ಬಹುತೇಕ ಬಾರಿ ನಮ್ಮ ವರ್ತನೆಗಳು ಹೀಗೆಯೇ ಇರುತ್ತದೆ. ಗಟ್ಟಿಗಿತ್ತಿ, strong, brave, ದಿಟ್ಟೆ ಎಂಬುವುದೆಲ್ಲಾ ಮೊದಮೊದಲು ಹೊಗಳಿಕೆಯಂತೆ, ಮೆಚ್ಚುಗೆಯಂತೆ ಕೇಳಿಸುತ್ತದೆ, ಕಾಣುತ್ತದೆ. ಮುಂದುವರಿದಂತೆ ಅದು ನಿರೀಕ್ಷೆಯಾಗಿ ಬದಲಾಗುತ್ತದೆ.
ಅವಳು ದಿಟ್ಟೆ, she is strong ಅನ್ನುವಾಗೆಲ್ಲಾ ನನಗೆ ನನ್ನ ಒಬ್ಬ ಸೀನಿಯರ್ ಹುಡುಗಿ ನೆನಪಾಗುತ್ತಾರೆ. ನಾನಾಗ ಪಿಯುಸಿಯಲ್ಲಿದ್ದೆ, ಒಂದೈವತ್ತು ಮೀಟರ್ ಬಲಗಡೆ ಹೋದರೆ, ನಮ್ಮದೇ ಸಂಸ್ಥೆಯ ಫಸ್ಟ್‌ಗ್ರೇಡ್ ಕಾಲೇಜು. ಅಲ್ಲೊಬ್ಬ ಹುಡುಗಿ, ಕಾಲೇಜಿನ ಪೂರ್ತಿ ಗಟ್ಟಿಗಿತ್ತಿ ಎನ್ನುವ ಹೆಸರು ಗಳಿಸಿಕೊಂಡಿದ್ದವಳು. ಯೂನಿಯನ್ ಪ್ರೆಸಿಡೆಂಟ್ ಯಾವುದೋ ಜ್ಯೂನಿಯರ್ ಹುಡುಗಿಯನ್ನು ಚುಡಾಯಿಸಿದ್ದ ಎನ್ನುವ ಕಾರಣಕ್ಕೆ ಅವನನ್ನು ಎಲ್ಲರೆದುರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಳು. ಅವನ ‘ಅಹಂ’ಗೆ ಪೆಟ್ಟಾಗುವಂತೆ ಜಾಡಿಸಿದ್ದಳು. ಅವನೂ ಎಲ್ಲರ ಮುಂದೆ, ಪರಮ ಸಂಭಾವಿತನಂತೆ ತಲೆ ತಗ್ಗಿಸಿ ಅವಳ ಮುಂದೆ ಕ್ಷಮೆ ಕೇಳಿದ್ದ, ಮುಂದೆ ಯಾವತ್ತೂ ಯಾವ ಹುಡುಗಿಯನ್ನು ಚುಡಾಯಿಸಲಾರೆ ಎಂದು ಪ್ರಾಮಿಸ್ ಮಾಡಿದ್ದ.
ಅವನಿಗೆ, ಅವನಿಗಿದ್ದ ರಾಜಕೀಯ ಪ್ರಭಾವಗಳಿಗೆ ಕಾಲೇಜಿನ ಆಡಳಿತ ಮಂಡಳಿಯೂ ಹೆದರುತ್ತಿತ್ತು. ಹಾಗಾಗಿ ಅವನೇನೇ ಮಾಡಿದರೂ, ಕಷ್ಟಪಟ್ಟು ಅವನ ಆಟಾಟೋಪಗಳನ್ನು ಸಹಿಸಿಕೊಳ್ಳುತ್ತಿತ್ತು. ಯಾವೊಬ್ಬ ಉಪನ್ಯಾಸಕರೂ ಅವನನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರುತ್ತಿರಲಿಲ್ಲ. ಅಂಥದ್ದರಲ್ಲಿ ಆ ಹುಡುಗಿ ಎಲ್ಲರ ಭಯವನ್ನು ನಿವಾಳಿಸಿ ಎಸೆದುಬಿಡುವಂತೆ ಅವನನ್ನು ಪ್ರಶ್ನೆ ಮಾಡಿದ್ದಳು, ಉತ್ತರ ಬೇಕೇ ಬೇಕು ಎಂಬಂತೆ ಹಠ ಹಿಡಿದಿದ್ದಳು, ಕೊನೆಗೆ ಅವನಿಂದ ಕ್ಷಮೆಯನ್ನೂ ಕೇಳಿಸಿದ್ದಳು.
