ತೂಕ ಹೆಚ್ಚಾಗಲು ಸಹಜೈವಿಕಗಳು (ಪ್ರೋಬಯಾಟಿಕ್ಸ್), ಪೂರಕ ಜೈವಿಕಗಳು (ಪ್ರೀಬಯಾಟಿಕ್ಸ್), ಕಿಣ್ವಗಳು, ಸಸ್ಯ ಮೂಲದ ರಾಸಾಯನಿಕ ವಸ್ತುಗಳು (ಫೈಟೋ ಕೆಮಿಕಲ್ಸ್), ಆಂಟಿಆಕ್ಸಿಡೆಂಟ್ಗಳು, ಖನಿಜಾಂಶಗಳು, ಜೀವಸತ್ವಗಳು, ಟಾಕ್ಸಿನ್ ಬೈಂಡರ್ಗಳು, ಉಪ್ಪು, ಮಿಥಿಯೋನಿನ್, ಕಾಕ್ಸಿಡಿಯಾ ನಿರೋಧಕಗಳು ಎಂಬ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗುತ್ತಿದೆ. ಪ್ರಮುಖ ಆಹಾರಾಂಶಗಳಾಗಿ ಜೋಳದ ಪುಡಿ, ಮುಸುಕಿನ ಜೋಳದ ಪುಡಿ, ಸೋಯಾ ಅವರೆ ಪುಡಿ, ಅಕ್ಕಿ ತೌಡು, ಎಣ್ಣೆ ತೆಗೆದ ಅಕ್ಕಿ ತೌಡು ಮುಂತಾದುವುಗಳನ್ನು ಬಳಸಲಾಗುತ್ತಿದೆ. ಆಹಾರದಲ್ಲಿ ಶಿಲೀಂಧ್ರಗಳ ವಿಷಗಳಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.
ನಮ್ಮ ಆಹಾರದಲ್ಲಿ ಸಸಾರಜನಕವಿರಬೇಕು. ಸಸ್ಯಮೂಲದ ಸಸಾರಜನಕ (ಪ್ರೋಟೀನು)ವನ್ನೇ ಇಂದಿನ ಅಗಾಧವಾದ ಜನಸಂಖ್ಯೆಗೆ ಪೂರೈಸುವುದು ಕಷ್ಟಸಾಧ್ಯ. ಮಾಂಸಾಹಾರಿಗಳು ಹೆಚ್ಚಾಗಿ ಬ್ರಾಯ್ಲರ್ (ಮಾಂಸದ ಕೋಳಿ) ಕೋಳಿಯ ಮಾಂಸವನ್ನು ಸೇವಿಸುತ್ತಾರೆ. ವಾರದ ಮಾಂಸಾಹಾರಿಗಳಿಂದಿಡಿದು ವಾರಕ್ಕೆ ಮೂರ್ನಾಲ್ಕು ಬಾರಿ ಕೋಳಿ ಮಾಂಸವನ್ನು ತಿನ್ನುವವರಿದ್ದಾರೆ. ಒಂದು ಅಂದಾಜಿನಂತೆ, ಮಾಂಸಾಹಾರಿ ವ್ಯಕ್ತಿಯೊಬ್ಬನಿಗೆ ವರ್ಷದ 365 ದಿನಗಳ ಪೈಕಿ 205 ದಿನಗಳು ಕೋಳಿ ಮಾಂಸವಿರಲಿ, 160 ದಿನಗಳು ಕೋಳಿ ಮಾಂಸರಹಿತ ಸಸ್ಯಾಹಾರದ ದಿನಗಳಿರಲಿ ಎಂಬ ಚಿಂತನೆಯಿದೆ. ಕೋಳಿ ಮಾಂಸದಲ್ಲಿ ಶೇ. 27ರಷ್ಟು ಸಸಾರಜನಕವಿದೆ.
