ಕಾಯಕ ಹಾಗೂ ವಿಶಿಷ್ಟ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು ಕಾಯಕ ಯೋಗಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಬದುಕಿನ ಚಿಂತನೆಗಳನ್ನು ಅರಿತು, ಇತರರಿಗೂ ತಿಳಿಸುವ ಕೆಲಸ ಆಗಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ಹೇಳಿದರು.
ಭಾಲ್ಕಿ ನಗರದ ಚನ್ನಬಸವಾಶ್ರಮದ ಆವರಣದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಹಾಗೂ 326ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ಮಡಿವಾಳ ಮಾಚಿದೇವರು ಕಾಯಕ ಮತ್ತು ವಚನಗಳ ಮೂಲಕ ಸಮಸ್ತ ಮಾನವಕುಲಕ್ಕೆ ಆದರ್ಶರಾಗಿದ್ದಾರೆ. ಅವರ ಆದರ್ಶ ಬದುಕು ಎಲ್ಲರಿಗೂ ಪ್ರೇರಣೆಯಾಗಬೇಕು” ಎಂದು ಹೇಳಿದರು.
ಶಿವಬಸವ ಸ್ವಾಮೀಜಿ ಅನುಭಾವ ನೀಡಿದರು. ಮಡಿವಾಳ ಸಮಾಜದ ಅಧ್ಯಕ್ಷ ಶಿವು ಮಡಿವಾಳ ಬಸವಗುರುವಿನ ಪೂಜೆ ನೆರವೇರಿಸಿದರು. ಕಮಲನಗರ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾದೇವ ಮಡಿವಾಳ ವಚನ ಪಠಣ ನಡೆಸಿದರು. ಮಡಿವಾಳ ಸಮಾಜದ ಅಧ್ಯಕ್ಷ ದಿಲೀಪ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ : ಬೀದರ್‌ನಲ್ಲಿ ಸೆ.28ರಂದು ಉದ್ಯೋಗ ಮೇಳ
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಸತೀಶ ಮಡಿವಾಳ, ಖಜಾಂಚಿ ಬಸವರಾಜ ಚಿಕಲಚಂದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಮಲನಗರದ ಗುರಪ್ಪ ಟೋಣ್ಣೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನವ್ಯ ಮಹಾದೇವ ಮಡಿವಾಳ ಮಾಚಿದೇವರ ಕುರಿತು ಮಾತನಾಡಿದರು. ರಾಜು ಜುಬರೆ ವಚನ ಗಾಯನ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.




