"...ಆಟ-ಪಾಠ ಅಂತೇಳಿ ವೊದ್ಕೆಂದು ಬರ್ಕಂದು ಇರ ವಯಸ್ನಾಗ ತಟ್ಟಿ-ಲೋಟ ತೊಳ್ಕಂಡು, ಕಸ್ಮರಿಗಿ ಹಿಡ್ಕಂದು, ಗಂಡ, ಅತ್ತಿ, ಮಾವ, ಮನಿ ಅಂತ ನಾಕ್ ಗ್ವಾಡಿ ನಡುವಿ ಇದ್ದು ಇಲ್ದಂಗ ಬದ್ಕೊ ಗತಿ ಬರ್ಬಾರ್ದಿತ್ತು," ಅಂದಾಗ, ಕಿವಿಗುಟ್ಟು ಒಳಗೊಗಿ ಗುಡುಗಿದ್ದು ನಂಗ್ಮಾತ್ರ ಕೇಳಿಸ್ತು
ಹುಡ್ಗ-ಹುಡ್ಗಿ ಯಳ್ದಿನ ಆದ್ರೂ ಕಾಣ್ಲಿಲ್ಲಂತ ಇಬ್ರೂನ್ನು ಹುಡ್ಕಿ ಮನಿಗೆ ಕರ್ಕಂಬಂದಾರಂತೆ. ಇದು ಇನ್ನೂ ಯಾರಿಗೂ ಸುದ್ದಿ ಬಡ್ದುಲ್ಲ ಅಂತ ಅವಕ್ಕ ನನ್ಕಿವಿಗೆ ಗುಟ್ಟೇಳಿದ್ಲು ಅವತ್ತು, ಅದಿಂಗೆ ರಟ್ಟಾಗುತ್ತೆ ಅಂತ ಅಕಿಗೆಲ್ಲಿ ಗೊತ್ತಾಬಕು ಪಾಪ.
“ವೋಗೆಮರ್ಗಿತ್ತಿ ವಯಸ್ಸರ ಅಲ್ಲ, ಜೋಡಿನರ ಅಲ್ಲ, ಅದೆಂಗಕತಿ ಎನೆನರ ಯೇಳ್ಬಡ,” ಅಂತಂದೆ.
ಅಕಿ, “ನಾನ್ಯಾಕ್ ಸುಳ್ಳೆಳನ? ದೆವ್ರಾಣಿಗು ನಿನ್ಯಗ ಅಲೆ ಮದಿವ್ಯಾತಂತೆ. ಮನೇರಾಟೆ ವೋಗಿ ಅದ್ಯಾವ್ದೋ ಗುಡ್ಯಾಗ ರಾತ್ರೋರಾತ್ರಿ ತಾಳಿ ಕಟಿಸ್ಗೆಂದ್ಬಂದಾರಂತ. ಹುಡ್ಗೀನ ಅಲೇ ಗಂಡುನ್ಮನಿಗೆ ಬಿಟ್ಟಾರಂತ. ಈ ಗಲಾಟ್ಯಾಗಿ ಮೂರ್ದಿನ ಆತಂತ. ಪಂಚೇತಿ ಮಾಡಾಕಂತ ಕುಂತ್ರೆ ಆ ವುಡ್ಗಿ ತವರ್ಮನ್ಯಾಗ ಇರಲ್ಲ ಅಂದ್ಲಂತೆ. ಒಬ್ಳೆ ಮಗ್ಳು ಅಂತ ಬಂಗಾರ್ದಂಗ್ ಸಾಕಿದ್ರು, ಅದಿಂಗ್ ಮಾಡ್ತಂತೆ ನೊಡು. ಮನ್ಯಾಗ ನಾಕೇಟ್ ವಡ್ದು ಶಾಲಿಗೆ ಹೋಗು ಅಂತ ಬುದ್ದಿ ಹೇಳದ್ಬುಟ್ಟು, ಮೊನ್ನೆ-ಮೊನ್ನೆ ಮೈನೆರ್ದ ಹುಡ್ಗಿಗೆ ಮದ್ವಿ ಮಾಡಿ ಎಂತಾ ಅನ್ಯಾಯ ಮಾಡ್ಯಾರವ್ವ…” ಅಂತ ಹೇಳ್ತಾ, ಮಮ್ಮಲ ಮರುಗೋ ಹೆಣ್ಣುಜೀವವೊಂದು ಅಕ್ಷರದ ಅರಿವಿಗೆ ಪರದಾಡ್ತಿತ್ತು.
“ಅವುಂಜೊತಿಗ್ ಮದ್ವಿ ಮಾಡೋ ವಯಸ್ಸಲ್ಲ ಅಕಿಗೆ, ಅದ್ನಾಕ್ವರ್ಶ ಹುಡ್ಗಿಗೆ – ಮೂವತ್ನಾಕ್ ವರ್ಶ ಹುಡುಗುಂಗೆ. ಹರೇದುಡ್ಗಿ. ಅದಿನ್ನು ಸಾಲಿಗೊಕುತ್ತು ಹುಡ್ಗುಗಾದ್ರೂ ಬುದ್ದಿ ಬ್ಯಾಡ್ವಾ? ಅಲ್ಲಾ… ಯಂಗರ ಜೋಡಿಯಾದೀತು ಅಂತಿನಿ. ಇದೇನರ ಊರಿಂದ ವರಾಗೋದ್ರ ಕೇಸಕ್ಕತಿ ಅಂತ ಗೊತ್ತಿದ್ರು ಅದೆಂಗ್ ಪಂಚೇತಿ ಮಾಡಿದ್ರೋ ಎನವ್ವ ದೆವ್ರೆ ಬಲ್ಲ. ಅದ್ರೂ, ಮೆಲ್ಲುಕ್ ಗುಲ್ಲಾಗೇತಿ ಊರ್ತುಂಬ. ಊರಾಗಿನ ಆಶಾವರ್ಕರು, ಸಿಸ್ವಾರ ಟೀಚರು, ದೊಡ್ಸಾಲಿ ಮೇಸ್ಟ್ರು ಎಲ್ಲ ಸೇರಿ ಏಟೇ ಎಚ್ಚರ್ಕೆ ಯೇಳಿದ್ರು ಬುದ್ದಿ ಬರ್ಲಿಲ್ಲ ಅವ್ರಿಗೆ. ಆಡೂ ಹುಡ್ಗಿಗೆ ಆ ಗಂಡಿನ್ಜೊತಿಗ್ ರಾತ್ರೋರಾತ್ರಿ ಮದ್ವಿ ಮಾಡ್ಯಾರ ಪಾಪ. ನಾವ್ಯಾರರ ಹೇಳಿದ್ರ ಕೇಸಾಕ್ಕತಿ ಅನ್ನು, ಆದ್ರ ಕೋರ್ಟು ಸಾಕ್ಷಿ ಅಷ್ಟ ಕೇಳ್ತತಿ. ನಮ್ತಕೇನೈತಿ ಕೊಡಾಕ ಬಾಯ್ಮಾತ್ ಕೇಳೊವ್ರ್ಯಾರಿಲ್ಲ. ಒಂದ್ ಮದ್ವಿ ಪೊಟನು ಇಲ್ಲ. ಹುಡ್ಗಿ ಅಲ್ಯಾಕದಾಳ ಅಂತ ಯಾರರ ಕೇಳಿದ್ರ, ‘ಅದು ಹುಡ್ಗಿ ಮಾವನ್ಮನಿ, ಅವ್ರೆ ಸಾಕಾಕಂತ ಕರ್ಕೊಂದೊಗ್ಯರ’ ಅಂತಾರಂತ. ವುಡ್ಗಿಗೆ ಹದ್ನೆಂಟ್ ವರ್ಶ ಆಗತಂಕ ತಾಳಿ, ಕಾಲುಂಗ್ರ ಬಿಚ್ಚಿಸಿಟ್ಟಾರಂತ. ಆದ್ರೂ, ಗಂಡನ್ಮನಿ ಅಂತ ಮನಿ ಕೆಲ್ಸ ವೋಟು ಮಾಡ್ಕೆಂದು ಅದ್ರು ಬಾಳೆದಾಗ ಅದೈತಿ. ನಾಳೆ ತರ ದಿಮ್ಮನ್ಸಿ ಆದ್ರ ಯಂಗ್ಮಾಡ್ತರವ್ವ ಇದೆಲ್ಲ ಆ ಜೀವಕ್ ತೊಂದ್ರಿನೆ ಯಾವತ್ತಿದ್ರೂ…”
“…ಆಟ-ಪಾಠ ಅಂತೇಳಿ ವೊದ್ಕೆಂದು ಬರ್ಕಂದು ಇರ ವಯಸ್ನಾಗ ತಟ್ಟಿ-ಲೋಟ ತೊಳ್ಕಂಡು, ಕಸ್ಮರಿಗಿ ಹಿಡ್ಕಂದು, ಗಂಡ, ಅತ್ತಿ, ಮಾವ, ಮನಿ ಅಂತ ನಾಕ್ ಗ್ವಾಡಿ ನಡುವಿ ಇದ್ದು ಇಲ್ದಂಗ ಬದ್ಕೊ ಗತಿ ಬರ್ಬಾರ್ದಿತ್ತು,” ಅಂದಾಗ, ಕಿವಿಗುಟ್ಟು ಒಳಗೊಗಿ ಗುಡುಗಿದ್ದು ನಂಗ್ಮಾತ್ರ ಕೇಳಿಸ್ತು. ಆಕಸ್ಮಿಕ ಸಿಕ್ಕಾಗ ಸಂತಿಯೊಳಗ ಬರಸಿಡಿಲು ಬಡಿದಂತಾಗಿ ಮನ್ಸು ಕಸಿವಿಸಿಯಾತು. ಅಕ್ಷರ ಕಲಿಯದ ಅವಕ್ಕನ ಪಿಸುಮಾತಿನ ಸತ್ಯ ಸಂತಿಯ ಗದ್ದಲದಲ್ಲೇ ಮರೆಯಾಗಿ ಬಾಳ ದಿನಾತು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ಕಲಾಕೃತಿ ಕೃಪೆ: ಇಂಡಿಯನ್ ಡಾಲ್ಸ್ ಜಾಲತಾಣ