ಆಗಲೇ ಆ ಹುಡುಗಿ ನಮ್ಮೆಲ್ಲರ ಕಣ್ಣುಗಳಲ್ಲಿ, ಮನಸ್ಸಿನಲ್ಲಿ ಗೌರವದ ಸ್ಥಾನ ಪಡೆದುಕೊಂಡು ಬಿಟ್ಟಳು. ಆ ಕ್ಷಣಕ್ಕೆ ನಮಗಾಕೆ ರಾಣಿ ಚೆನ್ನಮ್ಮಳಂತೆ, ರಾಣಿ ರಝಿಯಾಳಂತೆ ಕಾಣಿಸತೊಡಗಿದಳು. ನಮ್ಮೊಳಗಿದ್ದ ‘ಸಹಜ’ ಬಂಡಾಯದ ಬೆಂಕಿಗೆ ತುಪ್ಪ ಸುರಿದಿದ್ದಳು. ಉಡುಗೆ, ತೊಡುಗೆ, ಹಿಜಾಬ್, ಬೊಟ್ಟು ಅಂತೆಲ್ಲಾ ಮೋರಲ್ ಪೊಲೀಸಿಂಗ್ ಮಾಡುತ್ತಿದ್ದ, ಒತ್ತಡದ ಮೂಲಕ ಮಾನಸಿಕ ಹಿಂಸೆ ಕೊಡುತ್ತಿದ್ದ ಹುಡುಗರನ್ನು ಮತ್ತಷ್ಟು ಧೈರ್ಯದಿಂದ ಎದುರಿಸುವ ಛಲ ಬಂದಿತ್ತು.
ಆದರೆ, ಒಂದು ರಾತ್ರಿ ಕಳೆಯುವಷ್ಟರಲ್ಲಿ ಆಗಿದ್ದೇ ಬೇರೆ. ಆಕೆ ಕಾಲೇಜಿನಿಂದ ಹೊರಹೋದ ತಕ್ಷಣ, ಅವನಲ್ಲಿದ್ದ ವಿಕೃತತೆ ಜಾಗೃತವಾಗಿತ್ತು. ಕಾಲೇಜಿನ ಗೋಡೆ, ಶೌಚಾಲಯದ ಗೋಡೆಗಳೆಲ್ಲಾ ಅವಳ ಬಗ್ಗೆ, ಅವಳ ನಡತೆಯ ಬಗ್ಗೆ ಕೆಟ್ಟಕೆಟ್ಟದಾಗಿ ಬರೆಸಿದ್ದ. ಅವಳಿಗೂ, ಅವಳ ನೆಚ್ಚಿನ ಸರ್‌ಗೂ ಸಂಬಂಧ ಕಲ್ಪಿಸಿ ಏನೇನೋ ಗೀಚಿದ್ದ. ಈಗಿನಂತೆ ಮೊಬೈಲ್, ಇಂಟರ್ನೆಟ್, ಎಐ ಎಲ್ಲಾ ಇರುತ್ತಿದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಿರುತ್ತಿತ್ತು ಅಂತ ಈಗ ಕೂತು ಯೋಚಿಸಿದರೆ ಅನ್ನಿಸುತ್ತದೆ. ಮರುದಿನ ಆಕೆ ಕಾಲೇಜಿಗೆ ಬರುವ ಹೊತ್ತಿಗೆ ಕಾಂಪೌಂಡ್, ಗೋಡೆ ಅಂತೆಲ್ಲಾ ಎಲ್ಲಾ ಕಡೆ ಅವಳದೇ ಹೆಸರು, ಅವಳದೇ ಸುದ್ದಿ.

