ಚದುರಿದ ಚಿತ್ರ | ಅಳತೆಗೋಲುಗಳ ನಡುವೆ ಹೆಣ್ಣು

Date:

ಬಹುಶಃ ನಮ್ಮ ಮನಸ್ಥಿತಿಗಳು ಕೆಲಸ ಮಾಡುವುದೇ ಹೀಗೆಯೇ ಏನೋ, ಹೆಣ್ಣು ಅಂದ ಕೂಡಲೇ ಚಿಕ್ಕ ಮಕ್ಕಳು ಅನ್ನುವುದನ್ನೂ ಗಣನೆಗೆ ತೆಗೆದುಕೊಳ್ಳದೆ ಮುಂದೆ ದೊಡ್ಡವರಾದ ಮೇಲೆ ಆಕೆ ಹೇಗೆ ಕಾಣಿಸಿಕೊಳ್ಳಬೇಕು, ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ವಿಚಾರಗಳೇ ನಮ್ಮ ಯೋಚನೆಗೆ ಹೊಳೆಯುತ್ತವೆ.

- Advertisement -

ಕಳೆದ ತಿಂಗಳು ಒಂದು ವಿಚಿತ್ರ ಘಟನೆ ವರದಿಯಾದದ್ದು ನನ್ನ ಗಮನಕ್ಕೆ ಬಂತು. ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇದ್ದಂತಹಾ ಚೀನಾದ ಒಬ್ಬ ಸೋಶಿಯಲ್ ಮೀಡಿಯಾ ಇನ್ಫ್ಲ್ಯೆನ್ಸರ್‌ನ ರಾತ್ರಿ ಬೆಳಗಾಗುವುದರೊಳಗೆ 1.4 ಮಿಲಿಯನ್ ಜನ ಅನ್‌ಫಾಲೋ ಮಾಡಿದ್ದರು.‌ ಅಂದರೆ ಆ ಮಹಿಳೆ ಬರಿ 24 ಗಂಟೆಗಳೊಳಗೆ ಅಷ್ಟು ಮಂದಿ ಫಾಲೋವರ್ಸ್‌ಗಳನ್ನು ಕಳೆದುಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಸೋಶಿಯಲ್ ಮೀಡಿಯಾ ಅದರಲ್ಲೂ ಇನ್ಸ್ಟಾಗ್ರಾಂ ಬಳಸುವವರಿಗೆ ಅದರಲ್ಲಿ ತಮ್ಮನ್ನು ತಾವು ‘ಬ್ಯೂಟಿಫೈ’ ಮಾಡಿಕೊಳ್ಳಲು, ಪ್ರಪಂಚದ ಮುಂದೆ ತಮ್ಮನ್ನು ‘ಸುಂದರ’ ಎಂದು ಬಿಂಬಿಸಿಕೊಳ್ಳಲು ಲಭ್ಯವಾಗುವ ಫಿಲ್ಟರ್‌ಗಳ ಬಗ್ಗೆ ಗೊತ್ತಿರುತ್ತದೆ. ಈ ಸೋಶಿಯಲ್ ಮೀಡಿಯಾ ಇನ್ಫ್ಯುನ್ಸರ್ ಕೂಡಾ ಜಗತ್ತು ಸೆಟ್ ಮಾಡಿರುವ ‘ಬ್ಯೂಟಿ‌ ಸ್ಟಾಂಡರ್ಡ್’ಗೆ ತನ್ನನ್ನು ತಾನು ಹೊಂದಿಸಿಕೊಳ್ಳಲು ಆ ಎಲ್ಲಾ ಫಿಲ್ಟರ್‌ಗಳನ್ನು ಬಳಸಿ ಇನ್ಸ್ಟಾಗ್ರಾಂ ಲೈವ್ ಹೋಗಿದ್ದರು. ನಡುವಲ್ಲೆಲ್ಲೋ ತಾಂತ್ರಿಕ ಸಮಸ್ಯೆಗಳಿಂದ ಗ್ಲಿಚ್ ಆಗಿ ಫಿಲ್ಟರ್ ಆಫ್ ಆಗಿದೆ. ಆ ಮಹಿಳೆಯ ರಿಯಲ್ ಮುಖ ಪ್ರೇಕ್ಷಕರಿಗೆ ಕಾಣಿಸಿದೆ. ಕಾಣಲು ಸಾಕಷ್ಟು ಆರೋಗ್ಯವಂತರಾಗಿರುವ, ಮೆಚ್ಯೂರ್ ಮಹಿಳೆ ಆಕೆ. ಆದರೆ ‘ಇಂಟರ್‌ನ್ಯಾಷನಲ್ ಬ್ಯೂಟಿ ಸ್ಟಾಂಡರ್ಡ್’ ಅನ್ನುವ ಭ್ರಮೆಯು ಬಿತ್ತಿರುವ ಗ್ಲಾಸ್ ಸ್ಕಿನ್, ಗೋಧಿ ಬಣ್ಣ, ಶಾರ್ಪ್ ಜಾ ಲೈನ್, ಸ್ಲಿಮ್ ಬಾಡಿ… ಯಾವುದೂ ಇಲ್ಲದೆ ಆಕೆ ಮನುಷ್ಯರಂತೆ ಇದ್ದರು. ಇನ್ನೂ ಸ್ಪಷ್ಟವಾಗಿ ಹೇಳಬೇಕಂದರೆ, ಅಳತೆ ಕೊಟ್ಟು, ಬಣ್ಣ ಕೊಟ್ಟು, ಲಕ್ಷಣಗಳನ್ನು ಕೊಟ್ಟು ಸೃಷ್ಟಿಸುವ ಬೊಂಬೆಯಂತಿರದೆ ಆಕೆ ನಮ್ಮ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯರಾಗಿದ್ದರು ಅಷ್ಟೇ. ಆದರೆ ಕೆಲವೇ ಕ್ಷಣಗಳ ಆ ಗ್ಲಿಚ್ ವೈರಲ್ ಆಗಿ ಅವರು 1,40,000 ಫಾಲೋವರ್‌ಗಳನ್ನು ಕಳೆದುಕೊಂಡರು ಎಂದು ವರದಿಗಳು ಹೇಳುತ್ತವೆ.

ಈ ಘಟನೆಯ ಬಗ್ಗೆ ಓದಿದ ಕೂಡಲೇ ನನಗೆ ಪಕ್ಕನೆ ನೆನಪಾದದ್ದು ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ, ಕೆಲವು ಸಮುದಾಯಗಳಲ್ಲಿ ಆಚರಣೆಯಲ್ಲಿರುವ ‘ಲೆಬ್ಲೂಹ್’ (leblouh) ಎನ್ನುವ ಪದ್ಧತಿ. ಅಲ್ಲಿನವರ ನಂಬಿಕೆಯ ಪ್ರಕಾರ ಮಹಿಳೆಯರು ದಪ್ಪ ದೇಹವನ್ನು ಹೊಂದುವುದೆಂದರೆ ಆಕೆಯ ಮನೆಯವರು ಸಾಂಪತ್ತಿಕವಾಗಿ ಬಲಾಢ್ಯರು ಎಂಬರ್ಥವಂತೆ. ಐತಿಹಾಸಿಕವಾಗಿ, ಆಹಾರದ ಕೊರತೆಯಿದ್ದ ಅಲೆಮಾರಿ ಮರುಭೂಮಿ ಸಮಾಜಗಳಲ್ಲಿ, ಅಧಿಕ ತೂಕದ ಹೆಂಡತಿ ತನ್ನ ಗಂಡನ ಸಂಪತ್ತಿನ ಜಾಹೀರಾತಿದ್ದಂತೆ. ಅವಳನ್ನು ಪೋಷಿಸುವ ಸಾಮರ್ಥ್ಯ ಅವಳ ಪತಿಗಿದೆ ಎಂದೂ, ಅವಳು ದುಡಿಯುವ ಅಗತ್ಯವಿಲ್ಲವೆಂದೂ ಸಮಾಜ ನಿರ್ಧರಿಸುತ್ತಿತ್ತಂತೆ. ಮುಂದೇ ಇದೇ ಸೌಂದರ್ಯ ಮಾಪಕವಾಗಿ ಬದಲಾಗಿ ಅತಿಯಾಗಿ ದಪ್ಪಗಿರುವ ಮಹಿಳೆಯರಷ್ಟೇ ಸಂತಾನೋತ್ಪತ್ತಿ ಮಾಡಲಬಲ್ಲರು, ಗಂಡನಿಗೆ ದೈಹಿಕ ಸುಖ ನೀಡಬಲ್ಲರು ಅನ್ನುವ ನಂಬಿಕೆ ಬೆಳೆಯಿತು. ಅದಕ್ಕಾಗಿ ಐದು ವರ್ಷ ಅಥವಾ ಮೇಲ್ಪಟ್ಟ ಹುಡುಗಿಯರಿಗೆ ದಿನವೊಂದಕ್ಕೆ  15,000- 16,000 ಕ್ಯಾಲೊರಿ ಇರುವ ಆಹಾರವನ್ನು ಬಲವಂತವಾಗಿ ತಿನ್ನಿಸಲಾಗುತ್ತದೆ. ಸಾಮಾನ್ಯವಾಗಿ ವಯಸ್ಕ ಪುರುಷರಿಗೇ ದಿನವೊಂದಕ್ಕೆ 2500 ಕ್ಯಾಲೊರಿಗಳು ಸಾಕಾಗುತ್ತದೆ ಎನ್ನಲಾಗಿದೆ. ಅಂಥದ್ದರಲ್ಲಿ ಲೀಟರ್‌ಗಟ್ಟಲೆ ಒಂಟೆಯ ಹಾಲು, ಬೆಣ್ಣೆ, ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಬಲವಂತವಾಗಿ ತಿನ್ನಿಸಿ ದೇಹ ದಪ್ಪಗಾಗುವಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಮನುಷ್ಯನ ದೇಹವು ತೂಕದಲ್ಲಿನ ತೀವ್ರ ಮತ್ತು ತ್ವರಿತ ಹೆಚ್ಚಳವನ್ನು ನಿಭಾಯಿಸುವಂತೆ ರೂಪುಗೊಂಡಿಲ್ಲ. ಹಾಗಾಗಿ ಟೈಪ್-ಟು ಡಯಾಬಿಟಿಸ್, ಸಣ್ಣ ವಯಸ್ಸಿನ ಹೃದಯಾಘಾತ, ಮೂಳೆಗಳ ಸಮಸ್ಯೆಗಳು ಮುಂತಾದವಕ್ಕೆ ಈಡಾಗುತ್ತಿದ್ದರು. ಈಗ ಈ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ ಕೂಡ ಮಾರಿಟಾನಿಯಾ, ದಕ್ಷಿಣ ಮೊರಾಕೊದಂತಹಾ ದೇಶಗಳಲ್ಲಿ ಈಗಲೂ ಅದು ಅಸ್ತಿತ್ವದಲ್ಲಿದೆ. ಈಗಂತೂ ಸಾಂಪ್ರಾದಾಯಿಕ ಆಹಾರ ಮತ್ತು ಆಹಾರ ವಸ್ತುಗಳ ಬೆಲೆ ಬಲು ದುಬಾರಿಯಾದದ್ದರಿಂದ ಅವನ್ನು ಪಡೆದುಕೊಳ್ಳುವ ಸಾಮರ್ಥ್ಯವಿಲ್ಲದವರು’ ಕೆಮಿಕಲ್ ಲೆಬ್ಲೂಹ್’ ಮೊರೆ ಹೋಗುತ್ತಾರೆ. ದನಗಳಿಗೆ ನೀಡಲಾಗುವ ಸ್ಟಿರಾಯ್ಡ್ ಅಥವಾ ಕಾರ್ಟಿಕೊಸ್ಟೆರಾಯ್ಡ್‌ಗಳನ್ನು ಸೇವಿಸುತ್ತಾರೆ. ಇದು ದೇಹ ಹಠಾತ್ ಆಗಿ ಬೆಳವಣಿಗೆಯಾಗುವಂತೆ ಮಾಡುತ್ತದೆ. ಇದರಿಂದಾಗಿ ಕಿಡ್ನಿ ವೈಫಲ್ಯ, ದೇಹದ ರೋಗ ನಿರೋಧಕ ಶಕ್ತಿ ಕುಗ್ಗುವುದು ಮುಂತಾದ ಸಮಸ್ಯೆಗಳು ಕಾಡತೊಡಗುತ್ತವೆ.

