ಅವಳ ಕಣ್ಣೋಟ | ಟಾಕ್ಸಿಕ್ – ಮಹಿಳಾ ಧ್ವನಿ ಇದೆ; ಅವರ ಕಥೆ ಇಲ್ಲ!

Date:

ಟಾಕ್ಸಿಕ್ ಮಹತ್ವಾಕಾಂಕ್ಷೆಯ ಸಿನಿಮಾ. ಅದು ಗ್ಯಾಂಗ್‌ಸ್ಟರ್ ಕಥೆಯೊಳಗೆ ಪುರುಷತ್ವ, ಹಿಂಸೆ, ಕುಟುಂಬ, ಪ್ರೀತಿ, ಅಪರಾಧ ಮತ್ತು ಮನೋವ್ಯಥೆಯನ್ನು ಒಂದೇ ಜಗತ್ತಿನಲ್ಲಿ ಹಿಡಿಯಲು ಪ್ರಯತ್ನಿಸುತ್ತದೆ. ಕೆಲವು ಕಡೆ ಅದು ದೃಶ್ಯ ಮತ್ತು ಅಭಿನಯದ ಶಕ್ತಿಯಿಂದ ಗೆಲ್ಲುತ್ತದೆ; ಇನ್ನೂ ಕೆಲವು ಕಡೆ ಅತಿಯಾದ ಸದ್ದು, ಹಿಂಸೆ ಮತ್ತು ವಿವರಿಸುವ ಸಂಭಾಷಣೆಗಳ ಭಾರಕ್ಕೆ ಸಿಲುಕುತ್ತದೆ. ಮಹಿಳೆಯರನ್ನು ಅಲಂಕಾರವಾಗಿ ಇಡದ ಪ್ರಯತ್ನ ಸ್ಪಷ್ಟ. ಆದರೆ ಅವರ ಅನುಭವಗಳನ್ನು ಕಥೆಯ ಕೇಂದ್ರದ ಸಮಾನ ತೂಕದ ಭಾಗವನ್ನಾಗಿ ಮಾಡುವಲ್ಲಿ ಸಿನಿಮಾ ಹಿಂದೆ ಸರಿಯುತ್ತದೆ.

