ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ ಇಲ್ಲದವರಿಗೆ ದನಿಯಾಗುವ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ತರುವ, ಪ್ರಶ್ನಿಸುವ ಹಕ್ಕನ್ನು ರಕ್ಷಿಸುವ ವ್ಯವಸ್ಥೆ. ಪ್ರಜಾಪ್ರಭುತ್ವದ ಮೂಲ ಮಂತ್ರವಾದ ಮತದಾರನ ಮತದಾನದ ಹಕ್ಕನ್ನು ಉಳಿಸುವ ನಿಟ್ಟಿನಲ್ಲಿ ಈಗ ದೇಶದ ಯುವಸಮೂಹ ಮಾತನಾಡುತ್ತಿದೆ. ಹೊಸ ಬೆಳವಣಿಗೆಯತ್ತ ಭಾರತ ಹೊರಳುತ್ತಿದೆ...
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಸಿಡಿದೆದ್ದ ವಿದ್ಯಾರ್ಥಿ ಸಮೂಹ ಮೊದಲ ಬಾರಿಗೆ ಬೀದಿಗಿಳಿಯಿತು. ದೆಹಲಿಯ ಜಂತರ್ ಮಂತರ್’ನಲ್ಲಿ ಕಲೆತು ಕೇಂದ್ರ ಸರ್ಕಾರದ ಶಿಕ್ಷಣ ನೀತಿ ಮತ್ತು ಪರೀಕ್ಷಾ ವ್ಯವಸ್ಥೆಗಳ ವಿರುದ್ಧ ಆಕ್ರೋಶ ಹೊರಹಾಕಿತು. ಅದರ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತಾಯಿತು.
ಆದರೆ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಮೋದಿ ಸರ್ಕಾರ ಅಮಾನವೀಯ ಕ್ರೌರ್ಯಕ್ಕಿಳಿಯಿತು. ವಿದ್ಯಾರ್ಥಿಗಳು ನಮ್ಮ ಮಕ್ಕಳು ಎನ್ನದೆ ಮೊಳೆ ಲಾಠಿ ಬೀಸಿತು, ಪೆಲೆಟ್ ಗನ್ ಪ್ರಯೋಗಿಸಿತು, ಕೇಸು ದಾಖಲಿಸಿ ಕಿರುಕುಳ ನೀಡಿತು, ಬಾಲಕಿಯಿಂದ ಕ್ಷಮೆ ಕೇಳಿಸಿತು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಸಿಗುವ ಬಹುಮಾನವೇ ಇದು ಎಂದು ವಿರೋಧ ಪಕ್ಷಗಳ ನಾಯಕರು ಮತ್ತು ದೇಶದ ಪ್ರಜೆಗಳು ಪ್ರಶ್ನಿಸಿದಾಗ, ಪ್ರಭುತ್ವ ಮೌನಕ್ಕೆ ಜಾರಿತು.
ಮೌನಕ್ಕೆ ಜಾರದ ಯುವಸಮೂಹ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹೋರಾಟದ ನಂತರ, ದೇಶದ ಸರ್ಕಾರಿ ಶಾಲೆಗಳತ್ತ ಗಮನ ಹರಿಸಿತು. ‘ಸ್ಕೂಲ್ ಟೀಕ್ ಕರೋ’ ಎಂಬ ಆಂದೋಲನ ಹಮ್ಮಿಕೊಂಡಿತು. ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ಕಟ್ಟಡಗಳ ದುರಸ್ತಿ, ಶಿಕ್ಷಕರ ಕೊರತೆ ಕುರಿತು ಮಾತನಾಡತೊಡಗಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಮತ್ತು ಅವಶ್ಯಕತೆಯಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ಮತ್ತು ಪ್ರಗತಿಯು ಆ ದೇಶದ ನಾಗರಿಕರ ಜ್ಞಾನ ಮತ್ತು ಜಾಗೃತಿಯನ್ನು ಅವಲಂಬಿಸಿರುತ್ತದೆ. ಇದನ್ನು ವಿದ್ಯಾರ್ಥಿ ಯುವಸಮೂಹ ಪ್ರಭುತ್ವದ ಗಮನಕ್ಕೆ ತರಲು ಪ್ರಯತ್ನಿಸಿದಾಗ, ಮೋದಿಯವರು ಮೌನಕ್ಕೆ ಜಾರಿದರು.
ಇದನ್ನು ಓದಿದ್ದೀರಾ?: ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?
ಏತನ್ಮಧ್ಯೆ, ಕೇಂದ್ರ ಚುನಾವಣಾ ಆಯೋಗ ಎಸ್ಐಆರ್ ನೆಪದಲ್ಲಿ ದೇಶದ ಮತದಾರರ ಮತದಾನದ ಹಕ್ಕನ್ನೇ ಇಲ್ಲವಾಗಿಸುವ ಕೃತ್ಯಕ್ಕೆ ಕೈಹಾಕಿತು. ಅಧಿಕಾರಸ್ಥರ ಕೈಗೊಂಬೆಯಾದ ಮುಖ್ಯ ಚುನಾವಣಾ ಆಯುಕ್ತರು, ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಚುನಾವಣಾ ಆಯೋಗದ ಘನತೆಗೆ ಧಕ್ಕೆ ತರುವಂತಹ ಕೆಲಸದಲ್ಲಿ ನಿರತರಾದರು.
ಈ ಕುರಿತು ದೇಶದ ವಿಚಾರವಂತರು, ಚಿಂತಕರು, ತಜ್ಞರು, ನಿವೃತ್ತ ನ್ಯಾಯಮೂರ್ತಿಗಳು- ಸಾಂವಿಧಾನಿಕ ಸಂಸ್ಥೆಗಳು ಮತ್ತು ಸಂವಿಧಾನದ ಮಹತ್ವ ಕುರಿತು ಸಾರ್ವಜನಿಕವಾಗಿ ಮಾತನಾಡತೊಡಗಿದರು. ಅದರಲ್ಲೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು, ‘ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವ ಯಾವುದೇ ಪ್ರಕ್ರಿಯೆ ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಬಹುದು. ಅಂತಹ ಪ್ರಕ್ರಿಯೆ ನಿರಂಕುಶವಾಗುತ್ತದೆ’ ಎನ್ನುವ ಎಚ್ಚರಿಕೆಯ ಮಾತುಗಳನ್ನಾಡಿದರು. ಪ್ರಜಾಪ್ರಭುತ್ವದ ಮೂಲ ತತ್ವವನ್ನು ನೆನಪಿಸಿದರು.
ಇದಕ್ಕೆ ಪೂರಕವಾಗಿ ನ್ಯಾಯಾಂಗದ ಕೆಲವು ಸೂಚನೆಗಳು ಮೂಲಭೂತ ಪ್ರಶ್ನೆಗಳನ್ನು ನಮ್ಮ ಮುಂದಿಡತೊಡಗಿದವು. ಸಂವಿಧಾನವನ್ನು ರಕ್ಷಿಸುವ ಹೊಣೆ ನ್ಯಾಯಾಲಯಗಳ ಮೇಲಿದೆ ಎಂದು ನ್ಯಾಯಮೂರ್ತಿಗಳು ನೆನಪಿಸಿದ್ದು, ಸಂವಿಧಾನದ ಹಕ್ಕುಗಳಿಗಾಗಿ ವಿದ್ಯಾರ್ಥಿಗಳು, ಯುವಜನರು ಬೀದಿಗಿಳಿಯುವಂತೆ ಪ್ರೇರೇಪಿಸಿತು. ಮತ್ತೆ ದೆಹಲಿಯ ಜಂತರ್ ಮಂತರ್’ನಲ್ಲಿ ಯುವಸಮೂಹ ಜಮಾವಣೆಗೊಂಡಿತು.
ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ ಇಲ್ಲದವರಿಗೆ ದನಿಯಾಗುವ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ತರುವ, ಪ್ರಶ್ನಿಸುವ ಹಕ್ಕನ್ನು ರಕ್ಷಿಸುವ ವ್ಯವಸ್ಥೆ. ಪ್ರಜಾಪ್ರಭುತ್ವದ ಮೂಲ ಮಂತ್ರವಾದ ಮತದಾರನ ಮತದಾನದ ಹಕ್ಕನ್ನು ಉಳಿಸುವ ನಿಟ್ಟಿನಲ್ಲಿ ಈಗ ದೇಶದ ಯುವಸಮೂಹ ಮಾತನಾಡುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಕೇಳುತ್ತಿದೆ. ಗ್ಯಾನೇಶ್‌ರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡವರ ಕಿಡಿಗೇಡಿತನವನ್ನು ಬಯಲು ಮಾಡುತ್ತಿದೆ. ಇದು ಮೋದಿ ಮತ್ತು ಸಹಚರರಿಗೆ ಸಹಿಸಲಸಾಧ್ಯ ಸಂಕಟ ತಂದಿದೆ.
ಸಂಕಟ ಏಕೆ ಎಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಮಹತ್ವಾಕಾಂಕೆಯ ‘ಚಾರ್ ಸೌ ಪಾರ್’ ಕೈಕೊಟ್ಟಿತ್ತು, ಬಹುಮತಕ್ಕಾಗಿ ಬೇರೆ ಪಕ್ಷಗಳನ್ನು ಅಂಗಲಾಚುವಂತಾಗಿತ್ತು. ಕೊನೆಗೆ ನಿತಿಶ್ ಮತ್ತು ನಾಯ್ಡು ಬೆಂಬಲದಿಂದ ಮೂರನೆಯ ಬಾರಿಗೆ ಪ್ರಧಾನಿಯಾಗುವಂತಾಗಿತ್ತು.
ಪ್ರಧಾನಿಯಾದ ನಂತರ ಮೋದಿಯವರ ವರಸೆ ಬದಲಾಯಿತು. ಕೂತ ಕುರ್ಚಿಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಅಡ್ನಾಡಿ ಕ್ರಮಗಳಿಗೆ ಕೈಹಾಕಿದರು. ಮೊದಲ ಎರಡು ಅವಧಿಯಲ್ಲಿ ಸಿಬಿಐ, ಇಡಿ, ಐಟಿ, ಎನ್ಐಎಗಳಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡರೆ, ಈ ಬಾರಿ ಚುನಾವಣಾ ಆಯೋಗವನ್ನು ತಮ್ಮನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಂಡರು. ತಿರುಗಿಸಿಕೊಳ್ಳಲು ಗ್ಯಾನೇಶ್ ಕುಮಾರ್‘ನಂತಹ ಕೈಗೊಂಬೆಯನ್ನು ನೇಮಕ ಮಾಡಿಕೊಂಡರು. ಅದರ ಫಲವಾಗಿ ಸಾಂವಿಧಾನಿಕ ಸಂಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬದಲು ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಯಿತು. ದೇಶದ ಜನರ ನಂಬಿಕೆಗೆ ದ್ರೋಹ ಬಗೆಯಿತು. ಪ್ರಜಾಪ್ರಭುತ್ವದ ಮೂಲ ಆಶಯವನ್ನು ಮಣ್ಣುಗೂಡಿಸಿತು.
ಕಳೆದ ಹನ್ನೆರಡು ವರ್ಷಗಳಿಂದ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇದನ್ನೇ ‘ಆಡಳಿತ’ ಎನ್ನುತ್ತಿದೆ. ಮೋದಿಯವರ ಆಡಳಿತ ಸರ್ವಾಧಿಕಾರಿಯಾಗುವತ್ತ ಗಮನ ಹರಿಸುತ್ತಿದೆ. ಸಾಂವಿಧಾನಿಕ ಸಂಸ್ಥೆಗಳು ಸಡಿಲಗೊಂಡು, ಪ್ರಜಾಸತ್ತೆಯ ಕಂಬಗಳು ದುರ್ಬಲಗೊಳ್ಳತೊಡಗಿವೆ.
ಇಂತಹ ಸಂದರ್ಭದಲ್ಲಿ ದೇಶದ ಯುವಸಮೂಹ ಎದ್ದು ನಿಂತಿದೆ. ಬೀದಿಗಿಳಿದು ಪ್ರತಿಭಟನೆಯ ಮೂಲಕ ಎಚ್ಚರಿಕೆಯ ಸಂದೇಶವನ್ನು ಸರಕಾರಕ್ಕೆ ರವಾನಿಸುತ್ತಿದೆ. ಜೆನ್ ಝಿ ಎಂದು ಕರೆಯಲ್ಪಡುವ ಈ ಸಮೂಹದ ಯುವಕ-ಯುವತಿಯರಿಗೆ ಯಾವುದೇ ಪಕ್ಷಗಳ ಕಟ್ಟುಪಾಡುಗಳಿಲ್ಲ. ಯಾವ ಚೌಕಟ್ಟಿಗೂ ಇವರು ಒಳಪಟ್ಟವರಲ್ಲ. ಇವರ ಪ್ರತಿಭಟನೆಯ ಮಾರ್ಗವೂ ಹೊಸತು, ವಿಧಾನವೂ ವಿಭಿನ್ನ. ಆದರೆ, ಇವೆಲ್ಲವೂ ಗಾಂಧಿ ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿಯೇ ಮುಂದುವರೆದಿರುವುದು ಇಲ್ಲಿಯ ವಿಶೇಷ.
ಇದನ್ನು ಓದಿದ್ದೀರಾ?: ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?
ಆದರೆ ಬಿಜೆಪಿ, ಸವೆದ ಸನಾತನ ಸಂಸ್ಕೃತಿ, ರಾಷ್ಟ್ರೀಯತೆ, ದೇಶಪ್ರೇಮ, ಹಿಂದೂ-ಮುಸ್ಲಿಂ ದ್ವೇಷದಲ್ಲಿಯೇ ಬಿದ್ದು ಒದ್ದಾಡುತ್ತಿದೆ. ಇದರಿಂದ ನವಭಾರತದ ಯುವ ಸಮೂಹ ದೂರ ಸರಿದು ತುಂಬಾ ದಿನಗಳಾಗಿವೆ. ಇದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ತೊಡೆ ನಡುಕ ಹುಟ್ಟಿಸಿದೆ. ಹೊಸ ದಾರಿ ಹುಡುಕುವಂತೆ ಮಾಡಿದೆ. ಇಬ್ಬರಿಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಗ ಸರಿ ಎನಿಸಿದೆ, ಅನುಕರಿಸಲು ಹವಣಿಸುತ್ತಿರುವುದು ಅವರ ನಡೆ-ನುಡಿಯಲ್ಲಿ ಕಾಣುತ್ತಿದೆ. ಮೊದಲು ಮೌನವನ್ನು ಮಂತ್ರವನ್ನಾಗಿ ಮಾಡಿಕೊಂಡಿದ್ದ ಈ ನಾಯಕರಿಗೆ, ಈಗ ಮೌನವೇ ಮರಣಶಾಸನ ಬರೆಯುತ್ತಿದೆ.
2014ರಿಂದ ಇಲ್ಲಿಯವರೆಗಿನ ಮೋದಿಯವರ ಆಡಳಿತಾವಧಿಯಲ್ಲಿ ಮೊದಲ ಮುಖಭಂಗ ರೈತರ ಪ್ರತಿಭಟನೆಯಾದರೆ, ಈಗ ಯುವಸಮೂಹದ ಪ್ರತಿಭಟನೆ ಜಂಘಾಬಲವನ್ನೇ ಉಡುಗಿಸಿಬಿಟ್ಟಿದೆ. ಈ ಹೊಸ ಬೆಳವಣಿಗೆ ಹೊಸ ಭಾರತ ಕಟ್ಟುವತ್ತ ಸಾಗಲಿ. ದೇಶದ ಭವಿಷ್ಯಕ್ಕಾಗಿ ಯುವಸಮೂಹದೊಂದಿಗೆ ಎಲ್ಲರೂ ಕೈಜೋಡಿಸುವಂತಾಗಲಿ.




