ಚದುರಿದ ಚಿತ್ರ | ಮನುಷ್ಯರನ್ನು ಓದುವ ಹ್ಯೂಮನ್ ಲೈಬ್ರೆರಿ

Date:

ಹ್ಯೂಮನ್ ಲೈಬ್ರೆರಿಯ ಹಿಂದಿರುವುದು ಮನುಷ್ಯನ ನಡುವಿನ ಗೋಡೆಗಳನ್ನು ಒಡೆಯುವ, ಪೂರ್ವಗ್ರಹವಿಲ್ಲದೆ ಮನುಷ್ಯನನ್ನು ಆಲಿಸುವ, ದಿಢೀರ್ ತೀರ್ಮಾನಗಳಿಗೆ ಬರದೆ ಮನುಷ್ಯನನ್ನು ಕೇವಲ ಮನುಷ್ಯನಾಗಿ ಮಾತ್ರ ಗ್ರಹಿಸುವ ಕಲ್ಪನೆ.

ಒಂದು ವಿಷಣ್ಣ ಸಂಜೆ. ಪುಟ್ಟ ಒಂಟಿತನವೊಂದು ಗಾಢವಾಗಿ ಕಾಡುವ ಹೊತ್ತು. ಒಳಗೆಲ್ಲೋ ಹುಟ್ಟಿದ ಸಣ್ಣ ಛಳಕಿನಂತಹಾ ಈ ಭಾವವನ್ನು ನೀಗಿಕೊಳ್ಳಲು ನಿಮ್ಮೂರಿನ ಲೈಬ್ರೆರಿ ಕಡೆ ಹೊರಡುತ್ತೀರಿ. ಅದೇ ಕಟ್ಟಡ, ಅದೇ ಹಳೆಯ ಮರದ ಕಪಾಟುಗಳು, ಓದುವ ಮೇಜು, ಕನ್ನಡಕ ಮೂಗಿಗೇರಿಸಿಕೊಂಡ ಗಂಭೀರ ಲೈಬ್ರೆರಿಯನ್, ಟಕ ಟಕ ಸದ್ದು ಮಾಡುವ ಕಂಪ್ಯೂಟರಿನ ಕೀಬೋರ್ಡ್…. ನೀವು ಹೆಚ್ಚಾಗಿ ಜನರಿಲ್ಲದ, ಜನ ಆಯ್ದುಕೊಳ್ಳದ ನಿಮ್ಮ ಯಾವತ್ತಿನ ಮೂಲೆಯನ್ನು ಹುಡುಕಿಕೊಂಡು ಹೋಗುತ್ತೀರಿ. ಯಾವತ್ತೂ ಇಲ್ಲದಂತೆ, ಆವತ್ತು ಆ ಮೂಲೆಯಲ್ಲಿ ಒಬ್ಬ ವ್ಯಕ್ತಿ ಎಂಥದ್ದೋ ಒಂದು ಬೋರ್ಡನ್ನು ತಗುಲಿ ಹಾಕಿಕೊಂಡಿರುತ್ತಾರೆ, ಇನ್ನೊಬ್ಬ ವ್ಯಕ್ತಿ ಅವರ ಮಾತುಗಳನ್ನು ತದೇಕಚಿತ್ತದಿಂದ ಕೇಳುತ್ತಿದ್ದರೆ, ಆ ಕ್ಷಣಕ್ಕೆ ನಿಮಗೇನನಿಸಬಹುದು? ಅಲ್ಲಿ ಪುಸ್ತಕಗಳಿರುವುದಿಲ್ಲ, ಕಾಗದಗಳಿರುವುದಿಲ್ಲ, ಮೂಲಭೂತವಾಗಿ ಪುಟಗಳನ್ನು ಮಗುಚುವ ಪ್ರಮೇಯವೇ ಬರುವುದಿಲ್ಲ.

