ಚದುರಿದ ಚಿತ್ರ | ಸಾವಿನ ಮುಂದೆ ಬದುಕು ಮಂಡಿಯೂರುತ್ತಿದೆಯಾ?

Date:

ಆತ್ಮಹತ್ಯೆಯು ಜಾಗತಿಕ ಮಟ್ಟದ ಒಂದು ಪ್ರಮುಖ ಸಾರ್ವಜನಿಕ ಸಮಸ್ಯೆ ಮತ್ತು ಪ್ರಪಂಚದಾದ್ಯಂತ ಯುವಜನರ ಸಾವಿಗೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಒಂದು. ವಿಶೇಷವಾಗಿ ಸಣ್ಣ ಮಕ್ಕಳು ಮತ್ತು ಯುವಜನರು ‘ಸಾವಿಗೆ ಕಾರಣವಾಗಬಲ್ಲದು’ ಎಂದು ನಾವು ಯೋಚಿಸಲೂ ಸಾಧ್ಯವಿಲ್ಲದ ಕಾರಣಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

- Advertisement -

ಮೊನ್ನೆ ಮೊನ್ನೆ ನಮ್ಮ ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಒಂದು ಸಾವು ದೊಡ್ಡ ಮಟ್ಡಿಗೆ ಸದ್ದು ಮಾಡಿತು. ನಲವತ್ತೈದರ ಆಸುಪಾಸಿನ ಮದ್ರಸಾ ಶಿಕ್ಷಕರೊಬ್ಬರು ಗುರುಪುರ ಹೊಳೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದರು. ಕಾರಣ ಕೆದಕಿದಾಗ ಗೊತ್ತಾದದ್ದು ಅವರು ಮಾಡಿಕೊಂಡಿದ್ದ ಸಾಲ ಮತ್ತು ಅವರಿಗೆ ಸಿಗುತ್ತಿದ್ದ ಅಲ್ಪ‌ ಸಂಬಳ. ಅದಾಗಿ ಕೆಲವೇ ದಿನಗಳ‌ ಅಂತರದಲ್ಲಿ ಖಾಸಗಿ ವೈದ್ಯಕೀಯ ಕಾಲೇಜೊಂದರಲ್ಲಿ  ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು- ಕಾರಣ ಖಿನ್ನತೆ. ಇವೆರಡೂ ಘಟನೆಗಳಿಗೆ ಮುನ್ನ ಅಂದರೆ ಜೂನ್‌ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಹದಿನೇಳರ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು- ಕಾರಣ ಪ್ರೇಮದಲ್ಲಾದ ಮೋಸ. ಈಗೀಗ ನಮ್ಮ‌ ನಡುವೆ ಆತ್ಮಹತ್ಯೆಗಳೆನ್ನುವುದು ಒಂದು ಅತಿ ಸಾಮಾನ್ಯ ಸುದ್ದಿಯಾಗಿ ಹೋಗಿದೆ.‌ ಸುಶಾಂತ್ ಸಿಂಗ್ ರಜಪೂತ್‌ರಂತಹ ಸೆಲೆಬ್ರಿಟಿಗಳು, ರಾಜಕೀಯ ಕ್ಷೋಭೆಯನ್ನು ಹುಟ್ಟುಹಾಕಬಲ್ಲ ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಅನ್ಯಾಯದ ಸಾವುಗಳು ಕೆಲವು ದಿನಗಳ ಸೋಶಿಯಲ್ ಮೀಡಿಯಾ ಚರ್ಚೆಗಳಿಗಷ್ಟೇ ಸೀಮಿತವಾಗಿ ಆ ನಂತರ ಮರೆತೇ ಹೋಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಆದರೆ, ಆತ್ಮಹತ್ಯೆ ಎನ್ನುವುದು ಈಗ ಬರಿ ಒಂದು ಆಕಸ್ಮಿಕ, ಅನಿರೀಕ್ಷಿತ ಮತ್ತು ಅನಪೇಕ್ಷಿತ ಸಾವಾಗಿ ಉಳಿದಿಲ್ಲ‌. ಅದು ಒಬ್ಬ ವ್ಯಕ್ತಿಯ ಸಾವು ಮಾತ್ರವಲ್ಲ, ಬದಲಾಗಿ  ಅದು ಅವನ‌ ಇಡೀ ಕುಟುಂಬ, ಸಮಾಜ ಮತ್ತು ರಾಷ್ಟ್ರದ ಮೇಲೆ ದೀರ್ಘಕಾಲೀನ ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ. ಪ್ರತಿಯೊಂದು ಆತ್ಮಹತ್ಯೆಯೂ ಒಂದು ಕುಟುಂಬದ ನೋವು, ಒಂದು ಸಮಾಜವಾಗಿ ಒಟ್ಟು ನಾವು ಸೋತಿರುವುದರ ಸಂಕೇತ.

