ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಕೇಂದ್ರ ಸರ್ಕಾರ ಕರ್ನಾಟಕದ ಕೋರಿಕೆಯನ್ನು ಪರಿಗಣಿಸುವುದು ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಅಸಾಧ್ಯವೇ ಸರಿ! ಕರ್ನಾಟಕ ಸರ್ಕಾರದ ಈ ನಿಲುವು ರಾಜಕೀಯ ಕಾರಣಕ್ಕಾಗಿ ಎನ್ನದೆ, ವಿಧಿಯಿಲ್ಲ...
ಭಾರತದ ಸಂವಿಧಾನವು ಜಾರಿಗೆ ಬಂದ ಮರು ವರ್ಷದಲ್ಲೇ, ಅಂದರೆ ಜೂನ್ 18, 1951ರಂದು ಅಂದಿನ ತಾತ್ಕಾಲಿಕ ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತಂದಿತು. ಈ ಐತಿಹಾಸಿಕ ಹಾಗೂ ಮೊದಲನೆಯ ತಿದ್ದುಪಡಿಯ ಮೂಲಕ ವಿಧಿ 31ಕ್ಕೆ (ಎ) ಮತ್ತು (ಬಿ) ಎಂಬೆರಡು ಉಪಬಂಧಗಳನ್ನು ಸೇರ್ಪಡೆ ಮಾಡಿ ಆ ಮೂಲಕ ಸಂವಿಧಾನಕ್ಕೆ 9ನೇ ಅನುಸೂಚಿಯನ್ನು ಸೇರಿಸಲಾಯಿತು. ಈ ಎರಡೂ ಉಪಬಂಧಗಳಲ್ಲಿ 31(ಬಿ) ಅತ್ಯಂತ ವಿಶಿಷ್ಟವಾದ ಸಾಂವಿಧಾನಿಕ ನಿಬಂಧನೆಯಾಗಿದೆ. ಇದರ ಪ್ರಕಾರ 9ನೆಯ ಅನುಸೂಚಿಯಲ್ಲಿ ಸೇರಿಸಲಾದ ಯಾವುದೇ ಕಾಯ್ದೆ ಅಥವಾ ಅದರ ನಿಬಂಧನೆಯು, ಸಂವಿಧಾನದ ಭಾಗ- 3ರಲ್ಲಿನ ಯಾವುದೇ ಹಕ್ಕನ್ನು ಕಸಿದುಕೊಳ್ಳುತ್ತದೆ ಅಥವಾ ಮೊಟಕುಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಅಸಿಂಧುವಾಗುವುದಿಲ್ಲ.
ಅನುಸೂಚಿ 9ರ ಸೃಷ್ಟಿ ಏಕೆ?
ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಶತಮಾನಗಳ ಕಾಲದ ಊಳಿಗಮಾನ್ಯ ವ್ಯವಸ್ಥೆಯನ್ನು ಕೊನೆಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ತರಲು ಭೂಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದಿತು. ಮತ್ತು ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸಲು ಮುಂದಾಯಿತು. ಆದರೆ ಅದರಿಂದ ಗಂಭೀರ ಸಾಂವಿಧಾನಿಕ ಸವಾಲುಗಳು ಎದುರಾದವು.
ವಸಾಹತು ಕಾಲಘಟ್ಟದ ಜಮೀನ್ದಾರಿ, ಜಾಗೀರ್ದಾರಿ ಮತ್ತು ಇನಾಂದಾರಿ ಪದ್ಧತಿಗಳಿಂದಾಗಿ ದೇಶದ ಬಹುಪಾಲು ಕೃಷಿ ಭೂಮಿ ಕೆಲವೇ ಸಿರಿವಂತ ಭೂಮಾಲೀಕರ ಕೈಯಲ್ಲಿ ಕೇಂದ್ರೀಕೃತವಾಗಿತ್ತು ಮತ್ತು ರೈತರು ಗೇಣಿದಾರರಾಗಿ ಶೋಷಣೆಗೆ ಒಳಪಟ್ಟಿದ್ದರು. ನಿರ್ದೇಶಕ ತತ್ವಗಳ ಅನುಸಾರ ಸಂಪತ್ತಿನ ಸಮಾನ ಹಂಚಿಕೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿತ್ತು.
