ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

Date:

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ, ಪ್ರಸಕ್ತ ಸಾಲಿನಲ್ಲಿ 433.62 ಲಕ್ಷ ಹೆಕ್ಟೇರ್‌ಗಳಿಗೆ ಇಳಿದಿದೆ. ಅಂದರೆ, ಬಿತ್ತನೆ ವಿಸ್ತೀರ್ಣದಲ್ಲಿ ಶೇಕಡಾ 3.46ರಷ್ಟು ಕುಸಿತ ದಾಖಲಾಗಿದೆ.

- Advertisement -

ಮೇ ತಿಂಗಳಿನಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ನೀಡಿದ್ದ ‘ವಾಡಿಕೆಗಿಂತ ಕಡಿಮೆ ಮಳೆ’ಯ ಮುನ್ಸೂಚನೆ ಮತ್ತು ಪೆಸಿಫಿಕ್ ಸಾಗರದ ತಾಪಮಾನ ಏರಿಕೆಯ ‘ಎಲ್ ನಿನೋ’ ಪರಿಣಾಮ ಈ ಕುಸಿತಕ್ಕೆ ನೇರ ಕಾರಣವಾಗಿದೆ. ಮುಂಗಾರು ದುರ್ಬಲಗೊಳ್ಳುವ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಲಹೆ ನೀಡಿ, ರೈತರು ಭತ್ತದ ಬದಲಿಗೆ ಕಡಿಮೆ ನೀರು ಬೇಡುವ ಹಾಗೂ ಅಲ್ಪಾವಧಿಯ ಬೆಳೆಗಳಾದ ಬೇಳೆಕಾಳುಗಳು ಮತ್ತು ಸಿರಿಧಾನ್ಯಗಳತ್ತ ಮುಖಮಾಡುವಂತೆ ಸೂಚಿಸಿತ್ತು. ಕಳೆದ ಜೂನ್‌ನಲ್ಲಿ ರಾಜ್ಯ ಸರ್ಕಾರಗಳ ಅಧಿಕಾರಿಗಳು, ಕೃಷಿ ಸಂಶೋಧನಾ ಸಂಸ್ಥೆಗಳು ಹಾಗೂ ಹವಾಮಾನ ತಜ್ಞರೊಂದಿಗೆ ಸಭೆ ನಡೆಸಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, “ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆ ಪದ್ಧತಿಯನ್ನು ಬದಲಾಯಿಸುವುದು ಇಂದಿನ ತುರ್ತು ಅಗತ್ಯವಾಗಿದೆ” ಎಂದು ಪ್ರತಿಪಾದಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ತಂಬೂರಿಯ ನಾದದಲ್ಲಿ ಜೀವಂತ ಮಂಟೇಸ್ವಾಮಿ ಪರಂಪರೆ: ಶಿಷ್ಯರು, ಮಹಿಳಾ...

ಧರೆಗೆ ದೊಡ್ಡವರ ತತ್ವ, ಶಿಷ್ಯರ ಸಾಮಾಜಿಕ ಕೊಡುಗೆ, ಜನಪದ ಜ್ಞಾನದ ಉಳಿವು ಮತ್ತು ಮುಂದಿನ ಪೀಳಿಗೆಯ ಜವಾಬ್ದಾರಿ. ಒಂದು ಪರಂಪರೆಯ ಮಹತ್ವವನ್ನು ಅದರ ಸ್ಥಾಪಕನ ಜೀವನದಿಂದ ಮಾತ್ರ ಅಳೆಯಲಾಗದು. ಆ ಪರಂಪರೆಯ ವಿಚಾರಗಳನ್ನು...

ಸಿಜೆಐ ವಿರುದ್ಧ ವಕೀಲರ ಆಕ್ರೋಶ: ನ್ಯಾಯಾಂಗದ ಘನತೆಗೆ ಧಕ್ಕೆ...

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನ್ಯಾಯಾಲಯದಲ್ಲೇ ವಕೀಲರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನ್ಯಾಯಾಂಗದ ಘನತೆ, ನ್ಯಾಯಾಧೀಶರ ನಿಷ್ಪಕ್ಷಪಾತತೆ ಹಾಗೂ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸದ ಕುರಿತು ಮಹತ್ವದ ಚರ್ಚೆಗೆ...

ಸರ್ಕಾರದ ಮಟ್ಟದಲ್ಲಿ ಹವಾಮಾನ ವೈಪರೀತ್ಯವನ್ನು ಎದುರಿಸಲು ‘ಬೆಳೆ ಬದಲಾವಣೆ’ ಒಂದು ಉತ್ತಮ ತಂತ್ರದಂತೆ ಕಾಣಬಹುದು. ಆದರೆ, ವಾಸ್ತವದಲ್ಲಿ ಈ ನೀತಿಯು ಭಾರತೀಯ ಕೃಷಿ ಮಾರುಕಟ್ಟೆಯಲ್ಲಿರುವ ದೊಡ್ಡದೊಂದು ವೈರುಧ್ಯವನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ. ಅದೇನೆಂದರೆ—“ರೈತ ಬೆಳೆಯುವ ಭತ್ತಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ, ಆದರೆ ಗ್ರಾಹಕ ಕೊಳ್ಳುವ ಅಕ್ಕಿಯ ಬೆಲೆ ಮಾತ್ರ ಇಳಿಯುತ್ತಲೇ ಇಲ್ಲ”

ಕೇಂದ್ರ ಸರ್ಕಾರವು ಪ್ರತಿ ವರ್ಷ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ. ಆದರೆ, ದೇಶದ ಬಹುತೇಕ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳಲ್ಲಿ, ಸರ್ಕಾರಿ ಖರೀದಿ ಕೇಂದ್ರಗಳು ಸಕಾಲಕ್ಕೆ ತೆರೆಯುವುದಿಲ್ಲ. ತೆರೆದರೂ, ತೇವಾಂಶದ ನೆಪ, ಗುಣಮಟ್ಟದ ಮಾನದಂಡ ಮತ್ತು ನೋಂದಣಿಯ ತಾಂತ್ರಿಕ ಅಡಚಣೆಗಳಿಂದಾಗಿ ಸಣ್ಣ ಮತ್ತು ಮಧ್ಯಮ ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳು ಅಥವಾ ಅಕ್ಕಿ ಗಿರಣಿ ಮಾಲೀಕರಿಗೆ ಕಡಿಮೆ ಬೆಲೆಗೆ ಭತ್ತವನ್ನು ಮಾರಾಟ ಮಾಡುತ್ತಾರೆ. ಕ್ವಿಂಟಾಲ್ ಭತ್ತಕ್ಕೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ 300 ರಿಂದ 500 ರೂಪಾಯಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ರೈತನದ್ದು. ರಸಗೊಬ್ಬರ, ಕೀಟನಾಶಕ, ಕೂಲಿ ಮತ್ತು ನೀರಾವರಿ ವೆಚ್ಚ ಗಗನಕ್ಕೇರಿರುವಾಗ, ರೈತನಿಗೆ ಹಾಕಿದ ಬಂಡವಾಳವೂ ವಾಪಸ್ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ರೈತ ನಷ್ಟ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗ್ರಾಹಕನ ಜೇಬು ಸುಡುತ್ತಿದೆ. ಸಾಮಾನ್ಯ ಬಳಕೆಯ ಸೋನಾ ಮಸೂರಿ ಸೇರಿದಂತೆ ವಿವಿಧ ತಳಿಯ ಅಕ್ಕಿಗಳ ಬೆಲೆ ಕಳೆದ ಎರಡು ವರ್ಷಗಳಿಂದ ಏರುಗತಿಯಲ್ಲೇ ಇದೆಯೇ ಹೊರತು ಇಳಿಕೆಯ ಲಕ್ಷಣ ಕಾಣುತ್ತಿಲ್ಲ.

ಈಗ ಬಿತ್ತನೆ ಪ್ರದೇಶ ಶೇ. 3.46ರಷ್ಟು ಕುಸಿದಿರುವುದು ವ್ಯಾಪಾರಿಗಳು ಮತ್ತು ದಾಸ್ತಾನುದಾರರಿಗೆ ವರದಾನವಾಗಲಿದೆ. “ಮಳೆಯ ಕೊರತೆಯಿಂದ ಭತ್ತದ ಇಳುವರಿ ಕಡಿಮೆಯಾಗಿದೆ” ಎಂಬ ಕಾರಣವನ್ನೇ ಮುಂದಿಟ್ಟುಕೊಂಡು, ಕೃತಕ ಅಭಾವ ಸೃಷ್ಟಿಸಿ ಅಕ್ಕಿ ದರವನ್ನು ಮತ್ತಷ್ಟು ಏರಿಸುವ ಹುನ್ನಾರ ಮಾರುಕಟ್ಟೆಯಲ್ಲಿ ನಡೆಯುತ್ತದೆ.

 ರೈತನಿಂದ ಕಡಿಮೆ ಬೆಲೆಗೆ ಭತ್ತ ಖರೀದಿಸುವ ಅಕ್ಕಿ ಗಿರಣಿಗಳು ಮತ್ತು ಬೃಹತ್ ಕಾರ್ಪೊರೇಟ್ ವ್ಯಾಪಾರಿಗಳು, ಅದನ್ನು ಪಾಲಿಶ್ ಮಾಡಿ, ಬ್ರ್ಯಾಂಡ್ ಹೆಸರಿನಲ್ಲಿ ದುಪ್ಪಟ್ಟು ಲಾಭಕ್ಕೆ ಮಾರಾಟ ಮಾಡುತ್ತಿದ್ದಾರೆ. ರೈತ ಮತ್ತು ಗ್ರಾಹಕನ ನಡುವಿನ ಈ ಬೆಲೆ ವ್ಯತ್ಯಾಸದ ಸಂಪೂರ್ಣ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.

ಸರ್ಕಾರ ಹೇಳುವಂತೆ ರೈತರು ತಕ್ಷಣವೇ ಸಿರಿಧಾನ್ಯ ಅಥವಾ ಬೇಳೆಕಾಳುಗಳಿಗೆ ಬದಲಾಗುವುದು ಅಷ್ಟು ಸುಲಭವಲ್ಲ. ಭತ್ತಕ್ಕೆ ಇರುವಷ್ಟು ವ್ಯವಸ್ಥಿತ ಮಾರುಕಟ್ಟೆ ಅಥವಾ ಸರ್ಕಾರಿ ಖರೀದಿ ವ್ಯವಸ್ಥೆ ಸಿರಿಧಾನ್ಯಗಳಿಗೆ ಇನ್ನೂ ಪೂರ್ಣಪ್ರಮಾಣದಲ್ಲಿ ರೂಪುಗೊಂಡಿಲ್ಲ. ಕರಾವಳಿ, ಮಲೆನಾಡು ಹಾಗೂ ನೀರಾವರಿ ಅಚ್ಚುಕಟ್ಟು ಪ್ರದೇಶದ ಜಮೀನುಗಳು ಭತ್ತಕ್ಕೆ ಒಗ್ಗಿಕೊಂಡಿವೆ. ಅಲ್ಲಿ ಏಕಾಏಕಿ ಪರ್ಯಾಯ ಬೆಳೆ ಬೆಳೆಯುವುದು ತಾಂತ್ರಿಕವಾಗಿ ಕಷ್ಟಕರ. ಭತ್ತದ ಉತ್ಪಾದನೆ ಕುಸಿದರೆ, ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಆಹಾರ ಭದ್ರತೆಯ ಮೇಲೂ ಒತ್ತಡ ಬೀಳುತ್ತದೆ.

ರೈತ ಮುಖಂಡರಾದ ನಂದಿನಿ ಜಯರಾಮ್‌ ಮಾತನಾಡಿ, “ಇಂದಿನ ಕೃಷಿ ವ್ಯವಸ್ಥೆಯಲ್ಲಿ ಭತ್ತ ಬೆಳೆಯುವುದು ರೈತರಿಗೆ ಲಾಭದಾಯಕವಾಗಿ ಉಳಿದಿಲ್ಲ. ಬೆಳೆದ ಭತ್ತಕ್ಕೆ ನಿಜವಾದ ವೈಜ್ಞಾನಿಕ ಬೆಲೆ ನೀಡುವುದಾದರೆ ಒಂದು ಕೆಜಿ ಅಕ್ಕಿಗೆ 280 ರಿಂದ 320 ರೂಪಾಯಿ ಬೆಲೆ ನಿಗದಿಪಡಿಸಬೇಕಾಗುತ್ತದೆ. ಆದರೆ ಸರ್ಕಾರಗಳು ರೈತರ ಹುಟ್ಟುವಳಿಗಳಿಗೆ ಶೋಷಣೆ ರಹಿತ ಮಾರುಕಟ್ಟೆ ಒದಗಿಸಲು ಸಿದ್ಧವಿಲ್ಲ. ಪರಿಣಾಮವಾಗಿ, ಬೆವರು ಹರಿಸಿ ಬೆಳೆದ ರೈತನಿಗೆ ನಷ್ಟವೇ ಗತಿಯಾಗಿದ್ದರೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ಗ್ರಾಹಕರಿಗೆ ಅಕ್ಕಿ ದರ ಮಾತ್ರ ಎಂದಿಗೂ ಇಳಿಯುತ್ತಿಲ್ಲ. ಕಾರ್ಪೊರೇಟ್ ಹಿತಾಸಕ್ತಿ ಮತ್ತು ಸರ್ಕಾರದ ನೀತಿಗಳಿಂದ ಕೃಷಿಯನ್ನು ನಷ್ಟದ ಕಸುಬನ್ನಾಗಿಸಿ, ರೈತರು ಕೃಷಿ ತೊರೆದು ನಗರಗಳತ್ತ ವಲಸೆ ಹೋಗುವಂತೆ ಮಾಡಲಾಗುತ್ತಿದೆ. ಹೀಗೆಯೇ ಮುಂದುವರಿದರೆ ದೇಶದ ಆಹಾರ ಭದ್ರತೆಗೆ ತೀವ್ರ ಹೊಡೆತ ಬೀಳಲಿದ್ದು, ಗ್ರಾಹಕರು ತಮ್ಮ ಆದಾಯದ ಶೇಕಡಾ 80ರಷ್ಟನ್ನು ಆಹಾರಕ್ಕಾಗಿಯೇ ವ್ಯಯಿಸುವ ದಿನಗಳು ದೂರವಿಲ್ಲ” ಅಂತ ತೀಕ್ಷ್ಣವಾಗಿ ಮಾತನಾಡಿದ್ದಾರೆ. 

ಭತ್ತ ಬೆಳೆಗಾರ ತಮ್ಮಣ್ಣ ಮಾತನಾಡಿ, “ಒಂದು ಎಕರೆ ಭತ್ತ ಕೃಷಿಗೆ ಉಳುಮೆ, ನಾಟಿ, ಬೀಜ, ರಸಗೊಬ್ಬರ, ಕಳೆನಾಶಕ, ಕಟಾವು ಮತ್ತು ಒಕ್ಕಣೆ ಸೇರಿದಂತೆ ಒಟ್ಟು ಅಂದಾಜು ₹38,000 ಖರ್ಚು ತಗಲುತ್ತದೆ. ಆದರೆ ಒಂದು ಎಕರೆಗೆ ಗರಿಷ್ಠ 18 ರಿಂದ 20 ಕ್ವಿಂಟಾಲ್ ವರೆಗೆ ಮಾತ್ರ ಭತ್ತ ಬೆಳೆಯಲು ಸಾಧ್ಯವಿದ್ದು, ಸಣ್ಣ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ₹2,000 ರಂತೆ ಲೆಕ್ಕಹಾಕಿದರೆ ಬರುವ ಒಟ್ಟು ಆದಾಯ ಕೇವಲ ₹40,000 ಆಗಿರುತ್ತದೆ. ಉತ್ಪಾದನಾ ವೆಚ್ಚವೇ ₹38,000 ತಗಲುವುದರಿಂದ ರೈತನಿಗೆ ಸಿಗುವ ನಿವ್ವಳ ಲಾಭ ಕೇವಲ ₹2,000 ಮಾತ್ರ. ರೈತ ತನ್ನ ಸ್ವಂತ ಪರಿಶ್ರಮ ಮತ್ತು ಕೂಲಿಯನ್ನು ಪರಿಗಣಿಸಿದರೆ, ಕೃಷಿಯಿಂದ ಯಾವುದೇ ತಕ್ಕ ಲಾಭ ಸಿಗುತ್ತಿಲ್ಲ ಎಂಬ ಕಹಿ ಸತ್ಯವನ್ನ ಹೇಳಿದ್ದಾರೆ. 

ಇದರ ಜೊತೆಗೆ ಬೆಲೆ ನಿಗದಿಯಲ್ಲೂ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ. ಒಂದು ಕೆಜಿ ಭತ್ತಯನ್ನು ರೈತ ಬೆಳೆದು ಮಾರುಕಟ್ಟೆಗೆ ನೀಡಿದಾಗ ಅವನಿಗೆ ಸಿಗುವುದು ಕೇವಲ 28 ರೂಪಾಯಿ ಮಾತ್ರ. ಕಷ್ಟಪಟ್ಟು ಬೆಳೆದವನಿಗೆ ಯಾವುದೇ ಸೂಕ್ತ ಪ್ರತಿಫಲ ಸಿಗುವುದಿಲ್ಲ. ಕೃಷಿಯಲ್ಲಿ ನಷ್ಟವಾದಾಗ ಸರ್ಕಾರಗಳು “ಬೇರೆ ಬೆಳೆ ಬೆಳೆಯಿರಿ” ಎಂದು ಮೇಲ್ನೋಟಕ್ಕೆ ಸಲಹೆ ನೀಡುತ್ತವೆಯೇ ಹೊರತು, ಯಾವ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬೇಕು ಮತ್ತು ಅದಕ್ಕೆ ತಾವೇ ಜವಾಬ್ದಾರರು ಎಂದು ಕೃಷಿ ಇಲಾಖೆ ಮುಂದೆ ಬಂದು ರೈತರಿಗೆ ಯಾವುದೇ ಭರವಸೆ ನೀಡುವುದಿಲ್ಲ.

ಶಾಶ್ವತ ನೀರಾವರಿ ಯೋಜನೆಗಳ ವಿಚಾರದಲ್ಲೂ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದೆ. ಸರ್ಕಾರಿ ನೌಕರರಿಗೆ ಆರನೇ, ಏಳನೇ, ಎಂಟನೇ ಹೀಗೆ ಕಾಲಕಾಲಕ್ಕೆ ವೇತನ ಆಯೋಗಗಳು ರಚನೆಯಾಗಿ ವೇತನ ಹೆಚ್ಚಾಗುತ್ತದೆ, ಆದರೆ ದೇಶದ ಬೆನ್ನೆಲುಬಾದ ರೈತನಿಗೆ ಮಾತ್ರ ಯಾವುದೇ ನ್ಯಾಯಯುತವಾದ ಬೆಂಬಲ ಬೆಲೆ ಸಿಗುತ್ತಿಲ್ಲ. ದೇಶದ ಆರ್ಥಿಕತೆಯ ಪರಿಸ್ಥಿತಿ ಹದಗೆಡುತ್ತಿರುವುದು ಮತ್ತು ಅದರ ಅಂತಿಮ ಹೊರೆ ಸಾರ್ವಜನಿಕರ ಹಾಗೂ ರೈತರ ಮೇಲೆ ಬೀಳುತ್ತಿರುವುದು ಎಲ್ಲರಿಗೂ ತಿಳಿದಿದ್ದರೂ, ವೈಜ್ಞಾನಿಕ ಸಮುದಾಯ ಹಾಗೂ ಪ್ರಜ್ಞಾವಂತರು ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ರೈತರು ತಮ್ಮ ಆಕ್ರೋಶ ಹಾಗೂ ಅಳಲನ್ನು ತೋಡಿಕೊಂಡಿದ್ದಾರೆ.

ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಬಗ್ಗೆ  ಹೊಟೆಲ್‌ ಮಾಲೀಕ ಸಮರ್ಥ್‌ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. “ಕಳೆದ ಕೆಲವು ತಿಂಗಳಿಂದ ಅಕ್ಕಿ, ದಿನಸಿ, ತರಕಾರಿ ಮತ್ತು ಅಡುಗೆ ಅನಿಲದ ಬೆಲೆ ನಿರಂತರವಾಗಿ ಏರುತ್ತಿರುವುದು ಹೋಟೆಲ್ ಮಾಲೀಕರಿಗೆ ದೊಡ್ಡ ತಲೆನೋವಾಗಿದೆ. ಬೆಲೆ ಏರಿಸಿದರೆ ಗ್ರಾಹಕರು ಬರುವುದು ನಿಂತುಹೋಗುತ್ತದೆ, ಏರಿಸದಿದ್ದರೆ ಬಾಡಿಗೆ, ವಿದ್ಯುತ್ ಬಿಲ್ ಮತ್ತು ಸಿಬ್ಬಂದಿ ಸಂಬಳ ನಿಭಾಯಿಸಿ ಹೋಟೆಲ್ ನಡೆಸುವುದೇ ಅಸಾಧ್ಯವಾಗುತ್ತದೆ” ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, “ಮಧ್ಯವರ್ತಿಗಳ ಹಾವಳಿಯಿಂದಾಗಿ ಭತ್ತ ಬೆಳೆದ ರೈತರಿಗೂ ಬೆಲೆಯಿಲ್ಲ, ಅತ್ತ ನಮಗೂ ಅಕ್ಕಿ ದರ ಇಳಿಯುತ್ತಿಲ್ಲ; ಲಾಭವೆಲ್ಲವೂ ನಡುವೆ ಇರುವವರ ಪಾಲಾಗುತ್ತಿದೆ. ಸರ್ಕಾರ ತಕ್ಷಣವೇ ಬೆಲೆ ನಿಯಂತ್ರಿಸಿ, ರೈತರಿಂದ ನೇರವಾಗಿ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಧಾನ್ಯ ಸಿಗುವ ವ್ಯವಸ್ಥೆ ಕಲ್ಪಿಸಬೇಕು; ಇಲ್ಲದಿದ್ದರೆ ಸಣ್ಣ ಹೋಟೆಲ್‌ಗಳು ಬಾಗಿಲು ಮುಚ್ಚುವ ಸ್ಥಿತಿ ಬರಲಿದೆ” ಎಂದರು.

ಗೃಹಿಣಿಯೊಬ್ಬರು ಅಕ್ಕಿ  ಬೆಲೆ ಏರಿಕೆಯ ಕುರಿತು ಮಾತನಾಡಿ, “ಮನೆ ನಡೆಸೋದೇ ಈಗ ದೊಡ್ಡ ಸಾಹಸವಾಗಿ ಬಿಟ್ಟಿದೆ. ಅಕ್ಕಿ ಬೆಲೆಯೂ ಗಗನಕ್ಕೇರಿದರೆ,  ನಮ್ಮಂತ ಮಧ್ಯಮ ವರ್ಗದ ಸಂಸಾರಗಳ ಗತಿ ಏನು? ಒಂದು ಕಡೆ ಬೆವರು ಹರಿಸಿ ಬೆಳೆಯುವ ರೈತರಿಗೆ ಭತ್ತಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ ಅಂತಾರೆ, ಮತ್ತೊಂದು ಕಡೆ ನಮಗೆ ಮಾತ್ರ ಅಂಗಡಿಯಲ್ಲಿ ಅಕ್ಕಿ ಹಾಗೂ ತರಕಾರಿಗಳ ದರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಧ್ಯವರ್ತಿಗಳ ಕಾಟದಿಂದ ರೈತರಿಗೂ ಲಾಭವಿಲ್ಲ, ನಮಗೂ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಲಾಭವೆಲ್ಲಾ ಮಧ್ಯದಲ್ಲಿ ಇರೋವರ ಪಾಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬೇರೆ, ಮಕ್ಕಳ ಶಾಲೆ ಖರ್ಚು, ಮನೆ ಬಾಡಿಗೆ ಎಲ್ಲವನ್ನೂ ನೋಡಿಕೊಂಡು, ಸಿಕ್ಕ ಅಲ್ಪಸಂಪಾದನೆಯಲ್ಲಿ ಅಥವಾ ಕೊಟ್ಟ ಹಣದಲ್ಲಿ ತಿಂಗಳು ಪೂರ್ತಿ ಸಂಸಾರ ತೂಗಿಸುವುದು ಹೇಗೆ ಅಂತ ತಲೆಕೆಟ್ಟು ಹೋಗಿದೆ. ಬೆಲೆ ಏರಿಕೆ ಹೀಗೆಯೇ ಮುಂದುವರಿದರೆ ಸಾಮಾನ್ಯ ಜನ ಬದುಕುವುದು ಹೇಗೆ?” ಎಂದು ಸರ್ಕಾರವನ್ನ ಕಟುವಾಗಿ ಪ್ರಶ್ನಿಸಿದ್ದಾರೆ.

ಇನ್ನು ಕೇವಲ “ಬೆಳೆ ಬದಲಾಯಿಸಿ” ಎಂದು ಸಲಹೆ ನೀಡುವುದರಿಂದ ರೈತನ ಸಂಕಷ್ಟ ಬಗೆಹರಿಯುವುದಿಲ್ಲ. ಸರ್ಕಾರವು ಪರ್ಯಾಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ಖಚಿತ ಖರೀದಿ ಗ್ಯಾರಂಟಿ ನೀಡಬೇಕು. ಅದೇ ರೀತಿ, ಭತ್ತ ಬೆಳೆಯುವ ರೈತರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಸರ್ಕಾರಿ ಕೇಂದ್ರಗಳಲ್ಲೇ ಮಾರಾಟ ಮಾಡಲು ಸುಲಭ ವ್ಯವಸ್ಥೆ ಕಲ್ಪಿಸಬೇಕು. ಮಾರುಕಟ್ಟೆಯಲ್ಲಿ ಅಕ್ಕಿಯ ಅಕ್ರಮ ದಾಸ್ತಾನು ತಡೆದು, ರೈತನಿಗೆ ಸಿಗುವ ಬೆಲೆಗೂ ಮತ್ತು ಗ್ರಾಹಕ ತೆರುವ ಬೆಲೆಗೂ ನಡುವೆ ಇರುವ ಬೃಹತ್ ಕಂದಕವನ್ನು ಮುಚ್ಚಲು ಕಠಿಣ ಮಾರುಕಟ್ಟೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸದಿದ್ದರೆ, ‘ಅನ್ನದಾತ’ ಬಡವಾಗುತ್ತಲೇ ಇರುತ್ತಾನೆ, ‘ಅನ್ನ’ ದುಬಾರಿಯಾಗುತ್ತಲೇ ಇರುತ್ತದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಮಟಾ, ಗೋಕರ್ಣ ಹಾಗೂ ಹೊನ್ನಾವರ ಭಾಗಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಹೆಸ್ಕಾಂ ವತಿಯಿಂದ ವಿವಿಧ ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣೆ ಹಾಗೂ ತುರ್ತು ಕಾಮಗಾರಿ...

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಕಾಂಗ್ರೆಸ್‌ಗೆ ಮರಳುವುದಿಲ್ಲ: ಚರಣ್‌ಜಿತ್‌ ಸಿಂಗ್‌ ಚನ್ನಿ

ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ವಿರುದ್ಧ ಹಲವಾರು...

ವಿಜಯಪುರ |ಜೀವನಶೈಲಿ ಬದಲಾವಣೆಯಿಂದ ಮಧುಮೇಹ ಹೆಚ್ಚಳ;ಡಾ. ತೇಜಶ್ವಿನಿ ವಲ್ಲಭ

ಬದಲಾಗುತ್ತಿರುವ ಜೀವನಶೈಲಿಯಿಂದ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕಾಯಿಲೆ ಬಂದ ನಂತರ...

ಸರ್ಕಾರಿ ಉದ್ಯೋಗ ಪರೀಕ್ಷೆಗೆ ಇನ್ನು ಶುಲ್ಕವಿಲ್ಲ: ಬಂಗಾಳ ಸಿಎಂ ಸುವೇಂದು ಅಧಿಕಾರಿ ಘೋಷಣೆ!

ಪಶ್ಚಿಮ ಬಂಗಾಳದ ಯುವಜನತೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ...