ಅವಳ ಕಣ್ಣೋಟ | ʼನ್ಯೂಡ್‌ʼ ಮರಾಠಿ ಸಿನಿಮಾ- ಕಲೆಯಾಗಿ ಇಷ್ಟ, ಬದುಕಾಗಿ ಕಷ್ಟ!

Date:

‘ನ್ಯೂಡ್’ ಪರಿಪೂರ್ಣ ಸಿನಿಮಾ ಅಲ್ಲ. ಮಹಿಳೆಯ ಸ್ವತಂತ್ರ ಬದುಕಿನ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಬಹುದಿತ್ತು. ಆದರೂ ಮಹಿಳೆಯ ನಗ್ನತೆಯನ್ನು ಅಶ್ಲೀಲತೆಯ ದೃಷ್ಟಿಯಿಂದ ನೋಡುವ ಸಮಾಜದ ಮನಸ್ಥಿತಿಯನ್ನು ಪ್ರಶ್ನಿಸುವಲ್ಲಿ ಸಿನಿಮಾ ಮಹತ್ವದ ಪ್ರಯತ್ನ ಮಾಡಿದೆ. ಮಹಿಳೆಯ ದೇಹವನ್ನು ಮುಚ್ಚಿಡುವುದರಿಂದ ಅವಳಿಗೆ ಗೌರವ ಸಿಗುವುದಿಲ್ಲ. ಅವಳ ದೇಹದ ಮೇಲಿನ ಹಕ್ಕು, ದುಡಿಮೆ, ಆಯ್ಕೆ ಮತ್ತು ಸ್ವತಂತ್ರ ಬದುಕನ್ನು ಗೌರವಿಸುವುದರಿಂದ ಮಾತ್ರ ನಿಜವಾದ ಘನತೆ ಸಾಧ್ಯ.

- Advertisement -

ಮಹಿಳೆಯ ನಗ್ನ ಚಿತ್ರವನ್ನು ಕಲಾಕೃತಿಯೆಂದು ಮೆಚ್ಚುವ ಸಮಾಜ, ಅದೇ ಚಿತ್ರಕ್ಕೆ ಮಾದರಿಯಾಗಿ ನಿಂತ ಮಹಿಳೆಯನ್ನು ಯಾಕೆ ಗೌರವದಿಂದ ಕಾಣುವುದಿಲ್ಲ? ಕಲೆಯ ಹೆಸರಿನಲ್ಲಿ ಮಹಿಳೆಯ ದೇಹವನ್ನು ನೋಡುವುದಕ್ಕೆ ಯಾವ ಅಡ್ಡಿಯೂ ಇಲ್ಲದ ಸಮಾಜಕ್ಕೆ, ಬದುಕಿಗಾಗಿ ತನ್ನ ದೇಹವನ್ನೇ ಕಲೆಯ ಮಾದರಿಯಾಗಿಸಿಕೊಂಡ ಮಹಿಳೆಯನ್ನು ಒಪ್ಪಿಕೊಳ್ಳಲು ಯಾಕೆ ಸಾಧ್ಯವಾಗುವುದಿಲ್ಲ? ಇಂತಹ ಪ್ರಶ್ನೆಗಳನ್ನು ನಮ್ಮ ಮುಂದಿಡುವ ಮರಾಠಿ ಸಿನಿಮಾ ‘ನ್ಯೂಡ್’.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ರವಿ ಜಾಧವ್ ನಿರ್ದೇಶನದ ಈ ಸಿನಿಮಾ ಮಹಿಳೆಯ ನಗ್ನತೆಯ ಸುತ್ತ ಕಥೆಯನ್ನು ಕಟ್ಟಿದಂತೆ ಕಂಡರೂ, ಅದರೊಳಗೆ ಬಡತನ, ಮಹಿಳೆಯ ದುಡಿಮೆ, ತಾಯ್ತನ, ಒಂಟಿತನ ಮತ್ತು ಪುರುಷಪ್ರಧಾನ ಸಮಾಜದ ಮನಸ್ಥಿತಿಯ ಹಲವು ಮುಖಗಳಿವೆ. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾ, ನಿರ್ದೇಶಕರ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾದ ವಿಷಯವನ್ನು ಆಯ್ಕೆ ಮಾಡಿಕೊಂಡಿದೆ.

