- ‘ಬಿಜೆಪಿ ಶಾಸಕ, ಸಂಸದರ ಕೈಗೊಂಬೆಯಾಗಿದ್ದಾರೆ ಮೇಯರ್ ಶಿವಕುಮಾರ್’
- ʼಎಂಸಿಸಿಯಲ್ಲಿ ಶೇ.40ಕ್ಕೂ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆʼ
ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಮೇಯರ್ ಶಿವಕುಮಾರ್ ಪದೇ ಪದೇ ಸಭೆಗಳನ್ನು ಮುಂದೂಡುವ ಮೂಲಕ ಮತ್ತು ಸ್ಥಾಯಿ ಸಮಿತಿಗಳ ಚುನಾವಣೆಯನ್ನು ವಿಳಂಬ ಮಾಡುವ ಮೂಲಕ ಪಾಲಿಕೆಯ ಘನತೆಗೆ ಕುಂದು ತಂದಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮೇಯರ್ ಅಯೂಬ್ ಖಾನ್ ಹಾಗೂ ಆರಿಫ್ ಹುಸೇನ್ ಆರೋಪಿಸಿದ್ದಾರೆ.
“ಶಿವಕುಮಾರ್ ಅವರು ಬಿಜೆಪಿ ಶಾಸಕ ಮತ್ತು ಸಂಸದರ ಕೈಗೊಂಬೆಯಾಗಿದ್ದಾರೆ. ಬಿಜೆಪಿಯವರ ಇಚ್ಛೆಯಂತೆ ವರ್ತಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಶಿವಕುಮಾರ್ ಅವರು ಮೇಯರ್ ಸ್ಥಾನ ಪಡೆದು ಆರು ತಿಂಗಳಾಯಿತು. ಈವರೆಗೆ ಕೇವಲ ಎರಡು ಕೌನ್ಸಿಲ್ ಸಭೆಗಳನ್ನು ನಡೆಸಿದ್ದಾರೆ. ಆದರೆ, ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಸಭೆ ನಡೆದಿಲ್ಲ” ಎಂದು ಆರೋಪಿಸಿದರು.
ಶಿವಕುಮಾರ್ ಅವರು ಸರಿಯಾದ ಕಾರಣಗಳಿಲ್ಲದೆ ಉದ್ದೇಶಪೂರ್ವಕವಾಗಿ ಕೌನ್ಸಿಲ್ ಸಭೆಗಳನ್ನು ಮುಂದೂಡುತ್ತಿದ್ದಾರೆ. ಇದು ಮೈಸೂರಿನ ಅಭಿವೃದ್ಧಿಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಹಣಕಾಸು ಸ್ಥಾಯಿ ಸಮಿತಿ ರಚಿಸದೆ, ಈ ಹಣಕಾಸು ವರ್ಷದಲ್ಲಿ ಹಣಕಾಸು ಯೋಜನೆಯನ್ನು ಮಂಡಿಸಲು ಸಾಧ್ಯವಿಲ್ಲ” ಎಂದು ಅಯೂಬ್ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
50 ಲಕ್ಷ ರೂ.ಗಿಂತ ಹೆಚ್ಚಿನ ಅನುದಾನ ವೆಚ್ಚಯಾಗುವ ಯೋಜನಾ ಕಾಮಗಾರಿಗೆ ಸ್ಥಾಯಿ ಸಮಿತಿಯ ಅನುಮೋದನೆ ಬೇಕು. ಬಿಜೆಪಿ ನಾಯಕರು ತಮ್ಮ ಅಗತ್ಯಗಳಿಗೆ ತಕ್ಕಂತೆ ಕೆಲಸವನ್ನು ವಿಭಜಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಅನುಮೋದನೆ ಪಡೆಯುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ” ಎಂದು ಅಯೂಬ್ ಖಾನ್ ಹೇಳಿದರು.
ಬಿಜೆಪಿ ನಾಯಕರ ಆದೇಶದಂತೆ ಕಾರ್ಯನಿರ್ವಹಿಸುತ್ತಿರುವ ಮೇಯರ್ ಶಿವಕುಮಾರ್ ಸದನದ ಘನತೆಯನ್ನು ಕಡಿಮೆ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ(ಎಂಸಿಸಿ)ಯಲ್ಲಿ ಇಂದು ಶೇ.40ಕ್ಕೂ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ” ಎಂದು ಮಾಜಿ ಮೇಯರ್ ಆರಿಫ್ ಆರೋಪಿಸಿದರು.
“ಶೇ.90ರಷ್ಟು ಕಾಮಗಾರಿಗಳಿಗೆ ಸ್ಥಾಯಿ ಸಮಿತಿ ಅನುಮೋದನೆ ಅಗತ್ಯವಿದೆ. ಶೇ.24.1ರಷ್ಟು ಮೀಸಲಾತಿ ಇದೆ. ಆದರೆ, ಈ ಬಾರಿ ಇನ್ನೂ ಸ್ಥಾಯಿ ಸಮಿತಿಯ ರಚನೆಯಾಗಿಲ್ಲ” ಎಂದು ಮಾಜಿ ಉಪಮೇಯರ್ ಶ್ರೀಧರ್ ತಿಳಿಸಿದರು.