ಕೋಳಿ ಸಾಕಾಣಿಕೆಯು ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಹಲವು ರೈತರಿಗೆ ಲಾಭದಾಯಕ ಕಸುಬಾಗಿದೆ. ದೇಶದ ಕನಿಷ್ಠ 60 ಲಕ್ಷ ಜನರಿಗೆ ಪ್ರತ್ಯಕ್ಷ ಉದ್ಯೋಗವನ್ನು ಮತ್ತು ಒಂದು ಕೋಟಿಗೂ ಅಧಿಕ ಜನರಿಗೆ ಪರೋಕ್ಷ ಉದ್ಯೋಗವನ್ನು ಒದಗಿಸಿದೆ. ರಾಷ್ಟ್ರದ ಸಂಪನ್ಮೂಲಕ್ಕೆ 2,01,669 ಕೋಟಿ ರೂಪಾಯಿಗಳ ಆದಾಯವನ್ನು ಒದಗಿಸುತ್ತಿದೆ. ಪ್ರಾಣಿ ಮಾಂಸದ ಒಟ್ಟು ಉತ್ಪಾದನೆಯಲ್ಲಿ ಕೋಳಿ ಮಾಂಸದ ಉತ್ಪಾದನೆಯು ಶೇ. 50ರಷ್ಟಿದೆ. ಬ್ರಾಯ್ಲರ್ ಕೋಳಿ ಸಾಕಾಣಿಕೆ ಕ್ರಮಗಳ ಕುರಿತು ಕೆಲವರಿಗೆ ತಪ್ಪು ಮಾಹಿತಿಯಿದೆ. ಹಲವು ದಶಕಗಳಿಂದ ಇಲ್ಲ ಸಲ್ಲದ ಅರೋಪಗಳನ್ನು ಕೋಳಿ ಸಾಕಾಣಿಕೆ ಕುರಿತಂತೆ ಹಬ್ಬಿಸಲಾಗುತ್ತಿದೆ. ಬ್ರಾಯ್ಲರ್ ಕೋಳಿ ಸಾಕಾಣಿಕೆಯಲ್ಲಿ ಹಾರ್ಮೋನುಗಳನ್ನು ಬಳಸಲಾಗುತ್ತಿದೆ ಎಂದು ಹಬ್ಬಿಸುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾದದ್ದಾಗಿದೆ.
ಮಾಂಸದ ಕೋಳಿ ಉತ್ಪಾದನೆಯಲ್ಲಿ ಈಸ್ಟ್ರೋಜನ್ ಬಳಸುತ್ತಿಲ್ಲ
ಮಾಂಸದ ಕೋಳಿ ಉತ್ಪಾದನೆಯಲ್ಲಿ ಈಸ್ಟ್ರೋಜನ್ ಬಳಸುತ್ತಿಲ್ಲ. ಈಸ್ಟ್ರೋಜನ್ ಎಂಬ ಹೆಣ್ಣು ಹಾರ್ಮೋನನ್ನು ಕೋಳಿಗಳ ಕತ್ತಿನ ಭಾಗದಲ್ಲಿ ಇಂಜೆಕ್ಷನ್ ಹಾಗೂ ಇಂಪ್ಲಾಂಟ್ ರೂಪದಲ್ಲಿ ಕೊಟ್ಟು ಬೆಳವಣಿಗೆಯನ್ನು ಉದ್ದೀಪನಗೊಳಿಸಲಾಗುತ್ತಿದೆಯೆಂದೂ, ಅಂತಹ ಕೋಳಿ ಕತ್ತಿನ ಭಾಗವನ್ನು ತಿಂದ ಹುಡುಗರಿಗೆ, ಅದರಲ್ಲಿ ಈಸ್ಟ್ರೋಜನ್ ಇದ್ದಿರಬಹುದಾದ್ದರಿಂದ, ಅವರ ಸ್ತನಗಳು ದೊಡ್ಡವಾಗುತ್ತವೆಯೆಂದು (ಇದನ್ನು ಗೈನಕೋಮಾಸ್ಟಿಯಾ ಎಂದು ಕರೆಯಲಾಗಿದೆ) ವ್ಯಾಖ್ಯಾನಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಆದರೆ, ಈಸ್ಟ್ರೋಜನ್ ಅನ್ನು ಕೋಳಿ ಮಾಂಸದ ಉತ್ಪಾದನೆಯಲ್ಲಿ ಬಳಸುತ್ತಿಲ್ಲ. ಅದು ‘ಲಾಭ-ವೆಚ್ಚದ ಅನುಪಾತ’ದಂತೆ ಕಾರ್ಯಸಾಧುವೂ ಅಲ್ಲ.
