ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ ಬಗ್ಗೆ ಮಾತನಾಡುವ ನೈತಿಕ ಅರ್ಹತೆ ಇದೆಯೇ?
“ಮೀಸಲು ಅನುಕೂಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ, ನನ್ನ ಜನ ಅನಾಥರಾಗಿದ್ದಾರೆ” ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯಲ್ಲಿ ಒಂದು ಗಂಭೀರವಾದ ಸಾಮಾಜಿಕ ಪ್ರಶ್ನೆಯಿದೆ. ಮೀಸಲಾತಿಯ ಪ್ರಯೋಜನ ಸಮಾಜದ ಅತ್ಯಂತ ಹಿಂದುಳಿದ ಮತ್ತು ಅವಕಾಶ ವಂಚಿತ ವರ್ಗಗಳಿಗೂ ತಲುಪಬೇಕು ಎಂಬ ಅವರ ಕಾಳಜಿಯನ್ನು ಒಪ್ಪಬಹುದು. ಮೀಸಲಾತಿಯ ಸೌಲಭ್ಯ ಕೆಲವೇ ಕುಟುಂಬಗಳ ಪಾಲಾಗದೆ, ನಿಜವಾದ ಅರ್ಹ ಫಲಾನುಭವಿಗಳಿಗೆ ದೊರೆಯಬೇಕು ಎಂಬ ಚರ್ಚೆಯೂ ಅಗತ್ಯವೇ.
ಆದರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವಾಗ ರಾಜಕೀಯ ಅಧಿಕಾರ ಮತ್ತು ಅವಕಾಶಗಳ ಹಂಚಿಕೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ? ಇತರರು ಮತ್ತೆ ಮತ್ತೆ ಮೀಸಲಾತಿಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸುವವರು ತಮ್ಮ ಕುಟುಂಬದ ರಾಜಕೀಯ ಇತಿಹಾಸವನ್ನೂ ಒಮ್ಮೆ ಪರಿಶೀಲಿಸಿಕೊಳ್ಳುವುದು ಸೂಕ್ತವಲ್ಲವೇ?
ದೇವೇಗೌಡರು 1953ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದರು. 1962ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾದರು. ನಂತರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ರಾಜ್ಯ ಸಚಿವರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು 1996ರಲ್ಲಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. 1999ರಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ರಾಜಕೀಯ ಪಯಣ ಹಲವು ದಶಕಗಳಷ್ಟು ವಿಸ್ತಾರವಾಗಿದೆ.
ಆದರೆ ದೇವೇಗೌಡರ ರಾಜಕೀಯ ಪ್ರಭಾವ ಅವರೊಂದಿಗೇ ನಿಂತಿಲ್ಲ. ಅವರ ಕುಟುಂಬದ ಮುಂದಿನ ಪೀಳಿಗೆಯೂ ರಾಜಕೀಯದಲ್ಲಿ ಪ್ರಬಲ ಸ್ಥಾನಗಳನ್ನು ಪಡೆದುಕೊಂಡಿದೆ.
ಎರಡನೇ ತಲೆಮಾರು
ಹೆಚ್.ಡಿ. ರೇವಣ್ಣ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಸಂಸದರಾಗಿಯೂ ಆಯ್ಕೆಯಾಗಿದ್ದು, ಪ್ರಸ್ತುತ ಕೇಂದ್ರ ಸಚಿವರಾಗಿದ್ದಾರೆ. ಅನಿತಾ ಕುಮಾರಸ್ವಾಮಿ ಶಾಸಕರಾಗಿದ್ದರು. ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದರು. ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಸ್ಥಾನದಲ್ಲಿದ್ದು, 2024ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.
ಮೂರನೇ ತಲೆಮಾರು
ಹೆಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ 2019ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾದರು. 2024ರ ಚುನಾವಣೆಯಲ್ಲಿ ಸೋತರು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಿದೆ. ಮತ್ತೊಬ್ಬ ಪುತ್ರ ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆ, ರಾಮನಗರ ವಿಧಾನಸಭೆ ಮತ್ತು ಚನ್ನಪಟ್ಟಣ ಉಪಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದರೂ ಪಕ್ಷದ ಯುವ ಘಟಕದ ನೇತೃತ್ವದಲ್ಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೇವೇಗೌಡರ ಕುಟುಂಬದ ರಾಜಕೀಯ ಪ್ರಭಾವ ಒಂದು ತಲೆಮಾರಿಗೆ ಸೀಮಿತವಾಗಿಲ್ಲ. ಅವರ ಕುಟುಂಬದ ಸದಸ್ಯರು ವಿವಿಧ ಹಂತಗಳಲ್ಲಿ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ, ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ, ಸಚಿವರಾಗಿದ್ದಾರೆ ಮತ್ತು ಪಕ್ಷದ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಇದರಲ್ಲಿ ಯಾರೂ ರಾಜಕೀಯಕ್ಕೆ ಬರಬಾರದು ಎಂಬುದು ನನ್ನ ವಾದವಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಪ್ರವೇಶಿಸುವ ಮತ್ತು ಜನರ ಬೆಂಬಲ ಪಡೆದು ಅಧಿಕಾರಕ್ಕೆ ಬರುವ ಹಕ್ಕಿದೆ. ಆದರೆ ಒಂದು ಪಕ್ಷವನ್ನು ಕಟ್ಟಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾವಿರಾರು ಕಾರ್ಯಕರ್ತರು ಮತ್ತು ನಾಯಕರಿಗೆ ಹೋಲಿಸಿದರೆ, ಒಂದೇ ಕುಟುಂಬದ ಸದಸ್ಯರಿಗೆ ಸತತವಾಗಿ ರಾಜಕೀಯ ಅವಕಾಶಗಳು ದೊರೆಯುತ್ತಿರುವುದರ ಬಗ್ಗೆ ಪ್ರಶ್ನಿಸುವ ಹಕ್ಕು ಜನರಿಗಿಲ್ಲವೇ?
ದೇವೇಗೌಡರ ಕುಟುಂಬದ ರಾಜಕೀಯ ಏಳಿಗೆಗೆ ಹಗಲಿರುಳು ದುಡಿದ ಜನತಾದಳದ ಇತರ ನಾಯಕರುಗಳಿಗೆ, ಹಿರಿಯ ಕಾರ್ಯಕರ್ತರುಗಳಿಗೆ ಮತ್ತು ಸಾಮಾನ್ಯ ಪಕ್ಷದ ಕಾರ್ಯಕರ್ತರುಗಳಿಗೆ ಇದು ಮಾಡಿದ ದ್ರೋಹವಲ್ಲವೇ?
ಕುಮಾರಸ್ವಾಮಿ ಅವರೇ, ಮೀಸಲಾತಿಯ ಪ್ರಯೋಜನ ಕೆಲವೇ ಕುಟುಂಬಗಳಿಗೆ ಸೀಮಿತವಾಗಬಾರದು ಎಂಬ ನಿಮ್ಮ ಕಾಳಜಿ ನ್ಯಾಯಯುತವಾದದ್ದು. ಅದೇ ನ್ಯಾಯದ ತತ್ವ ರಾಜಕೀಯ ಅವಕಾಶಗಳಿಗೂ ಅನ್ವಯಿಸಬೇಕಲ್ಲವೇ? ಪಕ್ಷದೊಳಗೆ ಅರ್ಹತೆ, ಪರಿಶ್ರಮ ಮತ್ತು ದೀರ್ಘಕಾಲದ ಸೇವೆಗೆ ತಕ್ಕ ಅವಕಾಶಗಳು ಸಿಗುತ್ತಿವೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಲ್ಲವೇ?
ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು ಐತಿಹಾಸಿಕ ತಪ್ಪು ನಿರ್ಧಾರ!
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಸುಲಭ. ಆದರೆ ಆ ನ್ಯಾಯವನ್ನು ನಮ್ಮ ರಾಜಕೀಯ ಬದುಕಿನಲ್ಲೂ ಅನುಸರಿಸುವುದು ಮುಖ್ಯ. ಇತರರ ಕುಟುಂಬಗಳು ಮತ್ತೆ ಮತ್ತೆ ಸೌಲಭ್ಯ ಪಡೆಯುತ್ತಿವೆ ಎಂದು ಪ್ರಶ್ನಿಸುವ ಮೊದಲು, ತಮ್ಮ ಕುಟುಂಬಕ್ಕೆ ಸತತವಾಗಿ ದೊರೆತ ರಾಜಕೀಯ ಅವಕಾಶಗಳ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳುವುದು ಪ್ರಾಮಾಣಿಕ ರಾಜಕೀಯದ ಲಕ್ಷಣ.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವಾಗ ಮೊದಲು ನಮ್ಮ ಮನೆಯ ಅಂಗಳದಲ್ಲೂ ನ್ಯಾಯವಿದೆಯೇ ಎಂದು ನೋಡಿಕೊಳ್ಳುವುದು ಒಳ್ಳೆಯದು.

ಚಂದ್ರಶೇಖರ ಶೆಟ್ಟಿ
ಬರಹಗಾರ, ವ್ಯಂಗ್ಯಚಿತ್ರಕಾರ



