ಪ್ರಪಂಚದಾದ್ಯಂತ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಮತ್ತು ಕಪ್ಪು ಹಣದ ವಹಿವಾಟು ಅತ್ಯಂತ ಆಘಾತಕಾರಿ ಮಟ್ಟದಲ್ಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಜಗತ್ತಿನಲ್ಲಿ ಕಪ್ಪು ಹಣ ಎಷ್ಟಿದೆ ಎಂದರೆ ವಿಶ್ವದ ಎಲ್ಲರಿಗೂ ಲ್ಯಾಪ್ಟಾಪ್ ಖರೀದಿಸಬಹುದು ಎಂದು ಹೇಳಿದ್ದಾರೆ.
ಲಂಡನ್ನ ಕೇಂಬ್ರಿಡ್ಜ್ನಲ್ಲಿ ನಡೆದ ‘ಆರ್ಥಿಕ ಅಪರಾಧಗಳ ಕುರಿತಾದ 43ನೇ ಅಂತಾರಾಷ್ಟ್ರೀಯ ವಿಚಾರಸಂಕಿರಣ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಜೆಐ, “ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ಅಕ್ರಮವಾಗಿ ವರ್ಗಾವಣೆಯಾಗುವ ಕಪ್ಪು ಹಣದ ಪ್ರಮಾಣ ಎಷ್ಟಿದೆಯೆಂದರೆ, ಅದರಿಂದ ಭೂಮಿಯ ಮೇಲಿರುವ ಎಲ್ಲಾ 800 ಕೋಟಿ ಜನರಿಗೂ ಒಂದೊಂದು ಲ್ಯಾಪ್ಟಾಪ್ ಖರೀದಿಸಬಹುದು! ಅಷ್ಟೇ ಅಲ್ಲ, ಅದನ್ನೂ ಮೀರಿ ಹಣ ಉಳಿಯುತ್ತದೆ” ಎಂದು ಆರ್ಥಿಕ ಅಪರಾಧದ ತೀವ್ರತೆಯನ್ನು ನ್ಯಾಯಮೂರ್ತಿಗಳು ಬಿಂಬಿಸಿದರು.
ಇದನ್ನೂ ಓದಿ: ಬಿಹಾರಕ್ಕೆ ರಾಜ್ಯದಿಂದ ಕಪ್ಪು ಹಣ, ಇಡಿ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳಲು ಎಎಪಿ ಆಗ್ರಹ
ಇಷ್ಟು ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಹರಿಯುತ್ತಿದ್ದರೂ, ಕೇವಲ ಶೇ.1ರಷ್ಟು (ಪ್ರತಿ 100 ರೂಪಾಯಿಯಲ್ಲಿ 1 ರೂಪಾಯಿ) ಅಕ್ರಮ ಆಸ್ತಿಯನ್ನು ಮಾತ್ರ ಜಪ್ತಿ ಮಾಡಲು ಅಥವಾ ವಶಪಡಿಸಿಕೊಳ್ಳಲು ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗುತ್ತಿದೆ ಎಂದು ಸಿಜೆಐ ಅಂಕಿಅಂಶ ಸಹಿತ ವಿವರಿಸಿದರು. ಅಂದರೆ, ಪ್ರತಿ ನೂರರಲ್ಲಿ 99 ಪಾಲು ಅಪರಾಧದ ಹಣವು ಭಾಷಣಗಳು ಮತ್ತು ವರದಿಗಳಲ್ಲೇ ಉಳಿದುಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆರ್ಥಿಕ ಅಪರಾಧಗಳು ಆಧುನಿಕ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲ ಎಂದ ಸಿಜೆಐ, ಕ್ರಿ.ಪೂ. 4ನೇ ಶತಮಾನದ ಕೌಟಿಲ್ಯನ ‘ಅರ್ಥಶಾಸ್ತ್ರ’ವನ್ನು ಉಲ್ಲೇಖಿಸಿದರು. ರಾಜ್ಯದ ಬೊಕ್ಕಸದಿಂದ ಹಣವನ್ನು ದುರ್ಬಳಕೆ ಮಾಡುವ 40 ಮಾರ್ಗಗಳನ್ನು ಕೌಟಿಲ್ಯ ಅಂದೇ ಪಟ್ಟಿ ಮಾಡಿದ್ದ. “ನಾಲಿಗೆ ತುದಿಯಲ್ಲಿ ಜೇನುತುಪ್ಪ ಅಥವಾ ವಿಷವನ್ನಿಟ್ಟುಕೊಂಡು ಅದನ್ನು ಸವಿಯದೇ ಇರುವುದು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ರಾಜಸ್ವವನ್ನು ನಿರ್ವಹಿಸುವ ಅಧಿಕಾರಿಗೆ ಕಳವು ಮಾಡದಿರಲು ಸಾಧ್ಯವಿಲ್ಲ” ಎಂಬ ಪ್ರಾಚೀನ ಸಾಲುಗಳನ್ನು ನೆನಪಿಸಿದರು. ಇಂದು ಆ 40 ಮಾರ್ಗಗಳಿಗೆ ತಕ್ಕಂತೆ ಹಣವನ್ನು ಪತ್ತೆಹಚ್ಚುವ ಮತ್ತು ವಶಪಡಿಸಿಕೊಳ್ಳುವ ಹೊಸ ತಂತ್ರಜ್ಞಾನಗಳು ಜಗತ್ತಿಗೆ ಬೇಕಾಗಿವೆ ಎಂದು ಅಭಿಪ್ರಾಯಿಸಿದರು.
ಇತ್ತೀಚೆಗೆ ಭಾರತದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ನಂತಹ ಆನ್ಲೈನ್ ವಂಚನೆಗಳ ಬಗ್ಗೆ ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, ಈ ವಿಚಾರದಲ್ಲಿ ಭಾರತೀಯ ನ್ಯಾಯಾಂಗವು ಸಂಸತ್ತು ಕಾಯ್ದೆ ರೂಪಿಸುವವರೆಗೆ ಕಾಯದೆ ಪ್ರೊ-ಆಕ್ಟಿವ್ (ಸಕ್ರಿಯ) ಆಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಇಂತಹ ವಂಚನೆಗಳ ಗಂಭೀರತೆಯನ್ನು ಪರಿಶೀಲಿಸಲು ಮತ್ತು ಪ್ರತ್ಯೇಕ ಕಾನೂನು ಪ್ರಕ್ರಿಯೆ ರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ಆರ್ಥಿಕ ಅಪರಾಧಿಗಳು ಗಡಿಗಳನ್ನು ದಾಟಿ ಓಡಿಹೋಗುವುದರಿಂದ, ಪ್ರತ್ಯರ್ಪಣೆ (Extradition) ಪ್ರಕ್ರಿಯೆಗಿಂತ ದೇಶಗಳ ನಡುವಿನ ಪರಸ್ಪರ ಕಾನೂನು ನೆರವು ಒಪ್ಪಂದಗಳು (MLAT) ಮತ್ತು ಆರ್ಥಿಕ ಮಾಹಿತಿ ಹಂಚಿಕೆ ಕಪ್ಪು ಹಣವನ್ನು ವಾಪಸ್ ತರಲು ಹೆಚ್ಚು ಪರಿಣಾಮಕಾರಿ ಎಂದು ಸಿಜೆಐ ಕರೆ ನೀಡಿದರು.




