ಪಕ್ಷಾಂತರ ನಿಷೇಧ ಕಾಯ್ದೆಯ ಚೌಕಟ್ಟಿನಲ್ಲಿ ಸಮಗ್ರ ಸುಧಾರಣೆಗಳನ್ನು ತರಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರತಿಕ್ರಿಯೆ ಕೇಳಿದೆ.
ಎ. ಸೇತು ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಚುನಾಯಿತ ಜನಪ್ರತಿನಿಧಿಗಳು ಅನರ್ಹತೆ ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಚುನಾಯಿತ ಸರ್ಕಾರಗಳ ಅಸ್ತಿತ್ವದ ಮೇಲೆ ಪ್ರಭಾವ ಬೀರಲು ತಮ್ಮ ಸ್ಥಾನಕ್ಕೆ ನೀಡುವ ‘ಕಾರ್ಯತಂತ್ರದ ರಾಜೀನಾಮೆ’ಗಳ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದೆ. ಚುನಾವಣಾ ಆಯೋಗ ಮತ್ತು ಕಾನೂನು ಆಯೋಗದ ಜೊತೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೂ ಪೀಠವು ನೋಟಿಸ್ ಜಾರಿ ಮಾಡಿದೆ.
ಸಂವಿಧಾನದ 10ನೇ ಪರಿಚ್ಛೇದದ ಶಿಸ್ತು ಕ್ರಮಗಳಿಂದ ಪಾರಾಗಲು ಸಂಸದರು ಮತ್ತು ಶಾಸಕರು ರಾಜೀನಾಮೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಅನರ್ಹತೆ ಪ್ರಕ್ರಿಯೆಯನ್ನು ಎದುರಿಸುತ್ತಿರುವ ಅಥವಾ ಅಂತಹ ಕ್ರಮದ ನಿರೀಕ್ಷೆಯಲ್ಲಿರುವ ಶಾಸಕರು, ಸ್ಪೀಕರ್ ಅಥವಾ ಸಭಾಪತಿಗಳು ಪ್ರಕರಣದ ಅರ್ಹತೆಯ ಆಧಾರದ ಮೇಲೆ ತೀರ್ಪು ನೀಡುವ ಮೊದಲೇ ತರಾತುರಿಯಲ್ಲಿ ರಾಜೀನಾಮೆ ನೀಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇಂತಹ ರಾಜೀನಾಮೆಗಳನ್ನು ರಾಜಕೀಯ ಮರುಹೊಂದಾಣಿಕೆಗೆ, ವಿಧಾನಸಭೆಯ ಸಂಖ್ಯಾಬಲವನ್ನು ಬದಲಾಯಿಸಲು ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಎದುರಾಗುವ ಕಾನೂನು ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ ಅಂದಿನ ಐತಿಹಾಸಿಕ ನಿಲುವುಗಳ ಅರಿವಿದೆಯೇ?
ಇದನ್ನು ತಡೆಯಲು ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕು. ರಾಜೀನಾಮೆಗಳು ಮತ್ತು ಅನರ್ಹತೆ ಅರ್ಜಿಗಳನ್ನು ಕಾಲಮಿತಿಯಲ್ಲಿ, ತರ್ಕಬದ್ಧವಾಗಿ ಮತ್ತು ಪಾರದರ್ಶಕವಾಗಿ ಇತ್ಯರ್ಥಪಡಿಸುವುದು, ಸ್ಪೀಕರ್ ಕೇಂದ್ರಿತ ತೀರ್ಪು ನೀಡುವ ವ್ಯವಸ್ಥೆಯ ಸಾಂಸ್ಥಿಕ ಪರಿಶೀಲನೆ ನಡೆಸುವುದು ಹಾಗೂ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಸಂವಿಧಾನದ 188ನೇ ವಿಧಿಯ ಅಡಿಯಲ್ಲಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸದನದ ಒಳಗಡೆಯೇ ಬಹುಮತ ಸಾಬೀತುಪಡಿಸಬೇಕೇ ಹೊರತು ಸದನದ ಹೊರಗಿನ ಬೆಂಬಲ ಪತ್ರಗಳು ಅಥವಾ ಪ್ರದರ್ಶನಗಳ ಮೂಲಕವಲ್ಲ ಎಂಬುದನ್ನು ಪುನರುಚ್ಚರಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಸಂವಿಧಾನದ 10ನೇ ಪರಿಚ್ಛೇದದ ಅಡಿಯಲ್ಲಿ ಅನರ್ಹತೆ ಪ್ರಕ್ರಿಯೆಗಳು ಬಾಕಿ ಇರುವಾಗ ಅಥವಾ ಅನರ್ಹತೆಯ ಭೀತಿ ಎದುರಾಗಿರುವ ಹಂತದಲ್ಲಿ ಸಂಸದರು ಅಥವಾ ಶಾಸಕರು ಸಲ್ಲಿಸುವ ರಾಜೀನಾಮೆಯು ತನ್ನಿಂದ ತಾನೇ ಆ ಅನರ್ಹತೆ ಪ್ರಕ್ರಿಯೆಯನ್ನು ಕೊನೆಗೊಳಿಸಬಾರದು ಅಥವಾ ನಿಷ್ಫಲಗೊಳಿಸಬಾರದು ಎಂದು ನ್ಯಾಯಾಲಯ ಘೋಷಿಸಬೇಕು. ಅಲ್ಲದೆ, ಸ್ಪೀಕರ್ ಅಥವಾ ಸಭಾಪತಿಗಳು ವಸ್ತುನಿಷ್ಠ ದಾಖಲೆಗಳ ಆಧಾರದ ಮೇಲೆ ರಾಜೀನಾಮೆಯು ಸ್ವಯಂಪ್ರೇರಿತವಾಗಿದೆಯೇ ಮತ್ತು ನೈಜವಾಗಿದೆಯೇ ಎಂಬುದನ್ನು ಪರಿಶೀಲಿಸಿ ಕಾರಣಸಹಿತ ಆದೇಶ ಹೊರಡಿಸಬೇಕು. ಬಾಕಿ ಇರುವ ಅನರ್ಹತೆ ಅರ್ಜಿಗಳನ್ನು ಸ್ವತಂತ್ರವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕೆಂದು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.


