ಧಾರವಾಡ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣಕ್ಕೆ ಪ್ರತಿದಿನ ಬೆಳಗಿನ ಜಾವ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ವಾಯುವಿಹಾರ ಹಾಗೂ ವ್ಯಾಯಾಮಕ್ಕಾಗಿ ಆಗಮಿಸುತ್ತಾರೆ. ಆದರೆ ಸಾರ್ವಜನಿಕರ ಆರೋಗ್ಯ ಮತ್ತು ದೈಹಿಕ ಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಕ್ರೀಡಾಂಗಣದ ಆವರಣದಲ್ಲಿ ಅಳವಡಿಸಿರುವ ವ್ಯಾಯಾಮ ಉಪಕರಣಗಳು ಸೂಕ್ತ ನಿರ್ವಹಣೆಯಿಲ್ಲದೆ ದುಸ್ಥಿತಿಗೆ ತಲುಪಿವೆ.
ಕ್ರೀಡಾಂಗಣದಲ್ಲಿರುವ ಹಲವು ವ್ಯಾಯಾಮ ಯಂತ್ರಗಳ ಬಿಡಿಭಾಗಗಳು ಸಡಿಲಗೊಂಡಿದ್ದು, ಬಳಕೆಯ ಸಂದರ್ಭದಲ್ಲಿ ಚರ್… ಚರ್… ಎಂಬ ಶಬ್ದ ಮಾಡುತ್ತಿವೆ. ಕೆಲವು ಉಪಕರಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನು ಉಪಕರಣಗಳ ಸುತ್ತಮುತ್ತ ಕಲ್ಲುಗಳು, ಕಸ ಹಾಗೂ ಕಳೆಗಿಡಗಳು ಬೆಳೆದು ನಿಂತಿದ್ದು, ಸ್ವಚ್ಛತೆ ಮತ್ತು ನಿರ್ವಹಣೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿವೆ.
ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಕರು ಸೇರಿದಂತೆ ಪ್ರತಿದಿನ ನೂರಾರು ಸಾರ್ವಜನಿಕರು ಈ ಉಪಕರಣಗಳನ್ನು ವ್ಯಾಯಾಮಕ್ಕಾಗಿ ಬಳಸುತ್ತಿದ್ದಾರೆ. ಆದರೆ ಹಾಳಾಗಿರುವ ಯಂತ್ರಗಳನ್ನು ಬಳಸುವ ಸಂದರ್ಭದಲ್ಲಿ ಗಾಯಗೊಳ್ಳುವ ಅಥವಾ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.
ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಕ್ರೀಡಾಂಗಣದಲ್ಲಿರುವ ಎಲ್ಲ ವ್ಯಾಯಾಮ ಉಪಕರಣಗಳನ್ನು ತಕ್ಷಣ ಪರಿಶೀಲಿಸಿ, ಹಾಳಾಗಿರುವ ಯಂತ್ರಗಳನ್ನು ದುರಸ್ತಿಗೊಳಿಸಬೇಕು. ಆವರಣವನ್ನು ಸ್ವಚ್ಛವಾಗಿಡುವುದರ ಜೊತೆಗೆ ನಿಯಮಿತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ಹನಮೇಶ ಹುಡೇದ