- Advertisement -

ಒಂದು ಸಿನಿಮಾದಲ್ಲಿ ಮಹಿಳೆಯರಿಗೆ ಮಾತು ಸಿಕ್ಕಿದೆ ಎಂದ ಮಾತ್ರಕ್ಕೆ ಅದು ಮಹಿಳಾ ದೃಷ್ಟಿಕೋನದ ಸಿನಿಮಾ ಆಗುವುದಿಲ್ಲ. ಅವರು ಏನು ಬಯಸುತ್ತಾರೆ, ಯಾವುದಕ್ಕೆ ಹೆದರುತ್ತಾರೆ, ಏನನ್ನು ಕಳೆದುಕೊಳ್ಳುತ್ತಾರೆ, ತಮ್ಮ ಬದುಕಿನ ಬಗ್ಗೆ ತಾವೇ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆಗಳನ್ನು ಕಥೆ ಎಷ್ಟು ಗಂಭೀರವಾಗಿ ಎದುರಿಸುತ್ತದೆ ಎಂಬುದರಲ್ಲೇ ಅದರ ಮಹತ್ವವಿದೆ. ಗೀತು ಮೋಹನ್‌ದಾಸ್ ಟಾಕ್ಸಿಕ್ ಅನ್ನು ‘ಮಹಿಳಾ ದೃಷ್ಟಿಕೋನದ ಗ್ಯಾಂಗ್‌ಸ್ಟರ್ ಸಿನಿಮಾ’ ಎಂದು ಹೇಳಿದ್ದರು. ಚಿತ್ರವನ್ನು ನೋಡಿದಾಗ ಆ ಮಾತು ಒಂದು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಸಿನಿಮಾ ಮುಗಿದ ಮೇಲೆ ಉಳಿದ ಪ್ರಶ್ನೆ—ಮಹಿಳೆಯರ ಧ್ವನಿ ಕೇಳಿಸಿತು; ಅವರದೇ ಕಥೆ ಎಲ್ಲಿದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ರಾಯ ಮತ್ತು ಟಿಕೆಟ್ ಎಂಬ ಎರಡು ಪಾತ್ರಗಳ ಮೂಲಕ ಸಾಗುವ ಟಾಕ್ಸಿಕ್ ಗ್ಯಾಂಗ್‌ಸ್ಟರ್ ಲೋಕವನ್ನು ಕಟ್ಟುತ್ತಲೇ ಒಬ್ಬ ಪುರುಷನ ಒಳಗಿನ ಸಂಘರ್ಷಗಳನ್ನು ಹುಡುಕುತ್ತದೆ. ದೊಡ್ಡ ಪ್ರಮಾಣದ ದೃಶ್ಯವೈಭವ, ಕಾಲಘಟ್ಟದ ಕಲಾ ವಿನ್ಯಾಸ, ವೇಷಭೂಷಣ, ಬೆಳಕು ಮತ್ತು ರಾಜೀವ್ ರವಿಯ ಛಾಯಾಗ್ರಹಣ ಚಿತ್ರಕ್ಕೆ ವಿಶಿಷ್ಟ ರೂಪ ಕೊಡುತ್ತವೆ. ಆದರೆ ಈ ವೈಭವಕ್ಕೆ ತಕ್ಕಷ್ಟು ಹಿಡಿತ ಚಿತ್ರಕಥೆಯಲ್ಲಿ ಕಾಣಿಸುವುದಿಲ್ಲ. ಅನೇಕ ಘಟನೆಗಳು, ಸಂಬಂಧಗಳು ಮತ್ತು ಉಪಕಥೆಗಳು ತೆರೆದುಕೊಳ್ಳುತ್ತವೆ; ಕೆಲವು ಭಾವನಾತ್ಮಕವಾಗಿ ಮುಗಿಯುವ ಮುನ್ನವೇ ಸಿನಿಮಾ ಮತ್ತೊಂದು ದಿಕ್ಕಿಗೆ ತಿರುಗುತ್ತದೆ. ಹೀಗಾಗಿ ಚಿತ್ರದ ಮಹತ್ವಾಕಾಂಕ್ಷೆ ದೊಡ್ಡದಾಗಿದ್ದರೂ ಅದರ ಒಳಸಂಯೋಜನೆ ಎಲ್ಲೆಡೆ ಗಟ್ಟಿಯಾಗಿಲ್ಲ.

ರಾಯನ ಪಾತ್ರವನ್ನು ಯಶ್ ಹೊರಗಿನ ಕ್ರೌರ್ಯ ಮತ್ತು ಒಳಗಿನ ಗಾಯಗಳ ನಡುವಿನ ಸಂಘರ್ಷವಾಗಿ ಹಿಡಿದಿಟ್ಟುಕೊಳ್ಳುತ್ತಾರೆ. ಅವರ ಅಭಿನಯದಲ್ಲಿ ಆ ದ್ವಂದ್ವವಿದೆ. ಆದರೆ ಪಾತ್ರದ ಮನೋಲೋಕವನ್ನು ಪ್ರೇಕ್ಷಕ ಅನುಭವಿಸುವುದಕ್ಕಿಂತ ಅದನ್ನು ಸಂಭಾಷಣೆಗಳ ಮೂಲಕ ವಿವರಿಸುವುದು ಚಿತ್ರಕ್ಕೆ ಹೆಚ್ಚು ಇಷ್ಟವಾಗುತ್ತದೆ. “ಮರ್ಯಾದೆಗೋಸ್ಕರ ಪ್ರಾಣ ಬಿಡೋದು ಓಕೆ. ಆದ್ರೆ, ಪ್ರಾಣ ಬಿಡೋಕೂ ಒಂದು ಮರ್ಯಾದೆ ಇರಬೇಕು” ಎನ್ನುವಂತಹ ಮಾತುಗಳು ಪಾತ್ರದ ಸ್ವಭಾವವನ್ನು ಕಟ್ಟುತ್ತವೆ. ಆದರೆ ಇಂಥ ಅತಿಯಾದ ಕಾವ್ಯಮಯ ಸಂಭಾಷಣೆಗಳು ಹೆಚ್ಚಾದಂತೆ ದೃಶ್ಯಗಳ ಸಹಜತೆ ಹಿಂದೆ ಸರಿಯುತ್ತದೆ. ಕೆಲವು ಸಂದರ್ಭಗಳಲ್ಲಿ ಪಾತ್ರಗಳು ಮಾತನಾಡುವುದಕ್ಕಿಂತ ಸಿನಿಮಾ ಅವರ ಪರವಾಗಿ ಮಾತನಾಡುತ್ತದೆ.

