ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ ಬದಲಾವಣೆಗಳನ್ನು ದಾಖಲಿಸಿದೆ. ಈ ಸಮೀಕ್ಷೆ ಪ್ರಕಾರ, ಅಮೆರಿಕದ ಪೌರತ್ವ ಹೊಂದಿರುವ ಭಾರತೀಯ ಮೂಲದ ಮತದಾರರಲ್ಲಿ 62%ರಷ್ಟು ಮಂದಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವನ್ನು ತಿರಸ್ಕರಿಸುವುದಾಗಿಯೂ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಕೇವಲ 19% ಜನರು ಮಾತ್ರ ಟ್ರಂಪ್ ಪರ ಒಲವು ತೋರಿದ್ದಾರೆ.
ಅಂದಹಾಗೆ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರಿಗೆ 62%ರಷ್ಟು ಮತ್ತು ಡೊನಾಲ್ಡ್ ಟ್ರಂಪ್ ಅವರಿಗೆ 30%ರಷ್ಟು ಭಾರತೀಯ ಮೂಲದ ಅಮೆರಿಕನ್ನರ ಬೆಂಬಲವಿತ್ತು. ಆದರೆ, ಟ್ರಂಪ್ ಅವರ ಎರಡನೇ ಅವಧಿಯ ಆಡಳಿತ ಆರಂಭವಾದ ಬಳಿಕ, ಟ್ರಂಪ್ (ರಿಪಬ್ಲಿಕನ್ ಪಕ್ಷ) ಮೇಲಿನ ಒಲವು ಮತ್ತಷ್ಟು ಕುಸಿದಿದೆ. ವಿಶೇಷವಾಗಿ, 40 ವರ್ಷ ಮೇಲ್ಪಟ್ಟ ಭಾರತೀಯ ಮೂಲದ ಪುರುಷರಲ್ಲಿ ರಿಪಬ್ಲಿಕನ್ ಬೆಂಬಲ ಕುಸಿದಿದೆ. 2026ರ ಜನವರಿಯಲ್ಲಿ 32%ರಷ್ಟು ಮಂದಿ ಟ್ರಂಪ್ ಪರವಾಗಿದ್ದರು. ಆದರೆ, ಈಗ ಆ ಪ್ರಮಾಣ 16%ಗೆ ಇಳಿದಿದೆ.
ಡೆಮಾಕ್ರಟಿಕ್ ಪಕ್ಷದತ್ತ ಭಾರತೀಯ ಅಮೆರಿಕನ್ನರ ಈ ಮರಳುವಿಕೆಗೆ ರಿಪಬ್ಲಿಕನ್ ಪಕ್ಷದ ಮೇಲಿನ ಅಸಮಾಧಾನ ಮತ್ತು ವಿರೋಧವೇ ಕಾರಣವೆಂದು 35% ಜನರು ಹೇಳಿಕೊಂಡಿದ್ದಾರೆ. ಇದು ಟ್ರಂಪ್ ರಾಜಕಾರಣದ ವಿರುದ್ಧ ಬೆಳೆಯುತ್ತಿರುವ ಅಸಮಾಧಾನದ ಸ್ಪಷ್ಟ ಸಂಕೇತ.