ನಮ್ಮ ಸಾಂಸ್ಕೃತಿಕ ಆದರ್ಶಗಳು ಜೈವಿಕ ವಾಸ್ತವದೊಂದಿಗೆ ತಾಳಮೇಳ ಹೊಂದಿರದೇ ಇದ್ದರೆ ಬಹುತೇಕ ಸಂದರ್ಭಗಳಲ್ಲಿ ಬಲಿಪಶುಗಳಾಗುವುದು ಹೆಣ್ಣು ಮಕ್ಕಳು ಮತ್ತು ಅವರ ಆರೋಗ್ಯ ಎನ್ನುವುದಕ್ಕೆ ಇದೊಂದು ಉದಾಹರಣೆ. ಚೈನಾದ ಇನ್ಫ್ಯ್ಲೆನ್ಸರ್ ಘಟನೆಗೂ ಈ ಪದ್ಧತಿಗೂ ಹೆಚ್ಚಿನ ವ್ಯತ್ಯಾಸ ಇರುವಂತೆ ನನಗೆ ಅನಿಸುವುದಿಲ್ಲ.

ಇಲ್ಲಿ ಆಕೆ ಕಳೆದುಕೊಂಡಿರುವ ಫಾಲೋವರ್‌ಗಳ ಸಂಖ್ಯೆಯದ್ದು ಒಂದು ರೀತಿಯ ಲೆಕ್ಕಾಚಾರವಾದರೆ ಸೋಶಿಯಲ್ ಮೀಡಿಯಾಗಳಾಚೆಗೂ ಈ ಸಮಾಜದಲ್ಲಿ ಮಹಿಳೆ ಹೇಗೆ ಪರಿಗಣಿಸಲ್ಪಡುತ್ತಿದ್ದಾಳೆ ಎನ್ನುವುದು ಮತ್ತೊಂದು ಮುಖ್ಯ ವಿಚಾರ. ನಮ್ಮಲ್ಲಿ ಹಿಂದಿನಿಂದಲೂ ಮಹಿಳೆಯ ಬುದ್ದಿವಂತಿಕೆ, ಪ್ರಜ್ಞೆ, ಅರಿವು, ಪ್ರತಿಭೆ ಯಾವೊಂದನ್ನೂ ಗಣನೆಗೆ ತೆಗೆದುಕೊಳ್ಳದೆ ಅವಳ ಬಣ್ಣ, ಎತ್ತರ, ಆಳ್ತನ, ದೇಹ, ರೂಪ ಇವನ್ನು ಮಾತ್ರ ಗಣನೆಗೆ ತೆಗೆದುಕೊಂಡು ಅವಳ ಮೌಲ್ಯವನ್ನು ಅಳೆಯುವ ಅತಿ ಕೆಟ್ಟ ಮಾನಸಿಕತೆಯಿದೆ. ಬೌದ್ಧಿಕವಾಗಿ, ಸಾಮಾಜಿಕವಾಗಿ ಆಕೆ ಎಷ್ಟೇ ಬೆಳೆದರೂ ಅಂತಿಮವಾಗಿ ಆಕೆ ಹೇಗೆ ಕಾಣುತ್ತಾಳೆ ಎನ್ನುವುದೇ ಸಮಾಜಕ್ಕೆ ಮುಖ್ಯವಾಗುತ್ತದೆ. ತೀರಾ ಚಿಕ್ಕ ವಯಸ್ಸಿನಿಂದಲೇ, ನಮ್ಮ ಹುಡುಗಿಯರಿಗೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅವರ ಕರ್ತವ್ಯವೆಂದೂ, ಹಾಗೆ ಕಾಪಾಡಿಕೊಳ್ಳುವುದು ಅವರ ಮೇಲೆ ಇರಿಸಲಾಗುವ ಪ್ರಮುಖ ನಿರೀಕ್ಷೆಯೆಂದೂ ಪರೋಕ್ಷವಾಗಿ ಮತ್ತು ಕೆಲವೊಮ್ಮೆ ನೇರವಾಗಿ ಕಲಿಸಲಾಗುತ್ತದೆ.

