ರಾಜ್ಯದಲ್ಲಿ ಗ್ಯಾನೇಶ್ ಕುಮಾರ್/ಚುನಾವಣಾ ಆಯೋಗ ಹೇರಿದ್ದ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್ ಸೈಟ್ https://ceo.karnataka.gov.in/enನಲ್ಲಿ ಮತಪಟ್ಟಿಯನ್ನು ಪ್ರಕಟಿಸಿದೆ. ಮತದಾರರು ಈ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿ, ಮತಪಟ್ಟಿಯಲ್ಲಿ ತಮ್ಮ ಹೆಸರು ಉಳಿದಿದೆಯೇ ಎಂದು ಪರಿಶೀಲಿಸಬಹುದು.
ಅಂತಿಮ ಮತಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟಿದ್ದರೆ ಅಥವಾ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರೆ, ಅಂತಹ ಮತದಾರರು ಸಂಬಂಧಪಟ್ಟ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ಕ್ರಮದ ಕುರಿತು ಮಾಹಿತಿ ಪಡೆಯಬಹುದು ಎಂದು ಆಯೋಗ ಹೇಳಿದೆ.
ಅಂದಹಾಗೆ, ಕರ್ನಾಟಕದಲ್ಲಿ ಎಸ್‌ಐಆರ್ ಆರಂಭಕ್ಕೂ ಮುನ್ನ, ಒಟ್ಟು ಸುಮಾರು 5.54 ಕೋಟಿ ದಾಖಲಿತ ಮತದಾರರಿದ್ದರು. ಆದರೆ, ಎಸ್‌ಐಆರ್ ಹೇರಿಕೆಯ ನಂತರ, ಎಎಸ್‌ಡಿಡಿಒ [ಗೈರುಹಾಜರಿ, ಸ್ಥಳಾಂತರ, ನಕಲಿ, ಮೃತ ಹಾಗೂ ಇತರರು) ಎಂಬ ವರ್ಗದಡಿ ಬರೋಬ್ಬರಿ 1.08 ಕೋಟಿ ಮತದಾರರನ್ನು (ಒಟ್ಟು ಮತದಾರರಲ್ಲಿ 20%) ಆಯೋಗವು ಯಾವುದೇ ನೋಟಿಸ್, ಆಕ್ಷೇಪಣೆ, ವಿಚಾರಣೆ ಇಲ್ಲದೆ ಅಳಿಸಿ ಹಾಕಿ, ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿತ್ತು.
ಮಾತ್ರವಲ್ಲದೆ, ಮತದಾರರು ಸಲ್ಲಿಸಿದ ವಿವರಗಳಲ್ಲಿ ವ್ಯತ್ಯಾಸಗಳು, ಅನ್‌ಮ್ಯಾಪಿಂಗ್ ನೆಪವೊಡ್ಡಿ 43.8 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿತ್ತು. ಈ ನೋಟಿಸ್ ಪಡೆದ ಮತದಾರರಿಗೆ ನಿಗದಿತ ದಾಖಲೆಗಳು ಮತ್ತು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜೊತೆಗೆ, ಬಿಜೆಪಿ ಬೆಂಬಲಿತರು ಅರ್ಹ ಮತದಾರರ ಹೆಸರನ್ನು ಅಕ್ರಮವಾಗಿ ಡಿಲೀಟ್ ಮಾಡಲು 2 ಲಕ್ಕಕ್ಷೂ ಅಧಿಕ ‘ಫಾರ್ಮ್-7’ಗಳನ್ನೂ ಸಲ್ಲಿಸಿದ್ದರು. ಸದ್ಯ, ಅಕ್ರಮ ಫಾರ್ಮ್-7 ವಿರುದ್ಧ ಗಂಭೀರ ಹೋರಾಟಗಳು ನಡೆದ ಹಿನ್ನೆಲೆಯಲ್ಲಿ, ಫಾರ್ಮ್-7ಗಳನ್ನು ಪರಿಗಣಿಸಿ, ಯಾರ ಡಿಲೀಟ್ ಮಾಡಿಲ್ಲವೆಂದು ಆಯೋಗ ಹೇಳಿಕೊಂಡಿದೆ.
ಆದಾಗ್ಯೂ, ಎಎಸ್‌ಡಿಡಿಒ ಅಡಿಯಲ್ಲಿ 1.08 ಕೋಟಿ ಮತ್ತು ನೋಟಿಸ್‌ಗಳನ್ನು ನೀಡಿ, ವಿಚಾರಣೆ ಅಡಿಯಲ್ಲಿ ಕನಿಷ್ಠ 15 ಲಕ್ಷ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಆರೋಪಗಳಿವೆ. ಸುಮಾರು 1.13 ಕೋಟಿ ಮತದಾರರನ್ನು ಹೊರಗಿಟ್ಟು ಅಂತಿಮ ಮತಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ನಾಗರಿಕ ಸಂಘಟನೆಗಳು ಆರೋಪಿಸಿವೆ.
ಸದ್ಯ, ಬಿಡುಗಡೆಯಾಗಿರುವ ಅಂತಿಮ ಮತಪಟ್ಟಿಯಲ್ಲಿ ಆನ್‌ಲೈನ್ ಮೂಲಕ, ತಮ್ಮ ಹೆಸರುಗಳು ಇವೆಯೇ ಎಂದಷ್ಟೇ ಪರಿಶೀಲಿಸಲು ಅವಕಾಶವಿದ್ದು, ಮತಪಟ್ಟಿಯಲ್ಲಿ ಎಷ್ಟು ಮಂದಿ ಮತದಾರರ ಹೆಸರುಗಳಿವೆ, ಎಷ್ಟು ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ಮಾಹಿತಿಯನ್ನು ಆಯೋಗ ಇನ್ನೂ ಒದಗಿಸಿಲ್ಲ. ಇಂದು (ಮಂಗಳವಾರ) 3 ಗಂಟೆಗೆ ಆಯೋಗವು ಪರಿಪೂರ್ಣ ಮಾಹಿತಿ ಒದಗಿಸುವ ಸಾಧ್ಯತೆಗಳಿವೆ.




