‘ನೇರು’ ದೌರ್ಜನ್ಯದ ಘಟನೆಯನ್ನು ಅತಿಯಾಗಿ ದೃಶ್ಯೀಕರಿಸುವುದಕ್ಕಿಂತ ಅದರ ನಂತರದ ಮಾನಸಿಕ ನೋವು ಮತ್ತು ನ್ಯಾಯಾಲಯದ ಹೋರಾಟದ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಇದು ಚಿತ್ರದ ಒಳ್ಳೆಯ ಅಂಶ. ಆದರೂ, ನ್ಯಾಯಾಲಯದಲ್ಲಿ ಸಾರಾ ತನ್ನ ಮೇಲೆ ನಡೆದ ಘಟನೆಯನ್ನು ಮತ್ತೆ ಮತ್ತೆ ವಿವರಿಸಬೇಕಾದ ಸಂದರ್ಭಗಳು ಆಕೆಯ ನೋವನ್ನು ಮತ್ತೊಮ್ಮೆ ಅನುಭವಿಸುವಂತೆ ಮಾಡುತ್ತವೆ.
ನ್ಯಾಯಾಲಯದಲ್ಲಿ ಸತ್ಯ ಹೇಳುವುದು ಅಷ್ಟು ಸುಲಭವೇ? ಅದರಲ್ಲೂ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಂಡು, ಅಪರಿಚಿತರ ಮುಂದೆ ಅದನ್ನು ವಿವರಿಸಿ, ತನ್ನ ಮಾತು ನಿಜವೆಂದು ಸಾಬೀತುಪಡಿಸಬೇಕಾದರೆ? ದೌರ್ಜನ್ಯಕ್ಕೊಳಗಾದ ಮಹಿಳೆಗೆ ನೋವಿನಿಂದ ಹೊರಬರುವುದಕ್ಕಿಂತಲೂ, ಆ ನೋವು ನಿಜವೆಂದು ಜಗತ್ತಿಗೆ ನಂಬಿಸುವುದೇ ದೊಡ್ಡ ಸವಾಲಾಗಿಬಿಟ್ಟರೆ? ‘ನೇರು’ ಸಿನಿಮಾ ಇಂತಹ ಕೆಲವು ಅಸಹಜವಾದರೂ ನಮ್ಮ ಸಮಾಜದಲ್ಲಿ ಸಹಜವೆಂಬಂತೆ ನಡೆಯುತ್ತಿರುವ ಸಂಗತಿಗಳತ್ತ ಗಮನ ಸೆಳೆಯುತ್ತದೆ.
ಜೀತು ಜೋಸೆಫ್ ನಿರ್ದೇಶನದ ಈ ಮಲಯಾಳಂ ಸಿನಿಮಾ ನ್ಯಾಯಕ್ಕಾಗಿ ಹೋರಾಡುವ ಸಾರಾ ಎಂಬ ದೃಷ್ಟಿ ವಿಕಲಚೇತನ ಯುವತಿಯ ಕಥೆ. ಸಾರಾ ಒಬ್ಬ ಪ್ರತಿಭಾವಂತ ಶಿಲ್ಪ ಕಲಾವಿದೆ. ಆಕೆಯ ಮೇಲೆ ಮನೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ದಾಳಿಕೋರನ ಮುಖವನ್ನು ನೋಡಲು ಸಾಧ್ಯವಾಗದಿದ್ದರೂ, ಸ್ಪರ್ಶದ ಮೂಲಕ ಆತನ ಮುಖದ ಲಕ್ಷಣಗಳನ್ನು ನೆನಪಿಟ್ಟುಕೊಂಡು ಮಣ್ಣಿನಲ್ಲಿ ಆತನ ಮುಖದ ಶಿಲ್ಪವನ್ನು ರೂಪಿಸುತ್ತಾಳೆ. ಅದೇ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗುತ್ತದೆ. ಆದರೆ, ಆರೋಪಿಯ ಕುಟುಂಬದ ಹಣ ಮತ್ತು ಪ್ರಭಾವದ ನಡುವೆ ಆಕೆಗೆ ನ್ಯಾಯ ಸಿಗುವ ಹಾದಿ ಸುಲಭವಾಗಿರುವುದಿಲ್ಲ. ನ್ಯಾಯಾಲಯದಲ್ಲಿ ತನ್ನ ಮಾತು ಸತ್ಯವೆಂದು ಸಾಬೀತುಪಡಿಸುವ ಹೋರಾಟವೇ ಚಿತ್ರದ ಮುಖ್ಯ ಕಥೆ. ಜೀತು ಜೋಸೆಫ್ ಅವರ ಹಿಂದಿನ ಚಿತ್ರಗಳಲ್ಲಿ ನ್ಯಾಯ ಮತ್ತು ಸತ್ಯದ ಪ್ರಶ್ನೆಗಳು ಹೆಚ್ಚಾಗಿ ಥ್ರಿಲ್ಲರ್ ರೂಪದಲ್ಲಿ ಬಂದಿದ್ದರೆ, ಇಲ್ಲಿ ಅವರು ಸಾರಾಳ ಮೇಲೆ ನಡೆದ ದೌರ್ಜನ್ಯಕ್ಕಿಂತ, ಅದರ ನಂತರ ಆಕೆ ಅನುಭವಿಸುವ ಮಾನಸಿಕ ನೋವು ಮತ್ತು ನ್ಯಾಯಕ್ಕಾಗಿ ನಡೆಸುವ ಹೋರಾಟಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
‘ನೇರು’ ಎಂದರೆ ಸತ್ಯ. ಆದರೆ ಸತ್ಯ ಗೊತ್ತಿರುವುದಕ್ಕೂ ಅದನ್ನು ಸಾಬೀತುಪಡಿಸುವುದಕ್ಕೂ ನಡುವೆ ದೊಡ್ಡ ಅಂತರವಿದೆ. ಈ ಅಂತರದಲ್ಲೇ ಸಾರಾಳ ಹೋರಾಟ ನಡೆಯುತ್ತದೆ. ಸತ್ಯ ತಿಳಿದಿರುವುದು ಸಾಕಾಗದು. ಅದನ್ನು ನ್ಯಾಯಾಲಯದಲ್ಲಿ ನಂಬಿಸುವುದೇ ನಿಜವಾದ ಪರೀಕ್ಷೆ. ಇಂತಹ ಸೂಕ್ಷ್ಮ ಕಥಾವಸ್ತುವನ್ನು ತೆರೆಯ ಮೇಲೆ ತರುವಾಗ, ಲೈಂಗಿಕ ದೌರ್ಜನ್ಯವನ್ನು ಚಿತ್ರಿಸಲು ಸಿನಿಮಾ ಯಾವ ದೃಷ್ಟಿಕೋನವನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವುದು ಮುಖ್ಯವಾಗುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯ ನೋವನ್ನು ತೋರಿಸುವುದಕ್ಕೂ, ಆಕೆಯ ದೇಹವನ್ನು ನೋಡುಗರ ಕುತೂಹಲಕ್ಕೆ ಬಳಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ‘ನೇರು’ ದೌರ್ಜನ್ಯದ ಘಟನೆಯನ್ನು ಅತಿಯಾಗಿ ದೃಶ್ಯೀಕರಿಸುವುದಕ್ಕಿಂತ ಅದರ ನಂತರದ ಮಾನಸಿಕ ನೋವು ಮತ್ತು ನ್ಯಾಯಾಲಯದ ಹೋರಾಟದ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಇದು ಚಿತ್ರದ ಒಳ್ಳೆಯ ಅಂಶ. ಆದರೂ, ನ್ಯಾಯಾಲಯದಲ್ಲಿ ಸಾರಾ ತನ್ನ ಮೇಲೆ ನಡೆದ ಘಟನೆಯನ್ನು ಮತ್ತೆ ಮತ್ತೆ ವಿವರಿಸಬೇಕಾದ ಸಂದರ್ಭಗಳು ಆಕೆಯ ನೋವನ್ನು ಮತ್ತೊಮ್ಮೆ ಅನುಭವಿಸುವಂತೆ ಮಾಡುತ್ತವೆ. ವಿಚಾರಣೆಯ ಭಾಗವಾಗಿ ಇಂತಹ ಪ್ರಶ್ನೆಗಳು ಬರಬಹುದು. ಆದರೆ ಅದನ್ನು ಎದುರಿಸುವ ವ್ಯಕ್ತಿಯ ಮೇಲೆ ಆಗುವ ಮಾನಸಿಕ ಪರಿಣಾಮವನ್ನೂ ಗಮನಿಸಬೇಕಾಗುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯ ಮಾತನ್ನು ನಂಬುವುದಕ್ಕಿಂತ ಮೊದಲು ಆಕೆಯ ನಡತೆ, ನೆನಪು ಮತ್ತು ವ್ಯಕ್ತಿತ್ವವನ್ನೇ ಅನುಮಾನಿಸುವ ಮನಸ್ಥಿತಿಯನ್ನು ಸಿನಿಮಾ ಇಲ್ಲಿ ಪ್ರಶ್ನಿಸುತ್ತದೆ.
ಇದರ ಜೊತೆಗೆ, ಸಾರಾಳ ಪಾತ್ರದಲ್ಲಿ ಗಮನ ಸೆಳೆಯುವ ಮತ್ತೊಂದು ಅಂಶ ಆಕೆಯ ಸ್ವತಂತ್ರ ವ್ಯಕ್ತಿತ್ವ. ದೃಷ್ಟಿ ಇಲ್ಲದಿರುವುದು ಆಕೆಯ ಬದುಕಿನ ಒಂದು ಭಾಗವೇ ಹೊರತು ಅದೇ ಆಕೆಯ ಸಂಪೂರ್ಣ ಗುರುತಲ್ಲ. ಆಕೆ ಶಿಲ್ಪಕಲೆಯಲ್ಲಿ ಆಸಕ್ತಿ ಮತ್ತು ಕೌಶಲ್ಯ ಹೊಂದಿರುವ ಯುವತಿ. ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸಾಮರ್ಥ್ಯವೂ ಆಕೆಯಲ್ಲಿದೆ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು ಕೇವಲ ಅನುಕಂಪದಿಂದ ನೋಡುವ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ. ಅವರಿಗೂ ತಮ್ಮದೇ ಆದ ಆಸಕ್ತಿ, ಪ್ರತಿಭೆ, ಆಯ್ಕೆ ಮತ್ತು ಸ್ವತಂತ್ರ ಬದುಕಿದೆ ಎಂಬುದನ್ನು ಈ ಪಾತ್ರ ನೆನಪಿಸುತ್ತದೆ. ಸಾರಾಳ ಶಿಲ್ಪಕಲೆಯ ಪ್ರತಿಭೆ ಆಕೆಯ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಆದರೆ ತನ್ನ ಮಾತನ್ನು ನಂಬಿಸುವುದಕ್ಕಾಗಿ ಆಕೆ ಇಂತಹ ಅಸಾಧಾರಣ ಪ್ರತಿಭೆಯನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಒಂದು ಪ್ರಶ್ನೆಯನ್ನು ಹುಟ್ಟಿಸುತ್ತದೆ—ಒಬ್ಬ ಮಹಿಳೆಯ ಮಾತಿಗೆ ಮೌಲ್ಯ ಬರಲು ಆಕೆ ಇಂತಹ ವಿಶೇಷ ಸಾಮರ್ಥ್ಯ ಹೊಂದಿರಬೇಕೇ? ಆಕೆಯ ಮಾತನ್ನೂ ಸಹಜವಾಗಿ ನಂಬುವ ಸಮಾಜ ನಮಗೆ ಬೇಕಲ್ಲವೇ?
ಈ ಪ್ರಶ್ನೆಗಳ ನಡುವೆಯೇ ‘ನೇರು’ ಸಿನಿಮಾದ ಮುಖ್ಯ ಸಂಘರ್ಷ ನ್ಯಾಯಾಲಯದ ಒಳಗೆ ತೀವ್ರಗೊಳ್ಳುತ್ತದೆ. ಒಂದು ಕಡೆ ದೌರ್ಜನ್ಯಕ್ಕೊಳಗಾದ ಯುವತಿ ಮತ್ತು ಆಕೆಯ ಕುಟುಂಬ. ಮತ್ತೊಂದು ಕಡೆ ಹಣ ಮತ್ತು ಪ್ರಭಾವ ಹೊಂದಿರುವ ಆರೋಪಿಯ ಕುಟುಂಬ. ಇಂತಹ ಸಂದರ್ಭದಲ್ಲಿ ಸಾಕ್ಷ್ಯಗಳಷ್ಟೇ ಅಲ್ಲ, ಅಧಿಕಾರ ಮತ್ತು ಪ್ರಭಾವವೂ ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಸಿನಿಮಾ ತೋರಿಸುತ್ತದೆ. ನ್ಯಾಯಾಲಯದಲ್ಲಿ ಸತ್ಯ ಹೇಳುವುದಷ್ಟೇ ಸಾಕಾಗುವುದಿಲ್ಲ, ಅದನ್ನು ಸಾಬೀತುಪಡಿಸಲು ಸಾಕ್ಷ್ಯಗಳೂ ಬೇಕು. ಆದರೆ ತನಿಖೆ, ಸಾಕ್ಷ್ಯ ಸಂಗ್ರಹ ಮತ್ತು ವಿಚಾರಣೆಯ ಪ್ರಕ್ರಿಯೆಯಲ್ಲಿ ಲೋಪಗಳಾದರೆ ಅದರ ಪರಿಣಾಮವನ್ನು ಅನುಭವಿಸುವವರು ಯಾರು? ದೌರ್ಜನ್ಯಕ್ಕೊಳಗಾದ ಮಹಿಳೆಯೇ ಮತ್ತೆ ಮತ್ತೆ ತನ್ನ ನೋವನ್ನು ವಿವರಿಸಬೇಕಾಗುತ್ತದೆ ಮತ್ತು ಆಕೆಯ ಮಾತನ್ನು ಅನುಮಾನದಿಂದ ನೋಡುವ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ನ್ಯಾಯಕ್ಕಾಗಿ ಹೋರಾಡುವಾಗಲೇ ಮತ್ತೊಮ್ಮೆ ನೋವು ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.
ಈ ಸಂದರ್ಭದಲ್ಲಿ ಕರ್ನಾಟಕದ ಸೌಜನ್ಯ ಪ್ರಕರಣ ಸಹಜವಾಗಿಯೇ ನೆನಪಾಗುತ್ತದೆ. 2012ರಲ್ಲಿ ಉಜಿರೆಯಲ್ಲಿ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಒಳಗಾಗಿದ್ದಳು. ಈ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಮತ್ತು ಸಿಬಿಐ ತನಿಖೆ ನಡೆಸಿದ್ದರೂ ಅಪರಾಧಿ ಯಾರು ಎಂಬುದು ಪತ್ತೆಯಾಗಿರಲಿಲ್ಲ. ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು 2023ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಗೊಳಿಸಿತು. ತನಿಖೆಯಲ್ಲಿನ ಲೋಪಗಳ ಕುರಿತು ಸೌಜನ್ಯಳ ತಾಯಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ 2026ರ ಸೆಪ್ಟೆಂಬರ್ನಲ್ಲಿ ಹೊಸ ತನಿಖೆಗೆ ಆದೇಶಿಸಿತು. ಈ ಹೊಸ ತನಿಖೆಯು ಖುಲಾಸೆಯಾದ ಸಂತೋಷ್ ರಾವ್ ವಿರುದ್ಧವಲ್ಲ ಎಂಬುದನ್ನೂ ಗಮನಿಸಬೇಕು. ಸಾರಾಳ ಕಥೆ ಕಾಲ್ಪನಿಕವಾದರೂ, ಸೌಜನ್ಯ ಪ್ರಕರಣದಂತಹ ಘಟನೆಗಳು ನ್ಯಾಯಕ್ಕಾಗಿ ನಡೆಯುವ ಹೋರಾಟದ ಕಠಿಣ ವಾಸ್ತವವನ್ನು ನೆನಪಿಸುತ್ತವೆ. ನ್ಯಾಯಾಲಯದ ತೀರ್ಪು ಮಾತ್ರವಲ್ಲ, ನಿಷ್ಪಕ್ಷಪಾತ ತನಿಖೆ ಮತ್ತು ಸಮರ್ಪಕ ಸಾಕ್ಷ್ಯ ಸಂಗ್ರಹವೂ ನ್ಯಾಯದ ಪ್ರಕ್ರಿಯೆಯಲ್ಲಿ ಅಷ್ಟೇ ಮುಖ್ಯ. ವರ್ಷಗಳೇ ಕಳೆದರೂ ಸತ್ಯ ಹೊರಬರದಿದ್ದರೆ ನ್ಯಾಯದ ನಿರೀಕ್ಷೆಯಲ್ಲಿರುವ ಕುಟುಂಬಗಳ ನೋವಿಗೆ ಉತ್ತರ ಕೊಡುವವರು ಯಾರು?
ಇಂತಹ ಗಂಭೀರ ವಸ್ತುವನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ತರುವಲ್ಲಿ ಕಲಾವಿದರ ಅಭಿನಯವೂ ದೊಡ್ಡ ಪಾತ್ರ ವಹಿಸಿದೆ. ಸಾರಾಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ವಕೀಲ ವಿಜಯಮೋಹನ್ ಪಾತ್ರದಲ್ಲಿ ಮೋಹನ್ ಲಾಲ್ ತಮ್ಮ ಅನುಭವದ ಅಭಿನಯವನ್ನು ನೀಡಿದ್ದಾರೆ. ಹಲವು ವರ್ಷಗಳಿಂದ ನ್ಯಾಯಾಲಯದಿಂದ ದೂರ ಉಳಿದಿರುವ ಅವರು, ಸಾರಾಳ ಹೋರಾಟ ಮತ್ತು ಧೈರ್ಯವನ್ನು ಕಂಡು ಮತ್ತೆ ಪ್ರಕರಣ ಕೈಗೆತ್ತಿಕೊಳ್ಳುತ್ತಾರೆ. ಅವರ ಪಾತ್ರದಲ್ಲಿ ಆತ್ಮವಿಶ್ವಾಸದ ಕೊರತೆ, ಹಳೆಯ ಅನುಭವದ ನೋವು ಮತ್ತು ವೃತ್ತಿಗೆ ಮರಳುವ ಹಂಬಲ ಎಲ್ಲವೂ ಕಾಣಿಸುತ್ತವೆ. ಸಾರಾಳ ಪಾತ್ರದಲ್ಲಿ ಅನಸ್ವರಾ ರಾಜನ್ ಉತ್ತಮವಾಗಿ ನಟಿಸಿದ್ದು, ದೌರ್ಜನ್ಯಕ್ಕೊಳಗಾದ ಯುವತಿಯ ನೋವು, ಆತಂಕ ಮತ್ತು ನ್ಯಾಯಕ್ಕಾಗಿ ಹೋರಾಡುವ ಧೈರ್ಯವನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. ಆಕೆಯ ಮುಖಭಾವ ಮತ್ತು ಮೌನದಲ್ಲಿರುವ ಹೋರಾಟವನ್ನು ಅವರು ಅತಿಯಾದ ನಾಟಕೀಯತೆಯಿಲ್ಲದೆ ತೋರಿಸಿದ್ದಾರೆ. ರಕ್ಷಣಾ ವಕೀಲನ ಪಾತ್ರದಲ್ಲಿ ಸಿದ್ಧಿಕ್ ಕೂಡ ಗಮನ ಸೆಳೆಯುತ್ತಾರೆ. ಸಾರಾಳ ಸಾಕ್ಷ್ಯವನ್ನು ಪ್ರಶ್ನಿಸುವಾಗ ಅವರ ಪಾತ್ರದ ಮೂಲಕ ನ್ಯಾಯಾಲಯದಲ್ಲಿ ಎದುರಾಗುವ ಕಠಿಣ ವಿಚಾರಣೆಯ ಸ್ವರೂಪ ಕಾಣಿಸುತ್ತದೆ. ಜಗದೀಶ್, ಪ್ರಿಯಾಮಣಿ ಸೇರಿದಂತೆ ಉಳಿದ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಕಥೆ ಮುಂದುವರಿದಂತೆ ಸಾರಾಳ ಹೋರಾಟಕ್ಕಿಂತ ವಕೀಲ ವಿಜಯಮೋಹನ್ ಅವರ ವಾದಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ. ಮಹಿಳೆಯ ಪರವಾಗಿ ನಿಲ್ಲುವ ಪುರುಷನ ಪಾತ್ರವನ್ನು ಸಿನಿಮಾ ಚೆನ್ನಾಗಿ ಕಟ್ಟಿಕೊಟ್ಟಿದ್ದರೂ, ಸಾರಾಳ ಸ್ವಂತ ಧ್ವನಿಗೆ ಇನ್ನಷ್ಟು ಜಾಗ ನೀಡಬಹುದಿತ್ತು. ಆಕೆಯ ಹೋರಾಟವೇ ಚಿತ್ರದ ಕೇಂದ್ರವಾಗಿರುವಾಗ, ಆಕೆಯ ಪರವಾಗಿ ಮಾತನಾಡುವವರಿಗಿಂತ ಆಕೆಯ ಮಾತು ಮತ್ತು ನಿರ್ಧಾರಗಳೇ ಹೆಚ್ಚು ಮುನ್ನೆಲೆಗೆ ಬರಬೇಕಿತ್ತು.
ಇದರ ಜೊತೆಗೆ ಚಿತ್ರಕಥೆಯಲ್ಲೂ ಕೆಲವು ಮಿತಿಗಳು ಕಾಣಿಸುತ್ತವೆ. ನ್ಯಾಯಾಲಯದ ದೃಶ್ಯಗಳು ಚಿತ್ರದ ಮುಖ್ಯ ಭಾಗವಾಗಿದ್ದರೂ, ಕೆಲವು ಕಡೆ ಅವು ಸಹಜತೆಯನ್ನು ಕಳೆದುಕೊಂಡು ನಾಟಕೀಯವಾಗಿ ಕಾಣಿಸುತ್ತವೆ. ವಾದ-ಪ್ರತಿವಾದಗಳು ಕೆಲವೊಮ್ಮೆ ನೈಜ ನ್ಯಾಯಾಲಯದ ವಾತಾವರಣಕ್ಕಿಂತ ಹೆಚ್ಚು ರಂಗಭೂಮಿಯ ಸಂಭಾಷಣೆಯಂತೆ ಕೇಳುತ್ತವೆ. ಕೆಲವು ಸಾಕ್ಷ್ಯಗಳು ಮತ್ತು ಕಥೆಯ ತಿರುವುಗಳು ಚಿತ್ರಕಥೆಗೆ ಅನುಕೂಲವಾಗುವ ರೀತಿಯಲ್ಲಿ ಬರುತ್ತವೆ. ಇದರಿಂದ ನ್ಯಾಯಾಲಯದ ವಿಚಾರಣೆಯ ಗಂಭೀರತೆ ಕೆಲವೆಡೆ ಕಡಿಮೆಯಾಗುತ್ತದೆ. ಕೆಲವು ಪೋಷಕ ಪಾತ್ರಗಳಿಗೂ ಹೆಚ್ಚಿನ ಆಳ ನೀಡಬಹುದಿತ್ತು. ಅದರಲ್ಲೂ ಆರೋಪಿಯ ಕುಟುಂಬದ ಪ್ರಭಾವ ಮತ್ತು ಅವರ ನಡವಳಿಕೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ಕಟ್ಟಿಕೊಡುವ ಅವಕಾಶವಿತ್ತು. ಹಾಗಿದ್ದರೂ, ಮಹಿಳೆಯೊಬ್ಬಳು ನ್ಯಾಯ ಕೇಳುವಾಗ ಎದುರಿಸುವ ಸವಾಲುಗಳನ್ನು ನ್ಯಾಯಾಲಯದ ಒಳಗಿನಿಂದಲೇ ತೋರಿಸುವ ಪ್ರಯತ್ನ ಚಿತ್ರದಲ್ಲಿದೆ. ಒಂದು ಕಾನೂನು ಹೋರಾಟವನ್ನು ಕೇವಲ ಗೆಲುವು ಅಥವಾ ಸೋಲಿನ ಕಥೆಯಾಗಿ ನೋಡದೆ, ಅದರ ಹಿಂದೆ ಇರುವ ವ್ಯಕ್ತಿಗಳ ನೋವು ಮತ್ತು ಧೈರ್ಯವನ್ನೂ ಗಮನಿಸುವಂತೆ ಮಾಡುತ್ತದೆ.
ತೆರೆಯ ಮೇಲೆ ಸಾರಾಳ ಹೋರಾಟ ಮುಗಿಯುತ್ತದೆ. ಆದರೆ, ನಿಜಜೀವನದಲ್ಲಿ ಇಂತಹ ಹೋರಾಟಗಳು ಇನ್ನೂ ಮುಗಿದಿಲ್ಲ. ಆಕೆಯಂತಹ ಎಷ್ಟು ಮಹಿಳೆಯರಿಗೆ ತಮ್ಮ ಮಾತು ಕೇಳಿಸಿಕೊಳ್ಳುವ ಅವಕಾಶ ಸಿಗುತ್ತದೆ? ನ್ಯಾಯಾಲಯದ ಬಾಗಿಲು ಎಲ್ಲರಿಗೂ ತೆರೆದಿರಬಹುದು. ಆದರೆ ಆ ಬಾಗಿಲಿನವರೆಗೆ ತಲುಪಲು ಬೇಕಾದ ಧೈರ್ಯ, ಹಣ, ಬೆಂಬಲ ಮತ್ತು ಸಾಮಾಜಿಕ ಸ್ಥಾನಮಾನ ಎಲ್ಲರಿಗೂ ಇರುವುದಿಲ್ಲ. ತನಿಖೆಯ ಲೋಪಗಳು, ಸಾಕ್ಷ್ಯಗಳ ಸಂಗ್ರಹದಲ್ಲಿನ ನಿರ್ಲಕ್ಷ್ಯ ಮತ್ತು ಸಂತ್ರಸ್ತೆಯ ಘನತೆಯನ್ನು ಕಾಪಾಡುವಲ್ಲಿ ವ್ಯವಸ್ಥೆ ತೋರುವ ವೈಫಲ್ಯಗಳ ಬಗ್ಗೆ ಸಿನಿಮಾ ಇನ್ನಷ್ಟು ಆಳವಾಗಿ ಪ್ರಶ್ನಿಸಬಹುದಿತ್ತು. ಯಾಕೆಂದರೆ ನ್ಯಾಯ ಸಿಕ್ಕ ಒಂದು ಪ್ರಕರಣಕ್ಕಿಂತ, ನ್ಯಾಯ ಕೇಳಲು ಯಾರೂ ಭಯಪಡದ ಸಮಾಜ ನಿರ್ಮಾಣ ಮುಖ್ಯವಾದುದು.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



