ಸಿನಿಮಾದಲ್ಲಿ ಪ್ರೀತಿಯಿದೆ, ವಿರಹವಿದೆ, ತ್ಯಾಗವಿದೆ, ತಪ್ಪು ತಿಳಿವಳಿಕೆಯಿದೆ, ಕ್ಷಮೆಯೂ ಇದೆ. ಹಳ್ಳಿಯ ಹಸಿರು, ಹೊಲಗದ್ದೆಗಳು, ಪ್ರಸನ್ನ ಅವರ ಛಾಯಾಗ್ರಹಣದ ಸೌಂದರ್ಯ, ಮನಸ್ಸಿಗೆ ಮುದ ನೀಡುವ ಹಾಡುಗಳು ಹಾಗೂ ನಟರಾದ ಶ್ರೀರಾಮ್, ತಪಸ್ವಿನಿ, ರಮಿಕಾ ಮತ್ತು ರಂಗಾಯಣ ರಘು ಅವರ ಅಭಿನಯ ಪ್ರೇಕ್ಷಕರನ್ನು ಸೆಳೆಯುತ್ತವೆ. ಆದರೆ ಸಿನಿಮಾ ನೋಡುವಾಗ ಕಾಡುವುದು ಅದರ ಕಲಾತ್ಮಕ ಗುಣಮಟ್ಟದ ಪ್ರಶ್ನೆಯಲ್ಲ. ಈ ಎಲ್ಲ ಕಲಾತ್ಮಕ ಅಂಶಗಳನ್ನು ಬಳಸಿಕೊಂಡು ಯಾವ ಮೌಲ್ಯಗಳನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತಿದೆ ಎನ್ನುವುದು.
ಇಂದಿನ ಅತಿಯಾದ ಹಿಂಸೆ ಮತ್ತು ಅಬ್ಬರದ ಸಿನಿಮಾಗಳ ನಡುವೆ ‘ಸಂಬಂಧಗಳ ಮೌಲ್ಯಗಳನ್ನು ಸಾರುವ ದೇಶಿ ಕೌಟುಂಬಿಕ ಚಿತ್ರ’ ಎಂದೂ, ‘ಕುಸಿಯುತ್ತಿರುವ ಬಾಂಧವ್ಯಗಳಿಗೆ ಮದ್ದು’ ಎಂದೂ ‘ಪ್ರೇಮದ ಊರಲಿ’ ಸಿನಿಮಾವನ್ನು ಸಂಭ್ರಮಿಸಲಾಗುತ್ತಿದೆ. ಆದರೆ ಈ ಸಿನಿಮಾ ಎತ್ತಿಹಿಡಿಯುತ್ತಿರುವ ಮೌಲ್ಯಗಳ ಕಲಾತ್ಮಕ ಸೌಂದರ್ಯದ ಹಿಂದೆ ಏನಿದೆ?
ಪ್ರೀತಿ ಮತ್ತು ಸಂಬಂಧಗಳಲ್ಲಿ ನಂಬಿಕೆ ಬಹಳ ಮುಖ್ಯ. ಆದರೆ ನಂಬಿಕೆ ಎಂದರೆ ಪ್ರಶ್ನಿಸದೆ ಒಪ್ಪಿಕೊಳ್ಳುವುದಲ್ಲ. ಅನುಮಾನ ಮೂಡಿದಾಗ ಅದರ ಸತ್ಯಾಸತ್ಯತೆಯನ್ನು ಅರಿಯುವ ಬದಲು ಒಬ್ಬರ ವ್ಯಕ್ತಿತ್ವವನ್ನೇ ಪ್ರಶ್ನಿಸುವುದು ಸಂಬಂಧಗಳಲ್ಲಿನ ಅಧಿಕಾರದ ಅಸಮಾನತೆಯನ್ನು ತೋರಿಸುತ್ತದೆ. ‘ಪ್ರೇಮದ ಊರಲಿ’ ಸಿನಿಮಾ ನಂಬಿಕೆಯ ಮಹತ್ವವನ್ನು ಹೇಳುವಂತೆ ಕಾಣುತ್ತದೆ. ಆದರೆ ಕಥೆಯ ಆಳಕ್ಕೆ ಇಳಿದಾಗ, ಇಲ್ಲಿ ನಂಬಿಕೆಗಿಂತ ಹೆಣ್ಣಿನ ಶೀಲವೇ ಹೆಚ್ಚು ಮುಖ್ಯವಾಗಿರುವುದು ಕಾಣಿಸುತ್ತದೆ.
