ರಾಜ್ಯ ಸರ್ಕಾರದ ಪರಿಷ್ಕೃತ ವೇತನ ಸುತ್ತೋಲೆಯನ್ನು ತಕ್ಷಣ ಜಾರಿಗೊಳಿಸಿ, ಸರ್ಕಾರಿ ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ನ್ಯಾಯಯುತ ವೇತನ ಹಾಗೂ ಸರ್ಕಾರಿ ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕೆಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಸಫಾಯಿ ಕರ್ಮಚಾರಿಗಳ ಸಂಘ ಪ್ರತಿಭಟನೆ ನಡೆಸಿತು.
ಈ ಕುರಿತು ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿರುವ ಸಂಘವು, ಕಾರ್ಮಿಕರಿಗೆ ವೇತನ ಚೀಟಿ, ಭವಿಷ್ಯ ನಿಧಿ (PF), ಸಾಮಾಜಿಕ ಭದ್ರತೆ ಹಾಗೂ ಕುಟುಂಬದ ಕಲ್ಯಾಣ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಗುತ್ತಿಗೆ ಏಜೆನ್ಸಿಗಳಿಂದ ನಡೆಯುತ್ತಿರುವ ವೇತನ ಮತ್ತು ಪಿಎಫ್ ಪಾವತಿ ಲೋಪಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದ್ದು, ಪರಿಷ್ಕೃತ ವೇತನ ಜಾರಿಯಲ್ಲಿ ವಿಳಂಬ ಮಾಡಬಾರದು. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೋರಾಟ ವಿಸ್ತರಿಸುವುದಾಗಿ ಸಂಘ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಭಾನುಪ್ರಸಾದ್ ಬಿ.ಎ. ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.




