ಸೈಬರ್ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳಾ ಗ್ರಾಹಕಿಯೊಬ್ಬರಿಗೆ ಕಳೆದುಕೊಂಡ ಹಣ ಹಾಗೂ ಪರಿಹಾರವನ್ನು ಪಾವತಿಸುವಂತೆ ದೆಹಲಿಯ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕೆನರಾ ಬ್ಯಾಂಕ್‌ಗೆ ಮಹತ್ವದ ಆದೇಶ ನೀಡಿದೆ. ವಂಚನೆಗೆ ಒಳಗಾದ ಮಹಿಳೆಗೆ ₹4.14 ಲಕ್ಷ ಹಣವನ್ನು ಮರುಪಾವತಿಸುವ ಜೊತೆಗೆ, ₹1 ಲಕ್ಷ ಪರಿಹಾರ ಮತ್ತು ₹50,000 ಕಾನೂನು ಹೋರಾಟದ ವೆಚ್ಚವನ್ನು ನೀಡುವಂತೆ ಆಯೋಗವು ಬ್ಯಾಂಕ್‌ಗೆ ಸೂಚಿಸಿದೆ.
ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದ ಮಹಿಳೆಗೆ ಏಪ್ರಿಲ್ 7, 2024 ರಂದು ವಂಚಕರಿಂದ ಕರೆ ಬಂದಿತ್ತು, ಮರುದಿನ ಬೆಳಿಗ್ಗೆ ಐಎಂಪಿಎಸ್ (IMPS) ಮೂಲಕ ₹5 ಲಕ್ಷ ಹಾಗೂ ₹44,488 ಸೇರಿದಂತೆ ಒಟ್ಟು ₹5.44 ಲಕ್ಷ ಹಣವನ್ನು ಅವರ ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಲಾಗಿತ್ತು. ಮಹಿಳೆಯು ತಕ್ಷಣ ಸಮೀಪದ ಬ್ಯಾಂಕ್ ಶಾಖೆಗೆ ತೆರಳಿದರೂ, ಸಿಬ್ಬಂದಿ ಸಕಾಲದಲ್ಲಿ ಸ್ಪಂದಿಸದೆ ವಿಳಂಬ ಮಾಡಿದ್ದರು. ಖಾತೆಯನ್ನು ಬ್ಲಾಕ್ ಮಾಡುವಷ್ಟರಲ್ಲಿ ಖಾತೆಯಲ್ಲಿದ್ದ ಹಣ ಕಡಿತಗೊಂಡಿದ್ದು, ಕೇವಲ ₹1.30 ಲಕ್ಷವನ್ನು ಮಾತ್ರ ಹಿಂಪಡೆಯಲು ಸಾಧ್ಯವಾಗಿತ್ತು.
ಉಳಿದ ₹4.14 ಲಕ್ಷ ಹಣ ಮರುಪಾವತಿಯಾಗದ ಕಾರಣ ಮಹಿಳೆಯು ಬ್ಯಾಂಕ್ ಸೇವೆಯಲ್ಲಿನ ನ್ಯೂನತೆಯನ್ನು ಪ್ರಶ್ನಿಸಿ ಆಯೋಗದ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಬ್ಯಾಂಕ್, ಗ್ರಾಹಕಿಯೇ ವಂಚಕರೊಂದಿಗೆ ಮೊಬೈಲ್ ಸ್ಕ್ರೀನ್ ಹಂಚಿಕೊಂಡಿದ್ದಾರೆ ಹಾಗೂ ಎಂ-ಪಿನ್ (MPIN), ಒಟಿಪಿ (OTP) ಬಳಸಿ ವಹಿವಾಟು ನಡೆಸಲಾಗಿದೆ, ಹೀಗಾಗಿ 2017ರ ಆರ್‌ಬಿಐ ನಿಯಮಾವಳಿಯಂತೆ ಗ್ರಾಹಕರ ನಿರ್ಲಕ್ಷ್ಯದಿಂದಾದ ನಷ್ಟಕ್ಕೆ ಬ್ಯಾಂಕ್ ಹೊಣೆಯಲ್ಲ ಎಂದು ವಾದಿಸಿತ್ತು.
ಆದರೆ ಬ್ಯಾಂಕ್‌ನ ವಾದವನ್ನು ತಳ್ಳಿಹಾಕಿದ ಆಯೋಗದ ಪೀಠ, ಲಾಗಿನ್ ವಿವರಗಳ ಮೂಲಕ ದೃಢೀಕರಣ (Authentication) ಆಗಿರುವುದನ್ನೇ ಗ್ರಾಹಕರೇ ಖುದ್ದಾಗಿ ಒಪ್ಪಿಗೆ ನೀಡಿದ್ದಾರೆ (Authorization) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ವಹಿವಾಟುಗಳಿಗೆ ಸಂಬಂಧಿಸಿದ ಐಪಿ ಲಾಗ್‌ಗಳು, ಸಾಧನ ಪರಿಶೀಲನಾ ದಾಖಲೆಗಳು, ಫಲಾನುಭವಿ ಸೇರ್ಪಡೆಯ ವಿವರಗಳು ಹಾಗೂ ವಹಿವಾಟಿನ ಆಡಿಟ್ ಟ್ರಯಲ್‌ನಂತಹ ಕನಿಷ್ಠ ತಾಂತ್ರಿಕ ದಾಖಲೆಗಳನ್ನು ಒದಗಿಸುವಲ್ಲಿಯೂ ಬ್ಯಾಂಕ್ ವಿಫಲವಾಗಿದೆ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಗ್ರಾಹಕಿಯು ತಕ್ಷಣವೇ ವಹಿವಾಟಿನ ಬಗ್ಗೆ ವರದಿ ಮಾಡಿ ಬ್ಯಾಂಕ್‌ಗೆ ದೂರು ನೀಡಿದ್ದರು. ಆರ್‌ಬಿಐ ನಿಯಮಾವಳಿಯಡಿ ಮೊಬೈಲ್ ಸ್ಕ್ರೀನ್ ಹಂಚಿಕೊಳ್ಳುವುದು ನಿರ್ಲಕ್ಷ್ಯವೆಂದು ಪರಿಗಣಿಸಿದರೂ, ಕೇವಲ ದೃಢೀಕರಣವನ್ನು ನೆಪವಾಗಿಟ್ಟುಕೊಂಡು ನಿಖರ ಸನ್ನಿವೇಶಗಳನ್ನು ಸಾಬೀತುಪಡಿಸದೆ ಬ್ಯಾಂಕ್ ನುಣುಚಿಕೊಳ್ಳುವಂತಿಲ್ಲ. ಅಲ್ಲದೆ, ಸೈಬರ್ ಕ್ರೈಮ್ ತನಿಖೆ ಬಾಕಿ ಇರುವ ಕಾರಣ ನೀಡಿ ಗ್ರಾಹಕರ ದೂರಿನ ವಿಚಾರಣೆ ತಡೆಯಲು ಸಾಧ್ಯವಿಲ್ಲ, ಕ್ರಿಮಿನಲ್ ಪ್ರಕ್ರಿಯೆ ಮತ್ತು ಬ್ಯಾಂಕಿಂಗ್ ಸೇವೆಯ ನ್ಯೂನತೆ ಎರಡೂ ಭಿನ್ನ ವಿಚಾರಗಳಾಗಿವೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಅಕ್ಟೋಬರ್ 28 ರಂದು ಅಂತಿಮ ಆದೇಶ ಹೊರಡಿಸಿರುವ ಆಯೋಗ, ಸಂಪೂರ್ಣ ನಷ್ಟವು ಕೇವಲ ಮಹಿಳೆಯ ನಿರ್ಲಕ್ಷ್ಯದಿಂದಲೇ ಆಗಿದೆ ಎಂಬುದನ್ನು ಸಾಬೀತುಪಡಿಸಲು ಬ್ಯಾಂಕ್ ವಿಫಲವಾಗಿರುವುದರಿಂದ ಇದು ಸೇವೆಯ ನ್ಯೂನತೆಯೇ ಸರಿ ಎಂದು ತೀರ್ಮಾನಿಸಿದೆ. ಮುಂದಿನ 45 ದಿನಗಳ ಒಳಗೆ ಏಪ್ರಿಲ್ 8, 2024 ರಿಂದ ಅನ್ವಯವಾಗುವಂತೆ ಶೇ 9ರ ಬಡ್ಡಿಯೊಂದಿಗೆ ₹4,14,488 ಮರುಪಾವತಿಸಬೇಕು, ಜೊತೆಗೆ ಪರಿಹಾರ ಮತ್ತು ವೆಚ್ಚವನ್ನು ಭರಿಸಬೇಕು; ತಪ್ಪಿದಲ್ಲಿ ಶೇ 12ರ ದಂಡದ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.