ಎರಡು ವರ್ಷಗಳ ಹಿಂದೆ, ನಾನು ನಮ್ಮೂರಿನ ಡೆಂಟಲ್ ಕ್ಲಿನಿಕ್ ಒಂದಕ್ಕೆ ಮಗಳನ್ನು ಕರೆದುಕೊಂಡು ಹೋಗಿದ್ದೆ, ಅವಳಿಗೆ ವಿಪರೀತ ಹಲ್ಲು ನೋವಿದ್ದರಿದ ಅವಳನ್ನು ಪರೀಕ್ಷಿಸಿದ ಡಾಕ್ಟರ್, ಎರಡು ಮೂರು ದಿನಗಳಿಗಾಗುವಷ್ಟು ಮದ್ದು ಕೊಟ್ಟು ನೋವು ಕಡಿಮೆಯಾದ ಮೇಲೆ ಬಂದು ಹಲ್ಲು ತೆಗೆಸಿಬಿಡಿ ಅಂದರು. ನನಗೆ ಅಷ್ಟು ಪುಟ್ಟ ಮಗುವಿಗೆ ಇಂಜಕ್ಷನ್ ಕೊಡುವುದು, ಅವಳು ಅಳುವುದು, ಹಲ್ಲು ತೆಗೆಸುವುದನ್ನೆಲ್ಲಾ ಕಲ್ಪಿಸಿಕೊಳ್ಳುವಾಗಲೇ ಒಂಥರಾ ಕಸಿವಿಸಿಯಾಗುತ್ತಿತ್ತು. ನಾನು ಏನೊಂದೂ ನಿರ್ಧಾರಕ್ಕೆ ಬರದೆ ಸುಮ್ಮನಿದ್ದೆ. ಆದರೆ ಮೂರು ದಿನಗಳ ನಂತರ ಹಲ್ಲು ತೆಗೆಸಲೇಬೇಕಿತ್ತು, ಯಾಕೆಂದರೆ ಅದೊಂದನ್ನು ಹೊರತುಪಡಿಸಿ ಬೇರೆ ಆಯ್ಕೆಯೇ ಇಲ್ಲ‌ ಅಂದಿದ್ದರು. ಕೊನೆಗೂ ಹಲ್ಲು ತೆಗೆಸುವ ದಿನ ಬಂತು, ನಾನೊಂದು ವಿಚಿತ್ರ ಉಮ್ಮಳಿಕೆಯಲ್ಲಿ ಅವಳ‌ ಪಕ್ಕ ಕೂತು ಹಲ್ಲು ತೆಗೆಯುವ ಆ ಪ್ರಕ್ರಿಯೆಯನ್ನು ಚೂರು ಬೇಸರದಿಂದಲೇ ನೋಡುತ್ತಾ ನಿಂತಿದ್ದೆ.

ಅಷ್ಟರಲ್ಲಿ ಅಲ್ಲಿಗೆ ಬಂದ ಮಹಿಳೆಯೊಬ್ರು, ‘ಏನು ಮಗುವಿನ ಹಲ್ಲು ತೆಗೆಸ್ತಾ ಇದ್ದೀಯಾ?’ ಕೇಳಿದ್ರು. ‘ಹೂಂ’ ಅಂದೆ. ‘ಅಲ್ಲ ಸಣ್ಣ ಮಗುವಲ್ವಾ?’ ಅಂದ್ರು. ‘ಹೌದು, ಅದ್ಕೆ ನಂಗೆ ಒಂಥರಾ ಅನ್ನಿಸ್ತಿದೆ. ಇಷ್ಟು ಬೇಗ ಹಲ್ಲು ತೆಗೆಸೋದು, ಅದೂ ದವಡೆ ಹಲ್ಲು ತೆಗೆಸೋದನ್ನು ನೆನೆಸ್ಕೊಳ್ಳುವಾಗ್ಲೇ ಮನಸ್ಸಿಗೆ ಒಂಥರಾ ನೋವಾಗ್ತಿದೆ’ ಅಂದೆ ಬೇಸರದಿಂದ್ಲೇ. ಅವರು ‘ಆ್ಯಂಟಿ ಬಯಾಟಿಕ್ ಏನಾದ್ರೂ ಕೊಟ್ಟು ಸರಿ ಮಾಡ್ಬಹುದಿತ್ತು, ಇಷ್ಟು ಬೇಗ ಹಲ್ಲು ತೆಗೆಸಿದ್ರೆ ಮುಂದೆ ಬರುವ ಶಾಶ್ವತ ಹಲ್ಲುಗಳು ಒಟ್ರಾಶಿ ಬರುತ್ತೆ, ಮುಖದ ಅಂದಾನೇ ಹಾಳಾಗಿಬಿಡುತ್ತೆ, ಹೆಣ್ಣು ಮಗು ಅಲ್ವಾ, ಹಾಗೆಲ್ಲಾ ಆಗೋದಿಕ್ಕೆ ಬಿಡ್ಬಾರ್ದು’ ಅಂದ್ರು.

