ನಿರುದ್ಯೋಗ, ಕುಸಿದಿರುವ ಉತ್ಪಾದನಾ ವಲಯ ಮತ್ತು ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳಿಂದಾಗಿ ಭಾರತವು “ಆರ್ಥಿಕ ದುರಂತ”ದ ಮೇಲೆ ಕುಳಿತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ಆರ್ಥಿಕ ಹಾದಿಯಲ್ಲಿ ಮುಂದುವರಿದರೆ ದೇಶವು ಗಂಭೀರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮಂಗಳವಾರ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ‘ದಿ ನ್ಯೂಯಾರ್ಕ್ ಟೈಮ್ಸ್’ನ ಲಿಡಿಯಾ ಪೋಲ್‌ಗ್ರೀನ್ ಅವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಸುಮಾರು ಒಂದು ದಶಕದ ಹಿಂದೆಯೇ ಭಾರತದ ಆರ್ಥಿಕ ಮಾದರಿಯು ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದರು. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟ್-ಅಪ್ ಇಂಡಿಯಾ’ ಯೋಜನೆಗಳನ್ನು ಟೀಕಿಸಿದ ಅವರು, ಇವು ದೇಶದ ಆರ್ಥಿಕ ಬೆನ್ನೆಲುಬನ್ನು ಪುನಶ್ಚೇತನಗೊಳಿಸುವಲ್ಲಿ ವಿಫಲವಾಗಿವೆ ಎಂದು ಪ್ರತಿಪಾದಿಸಿದರು.
ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME) ಹಾಗೂ ಕೃಷಿ ಕ್ಷೇತ್ರಗಳು ಸಂಪೂರ್ಣವಾಗಿ ಹದಗೆಟ್ಟಿವೆ ಎಂದು ಗಾಂಧಿ ಅಭಿಪ್ರಾಯಪಟ್ಟರು. “ಕೇವಲ ಸೇವಾ ವಲಯದಿಂದ ದೇಶದ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಇದರಿಂದ ಶೇ. 1 ರಿಂದ 5 ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗಬಹುದು. ಬಲಿಷ್ಠ ಉತ್ಪಾದನಾ ವಲಯವಿಲ್ಲದೆ ಭಾರತ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ,” ಎಂದು ಅವರು ಹೇಳಿದರು.
ದೇಶದಲ್ಲಿ ಖಾಸಗಿ ಹೂಡಿಕೆಯ ಕೊರತೆಯನ್ನು ಪ್ರಶ್ನಿಸಿದ ಅವರು, ಕೇವಲ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅವರಂತಹ ಬೆರಳೆಣಿಕೆಯಷ್ಟು ದೊಡ್ಡ ಉದ್ಯಮ ಸಮೂಹಗಳು ಮಾತ್ರ ಬೆಳೆಯುತ್ತಿವೆ, ಆದರೆ ಸಣ್ಣ ಉದ್ಯಮಗಳು ಸಂಕಷ್ಟದಲ್ಲಿವೆ ಎಂದು ಆರೋಪಿಸಿದರು. “ಇಬ್ಬರು ಉದ್ಯಮಿಗಳು ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವಂತಿದ್ದರೆ ಉತ್ಪಾದನಾ ವಲಯದ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ,” ಎಂದು ಅವರು ವಾಗ್ದಾಳಿ ನಡೆಸಿದರು.
ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಭರವಸೆ ಇಟ್ಟಿದ್ದ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳೇ ಇಂದು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿದ್ದಾರೆ ಎಂದರು. “ನೀವು ಐಐಟಿ (IIT) ಅಥವಾ ಐಐಎಂ (IIM) ನಲ್ಲಿ ಎಷ್ಟೇ ಉನ್ನತ ಶಿಕ್ಷಣ ಪಡೆದರೂ, ಕೊನೆಗೆ ಉದ್ಯೋಗ ಸಿಗದಿದ್ದರೆ ಆ ಪದವಿಗೆ ಬೆಲೆ ಇರುವುದಿಲ್ಲ. ಭಾರತದಲ್ಲಿ ವಿಶ್ವವಿದ್ಯಾಲಯದ ಪದವಿಯು ಉದ್ಯೋಗ ನೀಡುತ್ತದೆ ಎಂಬ ನಂಬಿಕೆಯೇ ಇಂದು ಪ್ರಶ್ನಾರ್ಹವಾಗಿದೆ,” ಎಂದು ಅವರು ಹೇಳಿದರು.
ದೇಶದಲ್ಲಿ ಅಧಿಕಾರ ಮತ್ತು ಸಂಪತ್ತಿನ ಕೇಂದ್ರೀಕರಣದ ವಿರುದ್ಧ ಆದಿವಾಸಿಗಳು, ದಲಿತರು, ರೈತರು ಮತ್ತು ಅಲ್ಪಸಂಖ್ಯಾತರು ನಿರಂತರವಾಗಿ ಪ್ರತಿರೋಧ ತೋರುತ್ತಿದ್ದಾರೆ ಎಂದು ಗಾಂಧಿ ಹೇಳಿದರು. ಇದೇ ವೇಳೆ, ಚುನಾವಣಾ ಅಕ್ರಮಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸಿವೆ ಎಂದು ಆರೋಪಿಸಿದ ಅವರು, ಚುನಾವಣಾ ವ್ಯವಸ್ಥೆಯನ್ನು ಮರುಸ್ಥಾಪಿಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವುದು ಅಗತ್ಯ ಕ್ರಮಗಳಲ್ಲಿ ಒಂದಾಗಿದೆ ಎಂದರು. ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ಪಕ್ಷವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ವ್ಯವಸ್ಥೆಯೊಳಗಿನ ಹಲವರು ಈಗ ಮುಂದೆ ಬಂದು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಅಮೆರಿಕದ ವಲಸೆ ನೀತಿಗಳ ಬಿಗಿಗೊಳಿಸುವಿಕೆಯು ಭಾರತದ ಒಟ್ಟಾರೆ ಉದ್ಯೋಗ ಸಮಸ್ಯೆಗೆ ಹೋಲಿಸಿದರೆ ಸಣ್ಣ ವಿಚಾರವಾಗಿದೆ ಎಂದ ಗಾಂಧಿ, ದೇಶೀಯವಾಗಿ ಕೃಷಿ, ಉತ್ಪಾದನೆ ಮತ್ತು ಕೈಗೆಟುಕುವ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವತ್ತ ಗಮನಹರಿಸಬೇಕು ಎಂದರು. ಅಮೆರಿಕದ ಮಧ್ಯಂತರ ಚುನಾವಣೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ಇಂಧನ ಬೆಲೆ ಏರಿಕೆ ಮತ್ತು ಇರಾನ್ ವಿಚಾರದಲ್ಲಿ ಅಮೆರಿಕದ ಪ್ರಭಾವ ಕುಗ್ಗಿರುವುದು ಆ ದೇಶದ ಶಕ್ತಿಯ ಕ್ಷೀಣಿಸುವಿಕೆಯನ್ನು ತೋರಿಸುತ್ತದೆ ಎಂದರು.
ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕಡಿಮೆ ವೆಚ್ಚದ ಆರ್ಥಿಕತೆಯಾಗಿರುವುದರಿಂದ ಸಂಕಷ್ಟಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ ಎಂದ ಅವರು, “ನಾನು ಭಾರತದ ಬಗ್ಗೆ ಬಹಳ ಆಶಾವಾದಿಯಾಗಿದ್ದೇನೆ. ಆದರೆ ನಾವು ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ ಎಂಬ ಚಿಂತೆಯಿದೆ. ಇದೇ ಪರಿಸ್ಥಿತಿ ಇನ್ನೂ ಐದು ಅಥವಾ ಹತ್ತು ವರ್ಷ ಮುಂದುವರಿದರೆ ನಾವು ನಿಜವಾಗಿಯೂ ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತೇವೆ,” ಎಂದು ತಮ್ಮ ಮಾತು ಮುಗಿಸಿದರು.