ಗಂಡನಿಂದ ಅವಮಾನ ಮತ್ತು ದ್ರೋಹಕ್ಕೆ ಒಳಗಾಗುವ ಯಮುನಾ, ತನ್ನ ಮಗ ಲಕ್ಷ್ಮಣನೊಂದಿಗೆ ಹಳ್ಳಿಯನ್ನು ಬಿಟ್ಟು ಮುಂಬೈಗೆ ಬರುತ್ತಾಳೆ. ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು, ಅವನ ಭವಿಷ್ಯ ಚೆನ್ನಾಗಿರಬೇಕು ಎಂಬುದು ಅವಳ ಕನಸು. ಮುಂಬೈನಂತಹ ದೊಡ್ಡ ನಗರದಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ. ಕೆಲಸಕ್ಕಾಗಿ ಅಲೆದಾಡುವ ಅವಳಿಗೆ ಸಂಬಂಧಿ ಚಂದ್ರಕ್ಕ ಆಶ್ರಯ ನೀಡುತ್ತಾಳೆ. ಚಂದ್ರಕ್ಕ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಗ್ನ ಕಲಾ ಮಾದರಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಆರಂಭದಲ್ಲಿ ಈ ಕೆಲಸವನ್ನು ಒಪ್ಪಿಕೊಳ್ಳಲು ಯಮುನಾ ಹಿಂಜರಿಯುತ್ತಾಳೆ. ಆದರೆ ಬದುಕಿನ ಅನಿವಾರ್ಯತೆ ಅವಳನ್ನು ಅದೇ ಕೆಲಸಕ್ಕೆ ಕರೆತರುತ್ತದೆ.

ಇಲ್ಲಿ ಗಮನಿಸಬೇಕಾದದ್ದು ಯಮುನಾ ನಗ್ನ ಕಲಾ ಮಾದರಿಯಾಗುವ ನಿರ್ಧಾರವನ್ನಷ್ಟೇ ಅಲ್ಲ, ಆ ನಿರ್ಧಾರದ ಹಿಂದಿರುವ ಬಡತನವನ್ನೂ. ಹೊಟ್ಟೆಪಾಡಿಗಾಗಿ ದುಡಿಯುವ ಮಹಿಳೆಗೆ ಸಮಾಜ ಕೆಲಸದ ಆಯ್ಕೆಗಳನ್ನು ನೀಡುವುದಿಲ್ಲ. ಬದಲಿಗೆ ಅವಳು ಮಾಡುವ ಕೆಲಸಕ್ಕೆ ನೈತಿಕತೆಯ ಪಾಠ ಹೇಳುತ್ತದೆ. ಯಮುನಾಳಿಗೆ ಈ ಕೆಲಸದಿಂದ ಹಣ ಸಿಗುತ್ತದೆ. ಮಗನ ಭವಿಷ್ಯಕ್ಕಾಗಿ ದುಡಿಯುವ ಅವಕಾಶ ಸಿಗುತ್ತದೆ. ಆದರೆ ಅದೇ ಕೆಲಸವನ್ನು ಸಮಾಜ ಗೌರವದಿಂದ ನೋಡುವುದಿಲ್ಲ. ಬಡತನದಿಂದಾಗಿ ಸೀಮಿತವಾದ ಆಯ್ಕೆಗಳ ನಡುವೆ ಬದುಕು ಕಟ್ಟಿಕೊಳ್ಳುವ ಮಹಿಳೆಯ ಸ್ಥಿತಿಯನ್ನು ಚಿತ್ರ ಚೆನ್ನಾಗಿ ತೋರಿಸುತ್ತದೆ.

