಯ ಬಾರಿಗೆ ಬಿಹಾರದ ಚಂಪಾರಣ್ಯದಲ್ಲಿ ಬ್ರಿಟಿಷ್ ಆಡಳಿತದ ಕಠಿಣ ಕ್ರಮಗಳ ವಿರುದ್ಧದ ನೀಲಿ(ಇಂಡಿಗೊ) ಬೆಳೆಯುವ ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಸತ್ಯಾಗ್ರಹವನ್ನು ಏಪ್ರಿಲ್ 17, 1917ರಂದು ಪ್ರಾರಂಭಿಸಿದರು. ಮರುವರ್ಷ(ಮಾರ್ಚ್ 15) ಅವರು ಅಹಮ್ಮದಾಬಾದಿನ ಗಿರಣಿ ಕಾರ್ಮಿಕರ ಬೇಡಿಕೆಗಳ ನಿಟ್ಟಿನಲ್ಲಿ ಪ್ರಥಮವಾಗಿ ಮೂರು ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು. ಆದರೆ ಇದಕ್ಕೆ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಮೂರು ಬಾರಿ ನಿರಶನ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಅಸ್ಪಶ್ಯತೆಯ ವಿರುದ್ಧ, ಕೋಮುಸೌಹಾರ್ದ ಮತ್ತು ಹಿಂದೂ-ಮುಸಲ್ಮಾನ ಒಗ್ಗಟ್ಟಿನ ಪರವಾಗಿ ಉಪವಾಸ ಸತ್ಯಾಗ್ರಹವನ್ನು ಹೂಡಿದರು. ಬ್ರಿಟಿಷ್ ಸರ್ಕಾರ ದಮನಿತ ವರ್ಗ(ಕೆಳ ಜಾತಿಯವರು/ದಲಿತರು)ದವರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ರಚಿಸಲು ಮುಂದಾದಾಗ, ಅವರು ಆ ಕ್ರಮದ ವಿರುದ್ಧ ಆರು ದಿನಗಳ ನಿರಶನ ಸತ್ಯಾಗ್ರಹವನ್ನು ಮಾಡಿದರು. ಈ ಘಟನೆ ಗಾಂಧೀಜಿ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಡುವಿನ ಪೂನ ಒಪ್ಪಂದಕ್ಕೆ ನಾಂದಿಯನ್ನು ಹಾಡಿತು. ಇಂದಿಗೂ ಹಲವು ದಲಿತ ನಾಯಕರು ಮತ್ತು ಚಿಂತಕರು ಗಾಂಧೀಜಿಯವರ ಈ ವಿಷಯದ ಬಗೆಗಿನ ನಿಲುವನ್ನು ಖಂಡಿಸುತ್ತಾರೆ. ಇರಲಿ.
ಗಾಂಧೀಜಿಯವರ ಕೊನೆಯ ಉಪವಾಸ ಸತ್ಯಾಗ್ರಹ ಜನವರಿ 13ರಿಂದ 18ರವರೆಗೆ ಅಂದರೆ ಆರು ದಿನಗಳ ಕಾಲ ದೆಹಲಿಯಲ್ಲಿ ಜರುಗಿತು. ಭಾರತದ ವಿಭಜನೆಯಿಂದ ನಡೆದ ಕೋಮು ಹಿಂಸೆ, ಹತ್ಯೆ, ಆಸ್ತಿಹಾನಿ ಇತ್ಯಾದಿ ಹೃದಯವಿದ್ರಾವಕ ಘಟನೆಗಳಿಂದ ಘಾಸಿಯಾಗಿ ಅವರು ಶಾಂತಿಯ ಮರುಸ್ಥಾಪನೆಗಾಗಿ ಈ ಕ್ರಮಕ್ಕೆ ಮುಂದಾದರು. ಇದಾದ ಹನ್ನೆರಡು ದಿನಗಳ ತರುವಾಯ ನಾಥೂರಾಮ ಗೋಡ್ಸೆ ಗಾಂಧೀಜಿಯವರನ್ನು ಹೇಯವಾಗಿ ಹತ್ಯೆ ಮಾಡಿದ.

ಗಾಂಧೀಜಿಯವರ ಸಾಮಾಜಿಕ ಮತ್ತು ರಾಜಕೀಯ ರಂಗಗಳ ಹೋರಾಟದ ಉಪವಾಸ ಸತ್ಯಾಗ್ರಹ ಎಂಬ ಹೋರಾಟದ ಅಹಿಂಸಾ ಸಾಧನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರರನ್ನು ಕೂಡ ಸೆಳೆದಿತ್ತು! 1929ರಲ್ಲಿ ಭಗತ್ ಸಿಂಗ್, ಬಟುಕೇಶ್ವರ್ ದತ್ತ್, ಜತಿನ್ ದಾಸ್ ಮತ್ತು ಇತರ ಹಲವು ಕೈದಿಗಳು ಮಿಯನ್ವಾಲಿ ಮತ್ತು ಲಾಹೋರಿನ ಕೇಂದ್ರ ಕಾರಾಗ್ರಹಗಳಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ಹೂಡಲಿಲ್ಲ! ತಮ್ಮನ್ನು ರಾಜಕೀಯ ಕೈದಿಗಳೆಂದು ಪರಿಗಣಿಸಬೇಕು, ಐರೋಪ್ಯ ಬಂದಿಗಳಿಗೆ ನೀಡುವಂತೆ ತಮಗೂ ಉತ್ತಮ ಆಹಾರವನ್ನು ನೀಡಬೇಕು, ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಓದಲು ಅವಕಾಶವನ್ನು ಕಲ್ಪಿಸಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಚಾರಿತ್ರಿಕ ನಿರಶನವನ್ನು ಕೈಗೊಂಡರು. ಜತಿನ್ ದಾಸ್ 63 ದಿನಗಳ ನಿರಶನದ ತರುವಾಯ ಅಸುನೀಗಿದ. ಭಗತ್ ಸಿಂಗ್ 116 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದ! ಬ್ರಿಟಿಷ್ ಸರ್ಕಾರ ಈ ನಿರಶನವನ್ನು ಬಂದೀಖಾನೆಗೆ ಸಂಬಂಧಿಸಿದ ಒಂದು ವಿಷಯ ಎಂದು ಬಿಂಬಿಸಿತು. ಆದರೆ ತಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ಕೈದಿಗಳಾಗಿದ್ದ ಈ ಮಂದಿ ರಾಷ್ಟ್ರೀಯ ನಾಯಕರಂತೆ ಕಾಣಲ್ಪಟ್ಟರು!
ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿಯನ್ನು ಪಡೆದ ನಂತರವೂ ಉಪವಾಸ ಸತ್ಯಾಗ್ರಹ ಎಂಬ ಹೋರಾಟದ ಮಾರ್ಗ ಮುಂದುವರೆಯಿತು. ಇದರ ಆಶಯಗಳು ವಿಸ್ತರಣೆಯನ್ನು ಹೊಂದಿದವು. ಮಾನವ ಹಕ್ಕುಗಳು, ಪರಿಸರ ರಕ್ಷಣೆ, ಭ್ರಷ್ಟಾಚಾರ ಇತ್ಯಾದಿ ಜ್ವಲಂತ ವಿಷಯಗಳನ್ನು ಕುರಿತು ನಿರಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪೊಟ್ಟಿ ಶ್ರೀರಾಮುಲು, ತೆಲಗು ಭಾಷಿಕರಿಗೆ ಪ್ರತ್ಯೇಕ ರಾಜ್ಯವಿರಬೇಕೆಂದು ಒತ್ತಾಯಿಸಿ 58 ದಿನಗಳ ಉಪವಾಸ ಸತ್ಯಾಗ್ರಹವನ್ನು ಮಾಡಿ ಡಿಸೆಂಬರ್ 1952ರಲ್ಲಿ ಗತಿಸಿದರು. ಮಣಿಪುರದ ಮಲೋಮ್‌ನಲ್ಲಿ ಹತ್ಯೆಗಳು ಜರುಗಿದ ತರುವಾಯ ಐರೋಮ್ ಶರ್ಮಿಳಾ ನವೆಂಬರ್ 2, 2000ರಂದು ಅಲ್ಲಿ ಜಾರಿಯಲ್ಲಿದ್ದ ಸೈನ್ಯ ವಿಶೇಷಾಧಿಕಾರದ ಕಾನೂನು (ಆರ್ಮ್ಡ್ ಪೋರ್ಸಸ್ ಸ್ಪೆಷಲ್ ಪವರ್ಸ್ ಯಾಕ್ಟ್) ವಿರುದ್ಧ ಉಪವಾಸ ಸತ್ಯಾಗ್ರಹನ್ನು ಶುರು ಮಾಡಿ ಸುಮಾರು 16 ವರ್ಷಗಳ ಕಾಲ ನಡೆಸಿದರು. ಅವರು ಆಹಾರವನ್ನು ನಿರಾಕರಿಸಿದರೂ, ಅವರಿಗೆ ಬಲವಂತವಾಗಿ ಆಹಾರವನ್ನು ಮೂಗಿನಲ್ಲಿ ಅಳವಡಿಸಿದ್ದ ಟ್ಯೂಬುಗಳ ಮೂಲಕ ನೀಡಲಾಗುತ್ತಿತ್ತು! ಹೆಚ್ಚಿನ ಅವಧಿಯನ್ನು ಅವರು ಒಂದರ್ಥದಲ್ಲಿ ರಾಜ್ಯದ ಬಂಧನ (State Custody)ಯಲ್ಲಿ ಕಳೆದರು! ಇಷ್ಟಾದರೂ, ಆ ರಾಜ್ಯದ ಹಲವು ಭಾಗಗಳಲ್ಲಿ ಈ ಕಾಯಿದೆ ಜಾರಿಯಲ್ಲಿದೆ. ಹಾಗೆಯೇ ಇತರ ಕೆಲವು ರಾಜ್ಯಗಳಲ್ಲಿ ಕೂಡ. ಉಪವಾಸ ಸತ್ಯಾಗ್ರಹಗಳು ಯಾವಾಗಲೂ ನೀತಿ ಬದಲಾವಣೆಯ ಫಲಿತಾಂಶವನ್ನು ನೀಡುವುದಿಲ್ಲ. ಆದರೆ, ಅವು ಜನತೆಯ ಸಂಕಥನವನ್ನು ಮರುರೂಪಿಸುವ ಸಾಧ್ಯತೆಗಳನ್ನು ಹೊಂದಿರುತ್ತವೆ.
ಪ್ರೊ. ಜಿ ಡಿ ಅಗರ್‌ವಾಲ್ ಐಐಟಿ ಕಾನ್ಪುರ್‌ನಲ್ಲಿ ಗೌರವಾನ್ವಿತ ಪರಿಸರ ವಿಜ್ಞಾನಿಯಾಗಿದ್ದರು. ನಂತರ ಸ್ವಾಮೀಜಿಯಾದರು. ಅವರು ಗಂಗಾ ನದಿಯ ಶುದ್ಧೀಕರಣ ಮತ್ತು ಸಂರಕ್ಷಣೆಯಲ್ಲಿ ವಿಶೇಷ ಆಸ್ಥೆಯನ್ನು ವಹಿಸಿದ್ದರು. 2018ರಲ್ಲಿ ಸುಮಾರು 112 ದಿನಗಳ ಕಾಲ ನಿರಶನವನ್ನು ಕೈಗೊಂಡರು. ಗಂಗಾ ನದಿಯ ಬಗೆಯ ಪಾವಿತ್ರ್ಯದ ಬಗೆಗೆ ಉದ್ದುದ್ದ ಭಾಷಣಗಳನ್ನು ಮಾಡುವ ಯೂನಿಯನ್ ಸರ್ಕಾರದ ಅತ್ಯುನ್ನತ ನಾಯಕರಾದ ಮೋದಿ ಮತ್ತು ಅವರ ಪಕ್ಷದ ಇತರ ಧುರೀಣರು ಕ್ಯಾರೆ ಎನ್ನಲಿಲ್ಲ! ಆ ವರ್ಷದ ಅಕ್ಟೋಬರ್‌ನಲ್ಲಿ ಅಗರ್‌ವಾಲ್ ಅಸುನೀಗಿದರು.

