ನಮ್ಮ ಸ್ವಾತಂತ್ರ್ಯ ಹೋರಾಟವನ್ನು ʼಕಾಮನಬಿಲ್ಲು ಮಿಶ್ರಣʼ ಎಂದು ಕರೆಯಬಹುದು. ಇದರಲ್ಲಿ ಭಿನ್ನ ವಿಚಾರಧಾರೆಗಳಿದ್ದವು; ಭಿನ್ನಾಭಿಪ್ರಾಯಗಳಿದ್ದವು; ಬೌದ್ಧಿಕ ಜಗಳಗಳು ಸಹ. ಅನೇಕ ಜಾತಿ, ಮತಗಳ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಒಂದರ್ಥದಲ್ಲಿ ಇವು ನಮ್ಮ ಬಹುತ್ವವನ್ನು ಪ್ರತಿನಿಧಿಸುತ್ತಿದ್ದವು. ನಮ್ಮ ಸಮ್ಮಿಳಿತ ಸಂಸ್ಕೃತಿ(Composite Culture)ಯ ಹಲವು ಅಂಶಗಳನ್ನು ನಾವು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಣಬಹುದು.
ಇತ್ತೀಚೆಗೆ ಭಾರತ ತನ್ನ ೮೦ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಎಂದಿನಂತೆ ಪ್ರಜೆಗಳು ನಾನಾ ತೆರನಾಗಿ ಈ ದಿನವನ್ನು ಆಚರಿಸಿದರು. ತ್ರಿವರ್ಣಧ್ವಜವನ್ನು ಹಾರಿಸಿ, ಅದಕ್ಕೆ ವಂದಿಸಿ, ಮಾಲಾರ್ಪಣೆ ಮಾಡಿ, ರಾಷ್ಟ್ರಗೀತೆಯನ್ನು ಹಾಡಿ, ಸಿಹಿಯನ್ನು ಹಂಚಿದರು. ಇವೆಲ್ಲ ಸಾಮಾನ್ಯವಾಗಿ ಕಂಡು ಬರುವ ದೃಶ್ಯಗಳು. ಇಂತಹ ಕರ್ಯಕ್ರಮಗಳು ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಕೆಲವು ಸಂಸ್ಥೆಗಳು ಮತ್ತು ಇತರ ಸ್ಥಳಗಳಲ್ಲಿ ಜರಗುತ್ತವೆ. ಕೆಲವು ಭಿನ್ನ ಬಗೆಯ ಕಾರ್ಯಕ್ರಮಗಳೂ ನಡೆಯುತ್ತವೆ.
ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಪಡೆಯುವ ನಿಟ್ಟಿನಲ್ಲಿ ನಮ್ಮ ಸಮಾಜದ ನಾನಾ ಸ್ತರಗಳ ಮಂದಿಯ ಕೊಡುಗೆಗಳಿದ್ದವು. ಕೆಲವರು ಬಲ ಪ್ರಯೋಗದಿಂದ ಸ್ವಾತಂತ್ರ್ಯವನ್ನು ಗಳಿಸಬಹುದೆಂದು ಎಂದು ನಂಬಿ, ಸಂಸ್ಥೆ-ಸಂಘಟನೆಗಳನ್ನು ಹುಟ್ಟು ಹಾಕಿ, ಕಾರ್ಯಾಚರಣೆಗಳಲ್ಲಿ ತೊಡಗಿದರು. ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಝಾದ್, ರಾಮ್ ಪ್ರಸಾದ್ ಬಿಸ್ಮಿಲ್, ಅಸ್ಫಾಖುಲ್ಲಾ ಖಾನ್, ಖುದಿರಾಮ್ ಬೋಸ್ ಮುಂತಾದವರು ಈ ಹಾದಿಯನ್ನು ಹಿಡಿದರು. ಆದರೆ ಭಗತ್ ಸಿಂಗ್ ಹಿಂಸೆಗಾಗಿ ಹಿಂಸೆಯ ಮಾರ್ಗವನ್ನು ಅನುಸರಿಸಲಿಲ್ಲ. ಹೀಗಾಗಿ ಆತ ಮತ್ತು ಬಟುಕೇಶ್ವರ್ ದತ್ತ, ಕಡಿಮೆ ನಾಶ ಮಾಡುವ ಶಕ್ತಿಯನ್ನು ಹೊಂದಿದ್ದ ಎರಡು ಬಾಂಬುಗಳನ್ನು ಕೇಂದ್ರ ವಿಧಾನ ಸಭೆಯ ಹಾಲಿನ, ಯಾರೂ ಇರದ ಪ್ರದೇಶವನ್ನು ಆರಿಸಿಕೊಂಡು ಗ್ಯಾಲರಿಯಿಂದ ಎಸೆದರು. ರಷ್ಯಾದ ೧೯೧೭ರ ಸಮಾಜವಾದಿ ಕ್ರಾಂತಿಯಿಂದ ಪ್ರೇರೇಪಿತಗೊಂಡಿದ್ದ ಭಗತ್ ಸಿಂಗ್ಗೆ ಸ್ವಾತಂತ್ರ್ಯ ನಂತರದ ಭಾರತದ ಸಮಾಜ ಹೇಗಿರಿಬೇಕೆಂಬ ಸ್ಪಷ್ಟ ಕಲ್ಪನೆಯಿತ್ತು. ಅತನಿಗೆ ನಮ್ಮಲ್ಲಿ ಸಮಾಜವಾದಿ ವ್ಯವಸ್ಥೆ ರೂಪುಗೊಳ್ಳಬೇಕೆಂಬ ಆಶಯವಿತ್ತು.
ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಮಹಾತ್ಮ ಗಾಂಧೀಜಿಯವರು ಅನುಸರಿಸಿದ ಅಹಿಂಸಾ ಮರ್ಗ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಸತ್ಯಾಗ್ರಹದಂತಹ ತಂತ್ರವನ್ನು ಪ್ರಯೋಗಿಸಿ, ಅಸಹಕಾರ ಚಳವಳಿಯನ್ನು ಹೂಡಿ, ಹೋರಾಟದ ಮಾರ್ಗಕ್ಕೆ ಹೊಸ ದಿಕ್ಕನ್ನು ತೋರಿಸಿದರು. ತಮ್ಮ ನಡೆ-ನುಡಿಯ ಮೂಲಕ ಅಪಾರ ಸಂಖ್ಯೆಯ ಜನರನ್ನು ಸ್ವಾತಂತ್ರ್ಯ ಸಂಗ್ರಾಮದ ನಾನಾ ಪ್ರಕ್ರಿಯೆಗಳಿಗೆ ಪಕ್ಕಾಗುವಂತೆ ಮಾಡಿದ್ದು ಅಪೂರ್ವ ಸಾಧನೆಯೇ ಸರಿ. ಇಡೀ ಜಗತ್ತು ನಿಬ್ಬೆರಗಾಗುವಂತೆ ಮಾಡಿದ್ದು ಅವರ ಹೆಗ್ಗಳಿಕೆಯಾಗಿತ್ತು.
ಆದರೆ ಗಾಂಧೀಜಿಯವರದ್ದು ಏಕವ್ಯಕ್ತಿಯ ಸಾಧನೆಯಾಗಿರಲಿಲ್ಲ. ಅವರ ಜೊತೆ ಅನೇಕರು ಕಾಂಗ್ರಸ್ ಪಕ್ಷದಡಿ ಕೈ ಜೋಡಿಸಿದ್ದರು. ಜವಹರ್ಲಾಲ್ ನೆಹರೂ, ಸುಭಾಷ್ಚಂದ್ರ ಬೋಸ್, ವಲ್ಲಭ್ಭಾಯ್ ಪಟೇಲ್, ಸರೋಜಿನಿ ನಾಯ್ಡು, ಮೌಲಾನ ಅಬುಲ್ ಕಲಾಂ ಅಝಾದ್, ಖಾನ್ ಅಬ್ದುಲ್ ಗಫರ್ ಖಾನ್ ಮತ್ತು ಇತರ ಅನೇಕ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದರು. ಮಹಿಳೆಯರು ಸಮಾಜ ಹಾಕಿದ್ದ ಸಂಕೋಲೆಗಳಿಂದ ಬಿಡಿಸಿಕೊಂಡು ಗಮನರ್ಹ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿದ್ದು ವಿಶೇಷ ಸಂಗತಿಯಾಗಿತ್ತು. ಗಾಂಧೀಜಿ ವರ್ಣ ವ್ಯವಸ್ಥೆಯನ್ನು ಎತ್ತಿ ಹಿಡಿದು, ತನ್ನನ್ನು ಸನಾತನಿ ಹಿಂದೂ ಎಂದು ಗುರುತಿಸಿಕೊಂಡಿದ್ದರೂ, ಜಾತಿ ವ್ಯವಸ್ಥೆಯ ಅನೇಕ ಅಮಾನವೀಯ ಪದ್ದತಿಗಳನ್ನು ವಿರೋಧಿಸಿದರು.
ಡಾ. ಬಿ ಆರ್ ಅಂಬೇಡ್ಕರ್ ಸಾಮಾಜಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಒತ್ತನ್ನು ನೀಡಿದರು. ಜಾತಿ ವಿನಾಶ ಆಗದ ಹೊರತು ನಮ್ಮ ಸಮಾಜ ಪ್ರಗತಿ ಹೊಂದುವುದಿಲ್ಲ ಎಂಬುದು ಅವರ ಸ್ಪಷ್ಟ ದೃಷ್ಟಿಕೋನವಾಗಿತ್ತು. ಗಾಂಧೀಜಿ ಪ್ರತಿಪಾದಿಸಿದ ಗ್ರಾಮ ಸ್ವರಾಜ್ಯ ಕಲ್ಪನೆಯ ಬಗೆಗೆ ಅವರಿಗೆ ಭಿನ್ನಾಭಿಪ್ರಾಯಗಳು ಇದ್ದವು. ಅಂತಹ ವ್ಯವಸ್ಥೆಯಲ್ಲಿ ಶೋಷಣೆಯ ಶಕ್ತಿಗಳು ಮುಂದುವರೆದು, ಜಾತಿಯ ಆಧಾರದ ಮೇಲೆ ಜನರನ್ನು ದಮನ ಮಾಡಲಾಗುವುದು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.
೧೯೨೫ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಪ್ರೇರಣೆಯಾಗಿದ್ದು ರಷ್ಯಾದಲ್ಲಿ ನಡೆದ ಸಮಾಜವಾದಿ ಕ್ರಾಂತಿ. ಕಾರ್ಮಿಕರು, ಕೆಲಸಗಾರರು, ಉದ್ಯೋಗಿಗಳು, ರೈತರು ಮತ್ತು ಇತರ ದುಡಿಯುವ ಮಂದಿಯನ್ನು ಸಂಘಟಿಸಿ, ಅವರ ಶ್ರೇಯೋಭಿವೃದ್ಧಿಗಾಗಿ ಅನೇಕ ಹೋರಾಟಗಳನ್ನು ರೂಪಿಸುವುದರ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಅವರು ತೊಡಗುವಂತೆ ಸಿಪಿಐ ಕಾರ್ಯ ನಿರ್ವಹಿಸಿತು.
ಕಾಂಗ್ರೆಸ್ ಪಕ್ಷದಲ್ಲಿ ಸಮಾಜದ ನಾನಾ ಸ್ತರಗಳ ನಾಯಕ-ನಾಯಕಿಯರಿದ್ದರು. ಆ ಕಾಲದ ಕೆಲವು ಬಂಡವಾಳಗಾರರು, ಜಮಿನ್ದಾರಿ ವರ್ಗದ ಕೆಲವರು ಅದರ ಜೊತೆ ಗುರುತಿಸಿಕೊಂಡಿದ್ದರು. ಈ ಪಕ್ಷದ ಒಳಗೆ ಸಮಾಜವಾದಿ ಒಂದು ಬಣವಿತ್ತು. ಇದು ಒಂದು ಘಟಕವಾಗಿ ಕೆಲಸವನ್ನು ಮಾಡಿತು. ಅದರಲ್ಲಿ ಆಚಾರ್ಯ ನರೇಂದ್ರ ದೇವ್, ಯೂಸುಫ್ ಮೆಹರಲ್ಲಿ, ಜಯಪ್ರಕಾಶ್ ನಾರಾಯಣ್, ಅಚ್ಯುತ್ ಪಟವರ್ಧನ್, ರಾಮ್ ಮನೋಹರ್ ಲೋಹಿಯಾ ಮುಂತಾದ ನಾಯಕರಿದ್ದರು.
ಇವೆಲ್ಲ ಮುಖ್ಯವಾಹಿನಿ ಸ್ವಾತಂತ್ರ್ಯ ಹೋರಾಟದ ಕೆಲವು ನಿದರ್ಶನಗಳು. ಆದರೆ ಹೆಚ್ಚಾಗಿ ಗಮನವನ್ನು ಸೆಳೆಯದೆ ಇರುವ, ಅಂಚಿನ ನಿರೂಪಣೆ ಹೊಂದಿರುವ, ಕೆಲವು ಜನವಿಭಾಗಗಳ ಹೋರಾಟದತ್ತ ಸಹ ಅವಶ್ಯ ನೋಟವನ್ನು ಹರಿಸಬೇಕು.
ಸ್ವಾತಂತ್ರ್ಯ ಹೋರಾಟದ ಕಾವು ಕ್ರಮೇಣ ಜಾಸ್ತಿಯಾದಾಗ ನಿಧಾನವಾಗಿ ಮಹಿಳೆಯರು ಕೂಡ ತಮ್ಮ ಸಂಕೋಲೆಗಳಿಂದ ಹೊರಬಂದು ಅದರಲ್ಲಿ ಭಾಗವಹಿಸಿದರು. ಕುಟುಂಬದ ನಿರ್ವಹಣೆಯ ಜೊತೆಜೊತೆಗೆ ಅವರು ಯಾವ ಪರಿಯ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ಸವಾಲು-ಸಮಸ್ಯೆಗಳನ್ನು ಎದುರಿಸಿದರು ಎಂಬ ವಿಷಯಗಳು ಗಮನಾರ್ಹವಾದ ಚರ್ಚೆ ಮತ್ತು ವಿಶ್ಲೇಷಣೆಗಳಿಗೆ ಒಳಗಾಗಿಲ್ಲ ಎಂದು ಹೇಳಬಹುದು.
ಬ್ರಿಟಿಷ್ ಸರ್ಕಾರ ವಿಧಿಸಿದ್ದ ಹೆಚ್ಚಿನ ಕರದ ವಿರುದ್ಧದ ರೈತಾಪಿ ವರ್ಗದವರ ಸತ್ಯಾಗ್ರಹ ಗುಜರಾತಿನ ಬರ್ಡೊಲಿಯಲ್ಲಿ ೧೯೨೮ರಲ್ಲಿ ಜರುಗಿತು. ಅದರ ನೇತೃತ್ವವನ್ನು ಸರ್ದಾರ್ ವಲ್ಲಭಭಾಯ್ ಪಟೇಲರು ವಹಿಸಿದ್ದರು. ಅವರು ಪುರುಷರ ಜೊತೆ ಮಹಿಳೆಯರು ಭಾವಹಿಸಬೇಕೆಂದು ಕರೆ ನೀಡಿದರು. ಇದಕ್ಕೆ ಓಗೊಟ್ಟು ಆದಿವಾಸಿ ಮಹಿಳೆಯರು ಸೇರಿದಂತೆ ಸಮಾಜದ ಇತರ ವಿಭಾಗಗಳ ಮಹಿಳೆಯರೂ ಈ ಹೋರಾಟದಲ್ಲಿ ಪಾಲ್ಗೊಂಡರು. ದಾಸ್ರಿಬೆನ್ ಚೌಧರಿ ಎಂಬ ಆದಿವಾಸಿ ಮಹಿಳೆ ಸ್ವಲ್ಪ ಓದಿಕೊಂಡಿದ್ದರು. ಅವರು ಅಶಿಕ್ಷಿತ ಆದಿವಾಸಿಗಳನ್ನು ಸಂಸ್ಕರಿಸಿ, ಸಂಘಟಿಸಿದರು. ಮಹಿಳಾ ಬ್ರಿಗೇಡ್ಗಳನ್ನು ರಚಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಶೋಷಿತ ರೈತರು ಕರವನ್ನು ಕೊಡಲಿಲ್ಲ. ಈ ಸತ್ಯಾಗ್ರಹ ಯಶಸ್ವಿಯಾಯಿತು.
ಹೈದರಾಬಾದಿನಲ್ಲಿ ಮಲ್ಲು ಸ್ವರಾಜ್ಯಂ ಎಂಬ ಸಾಮ್ರಾಜ್ಯಶಾಹಿ ಮತ್ತು ಊಳಿಗಮಾನ್ಯ ವಿರೋಧಿ ಹೋರಾಟಗಾರರಿದ್ದರು. ಆಕೆ ಮಹಿಳೆಯರ ವಿಷಯಗಳನ್ನು ಮುಂದಿರಿಸಿಕೊಂಡು ಅನೇಕ ಪ್ರತಿರೋಧದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಆ ಕಾಲದಲ್ಲಿ ಎಲ್ಲ ರಂಗಗಳಲ್ಲಿ ಗಂಡಂದಿರು ಹೆಂಡತಿಯರ ಮೇಲೆ ಪ್ರಹಾರಗಳನ್ನು ಮಾಡುತ್ತಿದ್ದರು. ಇದರ ವಿರುದ್ಧ ಹಳ್ಳಿಗಳಲ್ಲಿ ಜಾಥಾಗಳನ್ನು ನಡೆಸಿ, ಘೋಷಣೆಗಳನ್ನು ಹಾಕಲಾಯಿತು. ಮದ್ಯಪಾನದ ವಿರುದ್ಧವೂ ಹೋರಾಟವನ್ನು ರೂಪಿಸಿದರು. ಅಲ್ಲದೆ, ಹೆಂಡತಿ ಗಂಡನಿಂದ ವಿಚ್ಛೇದನವನ್ನು ಪಡೆಯುವ ಸಾಧ್ಯತೆಯೇ ಇರಲಿಲ್ಲ. ಪಂಚಾಯಿತಿ ಸಮಿತಿಯ ಮೂಲಕ ಇಂತಹ ವಿಷಯಗಳಿಗೆ ಸೂಕ್ತ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಮಧ್ಯಪ್ರವೇಶವನ್ನು ಮಾಡಲಾಯಿತು. ವಿಧವೆಯರ ಪುನರ್ ವಿವಾಹಕ್ಕೂ ನೆಲೆಯನ್ನು ಕಲ್ಪಿಸಲಾಯಿತು.
ಬಾಂಬೆ (ಇಂದಿನ ಮುಂಬೈ)ಯ ಬಂದರು ಕಾರ್ಮಿಕರನ್ನು ವಿಮೋಚನಾ ಹೋರಾಟದಲ್ಲಿ ತೊಡಗಿಸಿಕೊಳ್ಳುವುದರ ಹಿಂದಿನ ಪ್ರಾಮುಖ್ಯವನ್ನು ರಾಷ್ಟ್ರೀಯ ನಾಯಕರು ಅರಿತಿದ್ದರು. ಈ ರಂಗದ ಕಾರ್ಮಿಕರು ಸಂಪನ್ನು ಹೂಡಿದರೇ, ಅದು ಬ್ರಿಟಿಷ್ ಸರ್ಕಾರ ಸಮುದ್ರದ ಮೂಲಕ ನಡೆಸುತ್ತಿದ್ದ ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳಿಗೆ ದೊಡ್ಡ ಪೆಟ್ಟನ್ನು ನೀಡುವ ಸಾಧ್ಯತೆಯಿತ್ತು. ಈ ಅಂಶವನ್ನು ಹೋರಾಟದ ನಾಯಕರು ಅರಿತಿದ್ದರು. ಕಾರ್ಮಿಕ ಸಂಘಗಳನ್ನು ಬ್ರಿಟಿಷ್ ಕಾನೂನು ಕ್ರಿಮಿನಲ್ ಎಂದು ಪರಿಗಣಿಸಿದ್ದರೂ, ೧೯೩೨ರಲ್ಲಿ ಬಾಂಬೆ ಡಾಕ್ ವರ್ಕರ್ಸ್ ಯೂನಿಯನ್ನನ್ನು ಸ್ಥಾಪಿಸಲಾಯಿತು. ಬ್ರಿಟಿಷ್ ಸರಕುಗಳ ವಿರುದ್ಧ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಯಿತು. ವಿದೇಶಿ ಬಟ್ಟೆಗಳ ಬೇಲ್ಗಳನ್ನು ಸಮುದ್ರಕ್ಕೆ ಎಸೆಯಲಾಯಿತು. ಅಲ್ಲದೆ ಬಂದರು ಕಾರ್ಮಿಕರು ಮುಂಬೈ ಶಹರಿನಲ್ಲಿ ನಡೆಯುತ್ತಿದ್ದ ಬ್ರಿಟಿಷರ ವಿರುದ್ಧದ ಮುಷ್ಕರಗಳಲ್ಲಿ ಭಾಗವಹಿಸುತ್ತಿದ್ದರು. ೧೯೪೬ರಲ್ಲಿ ಜರುಗಿದ ರಾಯಲ್ ಇಂಡಿಯನ್ ನೇವಿ ದಂಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದರು ಕಾರ್ಮಿಕರು ಭಾಗವಹಿಸಿದ್ದರು.
ಇವುಗಳೆಲ್ಲದರ ನಡುವೆ ಹಿಂದೂ ರಾಷ್ಟ್ರವನ್ನು ನರ್ಮಾಣ ಮಾಡಬೇಕೆಂದು ಆರ್ಎಸ್ಎಸ್, ಹಿಂದೂ ಮಹಾಸಭಾದಂತಹ ಸಂಘಟನೆಗಳು ಧ್ಯೇಯೋದ್ದೇಶವನ್ನು ಹೊಂದಿದ್ದವು. ಪ್ರಾರಂಭದಲ್ಲಿ ಸಾವರ್ಕರ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರೂ ನಂತರ ಬ್ರಿಟಿಷರಿಗೆ ಶರಣಾದರು. ಆರೆಸ್ಸೆಸ್ನ ಯಾವ ನಾಯಕರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಲಿಲ್ಲ ಎಂಬುದು ವಾಸ್ತವ ಸಂಗತಿ. ಮೊದಲು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಮಹಮ್ಮದ್ ಆಲಿ ಜಿನ್ನಾ ನಂತರ ಮುಸ್ಲಿಂ ಲೀಗ್ನ ನಾಯಕರಾದರು. ನಂತರ ಮುಸಲ್ಮಾನರಿಗೆ ಪ್ರತ್ಯೇಕ ದೇಶ ಬೇಕೆಂದು ಅಗ್ರಹಿಸಿ ಭಿನ್ನ ಹಾದಿಯನ್ನು ಹಿಡಿದರು.
ಈ ಹಿನ್ನೆಲೆಯಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟವನ್ನು ʼಕಾಮನಬಿಲ್ಲು ಮಿಶ್ರಣʼ ಎಂದು ಕರೆಯಬಹುದು. ನಮ್ಮ ಸಮಾಜದ ಮುಖ್ಯವಾಹಿನಿಯಲ್ಲಿದ್ದ ಜನವಿಭಾಗಗಳು ಹಾಗೂ ಅಂಚಿನಲ್ಲಿದ್ದ ಜನಗಳು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಈ ಸಂಗ್ರಾಮದಲ್ಲಿ ಭಿನ್ನ ವಿಚಾರಧಾರೆಗಳಿದ್ದವು; ಭಿನ್ನಾಭಿಪ್ರಾಯಗಳು ಇದ್ದವು ; ಬೌದ್ಧಿಕ ಜಗಳಗಳು ಸಹ. ಅನೇಕ ಜಾತಿ, ಮತಗಳ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಒಂದರ್ಥದಲ್ಲಿ ಇವು ನಮ್ಮ ಬಹುತ್ವವನ್ನು ಪ್ರತಿನಿಧಿಸುತ್ತಿದ್ದವು. ನಮ್ಮ ಸಮ್ಮಿಳಿತ ಸಂಸ್ಕೃತಿ(Composite Culture)ಯ ಹಲವು ಅಂಶಗಳನ್ನು ನಾವು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಣಬಹುದು.
ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಮಜಲುಗಳಲ್ಲಿ ತೊಡಗಿದ, ಕೊಡುಗೆಗಳನ್ನು ನೀಡಿದ, ಮಡಿದ ಎಲ್ಲ ಹೋರಾಟಗಾರರಿಗೂ ನುಡಿನಮನಗಳು.

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ



