ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ 16 ವಿದ್ಯಾರ್ಥಿಗಳಿಗೆ ಕೇರಳ ಹೈಕೋರ್ಟ್‌ನಿಂದ ದೊಡ್ಡ ಗೆಲುವು ಸಿಕ್ಕಿದೆ. ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾಲಯ ಕೈಗೊಂಡಿದ್ದ ಅಮಾನತು ಹಾಗೂ ಇತರ ಶಿಸ್ತು ಕ್ರಮಗಳನ್ನು ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ. ವಿವಿ ನಡೆಸಿದ ಆಂತರಿಕ ತನಿಖೆಯು ‘ನೈಸರ್ಗಿಕ ನ್ಯಾಯದ ತತ್ವಗಳಿಗೆ’ ವಿರುದ್ಧವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಚನಾ ಪಿ.ಎಸ್. ಮತ್ತು ಇತರ 15 ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರ ಏಕಸದಸ್ಯ ಪೀಠ, ವಿದ್ಯಾರ್ಥಿಗಳು ತಕ್ಷಣದಿಂದಲೇ ಕ್ಯಾಂಪಸ್ ಪ್ರವೇಶಿಸಲು ಮತ್ತು ತರಗತಿಗಳಿಗೆ ಹಾಜರಾಗಲು ಅನುವು ಮಾಡಿಕೊಡುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಅಮಾನತಿನಿಂದಾಗಿ ಪರೀಕ್ಷೆ ವಂಚಿತರಾದ 10 ವಿದ್ಯಾರ್ಥಿಗಳಿಗೆ ಆರು ವಾರಗಳ ಒಳಗಾಗಿ ಪ್ರತ್ಯೇಕ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಸುಪ್ರೀಂ ಕೋರ್ಟ್‌ಗೆ ವಿಶ್ವವಿದ್ಯಾಲಯವು ಈ ಹಿಂದೆ ನೀಡಿದ್ದ ಭರವಸೆಯನ್ನು ಗೌರವಿಸುವಂತೆ ನ್ಯಾಯಪೀಠ ಸೂಚಿಸಿದೆ. ಉಳಿದ ಆರು ಅರ್ಜಿದಾರರು ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಾಗಿದ್ದು, ಅವರಿಗೆ ಯಾವುದೇ ಪರೀಕ್ಷೆ ತಪ್ಪಿಹೋಗಿಲ್ಲ.
27 ಖಾಲಿ ಇರುವ ಉಪನ್ಯಾಸಕ ಹುದ್ದೆಗಳ ಭರ್ತಿ, ಮುದ್ರಿತ ಪ್ರಮಾಣಪತ್ರಗಳ ವಿತರಣೆಯಲ್ಲಿ ವಿಳಂಬ, ಮೂಲಸೌಕರ್ಯಗಳ ಕೊರತೆ ಹಾಗೂ ಫೆಲೋಶಿಪ್ ವಿಳಂಬ ಸೇರಿದಂತೆ ದೀರ್ಘಕಾಲದ ಬೇಡಿಕೆಗಳ ಕುರಿತು ಕುಲಪತಿಗಳನ್ನು ಭೇಟಿಯಾಗಲು ಆಗಸ್ಟ್ 13, ರಂದು ಸಿಂಡಿಕೇಟ್ ಸಭೆಯ ವೇಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಭಾಗವಾಗಿ ಕುಲಪತಿಗಳ ಅಣಕು ಶವಯಾತ್ರೆ ನಡೆಸಲಾಗಿದೆ ಮತ್ತು ಕಚೇರಿಯಿಂದ ಹೊರಬರುತ್ತಿದ್ದ ಕುಲಪತಿಗಳನ್ನು ತಡೆದು ಹಲ್ಲೆ ನಡೆಸಲಾಗಿದೆ ಎಂಬ ಆರೋಪ ವಿದ್ಯಾರ್ಥಿಗಳ ಮೇಲಿತ್ತು. ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆದು, ಕಾಲಡಿ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದವು. ಇದರ ಬೆನ್ನಲ್ಲೇ ಸೆಪ್ಟೆಂಬರ್ 1ರಂದು ವಿಶ್ವವಿದ್ಯಾಲಯವು 16 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಂಡಿತ್ತು.
ತಮ್ಮ ಅಮಾನತು ಹಾಗೂ ಪರೀಕ್ಷೆಗೆ ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಕ್ಟೋಬರ್ 30ರಂದು ನ್ಯಾಯಮೂರ್ತಿ ಕುಂಞಿಕೃಷ್ಣನ್ ಅವರು ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಪರೀಕ್ಷೆ ಬರೆಯಲು ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದ್ದರು. ಆದರೆ, ವಿದ್ಯಾರ್ಥಿಗಳು ನಿಗದಿತ ಗಡುವಿನೊಳಗೆ ಅರ್ಜಿ ಸಲ್ಲಿಸಿಲ್ಲ ಹಾಗೂ ಕಡ್ಡಾಯ ಹಾಜರಾತಿ ಹೊಂದಿಲ್ಲ ಎಂಬ ವಿಶ್ವವಿದ್ಯಾಲಯದ ಮೇಲ್ಮನವಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠವು ನವೆಂಬರ್ 3ರಂದು ಈ ಮಧ್ಯಂತರ ಆದೇಶವನ್ನು ರದ್ದುಗೊಳಿಸಿತ್ತು. ನವೆಂಬರ್ 5ರಂದು ಸುಪ್ರೀಂ ಕೋರ್ಟ್ ಸಹ ವಿಭಾಗೀಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತಾದರೂ, ಅಮಾನತು ಪ್ರಶ್ನಿಸಿರುವ ಮೂಲ ಅರ್ಜಿಯನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಏಕಸದಸ್ಯ ಪೀಠಕ್ಕೆ ನಿರ್ದೇಶಿಸಿತ್ತು.
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಕುಂಞಿಕೃಷ್ಣನ್ ಅವರು ವಿಶ್ವವಿದ್ಯಾಲಯದ ತನಿಖಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳನ್ನು ಎತ್ತಿ ತೋರಿಸಿದರು.
ಅಮಾನತು ಆದೇಶದಲ್ಲಾಗಲಿ ಅಥವಾ ವಿಚಾರಣಾ ನೋಟಿಸ್‌ನಲ್ಲಾಗಲಿ ವಿದ್ಯಾರ್ಥಿಗಳ ಮೇಲಿರುವ ನಿರ್ದಿಷ್ಟ ಆರೋಪಗಳೇನು ಎಂಬುದನ್ನು ತಿಳಿಸಿರಲಿಲ್ಲ.
ಕುಲಪತಿಗಳ ಆನ್‌ಲೈನ್ ಹೇಳಿಕೆ ಸೇರಿದಂತೆ ಸಾಕ್ಷಿಗಳ ಹೇಳಿಕೆಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತರದೆ ದಾಖಲಿಸಿಕೊಳ್ಳಲಾಗಿದೆ. ದೂರಿನ ಪ್ರತಿಗಳನ್ನು ನೀಡದೆ ಮತ್ತು ಸಾಕ್ಷಿಗಳನ್ನು ಮರು ವಿಚಾರಣೆ ಮಾಡಲು ಅವಕಾಶ ನೀಡದೆ ತನಿಖೆ ನಡೆಸಲಾಗಿದೆ.
ಆಗಸ್ಟ್ 13ರ ಘಟನೆಯ ತನಿಖೆಗೆ ಮಾತ್ರ ರಚನೆಯಾಗಿದ್ದ ಸಿಂಡಿಕೇಟ್ ಸಮಿತಿಯು, ತನ್ನ ವ್ಯಾಪ್ತಿ ಮೀರಿ ವಿದ್ಯಾರ್ಥಿಗಳ ಹಳೆಯ ದೂರುಗಳು ಮತ್ತು ಹಿನ್ನೆಲೆಯನ್ನು ರಹಸ್ಯವಾಗಿ ಪರಿಗಣಿಸಿದೆ. ಅಲ್ಲದೆ, ತನಿಖಾ ವರದಿಯು ಸಾಕ್ಷ್ಯಾಧಾರಗಳನ್ನು ಚರ್ಚಿಸದೆ ನೇರವಾಗಿ ತೀರ್ಮಾನಕ್ಕೆ ಬಂದಿದೆ.
ವಿದ್ಯಾರ್ಥಿಗಳು ಕುಂದುಕೊರತೆ ನಿವಾರಣಾ ಸಮಿತಿಯ ಮೊರೆ ಹೋಗಬಹುದಿತ್ತು ಎಂಬ ವಿವಿಯ ವಾದವನ್ನು ತಿರಸ್ಕರಿಸಿದ ಕೋರ್ಟ್, ಈ ಎರಡೂ ಸಂಸ್ಥೆಗಳನ್ನು ವಿಶ್ವವಿದ್ಯಾಲಯವೇ ನೇಮಿಸುವುದರಿಂದ ಹಾಗೂ ಕುಲಪತಿಗಳೇ ಇಲ್ಲಿ ದೂರುದಾರರಾಗಿರುವುದರಿಂದ, ಅದು ‘ಸೀಸರ್‌ನಿಂದ ಸೀಸರ್‌ನ ಪತ್ನಿಗೆ ಮೇಲ್ಮನವಿ ಸಲ್ಲಿಸಿದಂತಾಗುತ್ತದೆ’ ಎಂದು ಮಾರ್ಮಿಕವಾಗಿ ನುಡಿಯಿತು.
ಕಾನೂನುಬದ್ಧವಾಗಿ ಹೊಸ ತನಿಖೆ ನಡೆಸಲು ವಿಶ್ವವಿದ್ಯಾಲಯಕ್ಕೆ ಸ್ವಾತಂತ್ರ್ಯ ನೀಡಿದ ನ್ಯಾಯಪೀಠ, ವಿದ್ಯಾರ್ಥಿಗಳು ಈಗಾಗಲೇ 84 ದಿನಗಳ ಅಮಾನತು ಶಿಕ್ಷೆ ಅನುಭವಿಸಿರುವುದರಿಂದ ತನಿಖೆಯ ನೆಪದಲ್ಲಿ ಮತ್ತೆ ಅವರನ್ನು ಅಮಾನತುಗೊಳಿಸಬಾರದು ಎಂದು ತಾಕೀತು ಮಾಡಿತು.
ಫ್ರೆಂಚ್ ತತ್ವಜ್ಞಾನಿ ವೋಲ್ಟೇರ್ ಅವರ “ನೀವು ಹೇಳುವುದನ್ನು ನಾನು ಒಪ್ಪದಿರಬಹುದು, ಆದರೆ ಅದನ್ನು ಹೇಳುವ ನಿಮ್ಮ ಹಕ್ಕನ್ನು ನಾನು ಸಾಯುವವರೆಗೂ ರಕ್ಷಿಸುತ್ತೇನೆ” ಎಂಬ ಮಾತನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಹಾಳುಮಾಡುವ ಬದಲು ಕ್ಷಮಾಗುಣ ತೋರುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಪ್ರತಿಭಟನೆಗಳನ್ನು ಮುತ್ಸದ್ದಿತನದಿಂದ ನಿಭಾಯಿಸಿದ ಮೂರು ಐತಿಹಾಸಿಕ ನಿದರ್ಶನಗಳನ್ನು ನ್ಯಾಯಾಲಯ ಇದೇ ವೇಳೆ ಸ್ಮರಿಸಿತು. ಜೆಎನ್‌ಯು (JNU) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬಗ್ಗೆ ಉದಾರತೆ ತೋರುವಂತೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೀಡಿದ್ದ ಸಲಹೆ. ಜಂತರ್ ಮಂತರ್ ಪ್ರತಿಭಟನಾಕಾರರ ವಿಚಾರದಲ್ಲಿ ನ್ಯಾಯಾಲಯದ ಕದ ತಟ್ಟುವ ಬದಲು ಕ್ಷಮಿಸುವುದೇ ಲೇಸು ಎಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋದಲ್ಲಿ ಆಡಿದ್ದ ಮಾತುಗಳು. ಕೊಟ್ಟಾಯಂನಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಕೇಸು ದಾಖಲಿಸಲು ನಿರಾಕರಿಸಿ, ಮರುದಿನವೇ ಅವರ ಸಮಸ್ಯೆಗಳನ್ನು ಬಗೆಹರಿಸಿದ್ದ ಮಾಜಿ ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದಿರಿಪಾಡ್ ಅವರ ನಡೆ.
“ಕ್ಷಮೆ ಎಂಬುದು ಪಾಪವಲ್ಲ, ಅದು ಮಾನವ ಘನತೆಯ ದ್ಯೋತಕವಾಗಿದೆ” ಎಂಬ ಕಿವಿಮಾತಿನೊಂದಿಗೆ ನ್ಯಾಯಾಲಯ ತೀರ್ಪನ್ನು ಮುಕ್ತಾಯಗೊಳಿಸಿತು. ವಿಚಾರಣೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ಹಿರಿಯ ವಕೀಲರಾದ ಟಿ.ಎ. ಶಾಜಿ, ಕೆ. ಗೋಪಾಲಕೃಷ್ಣ ಕುರುಪ್ ಹಾಗೂ ವಕೀಲರಾದ ಪಿ.ಜಿ. ಪ್ರಮೋದ್ ಮತ್ತು ನಾದಿಯಾ ಕೆ.ಎಂ. ವಾದ ಮಂಡಿಸಿದ್ದರು. ವಿಶ್ವವಿದ್ಯಾಲಯದ ಪರವಾಗಿ ಹಿರಿಯ ವಕೀಲ ಜಾರ್ಜ್ ಪೂಂತೋಟ್ಟಂ ಮತ್ತು ವಕೀಲೆ ಶಿಲ್ಪಾ ಶ್ರೀಕುಮಾರ್ ಹಾಜರಾಗಿದ್ದರು.



