ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೊಂಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಮರುತೆರೆಯುವ ಮಹತ್ವದ ಪ್ರಸ್ತಾವವನ್ನು ಮುಂದಿಟ್ಟಿದೆ. ಇನ್ನೊಂದೆಡೆ, ಅಮೆರಿಕದ ಕಟ್ಟುನಿಟ್ಟಿನ ನೌಕಾ ದಿಗ್ಬಂಧನದಿಂದಾಗಿ ಇರಾನ್‌ಗೆ ತನ್ನ ತೈಲವನ್ನು ಹಡಗುಗಳಿಗೆ ತುಂಬಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ರಫ್ತಾಗದೆ ಉಳಿಯುವ ತೈಲದ ಒತ್ತಡದಿಂದ ಕೇವಲ ಮೂರು ದಿನಗಳಲ್ಲಿ ಇರಾನ್‌ನ ತೈಲ ಕೊಳವೆಮಾರ್ಗಗಳು ಒಳಗಿನಿಂದಲೇ ಸ್ಫೋಟಗೊಳ್ಳಲಿವೆ ಎಂದು ಟ್ರಂಪ್ ಬೆದರಿಕೆಯೊಡ್ಡಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣವು ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟಿನ ಆತಂಕ ಸೃಷ್ಟಿಸಿದೆ. ಈ ಹಂತದಲ್ಲಿ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಪರೋಕ್ಷವಾಗಿ ಅಮೆರಿಕಕ್ಕೆ ಪ್ರಸ್ತಾವವೊಂದನ್ನು ರವಾನಿಸಿದೆ. ವಿವಾದಾತ್ಮಕ ಪರಮಾಣು ಮಾತುಕತೆಗಳನ್ನು ಸದ್ಯಕ್ಕೆ ಮುಂದೂಡಿ, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಮೂಲಕ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಇರಾನ್ ಒಲವು ತೋರಿದೆ ಎಂದು ವರದಿಗಳು ತಿಳಿಸಿವೆ. ತಮ್ಮ ಬಿಗಿಪಟ್ಟು ಮುಂದುವರಿಸಿರುವ ಟ್ರಂಪ್, ಇರಾನ್‌ನ ತೈಲ ಮೂಲಸೌಕರ್ಯಗಳ ಭೀಕರ ವಿನಾಶದ ಬಗ್ಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಕಡಲ ದಿಗ್ಬಂಧನದಿಂದಾಗಿ ಇರಾನ್‌ಗೆ ತನ್ನ ತೈಲವನ್ನು ಹಡಗುಗಳಿಗೆ ತುಂಬಲು ಸಾಧ್ಯವಾಗುತ್ತಿಲ್ಲ. ಬೃಹತ್ ಪ್ರಮಾಣದ ತೈಲವು ಕೊಳವೆ ಮಾರ್ಗಗಳಲ್ಲೇ ಉಳಿದುಕೊಳ್ಳುತ್ತಿದೆ. ಹೀಗೆ ಪಂಪ್ ಮಾಡಲಾಗದೆ ಉಳಿಯುವ ತೈಲದಿಂದ ಕೊಳವೆಗಳ ಒಳಗೆ ತೀವ್ರ ಒತ್ತಡ ನಿರ್ಮಾಣವಾಗಲಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕೇವಲ ಮೂರು ದಿನಗಳಲ್ಲಿ ಇರಾನ್‌ನ ತೈಲ ಕೊಳವೆಮಾರ್ಗಗಳು ಒಳಮುಖವಾಗಿ ಸ್ಫೋಟಗೊಳ್ಳಲಿವೆ. ಒಮ್ಮೆ ಈ ಸ್ಫೋಟ ಸಂಭವಿಸಿದರೆ, ಅವರ ತೈಲ ಮೂಲಸೌಕರ್ಯವನ್ನು ಹಳೆಯ ಸ್ಥಿತಿಗೆ ತರಲು ಸಾಧ್ಯವೇ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದು ಇರಾನ್ ತನ್ನ ತೈಲ ಉತ್ಪಾದನಾ ಕೇಂದ್ರಗಳನ್ನು ಅನಿವಾರ್ಯವಾಗಿ ಮುಚ್ಚುವಂತೆ ಮಾಡಲು ಅಮೆರಿಕ ಒಡ್ಡುತ್ತಿರುವ ರಣತಂತ್ರವಾಗಿದೆ.
ಇದನ್ನು ಓದಿದ್ದೀರಾ? ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು
ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿದ್ದು, ವಿಶ್ವಾದ್ಯಂತ ಸರಬರಾಜಾಗುವ ಒಟ್ಟು ಕಚ್ಚಾ ತೈಲದ ಶೇಕಡಾ 20 ರಿಂದ 25ರಷ್ಟು ಪಾಲು, ಅಂದರೆ ದಿನಕ್ಕೆ ಅಂದಾಜು ಎರಡು ಕೋಟಿ ಬ್ಯಾರೆಲ್‌ಗಳಷ್ಟು ತೈಲ ಇದೇ ಜಲಸಂಧಿಯ ಮೂಲಕ ಸಾಗಣೆಯಾಗುತ್ತದೆ. ಪ್ರತಿದಿನ 140ಕ್ಕೂ ಹೆಚ್ಚು ಬೃಹತ್ ಟ್ಯಾಂಕರ್‌ಗಳು ಈ ಮಾರ್ಗವನ್ನು ಅವಲಂಬಿಸಿವೆ.
ಇತ್ತೀಚೆಗೆ ಅಮೆರಿಕ ನೌಕಾ ದಿಗ್ಬಂಧನ ಘೋಷಿಸಿದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡಾ 6.81ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 101.68 ಡಾಲರ್ ತಲುಪಿದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ 104.26 ಡಾಲರ್‌ಗೆ ಜಿಗಿದಿತ್ತು. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆ ಮತ್ತು ಈ ಉದ್ವಿಗ್ನತೆಯಿಂದಾಗಿ ಗಲ್ಫ್ ರಾಷ್ಟ್ರಗಳ ಇಂಧನ ಆದಾಯಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ಮಧ್ಯಪ್ರಾಚ್ಯದ ಆರ್ಥಿಕತೆಯ ಮೇಲೆ 50 ಬಿಲಿಯನ್ ಡಾಲರ್ (ಸುಮಾರು 4.15 ಲಕ್ಷ ಕೋಟಿ ರೂಪಾಯಿ) ಗೂ ಅಧಿಕ ನಷ್ಟದ ಭೀತಿ ಎದುರಾಗಿದೆ ಎಂದು ಅಂತಾರಾಷ್ಟ್ರೀಯ ವರದಿಗಳು ಅಂದಾಜಿಸಿವೆ.





