ತಾಂತ್ರಿಕವಾಗಿಯೂ ಸಿನಿಮಾ ಗಮನ ಸೆಳೆಯುತ್ತದೆ. ಸೌಮಿಕ್ ಮುಖರ್ಜಿ ಅವರ ಛಾಯಾಗ್ರಹಣ ಮನೆಯೊಳಗಿನ ಸಾಮಾನ್ಯ ವಾತಾವರಣ, ನಗರದ ಬದುಕು ಮತ್ತು ಪಾತ್ರಗಳ ನಡುವಿನ ಭಾವನಾತ್ಮಕ ಅಂತರವನ್ನು ಚೆನ್ನಾಗಿ ಹಿಡಿದಿಟ್ಟಿದೆ. ದೃಶ್ಯಗಳಲ್ಲಿ ಅನಗತ್ಯ ಅಬ್ಬರವಿಲ್ಲ. ಯಶಾ ರಾಮಚಂದಾನಿ ಅವರ ಸಂಕಲನ ಕೆಲವು ಕಡೆ ಇನ್ನಷ್ಟು ಬಿಗಿಯಾಗಿರಬಹುದಿತ್ತು. ಸುಮಾರು ಎರಡು ಗಂಟೆ ಇಪ್ಪತ್ತೆರಡು ನಿಮಿಷಗಳ ಅವಧಿಯ ಸಿನಿಮಾ ಕೆಲವು ಸನ್ನಿವೇಶಗಳಲ್ಲಿ ನಿಧಾನವಾಗಿ ಸಾಗುತ್ತದೆ. ಅನುಭವ್ ಸಿನ್ಹಾ ಅವರ ನಿರ್ದೇಶನದಲ್ಲಿ ಸಾಮಾಜಿಕ ವಿಚಾರವನ್ನು ಮನಮುಟ್ಟುವಂತೆ ಹೇಳುವ ಪ್ರಯತ್ನವಿದೆ.
ಸಂಬಂಧವೊಂದರಲ್ಲಿ ಸಂಭವಿಸುವ ಕೆಲವು ಘಟನೆಗಳು ಹೊರನೋಟಕ್ಕೆ ಕ್ಷಣಿಕವೆನಿಸಬಹುದು. ಆದರೆ ಅವು ಆ ಸಂಬಂಧದೊಳಗಿನ ನಂಬಿಕೆ, ಪ್ರೀತಿ ಮತ್ತು ಗೌರವದ ನೆಲೆಗಳನ್ನೇ ಪ್ರಶ್ನಿಸಬಹುದು. ಒಂದು ಕ್ಷಣದ ಕೋಪದಲ್ಲಿ ಬೀಳುವ ಏಟು, ವರ್ಷಗಳಿಂದ ಕಟ್ಟಿಕೊಂಡು ಬಂದ ಸಂಬಂಧದ ಮೇಲಿನ ನಂಬಿಕೆಯನ್ನೇ ಅಲುಗಾಡಿಸಬಹುದು. ಪ್ರೀತಿಯಿಂದ ಬದುಕುತ್ತಿದ್ದ ಬದುಕಿನಲ್ಲಿ ತನ್ನ ಸ್ವಾಭಿಮಾನಕ್ಕೆ ಬೆಲೆಯೇ ಇಲ್ಲ ಎಂಬ ಅರಿವು ಮೂಡಿಸಬಹುದು. ಇಂತಹ ಒಂದು ಘಟನೆಯನ್ನು ಇಟ್ಟುಕೊಂಡು ಮದುವೆ, ಪ್ರೀತಿ, ಹೊಂದಾಣಿಕೆ ಮತ್ತು ಮಹಿಳೆಯ ಸ್ವಾಭಿಮಾನದ ಕುರಿತು ಗಂಭೀರವಾಗಿ ಚರ್ಚಿಸುವ ಸಿನಿಮಾ ‘ತಪ್ಪಡ್’.
2020ರಲ್ಲಿ ಬಿಡುಗಡೆಯಾದ ಅನುಭವ್ ಸಿನ್ಹಾ ನಿರ್ದೇಶನದ ಹಿಂದಿ ಸಿನಿಮಾ ‘ತಪ್ಪಡ್’. ತಾಪ್ಸಿ ಪನ್ನು ಮತ್ತು ಪಾವೈಲ್ ಗುಲಾಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಮಾನ್ಯವಾಗಿ ಮದುವೆ ಮತ್ತು ಸಂಸಾರದ ಕಥೆಗಳಲ್ಲಿ ಪ್ರೀತಿ, ತ್ಯಾಗ, ಹೊಂದಾಣಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದರೆ ಈ ಸಿನಿಮಾ ಸಂಬಂಧದಲ್ಲಿ ಮಹಿಳೆಯ ಗೌರವ ಮತ್ತು ಸ್ವಾಭಿಮಾನಕ್ಕೆ ಇರಬೇಕಾದ ಸ್ಥಾನವನ್ನು ಮುನ್ನೆಲೆಗೆ ತರುತ್ತದೆ.
ಅಮೃತಾ ಮತ್ತು ವಿಕ್ರಮ್ ದೆಹಲಿಯಲ್ಲಿ ವಾಸಿಸುವ ದಂಪತಿ. ಅವರದು ಹೊರನೋಟಕ್ಕೆ ಸುಂದರವಾದ ಸಂಸಾರ. ವಿಕ್ರಮ್ ಕೆಲಸಕ್ಕೆ ಹೋಗುತ್ತಾನೆ. ಅಮೃತಾ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾಳೆ. ಅತ್ತೆಯ ಆರೈಕೆ, ಅಡುಗೆ, ಮನೆ ನಿರ್ವಹಣೆ ಹೀಗೆ ಅವಳ ದಿನಚರಿ ಸಾಗುತ್ತದೆ. ಗಂಡನ ಕೆಲಸದ ಯಶಸ್ಸಿನಲ್ಲಿ ತನ್ನ ಸಂತೋಷವನ್ನು ಕಾಣುವ ಅಮೃತಾ, ತನ್ನ ವೈಯಕ್ತಿಕ ಆಸೆಗಳನ್ನು ಹಿಂದೆ ಸರಿಸಿದ್ದಾಳೆ. ನೃತ್ಯದಲ್ಲಿ ಆಸಕ್ತಿ ಹೊಂದಿರುವ ಅವಳಿಗೆ ತನ್ನದೇ ಆದ ಕನಸುಗಳಿವೆ. ಆದರೆ ಮದುವೆಯ ನಂತರ ಅವುಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿರುವುದಿಲ್ಲ.
ವಿಕ್ರಮ್ಗೆ ಲಂಡನ್ನ ಕಚೇರಿಯಲ್ಲಿ ಉನ್ನತ ಹುದ್ದೆ ಸಿಗುವ ಸಂಭ್ರಮದಲ್ಲಿ ಮನೆಯಲ್ಲಿ ಪಾರ್ಟಿ ಏರ್ಪಡಿಸಲಾಗುತ್ತದೆ. ಆದರೆ ಆ ಹುದ್ದೆಯೊಂದಿಗೆ ಮತ್ತೊಬ್ಬ ಹಿರಿಯ ಅಧಿಕಾರಿಯ ಅಡಿಯಲ್ಲಿ ಕೆಲಸ ಮಾಡಬೇಕೆಂಬ ವಿಚಾರ ಅವನಿಗೆ ನಿರಾಶೆ ಉಂಟುಮಾಡುತ್ತದೆ. ಈ ವಿಚಾರವಾಗಿ ಪಾರ್ಟಿಯಲ್ಲಿ ತನ್ನ ಮೇಲಧಿಕಾರಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸುವ ಅಮೃತಾಳ ಕೆನ್ನೆಗೆ ಎಲ್ಲರ ಎದುರಲ್ಲೇ ಹೊಡೆಯುತ್ತಾನೆ. ಅಲ್ಲಿಯವರೆಗೆ ಸುಂದರವಾಗಿ ಕಾಣುತ್ತಿದ್ದ ಸಂಸಾರದ ಮತ್ತೊಂದು ಮುಖ ಅಮೃತಾಳಿಗೆ ಕಾಣಿಸುತ್ತದೆ.
ವಿಕ್ರಮ್ ಆರಂಭದಲ್ಲಿ ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಂತರ ಅಮೃತಾಳನ್ನು ಸಮಾಧಾನಪಡಿಸಲು ಮುಂದಾಗುತ್ತಾನೆ. ಕುಟುಂಬದವರೂ ಅದನ್ನು ಮರೆತುಬಿಡುವಂತೆ ಹೇಳುತ್ತಾರೆ. ಕೋಪದಲ್ಲಿ ಒಮ್ಮೆ ಹೊಡೆದಿದ್ದಾನೆ, ಅದಕ್ಕೇ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕೇ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ ಅಮೃತಾಳಿಗೆ ಅದು ಕೇವಲ ಒಂದು ಹೊಡೆತವಾಗಿರುವುದಿಲ್ಲ. ತನ್ನನ್ನು ಪ್ರೀತಿಸುತ್ತಾನೆ ಎಂದು ನಂಬಿದ್ದ ವ್ಯಕ್ತಿ ಎಲ್ಲರ ಎದುರು ತನ್ನ ಮೇಲೆ ಕೈ ಎತ್ತಿದ್ದಾನೆ ಎಂಬ ನೋವು ಅವಳನ್ನು ಕಾಡುತ್ತದೆ. ಆ ಘಟನೆಯ ನಂತರ ಗಂಡನಿಂದ ಪ್ರತ್ಯೇಕವಾಗಿ ಬದುಕಲು ನಿರ್ಧರಿಸುತ್ತಾಳೆ. ವಿಚ್ಛೇದನಕ್ಕಾಗಿ ಕಾನೂನು ಹೋರಾಟವನ್ನೂ ಆರಂಭಿಸುತ್ತಾಳೆ.
ಇಲ್ಲಿಂದ ಸಿನಿಮಾ ಕೇವಲ ಗಂಡ-ಹೆಂಡತಿಯ ನಡುವಿನ ಜಗಳದ ಕಥೆಯಾಗಿ ಉಳಿಯುವುದಿಲ್ಲ. ಅಮೃತಾಳ ನಿರ್ಧಾರವನ್ನು ಸುತ್ತಲಿನವರು ನೋಡುವ ರೀತಿಯ ಮೂಲಕ ಸಿನಿಮಾ ಸಮಾಜದ ಮನಸ್ಥಿತಿಯನ್ನು ತೆರೆದಿಡುತ್ತದೆ. ಅಮೃತಾಳ ತಾಯಿ ಸಂಸಾರದಲ್ಲಿ ಇಂತಹ ಘಟನೆಗಳು ಸಹಜ ಎಂಬ ಮನೋಭಾವ ಹೊಂದಿದ್ದರೆ, ತಂದೆ ಅವಳ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅತ್ತೆಯೂ ಆರಂಭದಲ್ಲಿ ಮಗನ ಪರ ನಿಲ್ಲುತ್ತಾರೆ. ಆದರೆ ತಮ್ಮ ಬದುಕಿನ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ ಸಂಬಂಧಗಳಲ್ಲಿನ ಅಸಮಾನತೆಯನ್ನು ಅರ್ಥಮಾಡಿಕೊಳ್ಳುವ ಹಂತಕ್ಕೆ ಬರುತ್ತಾರೆ.
ವಿಶೇಷವಾಗಿ ಅಮೃತಾ ತನ್ನ ತಾಯಿಯೊಂದಿಗೆ ಮಾತನಾಡುವ ಸಂದರ್ಭಗಳು ಗಮನ ಸೆಳೆಯುತ್ತವೆ. ತಾಯಿ ತನ್ನ ಬದುಕಿನಲ್ಲಿ ಅನುಭವಿಸಿದ ಹೊಂದಾಣಿಕೆಗಳನ್ನೇ ಮಗಳ ಬದುಕಿಗೂ ಸಹಜವೆಂದು ಭಾವಿಸುತ್ತಾಳೆ. ಇಲ್ಲಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗುವ ಪಿತೃಪ್ರಧಾನ ಮೌಲ್ಯಗಳನ್ನು ಸಿನಿಮಾ ಸೂಕ್ಷ್ಮವಾಗಿ ತೋರಿಸುತ್ತದೆ. ಮಹಿಳೆಯರು ತಮ್ಮ ಮೇಲಿನ ಅನ್ಯಾಯವನ್ನು ಸಹಿಸಿಕೊಳ್ಳುವುದನ್ನೇ ಸಂಸಾರದ ಭಾಗವೆಂದು ಒಪ್ಪಿಕೊಂಡಿರುವ ಮನಸ್ಥಿತಿ ಎಷ್ಟು ಆಳವಾಗಿ ಬೇರೂರಿದೆ ಎಂಬುದು ಇಲ್ಲಿ ತಿಳಿಯುತ್ತದೆ.

ಅಮೃತಾಳ ಮನೆಯ ಕೆಲಸದಾಕೆ ಸುನೀತಾಳ ಬದುಕಿನಲ್ಲಿಯೂ ಕೌಟುಂಬಿಕ ಹಿಂಸೆಯಿದೆ. ಕೌಟುಂಬಿಕ ಹಿಂಸೆಗೆ ಒಳಗಾಗುವ ಆಕೆಯ ಬದುಕು ಅಮೃತಾಳ ಬದುಕಿಗಿಂತ ಭಿನ್ನವಾದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಪರಿಚಯಿಸುತ್ತದೆ. ತನ್ನ ಮೇಲೆ ನಡೆಯುವ ಹಿಂಸೆಯನ್ನು ಸಹಿಸಿಕೊಳ್ಳುವುದೇ ಅನಿವಾರ್ಯ ಎಂದುಕೊಂಡಿರುವ ಸುನೀತಾಳ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ವರ್ಗದ ಗಡಿಗಳನ್ನು ಮೀರಿ ಬೇರೆ ಬೇರೆ ರೂಪಗಳಲ್ಲಿ ಮುಂದುವರಿಯುವುದನ್ನು ಸಿನಿಮಾ ತೋರಿಸುತ್ತದೆ. ಅಮೃತಾಳಿಗೆ ಪ್ರತ್ಯೇಕವಾಗಿ ಬದುಕುವ ಆಯ್ಕೆ ಮತ್ತು ಆರ್ಥಿಕ ಸ್ವಾತಂತ್ರ್ಯದ ಅವಕಾಶವಿದ್ದರೆ, ಸುನೀತೆಯ ಮುಂದೆ ಅಂತಹ ಆಯ್ಕೆಗಳು ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ಒಂದೇ ರೀತಿಯ ಹಿಂಸೆಯನ್ನು ಎದುರಿಸುವ ಮಹಿಳೆಯರಿಗೂ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಆಧಾರದಲ್ಲಿ ಅದರಿಂದ ಹೊರಬರುವ ಅವಕಾಶಗಳು ಭಿನ್ನವಾಗಿರುತ್ತವೆ. ಈ ವ್ಯತ್ಯಾಸವನ್ನು ಇನ್ನಷ್ಟು ಆಳವಾಗಿ ಚಿತ್ರಿಸಬಹುದಿತ್ತು.
ವಿಕ್ರಮ್ ಪಾತ್ರವನ್ನು ಗಮನಿಸಿದಾಗ ಅವನನ್ನು ಕೇವಲ ಕೆಟ್ಟ ವ್ಯಕ್ತಿಯೆಂದು ತಳ್ಳಿಹಾಕಲು ಸಾಧ್ಯವಾಗುವುದಿಲ್ಲ. ಅಮೃತಾಳನ್ನು ಪ್ರೀತಿಸುತ್ತೇನೆ ಎಂದುಕೊಳ್ಳುವ, ಕುಟುಂಬವನ್ನು ನೋಡಿಕೊಳ್ಳುತ್ತೇನೆ ಎಂದು ಭಾವಿಸುವ ವ್ಯಕ್ತಿಯೇ ತನ್ನ ಕೋಪ ಮತ್ತು ಅಹಂಕಾರದ ಎದುರು ಅವಳ ಗೌರವವನ್ನು ಮರೆತುಬಿಡುತ್ತಾನೆ. ತನ್ನ ತಪ್ಪನ್ನು ಒಂದು ಕ್ಷಣದ ಕೋಪವೆಂದು ಸಮರ್ಥಿಸಿಕೊಳ್ಳುವ ಅವನ ಮನಸ್ಥಿತಿ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಕಾಣುವ ಪುರುಷಪ್ರಧಾನ ಧೋರಣೆಯ ಪ್ರತಿಬಿಂಬವಾಗಿದೆ. ಹೆಂಡತಿಯ ಮೇಲೆ ಕೈ ಎತ್ತುವುದನ್ನು ತನ್ನ ಅಧಿಕಾರವೆಂದು ಭಾವಿಸುವ ಮನಸ್ಥಿತಿ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಈ ಪಾತ್ರದ ಮೂಲಕ ಅರ್ಥಮಾಡಿಕೊಳ್ಳಬಹುದು.
ಅಮೃತಾಳ ಸುತ್ತಲಿನ ಇತರ ಮಹಿಳಾ ಪಾತ್ರಗಳೂ ಕಥೆಗೆ ವಿಭಿನ್ನ ಆಯಾಮ ನೀಡುತ್ತವೆ. ನೆರೆಮನೆಯ ಶಿವಾನಿ ತನ್ನ ವೈವಾಹಿಕ ಬದುಕಿನ ಸಮಸ್ಯೆಗಳ ನಡುವೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ. ವೃತ್ತಿಜೀವನ, ಕುಟುಂಬ ಮತ್ತು ವೈಯಕ್ತಿಕ ಆಸೆಗಳ ನಡುವೆ ಮಹಿಳೆಯರು ಎದುರಿಸುವ ಒತ್ತಡಗಳನ್ನೂ ಸಿನಿಮಾ ಮುಂದಿಡುತ್ತದೆ. ಎಲ್ಲ ಮಹಿಳೆಯರ ಬದುಕು ಒಂದೇ ರೀತಿಯದ್ದಲ್ಲ. ಆದರೆ ಅವರ ಸಮಸ್ಯೆಗಳ ಹಿಂದೆ ಇರುವ ಸಾಮಾಜಿಕ ವ್ಯವಸ್ಥೆಯಲ್ಲಿ ಹಲವು ಸಾಮ್ಯತೆಗಳಿವೆ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ.
ಅಮೃತಾಳ ಪಾತ್ರದಲ್ಲಿ ತಾಪ್ಸಿ ಪನ್ನು ಅತ್ಯಂತ ಸಹಜವಾಗಿ ನಟಿಸಿದ್ದಾರೆ. ವಿಶೇಷವಾಗಿ ಪಾರ್ಟಿಯ ಘಟನೆಯ ನಂತರ ಅವರ ಮುಖದಲ್ಲಿ ಕಾಣುವ ಆಘಾತ, ಗೊಂದಲ ಮತ್ತು ನೋವು ಗಮನ ಸೆಳೆಯುತ್ತದೆ. ಹೆಚ್ಚು ಸಂಭಾಷಣೆಗಳಿಲ್ಲದೆ ಮೌನದ ಮೂಲಕವೇ ಮನಸ್ಸಿನ ತಳಮಳವನ್ನು ವ್ಯಕ್ತಪಡಿಸುತ್ತಾರೆ. ತನ್ನ ನಿರ್ಧಾರದಲ್ಲಿ ನಿಧಾನವಾಗಿ ಗಟ್ಟಿಯಾಗುವ ಮಹಿಳೆಯಾಗಿ ಪಾತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ವಿಕ್ರಮ್ ಪಾತ್ರದಲ್ಲಿ ಪಾವೈಲ್ ಗುಲಾಟಿ ಕೂಡ ಉತ್ತಮ ಅಭಿನಯ ನೀಡಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದ, ಹೆಂಡತಿಯ ನಿರ್ಧಾರವನ್ನು ಅರ್ಥಮಾಡಿಕೊಳ್ಳಲಾಗದ ಪುರುಷನ ಮನಸ್ಥಿತಿಯನ್ನು ಸಹಜವಾಗಿ ತೋರಿಸಿದ್ದಾರೆ.
ಅಮೃತಾಳ ತಂದೆಯ ಪಾತ್ರದಲ್ಲಿ ಕುಮುದ್ ಮಿಶ್ರಾ ಮತ್ತು ತಾಯಿಯ ಪಾತ್ರದಲ್ಲಿ ರತ್ನಾ ಪಾಠಕ್ ಷಾ ಗಮನ ಸೆಳೆಯುತ್ತಾರೆ. ಅತ್ತೆಯ ಪಾತ್ರದಲ್ಲಿ ತನ್ವಿ ಆಜ್ಮಿ ತಮ್ಮ ಅಭಿನಯದಿಂದ ಪಾತ್ರಕ್ಕೆ ಆಳ ನೀಡಿದ್ದಾರೆ. ಮನೆಯ ಕೆಲಸದಾಕೆ ಸುನೀತೆಯ ಪಾತ್ರದಲ್ಲಿ ಗೀತಿಕಾ ವಿದ್ಯಾ ಓಹ್ಲ್ಯಾನ್ ಸಹಜವಾಗಿ ನಟಿಸಿದ್ದಾರೆ. ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ.
ತಾಂತ್ರಿಕವಾಗಿಯೂ ಸಿನಿಮಾ ಗಮನ ಸೆಳೆಯುತ್ತದೆ. ಸೌಮಿಕ್ ಮುಖರ್ಜಿ ಅವರ ಛಾಯಾಗ್ರಹಣ ಮನೆಯೊಳಗಿನ ಸಾಮಾನ್ಯ ವಾತಾವರಣ, ನಗರದ ಬದುಕು ಮತ್ತು ಪಾತ್ರಗಳ ನಡುವಿನ ಭಾವನಾತ್ಮಕ ಅಂತರವನ್ನು ಚೆನ್ನಾಗಿ ಹಿಡಿದಿಟ್ಟಿದೆ. ದೃಶ್ಯಗಳಲ್ಲಿ ಅನಗತ್ಯ ಅಬ್ಬರವಿಲ್ಲ. ಯಶಾ ರಾಮಚಂದಾನಿ ಅವರ ಸಂಕಲನ ಕೆಲವು ಕಡೆ ಇನ್ನಷ್ಟು ಬಿಗಿಯಾಗಿರಬಹುದಿತ್ತು. ಸುಮಾರು ಎರಡು ಗಂಟೆ ಇಪ್ಪತ್ತೆರಡು ನಿಮಿಷಗಳ ಅವಧಿಯ ಸಿನಿಮಾ ಕೆಲವು ಸನ್ನಿವೇಶಗಳಲ್ಲಿ ನಿಧಾನವಾಗಿ ಸಾಗುತ್ತದೆ. ಅನುಭವ್ ಸಿನ್ಹಾ ಅವರ ನಿರ್ದೇಶನದಲ್ಲಿ ಸಾಮಾಜಿಕ ವಿಚಾರವನ್ನು ಮನಮುಟ್ಟುವಂತೆ ಹೇಳುವ ಪ್ರಯತ್ನವಿದೆ. ಆದರೆ ಕೆಲವೆಡೆ ಸಂಭಾಷಣೆಗಳ ಮೂಲಕವೇ ಎಲ್ಲವನ್ನೂ ವಿವರಿಸುವ ಧಾಟಿ ಕಾಣಿಸುತ್ತದೆ. ಪ್ರೇಕ್ಷಕರೇ ಅರ್ಥಮಾಡಿಕೊಳ್ಳಲು ಬಿಡಬಹುದಾಗಿದ್ದ ಕೆಲವು ಸಂಗತಿಗಳನ್ನು ನಿರ್ದೇಶಕರು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ.
ಚಿತ್ರದ ಹಾಡುಗಳ ಪೈಕಿ ‘ಏಕ್ ತುಕ್ಡಾ ಧೂಪ್’ ವಿಶೇಷವಾಗಿ ಗಮನ ಸೆಳೆಯುತ್ತದೆ. ರಾಘವ್ ಚೈತನ್ಯ ಹಾಡಿರುವ ಈ ಗೀತೆ ಅಮೃತಾಳ ಒಳಗಿನ ಭಾವನೆಗಳಿಗೆ ಹೊಂದಿಕೊಳ್ಳುತ್ತದೆ. ‘ಹಾಯೋ ರಬ್ಬಾ’ ಹಾಡನ್ನು ರೇಷ್ಮಾ ಅವರ ಗಾಯನದಲ್ಲಿ ಜನಪ್ರಿಯವಾಗಿದ್ದ ಮೂಲಗೀತೆಯ ಮರುಸಂಯೋಜಿತ ರೂಪದಲ್ಲಿ ಸುವರ್ಣಾ ತಿವಾರಿ ಹಾಡಿದ್ದಾರೆ. ‘ಡ್ಯಾನ್ಸಿಂಗ್ ಇನ್ ದ ಸನ್’ ಹಾಡನ್ನು ಶಾರ್ವಿ ಯಾದವ್ ಹಾಡಿದ್ದಾರೆ. ಈ ಹಾಡುಗಳ ಸಾಹಿತ್ಯವನ್ನು ಶಕೀಲ್ ಅಜ್ಮಿ ರಚಿಸಿದ್ದಾರೆ. ಹಾಡುಗಳು ಕೇವಲ ಮನರಂಜನೆಗಾಗಿ ಸೇರಿಸಿದಂತಿಲ್ಲ. ಅಮೃತಾಳ ಭಾವನಾತ್ಮಕ ಸ್ಥಿತಿಗೆ ಮತ್ತು ಅವಳ ಬದುಕಿನ ಕೆಲವು ಕ್ಷಣಗಳಿಗೆ ಪೂರಕವಾಗಿವೆ. ಅನುರಾಗ್ ಸೈಕಿಯಾ ಅವರ ಸಂಗೀತ ಮತ್ತು ಮಂಗೇಶ್ ಧಕ್ಡೆ ಅವರ ಹಿನ್ನೆಲೆ ಸಂಗೀತ ಚಿತ್ರದ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ವಿಶೇಷವಾಗಿ ಹಿನ್ನೆಲೆ ಸಂಗೀತ ಕೆಲವು ದೃಶ್ಯಗಳ ಭಾವನಾತ್ಮಕ ಪರಿಣಾಮವನ್ನು ಹೆಚ್ಚಿಸುತ್ತದೆ.
ಮಹಿಳೆಯರ ಬದುಕು, ವೈವಾಹಿಕ ಸಂಬಂಧಗಳಲ್ಲಿನ ಅಸಮಾನತೆ ಮತ್ತು ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರಯತ್ನಗಳು ಭಾರತೀಯ ಸಿನಿಮಾಗಳಲ್ಲಿ ಹಿಂದಿನಿಂದಲೂ ನಡೆದಿವೆ. 2000ರಲ್ಲಿ ಬಿಡುಗಡೆಯಾದ ತಬು ಅಭಿನಯದ ‘ಅಸ್ತಿತ್ವ’ ಮಹಿಳೆಯ ವೈಯಕ್ತಿಕ ಅಸ್ತಿತ್ವ ಮತ್ತು ಸ್ವಾತಂತ್ರ್ಯದ ಪ್ರಶ್ನೆಯನ್ನು ಎತ್ತಿತ್ತು. 2001ರ ‘ದಮನ್’ ವೈವಾಹಿಕ ಬದುಕಿನಲ್ಲಿನ ದೈಹಿಕ ಮತ್ತು ಲೈಂಗಿಕ ಹಿಂಸೆಯ ಕರಾಳ ಮುಖವನ್ನು ತೆರೆದಿಟ್ಟಿತ್ತು. 2006ರ ‘ಪ್ರೊವೋಕ್ಡ್’ ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆಯ ನ್ಯಾಯದ ಹೋರಾಟವನ್ನು ಚಿತ್ರಿಸಿತ್ತು. ನಂತರ ಬಂದ ಮಲಯಾಳಂನ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಮನೆಯೊಳಗಿನ ಮಹಿಳೆಯರ ದುಡಿಮೆ, ಅಡುಗೆಮನೆಗೆ ಸೀಮಿತವಾಗುವ ಬದುಕು ಮತ್ತು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಡೆಯುವ ನಿಯಂತ್ರಣವನ್ನು ಪ್ರಶ್ನಿಸಿತು. ಇದರ ಹಿಂದಿ ರೂಪಾಂತರವಾದ ‘ಮಿಸೆಸ್’ ಕೂಡ ಇದೇ ವಿಚಾರವನ್ನು ಮುಂದುವರಿಸಿತು. 2022ರ ‘ಡಾರ್ಲಿಂಗ್ಸ್’ ಕೌಟುಂಬಿಕ ಹಿಂಸೆಯನ್ನು ವಿಭಿನ್ನ ನಿರೂಪಣೆಯ ಮೂಲಕ ಪ್ರೇಕ್ಷಕರ ಮುಂದಿಟ್ಟಿತು.
ಈ ಎಲ್ಲ ಸಿನಿಮಾಗಳ ಆಶಯ ಒಂದೇ ಆಗಿಲ್ಲ. ಆದರೆ ಮಹಿಳೆಯ ಬದುಕನ್ನು ಕೇವಲ ಮದುವೆ ಮತ್ತು ಕುಟುಂಬದ ಚೌಕಟ್ಟಿನಲ್ಲಿ ನೋಡುವ ಸಮಾಜದ ಮನಸ್ಥಿತಿಯನ್ನು ಪ್ರಶ್ನಿಸುವ ಸಾಮ್ಯತೆ ಇವುಗಳಲ್ಲಿದೆ. ಈ ಸಾಲಿನಲ್ಲಿ ‘ತಪ್ಪಡ್’ ಸಿನಿಮಾ ತನ್ನದೇ ಆದ ಸ್ಥಾನ ಪಡೆದುಕೊಳ್ಳುತ್ತದೆ. ವಿಶೇಷವಾಗಿ ದೊಡ್ಡ ಪ್ರಮಾಣದ ದೈಹಿಕ ಹಿಂಸೆ ಸಂಭವಿಸಿದಾಗ ಮಾತ್ರ ಅದನ್ನು ದೌರ್ಜನ್ಯವೆಂದು ಗುರುತಿಸುವ ನಮ್ಮ ಮನಸ್ಥಿತಿಗೆ ಸವಾಲು ಹಾಕುತ್ತದೆ. ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಒಂದು ಘಟನೆಯನ್ನೂ ಗಂಭೀರವಾಗಿ ಪರಿಗಣಿಸಬೇಕೆಂಬ ವಿಚಾರವನ್ನು ಮುಂದಿಡುತ್ತದೆ.
