ಹಾಸನ | ಆರ್.ಡಿ ವೀರಪ್ಪ ಸಾವು ನಿರ್ಲಕ್ಷ್ಯ: ಡಿ. 3ರಂದು ಬೃಹತ್ ಹೋರಾಟ; ಎಸ್.ಪಿ ಕಛೇರಿ ಮುತ್ತಿಗೆ

Date:

ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಮತ್ತು ಪ್ರಕರಣವನ್ನು ಕೂಡಲೇ ಸಿ.ಐ.ಡಿ. ತನಿಖೆಗೆ ವಹಿಸಲು ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಒಕ್ಕೂಟಗಳ ಆಗ್ರಹ; ಅಂಗವಿಕಲ ಸಹೋದರನ ಕುಟುಂಬಕ್ಕೆ ಪೊಲೀಸ್ ಕಿರುಕುಳ ಆರೋಪ

- Advertisement -

ಕೆ.ಎಸ್.ಆರ್.ಟಿ.ಸಿ ಚಾಲಕ, ಕಾರ್ಮಿಕ ಸಂಘದ ನಾಯಕ ಹಾಗೂ ದಲಿತ ಚಳವಳಿಯ ಸಕ್ರಿಯ ಮುಖಂಡ ಆರ್.ಡಿ. ವೀರಪ್ಪ (57), ಭೀಕರ ಹಾಗೂ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ವೈಫಲ್ಯವನ್ನು ಖಂಡಿಸಿ, ಡಿಸೆಂಬರ್ 3, ಗುರುವಾರ ಬೆಳಗ್ಗೆ 10 ಗಂಟೆಗೆ ಆಲೂರು ತಾಲ್ಲೂಕಿನ ರಾಜನಹಳ್ಳಿಯಲ್ಲಿರುವ ವೀರಪ್ಪ ಅವರ ಜಮೀನಿನಿಂದ ಹಾಸನದ ಎಸ್.ಪಿ. ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ‘ದಲಿತ ಸಂಘಟನೆಗಳ ಒಕ್ಕೂಟ, ಹಾಸನ ಜಿಲ್ಲೆ’ ಹಾಗೂ ‘ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ’ ನಗರದಲ್ಲಿ ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿರುಪತಿ ಕೇಶಮುಂಡನ : ಭಕ್ತರ ನಂಬಿಕೆಯೂ, ಕೋಟ್ಯಂತರ ರೂಪಾಯಿ...

ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ಉದ್ದಿಮೆಗಳಿಗೆ ಮೂಲ ಬಂಡವಾಳವಾಗಿದೆ. ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅದು ಭಕ್ತಿಯ ರೂಪವನ್ನೂ ಪಡೆದುಕೊಂಡಿದೆ. ಅದಕ್ಕೆ ಉದಾಹರಣೆಯೆಂದರೆ...

“ನಾನು ಬಿಜೆಪಿಯ ಗುಲಾಮನಲ್ಲ, ಅಂಬೇಡ್ಕರ್‌ವಾದಿ”- ರಾಮದಾಸ್‌ ಅಠಾವಳೆ ಹೇಳಿಕೆಯ...

ತಾವು ಬಿಜೆಪಿಯ ಸದಸ್ಯರಲ್ಲ, ಕೇವಲ ಅಂಬೇಡ್ಕರ್‌ವಾದಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಸ್ಪಂದಿಸದ ಕಾರಣಕ್ಕೆ ಎನ್‌ಡಿಎ ಸೇರಿದೆ ಎನ್ನುತ್ತಾರೆ...

ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ...

ಹಳೇ ಮೈಸೂರು ಕಾಡು ಪ್ರಾಣಿಗಳ ಆವಾಸಸ್ಥಾನ. ಆದರೆ, ಇಂದು ಆ ಕಾಡಿನಂಚಿನಲ್ಲಿ ಬದುಕುತ್ತಿರುವ ಮನುಷ್ಯರಿಗೂ ಕಾಡಿನೊಳಗಿನ ವನ್ಯಜೀವಿಗಳಿಗೂ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆಹಾರ ಮತ್ತು ನೀರು ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆ,...