ಬಹುಶಃ ನಮ್ಮ ಮನಸ್ಥಿತಿಗಳು ಕೆಲಸ ಮಾಡುವುದೇ ಹೀಗೆಯೇ ಏನೋ, ಹೆಣ್ಣು ಅಂದ ಕೂಡಲೇ ಚಿಕ್ಕ ಮಕ್ಕಳು ಅನ್ನುವುದನ್ನೂ ಗಣನೆಗೆ ತೆಗೆದುಕೊಳ್ಳದೆ ಮುಂದೆ ದೊಡ್ಡವರಾದ ಮೇಲೆ ಆಕೆ ಹೇಗೆ ಕಾಣಿಸಿಕೊಳ್ಳಬೇಕು, ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ವಿಚಾರಗಳೇ ನಮ್ಮ ಯೋಚನೆಗೆ ಹೊಳೆಯುತ್ತದೆ. ಮೂರು ವರ್ಷದ ಪುಟ್ಟ ಮಗುವಿನ ಹಲ್ಲು ತೆಗೆಸುವಷ್ಟು ಹಾಳಾಗಿ ಹೋಗಿದೆ ಎಂದರೆ ಯಾವ ಆ್ಯಂಟಿ ಬಯಾಟಿಕ್ ಕೊಟ್ರೂ ಅದು ತಾತ್ಕಾಲಿಕವೇ, ಮತ್ತೆ ನೋವು ಕಾಣಿಸಿಕೊಳ್ಳುತ್ತದೆ, ಮತ್ತೆ ಆ್ಯಂಟಿಬಯಾಟಿಕ್ ತೆಗೆದುಕೊಳ್ಳಬೇಕಾಗುತ್ತದೆ. ಅದೊಂಥರಾ ಮದ್ದಿನ ವಿಷವರ್ತುಲ, ನಿರಂತರವಾಗಿ ಆ್ಯಂಟಿಬಯಾಟಿಕ್ ತೆಗೆದುಕೊಳ್ಳುತ್ತಲೇ ಇರಬೇಕಾಗುತ್ತದೆ, ಸೌಂದರ್ಯ ಉಳಿಸಿಕೊಳ್ಳುಬ ಭರದಲ್ಲಿ ಆರೋಗ್ಯವನ್ನು ಬಲಿಕೊಡುವುದು ಎಂದರೆ ಇದೇ. ವಿಶೇಷ ಏನಂದ್ರೆ, ಮುಖದ ಅಂದ ಹಾಳಾಗುತ್ತಲ್ಲಾ ಎಂದು ನನ್ನ ಬಳಿ ಅಲವತ್ತುಕೊಂಡವರು ಒಬ್ಬ ವಿದ್ಯಾವಂತ ಮಹಿಳೆ, ಅದಕ್ಕಿಂತಲೂ ಹೆಚ್ಚಾಗಿ ಸ್ಕೂಲ್ ಟೀಚರ್. ಸಮಾಜವನ್ನು ತಿದ್ದುವ, ಚಂದ ರೂಪಿಸುವ ಹೊಣೆ ಹೊತ್ತವರೇ ಈ ರೀತಿ ವರ್ತಿಸಿದರೆ ಮುಂದಿನ ಅನಾಹುತಗಳಿಗೆ ಯಾರು ಹೊಣೆ?

ಹೆಣ್ಣು ‘ಹೀಗೇ ಇರಬೇಕು’ ಎನ್ನುವ ನಮ್ಮ ಪಾರಂಪರಿಕ ಯೋಚನೆಗಳಿಂದ ನಾವಿನ್ನೂ ಕಳಚಿಕೊಂಡಿಲ್ಲ. ಆ ಯೋಚನೆಗಳಿಗೆ ಮತ್ತಷ್ಟು ಇಂಬು ಕೊಡುತ್ತಿರುವುದು ಜಾಹೀರಾತು ಪ್ರಪಂಚ, ಸಿನಿಮಾಗಳು ಮತ್ತು ಸೋಶಿಯಲ್ ಮೀಡಿಯಾ. ಜಾಹೀರಾತುಗಳಲ್ಲಂತೂ ಹೆಣ್ಣನ್ನು ಯಾವ ಮಟ್ಟಿಗೆ ಒಬ್ಜೆಕ್ಟಿಫ್ಲೈ ಮಾಡಲಾಗಿದೆ ಎಂದರೆ, ಯಕಶ್ಚಿತ್ ಪರ್ಫ್ಯೂಮ್ ಒಂದರ ಪರಿಮಳಕ್ಕೆ ಹೆಣ್ಣು ತನ್ನದೆಲ್ಲವನ್ನೂ ತೊರೆದು ಗಂಡಿನ ಹಿಂದೆ ಬೀಳುತ್ತಾಳೆ ಎಂಬಂತೆ ಬಿಂಬಿಸಲಾಗುತ್ತದೆ. ಮುದ್ರಣ, ದೃಶ್ಯ ಮಾಧ್ಯಮ, ಹೊಸಕಾಲದ ಒಟಿಟಿಗಳೇ ಇರಲಿ ಹೆಣ್ಣೆಂದರೆ  ಅತ್ಯಂತ ಅಗ್ಗದ ಮತ್ತು ಸುಲಭದ ಜಾಹಿರಾತು ಮಾಲು. ಇನ್ನು ತೆಳ್ಳಗಾಗಲು, ಬೆಳ್ಳಗಾಗಲು, ದಪ್ಪ ಆಗಲು ಸೌಂದರ್ಯದ ಮಾರುಕಟ್ಟೆಯಲ್ಲಿ ಎಷ್ಟು ಬಗೆಯ ಉತ್ಪನ್ನಗಳು ಇವೆ ಎಂದರೆ ಹೆಣ್ಣಿನ ಅಸ್ತಿತ್ವವೇ ಈ ಉತ್ಪನ್ನಗಳ ನಡುವೆ ಗಿರಕಿ ಹೊಡೆಯುತ್ತಿದೆಯೇನೋ ಅನ್ನಿಸಿ ದಿಗಿಲಾಗುತ್ತದೆ. ಹೆಣ್ಣನ್ನು ಅವಳ ವ್ಯಕ್ತಿತ್ವ, ಭಾವನೆಗಳು, ಸಾಮರ್ಥ್ಯ ಇವೆಲ್ಲವನ್ನು ನಗಣ್ಯವಾಗಿಸಿ ಒಂದಿಷ್ಟು ಅಳತೆಗೋಲುಗಳ ನಡುವೆ ಇಟ್ಟು ಮೌಲ್ಯಮಾಪನ ಮಾಡುವುದು ಎಂತಾ ನಿಕೃಷ್ಟತೆ!

ಸಾಮಾನ್ಯವಾಗಿ ಆಧುನಿಕತೆ, ಆಧುನಿಕ ಸವಲತ್ತುಗಳು  ಬದುಕನ್ನು ಸುಲಭಗೊಳಿಸುತ್ತೆ ಎನ್ನುತ್ತಾರೆ. ಆದರೆ ನಮ್ಮ ಬದುಕಿನೊಂದಿಗೆ ಹೆಣ್ಣನ್ನು ನೋಡುವ ದೃಷ್ಟಿಕೋನ, ಯೋಚನೆಗಳು ಬದಲಾಗದೇ ಇದ್ದರೆ ಹೇಗೆ ಆಧುನಿಕತೆಯೂ ಅವಳ ಬದುಕಿನ ಮಗ್ಗುಲ ಮುಳ್ಳಾಗಿ ಪರಿಣಮಿಸುತ್ತದೆ ಎನ್ನುವುದಕ್ಕೆ ಈ ಭ್ರಮೆಯ ಬ್ಯೂಟಿ ಸ್ಟಾಂಡರ್ಡ್ ಉತ್ತಮ ಉದಾಹರಣೆ. ಪ್ರಕೃತಿಯ ಸಹಜ ಸೃಷ್ಟಿಯಲ್ಲಿ ಸಾಧಿಸಿಕೊಳ್ಳಲು ಅಸಾಧ್ಯವಾದ ಅಥವಾ ‘ದೋಷ ರಹಿತ ಸೌಂದರ್ಯ’ ಎಂಬ ಅಸಾಧ್ಯ ನಿರೀಕ್ಷೆಯನ್ನು ಆಧುನಿಕತೆಯ ಭಾಗವಾಗಿ ಅವಳ ಮೇಲೆ ಸದ್ದಿಲ್ಲದೆ ಹೇರಲಾಗಿದೆ. ಶತಮಾನಗಳಿಂದಲೂ ಸಂಸ್ಕೃತಿ ರಕ್ಷಣೆಯ ಹೊಣೆ ಹೊತ್ತವಳಿಗೆ, ಹೆಗಲ ಮೇಲಿನ ಭಾರಕ್ಕೀಗ ಇನ್ನೂ ಒಂದಿಷ್ಟು ಗಂಟುಗಳನ್ನು ಪೇರಿಸುವ ಸಂಕಟ.

ಒಂದೆಡೆ, ಅವಳನ್ನು ಒಂದಿಡೀ ಸಂಸ್ಖೃತಿಯ ಪ್ರತೀಕವಾಗಿ ಬಿಂಬಿಸಲಾಗುತ್ತದೆ, ಅವಳ ಇಚ್ಛೆ, ಅವಳ ನಡೆ, ಅವಳ ನುಡಿ, ನಡಿಗೆ, ಮಾತು- ಕಥೆ, ನಗು- ಅಳು ಎಲ್ಲಕ್ಕೂ ಸಂಸ್ಖೃತಿಯ, ಸಂಸ್ಕೃತಿ ರಕ್ಷಣೆಯ ಬಟ್ಟೆ ತೊಡಿಸಲಾಗಿದೆ. ಆ ಬಟ್ಟೆಗೆ ಸಣ್ಣದೊಂದು ಗೀರು ಬಿದ್ದರೂ, ಪುಟ್ಟದಾಗಿ ಹರಿದು ಹೋದರೂ, ನೂಲೆದ್ದರೂ ಅದರ ಪೂರ್ತಿ ಹೊಣೆಗಾರಿಕೆ ಹೆಣ್ಣಿನದ್ದೇ. ಮನೆಯೊಳಗೆ, ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಹೀಗೆ ಎಲ್ಲಾ ಕಡೆ ಕೆಲವು ನಿಯಮಗಳನ್ನು ರೂಪಿಸಿಕೊಂಡು‌ ಅದರಂತೆ ನಡೆದುಕೊಳ್ಳುವುದು ಸಭ್ಯ ಸಮಾಜವೊಂದರ ಲಕ್ಷಣವೇ. ಆದರೆ ನಮ್ಮ ಸಮಸ್ಯೆಯೇನೆಂದರೆ ನಾವು ಈ ‘ವರ್ತನಾ ಪಾಠ’ಗಳನ್ನು ಮಹಿಳೆಯರಿಗೆ ಮಾತ್ರ ಸೀಮಿತವಾಗಿರಿಸಿದ್ದೇವೆ ಮತ್ತು ಏನನ್ನೇ ಮಾಡುವುದಿದ್ದರೂ, ಏನೇ ಆಡುವುದಿದ್ದರೂ ಇದು ‘ತಪ್ಪಲ್ಲವಲ್ಲಾ’ ಎಂದು ಪ್ರತಿಕ್ಷಣ ನಮಗೆ ನಾವೇ ಕೇಳಿಕೊಳ್ಳುವ ಸ್ಥಿತಿಯನ್ನು ತಂದಿರಿಸಿದ್ದೇವೆ.

ಈಗಲೂ ಕೂಡ ಮನೆಯಿಂದ ಹೊರಗೆ ಕೆಲಸ ಮಾಡುವ ಪ್ರತಿ ಮಹಿಳೆಯನ್ನು ಕಾಡುವ, ಕೇಳುವ ಮೊದಲ ಪ್ರಶ್ನೆ ‘ಕಚೇರಿಗೆ ಹೋಗುವಾಗ ಮಗುವನ್ನು ಏನು ಮಾಡ್ತೀಯಾ?’ ಅನ್ನುವುದು. ಮಗುವನ್ನು ಆಯಾ ಕೈಗೆ ಅಥವಾ ಮನೆಯಲ್ಲಿ ಇನ್ನಾರದೋ ಕೈಗೆ ಒಪ್ಪಿಸಿಬರುವ ಪಾಪಪ್ರಜ್ಞೆಯಲ್ಲೇ ಇರುವ ಮಹಿಳೆಗೆ ಇಂಥದ್ದೊಂದು ಪ್ರಶ್ನೆ ಎದುರಾದಾಗ ಆಕೆ ಮತ್ತಷ್ಟು ಮಾನಸಿಕವಾಗಿ ಕುಗ್ಗುತ್ತಾಳೆ, ತಾನು ತಪ್ಪೇ ಮಾಡದಿದ್ದರೂ ಒಂದು ರೀತಿಯ ತಪ್ಪಿತಸ್ಥ ಮನೋಭಾವ ಆಕೆಯನ್ನು ಕಾಡಲು ಶುರು ಮಾಡುತ್ತದೆ. ಈ ವಿಪರೀತದ ಮನೋಭಾವನೆ ಆಕೆಯನ್ನು ಬಹುಬೇಗ ದಣಿಯುವಂತೆ ಮಾಡುತ್ತದೆ. ಮತ್ತೆ ಮತ್ತೆ ಗಿಲ್ಟ್, ಮತ್ತೆ ಮತ್ತೆ ಅಸಮಾಧಾನ, ಮತ್ತೆ ಮತ್ತೆ ಅತೃಪ್ತಿ ಮತ್ತೆ ಮತ್ತೆ ಬೇಡದ ಸಂಕಟಗಳು… ಹೆಣ್ಣು ಎಂದೂ ಮುಗಿಯದ ವಿಷ ವರ್ತುಲದೊಳಗೆ ಸಿಕ್ಕಿಹಾಕಿಕೊಳ್ಳುವುದೇ ಹೀಗೆ.

