ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಗುರಿಯೊಂದಿಗೆ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಕಠಿಣ ಶ್ರಮ ಪಡುತ್ತಿದ್ದಾರೆ. ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಅವರು, ಮುಂದಿನ ವಿಶ್ವಕಪ್ ವೇಳೆಗೆ 40ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಹೀಗಿದ್ದರೂ ಮೈದಾನದಲ್ಲಿ ಅವರ ಫಿಟ್ನೆಸ್ ಹಾಗೂ ಮೈಕಟ್ಟು ಬಗ್ಗೆ ಆಗಾಗ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ.
ಆದರೆ, ರೋಹಿತ್ ಶರ್ಮಾ ಅವರನ್ನು ‘ಸೋಮಾರಿ’ ಹಾಗೂ ‘ದಪ್ಪಗಿದ್ದಾರೆ’ ಎಂದು ಟೀಕಿಸುವವರಿಗೆ ಭಾರತ ತಂಡದ ಮಾಜಿ ‘ಸ್ಟ್ರೆಂತ್ ಅಂಡ್ ಕಂಡೀಷನಿಂಗ್’ ಕೋಚ್ ಸೋಹಮ್ ದೇಸಾಯಿ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿರುವ ಅವರು, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋತ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಸೊಂಟದ ಭಾಗಕ್ಕೆ ಗಂಭೀರವಾದ ಪೆಟ್ಟಾಗಿತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಆ ಗಾಯದಿಂದಾಗಿ ರೋಹಿತ್ ಶರ್ಮಾ ಅವರ ಕ್ರಿಕೆಟ್ ಬದುಕೇ ಅಂತ್ಯಗೊಳ್ಳುವ ಭೀತಿ ಎದುರಾಗಿತ್ತು. ಬಳಿಕ ಅವರು ಮಂಡಿರಜ್ಜು (ಹ್ಯಾಮ್‌ಸ್ಟ್ರಿಂಗ್) ಹಾಗೂ ಸೊಂಟದ ಭಾಗದ (ಹಿಪ್ ಫ್ಲೆಕ್ಸರ್) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಸೊಂಟದ ಭಾಗವೇ ಅವರ ದೇಹದ ಅತ್ಯಂತ ದುರ್ಬಲ ಅಂಗವಾಗಿದೆ. ಹೀಗಾಗಿ ಅವರು ಕಡ್ಡಾಯವಾಗಿ ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ‘ಸ್ಟ್ರೆಂತ್ ಟ್ರೈನಿಂಗ್’ (ಸಾಮರ್ಥ್ಯ ವೃದ್ಧಿ ತರಬೇತಿ) ಮಾಡಲೇಬೇಕಾದ ಅನಿವಾರ್ಯತೆಯಿದೆ ಎಂದು ಸೋಹಮ್ ವಿವರಿಸಿದ್ದಾರೆ.
ಒಂದು ವೇಳೆ ರೋಹಿತ್ ಶರ್ಮಾ ಈ ತರಬೇತಿಯನ್ನು ತಪ್ಪಿಸಿದರೆ ಅದು ಅವರಿಗೆ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ಕಳೆದ ಏಳೆಂಟು ವರ್ಷಗಳಿಂದ ಅವರು ನಿರಂತರವಾಗಿ ಈ ಕಠಿಣ ತರಬೇತಿಯನ್ನು ಪಾಲಿಸಿಕೊಂಡೇ ಬರುತ್ತಿದ್ದಾರೆ. ಒಂದು ವೇಳೆ ಜನರು ಅಂದುಕೊಂಡಂತೆ ಅವರು ನಿಜಕ್ಕೂ ಸೋಮಾರಿಯಾಗಿದ್ದರೆ, ಇಷ್ಟು ವರ್ಷಗಳ ಕಾಲ ಕಠಿಣವಾದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಕೋಚ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಫಿಟ್ನೆಸ್ ತರಬೇತಿಯ ನಡುವಿನ ವ್ಯತ್ಯಾಸವನ್ನೂ ಸೋಹಮ್ ಬಿಚ್ಚಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಹೆಚ್ಚು ಓಡುತ್ತಾರೆ, ಹೀಗಾಗಿ ಅವರಿಗೆ ತರಬೇತಿಯ ವೇಳೆ ಪ್ರತ್ಯೇಕವಾಗಿ ಓಡುವ ಅಗತ್ಯವಿರುವುದಿಲ್ಲ. ಆದರೆ, ರೋಹಿತ್ ಶರ್ಮಾ ಅವರ ದೇಹದ ಸ್ವರೂಪವೇ ಭಿನ್ನವಾಗಿದ್ದು, ಅವರಿಗೆ ಸಾಮರ್ಥ್ಯ ವೃದ್ಧಿಸುವ ಹಾಗೂ ಸ್ಫೋಟಕ ತರಬೇತಿಗಳ (ಎಕ್ಸ್‌ಪ್ಲೋಸಿವ್ ಟ್ರೈನಿಂಗ್) ಅಗತ್ಯ ಹೆಚ್ಚು ಇರುತ್ತದೆ ಎಂದಿದ್ದಾರೆ.
ಗಾಯದ ಇತಿಹಾಸವನ್ನು ಹೊಂದಿರುವ ರೋಹಿತ್ ಶರ್ಮಾ, ತಮ್ಮ ಮಂಡಿರಜ್ಜು ಹಾಗೂ ಸ್ನಾಯುಗಳನ್ನು ಉತ್ತಮ ಲಯದಲ್ಲಿ ಇಟ್ಟುಕೊಳ್ಳಲು ನಿರ್ದಿಷ್ಟ ರೀತಿಯ ಸಾಮರ್ಥ್ಯ ವೃದ್ಧಿ ಹಾಗೂ ಓಡುವ ವ್ಯಾಯಾಮಗಳನ್ನು ಮಾಡಲೇಬೇಕಾಗುತ್ತದೆ. ಇವೆರಡನ್ನು ಮಾಡದಿದ್ದರೆ ಅವರು ಮೈದಾನದಲ್ಲಿ ದೀರ್ಘಕಾಲ ಉಳಿಯಲು ಸಾಧ್ಯವೇ ಇಲ್ಲ. ಇದು ಯಾವುದೇ ಗುಟ್ಟಿನ ವಿಚಾರವಲ್ಲ, ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಸೋಹಮ್ ದೇಸಾಯಿ ವಿವರಿಸಿದ್ದಾರೆ.