ಈ ಗುಣ ಮಹಿಳಾ ಪಾತ್ರಗಳಲ್ಲೂ ಕಾಣಿಸುತ್ತದೆ. ಗಂಗಾ, ನಾಡಿಯಾ, ರೆಬೆಕ್ಕಾ, ಮೆಲಿಸ್ಸಾ ಮತ್ತು ಎಲಿಜಬೆತ್—ಐವರೂ ರಾಯನ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಗಂಗಾ ಅವನ ನೈತಿಕತೆಯನ್ನು ಪ್ರಶ್ನಿಸುತ್ತಾಳೆ. ನಾಡಿಯಾ ಅವನ ಪ್ರೀತಿಯೊಳಗಿನ ಸ್ವಾಮ್ಯಭಾವವನ್ನು ಎದುರಿಸುತ್ತಾಳೆ. ರೆಬೆಕ್ಕಾ ಅವನ ಸ್ವಾರ್ಥ ಮತ್ತು ಪುರುಷತ್ವಕ್ಕೆ ಕನ್ನಡಿಯಾಗುತ್ತಾಳೆ. ಮೆಲಿಸ್ಸಾ ಅವನ ಹಿಂಸೆಯ ಚಕ್ರ ತನ್ನ ಮಗುವಿನ ಬದುಕಿಗೆ ಸಾಗದಂತೆ ತಡೆಯಲು ನಿಲ್ಲುತ್ತಾಳೆ. ಎಲಿಜಬೆತ್ ಸಂಬಂಧ ಮತ್ತು ತ್ಯಾಗದ ನಡುವೆ ಮಹಿಳೆಯ ಬದುಕು ಹೇಗೆ ಸಿಲುಕಿಕೊಳ್ಳುತ್ತದೆ ಎಂಬ ಪ್ರಶ್ನೆ ಎತ್ತುತ್ತಾಳೆ. ಈ ಪಾತ್ರಗಳ ಮೂಲಕ ಸಿನಿಮಾ ಮಹಿಳೆಯರನ್ನು ಕೇವಲ ಅಲಂಕಾರವಾಗಿ ಬಳಸಬಾರದು ಎಂಬ ಪ್ರಯತ್ನ ಮಾಡುತ್ತದೆ. ಆದರೆ ಅವರ ಬದುಕನ್ನು ಅವರದೇ ದೃಷ್ಟಿಯಿಂದ ವಿಸ್ತರಿಸುವ ಜಾಗ ಮಾತ್ರ ಸೀಮಿತವಾಗುತ್ತದೆ.

ಗಂಗಾ ಮತ್ತು ನಾಡಿಯಾ ನಡುವಿನ ಸಂಘರ್ಷದಲ್ಲಿ ಈ ವೈರುಧ್ಯ ಸೂಕ್ಷ್ಮವಾಗಿ ಕಾಣುತ್ತದೆ. “ಸ್ವಾಭಿಮಾನ ಇರೋ ಯಾವ ಹೆಣ್ಣು ಇನ್ನೊಂದು ಹೆಣ್ಣಿಗೆ ಸವತಿ ಆಗೋಕೆ ಇಷ್ಟ ಪಡಲ್ಲ” ಎನ್ನುವ ಗಂಗೆಯ ಮಾತು ಮಹಿಳಾ ಸ್ವಾಭಿಮಾನದ ಮಾತು. ಆದರೆ ಸಂಬಂಧದ ನೈತಿಕ ಹೊಣೆಗಾರಿಕೆ ಇಬ್ಬರು ಮಹಿಳೆಯರ ನಡುವಿನ ಪ್ರಶ್ನೆಯಾಗಿ ಬದಲಾಗುತ್ತದೆ. ಪುರುಷನ ಆಯ್ಕೆ ಮತ್ತು ಹೊಣೆಗಾರಿಕೆ ಹಿನ್ನೆಲೆಗೆ ಸರಿಯುತ್ತದೆ. ಪಿತೃಪ್ರಧಾನ ವ್ಯವಸ್ಥೆಯ ಒಂದು ವಿಚಿತ್ರ ತಂತ್ರವೇ ಇದು—ಪುರುಷನಿಂದ ಸೃಷ್ಟಿಯಾದ ಸಂಘರ್ಷದ ನೈತಿಕ ಹೊರೆ ಕೊನೆಗೆ ಮಹಿಳೆಯರ ಮೇಲೆಯೇ ಬೀಳುವುದು.

