SIR ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದ್ದು, ಇದರಿಂದ ಲಕ್ಷಾಂತರ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕ ಎದುರಾಗಿದೆ. ಆದ್ದರಿಂದ SIR ಆಧಾರದ ಮೇಲೆ ಅಂತಿಮಗೊಳಿಸಿರುವ ಮತದಾರರ ಪಟ್ಟಿಯನ್ನು ರದ್ದುಗೊಳಿಸಬೇಕು. ತಪ್ಪಿತಸ್ಥ ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಸಂವಿಧಾನ ದಿನದ ಅಂಗವಾಗಿ ಸಲ್ಲಿಸಲಾದ ಮನವಿಯಲ್ಲಿ, ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿ, SIR ಪ್ರಕ್ರಿಯೆಯಲ್ಲಿನ ಲೋಪದೋಷಗಳು ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಹಲವು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಚುನಾವಣಾ ಆಯೋಗದ SIR ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ನವೆಂಬರ್ 6ರಂದು ಆಯೋಗ ಹೊರಡಿಸಿರುವ ಏಳು ಅಂಶಗಳ ಕಾರ್ಯಸೂಚಿಯು ಈ ಹಿಂದೆ ಪರಿಷ್ಕರಣೆ ಸಂದರ್ಭದಲ್ಲಿ ನಡೆದಿರುವ ಲೋಪಗಳನ್ನು ಸರಿಪಡಿಸುವ ಪ್ರಯತ್ನವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ತಪ್ಪಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರ ಪಟ್ಟಿಯನ್ನು ಪ್ರತಿ ಮತಗಟ್ಟೆಯಲ್ಲಿ ಪ್ರಕಟಿಸಿ, ಮನೆಮನೆಗೆ ಮಾಹಿತಿ ತಲುಪಿಸಬೇಕು. ತಪ್ಪಾಗಿ ಹೆಸರು ಕೈಬಿಟ್ಟವರಿಗೆ ಮತ್ತೆ ಎಣಿಕೆ ನಮೂನೆ (Enumeration Form) ನೀಡಬೇಕು. ಸ್ಥಳಾಂತರಗೊಂಡ ಮತದಾರರ ಹೊಸ ವಿಳಾಸದ ವಿವರ ಪಡೆದು ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು ಎಂಬ ಸೂಚನೆಗಳು ಈ ಪ್ರಕ್ರಿಯೆಯಲ್ಲಿನ ಲೋಪಗಳನ್ನು ತೋರಿಸುತ್ತವೆ ಎಂದು ಮನವಿದಾರರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅಂತಿಮಗೊಳಿಸಿರುವ SIR ಮತದಾರರ ಪಟ್ಟಿಯಲ್ಲಿಯೂ ಅನೇಕ ದೋಷಗಳಿವೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರ ಜನಸಂಖ್ಯೆ ಸುಮಾರು 5.2 ಕೋಟಿ ಇದ್ದರೂ, ಮತದಾರರ ಪಟ್ಟಿಯಲ್ಲಿ ಸುಮಾರು 4.5 ಕೋಟಿ ಜನರಷ್ಟೇ ಉಳಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಳಿದ ಅರ್ಹರು ಪಟ್ಟಿಯಿಂದ ಹೊರಗುಳಿದಿರುವುದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಕರ್ನಾಟಕ ಜನಶಕ್ತಿ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಒತ್ತಾಯಿಸಿದ್ದಾರೆ.
SIR ಅಂತಿಮ ಪಟ್ಟಿಯಲ್ಲಿಯೂ ಸರಿಯಾದ ವಿಳಾಸವಿಲ್ಲದ ಸುಮಾರು 20 ಲಕ್ಷ ನಮೂದುಗಳನ್ನು ತಮ್ಮ ಡೇಟಾ ತಂಡ ಗುರುತಿಸಿದೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಮತದಾರರಲ್ಲಿ ಶೇ.25ರಷ್ಟು ಮಂದಿ ನೋಂದಣಿಯಿಂದ ಹೊರಗುಳಿದಿದ್ದಾರೆ ಎಂಬ ಅಧ್ಯಯನದ ಅಂಶಗಳನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ 1.2 ಲಕ್ಷ ಹೊಸ ಮತದಾರರ ನೋಂದಣಿ ಕುರಿತು ಮೂಲ ಮಾಹಿತಿಯ ಲಭ್ಯತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿದೆ.
ದೇಶಾದ್ಯಂತ SIR ಪ್ರಕ್ರಿಯೆಯಿಂದ ಕೋಟ್ಯಂತರ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 37 ಲಕ್ಷ ಮಂದಿ ಮೇಲ್ಮನವಿ ಸಲ್ಲಿಸಿದ್ದರೂ ಅವರ ಮತದಾನದ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಗಳು ಮುಂದುವರಿದಿವೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಈ ಪ್ರಕ್ರಿಯೆಯು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಲಾಗಿದೆ.
ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಕುಸಿಯುತ್ತಿದೆ. ಪ್ರಜಾಪ್ರಭುತ್ವದ ಮೂಲ ಆಶಯವಾದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ದೊರೆಯಬೇಕು. ಯಾವುದೇ ಅರ್ಹ ಮತದಾರರು ಆಡಳಿತಾತ್ಮಕ ಲೋಪಗಳಿಂದ ತಮ್ಮ ಹಕ್ಕನ್ನು ಕಳೆದುಕೊಳ್ಳಬಾರದು. ಆದ್ದರಿಂದ, ರಾಷ್ಟ್ರಪತಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಮುಖಂಡರಾದ ಬಾಬು, ಆರ್. ಪಾಪಣ್ಣ, ನಿಂಗಮ್ಮ, ಇಕಾತ್ ಮುರುಗನ್, ಸಂಧ್ಯಾ, ನಾಗರತ್ನ, ಶಾಂತ, ಶಿವಲಿಂಗ, ಸುಮತಿ, ಇಲಿಯಾಜ್ ಪಾಷ, ನಂಜುಂಡಿ, ಜನಾರ್ದನ್, ಲಕ್ಷ್ಮಿ, ರಾಧಾ, ಕೌಸಲ್ಯ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.