ಅವಳು ಕಾಲೇಜಿಗೆ ಬಂದಳು. ಅಳುತ್ತಾಳೆ, ಗೋಗೆರೆಯುತ್ತಾಳೆ, ಕುಸಿದು ಬೀಳುತ್ತಾಳೆ, ಕ್ಷಮೆ ಕೇಳುತ್ತಾಳೆ, ಕನಿಷ್ಠ ಅವಳ ಕಣ್ಣಂಚಲ್ಲಿ ಒಂದು ಹನಿ ನೀರಾದರೂ ಜಿನುಗುತ್ತದೆ ಅಂತ ಅಂದುಕೊಂಡವರೇ ಹೆಚ್ಚು. ಆದರೆ ಆಕೆ ಹಾಗೆ ಮಾಡಲಿಲ್ಲ, ಎಲ್ಲಾ ಮುಗಿದೇ ಹೋಯಿತು ಎಂಬಂತೆ ಅಳುತ್ತಾ ಕೂರಲಿಲ್ಲ. ‘ಎಲ್ಲಾ ನನ್ನಿಂದಲೇ’ ಎಂದು ಅಳುತ್ತಿದ್ದ ಜ್ಯೂನಿಯರ್ ಹುಡುಗಿಯ ಬಳಿ ಹೋಗಿ ಅವಳನ್ನು ಸಮಾಧಾನಿಸುತ್ತಾ ‘ನಿನ್ನಿಂದ ಅಂತ ಸುಮ್ಮನೇ ಕೊರಗಬೇಡ, ಇವತ್ತು ನಿನ್ನ ಕಾರಣಕ್ಕಾದದ್ದು ನಾಳೆ ಇನ್ನಾರದೋ ಕಾರಣಕ್ಕೆ ಆಗಿಯೇ ಆಗುತ್ತಿತ್ತು. ಅಥವಾ ನಾಳೆ ಅವರು ನನ್ನನ್ನೇ ಚುಡಾಯಿಸುತ್ತಿದ್ದರು, ಆಗಲೂ ನನ್ನ ಪ್ರತಿಕ್ರಿಯೆ ಹೀಗೆಯೇ ಇರುತ್ತಿತ್ತು. ಸೊ ನನ್ನಿಂದ ಅಂತ ಕೊರಗಬೇಡ, ಎಲ್ಲವೂ ಒಳ್ಳೆಯದಕ್ಕೇ ಆಗಿದೆ’ ಎಂದು ಸಮಾಧಾನಿಸಿದ್ದಳು. ಆನಂತರ ಎದ್ದು ಹೋಗಿ ಪ್ರತಿ ಗೋಡೆ, ಕಾರ್ನರ್, ಮರಗಳ ಮೇಲಿದ್ದ ಬರಹಗಳನ್ನು ಒಂದಕ್ಷರಾನೂ ಬಿಡದೆ ಓದಿ, ಏನೂ ಆಗೇ ಇಲ್ಲವೆಂಬಂತೆ ನಸುನಗುತ್ತಾ ಕ್ಲಾಸಿಗೆ ನಡೆದುಬಂದಳು. ನಿಜಕ್ಕೂ ಆಕೆಗೂ ಇದಕ್ಕೂ ಸಂಬಂಧಾನೇ ಇಲ್ಲವೆಂಬಂತೆ ಆಕೆಯ ನಡತೆಯಿತ್ತು. ಕನಿಷ್ಠ ಅಷ್ಟು ಬರಹಗಳಲ್ಲಿ ಕೆಲವೊಂದನ್ನಾದರೂ ಅಳಿಸಲು ಯತ್ನಿಸುತ್ತಾಳೆ ಅನ್ನುವ ಊಹೆಯನ್ನೂ ಆಕೆ ಸುಳ್ಳು ಮಾಡಿದ್ದಳು. ಅವನ ಅಹಂಕಾರದ ಮುಂದೆ, ದಾರ್ಷ್ಟ್ಯದ ಮುಂದೆ ಅವಳ ಆತ್ಮವಿಶ್ವಾಸ ಆಕಾಶದೆತ್ತರಕ್ಕೆ ಬೆಳೆದು ನಿಂತಿತ್ತು.
ಸಂಜೆ ಕಾಲೇಜು ಮಗಿಯುತ್ತದೆ, ಎಂದಾಗಾಗುವಾಗ, ಪೊಲೀಸ್, ಸ್ಟೇಷನ್ನು, ದೂರು ಅಂತೆಲ್ಲಾ ಈ ಹುಡುಗಿ ರಗಳೆ ಮಾಡುತ್ತಾಳೆ ಅಂತ ಅಂದುಕೊಂಡೋ ಏನೋ, ಆಡಳಿತ ಮಂಡಳಿ ಅವಳನ್ನು ಕರೆಸಿಕೊಂಡು ತಿಪ್ಪೆ ಸಾರಿಸಲು ಪ್ರಯತ್ನಿಸಿತ್ತು. ಆದರೆ, ಆಕೆ ಮತ್ತೆ ದೃಢವಾಗಿ ‘ನನ್ನ ಧ್ವನಿಯನ್ನು ಅಳಿಸಲೆಂದು ಅವರೆಲ್ಲಾ ಈ ರೀತಿ ಮಾಡಿದ್ದಾರೆ ಅಂತ ನನಗೊತ್ತು, ಆದರೆ ನಾನು ಕುಗ್ಗಿಲ್ಲ, ಧ್ವನಿ ಅಳಿದುಹೋಗಿಲ್ಲ, ಆತ್ಮವಿಶ್ವಾಸ ಸತ್ತಿಲ್ಲ ಅಂದಮೇಲೆ ಅವರ ಅಷ್ಟೂ ಕೆಟ್ಟ ಶ್ರಮಗಳು ವ್ಯರ್ಥ ಆಯಿತು ಅಂತಲೇ ಅರ್ಥ. ನಾನು ಗೆದ್ದಿದ್ದೇನೆ, ಹಾಗಾಗಿ ದೂರು ಅಂತೆಲ್ಲಾ ಎನರ್ಜಿ ವ್ಯಯಿಸುವುದಿಲ್ಲ, ನೀವು ನಿಶ್ಚಿಂತರಾಗಿರಿ. ಹಾಗೆಯೇ ಇನ್ನು ಮುಂದಾದರೂ ಈಕೆ ಇಂತಹಾ ವಿಷಯಗಳಲ್ಲಿ ಕೈ ಹಾಕುವುದಿಲ್ಲ ಅಂದುಕೊಳ್ಳಬೇಡಿ, ನಾನು ಹೀಗೆಯೇ ಇರುತ್ತೇನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬಂದಿದ್ದಳು. ಹೊರಗಡೆ ನೋಡಿದರೆ ಗೋಡೆ ಬರಹಗಳನ್ನು ಅಳಿಸಲಾಗುತ್ತಿತ್ತು, ಅವಳು ಆಗಲೂ ಅದರತ್ತ ಗಮನ ಕೊಡಲಿಲ್ಲ.