ನಾಡಿಯಾಗೆ ಸಿಗುವ ಕೆಲವು ಸಂಭಾಷಣೆಗಳು ಮಾತ್ರ ಚಿತ್ರದೊಳಗಿನ ಮತ್ತೊಂದು ಸಾಧ್ಯತೆಯನ್ನು ತೆರೆದುಕೊಡುತ್ತವೆ. “ಮುಂದಿನ ಸಲ ನನ್ನ ಮುಟ್ಟಿದಾಗ ನನ್ನನ್ನು ಸಂಭ್ರಮಿಸ್ತಿದಿಯಾ ಅನ್ನಿಸ್ಬೇಕು. ಆಕ್ರಮಿಸ್ತಿದಿಯಾ ಅಂತಲ್ಲ” ಎನ್ನುವ ಮಾತು ಸ್ಪರ್ಶ, ಸಮ್ಮತಿ ಮತ್ತು ಅಧಿಕಾರದ ನಡುವಿನ ಗಡಿಯನ್ನು ನಿಖರವಾಗಿ ಗುರುತಿಸುತ್ತದೆ. ಆದರೆ ಈ ಮಾತಿನ ಹಿಂದೆ ಇರುವ ನಾಡಿಯಾಳ ಅನುಭವವನ್ನು ಸಿನಿಮಾ ಇನ್ನಷ್ಟು ಆಳವಾಗಿ ಹುಡುಕುವುದಿಲ್ಲ. “ಮಿಂಚೊಂದು ಎದೆತುಂಬ ನಡೆದಾಡಿ ಮರೆಯಾದಂತೆ…” ಎಂಬ ಹಾಡು ನಾಡಿಯಾಳೆಡೆಗಿನ ರಾಯನ ಆಕರ್ಷಣೆಯನ್ನು ಕಟ್ಟುತ್ತದೆ. ಇಲ್ಲಿಯೂ ರಾಯ ನಾಡಿಯಾಳನ್ನು ಹೇಗೆ ನೋಡುತ್ತಾನೆ ಎಂಬುದು ಸ್ಪಷ್ಟವಾಗುತ್ತದೆ; ನಾಡಿಯಾ ರಾಯನನ್ನು ಹೇಗೆ ನೋಡುತ್ತಾಳೆ ಎಂಬುದು ಅಷ್ಟೇ ಆಳವಾಗಿ ಮೂಡುವುದಿಲ್ಲ.

Toxic 4

ಸರ್ಕಸ್ ದೃಶ್ಯವೂ ರಾಯನ ಪುರುಷಾಧಿಕಾರದ ಮನೋಭಾವದ ಮತ್ತೊಂದು ಮುಖವನ್ನು ತೆರೆದಿಡುತ್ತದೆ. ಆ ಸಂದರ್ಭದಲ್ಲಿ ರಾಯ ಮತ್ತು ನಾಡಿಯಾ ನಡುವಿನ ಪ್ರೇಮ ಇನ್ನೂ ಚಿಗುರಿರಲಿಲ್ಲ. ಆದರೂ ನಾಡಿಯಾ ತನ್ನ ಬದುಕನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ರಾಯ ನೀಡುವ ಸೂಚನೆಗಳು ಅವನೊಳಗಿನ ಹಕ್ಕುಮಾತನ್ನು ಎತ್ತಿ ತೋರಿಸುತ್ತವೆ. “ನೀನು ಸರ್ಕಸ್ಸಿನಲ್ಲಿ ಹೆಂಗಾದ್ರೂ ನೇತಾಡ್ಕೊ… ಇಲ್ಲೇ ಯಾವನಾದ್ರೂ ಸಿಕ್ರೆ ಮದ್ವೆ ಮಾಡ್ಕೊಂಡು ಮಕ್ಕಳನ್ನ ಮಾಡ್ಕೊ, ಮಕ್ಕಳು ಮಾತ್ರ ಬೆಣ್ಣೆ ಬೆಣ್ಣೆ ಥರ ಬೆಳ್ಳಗಿರ್ತವೆ…” ಎನ್ನುವ ಮಾತು ಕಥೆಯ ಸಂದರ್ಭದಲ್ಲೂ ಅಗತ್ಯಕ್ಕಿಂತ ಹೆಚ್ಚು ಅನಿಸಿದರೂ, ಅದರಾಚೆಗೆ ಅದು ಮಹಿಳೆಯ ಬದುಕಿನ ಆಯ್ಕೆಗಳ ಮೇಲೆಯೂ ಪುರುಷನಿಗೆ ಒಂದು ರೀತಿಯ ಅಧಿಕಾರವಿದೆ ಎಂಬ ಮನೋಭಾವವನ್ನು ಸೂಚಿಸುತ್ತದೆ. ಪ್ರೇಮದ ಸಂಬಂಧವೇ ಇನ್ನೂ ರೂಪುಗೊಳ್ಳದ ಸಂದರ್ಭದಲ್ಲಿ ಕೂಡ ನಾಡಿಯಾಳ ಬದುಕಿನ ದಿಕ್ಕನ್ನು ತಾನೇ ನಿರ್ಧರಿಸುವಂತೆ ರಾಯ ಮಾತನಾಡುವುದು ಅವನ ಅಧಿಕಾರದ ಮನಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ.

ರೆಬೆಕ್ಕಾ “ನಿನ್ನಂಥ ಸ್ವಾರ್ಥಿ ಯಾವತ್ತಾದರೂ ಪ್ರೀತಿಯಲ್ಲಿ ಬೀಳಬಹುದು ಅನಿಸುತ್ತಾ ನಿನಗೆ?” ಎಂದು ರಾಯನನ್ನೇ ಪ್ರಶ್ನಿಸುತ್ತಾಳೆ. “ನೀವು ಗಂಡಸ್ರ ಯೋಗ್ಯತೆನೆ ಇಷ್ಟು. ನಿಮ್ಮ ಮೆದುಳು ಯಾವಾಗ್ಲೂ ಸೊಂಟದಕೆಳಗೆಡೇನೆ ಇರೋದು ಬಿಡು” ಎಂದು ಪುರುಷತ್ವವನ್ನೇ ವ್ಯಂಗ್ಯಗೊಳಿಸುತ್ತಾಳೆ. ಆದರೆ ಅವಳ ನೋವು ಮತ್ತು ಸ್ವಂತ ಬಯಕೆಗಳಿಗೆ ಹೆಚ್ಚು ಜಾಗ ಸಿಗುವುದಿಲ್ಲ. ಮೆಲಿಸ್ಸಾ ಮಾತ್ರ ರಾಯನ ಹಿಂಸೆಯನ್ನು ಅನುಭವಿಸುವುದರಾಚೆಗೆ ಅದಕ್ಕೆ ಪ್ರತಿರೋಧದ ರೂಪ ಪಡೆಯುತ್ತಾಳೆ. “ನೀನು ಹೆಣೆದಿದ್ದ ಹಗ್ಗ ನಿನ್ನ ಕುತ್ತಿಗೆಗೆ ಬಂದಿದೆ. ಅದನ್ನ ನನ್ನ ಮಗನ ಕುತ್ತಿಗೆಗೆ ಸುತ್ಕೊಳೋಕೆ ನಾನು ಬಿಡಲ್ಲ” ಎನ್ನುವಾಗ, ತನ್ನ ಮಗುವಿನ ಬದುಕಿಗೆ ಹಿಂಸೆಯ ಚಕ್ರ ಸಾಗದಂತೆ ತಡೆಯಲು ಅವಳು ನಿಲ್ಲುತ್ತಾಳೆ. ಎಲಿಜಬೆತ್ “ಸಂಬಂಧಗಳಿಗೆ ನಾವು ಮಾಡೋ ತ್ಯಾಗ ನಮಗೆ ಹುಟ್ಟಿದಾಗಿಂದಲೇ ಬರೋ ರೋಗ” ಎನ್ನುವಾಗ, ಮಹಿಳೆಯರ ಬದುಕಿನಲ್ಲಿ ತ್ಯಾಗವನ್ನೇ ಸಹಜ ಗುಣವಾಗಿ ರೂಪಿಸಿರುವ ಮನಸ್ಥಿತಿಯನ್ನು ಬಿಚ್ಚಿಡುತ್ತಾಳೆ. ಈ ಮೂರು ಪಾತ್ರಗಳಲ್ಲೂ ಇನ್ನಷ್ಟು ಕಥೆ ಸಾಧ್ಯವಿತ್ತು; ಸಿನಿಮಾ ಆ ಸಾಧ್ಯತೆಯ ಬಾಗಿಲು ತೆರೆದು ಅದರೊಳಗೆ ಹೆಚ್ಚು ದೂರ ಹೋಗುವುದಿಲ್ಲ.

ಇಲ್ಲಿಯೇ ‘ಮಹಿಳಾ ದೃಷ್ಟಿಕೋನ’ದ ಪ್ರಶ್ನೆ ಮತ್ತೆ ಎದುರಾಗುತ್ತದೆ. ಮಹಿಳಾ ದೃಷ್ಟಿಕೋನ ಎಂದರೆ ಮಹಿಳೆಯರಿಗೆ ಜಾಗ ಕೊಡುವುದಷ್ಟೇ ಅಲ್ಲ; ಅವರ ಬದುಕನ್ನು ಅವರದೇ ಅನುಭವದೊಳಗಿಂದ ನೋಡುವುದು. ಅವರ ದೇಹ, ಬಯಕೆ, ಭಯ, ಸಂಬಂಧ, ಆಯ್ಕೆ ಮತ್ತು ಅದರ ಪರಿಣಾಮಗಳಿಗೆ ಕಥೆ ಎಷ್ಟು ಮಹತ್ವ ಕೊಡುತ್ತದೆ ಎಂಬುದೂ ಅದರ ಭಾಗ. ಟಾಕ್ಸಿಕ್‌ನಲ್ಲಿ ಮಹಿಳೆಯರು ರಾಯನನ್ನು ಪ್ರಶ್ನಿಸುತ್ತಾರೆ, ಅವನನ್ನು ಬದಲಿಸುತ್ತಾರೆ, ಅವನ ಕ್ರೌರ್ಯಕ್ಕೆ ಎದುರಾಗುತ್ತಾರೆ. ಆದರೆ ಅವರ ಅನುಭವಗಳೊಳಗೆ ಸಿನಿಮಾ ತಂಗುವ ಸಮಯ ಕಡಿಮೆ. ಹೀಗಾಗಿ ಮಹಿಳೆಯರ ಧ್ವನಿ ಕಥೆಯಲ್ಲಿ ಕೇಳಿಸುತ್ತದೆ; ಆದರೆ ಕಥನದ ದೃಷ್ಟಿ ಬಹುತೇಕ ರಾಯನ ಸುತ್ತಲೇ ಉಳಿಯುತ್ತದೆ.

ಚಿತ್ರದ ಕಲಾತ್ಮಕ ಪ್ರಯತ್ನವನ್ನು ಮಾತ್ರ ನಿರಾಕರಿಸಲಾಗದು. ರಾಜೀವ್ ರವಿಯ ಛಾಯಾಗ್ರಹಣ, ಕಾಲಘಟ್ಟದ ಕಲಾ ವಿನ್ಯಾಸ, ಬೆಳಕು-ನೆರಳಿನ ಬಳಕೆ ಮತ್ತು ಕೆಲವು ಸಾಹಸ ದೃಶ್ಯಗಳು ತಾಂತ್ರಿಕವಾಗಿ ಹೊಸತನ ತೋರಿಸುತ್ತವೆ. ಹೋರಾಟದ ದೃಶ್ಯಗಳಲ್ಲಿ ದೇಹಗಳ ಚಲನೆ ಮತ್ತು ಸ್ಥಳದ ಬಳಕೆ ಗಮನ ಸೆಳೆಯುತ್ತದೆ. ಆದರೆ ನಿರಂತರ ರಕ್ತಪಾತ, ಗುಂಡಿನ ಸದ್ದು ಮತ್ತು ಹೊಡೆದಾಟಗಳು ಒಂದು ಹಂತದ ನಂತರ ಹಿಂಸೆಯನ್ನು ಅನುಭವಿಸುವುದಕ್ಕಿಂತ ಪ್ರದರ್ಶನವಾಗಿ ಕಾಣುವಂತೆ ಮಾಡುತ್ತವೆ. ದೃಶ್ಯವನ್ನು ಹಿಡಿಯುವ ನಿರ್ದೇಶಕಿಯ ಹಿಡಿತವಿದೆ; ಆದರೆ ಅಬ್ಬರವನ್ನು ನಿಯಂತ್ರಿಸುವ ಹಿಡಿತ ಎಲ್ಲೆಡೆ ಇಲ್ಲ.

ಚಿತ್ರದ ಮತ್ತೊಂದು ಕೊರತೆ ಮೌನದ ಕೊರತೆ. ಇಷ್ಟು ಮನೋವೈಜ್ಞಾನಿಕ ಸಂಘರ್ಷವಿರುವ ಕಥೆಯಲ್ಲಿ ಒಂದು ನೋಟ, ಒಂದು ವಿರಾಮವೇ ಹಲವು ಸಂಭಾಷಣೆಗಳಿಗಿಂತ ಪರಿಣಾಮಕಾರಿಯಾಗಬಹುದಿತ್ತು. ಆದರೆ ಟಾಕ್ಸಿಕ್ ಸಂಭಾಷಣೆ, ಸಂಗೀತ, ಕಿರುಚಾಟ ಮತ್ತು ಹಿಂಸೆಯನ್ನೇ ಹೆಚ್ಚು ನಂಬುತ್ತದೆ. ವೇಗದ ಸಂಕಲನ ಕಥೆಯನ್ನು ಮುನ್ನಡೆಸಿದರೂ, ಪಾತ್ರಗಳ ನೋವಿನೊಂದಿಗೆ ಪ್ರೇಕ್ಷಕ ಒಂದು ಕ್ಷಣ ನಿಂತು ಉಸಿರಾಡುವ ಅವಕಾಶವನ್ನು ಕಸಿದುಕೊಳ್ಳುತ್ತದೆ. ಸಂಗೀತವೂ ಹಲವು ಸಂದರ್ಭಗಳಲ್ಲಿ ಭಾವನೆಯನ್ನು ಕಟ್ಟುವುದಕ್ಕಿಂತ ಅದನ್ನು ಒತ್ತಿ ಹೇಳುವ ಕೆಲಸ ಮಾಡುತ್ತದೆ.

ನಟನೆಯ ವಿಷಯದಲ್ಲಿ ಯಶ್ ರಾಯನ ದ್ವಂದ್ವವನ್ನು ಪರಿಣಾಮಕಾರಿಯಾಗಿ ಹೊತ್ತಿದ್ದಾರೆ. ನಯನತಾರಾ ಮತ್ತು ಕಿಯಾರಾ ತಮ್ಮ ಪಾತ್ರಗಳಿಗೆ ತೂಕ ಕೊಡುತ್ತಾರೆ. ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರ ಅಭಿನಯಕ್ಕಿಂತ ಅವರ ಪಾತ್ರಗಳಿಗೆ ಸಿಕ್ಕಿರುವ ಬರವಣಿಗೆಯ ಮಿತಿಯೇ ಹೆಚ್ಚು ಗೋಚರಿಸುತ್ತದೆ. ಹೀಗಾಗಿ ಇಲ್ಲಿ ಸಮಸ್ಯೆ ನಟಿಯರ ಸಾಮರ್ಥ್ಯದಲ್ಲಲ್ಲ; ಪಾತ್ರಗಳ ಸಾಧ್ಯತೆಯನ್ನು ಚಿತ್ರಕಥೆ ಎಷ್ಟು ದೂರ ಕೊಂಡೊಯ್ಯುತ್ತದೆ ಎಂಬುದರಲ್ಲಿದೆ.

ಟಾಕ್ಸಿಕ್ ಮಹತ್ವಾಕಾಂಕ್ಷೆಯ ಸಿನಿಮಾ. ಅದು ಗ್ಯಾಂಗ್‌ಸ್ಟರ್ ಕಥೆಯೊಳಗೆ ಪುರುಷತ್ವ, ಹಿಂಸೆ, ಕುಟುಂಬ, ಪ್ರೀತಿ, ಅಪರಾಧ ಮತ್ತು ಮನೋವ್ಯಥೆಯನ್ನು ಒಂದೇ ಜಗತ್ತಿನಲ್ಲಿ ಹಿಡಿಯಲು ಪ್ರಯತ್ನಿಸುತ್ತದೆ. ಕೆಲವು ಕಡೆ ಅದು ದೃಶ್ಯ ಮತ್ತು ಅಭಿನಯದ ಶಕ್ತಿಯಿಂದ ಗೆಲ್ಲುತ್ತದೆ; ಇನ್ನೂ ಕೆಲವು ಕಡೆ ಅತಿಯಾದ ಸದ್ದು, ಹಿಂಸೆ ಮತ್ತು ವಿವರಿಸುವ ಸಂಭಾಷಣೆಗಳ ಭಾರಕ್ಕೆ ಸಿಲುಕುತ್ತದೆ. ಮಹಿಳೆಯರನ್ನು ಅಲಂಕಾರವಾಗಿ ಇಡದ ಪ್ರಯತ್ನ ಸ್ಪಷ್ಟ. ಆದರೆ ಅವರ ಅನುಭವಗಳನ್ನು ಕಥೆಯ ಕೇಂದ್ರದ ಸಮಾನ ತೂಕದ ಭಾಗವನ್ನಾಗಿ ಮಾಡುವಲ್ಲಿ ಸಿನಿಮಾ ಹಿಂದೆ ಸರಿಯುತ್ತದೆ.