ಒಂದು ಕಾಲದಲ್ಲಿ ಟ್ರಂಪ್ ಅವರ ಆಕ್ರಮಣಕಾರಿ ರಾಷ್ಟ್ರೀಯತೆ, ಉದ್ಯಮಪರ ಘೋಷಣೆಗಳು ಹಾಗೂ ಬಲಪಂಥೀಯ ರಾಜಕಾರಣದಲ್ಲಿ ಆಕರ್ಷಣೆ ಕಂಡಿದ್ದ ಭಾರತೀಯ ಅಮೆರಿಕನ್ನರ ಒಂದು ಭಾಗಕ್ಕೆ ಈಗ ಅದೇ ರಾಜಕಾರಣದ ಕಹಿ ಅನುಭವ ನೀಡುತ್ತಿದೆ. ಅವರೆಲ್ಲರಿಗೂ, ತಾವು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಕಾಣುವ ಉಗ್ರ ರಾಷ್ಟ್ರೀಯತೆ, ತಾವು ಅಲ್ಪಸಂಖ್ಯಾತರಾಗಿರುವ ದೇಶದಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ಆದಾಗ್ಯೂ, ಅಮೆರಿಕದ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಭಾರತೀಯ ಮೂಲದ ವೃತ್ತಿಪರರ ಪಾತ್ರ ದೊಡ್ಡದು. ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ಸಂಶೋಧನೆ, ವಿಶ್ವವಿದ್ಯಾಲಯಗಳು ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಲಕ್ಷಾಂತರ ಭಾರತೀಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ, ಟ್ರಂಪ್ ಆಡಳಿತದ ವಲಸೆ ನೀತಿಗಳು ಈ ಸಮುದಾಯದ ಭವಿಷ್ಯದ ಮೇಲೆ ಅನಿಶ್ಚಿತತೆ ಸೃಷ್ಟಿಸಿದೆ.
2025ರ ಸೆಪ್ಟೆಂಬರ್ನಲ್ಲಿ ಹೊಸ H-1B ವೀಸಾ ಅರ್ಜಿಗಳ ನಿರ್ದಿಷ್ಟ ವರ್ಗಗಳಿಗೆ ಒಂದು ಲಕ್ಷ ಡಾಲರ್ ಪಾವತಿಯ ಷರತ್ತು ವಿಧಿಸಲಾಯಿತು. 2026ರ ಸೆಪ್ಟೆಂಬರ್ನಲ್ಲಿ ಅದನ್ನು ಮತ್ತೊಂದು ವರ್ಷ ವಿಸ್ತರಿಸಲಾಯಿತು. ಈ ನಿರ್ಧಾರದ ವಿರುದ್ಧ ಭಾರತೀಯ ಮೂಲದ ಅಮೆರಿಕನ್ನರಲ್ಲಿ ತೀವ್ರ ಅಸಮಾಧಾನವಿದೆ. ಕಾರ್ನೆಗಿಯ ಫೆಬ್ರವರಿ 2026ರ ಸಮೀಕ್ಷೆಯ ಪ್ರಕಾರ, ಸುಮಾರು ಮೂರನೇ ಎರಡರಷ್ಟು ಮಂದಿ ಈ ಶುಲ್ಕದ ಕ್ರಮವನ್ನು ವಿರೋಧಿಸಿದ್ದಾರೆ. ಟ್ರಂಪ್ ಆಡಳಿತದ ಒಟ್ಟಾರೆ ವಲಸೆ ನೀತಿಯನ್ನು 64%ರಷ್ಟು ಮಂದಿ ಟೀಕಿಸಿದ್ದಾರೆ.
ಗ್ರೀನ್ ಕಾರ್ಡ್ ವಿಚಾರದಲ್ಲಿಯೂ ಭಾರತೀಯರ ಸಂಕಷ್ಟ ಗಂಭೀರವಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆಯ 2026ರ ನವೆಂಬರ್ ತಿಂಗಳ ವೀಸಾ ಬುಲೆಟಿನ್ ಪ್ರಕಾರ, ಭಾರತೀಯರಿಗೆ ಅನ್ವಯಿಸುವ ಉದ್ಯೋಗಾಧಾರಿತ EB-2 ವಿಭಾಗದ ಅಂತಿಮ ನಿರ್ಧಾರವು 2013ರಿಂದ ಬಾಕಿ ಉಳಿದಿದೆ. ಅಂತೆಯೇ, EB-3 ವಿಭಾಗಕ್ಕೆ ಸಂಬಂಧಿಸಿದ ನಿರ್ಧಾರ ಕೂಡ 2014ರ ಜನವರಿಯಿಂದ ಕಡತದಲ್ಲೇ ಕೊಳೆಯುತ್ತಿದೆ. ಜೊತೆಗೆ, ಅಮೆರಿಕದ ಉದ್ಯೋಗ ಮಾರುಕಟ್ಟೆಯನ್ನು ರಕ್ಷಿಸುವ ಹೆಸರಿನಲ್ಲಿ ವಲಸಿಗರ ಪ್ರವೇಶಕ್ಕೆ ಕಠಿಣ ಷರತ್ತುಗಳನ್ನು ಹೇರಲಾಗುತ್ತಿದೆ.