ಸಿನಿಮಾದಲ್ಲಿ ಪ್ರೀತಿಯಿದೆ, ವಿರಹವಿದೆ, ತ್ಯಾಗವಿದೆ, ತಪ್ಪು ತಿಳಿವಳಿಕೆಯಿದೆ, ಕ್ಷಮೆಯೂ ಇದೆ. ಹಳ್ಳಿಯ ಹಸಿರು, ಹೊಲಗದ್ದೆಗಳು, ಪ್ರಸನ್ನ ಅವರ ಛಾಯಾಗ್ರಹಣದ ಸೌಂದರ್ಯ, ಮನಸ್ಸಿಗೆ ಮುದ ನೀಡುವ ಹಾಡುಗಳು ಹಾಗೂ ನಟರಾದ ಶ್ರೀರಾಮ್, ತಪಸ್ವಿನಿ, ರಮಿಕಾ ಮತ್ತು ರಂಗಾಯಣ ರಘು ಅವರ ಅಭಿನಯ ಪ್ರೇಕ್ಷಕರನ್ನು ಸೆಳೆಯುತ್ತವೆ. ಆದರೆ ಸಿನಿಮಾ ನೋಡುವಾಗ ಕಾಡುವುದು ಅದರ ಕಲಾತ್ಮಕ ಗುಣಮಟ್ಟದ ಪ್ರಶ್ನೆಯಲ್ಲ. ಈ ಎಲ್ಲ ಕಲಾತ್ಮಕ ಅಂಶಗಳನ್ನು ಬಳಸಿಕೊಂಡು ಯಾವ ಮೌಲ್ಯಗಳನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತಿದೆ ಎನ್ನುವುದು.
ತನ್ನ ಪ್ರಿಯಕರನ ಹುಟ್ಟುಹಬ್ಬಕ್ಕೆ ಅಚ್ಚರಿ ನೀಡಲು ಅಮೆರಿಕದಿಂದ ಬರುವ ಯುವತಿಗೆ ಆತ ಮತ್ತೊಬ್ಬ ಯುವತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿರುವುದು ತಿಳಿಯುತ್ತದೆ. ಆಕೆ ಪ್ರಶ್ನಿಸಿದಾಗ ಆತ ಕೊಡುವ ಸಮರ್ಥನೆ ವಿಚಿತ್ರವಾಗಿದೆ. ದೈಹಿಕ ಸಂಬಂಧಕ್ಕೆ ಒಪ್ಪದ ಕಾರಣಕ್ಕೆ ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಬೆಳೆಸಿರುವುದಾಗಿ ಹೇಳುತ್ತಾನೆ. ಇಲ್ಲಿ ತನ್ನ ಪ್ರಿಯಕರನ ದ್ರೋಹದಿಂದ ನೊಂದಿರುವ ಯುವತಿ, ಮುಂದೆ ತನ್ನ ಹಿಂದಿನ ಪ್ರೇಮ ಸಂಬಂಧದ ಕಾರಣಕ್ಕೇ ಅಪರಾಧಿ ಪ್ರಜ್ಞೆಯನ್ನು ಹೊತ್ತುಕೊಂಡು ಬದುಕಬೇಕಾಗುತ್ತದೆ. ತನ್ನ ದೇಹದ ಕುರಿತು ನಿರ್ಧರಿಸುವ ಹಕ್ಕನ್ನು ಬಳಸಿಕೊಂಡ ಮಹಿಳೆ, ಕೊನೆಗೆ ತನ್ನ ನೈತಿಕತೆಯನ್ನೇ ಸಾಬೀತುಪಡಿಸಬೇಕಾದ ಸ್ಥಿತಿಗೆ ತಲುಪುವುದು ಸಿನಿಮಾದ ಮೊದಲ ವೈರುಧ್ಯ.
ಇದೇ ಕಥೆಗೆ ಸಮಾನಾಂತರವಾಗಿ ಮತ್ತೊಂದು ದುರಂತವಿದೆ. ನಾಯಕನ ತಂದೆ ತನ್ನ ತಂಗಿಯ ಬಗ್ಗೆ ಹರಡಿದ ಗಾಳಿಮಾತನ್ನು ನಂಬಿ ಆಕೆಯನ್ನು ಅವಮಾನಿಸುತ್ತಾನೆ. ಆ ಅವಮಾನವನ್ನು ಸಹಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಂತರ ಆಕೆಯ ಮೇಲಿನ ಆರೋಪ ಸುಳ್ಳೆಂದು ತಿಳಿಯುತ್ತದೆ. ತನ್ನ ತಂಗಿಯ ಸಾವಿಗೆ ಕಾರಣನಾದ ಅಪರಾಧಿ ಪ್ರಜ್ಞೆ ಆತನನ್ನು ಕಾಡುತ್ತದೆ. ಮುಂದೆ ಮಗನ ಮದುವೆಯ ಸಂದರ್ಭದಲ್ಲಿ ಆತ ತೆಗೆದುಕೊಳ್ಳುವ ನಿರ್ಧಾರಕ್ಕೂ ಇದೇ ಅನುಭವ ಕಾರಣವಾಗುತ್ತದೆ.
ಈ ಎರಡೂ ಘಟನೆಗಳು ಮೇಲ್ನೋಟಕ್ಕೆ ಮಹಿಳೆಯ ಬಗ್ಗೆ ಅನುಮಾನ ಪಡುವುದು ತಪ್ಪು ಎನ್ನುವ ಸಂದೇಶ ನೀಡುವಂತೆ ಕಾಣುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಸಿನಿಮಾದ ನೈತಿಕತೆಯ ಮಿತಿ ಗೋಚರಿಸುತ್ತದೆ. ನಾಯಕನ ಅತ್ತೆಯ ಬಗ್ಗೆ ಹರಡಿದ ಸುದ್ದಿ ಸುಳ್ಳಾಗಿರುತ್ತದೆ. ನಾಯಕಿಯ ಹಿಂದಿನ ಸಂಬಂಧದಲ್ಲೂ ದೈಹಿಕ ಸಂಪರ್ಕ ನಡೆದಿರುವುದಿಲ್ಲ. ಅಂದರೆ ಇಬ್ಬರೂ ಮಹಿಳೆಯರು ಸಮಾಜ ನಿರೀಕ್ಷಿಸುವ ಅರ್ಥದಲ್ಲಿ ಶುದ್ಧರಾಗಿಯೇ ಉಳಿದಿರುತ್ತಾರೆ. ಅವರ ಮೇಲಿನ ಅನುಮಾನ ತಪ್ಪೆಂದು ಸಾಬೀತಾಗಲು ಈ ಶುದ್ಧತೆಯೇ ಆಧಾರವಾಗುತ್ತದೆ.
ಇಲ್ಲಿಯೇ ಸಿನಿಮಾವನ್ನು ಮತ್ತೊಂದು ಪ್ರಶ್ನೆ ಕೇಳಬೇಕಾಗುತ್ತದೆ. ಆ ಮಹಿಳೆಯರಿಗೆ ನಿಜವಾಗಿಯೂ ದೈಹಿಕ ಸಂಬಂಧವಿದ್ದಿದ್ದರೆ? ಆಗ ಅವರ ಮೇಲಿನ ಅವಮಾನ ಸಮರ್ಥನೀಯವಾಗುತ್ತಿತ್ತೇ? ಮದುವೆಗೆ ಮೊದಲು ಪ್ರೀತಿಸುವುದು ಅಥವಾ ಪರಸ್ಪರ ಸಮ್ಮತಿಯಿಂದ ದೈಹಿಕ ಸಂಬಂಧ ಹೊಂದುವುದು ಮಹಿಳೆಯ ಘನತೆಯನ್ನು ಕಡಿಮೆ ಮಾಡುತ್ತದೆಯೇ? ಸಿನಿಮಾ ಈ ಪ್ರಶ್ನೆಗಳನ್ನು ಎದುರಿಸುವುದಿಲ್ಲ. ಬದಲಿಗೆ, ಮಹಿಳೆಯರು ಪರಿಶುದ್ಧರಾಗಿದ್ದರು ಎನ್ನುವ ಸಮಾಧಾನದ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತದೆ.
ಮಹಿಳೆಯ ಮೇಲೆ ಸುಳ್ಳು ಆರೋಪ ಹೊರಿಸುವುದನ್ನು ಖಂಡಿಸುವುದಷ್ಟೇ ಆಕೆಯ ಘನತೆಯನ್ನು ಗೌರವಿಸಿದಂತಾಗುವುದಿಲ್ಲ. ಆಕೆಯ ಲೈಂಗಿಕ ಸ್ವಾತಂತ್ರ್ಯವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ‘ಪ್ರೇಮದ ಊರಲಿ’ಯಲ್ಲಿ ಮಹಿಳೆಯ ಮೇಲಿನ ಅನುಮಾನ ತಪ್ಪೆಂದು ಸಾಬೀತಾಗುವುದು ಆಕೆ ದೈಹಿಕ ಸಂಬಂಧ ಹೊಂದಿರಲಿಲ್ಲ ಎಂಬ ಕಾರಣಕ್ಕೆ. ಆಕೆಯ ವೈಯಕ್ತಿಕ ಆಯ್ಕೆಗಳು ಏನೇ ಇದ್ದರೂ ಅವು ಆಕೆಯ ಘನತೆಯನ್ನು ನಿರ್ಧರಿಸುವುದಿಲ್ಲ ಎಂಬ ನಿಲುವನ್ನು ಸಿನಿಮಾ ತೆಗೆದುಕೊಳ್ಳುವುದಿಲ್ಲ. ಹೀಗೆ ಮಹಿಳೆಯ ಮೇಲಿನ ಸುಳ್ಳು ಆರೋಪವನ್ನು ವಿರೋಧಿಸಿದರೂ, ಆಕೆಯ ಲೈಂಗಿಕ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವಲ್ಲಿ ಸಿನಿಮಾ ಹಿಂದೆ ಸರಿಯುತ್ತದೆ. ಈ ಮೌನವೇ ಸಿನಿಮಾದ ಲಿಂಗ ರಾಜಕಾರಣವನ್ನು ಬಯಲು ಮಾಡುತ್ತದೆ.
ಸಿನಿಮಾದ ಮತ್ತೊಬ್ಬ ಯುವತಿಯ ಪಾತ್ರವೂ ಇದೇ ಚೌಕಟ್ಟಿನೊಳಗೆ ರೂಪುಗೊಂಡಿದೆ. ತನ್ನದೇ ರೀತಿಯ ಉಡುಪು, ನಡವಳಿಕೆ ಮತ್ತು ವ್ಯಕ್ತಿತ್ವ ಹೊಂದಿರುವ ಆಕೆಯನ್ನು ಗಂಡುಬೀರಿ ಎಂಬಂತೆ ಚಿತ್ರಿಸಲಾಗುತ್ತದೆ. ನಾಯಕನ ಮೇಲೆ ಪ್ರೀತಿ ಮೂಡಿದ ನಂತರ ಆಕೆ ತನ್ನನ್ನು ಬದಲಿಸಿಕೊಳ್ಳಲು ಆರಂಭಿಸುತ್ತಾಳೆ. ಪುರುಷನನ್ನು ಆಕರ್ಷಿಸಲು ಮಹಿಳೆ ಹೆಚ್ಚು ಸ್ತ್ರೀಸಹಜವಾಗಿ ಕಾಣಿಸಿಕೊಳ್ಳಬೇಕು ಎನ್ನುವ ಕಲ್ಪನೆ ಇಲ್ಲಿ ಕೆಲಸ ಮಾಡುತ್ತದೆ. ಉಡುಪು ಬದಲಾಗುತ್ತದೆ, ವರ್ತನೆ ಬದಲಾಗುತ್ತದೆ, ಆಕೆಯ ವ್ಯಕ್ತಿತ್ವವೇ ಬದಲಾಗುತ್ತದೆ. ಆದರೆ ನಾಯಕನ ಮದುವೆಯಿಂದ ಆಕೆಯ ಪ್ರೀತಿ ವಿಫಲವಾಗುತ್ತದೆ. ಆ ನೋವಿನಲ್ಲಿ ತನ್ನ ಉದ್ದನೆಯ ಜಡೆಯನ್ನು ಕತ್ತರಿಸಿಕೊಳ್ಳುತ್ತಾಳೆ.
ಒಬ್ಬ ಮಹಿಳೆ ತನ್ನ ಪ್ರೀತಿಯನ್ನು ಕಳೆದುಕೊಂಡಾಗ ಆಕೆಯ ಬದುಕಿನಲ್ಲಿ ಇನ್ನೂ ಅನೇಕ ಸಾಧ್ಯತೆಗಳಿರುತ್ತವೆ. ಆದರೆ, ಸಿನಿಮಾ ಆಕೆಯ ನೋವನ್ನು ಸೌಂದರ್ಯದ ತ್ಯಾಗದ ಮೂಲಕ ವ್ಯಕ್ತಪಡಿಸುತ್ತದೆ. ಮಹಿಳೆಯ ಪ್ರೀತಿ ಎಂದರೆ ತ್ಯಾಗ, ಪ್ರೇಮ ವೈಫಲ್ಯವೆಂದರೆ ತನ್ನನ್ನು ತಾನೇ ಶಿಕ್ಷಿಸಿಕೊಳ್ಳುವುದು ಎಂಬ ಹಳೆಯ ಕಲ್ಪನೆ ಮತ್ತೊಮ್ಮೆ ಕಾಣಿಸಿಕೊಳ್ಳುತ್ತದೆ. ಆಕೆಯ ಸ್ವತಂತ್ರ ವ್ಯಕ್ತಿತ್ವಕ್ಕಿಂತ ನಾಯಕನ ಮೇಲಿನ ಪ್ರೀತಿಯೇ ಆಕೆಯ ಬದುಕನ್ನು ನಿರ್ಧರಿಸುವಂತಾಗುತ್ತದೆ.
ನಾಯಕಿಯ ವಿಷಯದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಉನ್ನತ ಶಿಕ್ಷಣ ಪಡೆದು ಅಮೆರಿಕದಲ್ಲಿ ಬದುಕಿರುವ ಆಕೆಗೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿದೆ ಎಂದು ನಿರೀಕ್ಷಿಸಬಹುದು. ಆದರೆ ಸಿನಿಮಾದಲ್ಲಿ ಆಕೆಯ ಶಿಕ್ಷಣ ಮತ್ತು ಅನುಭವಗಳು ಆಕೆಯ ವ್ಯಕ್ತಿತ್ವಕ್ಕೆ ಹೆಚ್ಚಿನ ಆಳ ನೀಡುವುದಿಲ್ಲ. ಮದುವೆಯ ನಂತರ ಹಳ್ಳಿಯ ಬದುಕಿಗೆ ಹೊಂದಿಕೊಳ್ಳುವುದರಲ್ಲಿಯೇ ಆಕೆಯ ಪರಿವರ್ತನೆಯನ್ನು ಗುರುತಿಸಲಾಗುತ್ತದೆ.
ಸಿನಿಮಾದ ಮತ್ತೊಂದು ಗಮನಾರ್ಹ ಅಂಶ ಹಳ್ಳಿಯ ಚಿತ್ರಣ. ಹಸಿರು ಗದ್ದೆಗಳು, ಹೊಲಗಳು, ಸಂಪ್ರದಾಯಗಳು ಮತ್ತು ಕೌಟುಂಬಿಕ ಬಾಂಧವ್ಯಗಳ ಮೂಲಕ ಹಳ್ಳಿಯನ್ನು ಆದರ್ಶ ಬದುಕಿನ ನೆಲೆಯಾಗಿ ಕಟ್ಟಿಕೊಡಲಾಗಿದೆ. ಆದರೆ ಹಳ್ಳಿಯ ಬದುಕು ಕೇವಲ ಹಸಿರು ಮತ್ತು ಸಂಸ್ಕೃತಿಯಲ್ಲ. ಅಲ್ಲಿ ಜಾತಿ ವ್ಯವಸ್ಥೆಯಿದೆ, ಭೂಮಿಯ ಒಡೆತನದ ಅಸಮಾನತೆಯಿದೆ, ಮಹಿಳೆಯರ ದುಡಿಮೆಯಿದೆ, ಕುಟುಂಬ ಮತ್ತು ಸಮುದಾಯದ ಹೆಸರಿನಲ್ಲಿ ನಡೆಯುವ ನಿಯಂತ್ರಣಗಳಿವೆ. ಇವುಗಳನ್ನೆಲ್ಲ ಬದಿಗಿಟ್ಟು ಹಳ್ಳಿಯನ್ನು ಪರಿಶುದ್ಧ ಸಂಸ್ಕೃತಿಯ ಪ್ರತೀಕವಾಗಿ ತೋರಿಸುವುದು ಗ್ರಾಮೀಣ ಬದುಕಿನ ಸಂಕೀರ್ಣತೆಯನ್ನು ಸರಳಗೊಳಿಸುತ್ತದೆ. ಹಳೆಯದೆಲ್ಲವೂ ಒಳ್ಳೆಯದು, ಸಂಪ್ರದಾಯವೇ ಸಂಸ್ಕೃತಿ, ಮಹಿಳೆಯ ತ್ಯಾಗವೇ ಕುಟುಂಬದ ಆಧಾರ ಎಂಬ ಪರಿಚಿತ ನಂಬಿಕೆಗಳನ್ನು ಪ್ರಶ್ನಿಸದೆ ಭಾವನಾತ್ಮಕವಾಗಿ ಕಟ್ಟುವುದು ಸುಲಭವಾದರೂ, ಅಂತಹ ಪರಿಚಿತವಾದದ್ದೆಲ್ಲವೂ ಸರಿಯಾಗಿರಬೇಕೆಂಬ ನಿಯಮವಿಲ್ಲ.
ನಾಯಕನ ಪಾತ್ರವನ್ನು ಗಮನಿಸಿದಾಗ ಈ ಅಸಮಾನತೆ ಮತ್ತಷ್ಟು ಸ್ಪಷ್ಟವಾಗುತ್ತದೆ. ತನ್ನ ಪತ್ನಿಯ ಹಿಂದಿನ ಪ್ರೇಮ ಸಂಬಂಧದ ಬಗ್ಗೆ ಗಾಳಿಮಾತು ಕೇಳಿದಾಗ ಆತನಿಗೆ ಆಕೆಯ ಮೇಲಿನ ನಂಬಿಕೆ ಕುಸಿಯುತ್ತದೆ. ಆಕೆ ಏನು ಹೇಳುತ್ತಾಳೆ, ಆಕೆಯ ಅನುಭವವೇನು, ಆಕೆಯ ಬದುಕಿನ ಸತ್ಯವೇನು ಎನ್ನುವುದಕ್ಕಿಂತ ತನ್ನ ಪತ್ನಿಯ ಬದುಕಿನಲ್ಲಿ ಮತ್ತೊಬ್ಬ ಪುರುಷನಿದ್ದ ಎಂಬ ಕಲ್ಪನೆಯೇ ಆತನನ್ನು ಹೆಚ್ಚು ಕಾಡುತ್ತದೆ. ತನ್ನ ಹಿಂದಿನ ಬದುಕಿನ ಬಗ್ಗೆ ಪ್ರಶ್ನಿಸದ ಪುರುಷ, ಮಹಿಳೆಯ ಹಿಂದಿನ ಬದುಕಿನ ಮೇಲೆ ತೀರ್ಪು ನೀಡುವ ಅಧಿಕಾರವನ್ನು ಸಹಜವಾಗಿ ಪಡೆದುಕೊಳ್ಳುತ್ತಾನೆ.
ಕೊನೆಯಲ್ಲಿ ನಾಯಕನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆತ ನಾಯಕಿಯ ಕಾಲು ಹಿಡಿದು ಕ್ಷಮೆ ಕೇಳುತ್ತಾನೆ. ಇಬ್ಬರೂ ಒಂದಾಗುತ್ತಾರೆ. ಆದರೆ ಈ ಸುಖಾಂತ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಪುರುಷನಿಗೆ ತನ್ನ ತಪ್ಪಿನ ಅರಿವಾಗುವುದು ಒಳ್ಳೆಯದೇ, ಕ್ಷಮೆ ಕೇಳುವುದೂ ಮುಖ್ಯವೇ. ಆದರೆ ಕ್ಷಮೆ ಕೇಳಿದ ಮಾತ್ರಕ್ಕೆ ಮಹಿಳೆಯ ಮೇಲೆ ನಡೆದ ಅವಮಾನ, ಅನುಮಾನ ಮತ್ತು ಆಕೆಯ ವ್ಯಕ್ತಿತ್ವದ ನಿರಾಕರಣೆಗಳೆಲ್ಲ ಅಳಿಸಿಹೋಗುವುದಿಲ್ಲ. ಸಂಬಂಧವನ್ನು ಮುಂದುವರಿಸಬೇಕೇ ಬೇಡವೇ ಎನ್ನುವ ನಿರ್ಧಾರದಲ್ಲಿ ಮಹಿಳೆಯ ಸ್ವತಂತ್ರ ಆಯ್ಕೆಗೆ ಎಷ್ಟು ಮಹತ್ವ ನೀಡಲಾಗಿದೆ ಎಂಬುದೂ ಮುಖ್ಯ.
ಸಿನಿಮಾ ನೋಡಿದವರು ಕಣ್ಣೀರಿಡುತ್ತಾರೆ. ಮಹಿಳೆಯರ ಅಸಹಾಯಕತೆಯಿಂದ ಪಡುವ ಸಂಕಟ, ನಾಯಕನ ತಂದೆಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಾಗ, ಪ್ರೀತಿಯಲ್ಲಿ ನೋವು ಅನುಭವಿಸುವ ಪಾತ್ರಗಳನ್ನು ನೋಡುವಾಗ ಪ್ರೇಕ್ಷಕರು ಭಾವುಕರಾಗುತ್ತಾರೆ. ಈ ಭಾವನೆಗಳು ಸಹಜ. ಆದರೆ ಪ್ರೇಕ್ಷಕರು ಅಳುತ್ತಾರೆ ಎನ್ನುವುದರಿಂದ ಮಾತ್ರ ಸಿನಿಮಾ ಹೇಳುವ ವಿಚಾರಗಳು ಸರಿಯಾಗಿರುತ್ತವೆ ಎಂದಾಗುವುದಿಲ್ಲ. ಪ್ರೇಕ್ಷಕರು ಯಾರ ನೋವಿಗಾಗಿ ಅಳುತ್ತಿದ್ದಾರೆ ಎನ್ನುವುದರ ಜೊತೆಗೆ, ಆ ನೋವಿನ ಮೂಲಕ ಸಿನಿಮಾ ಯಾವ ಮೌಲ್ಯಗಳನ್ನು ನಮ್ಮೊಳಗೆ ಗಟ್ಟಿಗೊಳಿಸುತ್ತಿದೆ ಎನ್ನುವುದನ್ನು ಗಮನಿಸಬೇಕು. ಮಹಿಳೆಯ ಬಗ್ಗೆ ಹರಡಿದ ಸುಳ್ಳು ಸುದ್ದಿಯಿಂದ ಆಕೆ ಸಾಯುವಾಗಲೂ, ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಂಡ ಯುವತಿ ಜಡೆ ಕತ್ತರಿಸಿಕೊಳ್ಳುವಾಗಲೂ ಪ್ರೇಕ್ಷಕರಿಗೆ ದುಃಖವಾಗಬಹುದು. ಆದರೆ ಈ ದುಃಖದ ಹಿಂದೆ ಇರುವ ಸಾಮಾಜಿಕ ವ್ಯವಸ್ಥೆಯನ್ನು ಅಥವಾ ಮಹಿಳೆಯ ಬದುಕಿನ ಮೇಲೆ ಪುರುಷರು ವಿಧಿಸುವ ತೀರ್ಪುಗಳನ್ನು ಸಿನಿಮಾ ಗಂಭೀರವಾಗಿ ಪ್ರಶ್ನಿಸುವುದಿಲ್ಲ, ಬದಲಿಗೆ ಆ ನೋವನ್ನು ಭಾವನಾತ್ಮಕ ದೃಶ್ಯವನ್ನಾಗಿಸಿ ಸುಖಾಂತ್ಯದ ಮೂಲಕ ಮುಗಿಸುತ್ತದೆ.
ಮನಸ್ಸಿಗೆ ಮುದ ನೀಡುವ ಹಾಡುಗಳು, ನಟರ ಪರಿಣಾಮಕಾರಿ ಅಭಿನಯ ಮತ್ತು ತಾಂತ್ರಿಕ ಸೌಂದರ್ಯ ಸಿನಿಮಾ ನೋಡುವ ಅನುಭವವನ್ನು ಉತ್ತಮಗೊಳಿಸಬಹುದು. ಆದರೆ ಕಲೆ ಕೇವಲ ಸಮಾಜದ ಪ್ರತಿಬಿಂಬವಲ್ಲ, ಅದು ನಂಬಿಕೆಗಳನ್ನು ರೂಪಿಸುವ ಮಾಧ್ಯಮವೂ ಹೌದು. ಕಲಾತ್ಮಕವಾಗಿ ಉತ್ತಮವಾಗಿರುವ ಸಿನಿಮಾ ಕೂಡ ಅತ್ಯಂತ ಪ್ರತಿಗಾಮಿ ರಾಜಕೀಯ ಹಾಗೂ ನಿಲುವುಗಳನ್ನು ಹೊಂದಿರಬಹುದು. ಕಲೆಯ ಸೌಂದರ್ಯವನ್ನು ಮೆಚ್ಚುವಾಗ ಅದರೊಳಗಿನ ಮೌಲ್ಯಗಳನ್ನೂ ವಿಮರ್ಶಾತ್ಮಕವಾಗಿ ನೋಡುವುದು ಮತ್ತು ಪ್ರತಿಪಾದಿಸುವ ಮೌಲ್ಯಗಳನ್ನು ಪ್ರಶ್ನಿಸುವ ಹಕ್ಕನ್ನು ಪ್ರೇಕ್ಷಕರು ಉಳಿಸಿಕೊಳ್ಳುವುದು ಮುಖ್ಯ.
ಪ್ರೀತಿ ಎಂದರೆ ಒಬ್ಬರ ಮೇಲೊಬ್ಬರು ಹಕ್ಕು ಸ್ಥಾಪಿಸುವುದಲ್ಲ. ಪ್ರೀತಿಯ ಹೆಸರಿನಲ್ಲಿ ಮತ್ತೊಬ್ಬರ ಬದುಕನ್ನು ನಿಯಂತ್ರಿಸುವುದೂ ಅಲ್ಲ. ಪ್ರೀತಿಯಲ್ಲಿ ಇಬ್ಬರಿಗೂ ತಮ್ಮ ದೇಹ, ತಮ್ಮ ಆಯ್ಕೆಗಳು ಮತ್ತು ತಮ್ಮ ಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರಬೇಕು. ಪ್ರೀತಿಸುವ ವ್ಯಕ್ತಿಯ ಹಿಂದಿನ ಬದುಕನ್ನು ತೀರ್ಪು ನೀಡುವ ದೃಷ್ಟಿಯಿಂದ ನೋಡುವ ಬದಲು, ಆ ವ್ಯಕ್ತಿಯನ್ನು ಸಂಪೂರ್ಣ ಮನುಷ್ಯರಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಇರಬೇಕು.
ಇದನ್ನೂ ಓದಿ ಅವಳ ಕಣ್ಣೋಟ | ಡೊರೊಥಿ- ಸ್ವೀಕಾರದಾಚೆಗೆ, ಒಳಗೊಳ್ಳುವಿಕೆಯ ಕಡೆಗೆ…
‘ಪ್ರೇಮದ ಊರಲಿ’ ಪ್ರೀತಿಯ ಹೆಸರಿನಲ್ಲಿ ಹೇಳುವ ಕಥೆಯ ಕೇಂದ್ರದಲ್ಲಿ ಮಹಿಳೆಯ ಮೇಲಿನ ನಂಬಿಕೆಗಿಂತ ಆಕೆಯ ಶೀಲದ ಕುರಿತ ಅನುಮಾನವೇ ಹೆಚ್ಚು ಪ್ರಬಲವಾಗಿದೆ. ಮಹಿಳೆಯನ್ನು ಪ್ರೀತಿಸುವುದೆಂದರೆ ಆಕೆಯ ಹಿಂದಿನ ಬದುಕನ್ನು ತನಿಖೆ ಮಾಡುವುದು ಅಲ್ಲ. ಆಕೆಯ ದೇಹ, ಆಯ್ಕೆ ಮತ್ತು ವ್ಯಕ್ತಿತ್ವವನ್ನು ಗೌರವಿಸುವುದು. ತನ್ನ ಪತ್ನಿಯ ಹಿಂದಿನ ಬದುಕನ್ನು ಕ್ಷಮಿಸುವ ಮಹಾತ್ಮನಾಗಿ ಪುರುಷನನ್ನು ಚಿತ್ರಿಸುವುದಕ್ಕಿಂತ, ಆಕೆಯ ಹಿಂದಿನ ಬದುಕಿನ ಮೇಲೆ ತೀರ್ಪು ನೀಡುವ ಅಧಿಕಾರವೇ ಆತನಿಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದು ಮುಖ್ಯ.
ಪ್ರೀತಿಗೆ ಬೇಕಿರುವುದು ಶೀಲದ ಪ್ರಮಾಣಪತ್ರವಲ್ಲ, ಪರಸ್ಪರ ಗೌರವ ಮತ್ತು ಸಮಾನತೆ. ಆದರೆ ‘ಪ್ರೇಮದ ಊರಲಿ’ ಪ್ರೀತಿಯ ಸೌಂದರ್ಯವನ್ನು ಹುಡುಕುತ್ತಾ ಮತ್ತೆ ಮಹಿಳೆಯ ಶೀಲದ ಕಾವಲಿಗೆ ಬಂದು ನಿಲ್ಲುತ್ತದೆ.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.





