ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಸದೇ, ಕೇವಲ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿ ಕೆಲಸಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಎಸ್ಸಿ, ಎಸ್ಟಿ ಮೀಸಲು ನಿಧಿ ಸದ್ಬಳಕೆ ಜನಾಂದೋಲನ ವೇದಿಕೆಯ ರಾಜ್ಯ ಸಂಚಾಲಕ ಅರಕಲವಾಡಿ ನಾಗೇಂದ್ರ ಒತ್ತಾಯ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸ್ಥಾನಿಯ ಸಹಾಯಕರಿಗೆ ಮನವಿ ಸಲ್ಲಿಸಿದ ಅವರು, ಈ ಕಾಯಿದೆ ಮೂಲಕ ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟಿದ್ದ ಅನುದಾನವನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ರಸ್ತೆ, ಸೇತುವೆ, ಬೃಹತ್ ನೀರಾವರಿ, ಹುಲಿ ಸಂರಕ್ಷಣೆ ಹಾಗೂ ಪೆರಿಫೆರಲ್ ರಿಂಗ್ ರಸ್ತೆಯಂತಹ ಸಾಮಾನ್ಯ ಯೋಜನೆಗಳಿಗೂ ಬಳಸಲಾಗಿದೆ ಎಂದು ದೂರಿದರು.
ಆದ್ದರಿಂದ ಈ ಕಾಯ್ದೆಯ ಸೆಕ್ಷನ್ 7(C) ರದ್ದುಗೊಳಿಸಿ, ಪರಿಣಾಮಕಾರಿಯಾಗಿ ಬಳಸಬೇಕು. ಈ ಅನುದಾನವನ್ನು ಯಾವುದೇ ಅನ್ಯ ಕಾರ್ಯಗಳಿಗೆ ಬಳಕೆ ಮಾಡದೇ, ಈ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ನಿಯೋಜಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ವಿಕಾಸಸೌಧದಲ್ಲಿ ನ.12ರಂದು ಈ ಯೋಜನೆಗಳ ಕುರಿತು ನಡೆದ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಕಾಯ್ದೆಯ ಅನುಷ್ಠಾನ, ಪ್ರಗತಿ ಹಾಗೂ ಪರಿಣಾಮಗಳ ಕುರಿತು ಸಾಮಾಜಿಕ ಪರಿಶೋಧನೆ ನಡೆಸುವುದಾಗಿ ಮುಖ್ಯಮಂತ್ರಿ ತಿಳಿಸಿರುವುದು ಸ್ವಾಗತಾರ್ಹ ಎಂದರು.
ಆದರೆ, ಕಳೆದ 13 ವರ್ಷಗಳ ಕಾಯ್ದೆಯ ಅನುಷ್ಠಾನವನ್ನು ಪರಿಶೀಲಿಸಿದಾಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧನೆಯಾಗಿಲ್ಲ. 2023-24ರಿಂದ 2026-27ರವರೆಗೆ ಗ್ಯಾರಂಟಿ ಯೋಜನೆಗಳಿಗೆ ಸೆಕ್ಷನ್ 7(C) ಆಡಿ ಸುಮಾರು 2.53 ಲಕ್ಷ ಕೋಟಿ ಬಳಕೆಯಾಗಿದೆ ಎಂಬ ಚರ್ಚೆ ನಡೆಯುತ್ತಿದ್ದು, ಈ ಮೊತ್ತದ ನಿಖರ ವಿವರಗಳನ್ನು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಮೀಸಲು ನಿಧಿಯನ್ನು ಶಿಕ್ಷಣ ಮತ್ತು ಔದ್ಯೋಗಿಕ ಕೌಶಲ್ಯ ಅಭಿವೃದ್ಧಿಗೆ ಶೇ.40. ಆರೋಗ್ಯಕ್ಕೆ ಶೇ.10, ವಸತಿ ಮತ್ತು ಮೂಲಸೌಕರ್ಯಕ್ಕೆ ಶೇ.25 ಹಾಗೂ ಆರ್ಥಿಕ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಶೇ.25ರಂತೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಸಂಚಾಲಕ ನರಸೀಪುರ ಪ್ರಭುಸ್ವಾಮಿ, ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಕೆಲ್ಲಂಬಳ್ಳಿ ಸೋಮನಾಯಕ, ನವೀನ್ ಮೌರ್ಯ, ಪರ್ವತರಾಜ್, ಕೃಷ್ಣನಾಯಕ್ ಮೊದಲಾದವರುಇದ್ದರು.



