ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಅನುಭವಿಸಿದ ಭಾರಿ ಸೋಲಿನ ಬೆನ್ನಲ್ಲೇ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್ ಯುದ್ಧ ನೀತಿಯಿಂದ ಸಾರ್ವಜನಿಕವಾಗಿ ದೂರವುಳಿಯುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. 2028ರ ಅಧ್ಯಕ್ಷೀಯ ರೇಸ್‌ನಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿರುವ ವ್ಯಾನ್ಸ್, ಈ ಸೋಲಿಗೆ ಇರಾನ್ ಯುದ್ಧವೇ ಪ್ರಮುಖ ಕಾರಣ ಎಂದು ಬಹಿರಂಗವಾಗಿ ಬೆರಳು ಮಾಡಿ ತೋರಿಸಿದ್ದಾರೆ.
ಬುಧವಾರ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಹಂಚಿಕೊಂಡ ವ್ಯಾನ್ಸ್, “ಇರಾನ್ ಯುದ್ಧಕ್ಕಾಗಿ ಮುಂದಿನ 6 ವರ್ಷಗಳ ಕಾಲ ಸೆನೆಟ್ ಅನ್ನು ಕಳೆದುಕೊಂಡಿದ್ದಕ್ಕೂ ಸಾರ್ಥಕತೆ ಇದೆ ಎಂದು ಯಾರಾದರೂ ವಾದಿಸುವುದಾದರೆ ವಾದಿಸಲಿ” ಎಂದು ರಿಪಬ್ಲಿಕನ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದೆಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಪ್ರಚಾರದುದ್ದಕ್ಕೂ ಮತ್ತು ಫಲಿತಾಂಶ ಹೊರಬಂದ ಮೇಲೆಯೂ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ಇರಾನ್ ವಿಚಾರದಲ್ಲಿ ನಾವು ಮಾಡಿದ್ದು ಅನಿವಾರ್ಯವಾಗಿತ್ತು ಮತ್ತು ಅದನ್ನು ಮುಂದುವರಿಸಲಿದ್ದೇವೆ” ಎಂದಿದ್ದಾರೆ. ವ್ಯಾನ್ಸ್ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಅವರು, “ವ್ಯಾನ್ಸ್ ಅವರ ಭಾವನೆ ನನಗೆ ಅರ್ಥವಾಗುತ್ತದೆ, ಅದು ಸರಿ” ಎನ್ನುವ ಮೂಲಕ ಬಿಕ್ಕಟ್ಟನ್ನು ಶಮನಗೊಳಿಸಲು ಯತ್ನಿಸಿದ್ದಾರೆ.
ಇನ್ನು ʼಎಪಿ ವೋಟರ್ ಪೋಲ್’ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ 60 ಕ್ಕೂ ಹೆಚ್ಚು ಮತದಾರರು ಇರಾನ್ ಮೇಲಿನ ಸೈನಿಕ ಕ್ರಮ “ತಪ್ಪು ನಿರ್ಧಾರ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಮತದಾರರು ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರೂ, ಇರಾನ್ ಯುದ್ಧ ಒಂದೇ ಪ್ರಮುಖ ವಿಷಯವಾಗಿರಲಿಲ್ಲ. ಶೇಕಡಾ 30 ರಷ್ಟು ಮತದಾರರು ಯುದ್ಧವನ್ನು ಪ್ರಮುಖ ಅಂಶವೆಂದು ಪರಿಗಣಿಸಿದರೆ, ಜೀವನ ವೆಚ್ಚದ ಏರಿಕೆ ಮತ್ತು ಸರ್ಕಾರದ ಭ್ರಷ್ಟಾಚಾರವೇ ಚುನಾವಣೆಯ ಪ್ರಮುಖ ವಿಷಯಗಳಾಗಿದ್ದವು.
ಡೆಮಾಕ್ರಟಿಕ್ ಬೆಂಬಲಿಗರು ಯುದ್ಧವನ್ನು ತೀವ್ರವಾಗಿ ವಿರೋಧಿಸಿದರೆ, ಶೇಕಡಾ 80 ರಷ್ಟು ರಿಪಬ್ಲಿಕನ್ ಬೆಂಬಲಿಗರು ಟ್ರಂಪ್ ನಿರ್ಧಾರವನ್ನು ಸಮರ್ಥಿಸಿದ್ದಾರೆ. ಮಾಜಿ ಮರೀನ್ ಪಡೆಯ ಯೋಧರಾಗಿ ಇರಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ವ್ಯಾನ್ಸ್, ಆರಂಭದಿಂದಲೂ ಅಮೆರಿಕದ ವಿದೇಶಿ ಮಿಲಿಟರಿ ಹಸ್ತಕ್ಷೇಪವನ್ನು ವಿರೋಧಿಸುತ್ತಾ ಬಂದಿದ್ದರು. ಆದರೆ, ಟ್ರಂಪ್ ಇರಾನ್ ವಿರುದ್ಧ ಯುದ್ಧ ಘೋಷಿಸಿದಾಗ ಮೌನಕ್ಕೆ ಶರಣಾಗಿದ್ದರು.
ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದ ನಂತರ, ವ್ಯಾನ್ಸ್ ತಮ್ಮ ವಿದೇಶಾಂಗ ಮತ್ತು ಆಂತರಿಕ ನೀತಿಗಳಲ್ಲಿ ಭಿನ್ನ ಹಾದಿ ತುಳಿಯುವ ಸುಳಿವು ನೀಡಿದ್ದಾರೆ.
ಟ್ರಂಪ್‌ಗಿಂತ ಭಿನ್ನವಾಗಿ ವ್ಯಾನ್ಸ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮರುಚುನಾವಣೆಯನ್ನು ಬೆಂಬಲಿಸಲು ನಿರಾಕರಿಸಿದ್ದಾರೆ. ಕಾನೂನುಬಾಹಿರ ವಲಸಿಗರಿಗೆ ಕ್ಷಮಾದಾನ ನೀಡುವುದನ್ನು ವಿರೋಧಿಸುತ್ತಲೇ, ಕಟ್ಟುನಿಟ್ಟಿನ ವಲಸೆ ನಿಯಮಗಳನ್ನು ಜಾರಿಗೊಳಿಸುವ ಬದಲು ಅಕ್ರಮ ಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯಮಗಳ ಮೇಲೆ ಗಮನಹರಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
2028ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕದ ರಾಜಕೀಯದಲ್ಲಿ ವ್ಯಾನ್ಸ್ ಅವರ ಈ ನಡೆ ಪ್ರಮುಖ ಘಟನಾವಳಿಯಾಗಿ ಹೊರಹೊಮ್ಮಿದೆ.