ವರ್ಷಗಟ್ಟಲೆ ಅಮೆರಿಕದಲ್ಲಿ ದುಡಿದರೂ ಶಾಶ್ವತ ನೆಲೆಗಾಗಿ ಕಾಯಬೇಕಾದ ಸ್ಥಿತಿ, ಉದ್ಯೋಗ ಕಳೆದುಕೊಂಡರೆ ವಲಸೆ ಸ್ಥಾನಮಾನವೇ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ, ಮಕ್ಕಳ ಭವಿಷ್ಯದ ಆತಂಕ—ಇವುಗಳೆಲ್ಲವೂ ಅಮೆರಿಕದಲ್ಲಿರುವ ಭಾರತೀಯ ಉದ್ಯೋಗಿಗಳನ್ನು ಕಾಡುತ್ತಿದೆ.
ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಇದೆ. ಟ್ರಂಪ್ ಆಡಳಿತದ ವಿರುದ್ಧ ಭಾರತೀಯ ಮೂಲದ ಅಮೆರಿಕನ್ನರಲ್ಲಿ ಬೆಳೆಯುತ್ತಿರುವ ವಿರೋಧಕ್ಕೆ ಕೇವಲ ವೀಸಾ ನೀತಿಗಳು ಕಾರಣವಲ್ಲ. ಸಾಮಾಜಿಕ ತಾರತಮ್ಯವೂ ಪ್ರಮುಖ ಕಾರಣವಾಗಿದೆ.
ಅಮೆರಿಕದಲ್ಲಿ ಭಾರತೀಯರು ತಮ್ಮನ್ನು ಕೇವಲ ಧರ್ಮದ ಮೂಲಕ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಚರ್ಮದ ಬಣ್ಣ, ಮೂಲದೇಶ, ಭಾಷೆ ಹಾಗೂ ವಲಸಿಗ ಎಂಬ ಗುರುತು ಕೂಡ ರಾಜಕೀಯವಾಗಿ ಮಹತ್ವ ಪಡೆಯುತ್ತವೆ. 2026ರ ಕಾರ್ನೆಗಿ ಸಮೀಕ್ಷೆಯಲ್ಲಿ ಸುಮಾರು ಅರ್ಧದಷ್ಟು ಭಾರತೀಯ ಮೂಲದ ಅಮೆರಿಕನ್ನರು ಹಿಂದಿನ ವರ್ಷದಲ್ಲಿ ಯಾವುದಾದರೊಂದು ರೂಪದ ವೈಯಕ್ತಿಕ ತಾರತಮ್ಯ ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಅಂತೆಯೇ, 48% ಮಂದಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರನ್ನು ಗುರಿಯಾಗಿಸಿ ವರ್ಣದ್ವೇಷದ ಸಂದೇಶಗಳು ಆಗ್ಗಾಗ್ಗೆ ವೈರಲ್ ಆಗುತ್ತವೆ ಎಂಬುದನ್ನು ಗಮನಿಸಿದ್ದಾರೆ. ನಾಲ್ವರಲ್ಲಿ ಒಬ್ಬರು ತಾವೇ ಸ್ವತಃ ಅವಹೇಳನಕಾರಿ ನಿಂದನೆಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಆದರೆ, ಅಮೆರಿಕದಲ್ಲಿ ತಮ್ಮ ಉದ್ಯೋಗ ಮತ್ತು ಘನತೆಯ ಪ್ರಶ್ನೆ ಬಂದಾಗ ಮಾನವೀಯತೆಯ ಭಾಷೆಯಲ್ಲಿ ಮಾತನಾಡುವ, ಶ್ವೇತವರ್ಣೀಯ ಬಹುಸಂಖ್ಯಾತವಾದ ಎದುರಾದಾಗ ಅಲ್ಪಸಂಖ್ಯಾತರ ಹಕ್ಕುಗಳ ಮಹತ್ವದ ಬಗ್ಗೆ ದನಿ ಎತ್ತುವ ಇದೇ ಭಾರತೀಯ ಅಮೆರಿಕನ್ನರು, ಭಾರತದಲ್ಲಿ ಉದ್ಯೋಗ, ಭದ್ರತೆ ಹಾಗೂ ಘನತೆಯನ್ನು ಅರಸುವ ಇತರ ಸಮುದಾಯಗಳ ಬೇಡಿಕೆಗಳನ್ನು ಅನುಮಾನದಿಂದ ನೋಡುತ್ತಾರೆ. ಮಾತ್ರವಲ್ಲದೆ, ಭಾರತದಲ್ಲಿ ತಮ್ಮ ಧಾರ್ಮಿಕ ಗುರುತನ್ನು ಬಹುಸಂಖ್ಯಾತರ ಅಧಿಕಾರದೊಂದಿಗೆ ಬೆಸೆದುಕೊಂಡಿದ್ದಾರೆ. ಮುಸ್ಲಿಂ ವಿರೋಧಿ ದ್ವೇಷವನ್ನು ಆನಂದಿಸುತ್ತಾರೆ. ಪ್ರಧಾನಿ ಮೋದಿಯೇ ತಮ್ಮ ಅಚ್ಚುಮೆಚ್ಚಿನ ನಾಯಕ ಎನ್ನುತ್ತಾರೆ.
ಹಾಗೆ ನೋಡಿದರೆ, ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ ರಾಜಕೀಯ ಆಂತರಿಕವಾಗಿ ಒಂದೇ ರೀತಿಯಲ್ಲಿವೆ. ಇಬ್ಬರ ರಾಜಕೀಯ ಭಾಷೆ ಮತ್ತು ಅಧಿಕಾರ ಕ್ರೋಡೀಕರಣದ ತಂತ್ರಗಳಲ್ಲಿ ಸಾಮ್ಯತೆಗಳಿವೆ. ಟ್ರಂಪ್ ಅವರ ‘ಅಮೆರಿಕಾ ಫಸ್ಟ್’ ಮತ್ತು ಮೋದಿ ಅವರ ‘ಇನ್ ನೇಷನ್’ ಅಥವಾ ‘ಹಿಂದುರಾಷ್ಟ್ರ’ ಎರಡೂ ಬಹುಸಂಖ್ಯಾತರನ್ನು ಸೆಳೆಯುವ ತಂತ್ರಗಳೇ ಆಗಿವೆ.
ಟ್ರಂಪ್ ರಾಜಕಾರಣದಲ್ಲಿ ವಲಸಿಗರು, ವಿದೇಶೀಯರು ಮತ್ತು ಉದಾರವಾದಿಗಳು ಪದೇಪದೇ ರಾಜಕೀಯ ಶತ್ರುಗಳಾಗಿದ್ದರೆ, ಮೋದಿ ನೇತೃತ್ವದ ಬಿಜೆಪಿಯ ರಾಜಕಾರಣದಲ್ಲಿ ಮುಸ್ಲಿಂ ಸಮುದಾಯ, ರಾಜಕೀಯ ಭಿನ್ನಮತೀಯರು, ಎಡಪಂಥೀಯರು ಹಾಗೂ ಸರ್ಕಾರದ ವಿಮರ್ಶಕರು ದೇಶದ್ರೋಹಿಗಳಾಗುತ್ತಾರೆ.
ಇಬ್ಬರೂ ತಮ್ಮನ್ನು ರಾಷ್ಟ್ರದ ಹಿತಾಸಕ್ತಿಯ ಪ್ರಮುಖ ರಕ್ಷಕರೆಂದು ಬಿಂಬಿಸಿಕೊಳ್ಳುತ್ತಾರೆ. ಇಬ್ಬರಲ್ಲೂ ಪ್ರಬಲ ನಾಯಕನಂತೆ ತೋರಿಸಿಕೊಳ್ಳುವ ವ್ಯಕ್ತಿತ್ವ, ಭಾವನಾತ್ಮಕ ರಾಷ್ಟ್ರೀಯತೆ ಹಾಗೂ ರಾಜಕೀಯ ವಿರೋಧಿಗಳ ವಿರುದ್ಧದ ಆಕ್ರಮಣಕಾರಿ ಪ್ರಚಾರ ಮಾಡುವ ಸಾಮರ್ಥ್ಯಗಳಿವೆ.