- Advertisement -

‘ಹ್ಯೂಮನ್ ಲೈಬ್ರೆರಿ’ ಕೆಲಸ ಮಾಡುವುದೇ ಹೀಗೆ. ಅಲ್ಲಿ‌ ಪುಸ್ತಕದ ಬದಲಾಗಿ ಮನುಷ್ಯ ಮನುಷ್ಯನನ್ನು ಓದುತ್ತಾನೆ. ಕ್ರೌರ್ಯ, ವಿಕೃತಿ, ಯುದ್ಧಗಳಂತಹ ಮನುಷ್ಯ ವಿರೋಧಿ ಸಂಗತಿಗಳೇ ವಿಜೃಂಭಿಸುತ್ತಿರುವ ಈ ಜಗತ್ತಿನಲ್ಲಿ ಜೀವಂತ ‘ಮನುಷ್ಯ’ರನ್ನು ಓದುವ, ಓದಲು ಪ್ರಯತ್ನಿಸುವ ಈ ಕಲ್ಪನೆಯೇ ಎಂತಹಾ ಚೇತೋಹಾರಿ ಅಲ್ವಾ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಇದನ್ನೂ ಓದಿ: ಚದುರಿದ ಚಿತ್ರ | ಸಾವಿನ ಮುಂದೆ ಬದುಕು ಮಂಡಿಯೂರುತ್ತಿದೆಯಾ?

ಈ ಹ್ಯೂಮನ್ ಲೈಬ್ರೆರಿ ಅಥವಾ ಮಾನವ ಗ್ರಂಥಾಲಯದ ಹಿಂದಿರುವ ಕಲ್ಪನೆ ಅತ್ಯಂತ ಸರಳ. ನಾವು ಲೈಬ್ರೆರಿಗಳಿಗೆ ಭೇಟಿ ನೀಡಿ ನಮಗೆ ಓದಬೇಕಿರುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಂತೆಯೇ ಇಲ್ಲಿ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು.  ನಮ್ಮ ಸಮಾಜಕ್ಕೆ ಕೆಲವು ವಿಚಾರಗಳಲ್ಲಿ ಪೂರ್ವಾಗ್ರಹವಿರುತ್ತದೆ, ತನ್ನ ಮೂಗಿನ ನೇರಕ್ಕೇ ಎಲ್ಲವನ್ನೂ ನಿರ್ಧರಿಸುತ್ತದೆ, ತಾನು ನಂಬಿಕೊಡಿರುವುದೇ ಅಂತಿಮ ಸತ್ಯ ಮತ್ತು ಇಡೀ ಜಗತ್ತೂ ಅದನ್ನೇ ನಂಬಬೇಕು ಎಂದು ಬಯಸುತ್ತಿರುತ್ತದೆ. ಆದರೆ ನಿಜ ಹಾಗಿರುವುದಿಲ್ಲ,  ಆ ವಿಷಯಕ್ಕೆ ನಮ್ಮ ಕಣ್ಣಿಗೆ, ಮನಸ್ಸಿಗೆ ದಕ್ಕದ ಬೇರೆ ಆಯಾಮಗಳೂ ಇರುತ್ತವೆ. ಹ್ಯೂಮನ್ ಲೈಬ್ರೆರಿಯಲ್ಲಿ ಪುಸ್ತಕದಂತೆ ಓದಲ್ಪಡುವವರು ಸಾಮಾನ್ಯವಾಗಿ ಇಂತಹ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ‘ಯುದ್ಧ ಪೀಡಿತ’, ‘ನಿರಾಶ್ರಿತ’, ‘ಸುಳ್ಳು ಆರೋಪಿ’, ‘ಜನಾಂಗೀಯವಾದಿ’, ‘ಭಯೋತ್ಪಾದಕ’, ‘ಕಾರ್ಪೋರೇಟ್ ಮಹಿಳೆ’, ‘ಹೌಸ್‌ವೈಫ್’ ‘ಡಿಪ್ರೆಸ್ಸ್ಡ್ ಪರ್ಸನ್’, ‘ನೀಗ್ರೋ’, ‘ಮಧ್ಯವಯಸ್ಕ ಗಂಡಸು’, ‘ನೀಲಿ ಚಿತ್ರಗಳ ತಾರೆ’, ‘ಕ್ರೀಡಾಪಟು’ ಮುಂತಾದ ಗಹನ ಸಾಮಾಜಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಓದುಗರು ತಮಗೆ ಬೇಕಾದಂತಹ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಪುಸ್ತಕವನ್ನು ಎರವಲು ಪಡೆದುಕೊಂಡಂತೆಯೇ ಆ ವಿಷಯದ ಬಗ್ಗೆ ಮಾತನಾಡಲಿರುವ ಮನುಷ್ಯನನ್ನು ಅರ್ಧಗಂಟೆಗಳ ಕಾಲ ಮಾತಾಡಲು ಎರವಲು ಪಡೆದುಕೊಳ್ಳುತ್ತಾನೆ.

ಆ ಅರ್ಧಗಂಟೆಯಲ್ಲಿ ಅವನು ಎಂತಹಾ ಪ್ರಶ್ನೆಗಳನ್ನೂ ಕೂಡ ಕೇಳಬಹುದು,  ಸಾಮಾನ್ಯವಾಗಿ ಎಲ್ಲರ ಕಣ್ಣಿಗೆ ತೀರಾ ಸರಳ ಅಥವಾ ತೀರಾ ಸಿಲ್ಲಿ ಅನ್ನಿಸಬಹುದಾದಂತಹಾ, ಸಮಾಜ ಕೇಳಲು ಮುಜುಗರ ಪಡುವಂತಹಾ ಪ್ರಶ್ನೆಗಳನ್ನೂ ಅಲ್ಲಿ ಓದುಗರು ಕೇಳುತ್ತಾರೆ. ‘ಬೆಳಗ್ಗೆ ಬೇಗ ಏಳಲು ಏನು ಮಾಡಬೇಕು?’, ‘ಮೊಬೈಲ್‌ನಿಂದ ಹೇಗೆ ಅಂತರ ಕಾಯ್ದುಕೊಳ್ಳುವುದು?’, ‘ಬೀಳದಂತೆ ಹೇಗೆ ನಡೆಯುವುದು?’, ‘ಜನಾಂಗವಾದಿಗಳನ್ನು ಹೇಗೆ ಗುರುತಿಸುವುದು?’, ‘ಭಯೋತ್ಪಾದನೆಗೆ ಧರ್ಮವಿದೆಯೇ?’ ಎಂಬಲ್ಲಿಂದ ‘ಪಾರ್ನ್ ನೋಡುವುದರಿಂದ ಹೇಗೆ ದೂರ ಇರಬಹುದು?’, ‘ಮಕ್ಕಳನ್ನು ಹೇಗೆ ಬೆಳೆಸುವುದು?’, ‘ಮಕ್ಕಳಿಗೆ ಹೇಗೆ ಮಗ್ಗಿ ಕಲಿಸಬಹುದು?’ ಎನ್ನುವಲ್ಲಿಯವರೆಗೆ ಯಾವ ಪ್ರಶ್ನೆಯನ್ನೂ ಕೇಳಬಹುದು. ಇಲ್ಲಿ ‘ಬಾರದು’ ಎನ್ನುವ ನಿಷೇಧಕ್ಕೆ ಜಾಗವೇ ಇಲ್ಲ. ಮೂವತ್ತು ನಿಮಿಷಗಳ ಮಾತುಕತೆಯಲ್ಲಿ ಮುಜುಗರ ಕರಗುತ್ತದೆ, ಪೂರ್ವಾಗ್ರಹ ಕೊಂಚಮಟ್ಟಿಗಾದರೂ ನಿವಾರಣೆಯಾಗುತ್ತದೆ, ನಮ್ಮ ದೃಷ್ಟಿ ವಿಶಾಲವಾಗುತ್ತದೆ. ಅವರೂ ನಮ್ಮಂತೆಯೇ ಉಸಿರಾಡುವ, ದಾಹ ಆದಾಗ ನೀರು ಕುಡಿಯುವ, ಹಸಿವಾದಾಗ ಉಣ್ಣುವ ಸಾಮಾನ್ಯ ಮನುಷ್ಯರು ಎನ್ನುವುದು ಅರ್ಥವಾಗುತ್ತದೆ. ನಮ್ಮಲ್ಲಿರುವಂತೆಯೇ ಪ್ರೀತಿ, ಅಕ್ಕರೆ, ಮಮತೆ ಅವರಲ್ಲೂ ಇದೆ, ನಮಗಿರುವಂತೆಯೇ ಅಭದ್ರತೆ, ಭಯ, ಆತಂಕಗಳು ಅವರಿಗೂ ಇರುತ್ತದೆ, ಅವರಲ್ಲೂ ವಿಶಾಲ ಹೃದಯವಿದೆ, ಅವರಲ್ಲೂ ಸಣ್ಣತನವಿರುತ್ತದೆ, ಅವರೂ ನಮ್ಮಂತೆಯೇ ಕಪ್ಪು- ಬಿಳುಪುಗಳೆಂಬ ಎರಡು ಬಣ್ಣಗಳಾಚೆಗಿನ ಅಪ್ಪಟ ಕಲರ್‌ಫುಲ್ ಮನುಷ್ಯರು  ಎನ್ನುವುದು ಅರ್ಥವಾಗುತ್ತದೆ.

