2021-22ರಲ್ಲಿ ನೂರಕ್ಕೂ ಹೆಚ್ಚು ಭಾರತದ ಪ್ರಮುಖ ಮುಸ್ಲಿಂ ಮಹಿಳೆಯರ ಡೇಟಾವನ್ನು ಸಂಗ್ರಹಿಸಿ ಅತ್ಯಂತ ಸಂಘಟಿತವಾಗಿ ಡಿಜಿಟಲ್ ಹಿಂಸೆಯ ಬಲಿಪಶು ಮಾಡಲಾಗಿತ್ತು. ತನಿಖಾ ಪತ್ರಕರ್ತೆಯರು, ರಾಜಕೀಯ ಕಾರ್ಯಕರ್ತೆಯರು, ವಕೀಲೆಯರು ಸೇರಿದಂತೆ ಅತ್ಯಂತ ಎಚ್ಚರಿಕೆಯಿಂದ ಸುಶಿಕ್ಷಿತ, ಖಂಡಿತವಾದಿ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿತ್ತು.
ಕಳೆದೆರಡು ದಶಕಗಳಲ್ಲಾಗಿರುವ ಮಾಹಿತಿ ತಂತ್ರಜ್ಞಾನದ ಅಗಾಧ ಬೆಳವಣಿಗೆ, ಇಂಟರ್ನೆಟ್ ಲಭ್ಯತೆ ಮತ್ತು ಸಾಮಾಜಿಕ ಜಾಲತಾಣಗಳ ಉಪಲಬ್ಧತೆಯು ಪ್ರಪಂಚದ ಸಾಮಾಜಿಕ ಸಂವಹನ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದೆ. ಒಂದು ವರದಿಯ ಪ್ರಕಾರ ಭಾರತದಲ್ಲೀಗ 965 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಒಂದು ಪತ್ರ ಬರೆದು, ಫೋನ್ ಕರೆಗಾಗಿ ಕಾದು ಮಾತಾಡಿಸಬೇಕಾಗಿದ್ದವರೆಲ್ಲಾ ಈಗ ಬೆರಳ ತುದಿಯಲ್ಲಿ ಲಭ್ಯ. ಅಷ್ಟು ಮಾತ್ರ ಅಲ್ಲ, ಸಾಮಾನ್ಯ ಮಧ್ಯಮ ವರ್ಗದವರಿಗೆ, ಅದರಲ್ಲೂ ಮಹಿಳೆಯರಿಗೆ ಸಾಮಾಜಿಕ ಪಾಲ್ಗೊಳ್ಳುವಿಕೆಗೆ, ಅಭಿವ್ಯಕ್ತಿಗೆ, ಉದ್ಯಮಶೀಲತೆಗೆ ಈ ಡಿಜಿಟಲ್ ಕ್ರಾಂತಿ ದೊಡ್ಡ ಅವಕಾಶಗಳ ಬಾಗಿಲನ್ನು ತೆರೆದಿದೆ.
ಆದರೆ, ಇವೆಲ್ಲವುಗಳ ಜೊತೆಗೆ ಈಗ, ಆಫ್‌ಲೈನ್ ಬದುಕಿನಲ್ಲಿ ಅಥವಾ ವರ್ಚುವಲ್ ಜಗತ್ತಿನಾಚೆ ಸಂಭವಿಸುತ್ತಿದ್ದ, ಸ್ತ್ರೀಯರನ್ನು ಕೇಂದ್ರೀಕರಿಸಿಕೊಂಡು ನಡೆಯುತ್ತಿದ್ದ ರಚನಾತ್ಮಕ ದೌರ್ಜನ್ಯ ಆನ್‌ಲೈನಿಗೂ ಕಾಲಿಟ್ಟಿದ್ದು ಹೊಸ ಹೊಸ ರೂಪದಲ್ಲಿ ಅತ್ಯಂತ ತೀವ್ರ ಸ್ವರೂಪದಲ್ಲಿ ನಡೆಯುತ್ತಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋದ ಡೇಟಾದ ಪ್ರಕಾರ ಸೈಬರ್ ಸ್ಟಾಕಿಂಗ್, ಸೆಕ್ಸ್‌ಟಾರ್ಷನ್, ಡೀಪ್‌ಫೇಕ್‌ಗಳು ಮತ್ತು ಆನ್‌ಲೈನ್ ಕಿರುಕುಳ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಯುವ ಎಲ್ಲಾ ಸೈಬರ್ ಅಪರಾಧಗಳನ್ನು ಪರಿಶೀಲಿಸಿದ ಡಾ.ಡಿ ಪುರಂದೇಶ್ವರಿ ನೇತೃತ್ವದ ‘ಮಹಿಳಾ ಸಬಲೀಕರಣ ಸಮಿತಿ’ (Committee on the Empowerment of Women) 23, 2026 ರಂದು ‘ಸೈಬರ್ ಅಪರಾಧ ಮತ್ತು ಮಹಿಳಾ ಸುರಕ್ಷತೆ’ ಎನ್ನುವ ವರದಿ ಸಲ್ಲಿಸಿದ್ದು ಈ ವರದಿಯ ಪ್ರಕಾರ 2017 ಮತ್ತು 2022ರ ನಡುವೆ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳು ಸುಮಾರು ಮೂರೂವರೆ ಪಟ್ಟು (239%) ಹೆಚ್ಚಳವಾಗಿದೆ.
ಈ ಅಂಕಿ ಅಂಶಗಳು ಆಧುನಿಕ ಯುಗದಲ್ಲಿ ಮಹಿಳೆಯರ ಆನ್‌ಲೈನ್ ಸುರಕ್ಷತೆ ಮತ್ತು ಸಾರ್ವಜನಿಕ ಭಾಗೀದಾರಿಕೆಯಲ್ಲಿ ಅವರ ಸಹಜ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಂತಹ ಗಂಭೀರ ಸ್ವರೂಪದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಅದರಲ್ಲೂ ಗಟ್ಟಿ ಧ್ವನಿಯಲ್ಲಿ ಮಾತನಾಡುವ, ಪ್ರತಿಭಟಿಸುವ ಮಹಿಳೆಯರ ಬಗ್ಗೆ ಪುರುಷ ಸಮಾಜಕ್ಕೆ ಮೊದಲಿಂದಲೂ ಇದ್ದ ಹೇವರಿಕೆಗಳನ್ನು ಯಾವ ಹಿಂಜರಿಕೆಯೂ ಇಲ್ಲದೆ ವ್ಯಕ್ತಪಡಿಸಲು ಈಗ ಮುಖವೇ ಇಲ್ಲದ ಪ್ರೊಫೈಲ್‌ಗಳನ್ನು ಬಳಸಿಕೊಳ್ಳುವ ಯಥೇಚ್ಛ ಅವಕಾಶಗಳಿವೆ. ಇದು ತಮಗಾಗದವರ ವಿರುದ್ಧ ನಡೆಸುವ ವೈಯಕ್ತಿಕ ಟ್ರೋಲ್‌ನಿಂದ ಹಿಡಿದು ಹೆಚ್ಚು ಸಂಘಟಿತ, ಲಿಂಗಾಧಾರಿತ, ಧರ್ಮ-ಜಾತಿಯಾಧಾರಿತ ದ್ವೇಷ ಸಾಧನೆಯವರೆಗೆ ವ್ಯಾಪಕವಾಗಿ ಹಬ್ಬಿಕೊಂಡಿದೆ.
ಎಐ, ಡೀಪ್ ಫೇಕ್‌ಗಳ ಬಳಕೆ ವಿಪರೀತವಾದ ಮೇಲಂತೂ ಮಹಿಳೆಯರ ಮೇಲಿನ ಡಿಜಿಟಲ್ ಹಿಂಸೆ ಮತ್ತಷ್ಟು ಸಂಘಟಿತವಾಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪದೇ ಪದೇ ಸಂದೇಶ ಕಳುಹಿಸುವುದು, ಹೊತ್ತು ಗೊತ್ತಿಲ್ಲದೆ ಕರೆ ಮಾಡುವುದು, ಅಶ್ಲೀಲ ಕಮೆಂಟ್‌ಗಳು… ಇಷ್ಟಕ್ಕೇ ಸೀಮಿತವಾಗಿದ್ದ ಹಿಂಸೆಗಳು ಈಗ ಅದನ್ನೂ ಮೀರಿ ಎಐಯನ್ನೂ, ಇತರ ಟೂಲ್‌ಗಳನ್ನೂ ಬಳಸಿಕೊಂಡು ನೇರವಾಗಿ ಮಹಿಳೆಯರ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುವ ಮಟ್ಟಕ್ಕೆ ಬೆಳೆದಿದೆ. ಎಐಯ ಬಳಕೆಯು ಹಾನಿಯ ಪ್ರಮಾಣ ಮತ್ತು ತೀವ್ರತೆ ಎರಡನ್ನೂ ವೇಗವಾಗಿ ಬದಲಾಯಿಸುತ್ತಿದೆ.
2021-22ರಲ್ಲಿ ನೂರಕ್ಕೂ ಹೆಚ್ಚು ಭಾರತದ ಪ್ರಮುಖ ಮುಸ್ಲಿಂ ಮಹಿಳೆಯರ ಡೇಟಾವನ್ನು ಸಂಗ್ರಹಿಸಿ ಅತ್ಯಂತ ಸಂಘಟಿತವಾಗಿ ಡಿಜಿಟಲ್ ಹಿಂಸೆಯ ಬಲಿಪಶು ಮಾಡಲಾಗಿತ್ತು. ತನಿಖಾ ಪತ್ರಕರ್ತೆಯರು, ರಾಜಕೀಯ ಕಾರ್ಯಕರ್ತೆಯರು, ವಕೀಲೆಯರು ಸೇರಿದಂತೆ ಅತ್ಯಂತ ಎಚ್ಚರಿಕೆಯಿಂದ ಸುಶಿಕ್ಷಿತ, ಖಂಡಿತವಾದಿ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿತ್ತು. Github ಅನ್ನುವ software development platformನಲ್ಲಿ ಸುಲ್ಲಿ ಡೀಲ್ಸ್ (sulli deals) ಮತ್ತು ಬುಲ್ಲಿ ಬಾಯ್ (bulli bai) ಎಂಬ ಎರಡು ವೆಬ್ ಪೇಜ್‌ಗಳನ್ನು ಹೋಸ್ಟ್ ಮಾಡಿ ಅವುಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಪ್ರಮುಖ ಮುಸ್ಲಿಂ ಮಹಿಳೆಯರ ಫೊಟೋಗಳನ್ನು ಬಳಸಿಕೊಂಡು ಹರಾಜಿಗಿಟ್ಟಂತೆ ತೋರಿಸಲಾಗಿತ್ತು. ವಾಸ್ತವವಾಗಿ ಅಲ್ಲಿ ಯಾವುದೇ ಖರೀದಿ ಅಥವಾ ಮಾರಾಟ ನಡೆಯುತ್ತಿರಲಿಲ್ಲ. ಈ ವೆಬ್‌ಪೇಜ್‌ಗಳ ಉದ್ದೇಶ ಆ ಮಹಿಳೆಯರನ್ನು ಅವಮಾನಿಸುವುದು, ಮತ್ತು ಮುಖ್ಯವಾಗಿ ಆಳುವ ಸರಕಾರದ ವಿರುದ್ಧ ಮಾತಾಡದಂತೆ ತಡೆಯುವುದಾಗಿತ್ತು. ಸಂಘಟಿತ, ಅಲ್ಗಾರಿದಮಿಕ್ ಮತ್ತು ಒಂದು ವಿಕೃತ ಉದ್ದೇಶ ಇಟ್ಟುಕೊಂಡು ವಿನ್ಯಾಸ ಮಾಡಲಾಗುವ ‘ಆನ್‌ಲೈನ್ ಕಿರುಕುಳ’ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದಕ್ಕೆ ಮತ್ತು ನಿರ್ದಿಷ್ಟ ಸಮುದಾಯ ಮತ್ತು ಲಿಂಗವನ್ನು ವ್ಯವಸ್ಥಿತವಾಗಿ ಗುರಿಯಾಗಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುವುದಕ್ಕೆ ಇವೆರಡೂ ಭಯಾನಕ ಉದಾಹರಣೆಯಾಗಿ ನಿಲ್ಲುತ್ತವೆ.
ಇದರ ಭಯಾನಕತೆಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಈ ಎರಡೂ ವೆಬ್ ಪೇಜ್‌ಗಳ ಸೃಷ್ಟಿಯ ಹಿಂದಿರುವ ನಿರ್ದಿಷ್ಟ ತಾಂತ್ರಿಕ ನೈಪುಣ್ಯತೆ, ಚಾಣಾಕ್ಷತೆಯನ್ನೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇದೊಂದು ಸಾಮಾನ್ಯ ಡೇಟಾಬೇಸ್ ಹ್ಯಾಕಿಂಗ್ ಅಥವಾ ಖಾಸಗಿ ಮಾಹಿತಿ ಸಂಗ್ರಹದ ಉಲ್ಲಂಘನೆಯ ಪ್ರಕರಣವಾಗಿರಲಿಲ್ಲ. ಬದಲಾಗಿ, ಅಂತರ್ಜಾಲದ ಸಾರ್ವಜನಿಕ ಬಳಕೆಗೆ ಇರುವ ಸಾಮಾನ್ಯ ತಾಂತ್ರಿಕ ವ್ಯವಸ್ಥೆಯನ್ನು ಅತ್ಯಂತ ಸ್ಪಷ್ಟ ದುರುದ್ದೇಶದಿಂದ ಬಳಸಿಕೊಂಡದ್ದಾಗಿದೆ. ಫೇಸ್‌ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್‌ನಂತಹ ಸಂವಹನ ಮಾಧ್ಯಮಗಳನ್ನು ಬಿಟ್ಟು ಆರೋಪಿಗಳು ಬಳಸಿಕೊಂಡದ್ದು Github ಅನ್ನು.
ಯಾಕೆಂದರೆ ಪ್ರಪಂಚದಾದ್ಯಂತ ಸಾಫ್ಟ್‌ವೇರ್ ತಂತ್ರಜ್ಞರು ನಂಬಿಕೆ ಇಟ್ಟಿರುವಂತಹ ಓಪನ್‌ಸೋರ್ಸ್ ರಿಪಾಸಿಟರಿಯಾಗಿದೆ ಗಿಟ್‌ಹಬ್. ಮೂಲತಃ ಇದನ್ನು ಶಿಕ್ಷಣ, ಸಂಶೋಧನೆ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯಂತಹ ಕಾನೂನುಬದ್ಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ. ಹಾಗಾಗಿ ವಿಶ್ವಾದ್ಯಂತ ಇರುವ ಸಾಫ್ಟ್‌ವೇರ್ ತಂತ್ರಜ್ಞರು (developers) ತಮ್ಮ ಪ್ರೋಗ್ರಾಂಗಳ ಕೋಡ್‌ಗಳನ್ನು ಸಂಗ್ರಹಿಸಲು, ಹಂಚಿಕೊಳ್ಳಲು ಮತ್ತು ಒಟ್ಟಾಗಿ ಅಭಿವೃದ್ಧಿಪಡಿಸಲು ಈ ಆನ್‌ಲೈನ್ ವೇದಿಕೆಯನ್ನು ಬಳಸಿಕೊಳ್ಳುತ್ತಾರೆ. GitHub ನ ಫಿಲ್ಟರಿಂಗ್ ವ್ಯವಸ್ಥೆಗಳು ಮುಖ್ಯವಾಗಿ ದುರುದ್ದೇಶಪೂರಿತ ಕೋಡ್ (malicious code), ಮಾಲ್‌ವೇರ್ ಅಥವಾ ಹಕ್ಕುಸ್ವಾಮ್ಯ ಉಲ್ಲಂಘನೆಗಳನ್ನು ಪತ್ತೆಹಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ದ್ವೇಷ ಭಾಷೆ, ದ್ವೇಷ ಭಾಷಣ ಅಥವಾ ಆನ್‌ಲೈನ್ ಕಿರುಕುಳವನ್ನು ಗುರುತಿಸುವ ವ್ಯವಸ್ಥೆ ಅದರಲಿಲ್ಲ. ಇದನ್ನೇ ಬಳಸಿಕೊಂಡು ಆರೋಪಿಗಳು ಈ ಅಪ್ಲಿಕೇಶನ್‌ನಲ್ಲಿ ಮುಸ್ಲಿಂ ಮಹಿಳೆಯರ ಚಿತ್ರವನ್ನು ಪ್ರದರ್ಶಿಸಿ ಅದರ ಪಕ್ಕ ‘ಸುಲ್ಲಿ’ ಮತ್ತು ‘ಬುಲ್ಲಿ’ ಎಂಬ ಎರಡು ಅಶ್ಲೀಲ ಪದಗಳ ಬಳಕೆಯ ಜೊತೆಗೆ ‘ಇಂದಿನ ಡೀಲ್’ ಎಂದು ತೋರಿಸುತ್ತಿದ್ದರು.
ಈ ಎರಡೂ ಅಪ್ಲಿಕೇಶನ್‌ಗಳು ಆ ಮಹಿಳೆಯರ ವೃತ್ತಿಪರ ಗುರುತು, ಸಾಮಾಜಿಕ ಸ್ಥಾನಮಾನ ಮತ್ತು ವೈಯಕ್ತಿಕ ಅಸ್ತಿತ್ವವನ್ನು ಸಂಪೂರ್ಣವಾಗಿ ಕಡೆಗಣಿಸಿ, ಅವರನ್ನು ಕೇವಲ ಡಿಜಿಟಲ್ ವಸ್ತುಗಳಂತೆ ಚಿತ್ರಿಸಿದವು. ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿತ್ತು: ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು, ತೀವ್ರ ಮಾನಸಿಕ ನೋವು ಮತ್ತು ಆತಂಕವನ್ನು ಉಂಟುಮಾಡುವುದು ಹಾಗೂ ಆನ್‌ಲೈನ್‌ನಲ್ಲಿ ಯಾವ ಕ್ಷಣದಲ್ಲಾದರೂ ತಮ್ಮ ವಿರುದ್ಧ ದಾಳಿ ನಡೆಯಬಹುದು ಎಂಬ ನಿರಂತರ ಎಚ್ಚರಿಕೆಯ ಮತ್ತು ಒಂದು ವಿವರಿಸಲಾಗದ ಅಸುರಕ್ಷಿತ ಸ್ಥಿತಿಯಲ್ಲಿ ಬದುಕುವಂತೆ ಮಾಡುವುದು.
