ಕಲಬುರಗಿ ಸೀಮೆಯ ಕನ್ನಡ | ‘ಹೆಣ್ಣಮಕ್ಕಳ ಮ್ಯಾಲ್ ದರ್ಪ ತೋರಸಾದೆ ಗಂಡಸ್ತನ’ ಅಂತ ನಾವೇ ನಮ್ ಮಕ್ಕಳಿಗಿ ಕಲಿಸಿದ್ದು…

Date:

Advertisements
"ನಮ್ಮ ಗಂಡ, ಮಕ್ಕಳಿಗಿ ನಾವೆ ನಮ್ಮ ಮ್ಯಾಲ್ ಅವಲಂಬಿತರಾಗೊ ಹಂಗ ಮಾಡತಿವಿ. ಒಬ್ಬೊಬ್ಬರಿರತಾರ; ಗಂಡಂಗ ಒಂದು ಕೆಲಸಾನೂ ಮಾಡಗೊಡಸಲ. ಉಳ್ಳಿಟ್ಟ ಲಿಂಗದಂಗ ಇಡತಾರ. ಒಂದಿನಾನೂ ಗಂಡಂಗ ಬಿಟ್ಟು ಎಲ್ಲಿಗಾರ ಹೋಗಬೆಕಂದ್ರ ಲೆಕ್ಕ ಹಾಕತಾರ - ಅವರ ಊಟ, ತಿಂಡಿ ಹ್ಯಾಂಗ ಅಂತ!"

ಗೆಳತಿ ಶೋಭಾಳ ಮಗಳ ಮದುವಿ ಗಟ್ಟಿಯಾಗಿತ್ತು. ಮದಿವಿಯ ಜವಳಿ ಖರಿದಿ ಮಾಡಕೊಂಡ ಬಂದ ಶೋಭಾ, ನನಗ ಪೋನ್ ಮಾಡಿ ಬಟ್ಟಿ ನೋಡಾಕ ಬಾ ಅಂದಿದ್ಳು. ಅದಕ್ಕ ಇವತ್ತು ಜಲ್ದಿ ಜಲ್ದಿ ಕೆಲಸ ಬೊಗಸಿ ಮುಗಿಸಿ ಅವಳ ಮನಿಗಿ ಬಂದಿದ್ದ. ಸೀರಿ ನೋಡದ ಅಂದ್ರ ಭಾಳ ಖುಷಿ ನಂಗ. ನೋಡಕೊಂತ ಕೂತ್ರ ಹೊತ್ತ ಸರಿದದ್ದು ತಿಳಿಯಂಗಿಲ್ಲ. ಮದುಮಗಳ ಸೀರಿಗಳು, ಬೀಗರ ಹೊದಿಕಿ, ಬಂದೊರಿಗಿ ಮಾಡೋ ಸೀರಿ, ಹಿಂಗ ನಮ್ಮ ಸುತ್ತಮುತ್ತ ಸೀರಿ ಹರಡಕೊಂಡು ಕುಂತು ಅದೆಷ್ಟು ಹೊತ್ತಾಗಿತ್ತೊ…

“ಎಲ್ಲೆ… ನಿನ್ನ ಮಗಳು ಕಾಣತಿಲ್ಲ?” ಅಂದೆ.

“ಇಲ್ಲೆ ಹಳಾ… ಮಕ್ಕೊಂಡಾಳ. ಇನ್ ಬೆಳಗಾಗಿಲ್ಲ ಆಕಿಗಿ. ಏಳೇ ಸ್ನೇಹಾ… ಆಂಟಿ ಬಂದಾರ ನೋಡ್,” ಅಂತ ಜೋರು ದನಿಯಿಂದ ಮಗಳಿಗೆ ಎಬ್ಬಿಸಾಕ ಅದೆಷ್ಟು ಚೀರಿದರೂ, ಅವಳ ಮಗಳು ಏಳೋ ಬದಲು ಮತ್ತಿಟು ಮುಸಕು ಹಾಕ್ಕೊಂಡ ಮಲಗದಳು.

Advertisements

“ನನಗ ಸಾಕಾಗೇದವ್ವ ಈ ಪೋರಿ ಕಾಲಾಗ. ಮದಿ ಆದ ಮ್ಯಾಲೂ ಅತ್ತಿ ಮನ್ಯಾಗ್ ಈಕಿ ಹಿಂಗೆ ತಡ ತನಕ ಮಕ್ಕೊಂಡ್ರ ಅತ್ತಿಯಾದಕಿ ಸುಮ್ಮನಿರತಾಳೇನು? ನಿಮ್ಮವ್ವ ಇದೇ ಕಲಸ್ಯಾಳೆನ್ ಅಂತ ನನಗ ಆಡಕೋತಾರ. ಮುಂಜಾನಿ ಏಳರಿಂದ ಎಬ್ಬಿಸಲತಿನಿ, ಹನ್ನೊಂದು ಆಯ್ತು. ಇನ್ನ ಮಕ್ಕೊಳಂದ್ರ, ನಿನರ ಸ್ವಲ್ಪ ಹೇಳೆ,” ಅಂದಳು.

ಈ ಕನ್ನಡ ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ರಾಜುಗನ ಬಂಗರ, ಕರಪ್ಪು ಚಾಟಿ

“ಸುಮ್ನ ಅಕಿ ಅತ್ತಿಗಿ ಬದನಾಮ ಮಾಡಬ್ಯಾಡ್… ಅವ್ವ ಆದ ನಿನಗ ನಿನ್ನ ಮಗಳು ಹೋತ್ತೇರತನ ಮಕ್ಕೋಳೊದು ಪಸಂದ ಬರಲ್ಲ, ಅವಳ ಅತ್ತಿಗೀ ಹ್ಯಾಂಗ್ ಪಸಂದ ಬರತದ ಹೇಳು? ನನಗೂ ಇಷ್ಟ ಆಗಲ್ಲ ನೋಡು ಮನ್ಯಾಗ್ ಹಿಂಗ್ ತಡಾ ತನ ಮಲಗೋದು, ಅವಲಕ್ಷಣ…” 

“ಏಳೇ ಸ್ನೇಹಾ…” ಎಂಬ ಜೋರು ದನಿಗಿ ಅಕಿ ಗಡಬಡಿಸಿ ಎದ್ದು ಬಂದು ನಮ್ಮ ಮುಂದ ಕುಂತಳು.

“ಇಷ್ಟು ತಡ ತನ ಮಲಕೊಳ್ಲೊ ರೂಢಿ ಛಲೊ ಅಲ್ಲ…”

“ಬೆಳಿಗ್ಗೆ ಜಲ್ದಿ ಎದ್ದು ಬೇಕಾದ್ರ ಮದ್ಯಾನ್ಹ ಒಂದಿಡು ಆರಾಮ ಮಾಡಬೇಕು. ನಿಮ್ಮವ್ವ ಅನ್ನಾದು ಖರೆ ಅದಾ… ಗಂಡನ ಮನ್ಯಾಗ ಜವಾಬ್ದಾರಿ ಇರತಾವ. ಜಲ್ದಿ ಎದ್ದು ಕೆಲಸಕ್ಕ ಹೋಗೊ ಗಂಡಂಗ ನಾಷ್ಟಾ ಚಾ ಮಾಡಬೇಕಾಗತದ. ಅತ್ತಿ-ಮಾವ ಇದ್ರ ಅವರ ವ್ಯವಸ್ಥಾ ಮಾಡಬೇಕಾಗತದ. ಕೆಲಸದವರು ಇದ್ರೂ, ಎಲ್ಲಾ ಅವರೆ ಮಾಡ್ಲಿ ನಾವು ತಡಾ ತನಾ ಮಕ್ಕೋಂಡಿರತಿವಿ ಅಂತನ್ನೊದು ತಪ್ಪ ಆಗತದ. ಇಂತಹ ಚಿಕ್ಕ-ಚಿಕ್ಕ ವಿಷಯಗಳೆ ವೈಮನಸ್ಸಿಗಿ ಕಾರಣ ಆಗತಾವ ನೋಡು,” ಅಂದೆ.

ಅಷ್ಟರಲ್ಲಿ ಶೋಭಾ, “ನಾವು ನಮ್ಮ ಗಂಡ, ಅತ್ತಿ-ಮಾವಗ ಮಾಡಿದಷ್ಟು ಈಗಿನವರು ಎನ್ ಮಾಡ್ತಾರ ಬಿಡು! ಈಗ ಅವರ ಗಂಡದ್ರೂ ಹೆಣ್ತಿ ಹೆಳದಂಗ ಕುಣಿತಾರ. ಹೊರಗಿಂದ ತಂದು ಉಂಡು ಸಂಸಾರ ಮಾಡತಾರ. ಇದೇ ರೂಢಿ ಬಿದ್ರ ಮನ್ಯಾಗ ಮಾಡಿ ಉಳ್ಳಕ ಬಾಳ ತ್ರಾಸ ಆಗತದ. ಎಷ್ಟ ದಿನ ಹೊರಗಿಂದ ತಂದು ಉಣ್ಣಬೇಕು. ಇಬ್ಬರೂ ದುಡೇರು ಆದ್ರ ಬ್ಯಾರೆ ಮಾತು. ಮನ್ಯಾಗ ಇರೋರು ಹಂಗೆ ಮಾಡಲತಾರ. ಒಟ್ಟಿನಾಗ ಈಗಿನ ಹುಡಗೇರು ಬಾಳ ಮೈಗಳ್ಳ ಅವ ಬಿಡು…” ಅಂದಳು.

ಈ ಕನ್ನಡ ಕೇಳಿದ್ದೀರಾ?: ಕೆ ಆರ್‌ ಪೇಟೆ ಸೀಮೆಯ ಕನ್ನಡ | ಸಿಟೀಲಿ ಕಾರ್ಮಿಕ್ರಂಗೆ ಅಳ್ಳೀಲೂ ಕೂಲಿಕಾರ್‍ರ ಸ್ರಮ ಈರ್ತರೆ

“ನಿನಗ ಹಾಂಗ ಅನಸ್ತದ ಶೋಭಾ. ಗಂಡ, ಮನಿ, ಮಕ್ಕಳು, ಅತ್ತಿ-ಮಾವಗ ನೋಡಕೊಳ್ಳೊದಂದ್ರ ಸುಮ್ನ ಅಲ್ಲ. ಒಂದೊಂದು ಮನ್ಯಾಗ್ ಗಂಡಸರು ಈ ಕಡಿಂದ ಕಡ್ಡಿ ಆ ಕಡಿ ಎತ್ತಿಡಲ್ಲ. ಎಲ್ಲಾ ಹೆಂಗಸರೇ ಮಾಡಬೆಕಂತಾರ. ತಪ್ಪು ನಮದೆ ಅದಾ ಬಿಡು… ನಾವು ಸಣ್ಣವರಿದ್ದಾಗೆ ಕಲಿಸಿಬಿಡತಿವಿ. ನೀ ಹುಡಗಿ ಇದ್ದಿ ಈ ಕೆಲಸ ಮಾಡು. ನೀ ಹುಡಗ ಇದ್ದಿ ಈ ಕೆಲಸ ಮಾಡು; ಹಿಂಗ ಅವರು ಅದೇ ರೂಢಿದಾಗ ಬೆಳಿತಾರ. ನಮ್ಮ ಗಂಡ, ಮಕ್ಕಳು ಅವರ ಹೆಣ್ತಿಗಿ ಕೆಲಸಾದಾಗ ಹೆಲ್ಪ ಮಾಡಿದ್ರ ನಾವು ಸುಮ್ನ ಇರತಿವೇನ್. ಹೆಣ್ತಿ ಗುಲಾಮ ಅಂತಿವಿ. ಹೆಣ್ಣಮಕ್ಕಳ ಮ್ಯಾಲ್ ದರ್ಪ ತೋರಸಾದೆ ಗಂಡಸ್ತನ ಅಂತ ನಾವೇ ನಮ್ಮ ಮಕ್ಕಳಿಗಿ ಕಲಿಸಿದ್ದು. ಅವರು ಹಂಗೆ ಹೆಂಡತಿನೆ ಎಲ್ಲಾ ಮಾಡ್ಲಿ ಅಂತ ನಿವಾ ಅಂತ ಇರತಾರ…”

“ಹೌದು ನೋಡೆ… ನಮ್ಮ ಚಿಕ್ಕಿ ಮಾವ ಬಾಳ ಕಡಕ್ ನೋಡು. ಅವರಿಗಿ ಎಲ್ಲಾ ಕೈಯಾಗೆ ಒಯ್ದ ಕೊಡಬೇಕು. ಮುಂಜಾನಿ  ಬ್ರಷಿಗಿ ಪೇಸ್ಟ ಸುದ್ದ ಅವರ ಹೆಣ್ತಿನೆ ಹಚ್ಚಿ ಕೊಡಬೇಕು. ತಲಿಗಿ ಎಣ್ಣಿನೂ ಆಕಿನೇ ಹಚ್ಚಬೇಕು. ಊಟ ನಾಷ್ಟಾ ಚಾ ಫರಾಳ ಅಂತ ಒಂದರ ಬೆನ್ನಿಗಿ ಒಂದು ಚಾಲೂನೆ ಇರತದ ಅವರ ಮನ್ಯಾಗ್ ಅತ್ತಿ ಸೋಸಿ ಇಬ್ಬರೂ ಮಾಡಿ-ಮಾಡಿ ಹೈರಾಣ ಆಗತಾವ ಪಾಪ. ಇಟ ಮಾಡದರೂ ಅವರಿಗಿ ಪಾಪ ಅನ್ನಲ್ಲ ನೋಡು ಮನ್ಯಾಗಿನ ಗಣಸರು. ಮನ್ಯಾಗ ಇರತಾರ ಇದಕ್ಕ ಬಿಟ್ಟ ಮತ್ತೆನ ಮಾಡತಾರ ಅಂತಾರ,” ಅವರು.

“ಅದು ಅವರ ತಪ್ಪಲ್ಲ ಬಿಡು, ಮನ್ಯಾಗಿನ ಹೆಂಗಸರ ತಪ್ಪು. ನಾವು ರಾಟಿ ಹಾಕಿದಂಗ ಇರತದ. ಎಲ್ಲಾ ಕುಣಕುಣದು ನಾವೇ ಮಾಡಿದ್ರ ಅವರ್ಯಾಕ ಹೈರಾಣ ಆಗತಾರ. ನಮ್ಮ ಗಂಡ, ಮಕ್ಕಳಿಗಿ ನಾವೆ ನಮ್ಮ ಮ್ಯಾಲ್ ಅವಲಂಬಿತರಾಗೊ ಹಂಗ ಮಾಡತಿವಿ. ಒಬ್ಬೊಬ್ಬರಿರತಾರ; ಗಂಡಂಗ ಒಂದು ಕೆಲಸಾನೂ ಮಾಡಗೊಡಸಲ. ಉಳ್ಳಿಟ್ಟ ಲಿಂಗದಂಗ ಇಡತಾರ. ಒಂದಿನಾನೂ ಗಂಡಂಗ ಬಿಟ್ಟು ಎಲ್ಲಿಗಾರ ಹೋಗಬೆಕಂದ್ರ ಲೆಕ್ಕ ಹಾಕತಾರ – ಅವರ ಊಟ ತಿಂಡಿ ಹ್ಯಾಂಗ ಅಂತ! ಶೋಭಾ, ನಮ್ಮ ಹೆಣ್ಣಮಕ್ಕಳು ಈ ಮುತೈದಿ ಸಾವಿಗಾಗಿ ಅದೇಷ್ಟ ಪೂಜಾ ಉಪವಾಸ ಮಾಡತಾರೆ! ಆದ್ರ ಜೀವಂತ ಇದ್ದಾಗ ಒಂದಿನಾನೂ ಬಿಟ್ಟು ಎಲ್ಲಿಗಾರ ಹೋಗಬರಬೆಕಂದ್ರ ಒದ್ದಾಡತಿವಿ. ನಾವು ಇಲ್ದೆ ನೀವು ಬದುಕಕ್ಕೆ ಆಗಲ್ಲ ಅನ್ನೊ ಹಂಗೆ ಅವರನ್ನ ನೋಡಕೋತಿವಿ. ಮತ್ತ ಅವರಿಗಿಂತ ಮುಂಚೆ ಹೋಗಬೆಕಂತ ಪೂಜಾ ಪಾಠ ಮಾಡತಿವಿ. ನಾವು ಹೋದ ಮ್ಯಾಗ್ ಅವರ ಗತಿ ಏನಂತ ಒಮ್ಮೆಯಾರ ಯೊಚನಾ ಮಾಡತಿವೀ ಏನ್? ಹಂಗ ವಿಚಾರ ಮಾಡಿದ್ರ ಯಾರೂ ಮುತೈದಿ ಸಾವಿಗಿ ಬೇಡಕೊಳ್ಳೊದಿಲ್ಲ ನೋಡು,” ಅಂದಾಗ ಶೋಭಾ ಮತ್ತ ಅವಳ ಮಗಳು ಪಿಳಿಪಿಳಿ ಕಣ್ಣ ಬಿಡತಾ ನನ್ನ ಮಾತು ಕೇಳತಿದ್ದರು.

ಈ ಕನ್ನಡ ಕೇಳಿದ್ದೀರಾ?: ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…

“ನನ್ನ ಮಾತಿನ್ಯಾಗ್ ಸತ್ಯ ಅದ ಇಲ್ಲ ಅಂತ ನೀವ್ ವಿಚಾರ ಮಾಡ್ರಿ. ಹಿಂದೆ ನಮ್ಮ ಸಮಾಜ ಗಂಡನಿಗಿಂತ ಹೆಣ್ತಿ ಚಿಕ್ಕವಳಿರಬೆಕೆಂದು ನಿರ್ದರಿಸಿದ್ದು ಯಾಕ ಹೇಳು… ಗಂಡನ ಅನಾರೋಗ್ಯದಲ್ಲಿ ಚಿಕ್ಕ ವಯಸ್ಸಿನ ಅವನ ಹೆಂಡ್ತಿ ಅವನಿಗಿ ನೋಡಕೊಳ್ಳಿ ಅಂಬೊ ಕಾರಣಕ್ಕ. ಗಂಡ ಎಷ್ಟ ಬೇಕಾದ್ರೂ ಮದಿವಿ ಆಗಬಹುದು. ಹೆಣ್ತಿಯಾದವಳು ಗಂಡ ಸತ್ತರ ಅಮಂಗಳೆ ಆಗತಾಳ. ವಿಧವೆಯನ್ನು ಹಿಂದೆ ಸಮಾಜ ನೋಡೋ ರೀತಿ ಹ್ಯಾಂಗಿತ್ತು ಗೊತ್ತಲ್ಲ? ಅದಕ್ಕ ಆ ಕಷ್ಟ ಬ್ಯಾಡಂತ ಆವಾಗಿನ ಹೆಣ್ಣಮಕ್ಕಳು ಮುತೈದೆ ಸಾವಿಗಿ ಬಯಸತಿದ್ರೂ. ಈಗ ಅದೇ ರೂಢಿ ಆಗಬಿಟ್ಟದ. ಗಂಡಗ ಪೂರ್ತಿ ನಮ್ಮ ಮ್ಯಾಲ್ ಅವಲಂಬಿತರಾಗಿರೊ ಹಂಗ ನೊಡಕೊತಿವಿ. ಮತ್ತ ಮುತೈದಿ ಸಾವು ಬರಲಿ ಅಂತ ಬೇಡಕೋತಿವೂ. ಅಲ್ಲ, ಒಬ್ಬ ಗಂಡಸಾದ್ರೂ ನಾವು ನಮ್ಮ ಹೆಣ್ತಿಕ್ಕಿಂತ ಮೊದಲು ಹೋಗಬೇಕು ಅಂತ ಪೂಜಾ ಪಾಠ ಮಾಡಿದ‌ ಉದಾರಣೆ ಅದಾ ಎನ್ ಹೇಳ್?” ಎಂದೆ.

ಶೋಭಾ ಸುಮ್ನ ಹರಡಿದ್ದ ಬಟ್ಡಿ ಮಡಚತಾ ಕುಂತಳು. ಸಮಾಜದಲ್ಲಿ ಬೇರೂರಿದ್ದ ರೂಢಿಗಳನ್ನು ಬದಲಾಯಿಸುವದು ಅಷ್ಟು ಸುಲಭ  ಅಲ್ಲ ಅನಿಸಿರಬೇಕು ಅವಳಿಗಿ.

ನಾನು ಅವಳ ಮಗಳ ಕಡಿ ತಿರುಗಿ, “ಸ್ನೇಹಾ… ನಿನ್ನ ಗಂಡ ಪೂರ್ಣ ನಿನ್ನ ಮ್ಯಾಲೆ ಅವಲಂಬನೆ ಆಗೋ ಹಂಗ ಅಕರಾಸ್ತೆ ಮಾಡಬ್ಯಾಡ. ಗಂಡ ಅಷ್ಟ ಅಲ್ಲ, ಯಾರು ಯಾರ ಮ್ಯಾಲೂ ಅವಲಂಬನೆ ಆಗಬಾರದು. ಪೂಜಾ ಪಾಠ ಮಾಡೊದರಿಂದ, ಉಪವಾಸ ಮಾಡೊದರಿಂದ, ಮುತೈದಿರಿಗಿ ಉಣಸೊದರಿಂದ ಗಂಡನ ಆಯಸ್ಸು ಹೆಚ್ಚಾಗಲ್ಲ. ಇಬ್ಬರೂ ಒಬ್ಬರಿಗೊಬ್ಬರು ಅರಿತು ಹಾಲು ಜೇನಿನಂಗ ಬೆರೆತು ಬದುಕಿದರ ಇಬ್ಬರ ಆಯಸ್ಸು ಹೆಚ್ಚಾಗತದ. ಯಾರು ಮೊದಲು ಹೋಗಬೇಕಂತ ಮೊದಲೇ ನಿರ್ಧಾರ ಆಗಿರತದ; ಆದ್ರ ದೇವರಿಗಿ ಬೆಡಕೊಂಡು ನನಗ ಮೊದಲ ಕರಕೊ ಅಂತ ಕೇಳೊದು ಮೂರ್ಖತನ. ಗಂಡ ಚಂದ ಇರಬೇಕಂದ್ರ ಅವನಿಗಿ ಚಂದ ಅಡುಗಿ ಮಾಡಿ, ವಿನಾಕಾರಣ ಕಾಟ ಕೊಡದೆ ಖುಷಿಯಾಗಿದ್ರ ಆಯ್ತು… ಹೌದಿಲ್ಲ?” ಎಂದೆ.

“ಹ್ಞೂಂ ರಿ ಆಂಟಿ…” ಎಂದಾಗ ಅವಳ ಮುಖ ನಗುವಿನ ಓಕಳಿಯಾಗಿತ್ತು.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜ್ಯೋತಿ ಡಿ ಬೊಮ್ಮಾ
ಜ್ಯೋತಿ ಡಿ ಬೊಮ್ಮಾ
ಚಿಂಚೋಳಿ ತಾಲೂಕಿನವರು. ಸದ್ಯ ಕಲಬುರಗಿ ನಿವಾಸಿ. ಗೃಹಿಣಿ. ಓದು, ಬರಹ, ಪ್ರವಾಸವೆಂದರೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X