ಈ ಹ್ಯೂಮನ್ ಲೈಬ್ರರಿಯ ಕಲ್ಪನೆ ಮೊದಲು ಜನ್ಮ ತಳೆದದ್ದು ಡೆನ್ಮಾರ್ಕಿನಲ್ಲಿ. ಕೂಪನ್‌ಹೇಗನ್ನಿನ ಒಬ್ಬ ಯುವಕನ ಮೇಲೆ ಜನಾಂಗೀಯ ದಾಳಿಯಾಗುತ್ತದೆ. ಆ ದಾಳಿಯಲ್ಲಿ ಯುವಕ ತೀವ್ರವಾಗಿ ಗಾಯಗೊಳ್ಳುತ್ತಾನೆ. ಆಗ ಅಲ್ಲಿನ ಜೀವದ ಗೆಳೆಯರಾದ ರೋನಿ ಅಬರ್ಗೆಲ್, ಡ್ಯಾನಿ, ಅಸ್ಮಾ, ಕ್ರಿಸ್ಟೋಫರ್ ಮತ್ತು ಲೈಸ್ ಎಂಬ ಯುವಕರನ್ನು ಒಳಗಿಂದ ಕಲಕುತ್ತದೆ. ಪರಸ್ಪರರ ಮೇಲಿನ ಅಪನಂಬಿಕೆ, ಭಯ ಮತ್ತು ಅಜ್ಞಾನ ಎಷ್ಟು ಬೇಗ ಹಿಂಸೆಯಾಗಿ ಬದಲಾಗುತ್ತದೆ ಎಂಬುವುದನ್ನು ಅವರು ಗ್ರಹಿಸಿದರು. ಅವರ ಸುತ್ತ ನಡೆದಂತಹಾ ಈ ಊಹಿಸಲಾಸಧ್ಯವಾದ ಘಟನೆಗೆ ಒಂದು ಸಣ್ಣ ಪ್ರತಿಕ್ರಿಯೆ ಎಂಬಂತೆ ‘ಸ್ಟಾಪ್ ದಿ ವಯಲೆನ್ಸ್’ ಎನ್ನುವಂತಹ ಒಂದು ಸಂಸ್ಥೆಯನ್ನು ಹುಟ್ಟುಹಾಕಿದರು. ಮುಂದೆ, ಅವರು ಇದನ್ನು ಡೆನ್ಮಾರ್ಕ್‌ ನಾದ್ಯಂತ ದೊಡ್ಡ ಯುವ ಆಂದೋಲನವಾಗಿ ಬೆಳೆಸಿದರು. ಶಾಲೆಗಳಲ್ಲಿ ಅರಿವು ಮೂಡಿಸುವುದು, ಹಿಂಸೆಯಿಲ್ಲದೆ ಸಂವಾದದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ಕಲಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. 2000 ನೇ ಇಸವಿಯ ವೇಳೆಗೆ ಅವರ ಸಂಸ್ಥೆಯಲ್ಲಿ ಸಾವಿರಾರು ಯುವಕರು ಸದಸ್ಯರಾಗಿದ್ದರು. 2000ನೇ ಇಸವಿಯಲ್ಲಿ ಯುರೋಪ್‌ನ ಅತಿದೊಡ್ಡ ಸಂಗೀತ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ‘ರೋಸ್ಕಿಲ್ಡೆ ಫೆಸ್ಟಿವಲ್’ (Roskilde Festival) ನ ಆಯೋಜಕರು ರೋನಿ ಅಬರ್ಗೆಲ್ ಮತ್ತು ಅವರ ತಂಡವನ್ನು ಸಂಪರ್ಕಿಸಿ, 75,000 ಕ್ಕೂ ಹೆಚ್ಚು ಯುವಕರು ಸೇರುವ ಆ ಉತ್ಸವದಲ್ಲಿ ಶಾಂತಿ ಮತ್ತು ಮಾನವೀಯ ಸಂಬಂಧಗಳನ್ನು ಉತ್ತೇಜಿಸುವಂತಹ ಹೊಸ ಕಾರ್ಯಕ್ರಮವನ್ನು ರೂಪಿಸಲು ಕೇಳಿಕೊಂಡರು. ಆಗ ರೋನಿ ಅವರೊಳಗೆ ಹುಟ್ಟಿಕೊಂಡ ಕಲ್ಪನೆಯೇ ಈ ಹ್ಯೂಮನ್ ಲೈಬ್ರೆರಿ ‘ಜನರು ಬರಿ ಉಪನ್ಯಾಸಗಳನ್ನು ಕೇಳುವ ಬದಲು, ಸಮಾಜದಲ್ಲಿ ತಪ್ಪು ಕಲ್ಪನೆಗಳಿಗೆ ಒಳಗಾದ ನಿಜವಾದ ಮನುಷ್ಯರನ್ನೇ ‘ಎರವಲು’ ಪಡೆದು, ಅವರ ಬದುಕಿನ ಬಗ್ಗೆ ನೇರವಾಗಿ ಮಾತನಾಡುವಂತಿದ್ದರೆ ಹೇಗಿರುತ್ತದೆ?’ ಎನ್ನುವುದು ಈ‌ ಕಲ್ಪನೆಯ ಹಿಂದಿನ ಮೂರ್ತರೂಪವಾಗಿತ್ತು.