ಇದನ್ನೂ ಓದಿ ಅವಳ ಕಣ್ಣೋಟ | ‘ಮಾ ಬೆಹೆನ್’ – ಮಹಿಳೆಯರ ಬದುಕಿನ ಮೇಲೆ ಸಮಾಜದ ಕಾವಲು
ಸಿನಿಮಾದ ಕೆಲವು ಮಿತಿಗಳನ್ನೂ ಗಮನಿಸಬೇಕು. ಶಿವಾನಿಯ ಉಪಕಥೆಯೂ ಮುಖ್ಯ ಕಥೆಯೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಬೆಸೆದುಕೊಳ್ಳಬಹುದಿತ್ತು. ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳು ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳುವಂತೆ ಭಾಸವಾಗುತ್ತವೆ. ಚಿತ್ರದ ಅವಧಿಯನ್ನೂ ಸ್ವಲ್ಪ ಕಡಿಮೆ ಮಾಡಬಹುದಿತ್ತು. ಈ ಕಾರಣಗಳಿಂದ ಕೆಲವು ಕಡೆ ನಿರೂಪಣೆಯ ವೇಗ ಕುಂಠಿತವಾಗುತ್ತದೆ. ಇಷ್ಟೆಲ್ಲ ಮಿತಿಗಳಿದ್ದರೂ ಸಿನಿಮಾ ಎತ್ತುವ ಪ್ರಶ್ನೆಗಳ ಮಹತ್ವ ಕಡಿಮೆಯಾಗುವುದಿಲ್ಲ.
ಒಟ್ಟಿನಲ್ಲಿ ‘ತಪ್ಪಡ್’ ಮದುವೆಯ ಸಂಬಂಧದಲ್ಲಿ ಪ್ರೀತಿ ಮತ್ತು ಗೌರವಕ್ಕೆ ಇರಬೇಕಾದ ಸ್ಥಾನವನ್ನು ಚರ್ಚಿಸುವ ಸಿನಿಮಾ. ಹೊಂದಾಣಿಕೆ ಎಂದರೆ ಎಲ್ಲ ಅವಮಾನಗಳನ್ನೂ ಮೌನವಾಗಿ ಸಹಿಸಿಕೊಳ್ಳುವುದಲ್ಲ. ಕ್ಷಮೆ ಕೇಳುವುದಕ್ಕಿಂತ ಮಾಡಿದ ತಪ್ಪನ್ನು ಅರ್ಥಮಾಡಿಕೊಂಡು ಬದಲಾಗುವುದು ಮುಖ್ಯ. ಅಮೃತಾಳ ಕೆನ್ನೆಗೆ ಬಿದ್ದ ಏಟು ಕೆಲವೇ ಕ್ಷಣಗಳ ಘಟನೆ. ಆದರೆ ಅದರ ನಂತರ ಅವಳು ತೆಗೆದುಕೊಳ್ಳುವ ನಿರ್ಧಾರ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಪ್ರಯತ್ನ. ಪ್ರೀತಿಯ ಹೆಸರಿನಲ್ಲಿ ಅವಮಾನವನ್ನು ಒಪ್ಪಿಕೊಳ್ಳಬೇಕಿಲ್ಲ ಎಂಬುದನ್ನು ನೆನಪಿಸುವ ‘ತಪ್ಪಡ್’, ಸಂಬಂಧದಲ್ಲಿ ಗೌರವ ಎನ್ನುವುದು ಆಯ್ಕೆಯಲ್ಲ, ಅದು ಮೂಲಭೂತ ಅಗತ್ಯ ಎಂಬುದನ್ನು ಮನದಟ್ಟು ಮಾಡುತ್ತದೆ.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


