ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸುರಕ್ಷತೆ, ಶಿಸ್ತು ಹಾಗೂ ಸರ್ವಾಂಗೀಣ ವ್ಯಕ್ತಿತ್ವ ವಿಕಸನದ ಮಹತ್ತರ ಉದ್ದೇಶದೊಂದಿಗೆ ಆರಂಭಿಸಲಾದ ಬಾಲಕರ ವಸತಿ ನಿಲಯವನ್ನು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಎನ್ ಸತೀಶ್ ಕುಮಾರ್ ಅವರು ಉದ್ಘಾಟಿಸಿದರು.
ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಶಿಕ್ಷಣವನ್ನಷ್ಟೇ ನೀಡದೆ, ಶಿಸ್ತುಬದ್ಧ ಜೀವನಶೈಲಿ, ಉತ್ತಮ ಸಂಸ್ಕಾರ, ಸಮಯಪಾಲನೆ, ಆತ್ಮವಿಶ್ವಾಸ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಅಗತ್ಯವಾದ ವಾತಾವರಣವನ್ನು ಕಲ್ಪಿಸುವುದು ಈ ವಸತಿ ನಿಲಯದ ಪ್ರಮುಖ ಆಶಯವಾಗಿದೆ. ಸುಂದರವಾದ ಪ್ರಕೃತಿ ಪರಿಸರದ ನಡುವೆ ಸುರಕ್ಷಿತ ವಸತಿ ವ್ಯವಸ್ಥೆಯೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವ ಉದ್ದೇಶವನ್ನು ಶಾಲೆ ಹೊಂದಿದೆ.
“ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿಗಳು ಹಾಗೂ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಶೇಖರ್ ಹೆಚ್.ಟಿ. ಅವರು ಮಾತನಾಡಿ, ಪೊಲೀಸ್ ಪಬ್ಲಿಕ್ ಶಾಲೆಯನ್ನು ರಾಜ್ಯದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಗುರುತಿಸುವಂತೆ ಬೆಳೆಸುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದರು. ಸೈನಿಕ ಶಾಲೆ ಹಾಗೂ ನವೋದಯ ಶಾಲೆಗಳ ಮಾದರಿಯಲ್ಲಿ ಶಿಸ್ತು, ಗುಣಮಟ್ಟದ ಶಿಕ್ಷಣ ಮತ್ತು ವಿಶಿಷ್ಟ ಸೌಲಭ್ಯಗಳನ್ನು ಒಳಗೊಂಡ ಸಂಸ್ಥೆಯಾಗಿ ಪೊಲೀಸ್ ಪಬ್ಲಿಕ್ ಶಾಲೆಯನ್ನು ರೂಪಿಸುವ ಗುರಿ ಹೊಂದಲಾಗಿದೆ” ಎಂದರು.
ಅತ್ಯಂತ ಕಡಿಮೆ ಶಾಲಾ ಶುಲ್ಕದಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಶಿಕ್ಷಣದ ಅವಕಾಶ ಒದಗಿಸಿ, ಅವರನ್ನು ಭವಿಷ್ಯದ ಉನ್ನತ ಸಾಧಕರನ್ನಾಗಿ ರೂಪಿಸುವಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಮಹತ್ವದ ಪಾತ್ರ ವಹಿಸುತ್ತಿದೆ.
“ಪೋಷಕರು ತಮ್ಮ ಕರುಳ ಕುಡಿಗಳನ್ನು ಅಪಾರ ನಂಬಿಕೆ ಮತ್ತು ವಿಶ್ವಾಸದಿಂದ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಜವಾಬ್ದಾರಿಗೆ ಒಪ್ಪಿಸಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ಮಕ್ಕಳ ಭವಿಷ್ಯ ರೂಪಿಸುವುದು ಶಾಲೆಯ ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದು ತಿಳಿಸಿದರು.
ವಸತಿ ನಿಲಯದ ಮೂಲಕ ಮಕ್ಕಳಿಗೆ ಸುರಕ್ಷಿತ ವಾಸ್ತವ್ಯ, ಕ್ರಮಬದ್ಧ ದಿನಚರಿ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯಾಧುನಿಕ ಹಾಗೂ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಿ, ಪೊಲೀಸ್ ಪಬ್ಲಿಕ್ ಶಾಲೆಯನ್ನು ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿ ರೂಪಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಪರಮೇಶ್ವರ ಹೆಗಡೆ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರವಿನಾರಾಯಣ್, ಶಿಕ್ಷಣ ತಜ್ಞರಾದ ವಾಮದೇವಪ್ಪ ಹೆಚ್. ವಿ ,ಜಿಲ್ಲೆಯ ವಿವಿಧ ವಿಭಾಗಗಳ ಡಿವೈಎಸ್ಪಿಗಳು, ಆರ್ಪಿಐಗಳು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು , ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಚಂಪಸತೀಶ್,ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