ಸಂವಿಧಾನದ ಈ ಐತಿಹಾಸಿಕ ತಿದ್ದುಪಡಿಗೆ ಮಹತ್ವದ ಹಿನ್ನೆಲೆಯೇ ಇದೆ. ಬಿಹಾರ ರಾಜ್ಯ ಸರ್ಕಾರ ತಂದಿದ್ದ ‘ಬಿಹಾರ ಭೂಸುಧಾರಣಾ ಕಾಯ್ದೆ, 1950’ ಅನ್ನು ಪಾಟ್ನಾ ಉಚ್ಚ ನ್ಯಾಯಾಲಯ ಅಸಾಂವಿಧಾನಿಕ ಎಂದು ರದ್ದುಗೊಳಿಸಿತು. ಪರಿಹಾರ ನೀಡುವಲ್ಲಿ ಜಮೀನ್ದಾರರ ನಡುವೆ ಮಾಡಲಾದ ವರ್ಗೀಕರಣ ಸಂವಿಧಾನದ ವಿಧಿ 14ರ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಿದೆ ಎಂಬುದು ತೀರ್ಪಿನಲ್ಲಿ ವಿಧಿತವಾಗಿತ್ತು(ಕಾಮೇಶ್ವರ ಸಿಂಗ್ v ಬಿಹಾರ ರಾಜ್ಯ). ಇಂಥವೇ ಪ್ರಕರಣಗಳು ಬಹುತೇಕ ರಾಜ್ಯಗಳಲ್ಲಿ ನ್ಯಾಯಾಲಯಗಳ ತಡೆಯಾಜ್ಞೆಗೆ ಸಿಲುಕಿ ಸ್ಥಗಿತಗೊಂಡವು.
ಇದನ್ನು ಓದಿದ್ದೀರಾ?: ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ ಸಂವಿಧಾನಾತ್ಮಕ ಪರಿಹಾರವೇನು?
ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ತಂದಂತಹ ಭೂಸುಧಾರಣಾ ಕಾಯ್ದೆಗಳು ನ್ಯಾಯಾಲಯದ ದೀರ್ಘಕಾಲದ ಮೊಕದ್ದಮೆಗಳಲ್ಲಿ ಸಿಲುಕಿಕೊಂಡು ಸಾಮಾಜಿಕ ಕ್ರಾಂತಿ ವಿಫಲವಾಗಬಾರದು ಎಂಬ ಉದ್ದೇಶದಿಂದ ಪಂಡಿತ್ ನೆಹರು ಮತ್ತು ಕಾನೂನು ಸಚಿವ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ತಂದರು. ಈ ಮೂಲಕ 9ನೇ ಅನುಸೂಚಿಯನ್ನು ಒಂದು ‘ಸಾಂವಿಧಾನಿಕ ರಕ್ಷಣಾ ಕವಚ’ ಎನ್ನಲಾಯಿತು. ಈ ಅನುಸೂಚಿಯಲ್ಲಿ ಸೇರಿಸಲಾದ ಕಾಯ್ದೆಗಳನ್ನು ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ. ಇದೇ 9ನೇ ಅನುಸೂಚಿಯ ಮಹತ್ವ.
9ನೇ ಅನುಸೂಚಿಗೆ ಯಾವ ಯಾವ ಕಾಯ್ದೆಗಳನ್ನು ಸೇರಿಸಬಹುದು?