ಆತ್ಮಹತ್ಯೆಯು ಜಾಗತಿಕ ಮಟ್ಟದ ಒಂದು ಪ್ರಮುಖ ಸಾರ್ವಜನಿಕ ಸಮಸ್ಯೆ ಮತ್ತು ಪ್ರಪಂಚದಾದ್ಯಂತ ಯುವಜನರ ಸಾವಿಗೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಒಂದು. ವಿಶೇಷವಾಗಿ ಸಣ್ಣ ಮಕ್ಕಳು ಮತ್ತು ಯುವಜನರು ‘ಸಾವಿಗೆ ಕಾರಣವಾಗಬಲ್ಲದು’ ಎಂದು ನಾವು ಯೋಚಿಸಲೂ ಸಾಧ್ಯವಿಲ್ಲದ ಕಾರಣಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರತಿ ವರ್ಷ 7,20,000 ಕ್ಕೂ ಹೆಚ್ಚು ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ ಮತ್ತು ಮುಖ್ಯವಾಗಿ 15-29 ವರ್ಷ ವಯಸ್ಸಿನ ಯುವ ಜನತೆಯ ಸಾವಿನ ಪ್ರಮುಖ ಕಾರಣವಾಗಿ ಆತ್ಮಹತ್ಯೆ ನಮ್ಮ ಮುಂದೆ ನಿಲ್ಲುತ್ತದೆ. ಜಗತ್ತಿನಲ್ಲಿ ಇಂದು ಆಗುತ್ತಿರುವ ಒಟ್ಟು ಆತ್ಮಹತ್ಯೆಯ ಪ್ರಮಾಣದಲ್ಲಿ ಶೇಕಡಾ73%ರಷ್ಟು,  ಕಡಿಮೆ ಅಥವಾ ಮಧ್ಯಮ ಆದಾಯಗಳನ್ನು ಹೊಂದಿರುವ ದೇಶಗಳಲ್ಲಿ ಸಂಭವಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಈ ದತ್ತಾಂಶವು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಮಾತ್ರವಾಗಿದ್ದು, ಅದಕ್ಕಾಗಿ ಪ್ರಯತ್ನಿಸಿ ವಿಫಲವಾದರ ಡೇಟಾವಲ್ಲ. ಅದನ್ನೂ ಈ ಪಟ್ಟಿಗೆ ಸೇರಿಸಿದರೆ ನಾವೆಲ್ಲಾ ಬೆಚ್ಚಿ ಬೀಳುವಂತಹಾ ಅಂಕಿ ಅಂಶಗಳು ದೊರೆಯಬಹುದು.  ಯಾಕೆಂದರೆ, ಆತ್ಮಹತ್ಯೆಯು ಸಾಮಾಜಿಕ, ಸಾಂಸ್ಕೃತಿಕ, ಮಾನಸಿಕ ಮತ್ತು ತಮ್ಮ‌‌ ತಮ್ಮ ಪಾರಿಸರಿಕ ಅಂಶಗಳಿಂದ ಪ್ರಭಾವಿತವಾಗಿರುವ ಒಂದು‌ ಸಂಕೀರ್ಣ ವಿಷಯವಾಗಿದ್ದು, ಹಿಂದೆ ಆತ್ಮಹತ್ಯೆಗೆ‌ ಪ್ರಯತ್ನ ಪಟ್ಟು ವಿಫಲರಾದವರು ಮತ್ತೆ ಪ್ರಯತ್ನಿಸುವ ಸಂಭವನೀಯತೆ ಹೆಚ್ಚು.

ಭಾರತದಲ್ಲಿಯೂ ಆತ್ಮಹತ್ಯೆಯು ದಿನದಿಂದ ದಿನಕ್ಕೆ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau – NCRB)ದ 2023ರ ವರದಿಯ ಪ್ರಕಾರ, ದೇಶದಲ್ಲಿ 1,71,418 ಆತ್ಮಹತ್ಯೆಗಳು ದಾಖಲಾಗಿದ್ದು, ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 12.3 ಆತ್ಮಹತ್ಯೆಗಳ ಪ್ರಮಾಣ ದಾಖಲಾಗಿದೆ. ಸಾಂಖ್ಯಿಕವಾಗಿ ಭಾರತವು ವಿಶ್ವದಲ್ಲೇ ಅತ್ಯಧಿಕ ಆತ್ಮಹತ್ಯೆಗಳು ಸಂಭವಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಜನಸಂಖ್ಯೆ ಹೆಚ್ಚಿರುವುದರಿಂದಾಗಿ ಆತ್ಮಹತ್ಯೆಯ ಪ್ರಮಾಣವೂ ಹೆಚ್ಚು ಅಂತ ನಾವು ಸುಲಭವಾಗಿ ಹೇಳಿಕೊಳ್ಳಬಹುದು. ಆದರೆ ಅದೊಂದನ್ನೇ ಮಾನದಂಡವನ್ನಾಗಿಟ್ಟುಕೊಂಡು‌ ಸಮಸ್ಯೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.

ಯಾಕೆಂದರೆ, ನಮ್ಮ ದೇಶದಲ್ಲಿ ಮಕ್ಕಳ ಹಾಗೂ ಹದಿಹರೆಯದವರ ಆತ್ಮಹತ್ಯೆಯ ಪ್ರಮಾಣವು ಇತ್ತೀಚೆಗೆ ಅತ್ಯಂತ ಆತಂಕಕಾರಿ ಹಂತವನ್ನು ತಲುಪಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ಮಗು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದೆ. 2020ರ ನಂತರ ಪ್ರತಿವರ್ಷ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 10,000ಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. 2022ರ NCRB ವರದಿಯು  ಮಕ್ಕಳ ಮತ್ತು ಯುವಜನರ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿ ಕೌಟುಂಬಿಕ  ಸಮಸ್ಯೆಗಳು (25%), ಪ್ರೇಮ ಸಂಬಂಧಗಳು (15%) ಹಾಗೂ ಪರೀಕ್ಷೆಯಲ್ಲಿ ವೈಫಲ್ಯ (11%)ಗಳೆಂದು ಗುರುತಿಸಿದೆ. ಶಿಥಿಲವಾಗುತ್ತಿರುವ ನಮ್ಮ ಕುಟುಂಬ ವ್ಯವಸ್ಥೆ, ವಿಪರೀತದ ಶೈಕ್ಷಣಿಕ ಒತ್ತಡಗಳು, ಸ್ಪರ್ಧೆಯಲ್ಲಿ‌ ಮುಂದಿರಬೇಕಾದರೆ ಓಡುತ್ತಲೇ ಇರಬೇಕಾದ ಅನಿವಾರ್ಯತೆ, ಹಿರಿಯರ ಮತ್ತು ಎಳೆಯರ ನಡುವೆ ಜೀವನ ಕ್ರಮದಲ್ಲಾಗಿರುವ ಅಗಾಧ ಬದಲಾವಣೆ ಮತ್ತು ಬದಲಾವಣೆಗೆ ಇನ್ನೂ ಒಗ್ಗಿಕೊಳ್ಳದ ಹಿರಿಯರ ಜಗತ್ತು ಹಾಗೂ ಆ ಬದಲಾವಣೆಯೇ ಬದುಕು ಅಂದುಕೊಂಡಿರುವ ಕಿರಿಯರ ಜಗತ್ತಿನ ನಡುವೆ ಇರುವಂತಹಾ ಸಂಘರ್ಷ, ಸಾಮಾಜಿಕ ಜಾಲತಾಣಗಳ ಪ್ರಭಾವ, ಪಕ್ಕನೆ ಕಾಡುವ ಒಂಟಿತನ, ಪ್ರೇಮ ಮತ್ತು‌ ಪ್ರೇಮವೈಫಲ್ಯವನ್ನು ಸರಿಯಾಗಿ ನಿಭಾಯಿಸಲಾಗದ ಅಪಕ್ವತೆ, ಭಾವನಾತ್ಮಕ ಬೆಂಬಲದ ಕೊರತೆ ಹೀಗೆ ನಮ್ಮ ಎಳೆ ವಿದ್ಯಾರ್ಥಿಗಳ, ಮಕ್ಕಳ ಸಾವಿಗೆ ನೂರು ಕಾರಣಗಳಿರುತ್ತವೆ. ಮೇಲು ನೋಟಕ್ಕೆ ಇವೆಲ್ಲಾ ಬೇರೆ ಬೇರೆ ಅನ್ನಿಸಿದರೂ ಅವೆಲ್ಲವುಗಳ ಮೂಲ ಬೇರು ಒಂದೇ ಆಗಿರುತ್ತದೆ. ನಾವು ಹಲವು ಬಾರಿ ಒಂದು ಕಾರಣವನ್ನು ಅಥವಾ ಒಂದು ಘಟನೆಯನ್ನು ಆತ್ಮಹತ್ಯೆಯ ಕಾರಣ ಅಂದುಕೊಂಡು ಬಿಡುತ್ತೇವೆ. ಆದರೆ ಆತ್ಮಹತ್ಯೆ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ‘ದಿಢೀರ್ ನಿರ್ಧಾರ’ ಆಗಿರುವುದಿಲ್ಲ. ಆಗಿಂದಾಗೆ, ಬೇರೆ ಬೇರೆ ರೂಪಗಳಲ್ಲಿ ಮಗ್ಗುಲು ಬದಲಾಯಿಸುವ ಹತಾಶೆ, ಒತ್ತಡ, ಸಂಕಟಗಳು ಒಂದು ಬಿಂದುವಿನಲ್ಲಿ ನಿಂತು ಒಂದು ದಿನ ಬದುಕಲು‌ ಕಾರಣವೇ ಇಲ್ಲ ಎಂದು ಸಾರಿ ಬಿಡುತ್ತದೆ.‌ ಕಣ್ಣಮುಂದೆ ಸಾವಿರ ಬದುಕುವ ದಾರಿಗಳಿದ್ದರೂ ಕಣ್ಣಿಗೆ ನಿಚ್ಚಳವಾಗಿ ಕಾಣಿಸುವುದು ಸಾಯುವ ಒಂದು ದಾರಿ ಮತ್ತು ಸಾಯಲಿಕ್ಕಿರುವ ಒಂದು ಕಾರಣ ಮಾತ್ರ.‌ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅಲ್ಲಿ ಅದೊಂದೇ ಕಾರಣವಾಗಿರುವುದಿಲ್ಲ. ಕಣ್ಣಿಗೆ ಕಾಣುವ ಕಾರಣ ಪರೀಕ್ಷೆ ಫಲಿತಾಂಶವಾಗಿದ್ದರೆ, ಖಿನ್ನತೆ, ಕುಟುಂಬದ ಒತ್ತಡ, ಒಂಟಿತನ, ಅವಮಾನದ ಭಯ, ಸಮಾಜ ಏನು ಹೇಳುತ್ತೋ ಎನ್ನುವ ಅಂಜಿಕೆಗಳೆಲ್ಲಾ ಒಟ್ಟು ಸೇರಿ ಮನಸ್ಸು ಆತ್ಮಹತ್ಯೆಗೆ ಪ್ರಚೋದಿಸುತ್ತದೆ. ನಿಜಕ್ಕೂ ನಾವು ಆತ್ಮಹತ್ಯೆಯ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಇವೆಲ್ಲವನ್ನೂ ಕೂಡಾ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಇನ್ನು ವಿದ್ಯಾರ್ಥಿಗಳಲ್ಲದವರ, ಯುವ ಜನರ, ಮಧ್ಯವಯಸ್ಕರ ಆತ್ಮಹತ್ಯೆಯ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಕುಟುಂಬ ಕಲಹ, ವೈವಾಹಿಕ ಸಮಸ್ಯೆಗಳು, ಉದ್ಯೋಗದ ಅಭದ್ರತೆ, ನಿರುದ್ಯೋಗ, ಸಾಲದ ಹೊರೆ, ಆರ್ಥಿಕ ಸಂಕಷ್ಟ, ದೀರ್ಘಕಾಲದ ಅನಾರೋಗ್ಯ, ವ್ಯಸನ, ಸಾಮಾಜಿಕ ತಿರಸ್ಕಾರ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಮುಂತಾದವು ಈ ಗುಂಪಿನಲ್ಲಿರುವವರ ಆತ್ಮಹತ್ಯೆಗೆ ಪ್ರಮುಖ ಕಾರಣಗಳು ಎಂದು ವರದಿಗಳು ಹೇಳುತ್ತವೆ. ಮಾನಸಿಕವಾಗಿ ಭಯಂಕರ ಗಟ್ಟಿಗರು, ಯಾವ ಸಮಸ್ಯೆ ಬಂದರೂ ಅದರಿಂದ ಎದೆಗುಂದದೆ ಲೀಲಾಜಾಲವಾಗಿ ಹೊರಬರಬಲ್ಲರು, ಎದೆಯ ಮೇಲೆ ಬೆಟ್ಟವೇ ಕುಸಿದು ಬಿದ್ದರು ಅದನ್ನು ಕೈಯಿಂದ ಸರಿಸಿ ಎದ್ದು  ನಿಲ್ಲಬಲ್ಲರು ಎಂದೆಲ್ಲಾ ತೋರುವವರೂ ಸಹ ಕೆಲವೊಮ್ಮೆ ‘ಕ್ಷುಲ್ಲಕ’ ಎಂದು ತೋರಬಹುದಾದ ಕಾರಣಗಳಿಗೆಲ್ಲಾ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಾರೆ. ಆದರೆ ಅವರಿಗೆಂದೂ ಆ ಕಾರಣ ‘ಕ್ಷುಲ್ಲಕ’ವಾಗಿರುವುದೇ ಇಲ್ಲ. ಯಾವುದೋ ಒಂದು ಕ್ಷಣದಲ್ಲಿ ತಮ್ಮ ತೋರಿಕೆಯ, ಸೋಗಿನ ಮುಖವಾಡವನ್ನೆಲ್ಲಾ ಕಿತ್ತು ಬಿಸಾಕಿ ಆತ್ಮಹತ್ಯೆಗೆ ಶರಣಾಗಿಬಿಡುತ್ತಾರೆ. ಇಡೀ ಬದುಕನ್ನು ತಾನು ‘ಸ್ಟ್ರಾಂಗ್’ ಎಂಬ ಭ್ರಮೆಯಲ್ಲೇ ಬದುಕುವ ಅವರು ಆ ಹೊರಕವಚವಿಲ್ಲದೆ ಬದುಕುವುದು ದುಸ್ತರ ಅಂತ ಅನ್ನಿಸಿದಾಗ ಅದಕ್ಕಿಂತ ಸಾಯುವುದೇ ಮೇಲು ಅಂದುಕೊಂಡುಬಿಡುತ್ತಾರೆ. ಇಲ್ಲೂ ಅಷ್ಟೇ, ಸಾವು ಒಂದು ದಿನದ ನಿರ್ಧಾರವಾಗಿರುವುದಿಲ್ಲ, ಆ ಯೋಚನೆ ಹಿಂದೂ ಬಂದಿರುತ್ತದೆ ಮತ್ತು ಆ ಯೋಚನೆಯನ್ನು ಪೂರ್ತಿ ಕಿತ್ತುಹಾಕದೆ ಎಂಥದ್ದೋ ಸ್ವಸಮಾಧಾನ ಮಾಡಿಕೊಂಡು ಆ ಯೋಚನೆಯನ್ನುಬಆ ಕ್ಷಣಕ್ಕೆ ಮರೆತುಬಿಟ್ಟಿರುತ್ತಾರೆ.‌ ಆದರೆ ಒಳಗೆಲ್ಲೋ ಅದು ಗುಂಗಿ ಹುಳದಂತೆ‌ ಕೊರೆಯುತ್ತಲೇ ಇರುತ್ತದೆ.

ಇವೆಲ್ಲಾ ಸಾಂಪ್ರದಾಯಿಕ, ಕಣ್ಣಿಗೆ ಕಾಣುವ ಕಾರಣಗಳಾದರೆ, ಗುಪ್ತಗಾಮಿನಿಯಂತೆ ಯಾರ ಗಮನಕ್ಕೂ ಬಾರದೆ ಹರಿಯುವ ಕಾರಣ ಸೈಬರ್ ಬುಲ್ಲಿಯಿಂಗ್. ಇದರ ಶಿಕಾರಿಗಳು ಮತ್ತೆ ಎಳೆಯ ಮಕ್ಕಳೇ ಆಗಿರುತ್ತಾರೆ. ಡಿಜಿಟಲ್ ಜಗತ್ತಿನ ಆಕರ್ಷಣೆಗೆ ಅತಿ ವೇಗವಾಗಿ ಪಕ್ಕಾಗುವ ಮಕ್ಕಳು ತಮಗೇ ಗೊತ್ತಿಲ್ಲದ ಹಾಗೆ ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಾರೆ. ಯಾವುಯಾವುದೋ ಕಾರಣಗಳಿಂದ ಹೆತ್ತವರೊಂದಿಗೆ, ಹಿರಿಯರೊಂದಿಗೆ, ಸಹಪಾಠಿಗಳೊಂದಿಗೆ, ಶಿಕ್ಷಕರೊಂದಿಗೆ ತಮ್ಮ ಸಮಸ್ಯೆಯನ್ನೂ, ತಾವು ಎದುರಿಸುತ್ತಿರುವ ಒತ್ತಡದ ಬಗ್ಗೆಯೂ ಮುಕ್ತವಾಗಿ ಮಾತನಾಡಲಾರದ ಈ ಮಕ್ಕಳು ಖಿನ್ನತೆಗೆ ಜಾರುತ್ತಾರೆ, ಮತ್ತದು‌ ಅಂತಿಮವಾಗಿ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಸಾಧ್ಯತೆಗಳಿರುತ್ತವೆ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (NLM) 2022ರಲ್ಲಿ ಪ್ರಕಟಿಸಿರುವ ಒಂದು‌ ಸಂಶೋಧನಾ ವರದಿಯ ಪ್ರಕಾರ, ಅದು ಸಂಶೋಧನೆ ಕೈಗೊಂಡ ಮೂರು ವರ್ಷಗಳ ಅವಧಿಯಲ್ಲಿ ಸೈಬರ್ ಕಿರುಕುಳಕ್ಕೆ (Cyberbullying) ಒಳಗಾದವರ ಪ್ರಮಾಣ ಮಹಿಳೆಯರಲ್ಲಿ 3.8% ರಿಂದ 6.4%ಕ್ಕೆ ಹಾಗೂ ಪುರುಷರಲ್ಲಿ 1.9% ರಿಂದ 5.6%ಕ್ಕೆ ಏರಿಕೆಯಾಗಿದೆ.  33% ಮಹಿಳೆಯರು ಮತ್ತು 16.6% ಪುರುಷರು ಖಿನ್ನತೆಯ (Depression) ಲಕ್ಷಣಗಳನ್ನು ಅನುಭವಿಸಿದ್ದಾರೆ. ಅದೇ ರೀತಿ, ಒಂದು ವರ್ಷದ ಅವಧಿಯಲ್ಲಿ ಸೈಬರ್ ಕಿರುಕುಳದ ಕಾರಣದಿಂದಾಗಿ 7.5% ಮಹಿಳೆಯರು ಗಂಭೀರವಾಗಿ ಆತ್ಮಹತ್ಯಾ ಪ್ರಯತ್ನ ಮಾಡಿದ್ದರೆ, ಪುರುಷರಲ್ಲಿ ಈ ಪ್ರಮಾಣ 2.3% ಆಗಿದೆ. ಅಧ್ಯಯನದ ಪ್ರಕಾರ, ಸೈಬರ್ ಕಿರುಕುಳಕ್ಕೆ ಒಳಗಾದ ಹದಿಹರೆಯದವರು, ಅಂತಹ ಅನುಭವವಿಲ್ಲದವರಿಗಿಂತ 2.07 ಪಟ್ಟು ಹೆಚ್ಚು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೊಂದಿದ್ದು, 2.50 ಪಟ್ಟು ಹೆಚ್ಚು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದುವ ಸಾಧ್ಯತೆ ಇದೆ. ಈ ಅಧ್ಯಯನವು ಸೈಬರ್ ಬುಲ್ಲಿಯಿಂಗ್ ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರ ಜೊತೆಗೆ ಆತ್ಮಹತ್ಯೆಯ ಅಪಾಯವನ್ನೂ ಹೆಚ್ಚಿಸುವ ಪ್ರಮುಖ ಅಂಶವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದರ ಜೊತೆಗೆ, ಈ ದುಷ್ಪರಿಣಾಮಗಳು ಅಲ್ಪಕಾಲಕ್ಕೆ ಮಾತ್ರ ಸೀಮಿತವಾಗದೆ, ದೀರ್ಘಕಾಲದವರೆಗೆ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುವುದನ್ನೂ ವರದಿ ಹೇಳಿದೆ.

ಇದನ್ನೂ ಓದಿ ಡಿಜಿಟಲ್ ಸಂತೆಯಲ್ಲಿ ಮಹಿಳಾ ಸುರಕ್ಷತೆಯ ಬಿಕರಿ

ಆತ್ಮಹತ್ಯೆ ನಾಗರಿಕ ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಒಂದು ಸಂಕೀರ್ಣ ಸಮಸ್ಯೆ. ಒಂದು ಕಾರಣಕ್ಕೆ ಅಂಟಿಕೊಂಡು, ಒಂದು ಘಟನೆಯನ್ನು ನೆಚ್ಚಿಕೊಂಡು ಇದರ ಪರಿಹಾರ ಸಾಧ್ಯ ಇಲ್ಲ. ಸಮಗ್ರ ಮಾನಸಿಕ ಆರೋಗ್ಯ ನೀತಿ, ಸಮುದಾಯ ಕೇಂದ್ರಗಳ ಸಹಭಾಗಿತ್ವ, ಕುಟುಂಬಗಳ ಸಹಕಾರ, ಸರ್ಕಾರ ಮತ್ತದರ ಅಂಗ ಸಂಸ್ಥೆಗಳ ಪರಿಶ್ರಮ, ಮಾದಕ ವ್ಯಸನಗಳ ದಾಸರಾಗದಂತೆ ಎಚ್ಚರ ಕಾಯ್ದುಕೊಳ್ಳುವುದು, ಸಕಾಲದಲ್ಲಿ ಸಮಾಲೋಚನೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳುವುದು, ಸುರಕ್ಷಿತ ಡಿಜಿಟಲ್ ವಾತಾವರಣವನ್ನು ನಿರ್ಮಿಸುವುದು, ಆರಂಭಿಕ ಹಂತದಲ್ಲಿಯೇ ಆತ್ಮಹತ್ಯೆಯ ಯೋಚನೆಗಳನ್ನು ಗುರುತಿಸಿ ನೆರವು ನೀಡುವುದು ಮುಂತಾದ ಸಕಾರಾತ್ಮಕ ಕ್ರಮಗಳ ನೆರವಿನಿಂದ ಆತ್ಮಹತ್ಯೆಯ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮತ್ತೊಬ್ಬರ ಮಾನಸಿಕ ಕ್ಲೇಶಗಳು ನಮಗೆ ತಮಾಷೆಯ, ಅಪಹಾಸ್ಯದ ಸರಕಾಗದೆ, ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆ ಎಂಬುವುದು ಅರ್ಥವಾದ ಕ್ಷಣ ಕನಿಷ್ಠ ನಮ್ಮ ಕಣ್ಣಮುಂದೆ ಅನ್ಯಾಯದ ಸಾವುಗಳು ಜರುಗುವುದನ್ನಾದರೂ ನಿಲ್ಲಿಸಬಹುದು. ಹಾಗೂ ಈ ಎಲ್ಲಾ ಅಂಕಿ ಅಂಶಗಳಾಚೆ ಸಾವೊಂದು ಸಾವಾಗಿ ಮತ್ತು ಶೂನ್ಯವಾಗಿ ಕಾಡದೇ ಇದ್ದರೆ ಬದುಕಿನ ನಡುವೆಯಿದ್ದೂ ಸಾವಿನ‌ ಕರೆಗೆ ಓಗೊಟ್ಟು ಓಡುವವರನ್ನು ತಡೆದು ನಿಲ್ಲಿಸಲು ನಮಗೆ ಸಾಧ್ಯವೇ ಆಗುವುದಿಲ್ಲವೇನೋ!

WhatsApp Image 2026 02 15 at 10.09.03 AM
ಫಾತಿಮಾ ರಲಿಯಾ
+ posts

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ.

ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಫಾತಿಮಾ ರಲಿಯಾ
ಫಾತಿಮಾ ರಲಿಯಾ
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ. ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...

CJP ನಾಯಕರ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರ ಮನವಿ; ಮ್ಯಾಜಿಸ್ಟ್ರೇಟ್ ಮುಂದೆ ಹಾಜರು

CJP ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಸೋಮವಾರ...