ಕಲಬುರಗಿ ಸೀಮೆಯ ಕನ್ನಡ | ಮಾತು ಮುಗಿವಷ್ಟರಲ್ಲಿ ಅವಳ ಮಗಳು ‘ಮಮ್ಮಿ ಮೈಯಾಗ ದೇವರು ಬರತಾರ’ ಅಂದಳು!

Date:

Advertisements
9ನೇ ತರಗತಿಯಲ್ಲಿದ್ದಾಗಲೇ ಮದುವೆಯಾಗಿದ್ದ ರೇಣುಕಾಗೆ ಆಗಿನ್ನೂ ಬಾಲ್ಯ ಮಾಸದ ಹರೆಯ. ಸಂಸಾರ ಎಂದರೇನು ಎಂಬ ಅರಿವಿರದಾಗ್ಲೇ ಸಂಸಾರದ ನೊಗಕ್ಕ ಹೆಗಲು ಕೊಟ್ಟಿದ್ದ ಅವಳು, ಸಾಲಾಗಿ ಐದು ಮಕ್ಕಳ ತಾಯಾದಳು. ಅವಿಭಕ್ತ ಕುಟುಂಬ, ಅತ್ತೆ-ಮಾವ, ಗಂಡನ ದಬ್ಬಾಳಿಕೆಯಲ್ಲೇ ಅರ್ಧ ಆಯಸ್ಸು ಮುಗಿಯಿತು...

ಗೆಳತಿ ರೇಣುಕಾಗ ಭೇಟಿಯಾಗಿ ಮೂವತ್ತು ವರ್ಷದ ಮ್ಯಾಲಾಗಿತ್ತು. ಹತ್ತನೇ ಇಯತ್ತೆ ಮುಗಿದ ಮ್ಯಾಗ ಹೈಸ್ಕೂಲ್ ಗೆಳತೇರ ಎಲ್ಲಾ ಚದುರಿಬಿಟ್ಟಿದ್ದೇವು. ಕಾಲೇಜಿಗಿ ಬಂದಮ್ಯಾಲ ಎಲ್ಲರೂ ಅವರವರ ಇಷ್ಟದ ವಿಷಯಗಳನ್ನು ತಗೊಂಡು ಬ್ಯಾರೆ-ಬ್ಯಾರೆ ಕಾಲೇಜಿಗಿ ಹೋದ ಮ್ಯಾಲ್, ಹಳೆ ಗೆಳತೇರು ಹಿಂದಕ್ಕಾಗಿ ಹೊಸ-ಹೊಸ ಗೆಳೆತನ ಮುಂದುವರಿತಾ ಹೊಯ್ತು.

ಹಂಗ ನೋಡಿದ್ದರ, ಇಷ್ಟದ ಓದು ಅಂಬೋ ಪದಾನೇ ನಮಗ ಪರಿಹಾಸ್ಯ ಅನಿಸ್ತದ. ನಾವು ಹೈಸ್ಕೂಲ್ ಓದೋವಾಗ ನಮ್ಮ ತಂದಿ-ತಾಯಿ ನಮಗೆಂದೂ ಓದರಿ ಅಂತ ಒತ್ತಾಯ ಮಾಡ್ದೋರೆ ಅಲ್ಲ. ಹೆಣ್ಣಮಕ್ಕಳು ಮದಿ ಆಗತನಾ ಮನ್ಯಾಗ್ ಕುಂತು ಏನ್ ಮಾಡ್ತಾರ್, ಸುಮ್ಮ ಸಾಲಿ-ಕಾಲೇಜಿಗಿ ಹೋಗಿಬರ್ಲಿ ಅನ್ನೊ ಒಂದೇ ಉದ್ದೇಶದಿಂದ ಕಲಿಲಾಕ ಕಳಸ್ತಿದ್ದರು. ನನ್ನ ಬಹುತೇಕ ಗೆಳತೇರ ಮದಿ ಪಿಯುಸಿ ಮಗಿಯೋವಷ್ಟರಲ್ಲೆ ಆಯಿತು. ಎಲ್ಲರದೂ ಮದಿ, ಮಕ್ಕಳು, ಸಂಸಾರಗಾಗ ಮುಳುಗಿ ಒಂದು ಮೂವತ್ತು ವರ್ಷ ಒಬ್ಬರಿಗೊಬ್ಬರು ಅಪರಿಚಿತರಾಗೆ ಇದ್ದವರು, ಈ ಸ್ಮಾರ್ಟ್ ಪೋನ್ ಬಂದ ಮ್ಯಾಲೇನೆ ಮತ್ತ ಸಂಪರ್ಕದೊಳಗ ಬಂದದ್ದು.

Indian Women 7

ಒಬ್ಬರಿಗೊಬ್ಬರು ಮಾತಾಡಕೋತ ಒಬ್ಬರ ಪತ ಒಬ್ಬರು ತಗೊಂಡು, ಎಲ್ಲರೂ ಒಮ್ಮ ಬೇಟಿನೂ ಆದೇವು. ಎಲ್ಲರ ಮಕ್ಳು ದೊಡ್ಡೋರಾಗಿ, ಕೆಲವರಿಗಿ ಮದಿನೂ ಆಗಿ ಮೊಮ್ಮಕ್ಕಳು ಕಂಡಿದ್ದರು. ಹದಿನಾರು ವರ್ಷಕ್ಕ ಮದಿ ಆದಮ್ಯಾಲ್ ಅರ್ಧ ವಯಸ್ಸಿಗಿ ಅಜ್ಜಿ ಆಗೋದು ಸಹಜ. ಬೇಟಿಯಾಗಿ ಎಲ್ಲರೂ ಅವರವರ ಸಂಸಾರ, ಮಕ್ಕಳ-ಮರಿ, ಗಂಡ ಎಲ್ಲರ ವಿಷಯ ವಿನಿಮಯ ಮಾಡಿಕೊಂಡೆವು. ಎಲ್ಲರದೂ ಆರಕ್ಕೇರದ ಮೂರಕ್ಕ ಇಳಿಯದ ಸ್ಥಿತಿ. ಸಂತೋಷ, ನೆಮ್ಮದಿ ಅದ ಅಂದ್ರ ಅದ, ಇಲ್ಲಂದ್ರ ಇಲ್ಲ ಅಷ್ಟ.

Advertisements

ಒಂದ ಸಲ ಗೆಳತಿ ರೇಣುಕಾನ ಊರಿಗಿ ಹೋಗೋ ಪ್ರಸಂಗ ಬಂತು. ಮೊದಲೇ ಪೋನ್ ಮಾಡಿದ್ದಕ್ಕ ತನ್ನ ಮನಿಗಿ ಬರಲೇಬೇಕೆಂದು ಒತ್ತಾಯ ಮಾಡಿದ್ದಕ್ಕ ಅವಳ ಮನಿಗಿ ಹೋಗಿದ್ದ. ಮನಿ ತುಂಬಾ ದೇವರ ಪಟಗಳು. “ಏನೇ ಮನಿ ಪೂರಾ ದೇವರ ಮ್ಯೂಸಿಯಮ್ ಮಾಡಿದ್ದಿ! ಜಗಲಿ ಮ್ಯಾಲ್ ಎಷ್ಟ ದೇವರಿಗಿ ಇಟ್ಟೀದಿ. ಹಿತ್ತಾಳಿ, ತಾಮ್ರದ ದೇವರ ಇಷ್ಟ ವಿಗ್ರಹಗಳು ಯಾವಾಗ ತೋಳಿತಿ?” ಎಂದು ಆಶ್ಚರ್ಯದಿಂದ ಕೇಳಿದೆ. ನಮ್ಮ ಮನೆಯಲ್ಲಿ ಜಗಲಿ ಮ್ಯಾಲಿರೋ ಒಂದು ತಾಮ್ರದ ತೆಂಬಿಗಿ ತೊಳಿಬೇಕಂದ್ರ ಸಾಕಬೇಕ ಆಗತದ ನನಗ; ಅಂತದರಾಗ ಈಕಿ ಈಪಾಟಿ ದೇವರಗಳಿಗೆ ಥಳಥಳ ಹೊಳೆವಂಗ ಇಡದಂದ್ರ ಮಾಮೂಲಿ ಮಾತಲ್ಲ ಅನಿಸಿ ಕೇಳ್ದೆ.

ನನ್ನ ಮಾತು ಮುಗಿವಷ್ಟರಲ್ಲಿ ಅವಳ ಮಗಳು, “ಆಂಟಿ, ಮಮ್ಮಿ ಮೈಯಾಗ ದೇವರು ಬರತಾರ,” ಅಂದಳು. ವಿಪರೀತ ದೈವಭಕ್ತೆಯಾದ ರೇಣುಕಾ, ದೇವರನ್ನೇ ತನ್ನ ಮೈಮೇಲೆ ಆವಾಹಿಸಿಕೊಂಡಿದ್ದಳು.

Indian Women 6

ಒಂಬತ್ತನೇ ತರಗತಿಯಲ್ಲಿದ್ದಾಗಲೇ ಮದುವೆಯಾಗಿದ್ದ ರೇಣುಕಾಗೆ ಆಗಿನ್ನೂ ಬಾಲ್ಯ ಮಾಸದ ಹರೆಯ. ಸಂಸಾರ ಎಂದರೇನು ಎಂಬ ಅರಿವಿರದ ಸಂದರ್ಭದಲ್ಲೆ ಸಂಸಾರದ ನೊಗಕ್ಕ ಹೆಗಲು ಕೊಟ್ಟಿದ್ದ ಅವಳು, ಸಾಲಾಗಿ ಐದು ಮಕ್ಕಳ ತಾಯಾದಳು. ಅವಿಭಕ್ತ ಕುಟುಂಬ, ಅತ್ತೆ-ಮಾವ, ಗಂಡನ ದಬ್ಬಾಳಿಕೆಯಲ್ಲೇ ಅರ್ಧ ಆಯಸ್ಸು ಮುಗಿಯಿತು. ತನ್ನ ಮನಶ್ಯಾಂತಿ ಕಂಡುಕೊಳ್ಳಲು ಅವಳು ಆಯ್ದುಕೊಂಡ ಮಾರ್ಗ – ದೇವರು, ಪೂಜೆ, ಉಪವಾಸ, ವ್ರತ. ಎಲ್ಲವೂ ತನ್ನ ಕುಟುಂಬದ ಶ್ರೇಯಸ್ಸಿಗಾಗಿ, ತನ್ನ ಮನಶ್ಯಾಂತಿಗಾಗಿ.

“ಎನೇ ರೇಣು… ಏನ್ ಹೇಳತಾಳ ನಿನ್ನ ಮಗಳು…?”

“ಹೌದೇ… ಮಂಗಳಾರ, ಶನಿವಾರ ನನ್ನ ಮೈಯಾಗ ದೇವರು ಬರತಾರ. ಅವತ್ತಿನ ದಿನ ನಮ್ಮ ಮನಿಗಿ ಭಾಳ ಮಂದಿ ಕೆಳಸಕೊಲಾಕ ಬರತಾರ,” ಅಂದಳು.

“ಏನ್ ಕೇಳಲಾಕ ಬರತಾರ…?”

“ಅವರ ತಾಪತ್ರಯಕ ಪರಿಹಾರ…”

“ನೀ ಹೇಳದರ ಪರಿಹಾರ ಆಗಬಿಡತದೇನು…!”

“ನಾ ಹೇಳಲ್ಲ… ನನ್ನ ಮೈಮ್ಯಾಲಿನ ದೇವರೇ ಹೇಳತಾನ, ಪರಿಹಾರ ಆಗತದ ಅಂತಾನ. ಮತ್ತ-ಮತ್ತ ಬರತಾರ.ಇಲ್ದಿದ್ದರ ಬರತಿದ್ದರೇನ್… ನೀ ನಂಬಂಗಿಲ್ಲ, ನಿನಗೇನು ತಿಳೆಂಗಿಲ್ಲ ಸುಮ್ಮನಿರು,” ಅಂದಳು.

“ಅಲ್ಲೇ… ನಿನ್ನ ಮಕ್ಕಳು ಡಿಗ್ರಿ ಓದಲತಾರ. ಅವರು, ನಿನ್ನ ಗಂಡ ಏನೂ ಅನ್ನಂಗಿಲ್ಲೇನು?”

Indian Women 9

“ನನ ಮೈಮ್ಯಾಲೆ ದೇವರು ಬರೋಕ್ಕ ಶುರುವಾದ ಮ್ಯಾಲ್ ಅವರು ನನಗ ಗೌರವ ಕೊಡಕ್ಕ ಶುರು ಮಾಡ್ಯಾರ್. ನಾ ಅಂದ್ರ ನಾಲ್ಕು ಮಂದಿ ಗುರುತು ಹಿಡಿತಾರ. ನನ್ನ ಮಾತಂದ್ರ ವೇದವಾಕ್ಯ ಅಂತ ತಿಳಕೋತಾರ. ಏನೇ ಮಾಡಬೇಕಾದ್ರೂ ನನಗ ತಿಳಿಸಿ, ನನ್ನ ಬಾಯಿಂದ ಏನ್ ಬರತದೋ ಅದೇ ಮಾಡತಾರ. ಇದೆಲ್ಲ ಆ ದೇವರ ಮಹಿಮಾ ಅಲ್ಲೇನು? ಇಲ್ಲಂದ್ರ ಒಂದು ನಾಯಾದ್ರೂ ಕೇಳತಿತ್ತಾ ನನಗ? ಮದಿ ಆದಾಗಿಂದ ಬರಿ ಅತ್ತಿ-ಮಾವ, ಗಂಡ-ಮಕ್ಕಳು ಹೇಳದಂಗ ಕೇಳಾದೇ ಆಯ್ತು. ಅವರಿಗಿ ಅಂಜಿ ಬದುಕೋದೇ ಆಯ್ತು. ಈಗ ಆರಾಮ ಇದ್ದಿನಿ ನೋಡು…”

ಅವಳ ಮಾತಲ್ಲಿ ಆತ್ಮಸಮ್ಮಾನ ದೊರೆತ ಖುಷಿ ಇತ್ತು.

ನಮ್ಮ ಅನೇಕ ಹೆಣ್ಣುಮಕ್ಕಳ ಪರಿಸ್ಥಿತಿ ಇದಕ್ಕ ಹೊರತಿಲ್ಲ. ಗಂಡ, ಮನಿ, ಮಕ್ಕಳು, ಸಂಸಾರ ಅನಕೊಂತ ತಮ್ಮೆಲ್ಲ ಇಚ್ಚಾ ಅದುಮಿಟ್ಟು, ನಾಲ್ಕು ಗೋಡೆಗಳ ಮದ್ಯ ಕಾಲ ಕಳೆಯೋದೇ ಜೀವನ ಅನಕೊಂಡಿರತಿವಿ. ಅತ್ತಿ, ಸೊಸಿ, ನಾದನಿ-ನೆಗಣ್ಣಿಯರ, ಅತ್ತಿಗೇರ ಸಂಗಡ ಜಗಳ ಆಡಕೋತಾ, ಮತ್ತ ನೆಮ್ಮದಿಗಾಗಿ ಬಡಿದಾಡತೀವಿ.

ರೇಣುಕಾನು ಇದಕ್ಕ ಹೊರತಾಗಿರಲಿಲ್ಲ. ತನ್ನ ಅಸ್ತಿತ್ವಕ್ಕೆ ಸದಾ ಹಂಬಲಿಸಿದ ಅವಳು, ಅದರ ಅನಾವರಣಕ್ಕೆ ದೇವರನ್ನು ಅವಲಂಬಿಸಿದಳು. ಅವಳಂತೆ ನೊಂದ ಅನೇಕರು ಅವಳ ಅನುಯಾಯಿಗಳಾದರು. ಕಣ್ಣು ಮುಚ್ಚಿ ಓಲಾಡುತ್ತ, ಕೇಳಲು ಬಂದವರಿಗೆ ತನ್ನ ಅರಿವಿನ ಮಿತಿಯಲ್ಲಿ ಪರಿಹಾರ ನೀಡುತ್ತ, ನಂಬಿದವರಿಗೆ ಸಾಕ್ಷಾತ್ ದೇವಿಯೇ ಆದಳು.

“ಮಂದಿ ಸಮಸ್ಯೆಗಳಿಗಿ ಏ

“ಮಂದಿ ಸಮಸ್ಯೆಗಳಿಗಿ ಏನ್ ಪರಿಹಾರ್ ಕೊಡ್ತೆ ರೇಣು…” ಕೇಳಿದೆ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಕುಂದಾಪುರ ಸೀಮೆ | ಗಂಜಿ ಊಟದ ಗಮ್ಮತ್ತು

“ಎಲ್ಲರ ಮನಿದು ಒಂದೇ ಸಮಸ್ಯೆ. ಗಂಡ-ಹೆಂಡ್ತಿ ಜಗಳ, ಅತ್ತಿ-ಸೊಸಿಗಿ ಕಲೆಲ್ಲ, ಅಣ್ಣ-ತಮ್ಮ್ದೇರ ಆಸ್ತಿ ಕಲಹ, ಆರೋಗ್ಯದ ಸಮಸ್ಯೆ, ಇಲ್ಲ ಮಕ್ಕಳ ಓದಿನ ಬಗ್ಗೆ ಸಮಸ್ಯೆ… ಇವೇ ನೋಡು. ಇವೆಲ್ಲ ಸಮಸ್ಯೆಗಳೇ ಅಲ್ಲ. ನಾವೇ ಹುಟ್ಟುಹಾಕಿದ್ದು ಸಮಸ್ಯೆ ಅನಕೊತೀವಿ. ಮತ್ತ ಪರಿಹಾರಕ್ಕೆ ಹಾತೋರಿತಿವಿ. ಯಾವದರಿಂದಾದರೂ ಸಮಸ್ಯೆ ಬಗಿಹರಿಲಿ ಅಂತ ದೇವರು-ದಿಂಡರ ಮೊರೆ ಹೋಗತಿವಿ. ನಾನು ಈ ಎಲ್ಲಾ ಸಮಸ್ಯೆಗಳಿಂದ ಬಳಲಿದವಳೇ; ಅದಕ್ಕ, ಪರಿಹಾರ ಕೇಳಕೊಂಡು ಬಂದವರಿಗಿ ಒಂದಷ್ಟು ಸಮಾಧಾನ ಹೇಳಿ, ಪೂಜಾ-ವ್ರತ ಮಾಡರಂತ ಹೇಳಿ ಕಳಸ್ತಿನಿ. ನಾ ಹೇಳೋದು ಭಾಳ ಖರ್ಚಿನ ಪೂಜಾಗಳು ಅಲ್ಲ ಮತ್ತ. ಒಂದು ಹನ್ನೆರಡು ವಾರ ಹನುಮಾನ ದೇವರ ಗುಡಿಗಿ ಹೋಗೋದು, ಮೂರು ದಾರಿ ಸೇರೋ ಕಡಿ ಒಂದಿಟು ಮೊಸರನ್ನ ಇಳಿಸಿ ಬಿಸಾಡೋದು, ದೇವರ ಹೆಸರ ಮ್ಯಾಲ್ ಉಪವಾಸ ವೃತ ಮಾಡೋದು… ಇಂತವೇ. ಅದೆಲ್ಲ ಅವರವರ ಭಕ್ತಿ ಮ್ಯಾಲ್ ಹೋಗತಾದ. ಒಟ್ಟಿನಲ್ಲಿ ನಂಬಿಕಿ ಇರಬೇಕ ಅಟೇ ನೋಡು,” ಎಂದು ಸುಮ್ಮನಾದಳು.

ಅವಳ ಮನಸ್ಥಿತಿಯನ್ನು ಉಹಿಸಿದ ನಾನು, ಅವಳು ನಂಬಿದ್ದನ್ನು ಮೂಢನಂಬಿಕೆ ಎಂದು ತಿಳಿಸುವ ಪ್ರಯತ್ನಾನೂ ಮಾಡಲಿಲ್ಲ. ಯಾಕಂದ್ರ… ಈಗ ರೇಣುಕಾ ಆತ್ಮಗೌರವ ಸಂಪಾದಸ್ಯಾಳ; ಅದಕ್ಕಾಗಿ ದೇವರನ್ನು ಅಸ್ತ್ರವಾಗಿಸಿಕೊಂಡಾಳ.

(ಕಲಾಕೃತಿಗಳ ಕೃಪೆ: Unsplash ಜಾಲತಾಣ)

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜ್ಯೋತಿ ಡಿ ಬೊಮ್ಮಾ
ಜ್ಯೋತಿ ಡಿ ಬೊಮ್ಮಾ
ಚಿಂಚೋಳಿ ತಾಲೂಕಿನವರು. ಸದ್ಯ ಕಲಬುರಗಿ ನಿವಾಸಿ. ಗೃಹಿಣಿ. ಓದು, ಬರಹ, ಪ್ರವಾಸವೆಂದರೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X