ಇದನ್ನೂ ಓದಿ: ಚದುರಿದ ಚಿತ್ರ | ದಿಟ್ಟತನ ಎಂಬುದು ಸ್ವಾತಂತ್ರ್ಯವೋ? ಒತ್ತಡವೋ?

ಮುಂದೆ ಇದ್ದುದು ಕಲ್ಪನೆಯನ್ನು ಸಾಕಾರಗೊಳಿಸುವ ಸವಾಲು. ಈ ಉತ್ಸವಕ್ಕಾಗಿ ಅವರು 75 ವಿವಿಧ ‘ಜೀವಂತ ಪುಸ್ತಕಗಳನ್ನು’ (ಮನುಷ್ಯರನ್ನು) ಸಿದ್ಧಪಡಿಸಿದರು. ಸಮಾಜದಲ್ಲಿ ಪೂರ್ವಾಗ್ರಹದಿಂದ ನೋಡಲ್ಪಡುತ್ತಿದ್ದ ಗುಂಪುಗಳನ್ನು ಪ್ರತಿನಿಧಿಸುವ ವ್ಯಕ್ತಿಗಳು ಇದರಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಉದಾಹರಣೆಗೆ ‘ಮಾಜಿ ಜೈಲುವಾಸಿ’, ‘ನಿರಾಶ್ರಿತ’, ‘ಅಂಧ ವ್ಯಕ್ತಿ’, ‘ಮುಸ್ಲಿಂ ಮಹಿಳೆ’, ‘ ಕಲಾವಿದ’ ಮುಂತಾದ ಶೀರ್ಷಿಕೆಗಳಿದ್ದವು.

ಅಲ್ಲಿ ಸಣ್ಣ ಲೈಬ್ರರಿಯಂತೆ ಮೇಜುಗಳನ್ನು ಹಾಕಿ, ಲೈಬ್ರೇರಿಯನ್‌ಗಳನ್ನು ನೇಮಿಸಿ, ಓದುಗರಿಗೆ ಕಾರ್ಡ್‌ಗಳನ್ನು ನೀಡಲಾಯಿತು. ಸಾವಿರಕ್ಕೂ ಹೆಚ್ಚು ಜನರು ಆ ಉತ್ಸವದಲ್ಲಿ ‘ಮನುಷ್ಯ’ರನ್ನು ಓದಿದರು. ಅಲ್ಲಿ ವಾದ, ವಿವಾದ, ಜಗಳ, ಹಿಂಸೆ ಯಾವುದೂ ಇಲ್ಲದೆ ಮನುಷ್ಯ ಮನುಷ್ಯನನ್ನು ಅರ್ಥ ಮಾಡಿಕೊಳ್ಳುವ ಚಂದದ ವಾತಾವರಣವೊಂದು ಅಲ್ಲಿ ನಿರ್ಮಾಣವಾಯಿತು.