nude F

ನಗ್ನ ಕಲಾ ಮಾದರಿಯಾಗಿ ಕುಳಿತ ಯಮುನಾಳನ್ನು ಕಲಾ ವಿದ್ಯಾರ್ಥಿಗಳು ಕಲೆಯ ದೃಷ್ಟಿಯಿಂದ ನೋಡುತ್ತಾರೆ. ಆದರೆ ಕಾಲೇಜಿನ ಹೊರಗಿನ ಸಮಾಜ ಅವಳನ್ನು ಬೇರೆ ದೃಷ್ಟಿಯಿಂದ ನೋಡುತ್ತದೆ. ಇದೇ ಚಿತ್ರದ ಮುಖ್ಯ ಸಂಘರ್ಷ. ಮಹಿಳೆಯ ದೇಹವನ್ನು ಜಾಹೀರಾತುಗಳಲ್ಲಿ, ಸಿನಿಮಾಗಳಲ್ಲಿ ಮತ್ತು ಮಾರುಕಟ್ಟೆಯಲ್ಲಿ ಬಳಸಿಕೊಳ್ಳುವ ಸಮಾಜಕ್ಕೆ, ಆ ದೇಹದಿಂದಲೇ ದುಡಿದು ಬದುಕುವ ಮಹಿಳೆಯ ಶ್ರಮ ಮಾತ್ರ ಅಸಹ್ಯವಾಗಿ ಕಾಣುತ್ತದೆ. ಇಲ್ಲಿ ಸಮಸ್ಯೆ ಮಹಿಳೆಯ ದೇಹದಲ್ಲಿಲ್ಲ. ಆ ದೇಹವನ್ನು ನೋಡುವ ಸಮಾಜದ ದೃಷ್ಟಿಯಲ್ಲಿದೆ.

ಚಂದ್ರಕ್ಕಳ ಪಾತ್ರ ಈ ಚಿತ್ರದಲ್ಲಿ ಬಹಳ ಮುಖ್ಯ. ಯಮುನಾಳಿಗೆ ಮೊದಲಿಗೆ ತನ್ನ ಕೆಲಸದ ಬಗ್ಗೆ ಇರುವ ಸಂಕೋಚವನ್ನು ಹೋಗಲಾಡಿಸುವುದು ಚಂದ್ರಕ್ಕಳ ಬದುಕಿನ ಅನುಭವ. ತನ್ನ ಕೆಲಸವನ್ನು ಅವಳು ಕೀಳಾಗಿ ನೋಡುವುದಿಲ್ಲ. ಕಲಾ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಕೆಲಸವೆಂದು ಭಾವಿಸುತ್ತಾಳೆ. ಇಬ್ಬರು ಮಹಿಳೆಯರ ನಡುವಿನ ಈ ಸಂಬಂಧ ಚಿತ್ರಕ್ಕೆ ಒಳ್ಳೆಯ ಮಾನವೀಯ ಸ್ಪರ್ಶ ನೀಡುತ್ತದೆ. ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಗೆ ಬದುಕಿನ ದಾರಿ ತೋರಿಸುವುದು, ಪರಸ್ಪರ ಆಸರೆಯಾಗುವುದು ಚಿತ್ರದ ವಿಶೇಷತೆ.

ಚಂದ್ರಕ್ಕಳಿಗೆ ಹುಷಾರಿಲ್ಲದ ಸಂದರ್ಭದಲ್ಲಿ ಯಮುನಾ ಹೇಳುವ ಮಾತುಗಳು ಬಹಳ ಕಾಡುತ್ತವೆ. ಚಂದ್ರಕ್ಕಳನ್ನು ನೋಡಲು ಯಾರೂ ಬರದಿರುವುದನ್ನು ಕಂಡು, ನಾಳೆ ತನಗೇನಾದರೂ ಆದರೆ ತನ್ನನ್ನು ಕೇಳುವವರು ಯಾರು ಎಂದು ಯಮುನಾ ಆತಂಕಪಡುತ್ತಾಳೆ. ಈ ಮಾತುಗಳಲ್ಲಿ ಅವಳ ಬದುಕಿನ ಒಂಟಿತನ ಅಡಗಿದೆ. ಮಗನಿದ್ದಾನೆ, ಸಂಬಂಧಗಳಿವೆ, ದುಡಿಮೆಯಿದೆ. ಆದರೂ ವಯಸ್ಸಾದಾಗ ಅಥವಾ ಅನಾರೋಗ್ಯ ಬಂದಾಗ ತನ್ನನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಅವಳನ್ನು ಕಾಡುತ್ತದೆ. ಕುಟುಂಬವಿದೆ ಎಂದ ಮಾತ್ರಕ್ಕೆ ಮಹಿಳೆಗೆ ಭದ್ರತೆ ಇದೆ ಎಂದರ್ಥವಲ್ಲ. ಮಹಿಳೆ ಬದುಕಿನುದ್ದಕ್ಕೂ ಇತರರಿಗಾಗಿ ದುಡಿದರೂ, ಅವಳ ಅಗತ್ಯದ ಸಮಯದಲ್ಲಿ ಅವಳೊಂದಿಗೆ ನಿಲ್ಲುವವರು ಇಲ್ಲದಿರಬಹುದು ಎಂಬ ಕಟು ಸತ್ಯವನ್ನು ಈ ದೃಶ್ಯ ಹೇಳುತ್ತದೆ.

ಯಮುನಾಳ ಮಗ ಲಕ್ಷ್ಮಣನ ಪಾತ್ರವನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕು. ತನ್ನ ಮಗನ ಭವಿಷ್ಯಕ್ಕಾಗಿ ಯಮುನಾ ಹಗಲಿರುಳು ದುಡಿಯುತ್ತಾಳೆ. ಆದರೆ ಅದೇ ಮಗ ಅವಳ ಕೆಲಸವನ್ನು ಅವಮಾನವಾಗಿ ನೋಡುತ್ತಾನೆ. ತಾಯಿಯ ದುಡಿಮೆಯಿಂದ ಸಿಗುವ ಅನುಕೂಲಗಳನ್ನು ಸ್ವೀಕರಿಸುವ ಅವನಿಗೆ, ಆ ದುಡಿಮೆಯ ಸ್ವರೂಪವನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ತಾಯಿಯ ಬದುಕಿನ ಬಗ್ಗೆ ತೀರ್ಪು ನೀಡುವ ಅಧಿಕಾರ ತನಗಿದೆ ಎಂದು ಭಾವಿಸುತ್ತಾನೆ. ಸಮಾಜದ ನೈತಿಕತೆಯನ್ನೇ ತನ್ನೊಳಗೆ ಅಳವಡಿಸಿಕೊಂಡಿರುವ ಅವನು, ತನ್ನ ಸುತ್ತಲಿನವರ ಮುಂದೆ ಮಾನ್ಯತೆ ಪಡೆಯುವ ಹಂಬಲದಲ್ಲೂ ತಾಯಿಯನ್ನು ತಿರಸ್ಕರಿಸುತ್ತಾನೆ.

ಯಮುನಾಳ ಗಂಡ ಅವಳನ್ನು ಅವಮಾನಿಸುತ್ತಾನೆ. ಅವನಿಂದ ದೂರವಾಗಿ ಬದುಕು ಕಟ್ಟಿಕೊಳ್ಳಲು ಬಂದ ಯಮುನಾ ಕೊನೆಗೆ ತನ್ನ ಮಗನಿಂದಲೂ ಅದೇ ರೀತಿಯ ತಿರಸ್ಕಾರವನ್ನು ಎದುರಿಸುತ್ತಾಳೆ. ಇಲ್ಲಿ ಮಗನನ್ನು ಕೇವಲ ಕೆಟ್ಟ ಮಗನಾಗಿ ನೋಡುವುದಕ್ಕಿಂತ, ಅವನೊಳಗೆ ಬೆಳೆದಿರುವ ಪುರುಷಪ್ರಧಾನ ಮನಸ್ಥಿತಿಯನ್ನು ಗಮನಿಸಬೇಕು. ತಂದೆಯ ಅಧಿಕಾರವನ್ನು ಪ್ರಶ್ನಿಸದೆ ಬೆಳೆದ ಮಗ, ತಾಯಿಯ ಬದುಕಿನ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಾನೆ. ಮಹಿಳೆ ತನ್ನ ದೇಹದ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅವನು ಒಪ್ಪಿಕೊಳ್ಳುವುದಿಲ್ಲ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಪುರುಷಪ್ರಧಾನ ಮೌಲ್ಯಗಳು ಹೇಗೆ ಮುಂದುವರಿಯುತ್ತವೆ ಎಂಬುದಕ್ಕೆ ಈ ಪಾತ್ರ ಒಂದು ಉದಾಹರಣೆ.

ನಿರ್ದೇಶಕ ರವಿ ಜಾಧವ್ ಅವರು ಮುಂಬೈನ ಸರ್ ಜೆ.ಜೆ. ಕಲಾ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ನಗ್ನ ಕಲಾ ಮಾದರಿಗಳ ಬದುಕಿನ ಬಗ್ಗೆ ಅವರಲ್ಲಿ ಕುತೂಹಲ ಮೂಡಿತ್ತು. ಆ ಮಹಿಳೆಯರೊಂದಿಗೆ ಮಾತನಾಡಿ, ಅವರ ಬದುಕಿನ ಅನುಭವಗಳನ್ನು ಆಧರಿಸಿ ಚಿತ್ರದ ಕಥೆಯನ್ನು ರೂಪಿಸಿದ್ದಾರೆ. ಚಿತ್ರದ ಬಹುಪಾಲು ಘಟನೆಗಳು ನೈಜ ಅನುಭವಗಳಿಂದ ಬಂದಿವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಕಲಾವಿದರು ಮತ್ತು ವಿದ್ಯಾರ್ಥಿಗಳ ಪಾತ್ರಗಳಲ್ಲಿ ನೈಜ ಕಲಾವಿದರು ಹಾಗೂ ವಿದ್ಯಾರ್ಥಿಗಳೂ ಕಾಣಿಸಿಕೊಂಡಿದ್ದಾರೆ. ಇದರಿಂದ ಕಲಾ ಕಾಲೇಜಿನ ವಾತಾವರಣ ಸಹಜವಾಗಿ ಮೂಡಿಬಂದಿದೆ.

ಕಲಾ ಕಾಲೇಜಿನ ದೃಶ್ಯಗಳಲ್ಲಿ ನಗ್ನತೆಯನ್ನು ಕುತೂಹಲ ಕೆರಳಿಸುವ ರೀತಿಯಲ್ಲಿ ತೋರಿಸದೆ, ಕಲೆಯ ಭಾಗವಾಗಿ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕರದು. ಕ್ಯಾಮೆರಾ ಮಹಿಳೆಯ ದೇಹವನ್ನು ಪ್ರದರ್ಶನದ ವಸ್ತುವಾಗಿಸುವುದಕ್ಕಿಂತ, ಆಕೆ ಕೆಲಸ ಮಾಡುತ್ತಿರುವ ಸಂದರ್ಭವನ್ನು ಮುಖ್ಯವಾಗಿಸುತ್ತದೆ. ಕಲಾ ವಿದ್ಯಾರ್ಥಿಗಳ ದೃಷ್ಟಿ ಮತ್ತು ಹೊರಗಿನ ಸಮಾಜದ ದೃಷ್ಟಿಯ ನಡುವಿನ ವ್ಯತ್ಯಾಸವನ್ನು ಈ ದೃಶ್ಯಗಳು ಸ್ಪಷ್ಟಪಡಿಸುತ್ತವೆ. ಆದರೆ ಚಿತ್ರದ ಉತ್ತರಾರ್ಧದಲ್ಲಿ ಮಗನೊಂದಿಗಿನ ಸಂಘರ್ಷ ಮತ್ತು ದುರಂತದ ಕಡೆಗೆ ಕಥೆ ಹೆಚ್ಚು ಸಾಗುತ್ತದೆ. ಮೊದಲ ಭಾಗದಲ್ಲಿ ಆತ್ಮವಿಶ್ವಾಸ ಕಂಡುಕೊಳ್ಳುತ್ತಿದ್ದ ಯಮುನಾಳ ಬದುಕು ಎರಡನೇ ಭಾಗದಲ್ಲಿ ಮಗನ ತಿರಸ್ಕಾರದ ಸುತ್ತ ಸೀಮಿತವಾಗುತ್ತದೆ. ಇದರಿಂದ ಅವಳ ಸ್ವತಂತ್ರ ವ್ಯಕ್ತಿತ್ವದ ಬೆಳವಣಿಗೆಗೆ ಇನ್ನಷ್ಟು ಅವಕಾಶ ಸಿಗಬಹುದಿತ್ತು ಎಂಬ ಅನಿಸಿಕೆ ಮೂಡುತ್ತದೆ.

ಚಿತ್ರಕಥೆಯನ್ನು ರವಿ ಜಾಧವ್ ಮತ್ತು ಸಚಿನ್ ಕುಂದಲ್ಕರ್ ಬರೆದಿದ್ದಾರೆ. ಮಹಿಳೆಯ ದೇಹ, ದುಡಿಮೆ ಮತ್ತು ಸಾಮಾಜಿಕ ನೈತಿಕತೆಯ ಪ್ರಶ್ನೆಗಳನ್ನು ಸರಳವಾಗಿ ಮುಂದಿಡುವ ಚಿತ್ರಕಥೆ, ಕೆಲವು ಕಡೆ ಇನ್ನಷ್ಟು ಆಳವಾಗಿ ಹೋಗಬಹುದಿತ್ತು. ನಗ್ನ ಕಲಾ ಮಾದರಿಗಳ ಕೆಲಸದ ಪರಿಸ್ಥಿತಿ, ಅವರ ಸುರಕ್ಷತೆ, ಆರ್ಥಿಕ ಭದ್ರತೆ ಮತ್ತು ವೃದ್ಧಾಪ್ಯದ ಬದುಕಿನ ಬಗ್ಗೆ ಹೆಚ್ಚು ಮಾತನಾಡಬಹುದಿತ್ತು. ಚಂದ್ರಕ್ಕಳ ಅನಾರೋಗ್ಯದ ಸಂದರ್ಭ ಇಂತಹ ಪ್ರಶ್ನೆಗಳನ್ನು ವಿಸ್ತರಿಸಲು ಉತ್ತಮ ಅವಕಾಶವಾಗಿತ್ತು.

ಛಾಯಾಗ್ರಹಣ ಚಿತ್ರದ ಪ್ರಮುಖ ಆಕರ್ಷಣೆ. ಅಮಲೇಂದು ಚೌಧರಿ ಅವರ ಕ್ಯಾಮೆರಾ ಕಲಾ ಕಾಲೇಜಿನ ದೃಶ್ಯಗಳು, ಯಮುನಾಳ ಮುಖಭಾವಗಳು ಮತ್ತು ಅವಳ ಸುತ್ತಲಿನ ವಾತಾವರಣವನ್ನು ಚೆನ್ನಾಗಿ ಸೆರೆಹಿಡಿದಿದೆ. ಸಾಯಲಿ ಖರೆ ಅವರ ಸಂಗೀತ ಮತ್ತು ಸೌರಭ್ ಭಾಲೇರಾವ್ ಅವರ ಹಿನ್ನೆಲೆ ಸಂಗೀತ ಚಿತ್ರದಲ್ಲಿನ ಭಾವನೆಗಳಿಗೆ ಪೂರಕವಾಗಿವೆ. ಕಲಾ ಕಾಲೇಜಿನ ಕೆಲವು ದೃಶ್ಯಗಳಲ್ಲಿ ಶಾಸ್ತ್ರೀಯ ಸಂಗೀತದ ಬಳಕೆ ಆ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಕೆಲವು ಭಾವನಾತ್ಮಕ ದೃಶ್ಯಗಳಲ್ಲಿ ಹಿನ್ನೆಲೆ ಸಂಗೀತಕ್ಕಿಂತ ಮೌನವೇ ಹೆಚ್ಚು ಪರಿಣಾಮಕಾರಿಯಾಗಬಹುದಿತ್ತು ಎನ್ನುವ ಅನಿಸಿಕೆಯೂ ಬರುತ್ತದೆ.

ಯಮುನಾಳ ಪಾತ್ರದಲ್ಲಿ ಕಲ್ಯಾಣಿ ಮುಳೆ ಅವರ ಅಭಿನಯ ಸಹಜವಾಗಿದೆ. ಸಂಕೋಚ, ನೋವು, ಆತಂಕ ಮತ್ತು ಬದುಕುವ ಹಠವನ್ನು ಅವರು ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಚಂದ್ರಕ್ಕಳ ಪಾತ್ರದಲ್ಲಿ ಛಾಯಾ ಕದಂ ಅವರ ಅಭಿನಯವೂ ಗಮನ ಸೆಳೆಯುತ್ತದೆ. ನಸೀರುದ್ದೀನ್ ಶಾ ಅವರ ಕಲಾವಿದನ ಪಾತ್ರ ಕಲೆಯ ಸ್ವಾತಂತ್ರ್ಯದ ಚರ್ಚೆಗೆ ಮತ್ತೊಂದು ಆಯಾಮ ನೀಡುತ್ತದೆ. ಈ ಪಾತ್ರ ಎಂ.ಎಫ್. ಹುಸೇನ್ ಅವರಂತಹ ಕಲಾವಿದರು ಎದುರಿಸಿದ ವಿರೋಧ ಮತ್ತು ಕಲೆಯ ಮೇಲಿನ ನಿರ್ಬಂಧಗಳ ನೆನಪನ್ನೂ ಮೂಡಿಸುತ್ತದೆ. ಮಹಿಳೆಯ ನಗ್ನತೆಯಷ್ಟೇ ಅಲ್ಲ, ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯವೂ ಸಮಾಜದ ನೈತಿಕ ತೀರ್ಪಿಗೆ ಒಳಗಾಗುವ ಸಂಗತಿಯನ್ನು ಸಿನಿಮಾ ಇಲ್ಲಿ ಮುಟ್ಟುತ್ತದೆ.

Nude

ಚಿತ್ರ ಬಿಡುಗಡೆಯಾಗುವ ಮೊದಲೇ ವಿವಾದಕ್ಕೆ ಸಿಲುಕಿತ್ತು. 2017ರಲ್ಲಿ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಆಯ್ಕೆಯಾಗಿದ್ದರೂ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರದಿಂದ ಪ್ರದರ್ಶನದಿಂದ ಕೈಬಿಡಲಾಯಿತು. ನಂತರ 2018ರ ಜನವರಿಯಲ್ಲಿ ಸೆನ್ಸಾರ್ ಮಂಡಳಿಯಿಂದ ಯಾವುದೇ ಕತ್ತರಣೆ ಇಲ್ಲದೆ ‘A’ ಪ್ರಮಾಣಪತ್ರ ದೊರೆಯಿತು. ಈ ಘಟನೆಗಳೇ ಮಹಿಳೆಯ ದೇಹ ಮತ್ತು ಕಲೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸಮಾಜದಲ್ಲಿರುವ ಅಸಹಜತೆಯನ್ನು ತೋರಿಸುತ್ತವೆ.

ಚಿತ್ರದ ಅಂತ್ಯ ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬದುಕಿನುದ್ದಕ್ಕೂ ಹೋರಾಡಿದ ಯಮುನಾ ಕೊನೆಗೆ ಮಗನ ತಿರಸ್ಕಾರದಿಂದ ದುರಂತಕ್ಕೆ ತಲುಪುತ್ತಾಳೆ. ಈ ಅಂತ್ಯ ನೋವುಂಟುಮಾಡುತ್ತದೆ. ಆದರೆ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಪ್ರಯತ್ನಿಸಿದ ಮಹಿಳೆಯ ಕಥೆಯನ್ನು ಕೊನೆಗೂ ತಾಯಿಯ ತ್ಯಾಗ ಮತ್ತು ದುರಂತದ ಚೌಕಟ್ಟಿನಲ್ಲಿಯೇ ಮುಗಿಸಬೇಕಿತ್ತೇ ಎಂಬ ಪ್ರಶ್ನೆ ಉಳಿಯುತ್ತದೆ. ಮಗನಿಂದ ತಿರಸ್ಕಾರ ಎದುರಾದರೂ ಯಮುನಾ ತನ್ನದೇ ಆದ ಬದುಕನ್ನು ಮುಂದುವರಿಸುವ ಸಾಧ್ಯತೆಯನ್ನು ಸಿನಿಮಾ ತೋರಿಸಬಹುದಿತ್ತು. ಮಹಿಳೆಯ ಬದುಕು ಮಗ, ಗಂಡ ಅಥವಾ ಕುಟುಂಬದ ಸಂಬಂಧಗಳಲ್ಲಷ್ಟೇ ಮುಗಿಯುವುದಿಲ್ಲ. ಅವಳಿಗೆ ತನ್ನದೇ ಆದ ಅಸ್ತಿತ್ವವಿದೆ.

ಇದನ್ನೂ ಓದಿ ಅವಳ ಕಣ್ಣೋಟ | ‘ಅರುವಿ’: ಉಸಿರುಗಟ್ಟುವ ನೊವು, ಉರಿಯುವ ಸಿಟ್ಟು

‘ನ್ಯೂಡ್’ ಪರಿಪೂರ್ಣ ಸಿನಿಮಾ ಅಲ್ಲ. ಮಹಿಳೆಯ ಸ್ವತಂತ್ರ ಬದುಕಿನ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಬಹುದಿತ್ತು. ಆದರೂ ಮಹಿಳೆಯ ನಗ್ನತೆಯನ್ನು ಅಶ್ಲೀಲತೆಯ ದೃಷ್ಟಿಯಿಂದ ನೋಡುವ ಸಮಾಜದ ಮನಸ್ಥಿತಿಯನ್ನು ಪ್ರಶ್ನಿಸುವಲ್ಲಿ ಸಿನಿಮಾ ಮಹತ್ವದ ಪ್ರಯತ್ನ ಮಾಡಿದೆ. ಮಹಿಳೆಯ ದೇಹವನ್ನು ಮುಚ್ಚಿಡುವುದರಿಂದ ಅವಳಿಗೆ ಗೌರವ ಸಿಗುವುದಿಲ್ಲ. ಅವಳ ದೇಹದ ಮೇಲಿನ ಹಕ್ಕು, ದುಡಿಮೆ, ಆಯ್ಕೆ ಮತ್ತು ಸ್ವತಂತ್ರ ಬದುಕನ್ನು ಗೌರವಿಸುವುದರಿಂದ ಮಾತ್ರ ನಿಜವಾದ ಘನತೆ ಸಾಧ್ಯ.

Rukmini
ರುಕ್ಮಿಣಿ ನಾಗಣ್ಣವರ
+ posts

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ರುಕ್ಮಿಣಿ ನಾಗಣ್ಣವರ
ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಶಾಲೆ ಮುಚ್ಚುವುದು, ಖಾಸಗೀಕರಣ ಎರಡೂ ಅಪಾಯದ ಸೂಚನೆ; ಅವುಗಳನ್ನು ಉಳಿಸಿ, ಉನ್ನತೀಕರಿಸಬೇಕು! ಏಕೆಂದರೆ…

ಒಂದು ಸರ್ಕಾರಿ ಶಾಲೆ ಮುಚ್ಚಿದಾಗ ಆ ಪ್ರದೇಶದ ಮಕ್ಕಳಿಗೆ ಹತ್ತಿರದಲ್ಲೇ ದೊರೆಯುತ್ತಿದ್ದ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ ಮೂಲಭೂತ ಹಕ್ಕುಗಳ ಮೇಲೇಕೆ ತೂಗುಕತ್ತಿ?

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ...

ಬಡತನದ ಸವಾಲಿನಿಂದ ಗವರ್ನರ್ ಪೀಠದವರೆಗೆ: ಅಮೆರಿಕದಲ್ಲಿ ಮೂರು ಬಾರಿ ಇತಿಹಾಸ ಸೃಷ್ಟಿಸಿದ ಡೆಬ್ ಹಾಲಂಡ್

ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ವಂಚಿತ ಜನಾಂಗದ ಮಹಿಳೆಯೊಬ್ಬರು ಅತ್ಯುನ್ನತ ಸ್ಥಾನಕ್ಕೇರುವುದು ಸಾಮಾನ್ಯ...

ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ...