ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತ ಮಕ್ಕಳಿಗೆ ಭಾವನಾತ್ಮಕ ಧೈರ್ಯ ತುಂಬಿ, ಅವರ ನೋವು ಮತ್ತು ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಕಾನೂನು ನೆರವು ಹಾಗೂ ಅಗತ್ಯ ಅರಿವು ಮೂಡಿಸುವಲ್ಲಿ ಬೆಂಬಲ ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತಾಶ್ರಯದಲ್ಲಿ ಸೋಮವಾರ ಡಿ.ಎ.ಆರ್. ಸಭಾಂಗಣದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ -2026 ನಡೆಯಿತು. ಇದರ ಅಂಗವಾಗಿ ಅರೆಕಾಲಿಕ ಸ್ವಯಂ ಸೇವಕರಾಗಿ ಆಯ್ಕೆಯಾಗಿರುವ ಪೋಕ್ಸೋ ಬೆಂಬಲ ವ್ಯಕ್ತಿಗಳಿಗೆ ಹಾಗೂ ಸ್ವಯಂ ಸೇವಾ ಸಂಘದ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಪರಾಧಕ್ಕೆ ಒಳಗಾದ ಬಾಲಕ ಅಥವಾ ಬಾಲಕಿ ಆತ್ಮಸ್ಥ್ರೈರ್ಯ ಕಳೆದುಕೊಂಡು, ಯಾರೊಂದಿಗೂ ಮಾತನಾಡಲಾಗದೆ, ಜೀವನ ನಡೆಸುವುದೇ ಬೇಡ ಎಂಬ ಹಂತಕ್ಕೆ ತಲುಪಿದಾಗ, ಅವರಿಗೆ ಬೆನ್ನೆಲುಬಾಗಿ ನಿಲ್ಲುವುದೇ ಬೆಂಬಲ ವ್ಯಕ್ತಿಯ ನಿಜವಾದ ಕೆಲಸ. ಇಲಾಖೆಗಳೊಂದಿಗೆ ಮಾತನಾಡುವುದಕ್ಕಿಂತ ಮುನ್ನ ನೊಂದವರ ಮಾತುಗಳನ್ನು ಕೇಳುವುದೇ ಪ್ರಮುಖವಾದ ಕೆಲಸ. ಈ ಮೂಲಕ ಅವರ ಸಂಕಟ ಮತ್ತು ಸಮಸ್ಯೆಗಳನ್ನು ಆಲಿಸಿದಾಗಲೇ ಬೆಂಬಲ ವ್ಯಕ್ತಿಗಳ ಕೆಲಸ ಯಶಸ್ವಿಯಾಗುತ್ತದೆ.
ಪೋಕ್ಸೋ ಪ್ರಕರಣಗಳ ಹಿನ್ನೆಲೆಯಲ್ಲಿ ಬಾಲಕ ಮತ್ತು ಬಾಲಕಿಗೆ ಬೆಂಬಲ ವ್ಯಕ್ತಿಗಳನ್ನು ನೇಮಿಸಲಾಗಿದ್ದು ಈ ಕಾರ್ಯಕ್ರಮ ಸಮರ್ಪಕ ಅನುಷ್ಠಾನಕ್ಕೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಾಗಿದೆ ಎಂದರು.
ದತ್ತು ಮಾಸಾಚರಣೆ ಮತ್ತು ಪೋಕ್ಸೋ ಜಾಗೃತಿ :
ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಹದಿಹರೆಯದ ಗರ್ಭಧಾರಣೆಯಿಂದಾಗಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ರಕ್ಷಣೆ ಹಾಗೂ ಕಾನೂನು ಅರಿವು ಮೂಡಿಸಲು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ–2026ರ ಅಂಗವಾಗಿ ಆಯೋಜಿಸಿದ್ದ ಪೋಕ್ಸೋ ಬೆಂಬಲ ವ್ಯಕ್ತಿಗಳು ಮತ್ತು ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2024ರಲ್ಲಿ 237, 2025ರಲ್ಲಿ ಸುಮಾರು 253–254 ಹಾಗೂ ಪ್ರಸಕ್ತ ವರ್ಷ ಈಗಾಗಲೇ 263ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ಹೆಚ್ಚಳಕ್ಕೆ ಜನರಲ್ಲಿ ಜಾಗೃತಿ ಹೆಚ್ಚಾಗಿ ದೂರುಗಳು ವರದಿಯಾಗುತ್ತಿರುವುದೂ ಒಂದು ಕಾರಣವಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ಇಲಾಖೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಮಾತನಾಡಿ, ಮದುವೆಯಾದರೂ ಮಕ್ಕಳಾಗದ ದಂಪತಿಗಳಿಗೆ ಕಾನೂನುಬದ್ಧ ದತ್ತು ಸ್ವೀಕಾರವೇ ಸೂಕ್ತ ಪರ್ಯಾಯ ಮಾರ್ಗ ಎಂಬ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ 54 ಅರೆಕಾಲಿಕ ಕಾನೂನು ಸ್ವಯಂಸೇವಕರನ್ನು ಬೆಂಬಲ ವ್ಯಕ್ತಿಗಳಾಗಿ ಗುರುತಿಸಿ ತರಬೇತಿ ನೀಡಲಾಗುತ್ತಿದೆ. ಅವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಂತ್ರಸ್ತ ಮಕ್ಕಳ ಮಾತುಗಳನ್ನು ಆಲಿಸಿ, ಅಗತ್ಯ ಕಾನೂನು ನೆರವು ಒದಗಿಸಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಮಾತನಾಡಿ, ದತ್ತು ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯಮಟ್ಟದಲ್ಲಿ ಎರಡು ಬಾರಿ ಪ್ರಥಮ ಹಾಗೂ ಒಂದು ಬಾರಿ ದ್ವಿತೀಯ ಬಹುಮಾನ ಪಡೆದಿದೆ. ಮಕ್ಕಳ ರಕ್ಷಣೆಯಲ್ಲಿ ಅವರ ಮೌನವನ್ನು ಅರ್ಥಮಾಡಿಕೊಂಡು ಸೂಕ್ತ ನೆರವು ನೀಡುವುದು ಅತ್ಯಂತ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಆರ್ಟ್ ಆಫ್ ಲಿವಿಂಗ್‌ನ ಬಿ. ಮೂರ್ತಿ ಮಾನಸಿಕ ಒತ್ತಡ ನಿರ್ವಹಣೆ ಕುರಿತು ಹಾಗೂ ಸ್ತ್ರೀರೋಗ ತಜ್ಞೆ ಡಾ. ಚಂದುಶ್ರೀ ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಕವಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಶಿರೇಖಾ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.