ಸಾಮಾನ್ಯವಾಗಿ ಹುಡುಗರು ಪ್ರೌಢಾವಸ್ಥೆಗೆ ತಲುಪಿದಾಗ ಕೊಂಚ ಮಟ್ಟಿಗೆ ಸ್ತನಗಳು ದೊಡ್ಡದಾಗುತ್ತವೆ. ಅದು ಸಹಜವಾದ ಬೆಳವಣಿಗೆ. ಗಂಡು ಲೈಂಗಿಕ ಹಾರ್ಮೋನಾದ ಟೆಸ್ಟೋಸ್ಟೀರಾನ್ ಮತ್ತು ಗಂಡಿನಲ್ಲೇ ತಯಾರಾಗುವ ಮತ್ತೊಂದು ಲೈಂಗಿಕ ಹಾರ್ಮೋನು ಈಸ್ಟ್ರೋಜನ್ ಮಧ್ಯೆ ಉಂಟಾಗುವ ಏರಿಳಿತ ಇದಕ್ಕೆ ಕಾರಣ. ಅರ್ಥಾತ್ ಈಸ್ಟ್ರೋಜನ್ ಅಂತಹ ಬೆಳವಣಿಗೆಗೆ ಕಾರಣ. ಹೀಗೆ ದೇಹದ ಯಾವುದೇ ಒಂದು ಅಂಗದ ಹೆಚ್ಚುವರಿ ಬೆಳವಣಿಗೆಯನ್ನು ವೈಜ್ಞಾನಿಕ ಭಾಷೆಯಲ್ಲಿ ‘ಆಲೋಮೆಟ್ರಿಕ್ ಬೆಳವಣಿಗೆ’ ಎಂದು ಕರೆಯಲಾಗಿದೆ. ಕೆಲ ವರ್ಷಗಳ ನಂತರ ಅಂತಹ ‘ಗೈನಕೋಮಾಸ್ಟಿಯಾ’ ಸ್ಥಿತಿಯು ತಂತಾನೆ ಸರಿಹೋಗುತ್ತದೆ.

ಸಿಂಥೆಟಿಕ್ ಈಸ್ಟ್ರೋಜನ್ಗಳಾದ ಹೆಕ್ಸೆಸ್ಟ್ರಾಲ್ ಮತ್ತು ಡೈನೆಸ್ಟ್ರಾಲ್ಗಳನ್ನು ವಿದೇಶಗಳಲ್ಲಿ ಸಸ್ತನಿ ಜಾನುವಾರುಗಳಾದ ಕುರಿ ಮತ್ತು ದನಗಳನ್ನು ಕೊಬ್ಬಿಸುವ ಪ್ರಕ್ರಿಯೆಗೆ ಒಳಪಡಿಸಿ ಮಾಂಸದ ಉತ್ಪಾದನೆಗಾಗಿ ಬಳಸುವ ಪದ್ದತಿಯಿದೆ. ಆ ಹಾರ್ಮೋನುಗಳನ್ನು ಕಿವಿಯ ಭಾಗದಲ್ಲಿ ‘ಇಂಪ್ಲಾಟ್ಸ್’ ಆಗಿ ಬಳಸಲಾಗುತ್ತದೆ. ಹಾಗೆಯೇ, ಕೆಲವು ದೇಶಗಳಲ್ಲಿ ಅವುಗಳ ಬಳಕೆಯ ಕುರಿತು ನಿಯಮಾವಳಿಗಳಿವೆ. ಮಾಂಸಕ್ಕಾಗಿ ವಧೆ ಮಾಡುವ 90ರಿಂದ 120 ದಿನಗಳ ಹಿಂದೆ ಅಂತಹ ಸಿಂಥೆಟಿಕ್ ಹಾರ್ಮೋನುಗಳನ್ನು ಬಳಸುವುದನ್ನು ನಿಲ್ಲಿಸಿರಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಯೂರೋಪಿಯನ್ ಒಕ್ಕೂಟದಲ್ಲಿ ವಿವರವಾದ ನಿಯಮಗಳಿವೆ.
ವೈಜ್ಞಾನಿಕ ಕೋಳಿ ಸಾಕಾಣಿಕೆ
ಕೋಳಿ ಫಾರ್ಮುಗಳಲ್ಲಿ ಕೋಳಿಗಳನ್ನು ವೈಜ್ಞಾನಿಕವಾಗಿ ಸಾಕಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಆಹಾರ ತಿಂದು ಹೆಚ್ಚು ದೇಹತೂಕ ಪಡೆಯುವ ಕೋಳಿ ತಳಿಗಳನ್ನು ಕಂಡುಹಿಡಿಯಲಾಗಿದೆ. ಹಲವು ದಶಕಗಳ ಹಿಂದೆ, ಬ್ರಾಯ್ಲರ್ ಕೋಳಿಗಳನ್ನು 8 ವಾರಗಳವರೆಗೆ ಸಾಕಬೇಕಾಗಿತ್ತು. ನಂತರ ಅದನ್ನು 6 ವಾರಗಳಿಗೆ ಇಳಿಸಲಾಯಿತು. ಈಗ 5 ವಾರಗಳಾದರೆ ಸಾಕು ಎಂಬ ಸ್ಥಿತಿಯಿದೆ. ಒಂದನೇ ದಿನದಲ್ಲಿ ಕೇವಲ 40ರಿಂದ 50 ಗ್ರಾಂ ತೂಕವಿರುವ ಕೋಳಿ ಮರಿಯು 35 ದಿನಗಳಿಗೆ 2 ಕಿಲೋ ಗ್ರಾಂಗಿಂತ ಅಧಿಕ ತೂಕವನ್ನು ಹೊಂದುತ್ತದೆ. ಸಾಮಾನ್ಯವಾಗಿ 40ರಿಂದ 50 ಗ್ರಾಂ ತೂಕುವ ಒಂದು ದಿನದ ಕೋಳಿ ಮರಿ ಏಳನೆ ದಿನಕ್ಕೆ 210 ಗ್ರಾಂ, 14ನೇ ದಿನಕ್ಕೆ 485 ಗ್ರಾಂ, 21ನೇ ದಿನಕ್ಕೆ 1300 ಗ್ರಾಂ, 28ನೇ ದಿನಕ್ಕೆ 1700 ಗ್ರಾಂ ಮತ್ತು 35ನೇ ದಿನಕ್ಕೆ 2200 ಗ್ರಾಂ ತೂಕವನ್ನು ಹೊಂದುತ್ತವೆ. ಆಗ ಅವು ಮಾರುಕಟ್ಟೆಗೆ ರೆಡಿಯಾಗುತ್ತವೆ. ಇಷ್ಟು ವೇಗದ ಬೆಳವಣಿಗೆ ಸಾಧ್ಯವಾದದ್ದು ಸಂಕರಣ ಬ್ರಾಯ್ಲರ್ ತಳಿಗಳಿಂದ. ಮುಖ್ಯವಾದ ಬ್ರಾಯ್ಲರ್ ತಳಿಗಳೆಂದರೆ ವೆಂಕಾಬ್ 430 ವೈ, ರಾಸ್ 308, ಹಬ್ಬರ್ಡ್, ಬಿವಿ 300 ಮತ್ತು ಅನಕ್ 2000.
ಪ್ರತಿ ಕಿಲೋ ಗ್ರಾಂ ದೇಹ ತೂಕ ಹೊಂದಲು ಒಂದೂ ಮುಕ್ಕಾಲು ಕಿಲೋ ಆಹಾರದ ಬಳಕೆಯಾಗುತ್ತದೆ. ಇದು ಸಾಧ್ಯವಾಗಿದ್ದು ಸಂಕರ ತಳಿಗಳ ಮೂಲಕ, ಹೊಸ ತಳಿಗಳ ಉತ್ಪಾದನೆಯ ಮೂಲಕ. ರೋಗಗಳನ್ನು ತಡೆಗಟ್ಟುವ ಕಟ್ಟುನಿಟ್ಟಿನ ಲಸಿಕಾ ಕಾರ್ಯಕ್ರಮ, ಸಮತೋಲನ ಆಹಾರ ನೀಡುವಿಕೆ, ಸ್ವಚ್ಛ ನೀರಿನ ಪೂರೈಕೆ, ಉತ್ತಮ ನಿರ್ವಹಣೆ, ಜೈವಿಕ ಸಂರಕ್ಷಣೆಯಂತಹ ಕಾರ್ಯಕ್ರಮಗಳಿಂದ ಯಶಸ್ವೀ ಹಾಗೂ ಲಾಭದಾಯಕ ಕೋಳಿ ಸಾಕಾಣಿಕೆ ಸಾಧ್ಯ.
ದೇಹ ತೂಕ ಹೆಚ್ಚಾಗಲು ಸಹಜೈವಿಕಗಳು (ಪ್ರೋಬಯಾಟಿಕ್ಸ್), ಪೂರಕ ಜೈವಿಕಗಳು (ಪ್ರೀಬಯಾಟಿಕ್ಸ್), ಕಿಣ್ವಗಳು, ಸಸ್ಯ ಮೂಲದ ರಾಸಾಯನಿಕ ವಸ್ತುಗಳು (ಫೈಟೋ ಕೆಮಿಕಲ್ಸ್), ಆಂಟಿಆಕ್ಸಿಡೆಂಟ್ಗಳು, ಖನಿಜಾಂಶಗಳು, ಜೀವಸತ್ವಗಳು, ಟಾಕ್ಸಿನ್ ಬೈಂಡರ್ಗಳು, ಉಪ್ಪು, ಮಿಥಿಯೋನಿನ್, ಕಾಕ್ಸಿಡಿಯಾ ನಿರೋಧಕಗಳು ಎಂಬ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗುತ್ತಿದೆ. ಪ್ರಮುಖ ಆಹಾರಾಂಶಗಳಾಗಿ ಜೋಳದ ಪುಡಿ, ಮುಸುಕಿನ ಜೋಳದ ಪುಡಿ, ಸೋಯಾ ಅವರೆ ಪುಡಿ, ಅಕ್ಕಿ ತೌಡು, ಎಣ್ಣೆ ತೆಗೆದ ಅಕ್ಕಿ ತೌಡು ಮುಂತಾದುವುಗಳನ್ನು ಬಳಸಲಾಗುತ್ತಿದೆ. ಆಹಾರದಲ್ಲಿ ಶಿಲೀಂಧ್ರಗಳ ವಿಷಗಳಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಶಿಲೀಂಧ್ರ ವಿಷಗಳಿದ್ದರೆ ಕೋಳಿಗಳು ರೋಗದಿಂದ ಬಳಲಿ ಉತ್ಪಾದನೆ ಕುಂಠಿತವಾಗುತ್ತದೆ.
ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಕುಕ್ಕುಟ ವಿಭಾಗದಲ್ಲಿ 1980ರ ಸುಮಾರಿಗೆ ಐಬಿಬಿ 80 (ಇಂಡಿಯನ್ ಬ್ರಾಯ್ಲರ್ ಬೆಂಗಳೂರು 80) ಅನ್ನು ಸಂಕರಣ ತಳಿಯಾಗಿ ಉತ್ಪಾದಿಸಲಾಯಿತು. ನಂತರ, ಗಿರಿರಾಜ ಮತ್ತು ಗಿರಿರಾಣಿ ಎಂಬ ಬಣ್ಣದ ಪುಕ್ಕಗಳನ್ನು ಹೊಂದಿರುವ, ನಾಲ್ಕೈದು ಕಿಲೋಗ್ರಾಂಗಳವರೆಗೆ ತೂಕುವ ಮಾಂಸ ಮತ್ತು ಮೊಟ್ಟೆ ಕೋಳಿ ತಳಿಗಳನ್ನು ಬಿಡುಗಡೆ ಮಾಡಲಾಯಿತು. ತದನಂತರ, ಪಂಜಾಬ್ 1 ಮತ್ತು 2 (ಪಿಬಿ 1 ಮತ್ತು 2) ಹಾಗೂ ರಾಜಾ 2 ಎಂಬ ವರ್ಣಮಯ ಪುಕ್ಕಗಳ ಬ್ರಾಯ್ಲರ್ ತಳಿಗಳನ್ನು ಹೊರತಂದಿದ್ದು ರಾಜ್ಯದ ಹೆಗ್ಗಳಿಕೆ.