ಆದರೆ ಒಮ್ಮೆ, ಕಾಲೇಜು ನಿರ್ಮಾನುಷ್ಯ ಆಗಿದೆ ಅಂತಾದಾಗ, ರೆಸ್ಟ್ ರೂಮಿನ ಒಳಹೊಕ್ಕು, ಭೋರೆಂದು ಅಳತೊಡಗಿದಳು. ಬೆಳಗ್ಗಿನಿಂದ ತಡೆಹಿಡಿದಿದ್ದ ಕಣ್ಣೀರು ಇನ್ನು ಬಿರಿಸು ಭರಿಸಲಾಗದು ಎಂಬಂತೆ ಉರುಳತೊಡಗಿದವು. ಎಷ್ಟು ಹೊತ್ತು ಅಲ್ಲಿದ್ದಳೋ, ಎಷ್ಟು ಹೊತ್ತು ಅತ್ತಳೋ ಗೊತ್ತಿಲ್ಲ, ಹೊರಗೆ ಬರುವಾಗ ಮತ್ತದೇ ಶುಭ್ರ ಮುಖ. ನಾವೊಂದಿಷ್ಟು ಹುಡುಗಿಯರು, ಅಲ್ಲೇ ಮೈದಾನದಲ್ಲಿ ಏನು ಏನೋ ಕೆಲಸದಲ್ಲಿ ತೊಡಗಿದ್ದವರು ಓಡಿ ಬಂದಿದ್ದೆವು. ಅವಳ ಮುಖವೇನೋ ಶುಭ್ರವಾಗಿತ್ತು, ಆದರೆ ಕಣ್ಣುಗಳು?
ಕೆಂಪಡರಿದ್ದವು, ಆಯಾಸದ ಲಕ್ಷಣಗಳಿದ್ದವು. ಅಳಬೇಕೆನಿಸಿದಾಗೆಲ್ಲಾ ಅಳಲಾಗದ, ಏನೇ ಆದರೂ ಏನೂ ಆಗಿಲ್ಲವಂಬತೇ ಇರಬೇಕಾದ ಅವಳ ಅಸಹಾಯಕತೆ ನಮ್ಮ ಕಣ್ಣೊಳಗೆ ಇಳಿಯುತ್ತಿದ್ದವು. ಧೈರ್ಯ, ಸ್ಥೈರ್ಯ, ಬುದ್ಧಿವಂತಿಕೆಗಳಂತಹ ದೊಡ್ಡ ದೊಡ್ದ ಮಾತುಗಳಾಚೆ ಅವಳೂ ಮನುಷ್ಯಳೇ, ಎಲ್ಲರಂತೆ ಅವಳಿಗೂ ನೋವಾಗುತ್ತದೆ, ಅವಳೊಳಗೂ ವಿಷಾದಗಳಿವೆ ಅನ್ನುವ ಸತ್ಯ ನಮಗರ್ಥ ಆಯಿತು. ಸುಮ್ಮನೆ ಹೆಗಲು ತಬ್ಬಿ ಕುಳಿತುಕೊಂಡೆವು. ಆಕೆ ಅಳಲಾರೆ ಎಂಬಂತೆ ತುಟಿ ಕಚ್ಚಿಕೊಂಡರೂ ಕಣ್ಣುಗಳಲ್ಲಿ ಮತ್ತೆ ನೀರು ಮಡುಗಟ್ಟತೊಡಗಿತ್ತು.
ಬಹುತೇಕ ಬಾರಿ ನಮ್ಮ ವರ್ತನೆಗಳು ಹೀಗೆಯೇ ಇರುತ್ತದೆ. ಗಟ್ಟಿಗಿತ್ತಿ, strong, brave, ದಿಟ್ಟೆ ಎಂಬುವುದೆಲ್ಲಾ ಮೊದಮೊದಲು ಹೊಗಳಿಕೆಯಂತೆ, ಮೆಚ್ಚುಗೆಯಂತೆ ಕೇಳಿಸುತ್ತದೆ, ಕಾಣುತ್ತದೆ. ಮುಂದುವರಿದಂತೆ ಅದು ನಿರೀಕ್ಷೆಯಾಗಿ ಬದಲಾಗುತ್ತದೆ. ಯಾರ ನೆರವೂ ಇಲ್ಲದೆ ಸನ್ನಿವೇಶವೊಂದನ್ನು ನಿಭಾಯಿಸಿದ್ದಕ್ಕೆ, ಯಾರೂ ತೋರದ ಧೈರ್ಯ ತೋರಿದ್ದಕ್ಕೆ, ಒಂಟಿಯಾಗಿ ಪರಿಸ್ಥಿತಿಯನ್ನು ಎದುರಿಸಿದ್ದಕ್ಕೆ ಮೆಚ್ಚುಗೆ ಎಂಬಂತಿದ್ದುದು ಕಾಲ ಕಳೆದಂತೆ ‘ಅವಳಾ ಬಿಡು ನಿಭಾಯಿಸುತ್ತಾಳೆ’ ಎನ್ನುವ ನಿರ್ಲಕ್ಷ್ಯಕ್ಕೆ, ‘ಅವಳಿಗೇನು?’ ಅನ್ನುವ ಮತ್ಸರಕ್ಕೆ ತಿರುಗುತ್ತದೆ. ಮುಂದೆ ಎಲ್ಲದರಲ್ಲೂ ಆಕೆಯೇ ಹೊಂದಾಣಿಕೆ ಮಾಡಿಕೊಳ್ಳಲಿ ಎನ್ನುವ ಅಪಾಯಕಾರಿ ನಿರೀಕ್ಷೆ ಬೆಳೆಯುತ್ತದೆ.
ಆ ನಂತರ ಆಕೆ ಎಂತಹಾ ಪರಿಸ್ಥಿತಿಯಲ್ಲಿದ್ದರೂ ಆಕೆಗೆ ಸಹಾಯದ ಅಗತ್ಯವಿದೆ ಅಂತ ಯಾರಿಗೂ ಅನಿಸುವುದಿಲ್ಲ. ಯಾಕೆಂದರೆ ಅವಳು ದಿಟ್ಟೆ, ಯಾಕೆಂದರೆ ಅವಳು ಎಲ್ಲವನ್ನೂ ನಿಭಾಯಿಸುತ್ತಾಳೆ, ಯಾಕೆಂದರೆ ಅವಳ ನೋವನ್ನು ಮೆಟ್ಟಿ ನಿಲ್ಲಲು ಆಕೆಗೆ ಗೊತ್ತು, ಯಾಕೆಂದರೆ ಅವಳು ಹೊಂದಾಣಿಕೆ ಮಾಡಿಕೊಳ್ಳುತ್ತಾಳೆ, ಯಾಕೆಂದರೆ ಅವಳು ಎಂತಹಾ ಒತ್ತಡಕ್ಕಾದರೂ ಒಗ್ಗಿಕೊಳ್ಳುತ್ತಾಳೆ. ಅಪ್ಪಿ ತಪ್ಪಿ ಅವಳೇನಾದರೂ ಅತ್ತರೆ, ಯಾವುದಾರೊಂದು ವಿಚಾರದಲ್ಲಿ ಸೋತು ಹೋದರೆ, ಇಟ್ಟ ಹೆಜ್ಜೆ ತಪ್ಪಾದರೆ ಅವಳನ್ನು ಆಡಿಕೊಳ್ಳಲು, ‘ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲ’ ಎನ್ನಲು ನೂರು ಮಂದಿ ತುದಿಗಾಲ ಮೇಲೆ ನಿಂತಿರುತ್ತಾರೆ.
