ಬೀದರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ನಿಗದಿತ ಅವಧಿಯಲ್ಲಿ ನಡೆಯದೆ ಒಂದು ತಿಂಗಳ ಕಾಲ ವಿಳಂಬವಾಗಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿದೆ.
ಅಕ್ಟೋಬರ್ ಮೊದಲ ವಾರದಲ್ಲಿಯೇ ಆರಂಭವಾಗಬೇಕಿದ್ದ ಪರೀಕ್ಷೆಗಳನ್ನು ಈವರೆಗೆ ನಡೆಸಿಲ್ಲ. ಇನ್ನೊಂದು ಅಚ್ಚರಿ ಸಂಗತಿ ಎಂದರೆ 2ನೇ ಸೆಮಿಸ್ಟರ್ ಪರೀಕ್ಷೆ ಪೂರ್ಣಗೊಳಿಸದೆಯೇ 3ನೇ ಸೆಮಿಸ್ಟರ್‌ನ ತರಗತಿಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿದೆ ಎಂಬ ಆರೋಪ ಕೇಳಿಬಂದಿದೆ.
ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಂಡು ಪರೀಕ್ಷೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಈ ಹಿಂದೆ ಅಕ್ಟೋಬರ್ 16ರಿಂದ ಪರೀಕ್ಷಾ ದಿನಾಂಕ ಮಾಡಲಾಗಿತ್ತು, ಬಳಿಕ ಮುಂದೂಡಿ ಇದೀಗ ತಿಂಗಳ ಬಳಿಕ ನ.12ರಿಂದ ಪರೀಕ್ಷೆ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆ. ಒಂದು ಕಡೆ ಹಿಂದಿನ ಸೆಮಿಸ್ಟರ್‌ನ ಪರೀಕ್ಷೆ ನಡೆಯದ ಮುನ್ನವೇ ಮುಂದಿನ ಸೆಮಿಸ್ಟರ್‌ನ ತರಗತಿ ಆರಂಭಕ್ಕೆ ಅಧಿಸೂಚನೆ ಮಾಡಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ವೇಳಾಪಟ್ಟಿಯಲ್ಲಿನ ಸಮನ್ವಯದ ಕೊರತೆಯನ್ನು ಎತ್ತಿತೋರಿಸಿದೆ.
ನಿಗದಿತ ವೇಳಾಪಟ್ಟಿಗೆ ಗ್ರಹಣ
2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಜೂನ್ 1ರಿಂದ ತರಗತಿಗಳು ಆರಂಭಗೊಂಡು ಸೆಪ್ಟೆಂಬರ್ 30ಕ್ಕೆ ಬೋಧನಾ ಅವಧಿ ಪೂರ್ಣಗೊಂಡಿತ್ತು. ಅಕ್ಟೋಬರ್ 1ರಿಂದ 30ರವರೆಗೆ ಪರೀಕ್ಷೆಗಳನ್ನು ನಡೆಸಲು ಅಂದಿನ ಮೌಲ್ಯಮಾಪನ ಕುಲಸಚಿವರು ಸೆಪ್ಟೆಂಬರ್ 19ರಂದು ವೇಳಾಪಟ್ಟಿ ಪ್ರಕಟಿಸಿದ್ದರು.
ಈ ವೇಳಾಪಟ್ಟಿಯಂತೆ ಎಲ್ಲವೂ ನಡೆದಿದ್ದರೆ ಅಕ್ಟೋಬರ್ ಅಂತ್ಯದೊಳಗೆ ಪರೀಕ್ಷೆಗಳು ಪೂರ್ಣಗೊಂಡು, ನವೆಂಬರ್ 2ರಿಂದ ಮೂರನೇ ಸೆಮಿಸ್ಟರ್ ತರಗತಿಗಳು ಆರಂಭವಾಗಬೇಕಿತ್ತು. ಆದರೆ, ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸೇರಿದಂತೆ ವಿವಿಧ ಕಾರಣಗಳಿಂದ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ ಎನ್ನಲಾಗಿದೆ.
ಬೋಧನಾ ಅವಧಿ ಮುಗಿದು ಒಂದು ತಿಂಗಳು ಕಳೆದರೂ ಪರೀಕ್ಷೆ ಯಾಕೆ ನಡೆಸಲಿಲ್ಲ ಎಂಬುದಕ್ಕೆ ವಿಶ್ವವಿದ್ಯಾಲಯ ಸ್ಪಷ್ಟ ಮಾಹಿತಿ ನೀಡಿಲ್ಲ. ಸೆ.17ರಂದು ಅಧಿಸೂಚನೆಯಲ್ಲಿ ನವೆಂಬರ್ 2ರಿಂದ ಸ್ನಾತಕೋತ್ತರ ಕೋರ್ಸ್‌ಗಳ 1 ಮತ್ತು 3ನೇ ಸೆಮಿಸ್ಟರ್ ತರಗತಿಗಳನ್ನು ಆರಂಭಿಸುವಂತೆ ಸೂಚಿಸಲಾಗಿತ್ತು. ಇದೀಗ ಪರೀಕ್ಷೆಗಳು ನ.12ರಿಂದ ನ.22ರವರೆಗೆ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿದ ವಿವಿ, ಹಿಂದಿನ ದಿನ ನ.11ರಿಂದಲೇ ಪ್ರಥಮ ಮತ್ತು ಮೂರನೇ ಸೆಮಿಸ್ಟರ್ ತರಗತಿಗಳ ಆರಂಭಿಸುವಂತೆ ನ.7ರಂದು ಹೊರಡಿಸಿದ ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕೆ ಅಥವಾ ತರಗತಿಗೆ ಹಾಜರಾಗಬೇಕೆ ಎಂಬ ಇಕ್ಕಟ್ಟು ಎದುರಾಗಿದೆ.
ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.
ಪದೇಪದೇ ಬದಲಾಗುವ ವೇಳಾಪಟ್ಟಿ
ಸ್ನಾತಕೋತ್ತರ ಪದವಿ ಪರೀಕ್ಷೆಗಳ ವೇಳಾಪಟ್ಟಿ ಪದೇಪದೇ ಬದಲಾಗುತ್ತಿರುವುದು ವಿದ್ಯಾರ್ಥಿಗಳು, ಪ್ರಾಧ್ಯಾಪಕರಲ್ಲಿ ಗೊಂದಲ ಮೂಡಿಸಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ನಿಗದಿಪಡಿಸಿದ ವೇಳಾಪಟ್ಟಿಯಂತೆ ತರಗತಿ ಮತ್ತು ಪರೀಕ್ಷೆಗಳನ್ನು ನಡೆಸುವಲ್ಲಿ ವಿಶ್ವವಿದ್ಯಾಲಯ ವಿಫಲವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ನಿಗದಿತ ಪಠ್ಯಕ್ರಮ ಪೂರ್ಣಗೊಳಿಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪರೀಕ್ಷೆಗಳು ಮುಂದೂಡಿಕೆಯಾಗುತ್ತಿರುವುದರಿಂದ ಅನಿವಾರ್ಯವಾಗಿ ಕಾಯುವಂತಾಗಿದೆ. ವಿಶೇಷವಾಗಿ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿಳಂಬ ಗಂಭೀರ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಫಲಿತಾಂಶ ಪ್ರಕಟಣೆಯೂ ವಿಳಂಬವಾದರೆ ಉದ್ಯೋಗ ನೇಮಕಾತಿ ಪ್ರಕ್ರಿಯೆ, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉನ್ನತ ಶಿಕ್ಷಣದ ಪ್ರವೇಶ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ತೊಂದರೆ ಆಗಬಹುದು ಎಂಬ ಆತಂಕ ವಿದ್ಯಾರ್ಥಿಗಳಲ್ಲಿದೆ.
ನಮಗೇಕಿಲ್ಲ ಮೌಲ್ಯಮಾಪನ ಅವಕಾಶ?
ಪರೀಕ್ಷಾ ವಿಳಂಬದ ನಡುವೆಯೇ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸ್ನಾತಕೋತ್ತರ ತರಗತಿಗಳಿಗೆ ನಿರಂತರವಾಗಿ ಬೋಧನೆ ಮಾಡುತ್ತಿರುವ ಅರ್ಹ ಹಾಗೂ ಅನುಭವಿ ಪ್ರಾಧ್ಯಾಪಕರು ಮತ್ತು ವಿಷಯ ತಜ್ಞರನ್ನು ಮೌಲ್ಯಮಾಪನ ಕಾರ್ಯಕ್ಕೆ ಪರಿಗಣಿಸುತ್ತಿಲ್ಲ ಎಂಬುದು ಸರ್ಕಾರಿ ಸ್ನಾತಕೋತ್ತರ ಕಾಲೇಜುಗಳ ಪ್ರಾಧ್ಯಾಪಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರಿ ಸ್ನಾತಕೋತ್ತರ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಬೋಧನೆ ಮಾಡುತ್ತಿರುವ ಹಾಗೂ ಸಂಬಂಧಿತ ವಿಷಯಗಳಲ್ಲಿ ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿರುವ ಬೋಧಕರನ್ನು ಮೌಲ್ಯಮಾಪನ ಕಾರ್ಯದಿಂದ ದೂರವಿಡಲಾಗುತ್ತಿದೆ. ವಿಶ್ವವಿದ್ಯಾಲಯ ಮುಖ್ಯಸ್ಥರ ಗಮನಕ್ಕೆ ತಂದಾಗ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ಸ್ಪಷ್ಟ ಬದಲಾವಣೆ ಕಂಡುಬಂದಿಲ್ಲ ಎಂದು ಪ್ರಾಧ್ಯಾಪಕ ವಲಯ ದೂರಿದೆ.
ಮೌಲ್ಯಮಾಪನ ಕಾರ್ಯಕ್ಕೆ ಪ್ರಾಧ್ಯಾಪಕರನ್ನು ಆಯ್ಕೆ ಮಾಡುವಾಗ ಅನುಭವ, ವಿಷಯ ಪರಿಣತಿ ಮತ್ತು ಶೈಕ್ಷಣಿಕ ಅರ್ಹತೆಗಳಿಗೆ ಆದ್ಯತೆ ನೀಡಬೇಕಲ್ಲವೇ? ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪಾಠ ಬೋಧಿಸುವವರಿಗೇ ಮೌಲ್ಯಮಾಪನದ ಅವಕಾಶ ನೀಡದಿರುವುದಕ್ಕೆ ಕಾರಣವೇನು? ಆಯ್ಕೆಗೆ ಅನುಸರಿಸುತ್ತಿರುವ ಮಾನದಂಡಗಳೇನು? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಬಳಕೆಯಾಗದ ಅತಿಥಿ ಪ್ರಾಧ್ಯಾಪಕರ ಸೇವೆ
ಪರೀಕ್ಷೆಗಳು ನಿಗದಿತ ಅವಧಿಯಲ್ಲಿ ನಡೆಯದಿರುವುದು ಶೈಕ್ಷಣಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಪರೀಕ್ಷೆಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದರೆ, ಬೋಧನಾ ಅವಧಿ ಪೂರ್ಣಗೊಂಡಿರುವುದರಿಂದ ಪ್ರಾಧ್ಯಾಪಕರಿಗೆ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಲ್ಲದಂತಾಗಿದೆ. ಅದರಲ್ಲೂ ಅತಿಥಿ ಪ್ರಾಧ್ಯಾಪಕರ ಬೋಧನಾ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ನೇಮಕಗೊಂಡಿರುವ ಅತಿಥಿ ಪ್ರಾಧ್ಯಾಪಕರಿಗೆ ಬೋಧನಾ ಕಾರ್ಯ ಇಲ್ಲದಿದ್ದರೂ ನಿಗದಿತ ಗೌರವಧನ ಪಾವತಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ.
ನಮ್ಮ ಪಠ್ಯಕ್ರಮ ಬೋಧನಾ ಅವಧಿ ಪೂರ್ಣಗೊಂಡು ಒಂದು ತಿಂಗಳು ಪೂರ್ಣಗೊಂಡಿದೆ. ಅಕ್ಟೋಬರ್ ತಿಂಗಳಲ್ಲಿ ಪರೀಕ್ಷಾ ದಿನಾಂಕ ನಿಗದಿಪಡಿಸಿ ಮತ್ತೆ ಮುಂದೂಡಿದರು. ಯಾವಾಗ ಪರೀಕ್ಷೆ ನಡೆಯುತ್ತವೆ ಏನೆಂಬುದು ಗೊತ್ತೇ ಆಗುವುದಿಲ್ಲ. ಇನ್ನು ಪರೀಕ್ಷಾ ಮುನ್ನವೇ ತರಗತಿ ಆರಂಭ ಮಾಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದರು.
ಈ ಬಗ್ಗೆ ಬೀದರ್ ವಿವಿ ಮೌಲ್ಯಮಾಪನ ಕುಲಸಚಿವ ರಾಜಕುಮಾರ ಮಾಲಿಪಾಟೀಲ್ ಅವರು ʼಈದಿನʼ ಜೊತೆ ಮಾತನಾಡಿ, “ನಾನು ಹೊಸದಾಗಿ ನೇಮಕ ಆಗಿದ್ದೇನೆ. ಶೈಕ್ಷಣಿಕ ಅವಧಿ ಪೂರ್ಣಗೊಳಿಸುವ ಸಂಬಂಧ ಈ ರೀತಿ ಆಗಿರಬಹುದು. ನಾಳೆ (ನ.12) ರಿಂದ ಪಿಜಿ ಕೋರ್ಸ್‌ಗಳ 2ನೇ ಮತ್ತು 4ನೇ ಪರೀಕ್ಷೆ ನಡೆಯಲಿವೆ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಜಾತಿಯ ಗೋಡೆಗಳಾಚೆ ಪ್ರೀತಿಯ ಪಯಣ: ಸಂವಿಧಾನದ ಬೆಳಕಿನಲ್ಲಿ ಹೊಸ ಬದುಕಿಗೆ ಮುನ್ನುಡಿ!


ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