ಭಾರತೀಯ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರ ಘನತೆ, ಗೌರವ ಮತ್ತು ಸುರಕ್ಷತೆ ಎನ್ನುವುದು ಪಿತೃಪ್ರಧಾನ ಮೌಲ್ಯಗಳಾದ ಸಂಸ್ಕೃತಿ ರಕ್ಷಣೆ ಮತ್ತು ಸಮುದಾಯದ ಮರ್ಯಾದೆ ಎನ್ನುವಂತಹ ಕಲ್ಪನೆಗಳ ಜೊತೆಗೆ ಬೆಸೆದುಕೊಂಡಿದೆ. ಮಹಿಳೆಯನ್ನು ನಮ್ಮ ಸಮಾಜ ಯಾವತ್ತೂ ಒಂದು ವ್ಯಕ್ತಿತ್ವವಾಗಿ, ಅವಳ ಸ್ವಂತ ಅಸ್ಮಿತೆಯಾಗಿ ಗುರುತಿಸಿದ್ದೇ ಇಲ್ಲ. ಆಕೆ ಸಂಪೂರ್ಣವಾಗಿ ಸಂಸ್ಕೃತಿ ರಕ್ಷಣೆಯ ವಾರಿಸುದಾರಳು ಮತ್ತು ವಾಹಕಳು ಮಾತ್ರ. ಇಂತಹ ಸಂದರ್ಭದಲ್ಲಿ, ಆನ್‌ಲೈನ್‌ನಲ್ಲಿ ನಡೆಯುವ ಆಕ್ರಮಣಕಾರಿ ಮತ್ತು ಸಾರ್ವಜನಿಕ ಅವಮಾನವು ಕೇವಲ ಡಿಜಿಟಲ್ ಕಿರುಕುಳವಾಗಿಯೇ ಉಳಿಯುವುದಿಲ್ಲ; ಅದು ಮಹಿಳೆಯ ನೈಜ ಬದುಕಿನ ಸುರಕ್ಷತೆ, ಗೌರವ ಮತ್ತು ಸಾಮಾಜಿಕ ಅಸ್ತಿತ್ವಕ್ಕೂ ನೇರ ಬೆದರಿಕೆಯಾಗುತ್ತದೆ.
ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಒಬ್ಬ ಮಹಿಳೆಯ ಗುರುತನ್ನು ಆನ್‌ಲೈನ್‌ನಲ್ಲಿ ಸಾರ್ವಜನಿಕವಾಗಿ ಲೈಂಗಿಕ ಅವಹೇಳನಕ್ಕೆ ಒಳಪಡಿಸಿದಾಗ, ಅದರ ವಿರುದ್ಧ ಮೊದಲು ಪ್ರತಿಕ್ರಿಯಿಸುವುದು ಕುಟುಂಬ. ಮತ್ತು ಹಲವು ಸಂದರ್ಭಗಳಲ್ಲಿ ಕಿರುಕುಳಕ್ಕೊಳಗಾದ ಮಹಿಳೆಯ ಪರ ನಿಲ್ಲಬೇಕಾಗಿರುವ, ಅವಳಿಗೆ ನೈತಿಕ ಬೆಂಬಲ ನೀಡಬೇಕಾಗಿರುವ ಕುಟುಂಬ ಅವಳ ವಿರುದ್ಧ ನಿಂತುಬಿಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ಕಾನೂನಾತ್ಮಕ ನೆರವು ನೀಡಬೇಕಿದ್ದ ಕುಟುಂಬಗಳೇ ಪ್ರತಿಷ್ಠೆ, ಸಾಮಾಜಿಕ ಮನ್ನಣೆಯ ಹೆಸರಲ್ಲಿ ಆಕೆಯ ಸ್ವಾತಂತ್ರ್ಯವನ್ನು ಮಿತಿಗೊಳಿಸಲು ಮುಂದಾಗುತ್ತದೆ. ಆಕೆಯ ಸುರಕ್ಷತೆಯ ಬಗ್ಗೆ ಇರುವ ಆತಂಕ ಮತ್ತು ಸಾಮಾಜಿಕ ಕಳಂಕದ ಭಯದಿಂದ, ಕುಟುಂಬದವರು ಸಾರ್ವಜನಿಕ ಜೀವನದಲ್ಲಿ ಆಕೆಯ ಪಾಲ್ಗೊಳ್ಳುವಿಕೆಯನ್ನು ಕಡಿಮೆ ಮಾಡುವಂತೆ ಒತ್ತಡ ಹೇರುತ್ತಾರೆ. ಇದರ ಪರಿಣಾಮವಾಗಿ, ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅಳಿಸುವುದು, ತನಿಖಾ ವರದಿಗಳಂತಹ ವೃತ್ತಿಪರ ಕೆಲಸಗಳನ್ನು ತಿರಸ್ಕರಿಸುವುದು, ಇನ್ನಾರದೋ ಹೆಸರಲ್ಲಿ ಬರೆಯುವುದು, ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಾದ ವೃತ್ತಿಗಳಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದು ಮುಂತಾದ ಪರಿಸ್ಥಿತಿಗಳು ತಲೆದೋರುತ್ತವೆ.
ಒಬ್ಬ ಮಹಿಳೆಯ ಧ್ವನಿಯನ್ನು ಅಡಗಿಸಲು ಕೆಲವೇ ಕೆಲವು ಸಾಲುಗಳ ಕಂಪ್ಯೂಟರ್ ಕೋಡ್ ಸಾಕು ಎನ್ನುವುದು ನಮ್ಮ ಸಮಾಜವು ಮೂಲದಿಂದಲೇ ಪೋಷಿಸಿಕೊಂಡು ಬರುತ್ತಿರುವ ತಾರತಮ್ಯಕ್ಕೊಂದು ಗಟ್ಟಿ ಉದಾಹರಣೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಿ, ಯಾವುದೇ ವಿಶೇಷ ತಾಂತ್ರಿಕ ಅಡೆತಡೆಗಳಿಲ್ಲದೆ ಮಹಿಳಾ ದ್ವೇಷವನ್ನು ಸಾಧಿಸಬಹುದು ಎಂದಾದರೆ ಗೌಪ್ಯತೆ ಎಲ್ಲರಿಗೂ ಸಮಾನವಾಗಿ ದೊರೆಯುವ ಮೂಲಭೂತ ಹಕ್ಕಾಗಿ ಉಳಿಯುವುದಿಲ್ಲ. ಇಂತಹ ಸೈಬರ್ ಕ್ರೈಮ್‌ಗಳ ವಿರುದ್ಧ ಹೋರಾಡುವಾಗ ವ್ಯಯಿಸಲು ಬೇಕಾಗುವ ಹಣ ಮತ್ತು ಸಮಯ ಎಲ್ಲರಿಗೂ ಇರುವುದಿಲ್ಲ. ಅನಿವಾರ್ಯವಾಗಿ ಹಲವರು ತಮ್ಮ ವೃತ್ತಿಯೊಂದಿಗೆ ರಾಜಿ ಮಾಡಿಕೊಂಡೋ ಅಥವಾ ಕಿರುಕುಳವನ್ನು ಸಹಿಸಿಕೊಂಡೋ ಇರಬೇಕಾಗುತ್ತದೆ. ಆಗ ಡಿಜಿಟಲ್ ಸುರಕ್ಷತೆ ಎನ್ನುವುದು ತನ್ನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬೇಕಾಗುವ ಆರ್ಥಿಕ, ವೃತ್ತಿಪರ ಮತ್ತು ಮಾನಸಿಕ ವೆಚ್ಚವನ್ನು ಭರಿಸುವ ಸಾಮರ್ಥ್ಯ ಇರುವವರಿಗೆ ಮಾತ್ರ ಅದು ಲಭ್ಯವಾಗುವ ಒಂದು ವಿಶೇಷ ಸೌಲಭ್ಯವಾಗಿ ಪರಿಣಮಿಸುತ್ತದೆ.
ಅಂತರ್ಜಾಲದ ಬಳಕೆ ಎನ್ನುವುದೀಗ ಲಕ್ಷುರಿ ಅಲ್ಲ. ಅಥವಾ ಅದು ನಿಜದ ಬದುಕಿನಿಂದ ಮಾರು ದೂರ ನಿಂತಿರುವ ಕಾಲ್ಪನಿಕ ಜಗತ್ತೂ ಅಲ್ಲ. ಮನುಷ್ಯನ ಬದುಕು, ಶಿಕ್ಷಣ, ಉದ್ಯೋಗ, ಸಾಮಾಜಿಕ ಪಾಲ್ಗೊಳ್ಳುವಿಕೆ ಎಲ್ಲವುಗಳನ್ನು ಒಳಗೊಂಡಿರುವಂತಹ ಒಂದು ವ್ಯವಸ್ಥೆಯಾಗಿದೆ. ಇಂತಹಾ ಸಂದರ್ಭದಲ್ಲಿ ಯಾವುದೋ ಒಂದು ಕಂಪ್ಯೂಟರಿನ ಮುಂದೆ ಕೂತೋ, ಸ್ಮಾರ್ಟ್‌ಫೋನಿನ ಕೀ ಪ್ಯಾಡ್ ಕುಟ್ಟುತ್ತಲೋ, ಕನಿಷ್ಠ ತನ್ನ ಪ್ರೊಫೈಲ್‌ಗೊಂದು ಮುಖವೂ ಇಲ್ಲದೆ ವಿಕೃತತೆ ಮೆರೆಯುವ ಅವಕಾಶ ಯಾರಿಗೂ ಲಭ್ಯವಾಗಬಾರದು. ನಿಜವಾದ ಸೈಬರ್ ಕ್ರಾಂತಿಯೂ ಇದುವೇ.
ಯಾಕೆಂದರೆ, ಸದ್ಯಕ್ಕೆ ಡಿಜಿಟಲ್ ಸಬಲೀಕರಣವೆಂದರೆ ನಾವು ಎಷ್ಟು ಮಂದಿ ಇಂಟರ್‌ನೆಟ್ ಅನ್ನು ಬಳಸುತ್ತಿದ್ದಾರೆ ಮತ್ತು ವರ್ಷವೊಂದಕ್ಕೆ ಎಷ್ಟು ಸ್ಮಾರ್ಟ್ ಫೋನ್‌ಗಳು ಮಾರಾಟವಾಗಿವೆ ಎಂಬುವುದಾಗಿ ಮಾತ್ರ ತಿಳಿದುಕೊಂಡಿದ್ದೇವೆ. ಹಾಗಾಗಿ ಆನ್‌ಲೈನ್ ಕಿರುಕುಳದ ಪ್ರಶ್ನೆ ಬಂದಾಗೆಲ್ಲಾ ಸಂತ್ರಸ್ತರಿಗೆ ಗೌಪ್ಯತೆಯ ಸೆಟ್ಟಿಂಗ್‌ಗಳನ್ನು ಮತ್ತಷ್ಟು ಬಿಗಿಗೊಳಿಸುವ, ಸಾಮಾಜಿಕ ಜಾಲತಾಣಗಳಿಂದ ಫೋಟೋಗಳನ್ನು ಅಳಿಸುವ, ಖಾತೆಗಳನ್ನೆ ಅಳಿಸಿ ಹಾಕುವ ಸಲಹೆಗಳು ಬರುವುದು. ನಿಜದ ಸಬಲೀಕರಣವು, ನಿಜದ ಒಳಗೊಳ್ಳುವಿಕೆಯು ಸಾಧ್ಯವಾಗುವಾಗುವುದು ಸಮಾಜ ಕಟ್ಟಕಡೆಯ ವ್ಯಕ್ತಿಯೂ ತನ್ನ ಘನತೆಗೆ ಕುಂದಾಗುವ ಭಯವಿಲ್ಲದೆ ಮಾತನಾಡುವ, ಕೆಲಸ ಮಾಡುವ, ಸಾಮಾಜಿಕವಾಗಿ ಪಾಲ್ಗೊಳ್ಳುವ ಸ್ವಾತಂತ್ರ್ಯ ಪಡೆದುಕೊಂಡಾಗ ಮಾತ್ರ.
ಇಲ್ಲಿ ನಾವು ಗಮನಿಸಬಹುದಾದ ಮತ್ತೊಂದು ವಿಷಯವೂ ಇದೆ. ‘ಸುಲ್ಲಿ ಡೀಲ್’ , ‘ಬುಲ್ಲಿ ಬಾಯ್’ಗಳಂತಹ ಘಟನೆಗಳು ಹೈಪ್ರೊಫೈಲ್ ಘಟನೆಗಳು. ಈ ತರಹದ ಹೈ ಪ್ರೊಫೈಲ್ ಘಟನೆಗಳಲ್ಲಿ ಸಂತ್ರಸ್ತರಿಗೆ ತಮ್ಮ ಪರವಾಗಿ ತಾವೇ ಮಾತಾಡುವ, ಹೋರಾಡುವ ಶಕ್ತಿಯಾದರೂ ಇರುತ್ತದೆ. ಸಮಯ, ಶಕ್ತಿ, ದುಡ್ಡು ಇವೆಲ್ಲವನ್ನೂ ಇಂಥದ್ದರ ವಿರುದ್ಧ ಹೋರಾಡಲು ವ್ಯಯಿಸುವುದು ಮಾನಸಿಕ ಕ್ಷೋಭೆಯನ್ನು ಉಂಟುಮಾಡುವುದು ನಿಜವೇ ಆದರೂ ನ್ಯಾಯವನ್ನು ಗಟ್ಟಿಸಿ ಕೇಳುವ ಒಂದು ಸೌಲಭ್ಯವಾದರೂ ಅವರಿಗೆ ದಕ್ಕಿರುತ್ತದೆ. ಭಾರತದ ನಮ್ಮ ಸಾಮಾನ್ಯ ಹಳ್ಳಿಗಳ ಮಹಿಳೆಯರಿಗೆ ಆ ಸೌಲಭ್ಯವೂ ಇರುವುದಿಲ್ಲ. ಹಿಜಾಬ್, ಬುರ್ಖಾ ಹಾಕಿಲ್ಲವೆಂದೋ, ಮುಖ ಮುಚ್ಚದಂತೆ ಫೊಟೋ ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದೋ, ಹಣೆಗೆ ಬೊಟ್ಟು, ಬಿಂದಿ ಹಾಕಿಲ್ಲ ಎಂದೋ, ಬಟ್ಟೆಯ ಅಳತೆ, ಮಾತಿನ ಶೈಲಿ, ನಗು, ಬಣ್ಣ, ವೃತ್ತಿ ಎಲ್ಲವೂ ಇಲ್ಲಿ ಟ್ರೋಲ್‌ಗೆ ಆಹಾರವೇ. ಒಂದು ಸಣ್ಣ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುನ್ನ ಹಿಂದೆ, ಮುಂದೆ, ಎಡ, ಬಲ, ನಡು ಅಂತೆಲ್ಲಾ ಸಾವಿರ ಬಾರಿ ಆಲೋಚಿಸಬೇಕಾಗುತ್ತದೆ. ತಮ್ಮ ಮೂಗಿನ ನೇರಕ್ಕೆ ಸರಿ ಎಂದು ತೋರದ ಅಭಿಪ್ರಾಯಗಳೆಲ್ಲವೂ ಅಪರಾಧವೇ. ಆ ನಂತರ ಶುರು- ಟ್ರೋಲ್‌ಗಳ ಸುರಿಮಳೆ. ಸಾಮಾಜಿಕ ಕಳಂಕದ ಆತಂಕ, ಸಾಮುದಾಯಿಕ ಪ್ರತಿಷ್ಠೆಗಳಿಗೆ ಹೆದರಿ ಕುಟುಂಬದವರೂ ಡಿಜಿಟಲ್ ಪ್ರಪಂಚದಿಂದ ದೂರ ಇರುವ ಒತ್ತಡ ಹೇರಿದರೆ, ಮತ್ತೆ ಮುಗಿದೇ ಹೋಯಿತು. ಆಕೆ ಬದುಕಿರುವವರೆಗೂ ಸೋಶಿಯಲ್ ಮೀಡಿಯಾ ಎನ್ನುವುದು ಒಂದು ಕೆಟ್ಟ ಕನಸಿನಂತೆ ಕಾಡುತ್ತಿರುತ್ತದೆ. ಹೈ ಪ್ರೊಫೈಲ್, ಸಾಂಘಿಕ ಮತ್ತು ಅಲ್ಗಾರಿದಮಿಕ್ ಅಲ್ಲದ ಇಂತಹ ಸಾವಿರಾರು ಕೇಸ್‌ಗಳು ದಿನನಿತ್ಯ ಭಾರತದಲ್ಲಿ ಘಟಿಸುತ್ತಾ ಇರುತ್ತದೆ ಮತ್ತು ಇಡೀ ವ್ಯವಸ್ಥೆ ಅದಕ್ಕೆ ಕುರುಡಾಗಿ, ಕಿವುಡಾಗಿ ಪ್ರತಿಕ್ರಯಿಸುತ್ತದೆ.