ಪ್ರೀತಿ ಎಂದರೆ ಮತ್ತೊಬ್ಬರ ಮೇಲೆ ಹಕ್ಕು ಸಾಧಿಸುವುದು ಅಲ್ಲ; ಮತ್ತೊಬ್ಬರ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವ ಸಾಮರ್ಥ್ಯವೂ ಹೌದು ಎಂಬ ಬೆಲ್ ಹೂಕ್ಸ್ ಅವರ ಚಿಂತನೆ ಇಲ್ಲಿ ನೆನಪಾಗುತ್ತದೆ. ರಾಯನಿಗೆ ಪ್ರೀತಿ ಬೇಕು. ಆದರೆ ಇನ್ನೊಬ್ಬರ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವಷ್ಟು ಪ್ರೀತಿ ಅವನಿಗೆ ಗೊತ್ತಿಲ್ಲ. ಬಹುಶಃ ಇದೇ ಚಿತ್ರದ ದೊಡ್ಡ ದುರಂತವೂ ಹೌದು.

ಇದನ್ನೂ ಓದಿ ಅವಳ ಕಣ್ಣೋಟ | ಗಂಟುಮೂಟೆ – ಪ್ರೀತಿಯ ನಂತರ ಉಳಿಯುವ ಮೀರಾ

ಇಷ್ಟು ಅಬ್ಬರ, ಇಷ್ಟು ಹಿಂಸೆ, ಇಷ್ಟು ದೊಡ್ಡ ಮಾತುಗಳ ನಡುವೆ ಸಿನಿಮಾ ಮುಗಿದ ಮೇಲೆ ನನಗೆ ರಾಯನ ಸಂಭಾಷಣೆಗಳಿಗಿಂತ ಆ ಮಹಿಳೆಯರು ಹೇಳದೆ ಉಳಿಸಿದ ಮಾತುಗಳೇ ಹೆಚ್ಚು ನೆನಪಾಗುತ್ತವೆ. ಆ ಮಾತುಗಳಿಗೆ ಇನ್ನಷ್ಟು ಜಾಗ ಸಿಕ್ಕಿದ್ದರೆ, ಅವರ ಬದುಕು ರಾಯನ ಬದುಕಿನ ನೆರಳಿನಿಂದ ಹೊರಬಂದು ತನ್ನದೇ ಬೆಳಕಿನಲ್ಲಿ ಕಾಣಿಸಿಕೊಂಡಿದ್ದರೆ, ಟಾಕ್ಸಿಕ್ ತನ್ನ ‘ಮಹಿಳಾ ದೃಷ್ಟಿಕೋನ’ದ ಮಾತಿಗೆ ಇನ್ನಷ್ಟು ಹತ್ತಿರವಾಗಬಹುದಿತ್ತು.

ಮಹಿಳೆಯನ್ನು ನೋಡುವುದು ಬೇರೆ; ಮಹಿಳೆಯ ಕಣ್ಣಿನಿಂದ ನೋಡುವುದು ಬೇರೆ. ಟಾಕ್ಸಿಕ್ ಮೊದಲನೆಯದನ್ನು ಸಾಕಷ್ಟು ಮಾಡುತ್ತದೆ. ಎರಡನೆಯದಕ್ಕೆ ಹತ್ತಿರ ಬರುತ್ತದೆ. ಆದರೆ ಅಲ್ಲೇ ನಿಂತುಬಿಡುತ್ತದೆ.

Rukmini
ರುಕ್ಮಿಣಿ ನಾಗಣ್ಣವರ
+ posts

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರುಕ್ಮಿಣಿ ನಾಗಣ್ಣವರ
ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...