ಮೈಸೂರು ಗ್ರಾಹಕರ ಪರಿಷತ್, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಹಾಗೂ ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಶಾಲೆಯ ಆವರಣದಲ್ಲಿ ನಡೆಯುತ್ತಿರುವ ವಸತಿ ಸಮುಚ್ಚಯ ನಿರ್ಮಾಣ ಸ್ಥಳದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಶಾಸಕರು ಮತ್ತು ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 108 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಶಾಲೆಯ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಶಾಲೆಯ ಜಾಗವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
1918ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ, ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಾಸು, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಸಂಬಂಧಿಕರು ಸೇರಿದಂತೆ ಅನೇಕ ಗಣ್ಯರು ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 120 ಮಕ್ಕಳು ಕಲಿಯುತ್ತಿದ್ದು, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸುತ್ತಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಮತ್ತು ಶೈಕ್ಷಣಿಕ ಸಾಧನೆ ಹೊಂದಿರುವ ಸರ್ಕಾರಿ ಶಾಲೆಯ ಜಾಗವನ್ನೇ ವಸತಿ ಸಮುಚ್ಚಯ ನಿರ್ಮಾಣಕ್ಕೆ ಬಳಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.
ಶಾಲೆಯ ಸುತ್ತಮುತ್ತ ಈಗಾಗಲೇ ರೈಲ್ವೆ ಇಲಾಖೆಯಿಂದ ಐದಾರು ವಸತಿ ಸಮುಚ್ಚಯಗಳು ಹಾಗೂ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಇದೀಗ ಶಾಲೆಯ ಕಾಂಪೌಂಡ್ ಒಳಭಾಗದಲ್ಲಿಯೇ ಕಾಂಪೌಂಡ್ ಗೋಡೆಯನ್ನು ಕೆಡವಿ ಮೂರು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿ ಆರಂಭಿಸಿರುವುದು ಶಾಲೆಯ ಜಾಗದ ಮೇಲಿನ ಅತಿಕ್ರಮಣದ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಶಾಲೆಗಳು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿವೆ. ಇಂತಹ ಶಾಲೆಗಳ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸುವುದರಿಂದ ಮಕ್ಕಳ ಕಲಿಕೆಗೆ ಅಗತ್ಯವಾದ ಪರಿಸರ, ಆಟದ ಮೈದಾನ ಹಾಗೂ ಭವಿಷ್ಯದ ವಿಸ್ತರಣೆಗೆ ಅವಕಾಶ ಇಲ್ಲದಂತಾಗುತ್ತದೆ. ಶಾಲೆಯ ಅಸ್ತಿತ್ವವನ್ನೇ ಪ್ರಶ್ನಿಸುವ ರೀತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣಾ ಮತ್ತು ಸಕ್ರಮಾತಿ) ಅಧಿನಿಯಮ 2026ರ ಅನ್ವಯ ಕನಿಷ್ಠ 12 ವರ್ಷಗಳಿಂದ ಸರ್ಕಾರಿ ಶಾಲೆಗಳ ಬಳಕೆಯಲ್ಲಿರುವ ಜಾಗವನ್ನು ಸಂಬಂಧಪಟ್ಟ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರೈಲ್ವೆ ಇಲಾಖೆಯು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಗೆ ಸೇರಿದ ಜಾಗವನ್ನು ಬಿಟ್ಟುಕೊಡಬೇಕು. ಪ್ರಸ್ತುತ ನಡೆಯುತ್ತಿರುವ ಮೂರು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಬೇರೆ ಸೂಕ್ತ ಸ್ಥಳಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಬರಗಾಲ | ಮಳೆಯ ಕೊರತೆಗೆ ಬತ್ತಿದ ಕಾಡಿನ ಕೆರೆಗಳು: ನೀರಿಗಾಗಿ ಪರದಾಡುವ ವನ್ಯಜೀವಿಗಳು
ಅಲ್ಲದೆ, ಶಾಲೆಯ ಆವರಣದಲ್ಲಿ ಸುರಿದಿರುವ ಮಣ್ಣು, ಮರದ ದಿಮ್ಮಿಗಳು, ಕಾಂಕ್ರೀಟ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಶಾಲೆಯ ಜಾಗವನ್ನು ಗುರುತಿಸಿ ಜಿಲ್ಲಾಡಳಿತ ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವ ಮೂಲಕ ಕಾನೂನುಬದ್ಧವಾಗಿ ಶಾಲೆಯ ಭೂಮಿಯನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ವರದಿ : ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ ಸಂಕಟ: ನೀರಿಲ್ಲದ ಕಾಡು-ಆಹಾರವಿಲ್ಲದ ವನ್ಯಜೀವಿ!
ಶಾಲೆಯ ಅಸ್ತಿತ್ವ ಉಳಿಸುವುದು ಕೇವಲ ಒಂದು ಶಿಕ್ಷಣ ಸಂಸ್ಥೆಯ ಹಿತಾಸಕ್ತಿಯ ಪ್ರಶ್ನೆಯಲ್ಲ. ಅದು ನೂರಾರು ಮಕ್ಕಳ ಭವಿಷ್ಯ, ಸಾರ್ವಜನಿಕ ಶಿಕ್ಷಣದ ಹಕ್ಕು ಹಾಗೂ ನಗರದ ಶೈಕ್ಷಣಿಕ ಪರಂಪರೆಯನ್ನು ಉಳಿಸುವ ಹೋರಾಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ ಕುತ್ತು, ರೈತರ ಬದುಕಿಗೆ ಹೊಡೆತ
ಪ್ರತಿಭಟನೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಕಾಳಚನ್ನೇಗೌಡ, ಮೈಸೂರು ಗ್ರಾಹಕರ ಪರಿಷತ್ ಪದಾಧಿಕಾರಿಗಳಾದ ರಾಯ್ ಜೋಸೆಫ್, ಎಸ್.ಕೆ. ದಿನೇಶ್, ರವಿ ಬೇಲ್, ಅಶ್ವಿನಿ ರಂಜನ್, ರವಿಚಂದ್ರ, ಡಿ.ವಿ. ದಯಾನಂದ ಸಾಗರ್, ರಾಕೇಶ್, ಮಾಲವಿಕ ಗುಬ್ಬಿವಾಣಿ, ರತಿ ರಾವ್, ಎಐಡಿಎಸ್‌ಒ ಜಿಲ್ಲಾ ಸಮಿತಿಯ ನಿತಿನ್, ಬಿ.ಆರ್. ಸ್ವಾತಿ, ವಿ. ಕಾಳಚನ್ನೇಗೌಡ, ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ವಿ. ಮಹೇಂದ್ರ ಉಂಡವಾಡಿ, ಎಮೈಸೂರು ಗ್ರಾಹಕರ ಪರಿಷತ್, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಹಾಗೂ ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.ಸ್. ದರ್ಶನ್, ಎನ್. ದರ್ಶನ್, ಪವನ್, ಕಾವೇರಪ್ಪ, ಸಿ. ದರ್ಶನ್, ವಿ. ಚಂದ್ರು, ಕೋಮಲ, ಸಹನಾ, ಅಕ್ಷತಾ, ಸುಶೀಲ, ಮಂಜುನಾಥಪುರ ಮತ್ತು ಗೋಕುಲಂ ನಿವಾಸಿಗಳು ಪಾಲ್ಗೊಂಡಿದ್ದರು.