ಈ ಲೇಖನ ಓದಿದ್ದೀರಾ?: ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ ನಡುವೆ ಕಾಯಕ ಜೀವಿಯ ಘನತೆ
ಟ್ರಂಪ್ ಮತ್ತು ಮೋದಿ ನಡುವೆ ಇಷ್ಟೊಂದು ಜೀವವಿರೋಧಿ ಸಾಮತ್ಯಗಳಿದ್ದರೂ, ಟ್ರಂಪ್ ಅವರನ್ನು ವಿರೋಧಿಸುವ ಭಾರತೀಯ ಅಮೆರಿಕನ್ನರು ಮೋದಿ ಅವರನ್ನು ಬೆಂಬಿಸುತ್ತಾರೆ. ಕಾರ್ನೆಗಿ ಸಂಸ್ಥೆಯ 2024ರ ಭಾರತೀಯ ಅಮೆರಿಕನ್ನರ ಸಮೀಕ್ಷೆಯಲ್ಲಿ 47%ರಷ್ಟು ಮಂದಿ ನರೇಂದ್ರ ಮೋದಿ ಅವರ ಪ್ರಧಾನಮಂತ್ರಿಯ ಕಾರ್ಯನಿರ್ವಹಣೆಯನ್ನು ಬೆಂಬಲಿಸಿದ್ದರು.
ಭಾರತೀಯ ಮೂಲದ ಹಿಂದೂ ಅಮೆರಿಕನ್ನರಲ್ಲಿ 64% ಮಂದಿ ಮೋದಿ ಪರವಿದ್ದರು. ವಾರ್ಷಿಕ ಒಂದು ಲಕ್ಷ ಡಾಲರ್ಗಿಂತ ಹೆಚ್ಚಿನ ಕುಟುಂಬ ಆದಾಯ ಹೊಂದಿರುವವರಲ್ಲಿ ಈ ಬೆಂಬಲ 55%ರಷ್ಟಿತ್ತು.
ಅಂದರೆ, ಅಮೆರಿಕದ ಪ್ರಜಾಪ್ರಭುತ್ವ, ಮುಕ್ತ ಉದ್ಯೋಗಾವಕಾಶ, ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಬಹುಸಾಂಸ್ಕೃತಿಕ ಬದುಕಿನ ಪ್ರಯೋಜನ ಪಡೆಯುತ್ತಿರುವ ಜನರಲ್ಲಿ ಹೆಚ್ಚಿನವರು ಮೋದಿ ರಾಜಕಾರಣದ ಮೇಲೆ ಅಭಿಮಾನ ಹೊಂದಿದ್ದಾರೆ.
ಈ ಅಭಿಮಾನದ ಹಿಂದೆ ಕೇವಲ ದೇಶಪ್ರೇಮವಿಲ್ಲ. ಧಾರ್ಮಿಕ ಗುರುತು, ಸಾಂಸ್ಕೃತಿಕ ಹೆಮ್ಮೆ, ಸಾಮಾಜಿಕ ಪ್ರಾಬಲ್ಯ, ಹಾಗೂ ಬಲಿಷ್ಠ ನಾಯಕತ್ವ ಪ್ರಚಾರದ ಮೇಲಿನ ಆಕರ್ಷಣೆಗಳಿವೆ.
ಇದೇ ಈ ರಾಜಕೀಯ ನಡವಳಿಕೆಯ ಅತಿ ದೊಡ್ಡ ವಿಪರ್ಯಾಸ. ಭಾರತೀಯ ಮೂಲದ ಈ ಅಮೆರಿಕನ್ನರಿಗೆ ಅಮೆರಿಕದಲ್ಲಿ ತಮಗೆ ಸಮಾನ ಹಕ್ಕು ಬೇಕು. ತಮ್ಮ ಮಕ್ಕಳಿಗೆ ಜಾತಿ, ಧರ್ಮ, ಬಣ್ಣದ ಕಾರಣಕ್ಕೆ ತಾರತಮ್ಯವಾಗಬಾರದು. ತಮ್ಮ ಉದ್ಯೋಗಕ್ಕೆ ಭದ್ರತೆ ಬೇಕು. ವೀಸಾ ನಿರ್ಬಂಧ ಇರಬಾರದು. ಗ್ರೀನ್ ಕಾರ್ಡ್ ಸುಲಭವಾಗಿ ಸಿಗಬೇಕು. ತಮ್ಮ ಸಂಸ್ಕೃತಿ, ಧರ್ಮ ಹಾಗೂ ಭಾಷೆಯನ್ನು ಸ್ವತಂತ್ರವಾಗಿ ಆಚರಿಸಲು ಅವಕಾಶವಿರಬೇಕು. ಅಮೆರಿಕದ ಶ್ವೇತವರ್ಣೀಯ ಬಹುಸಂಖ್ಯಾತರ ಪ್ರಾಬಲ್ಯ ತಮ್ಮ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ಬಯಸುತ್ತಾರೆ.
ಆದರೆ, ಇದೇ ಮಂದಿ ಭಾರತದ ವಿಷಯಕ್ಕೆ ಬಂದಾಗ ಅವರ ಧೋರಣೆಗಳು ಬದಲಾಗುತ್ತವೆ. ಅವರು ಭಾರತದಲ್ಲಿ ನರೇಂದ್ರ ಮೋದಿಯವರ ಬಹುಸಂಖ್ಯಾತವಾದಿ (ಹಿಂದುತ್ವವಾದಿ) ರಾಜಕಾರಣಕ್ಕೆ ಜೈಕಾರ ಹಾಕುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ರಾಜಕೀಯ ಧ್ರುವೀಕರಣವನ್ನು ಬೆಂಬಲಿಸುತ್ತಾರೆ. ಮುಸ್ಲಿಮರನ್ನು ಅನುಮಾನದಿಂದ ನೋಡುವ ರಾಜಕೀಯವನ್ನು ಸಮರ್ಥಿಸಿಕೊಳ್ಳುತ್ತಾರೆ. ಭಿನ್ನಮತವನ್ನು ದೇಶದ್ರೋಹದೊಂದಿಗೆ ಸಮೀಕರಿಸುವ ಪ್ರಚಾರಕ್ಕೆ ಚಪ್ಪಾಳೆ ತಟ್ಟುತ್ತಾರೆ. ಸಾಂವಿಧಾನಿಕ ಮೌಲ್ಯಗಳಿಗಿಂತ ಧಾರ್ಮಿಕತೆ ಕೋಮು ರಾಜಕಾರಣವನ್ನು ಅಭಿಮಾನಿಸುತ್ತಾರೆ.
ತಮ್ಮನ್ನು ತಾವು ‘ಮಿಡಲ್ ಕ್ಲಾಸ್’ ಎಂದು ಹೇಳಿಕೊಳ್ಳುವ ಈ ಜನರಲ್ಲಿ ಬಹುಸಂಖ್ಯಾತರು, ಅಮೆರಿಕದಲ್ಲಿ ತಮಗೆ ಅನ್ಯಾಯವಾದಾಗ ಅದು ವರ್ಣದ್ವೇಷ ಎನ್ನುತ್ತಾರೆ. ಭಾರತದಲ್ಲಿ ಇನ್ನೊಬ್ಬರಿಗೆ ಅನ್ಯಾಯವಾದಾಗ ಅದು ರಾಷ್ಟ್ರವಾದವೆಂದು ಬೊಬ್ಬೆಹೊಡೆಯುತ್ತಾರೆ. ಇದು ಅಮೆರಿಕದಲ್ಲಿರುವ ಎನ್ಆರ್ಐಗಳ ಆಷಾಢಭೂತಿತನ!