ಬ್ರಾಯ್ಲರ್ ಕೋಳಿಗಳಿಗೆ ಲಸಿಕೆಯ ವೇಳಾಪಟ್ಟಿ
ಬ್ರಾಯ್ಲರ್ ಕೋಳಿ ಸಾಕಾಣಿಕೆಯ ಯಶಸ್ಸಿಗೆ, ರೋಗಗಳ ತಡೆಗಟ್ಟುವಿಕೆಗೆ, ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಕಣ್ಣು ಮತ್ತು ಮೂಗಿನ ಮೂಲಕ ಏಳನೇ ದಿನಕ್ಕೆ ಕೊಕ್ಕರೆ ರೋಗದ ಲಸಿಕೆ, 10ನೇ ದಿನಕ್ಕೆ ಕಣ್ಣಿನ ಮೂಲಕ ಗುಂಬರೋ ರೋಗದ ಲಸಿಕೆ, ಚರ್ಮದಡಿಯಲ್ಲಿ 12ನೇ ದಿನಕ್ಕೆ ಲೀಚಿ ರೋಗದ ಲಸಿಕೆ, ಕುಡಿಯುವ ನೀರಿನಲ್ಲಿ 21ನೇ ದಿನಕ್ಕೆ ಗುಂಬರೋ ರೋಗದ ಲಸಿಕೆ ಮತ್ತು ಕುಡಿಯುವ ನೀರಿನಲ್ಲಿ 28ನೇ ದಿನಕ್ಕೆ ಕೊಕ್ಕರೆ ರೋಗದ ಲಸಿಕೆಯನ್ನು ಕಡ್ಡಾಯವಾಗಿ ನೀಡಲೇಬೇಕು.
ಕೋಳಿ ಸಾಕಾಣಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ
ಕೋಳಿ ಮಾಂಸದ ಉತ್ಪಾದನೆಯಲ್ಲಿ ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ಮೊಟ್ಟೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯವು ಕೋಳಿ ಮಾಂಸ ಮತ್ತು ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ 5ನೇ ಸ್ಥಾನದಲ್ಲಿದೆ. ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮವನ್ನು ವೈಜ್ಞಾನಿಕ ದೃಷ್ಟಿಯಿಂದ ಬೆಂಬಲಿಸಬೇಕಿದೆ.
ಹಿತ್ತಲಲ್ಲಿ ಕೋಳಿ ಸಾಕಾಣಿಕೆಯನ್ನು ಬೆಂಬಲಿಸಬೇಕಿದೆ
ಕೃಷಿ ಕಾರ್ಮಿಕರು, ಅತಿ ಸಣ್ಣ ರೈತರು ಹತ್ತಿಪ್ಪತ್ತು ಕೋಳಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ತಮ್ಮ ಹಿತ್ತಲಲ್ಲಿ ಸಾಕಿಕೊಳ್ಳುತ್ತಾರೆ. ನಾಟಿ ಕೋಳಿಗಳು ಮತ್ತು ಗಿರಿರಾಜ ಕೋಳಿ ತಳಿಗಳು ಹಿತ್ತಲ ಕೋಳಿ ಸಾಕಾಣಿಕೆಗೆ ಸೂಕ್ತ. ಸರ್ಕಾರದ ಕೆಲವು ಯೋಜನೆಗಳ ಉದ್ದೇಶವೂ ಇದೇ ಆಗಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಲ್ಲಿ ಉಚಿತವಾಗಿ ಲಸಿಕೆ ನೀಡಿ, ನಾಲ್ಕೈದು ವಾರಗಳ ಕಾಲ ಸಾಕಿದ ನಂತರ ಕೋಳಿ ಮರಿಗಳನ್ನು ನೀಡಲಾಗುತ್ತಿದೆ. ತದನಂತರ ಸಾಕಿದವರಿಗೆ ಚಿಕ್ಕಾಸಾದರೂ ಸಿಗುತ್ತದೆ. ಗಿರಿಜನರಂತೂ ನಾಟಿ ಕೋಳಿಗಳ ಸಂರಕ್ಷಕರಾಗಿದ್ದಾರೆ. ತಲತಲಾಂತರದಿಂದ ನಾಟಿ ತಳಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಿತ್ತಲ ಕೋಳಿ ಸಾಕಾಣಿಕೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಒತ್ತು ನೀಡಿ ಬಡವರ ಆರ್ಥಿಕ ಸಬಲೀಕರಣಕ್ಕೆ ಊರುಗೋಲಾಗಬೇಕಿದೆ. ‘ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ’ ನಿಧಿಯನ್ನೂ ಕೂಡ ಹಿತ್ತಲಲ್ಲಿ ಕೋಳಿ ಸಾಕಾಣಿಕೆಗಾಗಿ ವಿನಿಯೋಗಿಸಬಹುದಾಗಿದೆ.

ಸಮಗ್ರ ಕೋಳಿ ಸಾಕಾಣಿಕೆ
ಇಂಟೆಗ್ರೇಟೆಡ್ ಪೌಲ್ಟ್ರಿ ಫಾರ್ಮಿಂಗ್ ಅಥವಾ ಗುತ್ತಿಗೆ ಆಧಾರದಲ್ಲಿ ಮಾಂಸದ ಕೋಳಿ ಸಾಕಾಣಿಕೆ ಎಂಬ ಜನಪ್ರಿಯ ಸಮಗ್ರ ಕೋಳಿ ಸಾಕಾಣಿಕೆಯು ರೈತರಿಗೆ ಒಂದಷ್ಟು ಗ್ಯಾರಂಟಿ ಆದಾಯ ನೀಡುವ ಪದ್ದತಿಯಾಗಿದೆ. ಆದರೆ ಅದಕ್ಕೇ ತನ್ನದೇ ಆದ ಇತಿಮಿತಿಗಳಿವೆ. ಸಾಧಕ ಬಾಧಕಗಳಿವೆ. ಅಂತಹ ಫಾರ್ಮಿಂಗ್ ಅನ್ನು ನಿಗ್ರಹಿಸುವ ಕಂಪನಿಗಳು ಕೋಳಿ ಮಾಂಸ ಮತ್ತು ಕೋಳಿ ಮೊಟ್ಟೆಯ ದರವನ್ನು ನಿಗದಿಪಡಿಸುತ್ತವೆ ಎಂದು ಹೇಳಲಾಗುತ್ತಿದೆ. ಕೋಳಿ ಸಾಕಾಣಿಕೆಯು ಅಂತಹ ಕಾರ್ಪೊರೇಟ್ ಕಂಪನಿಗಳ ಬಿಗಿ ಮುಷ್ಟಿಯಲ್ಲಿದೆ ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ. ರೈತರು ಅನಿವಾರ್ಯವಾಗಿ ಕಂಪನಿಗಳ ಹಿಡಿತಕ್ಕೆ ಸಿಲುಕಿದ್ದಾರೆ. ಇಲ್ಲಿ ಸರ್ಕಾರದ ಪಾತ್ರವೇನು ಎಂಬ ಚರ್ಚೆಯಾಗಬೇಕಿದೆ.
ಒಟ್ಟಿನಲ್ಲಿ, ಬ್ರಾಯ್ಲರ್ ಕೋಳಿಗಳ ಮಾಂಸವನ್ನು ವೈಜ್ಞಾನಿಕವಾಗಿ ಜನಸ್ನೇಹಿಯಾಗಿ ಉತ್ಪಾದಿಸಲಾಗುತ್ತಿದೆ. ಕೋಳಿ ಮಾಂಸವು ಹೆಚ್ಚುತ್ತಿರುವ ಜನಸಂಖ್ಯೆಗೆ ಅಗತ್ಯ ಪ್ರಮಾಣದ ಸಸಾರಜನಕವನ್ನು ಪೂರೈಸುತ್ತಿದೆ. ಕೋಳಿ ಮಾಂಸವನ್ನು ತಿನ್ನಬೇಕೆಂಬ ಬಯಕೆಯಾದಾಗ ಹಿತಮಿತವಾಗಿ ತಿನ್ನೋಣ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