ಡಿಜಿಟಲ್ ದೌರ್ಜನ್ಯ ಅನ್ನುವುದು ಮಹಿಳೆಗೆ ಮಾತ್ರ ಸೀಮಿತವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣಕ್ಕೆ ಹೋಲಿಸಿದರೆ ಪುರುಷರ ಮೇಲಾಗುತ್ತಿರುವುದು ಅತ್ಯಲ್ಪ. ಆದರೂ ನಿರ್ಲಕ್ಷ್ಯಿಸಬಹುದಾದ್ದಲ್ಲ. ಬೆದರಿಸಿ ಹಣ ಕೀಳುವುದು, ಹನಿ ಟ್ರ್ಯಾಪಿಂಗ್ ಮುಂತಾದವುಗಳಿಗೆ ಈ ದೇಶದ ಪುರುಷರೂ ಸಾಕಷ್ಟು ಪ್ರಮಾಣದಲ್ಲಿ ಬಲಿಯಾಗಿದ್ದಾರೆ, ಬಲಿಯಾಗುತ್ತಿದ್ದಾರೆ. ಈ ಬಗೆಗಿನ ಮಾಹಿತಿಯನ್ನು ಹುಡುಕಹೊರಟರೆ ಸರಕಾರದ ಕಡೆಯಿಂದ ಸಮೀಕ್ಷೆಗಳು ನಡೆದಿರುವುದರ ಬಗ್ಗೆಯೇ ಮಾಹಿತಿ ಇಲ್ಲ. ಪುರುಷರಿಂದ ಮಹಿಳೆಯರಿಗಾದ ದೌರ್ಜನ್ಯಕ್ಕೆ ಹೋಲಿಸಿದರೆ ಮಹಿಳೆಯರಿಂದ ಪುರುಷರ ಮೇಲಾಗುತ್ತಿರುವ ದೌರ್ಜನ್ಯ ಪ್ರಮಾಣ ಕಡಿಮೆಯೇ, ಆದರೆ ಈ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಮಾಹಿತಿಯೇ ಇಲ್ಲವೆಂದರೆ ಅದು ತನ್ನ ನಾಗರಿಕರೆಡೆಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯದ ಪ್ರತೀಕವೇ.
ನಾಗರಿಕ ಸಮಾಜ, ಇಂಟರ್ನೆಟ್, ವೆಬ್‌ಪೇಜ್‌ಗಳು, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳು, ದೈತ್ಯ ಟೆಕ್ ಕಂಪೆನಿಗಳು, ಡಿಜಿಟಲ್ ಹಿಂಸೆಯನ್ನು ಭೌತಿಕ ಹಿಂಸೆಯಷ್ಟೇ ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸಮಾನವಾದ ಹೊಣೆಗಾರಿಕೆ ಮತ್ತು ಪ್ರತಿಕ್ರಿಯೆಯನ್ನು ನೀಡುವವರೆಗೂ, ಅಂತರ್ಜಾಲವು ಅದು ಹುಟ್ಟಿಕೊಂಡಾಗ ನೀಡಿದ ಪ್ರಜಾಸತ್ತಾತ್ಮಕ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸಲಾರದು, ಮತ್ತು ಡಿಜಿಟಲ್ ಸುರಕ್ಷತೆ ಎನ್ನುವುದು ಒಂದು ಸಂಕಷ್ಟವಾಗಿಯೇ ಉಳಿಯಲಿದೆ.
ಇದನ್ನೂ ಓದಿ ಚದುರಿದ ಚಿತ್ರ | ದಿಟ್ಟತನ ಎಂಬುದು ಸ್ವಾತಂತ್ರ್ಯವೋ? ಒತ್ತಡವೋ?

ಫಾತಿಮಾ ರಲಿಯಾ
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ.
ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.



