ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ ಫ್ಲಾವಿಯೊ ಬೊಲ್ಸೊನಾರೊ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಅವಧಿಗೆ ದೇಶದ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರಿದ್ದಾರೆ.
ಬ್ರೆಜಿಲ್‌ನಲ್ಲಿ 1989ರಲ್ಲಿ ನೇರ ಪ್ರಜಾಸತ್ತಾತ್ಮಕ ಅಧ್ಯಕ್ಷೀಯ ಚುನಾವಣೆಗಳು ಮರುಪ್ರಾರಂಭಗೊಂಡ ನಂತರ, ಮೊದಲ ಸುತ್ತಿನ ಮತದಾನದಲ್ಲಿ ಹಿನ್ನಡೆ ಅನುಭವಿಸಿದ್ದ ಅಭ್ಯರ್ಥಿಯೊಬ್ಬರು, ಎರಡನೇ ಸುತ್ತಿನಲ್ಲಿ ಅದ್ಭುತವಾಗಿ ಚೇತರಿಕೆ ಕಂಡು ಗೆಲುವು ಸಾಧಿಸಿರುವುದು ದೇಶದ ಚುನಾವಣಾ ಇತಿಹಾಸದಲ್ಲೇ ಇದೇ ಮೊದಲು.
ಚುನಾವಣೆಯ ಮತದಾನದ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ರಾಜಕೀಯ ತಿರುವಿನ ಮಹತ್ವ ಸ್ಪಷ್ಟವಾಗುತ್ತದೆ. ಅಕ್ಟೋಬರ್ 4ರಂದು ನಡೆದ ಮೊದಲ ಸುತ್ತಿನ ಮತದಾನದಲ್ಲಿ ಫ್ಲಾವಿಯೊ ಬೊಲ್ಸೊನಾರೊ 47.03%ರಷ್ಟು ಮತಗಳನ್ನು ಪಡೆದರೆ, ಲೂಲಾ ಅವರು 45.16% ಮತ ಗಳಿಸಿದ್ದರು. ಲೂಲಾಗಿಂತ ಫ್ಲಾವಿಯೊ ಸುಮಾರು 1.87% ಅಂಕಗಳ ಸ್ಪಷ್ಟ ಮುನ್ನಡೆ ಸಾಧಿಸಿದ್ದರು.
ಇದು ಲೂಲಾ ಅವರ ಬೆಂಬಲಿಗರು ಮತ್ತು ಸಾಂಪ್ರದಾಯಿಕ ಎಡಪಂಥೀಯ ವಲಯಕ್ಕೆ ಅನಿರೀಕ್ಷಿತ ಆಘಾತವನ್ನು ತಂದೊಡ್ಡಿತ್ತು. ಆದರೆ, ಅಕ್ಟೋಬರ್ 25ರ ಎರಡನೇ ಸುತ್ತಿನ ಅಂತಿಮ ಫಲಿತಾಂಶ ಬರುವಷ್ಟರಲ್ಲಿ ಚಿತ್ರಣವೇ ಬದಲಾಗಿತ್ತು. ಲೂಲಾ ಅವರು 51.79%ರಷ್ಟು ಅಂದರೆ ಒಟ್ಟು 6.43 ಕೋಟಿ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಫ್ಲಾವಿಯೊ ಬೊಲ್ಸೊನಾರೊ 48.21%ರಷ್ಟು ಅಂದರೆ 5.98 ಕೋಟಿ ಮತಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಅಂತಿಮವಾಗಿ, ಲೂಲಾ ಅವರು 44.30 ಲಕ್ಷ ಮತಗಳ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿದರು.
ಬ್ರೆಜಿಲ್‌ನ ಸುಪೀರಿಯರ್ ಎಲೆಕ್ಟೋರಲ್ ಕೋರ್ಟ್ (TSE) ಅಕ್ಟೋಬರ್ 26ರಂದು ಅಧಿಕೃತ ಫಲಿತಾಂಶವನ್ನು ಪ್ರಕಟಿಸಿದೆ. ಮೊದಲ ಸುತ್ತಿನಲ್ಲಿ ಮತದಾನದಿಂದ ದೂರ ಉಳಿದಿದ್ದವರ ಪ್ರಮಾಣ 12.08% ಇದ್ದರೆ, ಎರಡನೇ ಸುತ್ತಿನ ಮತದಾನದಲ್ಲಿ ಈ ಪ್ರಮಾಣವು 19.2%ಗೆ ಕುಸಿತಿದೆ. ಹೊಸದಾಗಿ ಮತಗಟ್ಟೆಗೆ ಬಂದ ಮತದಾರರನ್ನು ಸೆಳೆಯುವಲ್ಲಿ ಲೂಲಾ ಯಶಸ್ವಿಯಾಗಿದ್ದಾರೆ.
ಈ ರಾಜಕೀಯ ಬದಲಾವಣೆಯ ಹಿಂದೆ ಕೇವಲ ಲೋಲಾ ಅವರ ‘ವರ್ಕರ್ಸ್ ಪಾರ್ಟಿ’ಯ ಚುನಾವಣಾ ತಂತ್ರಗಾರಿಕೆ ಮಾತ್ರವೇ ಇರಲಿಲ್ಲ; ಬದಲಾಗಿ ವಿದ್ಯಾರ್ಥಿ ಸಂಘಟನೆಗಳು, ವಿವಿಧ ಸಾಮಾಜಿಕ ಚಳವಳಿಗಳು ಹಾಗೂ ಸ್ವಯಂಪ್ರೇರಿತ ನಾಗರಿಕರ ಬೃಹತ್ ಭಾಗವಹಿಸುವಿಕೆ ಅತ್ಯಂತ ನಿರ್ಣಾಯಕವಾಗಿತ್ತು. ಮೊದಲ ಸುತ್ತಿನ ಫಲಿತಾಂಶವು ಬ್ರೆಜಿಲ್‌ನ ಪ್ರಗತಿಪರ ನಾಗರಿಕ ಸಮುದಾಯಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಏಕೆಂದರೆ, ಎದುರಾಳಿ ಫ್ಲಾವಿಯೊ ಬೊಲ್ಸೊನಾರೊ ಅವರು ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ. ಈ ಜೈರ್ ಬೊಲ್ಸೊನಾರೊ ಅವರು 2022ರ ಚುನಾವಣಾ ಸೋಲಿನ ನಂತರ ಅಧಿಕಾರದಲ್ಲಿ ಮುಂದುವರಿಯಲು ನಡೆಸಿದ ವಿಫಲ ಕ್ಷಿಪ್ರಕ್ರಾಂತಿ ಸಂಚಿನ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಪ್ರಸ್ತುತ ಜೈಲಿನಲ್ಲಿದ್ದಾರೆ.
ಹೀಗಾಗಿ, ಫ್ಲಾವಿಯೊ ಅವರ ಸ್ಪರ್ಧೆಯು ಕೇವಲ ಒಬ್ಬ ಹೊಸ ನಾಯಕನ ಆಗಮನವಾಗಿರದೆ, ಬೊಲ್ಸೊನಾರೊ ಕುಟುಂಬದ ರಾಜಕೀಯ ಪುನರಾಗಮನದ ಪ್ರತ್ಯಕ್ಷ ಪ್ರಯತ್ನವಾಗಿತ್ತು. ಮಾತ್ರವಲ್ಲ, ಫ್ಲಾವಿಯೊ ಗೆಲುವು ಸಾಧಿಸಿದರೆ, ಟ್ರಂಪ್ ಆಡಳಿತದ ಅಮೆರಿಕದ ಪ್ರಭಾವ ಬ್ರೆಜಿಲ್ ಮೇಲೆ ತೀವ್ರವಾಗುವ ಅಪಾಯವೂ ಇತ್ತು. ಇದನ್ನು ಗ್ರಹಿಸಿದ ವಿದ್ಯಾರ್ಥಿಗಳು ಮತ್ತು ನಾಗರಿಕ ಗುಂಪುಗಳು ಈ ಚುನಾವಣೆಯನ್ನು ಕೇವಲ ಲೂಲಾ ಅವರ ಆಡಳಿತಾವಧಿಯನ್ನು ವಿಸ್ತರಿಸುವ ಪ್ರಶ್ನೆಯಾಗಿ ನೋಡದೆ, ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು, ನ್ಯಾಯಾಂಗ ಹಾಗೂ ಸಾಮಾಜಿಕ ಹಕ್ಕುಗಳನ್ನು ರಕ್ಷಿಸುವ ಹೋರಾಟವಾಗಿ ಸ್ವೀಕರಿಸಿದರು.
ವಿಶೇಷವಾಗಿ, ಬ್ರೆಜಿಲ್‌ನ ವಿದ್ಯಾರ್ಥಿ ಸಂಘಟನೆಗಳು ಎರಡನೇ ಸುತ್ತಿನ ಪ್ರಚಾರದಲ್ಲಿ ಮುಂಚೂಣಿಯಲ್ಲಿ ನಿಂತವು. ಬ್ರೆಜಿಲ್‌ನ ಪ್ರಮುಖ ವಿದ್ಯಾರ್ಥಿ ಒಕ್ಕೂಟವಾದ ‘ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ’ (UNE) ಲೂಲಾ ಅವರಿಗೆ ಬಹಿರಂಗ ಬೆಂಬಲ ಘೋಷಿಸಿ, ಲಕ್ಷಾಂತರ ಯುವಕರನ್ನು ಬೀದಿಗಿಳಿಸಿತು. ಅಕ್ಟೋಬರ್ 7ರಂದು ರಿಯೋ ಡಿ ಜನೈರೊದ ಕ್ಯಾಂಡೆಲಾರಿಯಾ ಚರ್ಚ್‌ನಿಂದ ಆರಂಭವಾಗಿ ಸಿನೆಲಾಂಡಿಯಾವರೆಗೆ ಸಾಗಿದ ಭಾರಿ ವಿದ್ಯಾರ್ಥಿ ಮೆರವಣಿಗೆಯಿಂದ ಹಿಡಿದು, ಅಕ್ಟೋಬರ್ 8ರಂದು ರಾಜಧಾನಿ ಬ್ರೆಸೀಲಿಯಾ, ಸಾವೊ ಪಾಲೊ, ಕುರಿಟಿಬಾ ಸೇರಿದಂತೆ ಹತ್ತು ರಾಜ್ಯಗಳಲ್ಲಿ ನಡೆದ ಸರಣಿ ಪ್ರತಿಭಟನೆಗಳು ಚಳವಳಿಗೆ ಹೊಸ ಶಕ್ತಿ ನೀಡಿದವು.
ಈ ವಿದ್ಯಾರ್ಥಿ ಪ್ರತಿಭಟನೆಗಳು ಕೇವಲ ರಾಜಕೀಯ ಬೆಂಬಲಕ್ಕೆ ಸೀಮಿತವಾಗಿರದೆ, ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಅನುದಾನ, ವಿಶ್ವವಿದ್ಯಾಲಯಗಳ ಬಲವರ್ಧನೆ ಹಾಗೂ ಯುವಜನರಿಗೆ ಉದ್ಯೋಗ ಭದ್ರತೆಯಂತಹ ಮೂಲಭೂತ ಬೇಡಿಕೆಗಳನ್ನೂ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತಂದವು. ಮೊದಲ ಸುತ್ತಿನ ಹಿನ್ನಡೆಯಿಂದ ನಿರಾಶರಾಗಿದ್ದ ಮತದಾರರಲ್ಲಿ ‘ಫಲಿತಾಂಶವನ್ನು ಇನ್ನು ಬದಲಾಯಿಸಬಹುದು’ ಎಂಬ ಆತ್ಮವಿಶ್ವಾಸವನ್ನು ತುಂಬುವಲ್ಲಿ ಈ ಯುವಪಡೆಯ ಕ್ರಿಯಾಶೀಲತೆ ಪ್ರಮುಖ ಪಾತ್ರ ವಹಿಸಿತು.
ವಿದ್ಯಾರ್ಥಿಗಳ ಜೊತೆಗೆ ಬ್ರೆಜಿಲ್‌ನ ಸಾಮಾಜಿಕ ಚಳವಳಿಗಳು ಮತ್ತು ಸ್ಥಳೀಯ ನಾಗರಿಕ ಸಮಿತಿಗಳು ಪ್ರಚಾರವನ್ನು ಮನೆಮನೆಗೆ ತಲುಪಿಸಿದವು. ಭೂರಹಿತ ಗ್ರಾಮೀಣ ಕಾರ್ಮಿಕರ ಚಳವಳಿಯಾದ ‘ಎಂಎಸ್‌ಟಿ’ಯಂತಹ ಸಂಘಟನೆಗಳು, ಪ್ರಗತಿಪರ ಧಾರ್ಮಿಕ ಗುಂಪುಗಳು ಹಾಗೂ ಬಡಾವಣೆಗಳ ‘ಜನಪ್ರಿಯ ಹೋರಾಟ ಸಮಿತಿಗಳು’ ಧ್ವನಿ ಎತ್ತಿದವು. ಈ ಪಡೆಗಳು ದೂರದರ್ಶನದ ಜಾಹೀರಾತು ಅಥವಾ ಬೃಹತ್ ರ್‍ಯಾಲಿಗಳಿಗಷ್ಟೇ ಪ್ರಚಾರವನ್ನು ಸೀಮಿತಗೊಳಿಸದೆ, ಸ್ಥಳೀಯ ಸಮುದಾಯಗಳಲ್ಲಿ ಸಣ್ಣ ಸಣ್ಣ ಸಭೆಗಳನ್ನು ನಡೆಸಿ, ರಾಜಕೀಯ ತಪ್ಪು ಕಲ್ಪನೆಗಳನ್ನು ನಿವಾರಿಸುವ ಮತ್ತು ನೇರ ಜನಸಂಪರ್ಕ ಸಾಧಿಸುವ ಕೆಲಸವನ್ನು ಮಾಡಿದವು.
ಇದಕ್ಕೆ ಪೂರಕವಾಗಿ ಲೂಲಾ ಪ್ರಚಾರ ತಂಡವು ತಮ್ಮ ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಬ್ರೆಜಿಲ್‌ನಲ್ಲಿ ಬಲಪಂಥೀಯರು ವಾಟ್ಸ್‌ಆ್ಯಪ್, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ಭಾರಿ ಪ್ರಭಾವ ಹೊಂದಿದ್ದರು. ಇದನ್ನು ಎದುರಿಸಲು ಸಂಸದ ಆಂದ್ರೆ ಜನೋನಿಸ್ ಅವರ ನೇತೃತ್ವದಲ್ಲಿ ‘ಲೂಲಾ ಪಡೆ’ ಎಂಬ ಬೃಹತ್ ವಾಟ್ಸ್‌ಆ್ಯಪ್ ಪ್ರಚಾರ ಜಾಲವನ್ನು ರೂಪಿಸಲಾಯಿತು. ಸರ್ಕಾರಿ ಸುದ್ದಿಸಂಸ್ಥೆ ಅಜೆನ್ಸಿಯಾ ಬ್ರೆಸಿಲ್ ವರದಿ ಪ್ರಕಾರ, ಈ ಜಾಲವು ಅತಿ ಶೀಘ್ರದಲ್ಲೇ ಒಂದು ಕೋಟಿಗೂ ಹೆಚ್ಚು ಮತದಾರರನ್ನು ತಲುಪಿತು.
ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ಅಕ್ಟೋಬರ್ 5ರ ನಂತರ ಲೂಲಾ ಪರ ಡಿಜಿಟಲ್ ಸಂವಹನಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ಸುಮಾರು 20 ಕೋಟಿಯಷ್ಟಾಯಿತು. ಸಾಂಪ್ರದಾಯಿಕ ಭಾಷಣಗಳ ಬದಲಾಗಿ ಲೂಲಾ ಅವರು ಅನೌಪಚಾರಿಕ ವಿಡಿಯೋಗಳ ಮೂಲಕ ನೇರವಾಗಿ ಮತದಾರರೊಂದಿಗೆ ಸಂವಹನ ನಡೆಸಲು ಆರಂಭಿಸಿದ್ದು ಯುವಕರನ್ನು ಆಕರ್ಷಿಸಿತು.
ಇದೇ ಸಮಯದಲ್ಲಿ ಅಮೆರಿಕದ ರಾಜಕೀಯ ಮತ್ತು ಬ್ರೆಜಿಲ್‌ನ ಸಾರ್ವಭೌಮತ್ವದ ವಿಷಯವೂ ಚುನಾವಣೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಯಿತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಬೊಲ್ಸೊನಾರೊ ಕುಟುಂಬ ಹೊಂದಿದ್ದ ನಿಕಟ ರಾಜಕೀಯ ಬಾಂಧವ್ಯವನ್ನು ಮುಂದಿಟ್ಟುಕೊಂಡ ಲೂಲಾ ಬೆಂಬಲಿಗರು, ದೇಶದ ಆರ್ಥಿಕ ಸ್ವಾಯತ್ತತೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಯ ರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು. “ಫ್ಲಾವಿಯೊ ಬೊಲ್ಸೊನಾರೊ ಅಧಿಕಾರಕ್ಕೆ ಬಂದರೆ ಬ್ರೆಜಿಲ್‌ನ ವಿದೇಶಾಂಗ ನೀತಿಯು ಅಮೆರಿಕದ ಏಕಪಕ್ಷೀಯ ಒತ್ತಡಗಳಿಗೆ ಬಲಿಯಾಗಬೇಕಾಗುತ್ತದೆ” ಎಂಬ ಆತಂಕವನ್ನು ಮತದಾರರಿಗೆ ರವಾನಿಸಲಾಯಿತು. ಈ ಪ್ರಚಾರಕ್ಕೆ ಉತ್ತರಿದಂತೆ, ಗೆಲುವಿನ ನಂತರ ಮಾತನಾಡಿದ ಲೂಲಾ, “ಬ್ರೆಜಿಲ್ ಇನ್ಮುಂದೆ ಯಾವುದೇ ದೇಶದ ಹಿತ್ತಲಾಗಿ ಉಳಿಯುವುದಿಲ್ಲ” ಎಂಬ ದಿಟ್ಟ ಸಂದೇಶ ರವಾನಿಸಿದರು.
ಇದನ್ನೂ ಓದಿ ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ ಮಂತ್ರ?
ಚುನಾವಣೆಯ ಕೊನೆಯ ವಾರದಲ್ಲಿ, ವಿಶೇಷವಾಗಿ ಅಕ್ಟೋಬರ್ 24ರಂದು (ಮತದಾನಕ್ಕೆ ಒಂದು ದಿನ ಮುಂಚಿತವಾಗಿ) ಸಾವೊ ಪಾಲೊದ ಪ್ರಸಿದ್ಧ ಪೌಲಿಸ್ತಾ ಅವೆನ್ಯೂದಲ್ಲಿ ಲಕ್ಷಾಂತರ ಜನರು ಸ್ವಯಂಪ್ರೇರಿತವಾಗಿ ಬೀದಿಗಿಳಿದು ನಡೆಸಿದ ಬೃಹತ್ ಪ್ರದರ್ಶನವು ಲೂಲಾ ಗೆಲುವಿಗೆ ಅಂತಿಮ ಮುದ್ರೆ ಒತ್ತಿತು. ಆದರೆ, ಅಕ್ಟೋಬರ್ 25ರ ಮತದಾನದ ದಿನದಂದು ವಿವಾದಗಳೂ ತಲೆದೋರಿದವು. ಭಾರಿ ಮಳೆ ಮತ್ತು ಸಾರಿಗೆ ಅಡಚಣೆಗಳಿಂದಾಗಿ ಕೆಲವು ಭಾಗಗಳಲ್ಲಿ ಮತದಾರರಿಗೆ ತೊಂದರೆಯಾದಾಗ, ಸುಪ್ರೀಂ ಫೆಡರಲ್ ಕೋರ್ಟ್ ಮತದಾನದ ಅವಧಿಯನ್ನು ಎರಡು ಗಂಟೆಗಳ ಕಾಲ ವಿಸ್ತರಿಸಿತು. ಇದನ್ನು ಫ್ಲಾವಿಯೊ ಬೊಲ್ಸೊನಾರೊ ಕಠಿಣವಾಗಿ ವಿರೋಧಿಸಿ, ಫಲಿತಾಂಶವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಆದರೆ, ಸುಪೀರಿಯರ್ ಎಲೆಕ್ಟೋರಲ್ ಕೋರ್ಟ್ ಈ ಆಕ್ಷೇಪವನ್ನು ತಿರಸ್ಕರಿಸಿ ಲೂಲಾ ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಿತು. ಅಂತಿಮವಾಗಿ ಜನ ಚಳುವಳಿ ಗೆಲುವು ಸಾಧಿಸಿತು.





