ರೋಣ ಸೀಮೆಯ ಕನ್ನಡ | ಈಗ ಹ್ಯಾಂಗ ನೌಕರಿ ಇದ್ದವ್ಗ ಹೆಣ್ ಅಂತರೊ ಹಂಗ ಆಗ ಹಗೆವ್ ನೋಡಿ ಹೆಣ್ ಕೊಡ್ತಿದ್ರು!

Date:

Advertisements
ಗುದ್ಲಿ, ಸಲಿಕಿ, ಹಾರಿ, ಪಿಕಾಸಿ ಎನ್ಬೇಕ್ ಎಲ್ಲ ಸಂಗೀತ ಮಾಡ್ಕಂಡು, ನಸಿನ್ಯಾಗ ಕೆಲ್ಸ ಚಾಲು ಮಾಡ್ತಿದ್ರು. ಚುನೇಕ ಸುತ್ತಾರ್ದ ಗರಸ ಹತ್ತು ತನಕ ತೆಗ್ಗ ತಗ್ದು, ತೆಗ್ಗಿನ ಸುತ್ತ ಕಲ್ ಗ್ವಾಡಿ ಕಟ್ಟಿ, ಹಾಸಿಗ್ಗಲ್ನಿಂದ ಹಗೆವ್ ಬಾಯ್ಕಿಂಡಿ ಮಾಡ್ತಿದ್ರು. ಈ ಕಿಂಡಿ ಕರೆಟ್ಟ ಒಬ್ಬ ಮನ್ಷ ನೆಟ್ಟಗ ಇಳ್ದಿರಬೇಕು ಅಷ್ಟ ಇರ್ತೈತಿ

ಓನಿಯಾಗ ಮನಿ ಕಟ್ಸಾಕಂತ ತರ ತಗಿಯಾಕಿಂತ್ತಿದ್ರು. ಹಿಂಗ ತರ ತಗಿವಾಗ ಹಗೆವು ಹತ್ತತ. ಅದೆಂತ ಹಗೆವು ಅಂದ್ರ, ಆ ಹಗೆವು ಮುಚ್ಚಾಕ ಎಂಟತ್ತು ಟ್ಯಾಕ್ಟರ್ ಉಸುಗು ಹಿಡಿತು… ಅಂತ ಹಗೆವು! ಅದನ್ನ ನೀಡಾಕಂತ ಜನ್ರು ಸುತ್ ಒರ್ದು, “ಅನಾವತ ಹಗೆವ್ ಬಿಡು,” ಅಂತ ಒಬ್ಬಾವ ಅಂದ್ರ, ಇನ್ನೊಬ್ಬಾವ “ಇದರ್ಕಿಂತ ಅನಾವತ ಹಗೆವ ನಾ ನೋಡಿನಿ,” ಅಂದ. ಮತ್ತೊಬ್ಬವ “ಈಗೆಲ್ಲಿ ಹಗೆವ್ ಕಾಣ್ತಾವ? ಎಲ್ಲಾ ಮುಚ್ಚಿ ಹೆಸರಿಲ್ದ ಹೊಗ್ಯಾವ,” ಅಂದ. ಜನ ಇನ್ನೂ ಏನೇನ ಮಾತಾಡುದು ಕಿವಿ ಮ್ಯಾಗ ಬೀಳ್ತಿತ್ತು.

ಅವಾಗ ನಾ ಇನ್ನೂ ಸನ್ನಾವ. ಅಂದ್ರ, ಮೂರು ನಾಕನೆತ್ತು ಹೋಗ್ತಿದ್ನೇನು, ಪಕ್ಕಾ ಗೊತ್ತಿಲ್ಲ. ಕೊಡೆಕಲ್ ಮಠದ ಮುಂದ ಇರೋ ಹುಚ್ಚಿಕಟ್ಟಿ ಮುಂದ ಎಡಕ್ಕ, ಹಿಂದ ಹನ್ಮಪ್ಪನ‌ ಗುಡಿಮುಂದ ಇದ್ದ ಬಯ್ಲ ಜಾಗದಾಗ ಸಾಲಿಡ್ದ ಹಗೆಗೂಳ್ ಕಾಣ್ತದ್ವು. ಈ ಹಗೆಗೂಳ ಊರ ಒಳಗ ಇರೋ ಬಯ್ದಾಗ, ರೈತರ ಮನಿ ಮುಂದ ಬಾಳ ಇರ್ತಿದ್ವು.

ಹಗೆವುಗಳ್ನ ನಮ್ಮೂರಾಗ ಒಡ್ರು ಪಕ್ಕಿ ಮಂದಿ ಕಡಿತಿದ್ರು. ಅದ್ರಾಗ ಒಬ್ಬವನ ಹೆಸರ್ರ ಹೇಳ್ಬೇಕಂದ್ರ ಒಡ್ರ ಹನಮಪ್ಪ. ಒಂದು ಹಗೆವ್ ತೋಡಿ ಕೊಡಾಕ ರೈತರ ಕಡೆಯಿಂದ ಎಂಟ್ ಗಿದ್ನ ಜ್ವಾಳ, ಗೋದಿ ತಗಳ್ತಿದ್ದರು ಅಂತ ಬುದ್ಯಾಳ ಮಲ್ಲಪ್ಪ ಹೇಳ್ತಿದ್ದ.

Advertisements
ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಕುಂದಾಪುರ ಸೀಮೆ | ಗಂಜಿ ಊಟದ ಗಮ್ಮತ್ತು

ಹಗೆವು ತೋಡಾಕು ಬಾಳ ತಲಿ ಬೇಕಿತ್ರಿ. ಆ ತಲಿ‌ ಒಡ್ರಗೆ ಇತ್ತು. ಅವರು ಗುದ್ಲಿ, ಸಲಿಕಿ, ಹಾರಿ, ಪಿಕಾಸಿ ಎನ್ಬೇಕ್ ಎಲ್ಲ ಸಂಗೀತ ಮಾಡ್ಕಂಡು, ನಸಿನ್ಯಾಗ ಕೆಲ್ಸ ಚಾಲು ಮಾಡ್ತಿದ್ರು. ಚುನೇಕ ಸುತ್ತಾರ್ದ ಗರಸ ಹತ್ತು ತನಕ ತೆಗ್ಗ ತಗ್ದು, ತೆಗ್ಗಿನ ಸುತ್ತ ಕಲ್ ಗ್ವಾಡಿ ಕಟ್ಟಿ, ಹಾಸಿಗ್ಗಲ್ನಿಂದ ಹಗೆವ್ ಬಾಯ್ಕಿಂಡಿ ಮಾಡ್ತಿದ್ರು. ಈ ಕಿಂಡಿ ಕರೆಟ್ಟ ಒಬ್ಬ ಮನ್ಷ ನೆಟ್ಟಗ ಇಳ್ದಿರಬೇಕು ಅಷ್ಟ ಇರ್ತೈತಿ. ಆ ಕಿಂಡಿಯಿಂದ ಒಳಗ ಗರಸ ತೋಡ್ತಾ ಹಂಡೆದಂಗ ಎಷ್ಟ ಬೇಕ್ ಅಷ್ಟು ಒಳಗ ಜಾಗ ಮಾಡ್ಕಂತಿದ್ರು. ಒಬ್ಬ ಮನ್ಷ ನಿಂತ್ ಕೈ ಚಾಚಿದ್ರು ಇನ್ನೂ ಬಾಯ್ಕಿಂಡಿ ಎತ್ರ ಇರ್ತಿತ್ತು; ಅಷ್ಟು ಒಳ್ಯಾಕ ತೋಡ್ತಿದ್ರು. ಹಿಂಗ ತೋಡಿದ ಮ್ಯಾಗ ಹಗೆವ್ ಪೂಜೆ ಮಾಡಿ, ಒಡ್ರಾವುಗ ಮೊದ್ಲ ಮಾತಾಡಿದಂಗ ಗಿದ್ನ ಗಟ್ಟಲೆ ಜ್ವಾಳ, ಗೋದಿ ಕೊಟ್ಟ ಕಳಿಸ್ತಿದ್ರು.

ಹಿಂಗ ವಡ್ರು ಕೂಡ ರೈತ್ರು ತೋಡ್ಸಿದ ಹಗೆವ್ಕ, ಹಿಂಗಾರಿ ಪಿಕು ಗೋದಿ, ಜ್ಬಾಳ, ಕಡ್ಲಿ ರಾಶಿ ಮಾಡಿದ್ಮಾಗ ಅವುನ್ನ ಈ ಹಗೆದಾಗ ಹಾಕ್ತಿದ್ರು. ರೈತ್ರು ತೋಡಿಸಿದ ಹಗೆವ್ ಮ್ಯಾಗ ಗುರ್ತಕ್ಕ ಕಲ್ ಓಟು ಕಾಣುವಂಗ ಇಟ್ತಿದ್ರು.

ರೈತ್ರ ಹೊಲ್ದಾಗ ಮಾಡಿದ ರಾಶಿನ ಹಗೆದಾಗ ಹಾಕಾಕ, ಗುರ್ತಿನ ಕಲ್ ತಗ್ದು, ತೊಡ್ಕಂತ ಹೋಗಿ ಬಾಯ್ ಮುಚ್ಚಳ ತಗ್ದು, ಚಿಮ್ನ ಹಚ್ಚಿ ಹಗೆದಾಗ ಇಳೆಬಿಟ್ಟು ನೋಡ್ತಿದ್ರು ಗಾಳಿ ಐತೋ ಇಲ್ಲೋ ಅಂತ. ಚಿಮ್ನ ಹಚ್ಚದ ದೀಪ ಆರ್ತಂದ್ರ ಗಾಳಿ ಇಲ್ಲ, ದೀಪ ಉರಿಯಾಕ ಹತ್ತಿತಂದ್ರ ಗಾಳಿ ಐತಿ ಅಂತರ್ಥ. ಗಾಳಿ ಐತಿ ಅನ್ನೊದು ಪಕ್ಕಾ ಆದ್ಮಾಗ ಹಗೆದಾಗ ಇಳಿತಿದ್ರು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ರಾಣೆಬೆನ್ನೂರು ಸೀಮೆ | ‘ಟೀಸೀನೂ ಬ್ಯಾಡ, ನೀರಾವರಿನೂ ಬ್ಯಾಡ…’

ಇಳಿದ್ಮ್ಯಾಗ ಹೊರ್ರಿ ಕಟ್ಟಿ ಜ್ವಾಳ ದಂಟ್ನ ಹಗೆದಾಗ ಗ್ವಾಡಿಗಚ್ಚಿ ಒಂದರ್ಮ್ಯಾಗೊಂದ ಬಿಗಿಯಾಗಿ ಇಟ್ಗೊಂತ, ಕಟ್ಗೊಂತ ಬಾಯ್ಕಿಂಡಿ ವರ್ಗು ಹೆನಿತಾರ. ಆಮ್ಯಾಗ ಅಡ್ಡಸುನಗಿ ಮೇವ್ ಕಟ್ಟಿ ಜ್ವಾಳ, ಗೋದಿ, ಹಾಕೇ ಹಾಕ್ತಾರ. ಹಿಂಗ ಹಗೆವ್ ತುಂಬುತನ್ಕ ಇದ್ದ ರಾಶಿ ಹಾಕಿ, ಅದರ ಮ್ಯಾಗ ತಾಡ್ಪಲ್ ಹಾಸಿ, ಅದರ ಮ್ಯಾಗ ಜ್ವಾಳದ ದಂಟ್ ಹಾಕಿ ಬಾಯ್ಮುಚ್ಚಿ ಮಣ್ಣಾಕಿ ಕಲ್ ಕಾಣುವಂಗ ಗುರ್ತ ಇಡ್ತಿದ್ರು.

ಒಂದ ಮಾತ್ ಅಂತಾರ ನಮ್ ರೈತ್ರು; “ಒಟ್ಟಿದ ಬನವಿ, ಹಾಕಿದ ಹಗೆವು ಮಳಿಯಪ್ಪ ಹ್ವಾದ್ರೂ ತಿನ್ನಾಕ ಬರ ಇರ್ತಿರ್ಲಿಲ್ಲ…” ಅಂದ್ರ, ಒಟ್ಟಿದ ಬನವಿ ವರ್ಷಾನಗಟ್ಟಲೇ ಇಟ್ರು ಒಟ್ಟ ಕೆಡಗಿಲ್ಲ. ಈಡೀ ವರ್ಷ ದನ್ಗೂಳಿಗೆ ಮೇವ್ ಈ ಬನಿವ್ಯಾಗಿಂದ ಹಾಕ್ತಾರ. ಹಂಗ ಹಗೆದಾಗ ಹಾಕಿದ ರಾಶಿನ ಹತ್ತತ್ತ ವರ್ಷ ಆದ್ರೂ ಒಟ್ಟ ಹುಳ-ಹುಪ್ಡಿ, ಮತ್ ಒಟ್ಟ ಕೆಡ್ತಿರ್ಲಿಲ್ಲ. ಮಳಿ ಇಲ್ದ ಬರ ಬಿದ್ರೂ ರೈತ ಚಿಂತಿ ಮಾಡ್ತಿರ್ಲಿಲ್ಲ. ತನಗ ಎಷ್ಟ ಬೇಕು ಅಷ್ಟ ಹಗೆದಾಗಿನ ಜ್ವಾಳ ತಕ್ಕೊಂಡು ಮತ್ತ ಮುಂಚಿ ಮುಡ್ತಿದ್ದ.

ನಮ್ಮಜ್ಜ ಕೆರಿಯಪ್ಪಜ್ಜ ಹೇಳ್ತಿದ್ದ, “ಈಗ ಹ್ಯಾಂಗ ನೌಕರಿ ಇದ್ದವ್ಗ ಹೆಣ್ ಕೊಡ್ತಿದ್ರಲ್ಲ, ಹಂಗ ಹಗೆದಾಗ ಜ್ವಾಳ ರಾಶಿ ನೋಡಿ ಹೆನ್ ಕೊಡ್ತಿದ್ರು…” ಅಂತ.

ಈಗೀನ ರೈತ್ರು ಅಧುನಿಕ ಅಂತೇಳಿ ಹಗೆವುಗಳನ್ನ ಬಳಕೆ ಮಾಡ್ದೆ ಇರೋದ್ರಿಂದ ಅವುಗಳಿಗೆ ಗಟರ ನೀರು ಹೊಕ್ಕು ಕುಸಿದಾಗ, ಮನೆಗಳನ್ನ ಕಟ್ಟಾಕ ತರ ತಗೆಯುವಾಗ ಹಗೆಗೂಳು ಸಿಕ್ರ, ಉಸುಗು ಕಲ್ಲು ಹಾಕಿ ಅವುಗಳನ್ನ ಸಮಾಧಿ ಮಾಡಿ, ಗೋರಿಗಳೆಂಬಂತೆ ಮನೆಗಳನ್ನ ಕಟ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X