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಜರುಗಿದ ಜೆನ್ ಝಿ-ಯುವಜನರ ಪ್ರತಿಭಟನೆಯಲ್ಲಿ ಸೋನಮ್ ವಾಂಕ್ಚುಕ್, ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್‌ನ ಆರು ಕಾರ್ಯಕರ್ತರು ಮತ್ತು ಇತರರು ಉಪವಾಸ ಸತ್ಯಾಗ್ರಹ ಹೂಡಿದ್ದನ್ನು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ
ಉಪವಾಸ ಸತ್ಯಾಗ್ರಹ ಬಲಪ್ರಯೋಗದ ಬದಲು ಸ್ವಯಂಪ್ರೇರಿತ ವೇದನೆ/ಯಾತನೆಯನ್ನು ಅವಲಂಬಿಸುತ್ತದೆ. ಅದು ಮಣಿಸುವದಕ್ಕಿಂತಲೂ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವಂತೆ ಮಾಡಬೇಕೆಂಬ ಆಶಯವನ್ನು ಹೊಂದಿರುತ್ತದೆ. ಅದರ ಯಶಸ್ಸು ನಿರಶನದ ಅವಧಿಯ ಮೇಲೆ ನಿಶ್ಚಯವಾಗುವುದಿಲ್ಲ. ಅದು ಉಪವಾಸ ಸತ್ಯಾಗ್ರಹ ಮಾಡುವವರ ನೈತಿಕ ವಿಶ್ವಾಸಾರ್ಹತೆ, ಕಾರಣದ ನ್ಯಾಯಸಮ್ಮತತೆ, ಸಾರ್ವಜನಿಕರ ಸ್ಪಂದನ ಮತ್ತು ಅಧಿಕಾರದ ಭಿನ್ನ ಸಂಸ್ಥೆಗಳ ಇಚ್ಛಾಶಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯ ಮೇಲೆ ಆಧಾರವಾಗಿರುತ್ತದೆ. ಆದರೆ, ಈ ಮಾರ್ಗವನ್ನು ಬೇರೆಯೇ ನೆಲಯಲ್ಲಿ ವಿಮರ್ಶಾತ್ಮಕವಾಗಿ ನೋಡುವವರೂ ಇದ್ದಾರೆ. ಇದು ಚುನಾಯಿತ ಸರ್ಕಾರಗಳ ಮೇಲೆ ಸಾಂವಿಧಾನಿಕ ರೀತಿ-ನೀತಿಗಳಿಗಿಂತ ಅನುಚಿತ, ಭಾವನಾತ್ಮಕ ಒತ್ತಡವನ್ನು ಹೇರುತ್ತದೆ ಎಂಬುದು ಅಂತಹವರ ವಾದವಾಗಿದೆ.
ದೇಹವೇ ನೈತಿಕ ಹೋರಾಟದ ತಾಣವಾಗುವ ಉಪವಾಸ ಸತ್ಯಾಗ್ರಹ ಕಳೆದ ಸುಮಾರು ನೂರು ವರ್ಷಗಳಿಂದ ನಮ್ಮ ಸಾರ್ವಜನಿಕ ಜೀವನದಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತ ಬಂದಿದೆ.

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ



