Aurad Ground Report | ನೀರಿನ ತ್ರಾಸ ಭಾಳ ಅದಾ, ಟ್ಯಾಂಕರ್‌ ನೀರು ಭ್ಯಾಡಾ, ನಮ್ಗ್ ನಳ ನೀರೇ ಬೇಕ್!

Date:

“ಎಂಟು ದಿನಕ್ಕೊಮ್ಮೆ ನೀರಿನ ಟ್ಯಾಂಕರ್‌ ಬರ್ತದೆ, ಅವರು ಮನೆಗೊಂದು ಬ್ಯಾರಲ್‌ ನೀರಷ್ಟೇ ಕೊಡ್ತಾರ. ಒಬ್ಬೊಬ್ಬರಿಗೆ ಅದೂ ಸಿಗಲ್ಲ, ಬ್ಯಾಸಕಿ ಇನ್ನೂ ನಾಲ್ಕೈದು ತಿಂಗಳ ಅದಾ, ಈಗಲೇ ಇಂತಹ ಗತಿ ಅದಾ, ಮುಂದೆ ಹ್ಯಾಂಗ್‌ ಮಾಡಬೇಕ್ರಿ ನಾವ್‌, ಏನ್‌ ಕೆಲಸಕ್ಕ ಹೋಗ್ಬೇಕಾ, ಬೇಗೂ ಹಗ್ಲೂ ನೀರಿನ ಸಲೇಕ್‌ ಮನ್ಯಾಗೇ ಇರ್ಬೇಕ. ಜಗಳ ಆಡಿ, ಬೈದಾಡಿಕೊಂಡು ತುಂಬಿಸಿಕೊಂಡಿಂದ ಒಂದು ಬ್ಯಾರಲ್‌ ನೀರು ನಮ್‌ ಮನೀಗಿ ಏನ್‌ ಊದು ಆಗಲ್ಲ, ನಮ್ಗ್‌ ಈ ಟ್ಯಾಂಕರ್‌ ನೀರೇ ಭ್ಯಾಡನೇ ಭ್ಯಾಡಾ,‌ ನಮಗ್ ಪೈಲಾ ಹ್ಹಾಂಗ್ ನಲ್ಲಿ ನೀರೇ ಬೇಕು” ಎಂದು ರಸ್ತೆ ಮೇಲೆ ಖಾಲಿ ಬ್ಯಾರಲ್‌ ಇಟ್ಟು ನೀರಿಗಾಗಿ ಕಾಯುತ್ತಿದ್ದ ಭಾಗ್ಯಶ್ರೀ ಹೇಳಿದರು.

- Advertisement -

“ಎಡ್ಡ ತಿಂಗಳಾಯ್ತು, ನೀರಿನ ತ್ರಾಸ ಭಾಳ ನಡದುದ್‌, ನಾಕೈದು ದಿನಕ್ಕೊಮ್ಮಿ ಟ್ಯಾಂಕರ್‌ ನೀರು ಕುಡ್ಲಾತರ್‌, ಒಂದು ಕೊಡ ನೀರಿನ ಸಲೇಕ್ ಹೊಡ್ಕೊ, ಬಡ್ಕೊಬೇಕ್‌ ಮಾಡ್ಬೇಕ, ಒಬ್ಬೊಬ್ಬುರ ಚಾಯ್‌ ಪಾನಿ ಖರ್ಚಾಕ ಅಂತ ರೊಕ್ಕ ತಕೊಂಡಿ ಟ್ಯಾಂಕರ್‌ ನೀರ ಕುಡ್ಲಾತರ. ರೊಕ್ಕ ಇದ್ದಿನ ದೊಡ್ಡ ಮಂದಿ ಫಿಲ್ಟರ್‌ ನೀರ ಕುಡಿಲಾತರ, ನಾವು ಇದೇ ಟ್ಯಾಂಕರ್‌ ನೀರೇ ಕುಡಿತೇವ, ಇದ್ದೂರ ಇರ್ತೇವ ಸತ್ತುರ ಸಾಯ್ತೇವ ಏನ್‌ ಮಾಡ್ಬೇಕ ಈಗ, ನಮಗ್‌ ನೀರಿನ ತಕ್ಲೀಪ್‌ ಇರರ್ಲಾದ್ಹಂಗ್‌ ಮಾಡಿ ಪುಣ್ಯ ಕಟ್ಕೋರಿ”…. ಎಂದು ವಿನಂತಿಸಿಕೊಂಡರು ಚಿದ್ರಿ ಬಡಾವಣೆಯ ರೇಣುಕಾ ರಾಗಾ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

“ನೀರಿನ ಬರ ಭಾಳ್‌ ಆಗ್ಯಾದ, ಹಳೆ ಬೋರ್‌ವೆಲ್‌ಗೆ ನೀರ ಕಮ್ಮಿ ಆಗ್ಯಾವ್, ಗಂಟೆಗೊಂದು ಕೊಡ ತುಂಬಲ್ಲ, ನೀರ ಸಿಗಲಾರದಕ್ಕೆ ಮಕ್ಕಳಿಗಿ ಶಾಲಿ ಬಿಡಿಸಿ ಕೈದಾಗ ಕೊಡ ಕೊಟ್ಟಿ ಟ್ಯಾಂಕರ್‌ ಬಲ್ಲಿ ಬಾರಿಗಿ ನಿಂದ್ರಸಿದೇವ. ಕೂಲಿ ಮಾಡಲಾಕ್‌ ಹೋದುರ್‌ ನೀರು ಸಿಗಲ್ಲ, ನೀರಿನ ಸಲೇಕ್‌ ಮನ್ಯಾಗ ಇದ್ದುರ್‌ ಹೊಟ್ಟಿಗಿ ಅನ್ನ ಹ್ಯಾಂಗ್‌ ಸಿಗ್ತುದ್‌. ಟ್ಯಾಂಕರ್‌ ನೀರು ಬಂದ್ರು ಮಾರಿ ನೋಡಿ ಕುಡ್ತಾರ, ಅದರಾಗ ಬೀ ರಾಜಕೀಯ ಮಾಡ್ಲಾತರ. ಟ್ಯಾಂಕರ್‌ ಹಾದಿ ನೋಡಿ-ನೋಡಿ ಸಾಕಾಗಿ ಕೊಡದಿಂದ ಕೆರೆಗಿಂದ ಗಲೀಜ್‌ ನೀರು ತರ್ಲಾತೀವ . ನಮ್ಗ್‌ ಟ್ಯಾಂಕರ್‌ ನೀರೇ ಭ್ಯಾಡಾ, ಪೈಲೆ ಹ್ಹಾಂಗ್‌ ನೀರು ಬರಬೇಕು ಸಾಕ್” ಎಂದು ನೋವು ತೋಡಿಕೊಂಡರು ಧನಗರ ಗಲ್ಲಿಯ ಪೂಜಾ.

WhatsApp Image 2026 11 16 at 6.48.43 AM

ಹೌದು,ಇದು ಜಿಲ್ಲೆಯ ಯಾವುದೋ ಮೂಲೆಯಲ್ಲಿರುವ ಕುಗ್ರಾಮದ ಕಥೆಯಲ್ಲ. ತಾಲ್ಲೂಕು ಕೇಂದ್ರ ಸ್ಥಾನವಾದ ಔರಾದ್‌ ಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರಿನ ಹಾಹಾಕಾರದ ವ್ಯಥೆ.

ಕಳೆದ ಎರಡು ತಿಂಗಳಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದರೂ, ಇದುವರೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಒಂದು ಕಡೆ ನೀರಿಗಾಗಿ ಜನರು ಹಗಲಿರುಳು ಪರದಾಡುತ್ತಿದ್ದರೆ, ಮತ್ತೊಂದೆಡೆ ಪಟ್ಟಣದಲ್ಲಿರುವ ಜಲಮೂಲಗಳು ಹಾಗೂ ನೀರು ಪೂರೈಕೆಯ ವ್ಯವಸ್ಥೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ʼಈದಿನ.ಕಾಮ್‌ʼ ನಡೆಸಿದ ಗ್ರೌಂಡ್‌ ರಿಪೋರ್ಟ್‌ನಲ್ಲಿ ಆಡಳಿತದ ನಿರ್ಲಕ್ಷ್ಯ ಮತ್ತು ವ್ಯವಸ್ಥೆಯ ಲೋಪಗಳಿಗೆ ಸಂಬಂಧಿಸಿದ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.

ಕಳೆದ ಎರಡು ತಿಂಗಳಿಂದ ಪಟ್ಟಣದ ಸುಮಾರು 20 ವಾರ್ಡ್‌ಗಳ ಪೈಕಿ ಬಹುತೇಕ ಎಲ್ಲ ವಾರ್ಡ್‌ಗಳಲ್ಲೂ ಕುಡಿಯುವ ನೀರಿನ ಅಭಾವ ಉಲ್ಬಣಿಸಿದೆ. ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಪಟ್ಟಣ ಪಂಚಾಯಿತಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದೆ. ಆದರೆ, ನಾಲ್ಕೈದು ದಿನಗಳಿಗೊಮ್ಮೆ ಬರುವ ಟ್ಯಾಂಕರ್‌ಗಳು ಜನರ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸುತ್ತಿಲ್ಲ. ಟ್ಯಾಂಕರ್‌ ಯಾವಾಗ ಬರುತ್ತದೆಯೋ ಎಂಬ ನಿರೀಕ್ಷೆಯಲ್ಲಿ ರಸ್ತೆ ಬದಿಯಲ್ಲಿ ಬ್ಯಾರಲ್‌ಗಳನ್ನು ಇಟ್ಟು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕೆಲಸಕ್ಕೆ ಹೋಗಬೇಕಾದ ಜನರು ನೀರಿಗಾಗಿ ಕೆಲಸ ಬಿಟ್ಟು ಕಾಯುವಂತಾಗಿದೆ. ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

ನೀರಿನ ಬರಕ್ಕೆ ಕಾರಣವೇನು?

ಔರಾದ್‌ ಪಟ್ಟಣಕ್ಕೆ ಹಾಲಹಳ್ಳಿ ಸಮೀಪದ ಮಾಂಜ್ರಾ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ, ಈ ಬಾರಿ ಮಳೆಯ ಕೊರತೆಯಿಂದ ಚಳಿಗಾಲ ಆರಂಭದಲ್ಲೇ ನದಿಯ ಒಡಲು ಬರಿದಾಗಿದ್ದು, ಪಟ್ಟಣದಲ್ಲಿ ನೀರಿನ ಅಭಾವ ತಲೆದೋರಿದೆ.

ಇಷ್ಟೊಂದು ಗಂಭೀರ ಸಮಸ್ಯೆ ಎದುರಾಗಿದ್ದರೂ, ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿಲ್ಲ. ಕುಡಿಯುವ ನೀರಿಗಾಗಿ ಪಟ್ಟಣ ಪಂಚಾಯಿತಿ ಅನುದಾನ ಹಾಗೂ ಜಲಜೀವನ್‌ ಮಿಷನ್‌ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ, ರಸ್ತೆಗಳನ್ನು ಅಗೆದು ಅಳವಡಿಸಿರುವ ಪೈಪ್‌ಲೈನ್‌ಗಳು ಹಾಳಾಗಿವೆ. ನೀರಿಗಾಗಿ ಕೊರೆಸಿರುವ ಹೊಸ ಬೋರ್‌ವೆಲ್‌ಗಳಲ್ಲಿ ಮೋಟಾರ್‌ ಹಾಗೂ ಪೈಪ್‌ಗಳೇ ಇಲ್ಲದಂತಾಗಿವೆ. ಇನ್ನು ತಾಲ್ಲೂಕಿನ ತೇಗಂಪೂರ ಕೆರೆಯಿಂದ ಪಟ್ಟಣಕ್ಕೆ ನೀರು ಪೂರೈಸಲು ಅಳವಡಿಸಿದ್ದ ಮೋಟಾರ್‌ಗಳು ನಾಪತ್ತೆಯಾಗಿವೆ ಎಂಬ ಆರೋಪವೂ ಕೇಳಿಬಂದಿದೆ.

WhatsApp Image 2026 11 16 at 12.20.27 PM
ಔರಾದ್‌ ಬಂದ್‌ಗೆ ಬೆಂಬಲಿಸುವಂತೆ ನಾಗರಿಕ ಸಮಿತಿಯ ಪ್ರಮುಖರು ಬಡಾವಣೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಸಮರ್ಪಕ ನೀರು ಪೂರೈಕೆ ವ್ಯವಸ್ಥೆ ಇಲ್ಲದಿರುವುದು, ಪರ್ಯಾಯ ಜಲಮೂಲಗಳನ್ನು ಸಕಾಲದಲ್ಲಿ ಬಳಸಿಕೊಳ್ಳದಿರುವುದು ಹಾಗೂ ಈಗಾಗಲೇ ಇರುವ ಸಂಪನ್ಮೂಲ ನಿರ್ವಹಣೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಜನರು ಜಲಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಟ್ಟಣದಲ್ಲಿ ಬತ್ತದ ಜಲಮೂಲ

ಔರಾದ್‌ ಪಟ್ಟಣದಲ್ಲಿ ಎರಡು ತಿಂಗಳಿಂದ ನೀರಿನ ಅಭಾವ ಎದುರಾಗಿದೆ. ಮನೆಗಳಲ್ಲಿ ಬಾವಿ ಅಥವಾ ಬೋರ್‌ವೆಲ್‌ ಇಲ್ಲದ ಕುಟುಂಬಗಳ ಸಂಕಷ್ಟ ಹೇಳತೀರದಾಗಿದೆ. ಕೊಡ ನೀರಿಗಾಗಿ ಗಂಟೆಗಟ್ಟಲೇ ಕಾಯಬೇಕಾಗಿದೆ, ಇನ್ನು ಕುಡಿಯುವ ನೀರಿಗಾಗಿ ಖರೀದಿ ನೀರೇ ಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಟ್ಯಾಂಕರ್‌ ಮೂಲಕ ನೀರು ಪೂರೈಸಲು ಹರಸಾಹಸ ಪಡುತ್ತಿದ್ದಾರೆ.

ʼಈದಿನ.ಕಾಮ್‌ʼ ತಂಡವು ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ಅಲ್ಲಿನ ಬಾವಿಗಳನ್ನು ಪರಿಶೀಲಿಸಿದಾಗ ಹಲವು ಸಾರ್ವಜನಿಕ ಬಾವಿಗಳಲ್ಲಿ ಇನ್ನೂ ನೀರು ಇರುವುದು ಗಮನಕ್ಕೆ ಬಂದಿದೆ. ಇದರಿಂದ ಪಟ್ಟಣದಲ್ಲಿರುವ ಸ್ಥಳೀಯ ಜಲಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇದ್ದರೂ, ಅವುಗಳ ಬಗ್ಗೆ ಆಡಳಿತ ವ್ಯವಸ್ಥೆ ಗಮನಹರಿಸದಿರುವುದು ಸ್ಪಷ್ಟವಾಗಿ ಕಂಡಿದೆ.

‘ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲ ತುಪ್ಪಕ್ಕಾಗಿ ಹುಡುಕಾಡಿದಂತೆ’ ಎಂಬ ಮಾತಿಗೆ ಔರಾದ್‌ ಪಟ್ಟಣದ ಪರಿಸ್ಥಿತಿ ಸಾಕ್ಷಿಯಾಗಿದೆ. ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಸಾಂಪ್ರದಾಯಿಕ ಸೇದುವ ಬಾವಿಗಳಿದ್ದು, ಹಿಂದೆ ಇವುಗಳೇ ಪಟ್ಟಣದ ಜನರ ಬಳಕೆಗೆ ಆಧಾರವಾಗಿದ್ದವು. ಕಾಲಕ್ರಮೇಣ ಕೆಲವು ಬಾವಿಗಳು ಕಣ್ಮರೆಯಾಗಿದ್ದರೂ, ಈಗಲೂ ಅನೇಕ ಬಾವಿಗಳಲ್ಲಿ ನೀರು ಲಭ್ಯವಿದೆ. ಅವುಗಳನ್ನು ಸ್ವಚ್ಛಗೊಳಿಸಿ, ದುರಸ್ತಿಗೊಳಿಸಿ ಬಳಕೆಗೆ ತಂದರೆ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗಾದರೂ ತಗ್ಗಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ಹೊಸ ಕಾಮಗಾರಿಗಳಿಗೆ ಅನುದಾನ ಕೇಳುವ ಆಡಳಿತ ವ್ಯವಸ್ಥೆ, ಈಗಾಗಲೇ ಇರುವ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸದ್ಬಳಕೆಗೆ ಆದ್ಯತೆ ನೀಡುತ್ತಿಲ್ಲ. ಪಟ್ಟಣದ ಜೀವನಾಡಿಯಾಗಿದ್ದ ಏಕಂಬಾ ರಸ್ತೆಯಲ್ಲಿರುವ ವಜ್ಜರ ಬಾವಿಯಲ್ಲಿ ಈಗಲೂ ಸುಮಾರು ಹತ್ತು ಅಡಿಯಷ್ಟು ನೀರಿದೆ. ಆದರೆ, ಅಲ್ಲಿನ ಮೋಟಾರ್‌ ಹಾಗೂ ಪೈಪ್‌ಗಳು ಹಾಳಾಗಿ ತುಕ್ಕು ಹಿಡಿದಿವೆ. ನೀರಿನ ಸಮಸ್ಯೆ ಎದುರಾಗಿರುವ ಈ ವೇಳೆ ಇಂತಹ ಜಲಮೂಲ ಬಳಕೆಗೆ ತರದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

WhatsApp Image 2026 11 16 at 6.48.42 AM
ವಜ್ಜರ್‌ ಬಾವಿಯಲ್ಲಿ ನೀರಿನ ಮೂಲ

‘ನಮ್ಮ ಓಣಿಯಲ್ಲಿರುವ ಸಾರ್ವಜನಿಕ ಬಾವಿಯಲ್ಲಿ ಸಾಕಷ್ಟು ನೀರಿದೆ. ಅದರಲ್ಲಿನ ಹೂಳು ತೆಗೆದರೆ ಇನ್ನಷ್ಟು ನೀರು ಸಂಗ್ರಹವಾಗುತ್ತದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಓಣಿಯ ಜನರೇ ತಲಾ ಹಣ ಸಂಗ್ರಹಿಸಿ ₹1,100 ವೆಚ್ಚದಲ್ಲಿ ಬಾವಿಯ ಹೂಳು ತೆಗೆಸಿದ್ದೇವೆ. ಈಗ ಹಗ್ಗದ ಮೂಲಕ ನೀರು ಸೇದಿ ಬಳಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ಈರಮ್ಮ ಅವರು ಬಾವಿಯ ಸ್ಥಿತಿಯನ್ನು ತೋರಿಸುತ್ತಾ ಅಳಲು ತೋಡಿಕೊಂಡರು.

ಹುಸಿಯಾದ ಸಚಿವರ ಭರವಸೆ!

ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ತೇಗಂಪೂರ ಕೆರೆಗೆ ಭೇಟಿ ನೀಡಿದ್ದರು. ಈ ವೇಳೆ ಮೂರ್ನಾಲ್ಕು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಔರಾದ್‌ ಶಾಸಕ ಪ್ರಭು ಚವ್ಹಾಣ ಅವರು ಸುಮಾರು ಒಂದು ಗಂಟೆ ಕಾಲ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ತೇಗಂಪೂರ ಕೆರೆಯಿಂದ ನೀರು ಪೂರೈಕೆ ಆರಂಭವಾದರೂ ಕೆಲವೇ ವಾರ್ಡ್‌ಗಳಿಗೆ ಸೀಮಿತವಾಗಿದ್ದು, ಜನರ ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.

ಔರಾದ್‌ ಪಟ್ಟಣ ಪಂಚಾಯಿತಿಗೆ ಕಳೆದ ಒಂದು ತಿಂಗಳಿಂದ ಖಾಯಂ ಮುಖ್ಯಾಧಿಕಾರಿಯೇ ಇಲ್ಲ. ಈ ಜವಾಬ್ದಾರಿಯನ್ನು ತಹಸೀಲ್ದಾರ್‌ ಮಹೇಶ ಪಾಟೀಲ್‌ ಅವರಿಗೆ ವಹಿಸಲಾಗಿದೆ. ಈಗಾಗಲೇ ತಮ್ಮ ಇಲಾಖೆಯ ಕರ್ತವ್ಯ ನಿರ್ವಹಿಸುತ್ತಿರುವ ಅವರು ಹೆಚ್ಚುವರಿ ಜವಾಬ್ದಾರಿಯನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪಟ್ಟಣ ಪಂಚಾಯಿತಿಗೆ ಖಾಯಂ ಮುಖ್ಯಾಧಿಕಾರಿಯನ್ನು ನೇಮಿಸುವಂತೆ ಶಾಸಕ ಪ್ರಭು ಚವ್ಹಾಣ ಅವರು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಹೊಸ ಅಧಿಕಾರಿಯನ್ನು ನೇಮಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಈವರೆಗೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಒಂದೆಡೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮತ್ತೊಂದೆಡೆ ಪಟ್ಟಣ ಪಂಚಾಯಿತಿಗೆ ಖಾಯಂ ಮುಖ್ಯಾಧಿಕಾರಿಯೂ ನೇಮಕವಾಗಿಲ್ಲ. ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೆರೆ ತುಂಬುವ ಯೋಜನೆ, ಕಾರಂಜಾ ಜಲಾಶಯದಿಂದ ನೀರು ತರುವ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿದೆ. ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿ ಸ್ಥಳೀಯ ಮಾಜಿ ಸಚಿವ, ಹಾಲಿ ಶಾಸಕ ಪ್ರಭು ಚವ್ಹಾಣ ಅವರ ನಿರಂತರ ನಿಗಾ ಹಾಗೂ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ತಾಲ್ಲೂಕು ಕೇಂದ್ರದಲ್ಲೇ ಜನರು ನೀರಿಗಾಗಿ ಪರದಾಡುತ್ತಿರುವುದು ವಿಪರ್ಯಾಸ.

WhatsApp Image 2026 11 16 at 12.12.41 PM
ಸಾರ್ವಜನಿಕ ಬಾವಿಯಲ್ಲಿ ನೀರು ಸೇದುತ್ತಿರುವುದು

“ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಸ್ಥಳೀಯ ನಿವಾಸಿ ರಾಜಪ್ಪ ಚಿದ್ರಿ ಒತ್ತಾಯಿಸಿದ್ದಾರೆ.

ಶಾಶ್ವತ ಪರಿಹಾರಕ್ಕೆ ಜನರ ಆಗ್ರಹ

ಮಾಂಜ್ರಾ ನದಿಯಲ್ಲಿ ನೀರು ಸಂಪೂರ್ಣ ಖಾಲಿಯಾಗಿರುವ ಹಿನ್ನೆಲೆಯಲ್ಲಿ ತೇಗಂಪೂರ ಕೆರೆಯಿಂದ ಪಟ್ಟಣಕ್ಕೆ ನೀರು ಪೂರೈಸಲು 50 ಎಚ್‌ಪಿ ಸಾಮರ್ಥ್ಯದ ಮೋಟಾರ್‌ ಅಳವಡಿಸಿ, ಅಗತ್ಯ ಪೈಪ್‌ಲೈನ್‌ ವ್ಯವಸ್ಥೆ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.

ಈ ಹಿಂದೆ ತೇಗಂಪೂರ ಕೆರೆಯಲ್ಲಿ ಅಳವಡಿಸಲಾಗಿದ್ದ ಮೋಟಾರ್‌ಗಳು ನಾಪತ್ತೆಯಾಗಿರುವ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಪಟ್ಟಣದಲ್ಲಿ ಕುಡಿಯುವ ನೀರಿನ ಯೋಜನೆಗಳಿಗಾಗಿ ಇದುವರೆಗೆ ಖರ್ಚು ಮಾಡಿರುವ ಅನುದಾನದ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಹಾಳಾಗಿರುವ ಪೈಪ್‌ಲೈನ್‌ಗಳು, ಬೋರ್‌ವೆಲ್‌ಗಳು ಹಾಗೂ ಮೋಟಾರ್‌ಗಳನ್ನು ದುರಸ್ತಿಗೊಳಿಸಿ ಬಳಕೆಗೆ ತರಬೇಕು ಎಂಬುದು ನಾಗರಿಕ ಸಮಿತಿಯ ಆಗ್ರಹವಾಗಿದೆ.

ಪ್ರತಿ ಬಾರಿ ನೀರಿನ ಸಮಸ್ಯೆ ಎದುರಾದಾಗ ಟ್ಯಾಂಕರ್‌ ವ್ಯವಸ್ಥೆ ಮಾಡುವುದನ್ನೇ ಪರಿಹಾರವೆಂದು ಭಾವಿಸುವ ಬದಲು, ಪಟ್ಟಣದಲ್ಲಿರುವ ಪುರಾತನ ಬಾವಿಗಳು ಸೇರಿದಂತೆ ಎಲ್ಲ ಸ್ಥಳೀಯ ಜಲಮೂಲಗಳನ್ನು ಗುರುತಿಸಿ ಪುನರುಜ್ಜೀವನಗೊಳಿಸಬೇಕು. ತೇಗಂಪೂರ ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವ್ಯವಸ್ಥೆ ರೂಪಿಸಬೇಕು. ಜನರಿಗೆ ಕುಡಿಯುವ ನೀರು ಒದಗಿಸುವುದು ಆಡಳಿತದ ಮೂಲಭೂತ ಜವಾಬ್ದಾರಿಯಾಗಿದ್ದು, ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ : ರಸ್ತೆ ಅಪಘಾತ | ರಾಜ್ಯದಲ್ಲಿ ವರ್ಷಕ್ಕೆ 11 ಸಾವಿರಕ್ಕೂ ಹೆಚ್ಚು ಬಲಿ; ಪ್ರತಿದಿನ ಸರಾಸರಿ 31 ಮಂದಿ ಸಾವು!

ಎರಡು ತಿಂಗಳಿಂದ ನೀರಿಗಾಗಿ ಕಾಯುತ್ತಿರುವ ಔರಾದ್‌ ಜನರಿಗೆ ಇನ್ನೆಷ್ಟು ದಿನ ಟ್ಯಾಂಕರ್‌ಗಳೇ ಆಸರೆ? ಪಟ್ಟಣದಲ್ಲೇ ಕೆರೆ, ಬಾವಿಗಳಲ್ಲಿ ನೀರಿನ ಮೂಲಗಳಿದ್ದರೂ ಅವುಗಳನ್ನು ಬಳಸಿಕೊಳ್ಳದ ಆಡಳಿತ ವ್ಯವಸ್ಥೆ ಯಾವಾಗ ಎಚ್ಚೆತ್ತುಕೊಳ್ಳಲಿದೆ? ಜನರ ದಾಹ ನೀಗಿಸುವ ಶಾಶ್ವತ ಪರಿಹಾರ ಯಾವಾಗ ಸಿಗಲಿದೆ? ಎಂಬ ಪ್ರಶ್ನೆಗಳು ಈಗ ಔರಾದ್‌ ಪಟ್ಟಣದ ಜನರನ್ನು ಕಾಡುತ್ತಿವೆ. ಶಾಶ್ವತ ನೀರಿನ ಪರಿಹಾರಕ್ಕೆ ಆಗ್ರಹಿಸಿ ನಾಳೆ(ನ.17) ರಂದು ಔರಾದ್‌ ತಾಲ್ಲೂಕು ನಾಗರಿಕ ಸಂಘರ್ಷ ಸಮಿತಿಯು ಔರಾದ್‌ ಬಂದ್‌ ಕರೆ ನೀಡಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರಿಗರ ಸುರಕ್ಷತೆ: ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲು ಪೊಲೀಸ್ ಇಲಾಖೆಗೆ ಸಿಎಂ ಸೂಚನೆ

ಬೆಂಗಳೂರು ನಗರದ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮಹತ್ವದ...

ರಸ್ತೆ ಸುರಕ್ಷತೆ ಕೇವಲ ಮರೀಚಿಕೆ: ರಾಜ್ಯದಲ್ಲಿ ಅಪಘಾತಗಳಿಗೆ ವರ್ಷಕ್ಕೆ 11,000 ಸಾವು

ಕರ್ನಾಟಕದಲ್ಲಿ ರಸ್ತೆ ಸುರಕ್ಷತೆಯು ಆತಂಕಕಾರಿ ಮಟ್ಟ ತಲುಪಿದ್ದು, ರಸ್ತೆ ಅಪಘಾತಗಳಲ್ಲಿ ಪ್ರತಿ...