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಹಿರಿಯ ದಲಿತ ಮುಖಂಡ ಹೆಚ್.ಕೆ. ಸಂದೇಶ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಭೀಮ್ ಆರ್ಮಿಯ ಪ್ರಸನ್ನ ಹೊಸೂರು ಹಾಗೂ ಹಿರಿಯ ದಲಿತ ಮುಖಂಡ ಹುಲಿಕಲ್ ರಾಜಶೇಖರ್ ಮಾಸ್ಟರ್ ಅವರು ಪೊಲೀಸ್ ಇಲಾಖೆಯ ತನಿಖಾ ವೈಖರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ಹಿನ್ನೆಲೆ ಮತ್ತು ನಿರ್ಲಕ್ಷಿಸಲ್ಪಟ್ಟ ದೂರುಗಳು:ಕರ್ನಾಟಕ ರಾಜ್ಯದ ದಲಿತ ಚಳವಳಿಯ ಸಂಸ್ಥಾಪಕರಲ್ಲೊಬ್ಬರಾದ ದಂತಕಥೆ ಬಿ.ವಿ. ಚಂದ್ರಪ್ರಸಾದ್ ತ್ಯಾಗಿ ಅವರ ಮಗಳ ಗಂಡನಾದ ಆರ್.ಡಿ. ವೀರಪ್ಪ ಅವರು ಬಸವಣ್ಣ ಹಾಗೂ ಬುದ್ಧನ ಆಶಯಗಳೊಂದಿಗೆ ದಲಿತ ಮತ್ತು ಕಾರ್ಮಿಕ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಪ್ರಗತಿಪರ ನಾಯಕರಾಗಿದ್ದರು. 2026ರ ಫೆಬ್ರವರಿ 17ರಂದು ನ್ಯಾಯಾಲಯದ ಕಲಾಪ ಮುಗಿಸಿ ತಮ್ಮ ಊರಾದ ಆಲೂರು ತಾಲ್ಲೂಕಿನ ರಾಜನಹಳ್ಳಿಗೆ ತೆರಳಿದ್ದ ವೀರಪ್ಪ ಅವರು ಮಧ್ಯಾಹ್ನ 2:30 ರಿಂದ 3:00 ಗಂಟೆಯವರೆಗೂ ಜೀವಂತವಾಗಿದ್ದು, ಅವರ ಮೊಬೈಲ್ ಫೋನ್ ಸಕ್ರಿಯವಾಗಿತ್ತು. ಆದರೆ ಸಂಜೆ 5:00 ರಿಂದ 5:30ರ ಸುಮಾರಿಗೆ ರಾಜನಹಳ್ಳಿಯಲ್ಲಿರುವ ಅವರ ಜಮೀನಿನ ಕಲ್ಲುಮಂಟಿಯಲ್ಲಿ (ಹುಲ್ಲುಗಾವಲು ಪ್ರದೇಶ) ಶೇ. 80 ರಿಂದ 90ರಷ್ಟು ಸುಟ್ಟು ಕರಕಲಾದ ಭೀಕರ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಬೆಂಕಿಯ ತೀವ್ರತೆಗೆ ಅಲ್ಲಿದ್ದ 30 ಅಡಿ ಎತ್ತರದ ತೆಂಗಿನ ಮರದ ಗರಿಗಳೂ ಸುಟ್ಟು ಹೋಗಿದ್ದವು. ಘಟನೆಗೂ ಮುನ್ನ ವೀರಪ್ಪ ಅವರಿಗೆ ಬಂದಿದ್ದ ಬೆದರಿಕೆಗಳು, ಜಮೀನು ವಿವಾದ, ಹಿಂದಿನ ಗಲಾಟೆಗಳು, ಹಲ್ಲೆ ಹಾಗೂ ಅಕ್ರಮ ಮಣ್ಣು ಸಾಗಾಟಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುಟುಂಬಸ್ಥರು ಆರಂಭದಿಂದಲೂ ಪೊಲೀಸರ ಗಮನಕ್ಕೆ ತಂದಿದ್ದಾರೆ. ಆದರೆ ಪೊಲೀಸರು ಈ ಯಾವ ಅಂಶಗಳನ್ನೂ ಸಮಗ್ರವಾಗಿ ಪರಿಶೀಲಿಸಿಲ್ಲ ಎಂದು ಸಂಘಟಕರು ಆರೋಪಿಸಿದ್ದಾರೆ.

ಆಕಸ್ಮಿಕ ಸಾವು’ ಎಂದು ಬಿಂಬಿಸುತ್ತಿರುವ ಪೊಲೀಸರ ಧೋರಣೆಗೆ ಆಕ್ಷೇಪ: ಈ ಘಟನೆ ನಡೆದು 9 ತಿಂಗಳು ಕಳೆದರೂ, ತನಿಖಾಧಿಕಾರಿಗಳು ಬದಲಾಗಿದ್ದರೂ ಪ್ರಕರಣದಲ್ಲಿ ಯಾವುದೇ ನಿರ್ಣಾಯಕ ಪ್ರಗತಿ ಕಂಡುಬಂದಿಲ್ಲ. ಯಾವುದೇ ಪೆಟ್ರೋಲ್, ಡೀಸೆಲ್ ಅಥವಾ ಆಯುಧ ಬಳಕೆಯಾಗಿಲ್ಲ ಎನ್ನುತ್ತಿರುವ ಪೊಲೀಸರು, ವೈಜ್ಞಾನಿಕ ತನಿಖೆ ನಡೆಸದೆ ಪ್ರಕರಣವನ್ನು ‘ಸ್ವಾಭಾವಿಕ ಅಥವಾ ಆಕಸ್ಮಿಕ ಸಾವು’ ಎಂದು ಬಿಂಬಿಸಿ ‘ಬಿ ರಿಪೋರ್ಟ್’ ಹಾಕಲು ಹೊರಟಿದ್ದಾರೆ ಎಂದು ಮುಖಂಡರು ಕಿಡಿಕಾರಿದರು.

“ಒಂದು ಮೃತದೇಹವನ್ನು ಸುಡಲು ಒಂದು ಗಾಡಿ ಸೌದೆ, ಟೈರ್ ಹಾಗೂ ಇಂಧನ ಬಳಸಿದರೂ ಅರ್ಧ ದಿನ ಬೇಕಾಗುತ್ತದೆ. ಹೀಗಿರುವಾಗ ದೈಹಿಕವಾಗಿ ಅತ್ಯಂತ ಸದೃಢವಾಗಿದ್ದ 57 ವರ್ಷದ ವ್ಯಕ್ತಿಯ ದೇಹ ಬಯಲು ಪ್ರದೇಶದಲ್ಲಿ ಕೇವಲ 5-10 ಮಂಕರಿ ಹಳ್ಳುಜೋಳದ ದಿಂಡಿನಿಂದ ಎರಡೂವರೆ ಗಂಟೆಯಲ್ಲಿ ಶೇ. 90ರಷ್ಟು ಸುಟ್ಟು ಕರಕಲಾಗಲು ಹೇಗೆ ಸಾಧ್ಯ? ಪೊಲೀಸರಿಗೆ ತಾಕತ್ತಿದ್ದರೆ ಇದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಲಿ” ಎಂದು ಮುಖಂಡರು ಸವಾಲು ಹಾಕಿದರು.

ತನಿಖೆ ದಿಕ್ಕು ತಪ್ಪಿಸಿ, ಅಂಗವಿಕಲ ಸಹೋದರನ ಕುಟುಂಬಕ್ಕೆ ಕಿರುಕುಳ: ಒಕ್ಕೂಟದ ಮುಖಂಡರು ಸೂಚಿಸಿದ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸದೆ, ಅವರ ಮೊಬೈಲ್ ಕರೆಗಳ ವಿವರ (CDR) ಹಾಗೂ ಟವರ್ ಲೊಕೇಶನ್ ಪರಿಶೀಲಿಸದೆ ಜಾತಿ ಪ್ರಭಾವಕ್ಕೆ ಮಣಿದು ತನಿಖೆಯ ದಿಕ್ಕು ತಪ್ಪಿಸಲಾಗಿದೆ. ಆರಂಭದ ತನಿಖಾಧಿಕಾರಿ ಆಲೂರು ಸಿ.ಪಿ.ಐ. ಮೋಹನ್ ರೆಡ್ಡಿ ಹಾಗೂ ನಂತರ ಬಂದ ಸಕಲೇಶಪುರ ಡಿ.ವೈ.ಎಸ್.ಪಿ. ಮಹಾಂತೇಶ್ ಅವರು ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಪ್ರಕರಣದ ಮೂರನೇ ಆರೋಪಿ ಹರೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವೇ ತಿರಸ್ಕರಿಸಿದ್ದರೂ, ಆತನಿಗೆ ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ನಡೆಸುವುದಾಗಿ ಹೇಳಿ ನಾಲ್ಕು ತಿಂಗಳಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ.

ಇದಕ್ಕೆ ವಿರುದ್ಧವಾಗಿ, ಪ್ರಕರಣದ ದೂರುದಾರರಾದ ವೀರಪ್ಪ ಅವರ ಹಿರಿಯಣ್ಣ, ಎರಡೂ ಕಾಲುಗಳಿಲ್ಲದ ಅಂಗವಿಕಲ ನಂಜಯ್ಯ ಹಾಗೂ ಅವರ ಪತ್ನಿ ಮತ್ತು ಮಗನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. “ನೀನೇ ಈ ಕೊಲೆ ಮಾಡಿರುವುದಾಗಿ ಒಪ್ಪಿಕೊ” ಎಂದು ಬೆದರಿಸಿ, 5-6 ಖಾಲಿ ಹಾಳೆಗಳ ಮೇಲೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾರೆ. ಅಮಾಯಕರನ್ನು ಸಿಲುಕಿಸಿ ನೈಜ ಕೊಲೆಗಡುಕರನ್ನು ರಕ್ಷಿಸುವ ಹುನ್ನಾರ ಇದರ ಹಿಂದಿದೆ ಎಂದು ಮುಖಂಡರು ಆರೋಪಿಸಿದರು.

ಎಸ್.ಪಿ.ದರ್ಪ ಹಾಗೂ ಸಚಿವರ ನಿರ್ಲಕ್ಷ್ಯಕ್ಕೆ ಆಕ್ರೋಶ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಲಿತರ ಸಮಸ್ಯೆಗಳನ್ನು ಕೇಳುವ ತಾಳ್ಮೆ ಹೊಂದಿಲ್ಲ; ನಿಯೋಗ ಭೇಟಿಯಾದಾಗ ದರ್ಪದಿಂದ ವರ್ತಿಸುತ್ತಾರೆ. 9 ತಿಂಗಳಾದರೂ ಇಲಾಖೆಯಿಂದ ಒಂದೇ ಒಂದು ಅಧಿಕೃತ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿಲ್ಲ. ಇನ್ನು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಸಾವು ಸಂಭವಿಸಿದ ತಕ್ಷಣ ಸ್ಥಳಕ್ಕೆ ದೌಡಾಯಿಸುವ ಅಬಕಾರಿ ಸಚಿವ ಶಿವಲಿಂಗೇಗೌಡರು, ದಲಿತ ಮುಖಂಡನ ಹತ್ಯೆಯ ಬಗ್ಗೆ ಐ.ಬಿ.ಯಲ್ಲಿ ಖುದ್ದು ಮನವಿ ಮಾಡಿದರೂ “ನನ್ನ ಗಮನದಲ್ಲಿಲ್ಲ” ಎಂದು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಸಚಿವರು ತಕ್ಷಣ ಮಧ್ಯಪ್ರವೇಶಿಸದಿದ್ದರೆ ಅವರ ವಿರುದ್ಧವೂ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಒಕ್ಕೂಟಗಳ 5 ಪ್ರಮುಖ ಆಗ್ರಹಗಳು: ಸಿ.ಐ.ಡಿ. ತನಿಖೆಗೆ ವಹಿಸಿ: ಆರ್.ಡಿ. ವೀರಪ್ಪ ಅವರ ಅನುಮಾನಾಸ್ಪದ ಸಾವಿನ (ಹತ್ಯೆಯ) ಪ್ರಕರಣವನ್ನು ಸರ್ಕಾರ ಕೂಡಲೇ ಸಿ.ಐ.ಡಿ. (CID) ತನಿಖೆಗೆ ವಹಿಸಬೇಕು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ವೈಜ್ಞಾನಿಕ ತನಿಖೆ ನಡೆಸಬೇಕು.

ವೈಜ್ಞಾನಿಕ ಸಾಕ್ಷ್ಯಗಳ ಪರಿಶೀಲನೆ: ಮರಣೋತ್ತರ ಪರೀಕ್ಷಾ ವರದಿ, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ, ಘಟನಾ ಸ್ಥಳದ ಸಾಕ್ಷ್ಯಗಳು, ಕುಟುಂಬದವರ ದೂರುಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು.

ತನಿಖಾ ಲೋಪಗಳ ತನಿಖೆ: ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್.ಪಿ.), ಸಕಲೇಶಪುರ ಡಿ.ವೈ.ಎಸ್.ಪಿ. ಹಾಗೂ ಆಲೂರು ವೃತ್ತ ನಿರೀಕ್ಷಕರು ಈವರೆಗೆ ನಡೆಸಿದ ತನಿಖೆಯಲ್ಲಿನ ಲೋಪಗಳು ಮತ್ತು ನಿರ್ಲಕ್ಷ್ಯದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು.

ಪೊಲೀಸ್ ದೌರ್ಜನ್ಯದ ವಿರುದ್ಧ ಕ್ರಮ: ವೀರಪ್ಪ ಅವರ ಹತ್ಯೆಯ ನಿಖರ ಕಾರಣವನ್ನು ಬಹಿರಂಗಪಡಿಸಬೇಕು. ಅಮಾಯಕ ಅಂಗವಿಕಲ ಸಹೋದರ ನಂಜಯ್ಯ ಮತ್ತು ಅವರ ಕುಟುಂಬದ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ಹಾಗೂ ಖಾಲಿ ಹಾಳೆಗೆ ಸಹಿ ಪಡೆದ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಕುಟುಂಬದ ಅನುಮಾನಗಳಿಗೆ ಉತ್ತರಿಸಿ: ವೀರಪ್ಪ ಅವರ ಕುಟುಂಬದವರು ಆರಂಭದಿಂದಲೂ ವ್ಯಕ್ತಪಡಿಸುತ್ತಿರುವ ಎಲ್ಲಾ ಅನುಮಾನಗಳಿಗೆ ಪೊಲೀಸ್ ಇಲಾಖೆ ಸಮರ್ಪಕ ಉತ್ತರ ನೀಡಬೇಕು.

ಹೋರಾಟಕ್ಕೆ ಕರೆ: ರಾಜ್ಯದ ಅಸಂಖ್ಯಾತ ದಲಿತರು, ಶೋಷಿತರಿಗೆ ನ್ಯಾಯ ಕೊಡಿಸಿದ ಬಿ.ವಿ. ಚಂದ್ರಪ್ರಸಾದ್ ತ್ಯಾಗಿ ಅವರ ಕುಟುಂಬಕ್ಕೇ ನ್ಯಾಯ ಸಿಗದಿದ್ದರೆ ಸಾಮಾನ್ಯ ಜನರಿಗೆ ನ್ಯಾಯ ಮರೀಚಿಕೆಯಾಗಲಿದೆ. ಆದ್ದರಿಂದ ಡಿಸೆಂಬರ್ 3, ಗುರುವಾರ ಬೆಳಗ್ಗೆ 10 ಗಂಟೆಗೆ ಆಲೂರು ತಾಲ್ಲೂಕಿನ ರಾಜನಹಳ್ಳಿಯಿಂದ ಹಾಸನದ ಎಸ್.ಪಿ. ಕಚೇರಿಯವರೆಗೆ ನಡೆಯಲಿರುವ ಪಾದಯಾತ್ರೆ ಮತ್ತು ಎಸ್.ಪಿ. ಕಚೇರಿ ಮುತ್ತಿಗೆ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ದಲಿತ, ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಒಕ್ಕೂಟಗಳು ಮನವಿ ಮಾಡಿವೆ.

ಇದ್ನನ್ನು ಓದಿದ್ದೀರಾ?ಹಾಸನ | ಎಚ್.ಡಿ. ರೇವಣ್ಣ, ನಿಶ್ಚಲಾನಂದನಾಥ ಸ್ವಾಮಿಗೆ ತಿರುಗೇಟು

ಈ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ರಮೇಶ್ ಸಾತೇನಹಳ್ಳಿ, ಜಿಲ್ಲಾ ಸಂಚಾಲಕ ಅರೆಹಳ್ಳಿ ನಿಂಗರಾಜ್, ಕೆ.ಪಿ.ಎಸ್.ಎಸ್.ನ ಜಗದೀಶ್ ಸಿದ್ದಯ್ಯ, ಜೈ ಭೀಮ್ ಬ್ರಿಗೇಡ್‌ನ ರಾಜೇಶ್, ಟಿ.ಆರ್. ವಿಜಯಕುಮಾರ್, ಪ್ರದೀಪ್, ಅಬ್ದುಲ್ ಸಮದ್, ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಸೇರಿದಂತೆ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ : ಮುಖ್ಯ ಶಿಕ್ಷಕಿ ಜ್ಯೋತಿ ಎನ್

ಭದ್ರಾವತಿ, ಹಳೆ ನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭದ್ರಾವತಿ ತಾಲ್ಲೂಕು...

ಬೆಂಗಳೂರು | ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ನಡೆದ ‘ಸ್ಮ್ಯಾಷ್ ಫೆಸ್ಟ್’ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿ

ಯುವಜನರಲ್ಲಿ ಕ್ರೀಡಾ ಸ್ಫೂರ್ತಿ ಮತ್ತು ದೈಹಿಕ ಕ್ಷಮತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 'ಸೋಲಿಡಾರಿಟಿ...

ಹಾಸನ | ತರಕಾರಿ ಮಾರುಕಟ್ಟೆ: ಸ್ಥಳಾಂತರಿಸುವ ಪ್ರಕ್ರಿಯೆ ಸಂಪೂರ್ಣ; ಸಚಿವ ಕೆ.ಎಂ. ಶಿವಲಿಂಗೇಗೌಡ

ಅರಸೀಕೆರೆ ನಗರದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ನೂತನವಾಗಿ ನಿರ್ಮಿಸಿರುವ ಮಾರುಕಟ್ಟೆ ಸಂಕೀರ್ಣಕ್ಕೆ ಸ್ಥಳಾಂತರಿಸುವ...

ಮಂಗಳೂರು | ಗ್ಯಾರಂಟಿ ಯೋಜನೆ; ಬಿಜೆಪಿಗರ ಹೇಳಿಕೆ ಬಾಲಿಶತನದ್ದು: ಮಂಜುನಾಥ ಭಂಡಾರಿ

"ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಕುರಿತು ಉಡುಪಿ ಜಿಲ್ಲಾ ಬಿಜೆಪಿ ಶಾಸಕರ...