ನಿಧಾನವಾಗಿ ಅವಳು ಜನರಿಂದ ದೂರವಾಗುತ್ತಾಳೆ, ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಳ್ಳುತ್ತಾಳೆ, ಆ ಕೋಟೆಯ ಪ್ರತಿ ಇಟ್ಟಿಗೆಯನ್ನೂ ಅತ್ಯಂತ ಪ್ರಜ್ಞಾಪೂರ್ವಕವಾಗಿ, ಜಾಗೃತೆಯಿಂದ ಆಯ್ದುಕೊಳ್ಳುತ್ತಾಳೆ. ತನ್ನ ಭಾವನೆಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಾಳೆ. ನೋಡ ನೋಡುತ್ತಿದ್ದಂತೆ, ತಾನೂ ಮನುಷ್ಯಳೇ ಅನ್ನುವುದು ಅವಳಿಗೇ ಮರೆತುಹೋಗುತ್ತದೆ.
ನಿಧಾನವಾಗಿ ಸಮಾಜ ಏನು ಹೇಳುತ್ತದೋ ಅದನ್ನು ತನ್ನದೇ ಸ್ವಂತ ಧ್ವನಿ ಎಂಬಂತೆ ನಂಬತೊಡಗುತ್ತಾಳೆ. ನಾನು ಒಂದು ಸಣ್ಣ ತಪ್ಪೂ ಮಾಡಬಾರದು, ಒಂದೇ ಒಂದು ತಪ್ಪು ಹೆಜ್ಜೆಯನ್ನೂ ಇಡಬಾರದು, ಸದಾ ಪರಿಸ್ಥಿತಿಗಳನ್ನು ದಟ್ಟವಾಗಿಯೇ ನಿಭಾಯಿಸಬೇಕು, ತನ್ನ ವ್ಯಕ್ತಿತ್ವದ ಮೇಲೆ ಒಂದು ಚುಕ್ಕೆಯೂ ಬೀಳಬಾರದು, ತಾನು ಯಾವಾಗಲೂ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಭಾವಿಸುತ್ತಾಳೆ. ತನ್ನ ನೋವುಗಳನ್ನು, ಸಂಕಟಗಳನ್ನು, ತಾನಿರುವ ಪರಿಸ್ಥಿತಿ ಎಷ್ಟೇ ಒತ್ತಡದ್ದಾದರೂ ಅದನ್ನಾಕೆ ಕ್ಷುಲ್ಲಕ ಅಂತ ಬಲವಂತವಾಗಿ ಅಂದುಕೊಂಡು ತನ್ನನ್ನು ತಾನೇ ಅನೂರ್ಜಿತಗೊಳಿಸಿಕೊಳ್ಳುತ್ತಾಳೆ. ನಿಜವಾದ ಭಾವನಾತ್ಮಕ ಹಾನಿ ಸಂಭವಿಸುವುದು ಇಲ್ಲೇ.
ಇಲ್ಲಿಂದ ಮುಂದೆ, ತನ್ನದಲ್ಲದ ಬದುಕನ್ನು ಬದುಕಬೇಕಾಗಿ ಬಂದಾಗ ಉಂಟಾಗುವ ಸಹಜ ಒತ್ತಡ, ಗಲಿಬಿಲಿ, ಗೊಂದಲಗಳೂ ಅವಳೊಳಗೆ ಆತಂಕವನ್ನು ಹುಟ್ಟುಹಾಕುತ್ತದೆ. ತನಗೇನಾಗುತ್ತಿದೆ, ತನ್ನಿಂದ ಯಾಕೆ ನಿಭಾಯಿಸಲಾಗುತ್ತಿಲ್ಲ, ತಾನು ಸೋತು ಹೋಗುತ್ತಿದ್ದೇನೆ ಎನ್ನುವ ಭಾವಗಳು ಬಲಿತಂತೆ ಒಳಗೊಂದು ನಿರ್ವಾತ ಸೃಷ್ಟಿಯಾಗುತ್ತದೆ. ಮನುಷ್ಯಳಾಗಿ ಬದುಕು ಹುಟ್ಟಿದವಳು ದಿಟ್ಟತನದ ಚಕ್ರವ್ಯೂಹದಲ್ಲಿ ಯಾವ ಭಾವನೆಗಳೂ ಇಲ್ಲದ ಅಥವಾ ಭಾವನೆಗಳನ್ನು ಕೊಂದುಕೊಂಡ ಯಂತ್ರವಾಗುತ್ತಾಳೆ.
ಆದರೆ, ಒಳಗೆಲ್ಲೋ ಆ ಭಾವನೆಗಳು ಜೀವಂತವಾಗೇ ಇರುತ್ತದೆ ಮತ್ತು ನಿರಂತರವಾಗಿ ಅವನ್ನು ಹತ್ತಿಕ್ಕಲಾಗಿರುವದರಿಂದ ಆಂತರಿಕವಾಗಿ ಅದೊಂದು ಒತ್ತಡವನ್ನು ಸೃಷ್ಟಿ ಮಾಡುತ್ತದೆ. ಮಾತ್ರವಲ್ಲ ಆಕೆಗೆ ನೆರವಿನ ಅಗತ್ಯವೇ ಇಲ್ಲ ಎನ್ನುವುದನ್ನು ಸಮಾಜ ನಿರ್ಧರಿಸಿರುವುದರಿಂದ ಮತ್ತದನ್ನು ಅವಳೂ ಈಗ ಗಾಢವಾಗಿ ನಂಬುವುದರಿಂದ ಎಲ್ಲರ ನಡುವೆ ಇದ್ದೂ ಅವಳು ಒಂಟಿಯಾಗಿರುತ್ತಾಳೆ, ಅವಳ ಎಲ್ಲಾ ಭಾವನೆಗಳೂ ಒಂದು ಅನಾಥತೆಯನ್ನು ಅನುಭವಿಸುತ್ತಿರುತ್ತದೆ. ಈ ಸ್ಥಿತಿಯಲ್ಲಿ ಎಲ್ಲದಕ್ಕೂ ತನ್ನನ್ನು ತಾನು ಹೊಣೆಯಾಗಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಇದು ಅಂತಿಮವಾಗಿ ಅತಿಯಾದ ಮಾನಸಿಕ ಒತ್ತಡನ್ನು ಸೃಷ್ಟಿಸುತ್ತದೆ. ಆಕೆ ನಿರಂತರವಾಗಿ ಕುಸಿಯುತ್ತಿರುತ್ತಾಳೆ, ಆದರೆ ಯಾರಿಗೂ ಕಾಣಿಸುವುದಿಲ್ಲ, ಯಾಕೆಂದರೆ ಅವಳು ತೋರಗೊಡುವುದಿಲ್ಲ.
ಈ ನಿರಂತರ ಒತ್ತಡ ಮುಂದೆ ಖಿನ್ನತೆಗೂ ಕಾರಣವಾಗಬಹುದು. ಹಲವು ಬಾರಿ ನಾವು ಹಲವು ಖ್ಯಾತನಾಮರ ಅನಿರೀಕ್ಷಿತ ಸಾವಿನ, ಆತ್ಮಹತ್ಯೆಯ ಸುದ್ದಿ ಕೇಳಿಬಂದಾಗ ನಮಗೆ ಅಚ್ಚರಿಯಾಗುತ್ತದೆ. ಖ್ಯಾತರು ಅಂತ ಮಾತ್ರ ಅಲ್ಲ, ನಮ್ಮ ಸುತ್ತಮುತ್ತಲಿದ್ದವರೇ, ಎಷ್ಟು ಚಂದ ಬದುಕುತ್ತಿದ್ದಾರಲ್ಲಾ ಎನ್ನುವ ಭಾವನೆ ಹುಟ್ಟಿಸಿರುವವರೇ ಬದುಕಿನಿಂದ ಅನಿರೀಕ್ಷಿತವಾಗಿ ಮತ್ತಷ್ಟೇ ಆಘಾತಕಾರಿಯಾಗಿ ಎದ್ದು ಹೋಗಿರುತ್ತಾರೆ. ಅದರ ಹಿಂದಿರುವುದು ಕೂಡಾ ಇಂತಹ ಹೇಳಿಕೊಳ್ಳಲಾಗದ, ಹೇಳಿಕೊಳ್ಳದ ಖಿನ್ನತೆ, ಒತ್ತಡಗಳೇ. ಅವರ ಜೀವ ಹೋದ ಮೇಲೆ, ನಾವೇನೋ ‘ಕೂತು ಮಾತಾಡಬಹುದಿತ್ತು’, ‘ಹಂಚಿಕೊಂಡರೆ ತಾನೇ ಅರ್ಥ ಆಗೋದು’ ಅಂತೆಲ್ಲಾ ಹೇಳುತ್ತೇವೆ, ಕೆಲವೊಮ್ಮೆ ತೀರಾ ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತೇವೆ ಕೂಡಾ. ಆದರೆ ಹಾಗೆ ಕೂತು ಮಾತಾಡುವ, ಹಂಚಿಕೊಳ್ಳುವ, ದುಃಖ ತೋಡಿಕೊಳ್ಳುವ, ಅವರ ಮಾತುಗಳನ್ನು ಪ್ರೀತಿಯಿಂದ, ತಾಳ್ಮೆಯಿಂದ, ಸಹಾನೂಭೂತಿಯಿಂದ ಕೇಳಿಸಿಕೊಳ್ಳುವ ಅವಕಾಶ ನಾವು ಸೃಷ್ಟಿ ಮಾಡಿಕೊಟ್ಟಿದ್ದೇವಾ? ಎನ್ನುವ ಪ್ರಶ್ನೆ ಕೇಳಿಕೊಂಡರೆ, ಬಹುತೇಕ ಬಾರಿ ಉತ್ತರ ಇಲ್ಲ ಎಂದೇ ಆಗಿರುತ್ತದೆ.
ಉಪದೇಶ ಮಾಡೋದು, ಹಾಗಿರಬಹುದಿತ್ತು, ಹೀಗಿರಬಹುದಿತ್ತು, ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಅಂತೆಲ್ಲಾ ಅನ್ನುವುದು ಸುಲಭ, ಬೇರೆಯವರನ್ನು ಜಡ್ಜ್ ಮಾಡುವುದೂ ಮತ್ತು ಸುಲಭ. ಸಾವಿನ ಕದ ತಟ್ಟಿದವರು ಆ ಕ್ಷಣಕ್ಕೆ ಪರಮ ಅಸಹಾಯಕ ಸ್ಥಿತಿಯೊಂದನ್ನು ಅನುಭವಿಸಿರಬಹುದು ಮತ್ತದನ್ನು ದಾಟುವ ಯಾವ ದಾರಿಯೂ ಕಾಣದೆ ಅಂಥದ್ದೊಂದು ನಿರ್ಧಾರಕ್ಕೆ ಬಂದಿರುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಯಾವ ತೀರ್ಪನ್ನೂ ಕೊಡದೆ ಸುಮ್ಮನಿರುವುದಕ್ಕೆ ನಮ್ಮೊಳಗೆ ತುಸುವಾದರೂ ಮಾನವೀಯ ಸಂವೇದನೆಗಳಿರಬೇಕಾಗುತ್ತದೆ.
ಇದನ್ನೂ ಓದಿ ಚದುರಿದ ಚಿತ್ರ | ಅಳತೆಗೋಲುಗಳ ನಡುವೆ ಹೆಣ್ಣು
ದಿಟ್ಟತನದ ಚಕ್ರವ್ಯೂಹದೊಳಕ್ಕೆ ಸಿಲುಕಿ ನರಳುವವರು, ಭಾವನೆಗಳ ಹೊರಹರಿಯುವಿಕೆಗೆ ಬಲವಂತದ ಅಣೆಕಟ್ಟು ಕಟ್ಟಿ ಬದುಕುತ್ತಿರುವುದು ಹೆಣ್ಣು ಮಾತ್ರ ಅಲ್ಲ, ನಮ್ಮ ನಡುವೆ ಅದೆಷ್ಟೋ ಗಂಡಸರೂ ಹಾಗೆ ಬದುಕುತ್ತಿರಬಹುದು. ಅವರಿಗೆಲ್ಲಾ ಪ್ರೀತಿ ತೋರುವ, ಕಾಳಜಿ ತೋರುವ ಕನಿಷ್ಠ ಸಹಾನುಭೂತಿ ವ್ಯಕ್ತಪಡಿಸುವಷ್ಟಾದರೂ ಮಾನವೀಯತೆ ನಮ್ಮೊಳಗೆ ಜಿನುಗುತ್ತಿರಲಿ. ‘ದಿಟ್ಟತನ’ ಅನ್ನುವುದು ಯಾರ ಬದುಕಿಗೂ ಶಾಪವಾಗದಿರಲಿ, ಶಿಕ್ಷೆಯಾಗದಿರಲಿ. ಶಕ್ತಿಯಾಗಿ, ಮೆಚ್ಚುಗೆಯಾಗಿ ಹುಟ್ಟಿಕೊಂಡದ್ದು ದೌರ್ಬಲ್ಯವಾಗಿ, ನಿರೀಕ್ಷೆಯಾಗಿ ಬದಲಾಗದಿರಲಿ. ಮನುಷ್ಯನ ಧೈರ್ಯ ಅವನೊಳಗೆ ಅಥವಾ ಅವಳೊಳಗೆ ಬದುಕುವ ಹುಮ್ಮಸ್ಸು ತುಂಬುವಂತಿರಬೇಕು, ಸ್ವಾತಂತ್ರ್ಯ ನೀಡಬೇಕು, ಭಾವನೆಗಳನ್ನು ಹುದುಗಿಡುವ ಜೀವಂತ ಜ್ವಾಲಾಮುಖಿಯನ್ನಾಗಿ ಮಾಡಬಾರದು.
ಧೈರ್ಯದ, ದಿಟ್ಟತನದ ಹೆಸರಲ್ಲಿ ಸಹಜ ಮನುಷ್ಯನಂತೆ ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಅನ್ನುವುದು ನಮಗೆಲ್ಲ ಅರ್ಥವಾಗಲೇಬೇಕು.

ಫಾತಿಮಾ ರಲಿಯಾ
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ.
ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.



