ಬೀದರ್‌ | 107 ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಲ್ಲ; ಮಕ್ಕಳಿಗೆ ಮರಾಠಿ ಶಿಕ್ಷಣವೇ ಗತಿ!

Date:

ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಸುಮಾರು 107 ಗ್ರಾಮ ಹಾಗೂ ತಾಂಡಾಗಳಲ್ಲಿ ಇಂದಿಗೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಲ್ಲ ಎಂಬುದು ಶಿಕ್ಷಣ ಇಲಾಖೆಯ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

- Advertisement -

ಕರ್ನಾಟಕದಲ್ಲಿ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕಡ್ಡಾಯಗೊಳಿಸಬೇಕೆಂಬುದು ಒಂದು ಪ್ರಮುಖ ಒತ್ತಾಯವಾದರೆ, ಕನಿಷ್ಠ ಐದನೇ ತರಗತಿವರೆಗಾದರೂ ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯವಾಗಿರಬೇಕು ಎಂಬುದು ಶಿಕ್ಷಣ ತಜ್ಞರು, ಸಾಹಿತಿಗಳು ಹಾಗೂ ಭಾಷಾ ಹೋರಾಟಗಾರರ ಅಭಿಪ್ರಾಯ. ಈ ಕುರಿತು ಆಗಾಗ್ಗೆ ಚರ್ಚೆಗಳು, ಹೋರಾಟಗಳು ನಡೆಯುತ್ತಲೇ ಇವೆ. ಆದರೆ, ಭಾಷಾವಾರು ಪ್ರಾಂತ್ಯಗಳಾಗಿ ರಾಜ್ಯಗಳು ರೂಪುಗೊಂಡು ದಶಕಗಳೇ ಕಳೆದರೂ ಕರ್ನಾಟಕದ ಗಡಿಭಾಗದ ಅನೇಕ ಗ್ರಾಮಗಳಲ್ಲಿ ಇಂದಿಗೂ ಕನ್ನಡ ಮಾಧ್ಯಮ ಶಾಲೆಗಳೇ ಇಲ್ಲದಿರುವುದು ವಿಪರ್ಯಾಸ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಕಾಡಿನ ಮಕ್ಕಳೇ ವನ್ಯಜೀವಿಗಳ ನಿಜವಾದ ಬಂಧುಗಳು: ಆದಿವಾಸಿಗಳ ಜ್ಞಾನ,...

ಕಾಡು ಎಂದರೆ ಕೇವಲ ಮರಗಳು, ಪ್ರಾಣಿಗಳು ಮತ್ತು ಭೌಗೋಳಿಕ ಪ್ರದೇಶವಲ್ಲ. ಅದು ಸಾವಿರಾರು ವರ್ಷಗಳಿಂದ ಮನುಷ್ಯ ಮತ್ತು ಪ್ರಕೃತಿ ಪರಸ್ಪರ ಅವಲಂಬನೆಯೊಂದಿಗೆ ಬದುಕಿಕೊಂಡು ಬಂದಿರುವ ಜೀವಂತ ಪರಿಸರ ವ್ಯವಸ್ಥೆ. ಈ ವ್ಯವಸ್ಥೆಯೊಂದಿಗೆ ಅತ್ಯಂತ...

ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು, ಗುಮಾಸ್ತರನ್ನು ಸೃಷ್ಟಿಸಿದ ಮೆಕಾಲೆ- ಇದು...

ಇತಿಹಾಸದ ಹೆಸರಿನಲ್ಲಿ ಆಯ್ದ ನಿರೂಪಣೆ; ಜಾತಿ ಪ್ರಾಬಲ್ಯ, ಶಿಕ್ಷಣದ ಹಕ್ಕು ಮತ್ತು ಆಧುನಿಕ ಅಭಿವೃದ್ಧಿಯ ವಾಸ್ತವಗಳು ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸದ ಹೆಸರಿನಲ್ಲಿ ಮುಂದಿಟ್ಟಿರುವ ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು ಮತ್ತು ಗುಮಾಸ್ತರನ್ನು ಸೃಷ್ಟಿಸಿದ...

ಹೌದು, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಸುಮಾರು 107 ಗ್ರಾಮ ಹಾಗೂ ತಾಂಡಾಗಳಲ್ಲಿ ಇಂದಿಗೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಲ್ಲ ಎಂಬುದು ಶಿಕ್ಷಣ ಇಲಾಖೆಯ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಕನ್ನಡ ಮಾಧ್ಯಮ ಶಾಲೆಗಳ ಕೊರತೆಯಿಂದಾಗಿ ಈ ಗ್ರಾಮಗಳ ಮಕ್ಕಳು ಬಾಲ್ಯದಿಂದಲೇ ಅನಿವಾರ್ಯವಾಗಿ ಮರಾಠಿ ಅಥವಾ ಇತರ ಮಾಧ್ಯಮಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪರಿಣಾಮವಾಗಿ, ಕನ್ನಡ ಭಾಷೆ ಕಲಿಯುವ ಮತ್ತು ಮಾತನಾಡುವ ಅವಕಾಶದಿಂದಲೇ ಅನೇಕ ಮಕ್ಕಳು ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದರೆ, ಮತ್ತೊಂದೆಡೆ ಗಡಿಭಾಗದಲ್ಲಿ ಮರಾಠಿ ಮಾಧ್ಯಮ ಶಿಕ್ಷಣದ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಭಾಲ್ಕಿ, ಔರಾದ್, ಕಮಲನಗರ, ಹುಲಸೂರು ಹಾಗೂ ಬಸವಕಲ್ಯಾಣ ತಾಲ್ಲೂಕುಗಳ ಹಲವು ಗ್ರಾಮಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಈ ಪ್ರದೇಶಗಳಲ್ಲಿ ಮರಾಠಿ ಭಾಷೆಯ ಪ್ರಭಾವ ಸಹಜವಾಗಿಯೇ ಹೆಚ್ಚಿದ್ದು, ಮನೆಮಾತಿನ ಜತೆಗೆ ಶಿಕ್ಷಣದ ಮಾಧ್ಯಮವೂ ಮರಾಠಿಯಾಗಿರುವುದು ರೂಢಿಯಾಗಿದೆ.

ಇಲ್ಲಿನ ಜನರಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನವಿಲ್ಲ ಎಂದರ್ಥವಲ್ಲ. ಗಡಿಭಾಗದ ಜನರಲ್ಲಿ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಮತ್ತು ಕಲಿಯುವ ಆಸಕ್ತಿಯೂ ಇದೆ. ತಮ್ಮ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳೇ ಇಲ್ಲದ ಕಾರಣ ಮಕ್ಕಳನ್ನು ಅನಿವಾರ್ಯವಾಗಿ ಮರಾಠಿ ಮಾಧ್ಯಮ ಶಾಲೆಗಳಿಗೆ ಕಳುಹಿಸಬೇಕಾಗಿದೆ. ಕನ್ನಡದ ಮೇಲಿನ ಅಭಿಮಾನವಿದ್ದರೂ, ಮಕ್ಕಳಿಗೆ ಕನ್ನಡದಲ್ಲಿಯೇ ಶಿಕ್ಷಣ ಕೊಡಿಸುವ ಅವಕಾಶ ಮಾತ್ರ ಇಲ್ಲದಂತಾಗಿದೆ. ಪರಿಣಾಮವಾಗಿ ಕೆಲವು ಗ್ರಾಮಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ವಿರಳವಾಗುತ್ತಿದೆ. ಕನ್ನಡ ಮೇಲೆ ಇರುವ ಅಭಿಮಾನ ತಮ್ಮೂರಿನಲ್ಲಿ ಕನ್ನಡ ಶಾಲೆ ಆರಂಭಕ್ಕೆ ವ್ಯಕ್ತವಾಗದಿರುವುದು ನೋವಿನ ಸಂಗತಿಯೇ ಸರಿ.

ಬೀದರ್ ಜಿಲ್ಲೆ ಬಹುಭಾಷೆ, ಬಹುಸಂಸ್ಕೃತಿಗಳ ಸಂಗಮದ ನೆಲ. ಕನ್ನಡದ ಜತೆಗೆ ತೆಲುಗು, ಮರಾಠಿ, ಹಿಂದಿ, ಉರ್ದು ಹಾಗೂ ಲಂಬಾಣಿ ಭಾಷೆಗಳನ್ನೂ ತನ್ನ ಒಡಲಲ್ಲಿ ಕಾಪಿಟ್ಟುಕೊಂಡಿದೆ. ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ತೆಲುಗು ಭಾಷೆಯ ಪ್ರಭಾವವಿದ್ದರೆ, ಮಹಾರಾಷ್ಟ್ರದ ಗಡಿಭಾಗದಲ್ಲಿ ಮರಾಠಿ ಭಾಷೆಯ ಪ್ರಾಬಲ್ಯವಿದೆ.

ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವೈವಾಹಿಕ ಸಂಬಂಧಗಳ ಕಾರಣದಿಂದಾಗಿ ಎರಡೂ ರಾಜ್ಯಗಳೊಂದಿಗೆ ಇಲ್ಲಿನ ಜನರು ನಿಕಟ ಸಂಪರ್ಕ ಹೊಂದಿದ್ದಾರೆ. ಈ ಬಹುಭಾಷಾ ಪರಿಸರದ ನಡುವೆ ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸುವುದು ಈಗ ದೊಡ್ಡ ಸವಾಲಾಗಿದೆ.

ಔರಾದ್ ಕ್ಷೇತ್ರದಲ್ಲಿಯೇ ಹೆಚ್ಚು ಮರಾಠಿ ಮಾಧ್ಯಮ ಶಾಲೆ

ಬೀದರ್ ಜಿಲ್ಲೆಯ ಔರಾದ್ ಮತ್ತು ಕಮಲನಗರ ಅವಳಿ ತಾಲ್ಲೂಕುಗಳ ಅನೇಕ ಗ್ರಾಮಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ತಾಲ್ಲೂಕು ಕೇಂದ್ರದಿಂದ ಕೇವಲ 10 ರಿಂದ 15 ಕಿ.ಮೀ. ದೂರ ಸಾಗಿದರೆ ಮಹಾರಾಷ್ಟ್ರದ ಗಡಿ ಎದುರಾಗುತ್ತದೆ. ಈ ಎರಡು ತಾಲ್ಲೂಕುಗಳ ವ್ಯಾಪ್ತಿಯ ಬರೋಬ್ಬರಿ 72 ಗ್ರಾಮ ಹಾಗೂ ತಾಂಡಾಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳೇ ಇಲ್ಲದಿರುವುದು ಗಮನಾರ್ಹ ಸಂಗತಿ.

ಔರಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಂತಿ, ಏಕಂಬಾ, ಹೊಕ್ರಾಣ, ಬಾವಲಗಾಂವ, ಲಿಂಗಿ, ಹೊಳಸಮುದ್ರ, ಭಂಡಾರಕುಮಟಾ, ದಾಬಕಾ (ಸಿ), ಗಂಗಬೀಡ, ಹಂದಿಕೇರಾ ತಾಂಡಾ, ಚಿಮೆಗಾಂವ್ ತಾಂಡಾ, ಕಾಳಗಾಪುರ, ಹಸಿಕೇರಾ, ನಂದಿಬಿಜಲಗಾಂವ್, ಕಿಶನ್ ನಾಯಕ ತಾಂಡಾ ಸೇರಿದಂತೆ ಒಟ್ಟು 72 ಗ್ರಾಮ ಹಾಗೂ ತಾಂಡಾಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಲ್ಲ. ಈ ಪ್ರದೇಶಗಳಲ್ಲಿ ಮರಾಠಿ ಮಾಧ್ಯಮ ಶಿಕ್ಷಣದ ಪ್ರಭಾವ ಹೆಚ್ಚಾಗಿದ್ದು, ಮಕ್ಕಳು ಮರಾಠಿ ಮಾಧ್ಯಮದಲ್ಲಿಯೇ ಶಿಕ್ಷಣ ಕಲಿಯುತ್ತಿದ್ದಾರೆ.

ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳ ವ್ಯಾಪ್ತಿಯ ಲಾಡವಂತಿ, ಚಿಟ್ಟಾ (ಕೆ) ತಾಂಡಾ, ಶಿರೋರಿ, ಕೊಹಿನೂರ್ ಪಾಡ, ವಾಂಜರ್‌ವಾಡಿ, ದೇವನಾಳ, ಕೋಟಮಾಳ, ಮಾಚನಾಳ, ಅಂಬೇವಾಡಿ, ಜಜನ್ ಮುಗುಳಿ, ಚೌಕಿವಾಡಿ, ಜೋಗೇವಾಡಿ, ಹೊನ್ನಳ್ಳಿ, ಗದಲೇಗಾಂವ್ (ಕೆ), ಹಣಮಂತವಾಡಿ (ಎಂ) ಸೇರಿದಂತೆ ಒಟ್ಟು 27 ಗ್ರಾಮ ಹಾಗೂ ತಾಂಡಾಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಲ್ಲ. ಇಲ್ಲಿನ ಶಾಲೆಗಳಲ್ಲಿ ಮರಾಠಿ ಮಾಧ್ಯಮಕ್ಕೆ ಪ್ರಥಮಾದ್ಯತೆ ಇದ್ದು, ಕನ್ನಡ ಎರಡನೇ ಭಾಷೆಯಾಗಿ ಬೋಧಿಸಲಾಗುತ್ತದೆ.

WhatsApp Image 2026 11 28 at 2.08.03 PM

ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿ, ಮೆಹಕರ್ ತಾಂಡಾ, ಧಾರಜ್‌ವಾಡಿ, ಕೋರೂರ (ಓ), ಭಗವಾನ್ ವಾಡಿ, ವಾಂಜರಖೇಡ್ ವಾಡಿ, ಫತ್ತು ತಾಂಡಾ ಹಾಗೂ ಗೋಲು ತಾಂಡಾಗಳಲ್ಲಿ ಸರ್ಕಾರಿ ಶಾಲೆಗಳಿದ್ದರೂ ಕನ್ನಡ ಮಾಧ್ಯಮ ಶಿಕ್ಷಣ ಲಭ್ಯವಿಲ್ಲ. ಇಲ್ಲಿ ಮರಾಠಿ ಪ್ರಥಮ ಭಾಷೆಯಾಗಿದ್ದು, ಕನ್ನಡ ದ್ವಿತೀಯ ಭಾಷೆಯಾಗಿ ಉಳಿದಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬೇಕೆಂಬ ಆಸಕ್ತಿ ಹೊಂದಿರುವ ಮಕ್ಕಳಿಗೆ ಸೂಕ್ತ ಅವಕಾಶವೇ ಇಲ್ಲದಂತಾಗಿದೆ.

ಶಿಕ್ಷಕರಿಗೂ ಮರಾಠಿ ಭಾಷೆಯ ಅನಿವಾರ್ಯತೆ!

ಗಡಿಭಾಗದ ಶಾಲೆಗಳಲ್ಲಿ ಪಾಠ ಬೋಧಿಸುವ ಶಿಕ್ಷಕರಿಗೂ ಭಾಷೆಯ ಸಮಸ್ಯೆ ಎದುರಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಜತೆಗೆ ಮರಾಠಿ ಭಾಷೆಯ ಜ್ಞಾನವೂ ಶಿಕ್ಷಕರಿಗೆ ಅಗತ್ಯವಾಗಿರುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಮಾತೃಭಾಷೆ ಮರಾಠಿಯಾಗಿರುವುದರಿಂದ ಶಿಕ್ಷಕರು ಪಾಠವನ್ನು ಅರ್ಥೈಸಲು ಮರಾಠಿ ಭಾಷೆಯನ್ನೂ ಅವಲಂಬಿಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುವ ಉದ್ದೇಶವಿದ್ದರೂ, ಸ್ಥಳೀಯ ಭಾಷಾ ಪರಿಸ್ಥಿತಿಗೆ ಅನುಗುಣವಾಗಿ ಬೋಧನೆ ನಡೆಯುತ್ತಿದೆ.

ಗಡಿ ಗ್ರಾಮಗಳಲ್ಲಿ ಕನ್ನಡಕ್ಕಿಂತ ಮರಾಠಿ ಭಾಷೆಯ ಪ್ರಭಾವ ಹೆಚ್ಚಾಗಲು ಕೇವಲ ಶಾಲೆಗಳ ಕೊರತೆಯೊಂದೇ ಕಾರಣವಲ್ಲ. ಇಲ್ಲಿನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳೂ ಪ್ರಮುಖ ಪಾತ್ರ ವಹಿಸುತ್ತಿವೆ. ಮಹಾರಾಷ್ಟ್ರದ ಸೋಲಾಪುರ, ಉದಗೀರ್, ನಾಂದೇಡ್, ಲಾತೂರ್ ಸೇರಿದಂತೆ ವಿವಿಧ ಪ್ರದೇಶಗಳ ಜನರೊಂದಿಗೆ ಸ್ಥಳೀಯರು ವೈವಾಹಿಕ ಸಂಬಂಧಗಳನ್ನು ಹೊಂದಿದ್ದಾರೆ. ಉದ್ಯೋಗ, ಉನ್ನತ ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ಪುಣೆ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ತೆರಳಿ ನೆಲೆಸಿರುವವರ ಸಂಖ್ಯೆಯೂ ಹೆಚ್ಚಿರುವುದು ಕಾಣುತ್ತೇವೆ.

ದಿನನಿತ್ಯದ ವ್ಯಾಪಾರ-ವಹಿವಾಟು, ಉದ್ಯೋಗ ಹಾಗೂ ಸಾಮಾಜಿಕ ಸಂಪರ್ಕಗಳಿಗಾಗಿ ಗಡಿಭಾಗದ ಜನರು ಮಹಾರಾಷ್ಟ್ರದ ನಗರ ಮತ್ತು ಪಟ್ಟಣಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಮರಾಠಿ ಭಾಷೆ ಅವರ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿದೆ. ಇದರಿಂದಾಗಿ ಕನ್ನಡ ಭಾಷೆಯ ಬಳಕೆ ಮತ್ತು ಕಲಿಕೆಗೆ ಸೂಕ್ತ ಅವಕಾಶಗಳು ಸಿಗದಿರುವುದು ಭಾಷೆಯ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ ಎಂಬುದು ಭಾಷಾ ಪ್ರೇಮಿಗಳ ಅಭಿಪ್ರಾಯ.

ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದು ಕೇವಲ ಭಾಷಾಭಿಮಾನಿಗಳ ಜವಾಬ್ದಾರಿಯಲ್ಲ; ಅದು ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯೂ ಹೌದು. ಗಡಿ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗಡಿಗ್ರಾಮಗಳ ಅನೇಕ ಸರ್ಕಾರಿ ಶಾಲೆಗಳಲ್ಲಿ ಖಾಯಂ ಕನ್ನಡ ವಿಷಯ ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರ ಮೇಲೆ ಅವಲಂಬಿತರಾಗಿದ್ದಾರೆ.

ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳಿರುವ ಹಲವಾರು ಕಡೆ ಈಗಾಗಲೇ ಎಲ್‌ಕೆಜಿ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮ ಬೋಧಿಸಲು ಅವಕಾಶ ನೀಡಿದೆ. ಅಲ್ಲದೆ ಅನೇಕ ಕಡೆ ಕನ್ನಡ-ಇಂಗ್ಲಿಷ್‌ ದ್ವಿಭಾಷಾ ಬೋಧನೆ ನಡೆಯುತ್ತಿದೆ. ಆದರೆ, ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಲ್ಲದ ಅನೇಕ ಕಡೆ ಕನ್ನಡ ಭಾಷೆಗೆ ಪ್ರಥಮಾಧ್ಯತೆ ಇಲ್ಲ. ಇದರಿಂದಾಗಿ ಕನ್ನಡಾಸಕ್ತಿ ಹೊಂದಿರುವ ಪೋಷಕರು ತಮ್ಮ ಮಕ್ಕಳನ್ನು ದೂರದ ಊರಿನಲ್ಲಿ ಓದಿಸಬೇಕಾದ ಅನಿವಾರ್ಯತೆಯೂ ಇದೆ.

ಜಿಲ್ಲೆಯ ಗಡಿಭಾಗದ ಒಂದೊಂದು ಊರಿನ ಸರ್ಕಾರಿ ಶಾಲೆಗಳಿಗೆ ಅಲ್ಲಿನ ಅವ್ಯವಸ್ಥೆ ಕಣ್ಣಿಗೆ ರಾಚುವಂತಿದೆ. ಕೆಲ ಶಾಲೆಗಳಲ್ಲಿ ಮಕ್ಕಳಿದ್ದರೆ ಅಗತ್ಯ ಶಿಕ್ಷಕರಿಲ್ಲ, ಅದರಲ್ಲೂ ಕನ್ನಡ ಮಾಧ್ಯಮ ಶಿಕ್ಷಕರಿಲ್ಲ. ಮಕ್ಕಳು, ಶಿಕ್ಷಕರಿರುವ ಕಡೆ ಕೊಠಡಿ, ಆಟದ ಮೈದಾನ ಸೇರಿ ಅಗತ್ಯ ಮೂಲಸೌಕರ್ಯ ಇಲ್ಲದೆ ಒಂದೇ ಕೊಠಡಿಯಲ್ಲಿ ಎರಡ್ಮೂರು ತರಗತಿ ಮಕ್ಕಳನ್ನು ಕೂರಿಸಿ ಬೋಧಿಸುತ್ತಾರೆ. ಕೆಲ ಗ್ರಾಮಗಳಲ್ಲಿ ಮರಾಠಿ ಮಾಧ್ಯಮ ಜೊತೆಗೆ ಕನ್ನಡ ಮಾಧ್ಯಮ ಶಾಲೆಗಳಿದ್ದರೆ, ಸರ್ಕಾರಿ ಕನ್ನಡ ಶಾಲೆಗಳಿಲ್ಲದ ಕೆಲ ಊರಿನಲ್ಲಿ ಖಾಸಗಿ, ಅನುದಾನಿತ ಶಾಲೆಗಳಿವೆ. ಆದರೆ, ಸರ್ಕಾರ ಆಂಗ್ಲ ಭಾಷಾ ಮಾಧ್ಯಮಕ್ಕೆ ತೋರುವ ಕಾಳಜಿ ಕನ್ನಡಕ್ಕೆ ತೋರುತ್ತಿಲ್ಲ ಎಂಬುದು ಅಸಮಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಸರ್ಕಾರ ಸಮಗ್ರ ಸಮೀಕ್ಷೆ ನಡೆಸಿ, ಮಕ್ಕಳ ಸಂಖ್ಯೆ ಮತ್ತು ಪಾಲಕರ ಬೇಡಿಕೆಗೆ ಅನುಗುಣವಾಗಿ ಹೊಸ ಕನ್ನಡ ಮಾಧ್ಯಮ ಶಾಲೆಗಳನ್ನು ಆರಂಭಿಸಬೇಕು. ಈಗಾಗಲೇ ಇರುವ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ವಿಭಾಗ ತೆರೆದು, ಅಗತ್ಯ ಶಿಕ್ಷಕರ ನೇಮಕ, ಮೂಲಸೌಕರ್ಯ, ಗ್ರಂಥಾಲಯ ಹಾಗೂ ಕಲಿಕಾ ಸಾಮಗ್ರಿಗಳನ್ನು ಒದಗಿಸಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕುರಿತು ಗಡಿಭಾಗದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮವಹಿಸುವುದು ಒಳಿತು.

ಮಾತ್ರಭಾಷಾ ಶಿಕ್ಷಣಕ್ಕೆ ಒತ್ತು ನೀಡಲಿ

ಗಡಿಭಾಗದ ಜನರಿಗೆ ಕನ್ನಡದ ಬಗ್ಗೆ ಅಭಿಮಾನವಿದೆ. ಆದರೆ, ಆ ಅಭಿಮಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಶಿಕ್ಷಣ ಮಾಧ್ಯಮ ಅತ್ಯಂತ ಅಗತ್ಯವಿದೆ. ಕನ್ನಡ ಕಲಿಯಬೇಕೆಂಬ ಆಸಕ್ತಿ ಇರುವ ಮಕ್ಕಳಿಗೆ ತಮ್ಮದೇ ಗ್ರಾಮದಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಸಿಗದಿರುವುದು ಯಾವ ನ್ಯಾಯ? ಭಾಷಾವಾರು ಪ್ರಾಂತ್ಯಗಳಾಗಿ ರಾಜ್ಯಗಳು ರಚನೆಯಾದ ಏಳು ದಶಕಗಳ ಬಳಿಕವೂ ಕನ್ನಡ ನಾಡಿನ ಗಡಿಗ್ರಾಮಗಳಲ್ಲಿ ಕನ್ನಡ ಶಾಲೆಗಳಿಗಾಗಿ ಕಾಯುವ ಪರಿಸ್ಥಿತಿ ಮುಂದುವರಿದಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿದೆ.

ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಕನ್ನಡ ಕೇವಲ ಒಂದು ಭಾಷೆಯ ವಿಷಯವಾಗಿ ಉಳಿಯುವ ಅಪಾಯವಿದೆ. ಗಡಿಭಾಗದಲ್ಲಿ ಕನ್ನಡದ ಅಸ್ಮಿತೆ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾದರೆ ಮೊದಲು ಅಲ್ಲಿನ ಮಕ್ಕಳಿಗೆ ಮಾತ್ರಭಾಷೆ ಕನ್ನಡದಲ್ಲಿಯೇ ಕಲಿಯುವ ಹಕ್ಕು ಮತ್ತು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಗಡಿನಾಡಿನಲ್ಲಿ ಕನ್ನಡ ಉಳಿಸುವ ಮಾತುಗಳು ಘೋಷಣೆಗಳಿಗಷ್ಟೇ ಸೀಮಿತವಾಗುವ ಆತಂಕವಿದೆ.

ನಮ್ಮೂರಿನಲ್ಲಿ ಕನ್ನಡ ಮಾಧ್ಯಮ ಶಾಲೆ ಇಲ್ಲದಿರುವುದಕ್ಕೆ ಅನಿವಾರ್ಯವಾಗಿ ಮರಾಠಿ ಶಿಕ್ಷಣ ಕಲಿಯಬೇಕಾಗಿದೆ. ಮರಾಠಿ ಮಾಧ್ಯಮ ಶಿಕ್ಷಣ ಕಲಿಯುವ ಕಾರಣಕ್ಕೆ ಅನೇಕ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ಕನ್ನಡಿಗರಾಗಿ ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದರೂ ಅಲ್ಲಿ ದಾಖಲೆ ಸಮಸ್ಯೆ ಎದುರಾಗುತ್ತಿದೆ. ನಮಗೆ ಕನ್ನಡ ಬಗ್ಗೆ ಅಭಿಮಾನವಿದೆ, ಆದರೆ ಕನ್ನಡ ಶಿಕ್ಷಣ ದೊರಕದ ಕಾರಣಕ್ಕೆ ಭಾಷಾ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರ ಎಲ್ಲೆಡೆ ಕನ್ನಡ ಮಾಧ್ಯಮ ಶಾಲೆ ಆರಂಭಿಸಿ ಕಡ್ಡಾಯ ಕನ್ನಡ ಕಲಿಕೆಗೆ ಒತ್ತು ನೀಡಬೇಕು” ಎಂದು ಕಮಲನಗರ ತಾಲ್ಲೂಕಿನ ದಾಬಕಾ ಗ್ರಾಮದ ಮುಖಂಡ ಸಂತೋಷ ಜಾಧವ್‌ ಹೇಳುತ್ತಾರೆ.

WhatsApp Image 2026 11 23 at 7.41.16 PM 9

“ಕಳೆದ ಎರಡ್ಮೂರು ದಶಕಗಳಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಅನೇಕ ಖಾಸಗಿ, ಅನುದಾನಿತ ಶಾಲೆಗಳಿವೆ. ಅದರಲ್ಲೂ ಅನ್ಯಭಾಷಾ ಪ್ರಭಾವ ಇರುವ ಪರಿಸರದಲ್ಲಿ ಕನ್ನಡ ಭಾಷಾ ಬಾಂಧವ್ಯ ಬೆಸೆಯುವ ಕೆಲಸ ಮಾಡುತ್ತಿವೆ. ಇಂದಿನ ಆಂಗ್ಲ ಭಾಷಾ ಶಿಕ್ಷಣದಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ತ್ರಿಶಂಕು ಸ್ಥಿತಿಯಲ್ಲಿವೆ” ಎಂದು ಹಿರಿಯ ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಡಿಲಿಮಿಟೇಷನ್: 50% ಸಮಾನ ಕ್ಷೇತ್ರಗಳ ಹೆಚ್ಚಳವಾಗಲಿ; ಶಾಶ್ವತ ಸಂವಿಧಾನಾತ್ಮಕ ರಕ್ಷಣೆ ಸಿಗಲಿ

“ಸರ್ಕಾರ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ನವೀಕರಣಕ್ಕೆ ವಿಧಿಸಿರುವ ನಿಯಮಗಳನ್ನು ಸಡಿಲಗೊಳಸಬೇಕು. 1995ರ ನಂತರ ಆರಂಭವಾದ ಶಾಲೆಗಳನ್ನು ಅನುದಾನಕ್ಕೊಳಪಡಿಸಬೇಕು. ಅಗತ್ಯ ಮೂಲಸೌಕರ್ಯಕ್ಕೆ ಅನುದಾನ ಒದಗಿಸಲು ಕ್ರಮವಹಿಸಬೇಕು. ಅನ್ಯಭಾಷೆ ಪ್ರಭಾವದಲ್ಲಿಯೂ ಕನ್ನಡ ಕಲೆ, ಸಂಸ್ಕೃತಿ, ಭಾಷಾ ಉಳಿವಿಗಾಗಿ ಶ್ರಮಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳು ಉಳಿದರೆ ಮಾತ್ರ ಗಡಿಭಾಗದಲ್ಲಿ ಕನ್ನಡತ್ವ ಬೆಳೆಯಲು ಸಾಧ್ಯವಿದೆ” ಎಂದು ಅಭಿಪ್ರಾಯಪಟ್ಟರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ ಕೋಟೆ: ಬಳಲಿ ಬೆಂಡಾಗುತ್ತಿರುವ ಸ್ವತಂತ್ರ ಚಿತ್ರ ನಿರ್ದೇಶಕರ ಕಥೆ-ವ್ಯಥೆ

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು...

ಕಾಡಿನ ಮಕ್ಕಳೇ ವನ್ಯಜೀವಿಗಳ ನಿಜವಾದ ಬಂಧುಗಳು: ಆದಿವಾಸಿಗಳ ಜ್ಞಾನ, ಸಹಬಾಳ್ವೆ-ಅರಣ್ಯ ಸಂರಕ್ಷಣೆಯ ಭವಿಷ್ಯ

ಕಾಡು ಎಂದರೆ ಕೇವಲ ಮರಗಳು, ಪ್ರಾಣಿಗಳು ಮತ್ತು ಭೌಗೋಳಿಕ ಪ್ರದೇಶವಲ್ಲ. ಅದು...

ತನಿಖೆಗೆ ಸಿಜೆಐ ಸೂಚಿಸಿದ್ದ ನ್ಯಾಯಾಧೀಶರೇ ಈಗ ಜಾರ್ಖಂಡ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ!

ಪ್ರಾಮಾಣಿಕತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ದೂರುಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಇರಾನಿನ ದಾಳಿ ಭೀತಿ: ಬಂಗಲೆ ತೊರೆದು ಸೇನಾ ನೆಲೆ ಸೇರಿದ ಟ್ರಂಪ್ ಸಚಿವರು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಮುಖ ಸಚಿವರು ಮತ್ತು ಉನ್ನತ...