ಇದ್ನ ಸಿಗದು, ಬೆಳಗ್ಗೆಯಾ ಬರೀ ಉಪ್ಪು, ಎರಡ ಸಣ್ ಮೆಣಸನಕಾಯಿ ಹಾಕಿಟ್ರೆ ಸಂಜಿ ಊಟಕ್ಕೆ ಉಪ್ಪಿನಕಾಯಿ ರೆಡಿ! ಮುರುಗಲು, ವಾಟೆ, ಉಪ್ಪಾಗೆ ಅದ್ಕಿಂತ ಮತ್ತೂ ಬೇರೆನೇ ರುಚಿ ಇದ್ದದ್ಕೆ ತೋರಿ ಬಂಗಡೆ ಸಾರಿಗೂ ಒಂದೆರಡಾದ್ರೂ ಕೊಯ್ದು ಹಾಕಿದ್ರೆ ಮಸ್ತ್-ಮಸ್ತ್
“ಸೀತಕ್ಕಾ… ಒಂದೆರಡು ಬಿಂಬ್ಲಿಕಾಯಿ ಕೊಯ್ಕಂಡೋತೆ ಹಾಂ…” ಅಂದಿ, ನಮ್ಮ ಅತ್ತೆ, “ಓ…” ಅನ್ನುದಕ್ಕೂ ಕಾಯ್ದೇ ತಪ್ಪಲೇಲಿ ಒಂದೆರಡು ಗೊಂಚಲು ಕಾಯಿಗಳನ್ನು ಬಿಡಿಸಿಕಂಡು ಹೋಗೋ ಆಚೀಚೆ ಮನೆಯೋರನ್ನ ನೋಡದಾಗ ನಂಗಂತೂ ಬಾಳ ಖುಷಿ.
“ನಿಲ್ಲೇ ನಾನೇ ಕೊಯ್ಕೊಡ್ತೆ…” ಅಂದ್ಕಂಡಿ ಕಂಜೂಸತನ ಮಾಡ್ವ ಅನಿಸದಷ್ಟು – ಮರದ ಕಾಂಡಕ್ಕೆಲ್ಲ ಗೆಜ್ಜೆಯಂಗೆ ಹಿಡದುಬಿಟ್ಟಿರ್ತದೆ ಈ ಬಿಂಬ್ಲಿಕಾಯಿಗಳು.
ನಮ್ಮ ಹೊಳಿ ದಡದ ಮನೆಗೊಂದ್ರಂಗೆ ಅತ್ವಾ ಕೇರಿಗೊಂದರಂಗೆ ಇದ್ದೇ ಇರೋ ಈ ಮರದಲ್ಲಿ ಒತ್ತೊತ್ತಾಗಿ ತುಂಬಿರೋ ಗಿಳಿಹಸಿರು ಎಲೆ ಹೊದ್ಕಿಗೇನೂ ಕಮ್ಮಿ ಇಲ್ಲದಂಗೆ ಕಾಯಿಗಳು ಗೊಂಚಲಲು ಗೊಂಚಲಾಗಿ ಇಳಿಬಿಟ್ಕಂಡಿರ್ತದೆ. ಒಂದೆರಡ ಮರ ಇದ್ಬಿಟ್ರೆ ನೋಡುಕೂ ಬಾಳ ಚಂದ.
ಬಾಳ ಕಾಳಜಿ, ಪ್ರೀತಿ, ಜಾಸ್ತಿ ನೀರು ಎಂತದ್ದೂ ಬೇಕಾಗ್ದಿರೊ ಈ ಬಿಂಬ್ಲಿ ಮರದಲ್ಲಿ ಈ ಸೀಜನ್ನಿಗೆ ಮೊದ್ಲಿಗಿಂತ ನಾಲ್ಕರಷ್ಟ ಕಾಯಿ ತೂಗ್ತದೆ.
ಈ ನುಡಿಗಟ್ಟು ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ಪೋತುರಾಜುಲು ಮತ್ತು ಧರಮ ದೊರೆಗಳ ಬೆಂಕಿ ಆಟ
ಶೆಟ್ಲಿ, ಜಾಲಿ, ಕಲಗ ಎಲ್ಲದ್ಕೂ ಸಿಗಿದು ಬೆರಕೆ ಹಾಕಿದ್ರೆ ಹುಳಿ ರುಚಿಯ ಕಂಪು ಕೊಡೋ ಈ ಬಿಂಬ್ಲಿಕಾಯಿ ರುಚಿ ತಿಂದವ್ರಿಗೇ ಗೊತ್ತು.
ಹಂಗೇ ತರ್ಕಾರಿ ಸಾರಿಗೂ ಅಟ್ಟೇ ಚಲೋ ಆತದೆ.
ಬಿಂಬ್ಲಿ ಸಿಗದು, ಬೆಳಗ್ಗೆಯಾ ಬರೀ ಉಪ್ಪು, ಎರಡ ಸಣ್ ಮೆಣಸನಕಾಯಿ ಹಾಕಿಟ್ರೆ, ಸಂಜಿಗೆ ಊಟಕ್ಕೆ ಉಪ್ಪಿನಕಾಯಿ ರೆಡಿ!
ಎಷ್ಟೋ ಬಡವ್ರ ಮನೆ ಮಡಿಕಿ ಮೀನು ಸಾರಿನ ಮಸಾಲಿಗೆ ಇದ್ರದ್ದೇ ಹುಳಿ.
ಮುರುಗಲು, ವಾಟೆ, ಉಪ್ಪಾಗೆಗಳಿಗಿಂತ ಮತ್ತೂ ಬೇರೆನೇ ರುಚಿ ಇದ್ದದ್ಕೆ ತೋರಿ ಬಂಗಡೆ ಸಾರಿಗೂ ಒಂದೆರಡಾದ್ರೂ ಕೊಯ್ದು ಹಾಕಿದ್ರೆ ಮಸ್ತ್ ಮಸ್ತ್…
ಸಣ್ಣ ಪಿನ್ನು ಚುಚ್ಚಿದ್ರೂ ಹುಳಿರಸ ಜಲ್ ಅಂದಿ ಒಸರೊವಷ್ಟು ನೀರು ತುಂಬಿರೋ ಇವುಗಳನ್ನು, ಹಳೇರು ಕೆಲವು ಔಷಧಿ ಗುಣಕ್ಕಂತನೂ ಬಳಸತ್ರು.
ಇನ್ನೂ ಉಪ್ಯೋಗ ಎಂತಾ ಇರುದು ಹೇಳಿ ಯೋಚನೆ ಮಾಡ್ತಾ, ಫೋಟೋ ತೆಗಿಲಿಕ್ಕೆಂದು ಮರದ ಹತ್ರ ಹೋಗಿ ನಿಂತ್ರೆ ನನ್ನಮ್ಮ, “ವರ್ಸಾ ಇಡೀ ಮರ ತುಂಬ್ಕಂಡಿರೋ ಕಾಯಿ ದೇವ್ರ ಹಿತ್ತಾಳಿ ಪಾತ್ರೆ ತಿಕ್ಕಲಿಕ್ಕೆ ಚಲೋ ಆತದೆ ಮಾರಾಯ್ತಿ…” ಎಂದಳು.
ಈದಿನ.ಕಾಮ್ ಬರಹಗಳ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