ಇವೆಲ್ಲದರಿಂದ ತಪ್ಪಿಸಿಕೊಂಡು ಹೊರಬಂದರೆ ಅಥವಾ ಹೊರಬರುವ ಧೈರ್ಯ ತೋರಿದರೂ ಆಕೆ ತನ್ನ ಸ್ವತಂತ್ರ ಯೋಚನೆಗಳ ಅವಸರ ಬದುಕಲಾಗುತ್ತದೆ ಎಂಬ ಪರಿಸ್ಥಿತಿ ಈಗಿಲ್ಲ. ಬಹುಮಟ್ಟಿಗೆ ಒಂದು ರೀತಿಯ ನಿಯಂತ್ರಣದಿಂದ, ಒತ್ತಡದಿಂದ ಹೊರಬಂದು ಇನ್ನೊಂದು ರೀತಿಯ ನಿಯಂತ್ರಣಕ್ಕೆ ಒಳಪಡುತ್ತಾಳೆ. ಎರಡೂ ಕೂಡಾ ಎರಡಲಗಿನ ಕತ್ತಿಯೇ, ಚೂರು ಯಾಮಾರಿದರೂ ಚೌಕಟ್ಟಿನೊಳಗಿನ ಬೆಂಕಿಯಲ್ಲಿ ಸುಟ್ಟುಹೋಗಬೇಕಾಗುತ್ತದೆ.

ಯಾಕೆಂದರೆ ಈ ಎರಡೂ ಸಂದರ್ಭಗಳಲ್ಲಿ ಆಕೆಯನ್ನು ತನ್ನದೇ ಆದ ಯೋಚನೆಗಳಿರುವ, ಭಾವನೆಗಳಿರುವ, ಕುಂದುಕೊರತೆಗಳಿರುವ, ವಿಶಿಷ್ಟತೆಗಳಿರುವ, ದೋಷಗಳಿರುವ ಒಬ್ಬ ಪರಿಪೂರ್ಣ ಮನುಷ್ಯನನ್ನಾಗಿ ಕಾಣಲಾಗುವುದಿಲ್ಲ. ಒಂದರಲ್ಲಿ ಶತಮಾನಗಳಿಂದಲೂ ಹಾದು ಬಂದಿರುವ ಸಂಸ್ಕೃತಿಯ ಪ್ರತೀಕವಾಗಿ, ಪ್ರತಿನಿಧಿಯಾಗಿ ಕಂಡರೆ ಇನ್ನೊಂದರಲ್ಲಿ ಆಕರ್ಷಣೆಯ, ಕಣ್ಣೋಟದ ಅಳತೆಗೆ ಸಿಗುವ ಒಂದು ‘ಮೆಟೀರಿಯಲ್’ ಆಗಿ ಮಾತ್ರ ಕಾಣಲಾಗುತ್ತದೆ. ಎರಡೂ ಸಂದರ್ಭಗಳಲ್ಲೂ ಆಕೆಯ ವೈಯಕ್ತಿಕ ಇಚ್ಛಾನಿಚ್ಛೆಗಳು, ಯೋಚನೆಗಳು ಪರಿಗಣನೆಗೆ ಬರುವುದೇ ಇಲ್ಲ.

ಈ ಮನಸ್ಥಿತಿ ಮೂಲದಲ್ಲೇ ಬದಲಾಗಬೇಕಿದ್ದರೆ ಹೆಣ್ಣು ಗಂಡಿನಂತೆಯೇ, ಅಥವಾ ಗಂಡು ಹೆಣ್ಣಿನಂತೆಯೇ ಅನ್ನುವುದನ್ನು ಮೊದಲು‌ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಹೆಣ್ಣೂ ಕೂಡ ಸ್ವತಂತ್ರ ಚಿಂತನೆ, ಸಾಮರ್ಥ್ಯ, ದೌರ್ಬಲ್ಯಗಳು, ತನ್ನೊಳಗೆ ಒಳಿತು ಕೆಡುಕುಗಳನ್ನು ಹೊಂದಿರುವ ಪರಿಪೂರ್ಣ ಮನುಷ್ಯ ಜೀವಿ. ಸೌಂದರ್ಯವೊಂದೇ ತನ್ನ ಅಳತೆಗೋಲಲ್ಲ, ತನ್ನ ಅಸ್ತಿತ್ವ ದೈಹಿಕ ನೋಟದಲ್ಲಿಲ್ಲ, ತಾನು ಹುಟ್ಟಿರುವುದು, ತನ್ನ ಬದುಕಿನ ಏಕೈಕ ಗುರಿ ಹಿಂದಿನಿಂದಲೂ ಹೇರಿಸಿಕೊಂಡು ಬಂದ ಸಂಸ್ಕೃತಿಯ ರಕ್ಷಣೆ ಅಲ್ಲ ಅನ್ನುವುದು ಅವಳಿಗೆ ಅರ್ಥವಾದ ಕ್ಷಣ ಮಾರುಕಟ್ಟೆ ಪ್ರೇರಿತ ಭ್ರಮೆಯ ಜಗತ್ತು ತಾನೇ ತಾನಾಗಿ ಬಿದ್ದುಹೋಗುತ್ತದೆ.

WhatsApp Image 2026 02 15 at 10.09.03 AM
ಫಾತಿಮಾ ರಲಿಯಾ
+ posts

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ.

ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಫಾತಿಮಾ ರಲಿಯಾ
ಫಾತಿಮಾ ರಲಿಯಾ
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ. ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....

ವಚನ ಕಲ್ಯಾಣ | ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ..

ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ, ಉರಿ ಸಿರಿ ಉಭಯವೂ ಸರಿ...