9ನೇ ಅನುಸೂಚಿಯಲ್ಲಿ ಯಾವ ಸ್ವರೂಪದ ಕಾಯ್ದೆಗಳನ್ನು ಸೇರಿಸಬಹುದು ಎಂಬುದಕ್ಕೆ ವಿಧಿ 31 (ಬಿ) ಯಾವುದೇ ನಿರ್ದಿಷ್ಟ ವಿಷಯವಾರು ಪಟ್ಟಿ ಅಥವಾ ವರ್ಗೀಕರಣವನ್ನು ನೀಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯವು ವಾಮನ ರಾವ್ v ಭಾರತ ಒಕ್ಕೂಟ ಪ್ರಕರಣದಲ್ಲಿ ಪ್ರಾಮುಖ್ಯತೆ ಪಡೆದ ಅಂಶವೊಂದನ್ನು ಸ್ಪಷ್ಟಪಡಿಸಿದೆ. ಸಂಸತ್ತು ತಾನು ಸೂಕ್ತವೆಂದು ಪರಿಗಣಿಸುವ ಕಾಯ್ದೆಗಳನ್ನು 9ನೇ ಅನುಸೂಚಿಗೆ ಸೇರಿಸಬಹುದು. ಅದು ಕೇವಲ ಭೂ ಸುಧಾರಣೆ ಕಾಯ್ದೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಈ ಅಧಿಕಾರವೂ ಸಂವಿಧಾನದ ಮೂಲ ರಚನೆಯ ಮಿತಿಗೆ ಒಳಪಟ್ಟಿರುತ್ತದೆ. ಯಾವುದೇ ಕಾಯ್ದೆಗಳನ್ನು, ಯಾವುದೇ ಪ್ರಶ್ನೆ ಇಲ್ಲದೆ 9ನೇ ಅನುಸೂಚಿಗೆ ಸೇರಿಸಬಹುದು ಎಂದರ್ಥವಲ್ಲ. ಪ್ರತಿಯೊಂದು ಕಾಯ್ದೆಯ ಉದ್ದೇಶ, ಅದರ ನಿಬಂಧನೆಗಳು, ಮೂಲಭೂತ ಹಕ್ಕುಗಳ ಮೇಲಿನ ಪರಿಣಾಮ ಇವುಗಳನ್ನು ಪರಿಶೀಲಿಸಬೇಕಾಗುತ್ತದೆ.
9ನೇ ಅನುಸೂಚಿಗೆ ಸೇರಿಸುವ ವಿಧಾನ
ಸಂಬಂಧಪಟ್ಟ ರಾಜ್ಯ ಸರ್ಕಾರ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಕೇಂದ್ರ ಸರ್ಕಾರ ಪ್ರಸ್ತಾಪವನ್ನು ಪರಿಶೀಲಿಸಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯಬೇಕು (2/3 ರಷ್ಟು ಬಹುಮತ). ರಾಷ್ಟ್ರಪತಿಗಳ ಅನುಮೋದನೆಯ ನಂತರ ತಿದ್ದುಪಡಿ ಜಾರಿಗೆ ಬರುತ್ತದೆ.
ತಿದ್ದುಪಡಿಯ ಆರಂಭದಲ್ಲಿ ಕೇವಲ ಕೃಷಿ ಮತ್ತು ಭೂಸುಧಾರಣಾ ಕಾಯ್ದೆಗಳನ್ನು ಮಾತ್ರ ರಕ್ಷಿಸುವ ಉದ್ದೇಶವಿತ್ತು. 1951ರ ಮೊದಲ ತಿದ್ದುಪಡಿಯಲ್ಲಿ ಕೇವಲ 13 ಕಾಯ್ದೆಗಳನ್ನು ಮಾತ್ರ ಸೇರಿಸಲಾಗಿತ್ತು.

ತಿದ್ದುಪಡಿಯ ದುರುಪಯೋಗದ ಆರೋಪ
ವಿಧಿ 31(ಬಿ)ರಲ್ಲಿ ಭೂಸುಧಾರಣೆಗೆ ಸಂಬಂಧಿಸಿದ ಕಾಯ್ದೆಗಳು ಮಾತ್ರ ಎಂಬ ನಿರ್ಬಂಧ ಇಲ್ಲದ ಕಾರಣ ಸರ್ಕಾರಗಳು ತಮ್ಮ ರಾಜಕೀಯ, ಆರ್ಥಿಕ ಮತ್ತು ಆಡಳಿತಾತ್ಮಕ ಕಾಯ್ದೆಗಳನ್ನು ನ್ಯಾಯಾಂಗದ ಪರಿಶೀಲನೆಯಿಂದ ರಕ್ಷಿಸಲು ಈ ಅನುಸೂಚಿಯನ್ನು ವ್ಯಾಪಕವಾಗಿ ಬಳಸಿಕೊಂಡವು. ಪ್ರಸ್ತುತ 284 ಕಾಯ್ದೆಗಳು ಅನುಸೂಚಿಯಲ್ಲಿ ಸೇರಿವೆ.
9ನೇ ಅನುಸೂಚಿಯಲ್ಲಿ ಸೇರಿಸಲಾಗಿರುವ ಕಾಯ್ದೆಗಳನ್ನು 4 ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ. 1. ಕೃಷಿ ಮತ್ತು ಭೂ ಸುಧಾರಣೆ ಕಾಯ್ದೆಗಳು 2. ಆರ್ಥಿಕ, ಕೈಗಾರಿಕಾ ಮತ್ತು ವಾಣಿಜ್ಯ ನಿಯಂತ್ರಣ ಕಾಯ್ದೆಗಳು 3. ಚುನಾವಣಾ ಮತ್ತು ರಾಜಕೀಯ ಕಾಯ್ದೆಗಳು. 4. ಮೀಸಲಾತಿ ಕಾಯ್ದೆಗಳು. ಮೀಸಲಾತಿಗೆ ಸಂಬಂಧಿಸಿದಂತೆ, ಇಂದ್ರ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಕೋಟಾದ ಗರಿಷ್ಠ ಶೇ. 50ರ ಮಿತಿ ಮೀರಬಾರದು ಎಂದು ತೀರ್ಪು ನೀಡಿತ್ತು. ಇದರಿಂದ ತಪ್ಪಿಸಿಕೊಳ್ಳಲು ತಮಿಳುನಾಡು ಸರ್ಕಾರವು ತಂದ ‘ತಮಿಳುನಾಡು ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕಾಯ್ದೆ, 1993’ ಅನ್ನು ಸಂಸತ್ತು 76ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಮೂಲಕ 9ನೇ ಅನುಸೂಚಿಗೆ ಸೇರಿಸಿತು. ಈ ಸೇರ್ಪಡೆಯನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಆದರೆ, ಆ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಕ್ಕಾಗಿ ಇಂದಿಗೂ ಬಾಕಿ ಇದೆ ಎಂಬುದು ವಿಮರ್ಶೆಗೆ ಒಳಪಡುವ ವಿಷಯ.
ಸರ್ವೋಚ್ಚ ನ್ಯಾಯಾಲಯದ ಪ್ರಮುಖ ತೀರ್ಪುಗಳು
ಶಂಕರಿ ಪ್ರಸಾದ್ v ಭಾರತ ಒಕ್ಕೂಟ ಮತ್ತು ಸಜ್ಜನ್ ಸಿಂಗ್ v ರಾಜಸ್ಥಾನ ರಾಜ್ಯ ಈ ಎರಡೂ ಪ್ರಕರಣಗಳಲ್ಲಿ ಸಂಸತ್ತಿಗೆ ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವ ಅಧಿಕಾರವಿದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಗೋಲಕನಾಥ್ v ಪಂಜಾಬ್ ರಾಜ್ಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸಂಸತ್ತು ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಮೊಟಕುಗೊಳಿಸುವಂತಹ ಯಾವುದೇ ತಿದ್ದುಪಡಿಯನ್ನು ಮಾಡುವಂತಿಲ್ಲ ಎಂದು ತೀರ್ಪು ನೀಡಿತು.
ಕೇಶವಾನಂದ ಭಾರತಿ v ಕೇರಳ ರಾಜ್ಯ
ಇದೊಂದು ಇತಿಹಾಸ ಪ್ರಸಿದ್ಧ ಪ್ರಕರಣ. ಈ ಪ್ರಕರಣದಲ್ಲಿ ಕೇರಳ ಭೂಸುಧಾರಣಾ ಕಾಯ್ದೆಯನ್ನು 29ನೇ ತಿದ್ದುಪಡಿಯ ಮೂಲಕ 9ನೇ ಅನುಸೂಚಿಗೆ ಸೇರಿಸಿದ್ದನ್ನು ಹಾಗೂ 24, 25ನೇ ತಿದ್ದುಪಡಿಗಳನ್ನು ಪ್ರಶ್ನಿಸಲಾಯಿತು. ಇದನ್ನು ಭಾರತದ ಸಾಂವಿಧಾನಿಕ ಇತಿಹಾಸದ ಅತಿ ದೊಡ್ಡ 13 ಮಂದಿ ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿತು. 7:6 ಬಹುಮತದಿಂದ ಸರ್ವೋಚ್ಚ ನ್ಯಾಯಾಲಯ ಗೋಲಕನಾಥ್ ತೀರ್ಪನ್ನು ಮಾರ್ಪಡಿಸಿ , ಸಂಸತ್ತು ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಬಹುದು; ಆದರೆ ಸಂವಿಧಾನದ ‘ಮೂಲ ರಚನೆ'(Basic Structure)ಯನ್ನು ಬದಲಾಯಿಸುವಂತಿಲ್ಲ ಅಥವಾ ನಾಶಪಡಿಸುವಂತಿಲ್ಲ ಎಂಬ ಐತಿಹಾಸಿಕ ಸಿದ್ಧಾಂತವನ್ನು ರೂಪಿಸಿತು.
ಇದನ್ನು ಓದಿದ್ದೀರಾ?: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮೀಸಲು ಅಂಗೀಕಾರದ ನಿರೀಕ್ಷೆ ಇದೆ: ಸಿಎಂ ಡಿ ಕೆ ಶಿವಕುಮಾರ್
ಐ.ಆರ್. ಕೊಎಲ್ಹೋ (I.R.Coelho) v ತಮಿಳುನಾಡು ರಾಜ್ಯ
ಈ ಪ್ರಕರಣವು ಸ್ವತಂತ್ರ ಭಾರತದ ಸಾಂವಿಧಾನಿಕ ಇತಿಹಾಸದಲ್ಲಿ ಕೇಶವಾನಂದ ಭಾರತಿ ಪ್ರಕರಣದ ನಂತರದ ಅತ್ಯಂತ ಮಹತ್ವದ ತೀರ್ಪುಗಳಲ್ಲಿ ಒಂದಾಗಿದೆ. ಇದನ್ನು ಜನಪ್ರಿಯವಾಗಿ ‘9ನೇ ಅನುಸೂಚಿ ಪ್ರಕರಣ’ ಎಂದೂ ಕರೆಯಲಾಗುತ್ತದೆ. ಈ ಪ್ರಕರಣದ ಹಿನ್ನೆಲೆ ಹೀಗಿದೆ- ತಮಿಳುನಾಡು ಸರ್ಕಾರವು ನೀಲಗಿರಿ ಜಿಲ್ಲೆಯ ಗೂಡಲೂರು ತಾಲೂಕಿನಲ್ಲಿದ್ದ ‘ಜನ್ಮಂ’ ಭೂಮಾಲೀಕತ್ವದ ಎಸ್ಟೇಟ್ಗಳನ್ನು ಹಾಗೂ ಅವುಗಳಲ್ಲಿ ಇದ್ದ ಅರಣ್ಯ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ರೈತವಾರಿ ಪದ್ಧತಿಗೆ ಪರಿವರ್ತಿಸಲು ಕಾಯ್ದೆಯೊಂದನ್ನು ಜಾರಿಗೆ ತಂದಿತು. ಎಸ್ಟೇಟ್ ಮಾಲೀಕರು ಈ ಕಾಯ್ದೆಯ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ತನ್ನ ಐತಿಹಾಸಿಕ ತೀರ್ಪಿನ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಥವಾ ಅಸಾಂವಿಧಾನಿಕ ಕಾಯ್ದೆಗಳನ್ನು ರಕ್ಷಿಸಿಕೊಳ್ಳಲು 9ನೇ ಅನುಸೂಚಿಯನ್ನು ಒಂದು ‘ಸಾಂವಿಧಾನಿಕ ಕಸದ ಬುಟ್ಟಿ’ಯಂತೆ ಅಥವಾ ನ್ಯಾಯಾಲಯದ ಕಣ್ಣಿನಿಂದ ತಪ್ಪಿಸಿಕೊಳ್ಳುವ ಕಳ್ಳದಾರಿಯಂತೆ ಬಳಸುವುದಕ್ಕೆ ಶಾಶ್ವತವಾಗಿ ಬೀಗ ಹಾಕಿತು.
ತೀರ್ಪಿನ ಪ್ರಮುಖ ಅಂಶಗಳು
ಅಂದಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಬರ್ವಾಲ್ ಅವರ ನೇತೃತ್ವದ 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಜನವರಿ 11, 2007ರಂದು ಸರ್ವಾನುಮತದಿಂದ ನೀಡಿದ ಐತಿಹಾಸಿಕ ತೀರ್ಪು-
1. 9ನೇ ಅನುಸೂಚಿಗೆ ‘ಸಂಪೂರ್ಣ ವಿನಾಯಿತಿ’ ಇಲ್ಲ. 9ನೇ ಅನುಸೂಚಿಗೆ ಸೇರಿಸಲಾದ ಕಾಯ್ದೆಗಳಿಗೆ ನ್ಯಾಯಾಂಗ ವಿಮರ್ಶೆಯಿಂದ ಸಂಪೂರ್ಣ ರಕ್ಷಣೆ ಅಥವಾ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟವಾಗಿ ನ್ಯಾಯಾಲಯ ಘೋಷಿಸಿತು.
2. ಸಂವಿಧಾನದ ವಿಧಿ 368ರ ಅಡಿಯಲ್ಲಿ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ನಿರಂಕುಶವಲ್ಲ; ವಿಧಿ 31(ಬಿ) ಅಡಿಯಲ್ಲಿ 9ನೇ ಅನುಸೂಚಿಗೆ ಕಾಯ್ದೆಗಳನ್ನು ಸೇರಿಸುವ ಪ್ರತಿಯೊಂದು ತಿದ್ದುಪಡಿಯೂ ಸಂವಿಧಾನದ ‘ಮೂಲ ರಚನೆ’ಗೆ ಬದ್ಧವಾಗಿರಲೇಬೇಕು.
3. ಏಪ್ರಿಲ್ 24, 1973ರ ‘ಗಡಿರೇಖೆ’ಯ ದೃಢೀಕರಣ (cut- off date). ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಪ್ರಕಟವಾದ ನಂತರ 9ನೇ ಅನುಸೂಚಿಗೆ ಸೇರಿಸಲಾದ ಪ್ರತಿಯೊಂದು ಕಾಯ್ದೆ ಮತ್ತು ಸಾಂವಿಧಾನಿಕ ತಿದ್ದುಪಡಿಯು ನ್ಯಾಯಾಂಗ ವಿಮರ್ಶೆಗೆ ಒಳಪಡುತ್ತದೆ. ಏಪ್ರಿಲ್ 24, 1973ಕ್ಕಿಂತ ಮುಂಚೆ ಸೇರಿಸಲಾದ ಕಾಯ್ದೆಗಳಿಗೆ ಈ ತೀರ್ಪು ಅನ್ವಯಿಸುವುದಿಲ್ಲ. (ಅವುಗಳಿಗೆ ರಕ್ಷಣೆ ಮುಂದುವರೆಯುತ್ತದೆ)
ನ್ಯಾಯಾಂಗ ವಿಮರ್ಶೆ ಮತ್ತು ಅಧಿಕಾರಗಳ ವಿಭಜನೆ
ಒಂದು ಕಾಯ್ದೆ ಸಾಂವಿಧಾನಿಕವಾಗಿ ಸಿಂಧುವಾಗಿದೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸುವ ಅಧಿಕಾರ ನ್ಯಾಯಾಂಗಕ್ಕೆ(ವಿಧಿ 32 ಮತ್ತು 226) ಸೇರಿದೆಯೇ ಹೊರತು ಶಾಸಕಾಂಗಕ್ಕಲ್ಲ. ಯಾವಾಗ ಅಸಾಂವಿಧಾನಿಕವೆಂದು ರದ್ದುಗೊಳಿಸಿದ ಕಾಯ್ದೆಯನ್ನು ಕೇವಲ 9ನೇ ಅನುಸೂಚಿಗೆ ಸೇರಿಸುವ ಮೂಲಕ (ಆ ಕಾಯ್ದೆಲ್ಲಿದ್ದ ಸಾಂವಿಧಾನಿಕ ದೋಷವನ್ನು ಸರಿಪಡಿಸದೆ) ಅದಕ್ಕೆ ಸಿಂಧುತ್ವ ನೀಡಲು ಸಂಸತ್ತಿಗೆ ಸಾಧ್ಯವಿಲ್ಲ.
ಯಾವುದೇ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಲಾಗಿದೆ ಎಂಬ ಒಂದೇ ಕಾರಣದಿಂದ, ಒಂದು ಕಾಯ್ದೆಗೆ ಸಂಪೂರ್ಣ ರಕ್ಷಣೆ ದೊರೆಯುವುದಿಲ್ಲ. ವಿಶೇಷವಾಗಿ ಸಂವಿಧಾನದ ವಿಧಿಗಳಾದ 14, 19 ಮತ್ತು 21 ಇವುಗಳ ಉಲ್ಲಂಘನೆಯ ಪರಿಣಾಮವನ್ನು ಪರಿಶೀಲಿಸಬೇಕು.
1951ರಲ್ಲಿ ಬಡ ರೈತರ ಹಿತಾಸಕ್ತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ (ಭೂಸುಧಾರಣೆ) ಸೃಷ್ಟಿಸಿದ 9ನೇ ಅನುಸೂಚಿಯು, ನಂತರದ ದಶಕಗಳಲ್ಲಿ ರಾಜಕೀಯ ಅನುಕೂಲಕ್ಕಾಗಿ ದುರುಪಯೋಗವಾಗುವ ಅಪಾಯವನ್ನು ಎದುರಿಸಿತು. ಆದರೆ ಸರ್ವೋಚ್ಚ ನ್ಯಾಯಾಲಯವು ಕೇಶವಾನಂದ ಭಾರತಿ, ವಾಮನ್ ರಾವ್ ಮತ್ತು ಐ.ಆರ್. ಕೊಎಲ್ಹೋ ಪ್ರಕರಣಗಳ ಮೂಲಕ ಸಂಸತ್ತಿನ ತಿದ್ದುಪಡಿ ಅಧಿಕಾರ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ನಡುವೆ ಅದ್ಭುತ ಸಮತೋಲನವನ್ನು ಸಾಧಿಸಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಇಂತಿರಲು, ಮನಬಂದಂತೆ ಕಾಯ್ದೆಗಳನ್ನು ರೂಪಿಸಿ ಅನುಸೂಚಿ 9ರಲ್ಲಿ ಸೇರಿಸಲು ಸಾಧ್ಯವಿಲ್ಲ ಎಂಬುದೂ ಸರ್ವವಿಧಿತ. ನಿಜ ಸ್ಥಿತಿ, ಹೀಗಿದ್ದಾಗ್ಯೂ ಕೆಲವೊಂದು ರಾಜ್ಯಗಳು ನಿಗದಿತ ಮೀಸಲಾತಿ ಕೋಟಾವನ್ನು ಮೀರಿ ಹೋಗಿ, ತತ್ಸಂಬಂಧ ಕಾಯ್ದೆಯೊಂದನ್ನು ರೂಪಿಸಿ ಒಕ್ಕೂಟ ಸರ್ಕಾರಕ್ಕೆ ಅದನ್ನು ಅನುಸೂಚಿ 9ಕ್ಕೆ ಸೇರಿಸಲು ರವಾನಿಸಿ ಕೈ ತೊಳೆದುಕೊಳ್ಳುವ ಪ್ರವೃತ್ತಿ ಕಂಡು ಬರುತ್ತಿದೆ. ಇಂಥ ಪ್ರಕ್ರಿಯೆಯ ಹಿಂದೆ ರಾಜಕೀಯವೇ ಎದ್ದು ಕಾಣುತ್ತಿದೆ. ತನ್ನಲ್ಲಿರುವ ಚೆಂಡನ್ನು ಕೇಂದ್ರ ಸರ್ಕಾರದ ಅಂಗಳಕ್ಕೆ ತಳ್ಳುವುದೇ ಆಗಿದೆ. ಕೇಂದ್ರ ಸರ್ಕಾರವೇನೂ, ತೆರೆದ ತೋಳುಗಳಿಂದ ಸ್ವಾಗತಿಸುವುದಿಲ್ಲ. ಏಕೆಂದರೆ, ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಲೇಶಾಂಶವು ಕಾಳಜಿ ಇಲ್ಲದಿರುವುದನ್ನು ಅದರ ನಡವಳಿಕೆಯಿಂದ ಕಾಣಬಹುದು. ನ್ಯಾ ಜಿ.ರೋಹಿಣಿ ಆಯೋಗ ಹಿಂದುಳಿದ ವರ್ಗಗಳ ಉಪ ವರ್ಗೀಕರಣ ಮಾಡಿ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸದೇ ಗೆದ್ದಲು ತಿನ್ನಲು ಕಪಾಟಿನಲ್ಲಿಟ್ಟಿದೆ. ಮತ್ತೊಂದು ಸ್ಪಷ್ಟ ಉದಾಹರಣೆ ಎಂದರೆ- ಬಿಹಾರದಲ್ಲಿ ಎನ್.ಡಿ.ಎ ಸರ್ಕಾರದ ಹಿಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಸಮಗ್ರ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ, ದತ್ತಾಂಶಗಳ ಅನ್ವಯ ಮೀಸಲಾತಿ ಕೋಟಾವನ್ನು ಶೇ.65ಕ್ಕೆ ಹೆಚ್ಚಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯ ಅಸಿಂಧುಗೊಳಿಸಿದ ಪ್ರಕರಣದಲ್ಲಿ ಮಧ್ಯ ಪ್ರವೇಶಿಸದೆ, ಕೇಂದ್ರ ಸರ್ಕಾರ ತೆಪ್ಪಗಾಯಿತು. ಕೇಂದ್ರ ಸರ್ಕಾರ ಸಂವಿಧಾನದ ಅನುಸೂಚಿ 9ರ ಹಿನ್ನೆಲೆ ಮತ್ತು ಮುನ್ನೆಲೆಯನ್ನು ಸಾದ್ಯಂತವಾಗಿ ಅಭ್ಯಸಿಸಿ, ಈ ಕುರಿತು ಏನೊಂದೂ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಜಾಣ ನಡೆಯಲ್ಲವೇ?
ಇಂಥ ಪರಿಸ್ಥಿತಿಯಲ್ಲಿಯೂ ಕರ್ನಾಟಕ ಕೂಡ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಕೇಂದ್ರ ಸರ್ಕಾರ ಕರ್ನಾಟಕದ ಕೋರಿಕೆಯನ್ನು ಪರಿಗಣಿಸುವುದು ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಅಸಾಧ್ಯವೇ ಸರಿ! ಕರ್ನಾಟಕ ಸರ್ಕಾರದ ಈ ನಿಲುವು ರಾಜಕೀಯ ಕಾರಣಕ್ಕಾಗಿ ಎನ್ನದೆ, ಬೇರೇನು ಹೇಳಲು ಸಾಧ್ಯವಿದೆ?

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.