ಸಹಜವಾಗಿಯೇ ಇದು ಇಡೀ ಜಗತ್ತಿನ ಗಮನ ಸೆಳೆಯಿತು. ಮುಂದೆ, 2003ರಲ್ಲಿ ನೆದರ್ಲ್ಯಾಂಡ್ಸ್‌ನಲ್ಲಿ ಮೊದಲ ಶಾಶ್ವತ ಸಾರ್ವಜನಿಕ ‘ಹ್ಯೂಮನ್ ಲೈಬ್ರರಿ’ ಸ್ಥಾಪನೆಯಾಯಿತು. 2006ರಲ್ಲಿ ‘ಕೌನ್ಸಿಲ್ ಆಫ್ ಯುರೋಪ್’ ಇದನ್ನು ಮಾನವ ಹಕ್ಕುಗಳ ಶಿಕ್ಷಣ ಮತ್ತು ತಾರತಮ್ಯ ತಡೆಗಟ್ಟುವ ಅತ್ಯುತ್ತಮ ಮಾದರಿ ಎಂದು ಅಧಿಕೃತವಾಗಿ ಗುರುತಿಸಿತು. ಹಾಗೂ 2008ರಲ್ಲಿ ರೋನಿ ಅಬರ್ಗೆಲ್ ಕೋಪನ್‌ಹೇಗನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ‘ದಿ ಹ್ಯೂಮನ್ ಲೈಬ್ರರಿ ಆರ್ಗನೈಸೇಷನ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ನೋಂದಾಯಿಸಿದರು. ಇಂದು, ಹ್ಯೂಮನ್ ಲೈಬ್ರರಿಯು 80 ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದೆ. ಸಾರ್ವಜನಿಕ ಗ್ರಂಥಾಲಯಗಳು, ಶಾಲೆ-ಕಾಲೇಜುಗಳು ಮಾತ್ರವಲ್ಲದೆ ಗೂಗಲ್, ಮೈಕ್ರೋಸಾಫ್ಟ್ ಮತ್ತು ಐಕಿಯಾ (IKEA) ನಂತಹ ಜಾಗತಿಕ ಸಂಸ್ಥೆಗಳಲ್ಲೂ ಉದ್ಯೋಗಿಗಳಲ್ಲಿ ಪೂರ್ವಾಗ್ರಹಗಳನ್ನು ಕರಗಿಸಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಜಗತ್ತು ಈಗ ಮೊದಲಿಗಿಂತಲೂ‌ ಚಿಕ್ಕದಾಗಿದೆ, ಅದರ ವ್ಯಾಪ್ತಿ ಕೈಯಗಲದಷ್ಟಾಗಿದೆ. ಬೆರಳ ತುದಿಯಲ್ಲಿ ಈಗ ಎಲ್ಲವೂ ಲಭ್ಯ. ನಮ್ಮ ಮೊಬೈಲ್ ಒಳಗಿನ ಕಣ್ಣು ಕೋರೈಸುವ ಬೆಳಕಿನ ಭ್ರಮೆಯಲ್ಲಿ ಕಾಣುವ ಪ್ರೊಫೈಲ್, ಚಿತ್ರ, ವಿಡಿಯೋಗಳಿಂದ ಮನುಷ್ಯರ ಬಗ್ಗೆ ನಾವು ಮೊದಲಿಗಿಂತಲೂ ವೇಗವಾಗಿ ಮತ್ತು ತೀವ್ರವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ತಿನ್ನುವ ಅನ್ನ, ಇರುವ ಮನೆ ಎಲ್ಲವೂ ನಮ್ಮ ತೀರ್ಮಾನಗಳನ್ನು ನಿರ್ಧರಿಸುವ ಮಾನದಂಡಗಳಾಗಿವೆ. ಅದರಾಚೆಗಿನ ಮನುಷ್ಯ, ಅವನ ಭಾವನೆಗಳು, ನಿಜದ ಸಂಕಷ್ಟಗಳು ಯಾವುದೂ ನಮಗೆ ಅರ್ಥವಾಗುವುದಿಲ್ಲ. ನಮಗಿರುವ ಸಂಪರ್ಕಗಳ, ಸಾಮಾಜಿಕ ಗುರುತುಗಳು ಎಲ್ಲವುಗಳಾಚೆಗೆ ನಾವು ದ್ವೀಪಗಳಾಗುತ್ತಿದ್ದೇವೆ, ಕೋಟೆಕಟ್ಟಿಕೊಳ್ಳುತ್ತಿದ್ದೇವೆ. ನಿಜಕ್ಕೂ ತಪ್ಪು ಕಲ್ಪನೆಗಳು, ಪೂರ್ವಗ್ರಹಗಳು ಹುಟ್ಟಿಕೊಳ್ಳುವುದೇ ಕೋಟೆ ಕಟ್ಟಿಕೊಂಡಾಗ, ದ್ವೀಪಗಳಾದಾಗ. ನಮ್ಮ ನಡುವಿನ ಅಪರಿಚಿತತೆಯೇ ಇನ್ನೊಬ್ಬರ ಬಗೆಗಿನ ಭಯವಾಗಿ ಮಾರ್ಪಡುತ್ತದೆ, ಆ ಅಪರಿಚಿತತೆಯೇ ಊಹೆಗಳಿಂದ ವ್ಯಕ್ತಿಯ ಚಿತ್ರಣವನ್ನು ಕಟ್ಟಿಕೊಳ್ಳಲು ಪ್ರೇರೇಪಿಸುತ್ತದೆ. ಮುಂದೆ ಆ ಅಭದ್ರತೆಯೇ ಹಿಂಸೆಗೆ ತಿರುಗುತ್ತದೆ.

ಹ್ಯೂಮನ್ ಲೈಬ್ರೆರಿಯ ಹಿಂದಿರುವುದು ಮನುಷ್ಯನ ನಡುವಿನ ಗೋಡೆಗಳನ್ನು ಒಡೆಯುವ, ಪೂರ್ವಗ್ರಹವಿಲ್ಲದೆ ಮನುಷ್ಯನನ್ನು ಆಲಿಸುವ, ದಿಢೀರ್ ತೀರ್ಮಾನಗಳಿಗೆ ಬರದೆ ಮನುಷ್ಯನನ್ನು ಕೇವಲ ಮನುಷ್ಯನಾಗಿ ಮಾತ್ರ ಗ್ರಹಿಸುವ ಕಲ್ಪನೆ. ಪುಸ್ತಕದ ಮುಖಪುಟವನ್ನು ನೋಡಿ ಒಳಗಿನ ಸತ್ವವನ್ನು ಹೇಗೆ ನಿರ್ಧರಿಸಬಾರದೋ ಹಾಗೆಯೇ ಮನುಷ್ಯನ ಚಹರೆ, ಉಡುಪು, ಸೋಶಿಯಲ್ ಮೀಡಿಯಾ ಪ್ರೊಫೈಲ್ ವ್ಯಕ್ತಿತ್ವದ ಅಳತೆಗೋಲಲ್ಲ‌ ಅನ್ನುವುದು ಅರ್ಥವಾದ ಕ್ಷಣ ಜಗತ್ತು, ಹಿಂಸೆ ಕ್ರೌರ್ಯಗಳಿಲ್ಲದೆ ಚಂದ ಬದುಕುವ ಸ್ಥಳವಾಗಿ ಬದಲಾಗುತ್ತದೆ.

WhatsApp Image 2026 02 15 at 10.09.03 AM
ಫಾತಿಮಾ ರಲಿಯಾ
+ posts

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ.

ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಫಾತಿಮಾ ರಲಿಯಾ
ಫಾತಿಮಾ ರಲಿಯಾ
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ, ದೋರ್ಮೆಯವರು. ಎಂಬಿಎ ಪದವೀಧರೆ. ಪ್ರಕಟಿತ ಕೃತಿಗಳು: 'ಕಡಲು ನೋಡಲು ಹೋದವಳು' ಪ್ರಬಂಧ ಸಂಕಲನ, 'ಒಡೆಯಲಾರದ ಒಡಪು' ಕಥಾ ಸಂಕಲನ, 'ಅವಳ ಕಾಲು‌ ಸೋಲದಿರಲಿ' ಕವನ ಸಂಕಲನ, 'ಕೀಮೋ', ಅನುಭವ ಕಥನ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗ್ರಾಮೀಣದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ? ಹಾಗಾದ್ರೆ ಈ ನಂಬರ್‌ಗೆ ಕರೆ ಮಾಡಿ

ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು...

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ ಹಾಕಿದ ಮಾಧ್ಯಮಗಳು

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ...

ಕಲಬುರಗಿಯಲ್ಲಿ ಸೆ.27ರಂದು ಬಸವಾದಿ ಶರಣರ ಹಿಂದೂ ಸಮಾವೇಶ : ಕನೇರಿ ಸ್ವಾಮೀಜಿಗೆ ಅನುಮತಿ ಬೇಡ

ಕಲಬುರಗಿಯಲ್ಲಿ ಸೆ. 27ರಂದು ಹಮ್ಮಿಕೊಳ್ಳಲಾಗಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ...